ಸೂರ್ಯ ಚೈತನ್ಯ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ಕಾರ್ಯಾಗಾರ ಸಂಪನ್ನ
Thumbnail
ಕಾಪು : ಉಡುಪಿ ಜಿಲ್ಲೆ ಕುತ್ಯಾರಿನ ಸೂರ್ಯ ಚೈತನ್ಯ ಹೈಸ್ಕೂಲಿನಲ್ಲಿ ಶುಕ್ರವಾರ ಶಿಕ್ಷಕರಿಗಾಗಿ ಉತ್ತಮದಿಂದ ಅತ್ಯುತ್ತಮ ಶಿಕ್ಷಕರಾಗುವತ್ತ ತರಬೇತಿ ಕಾರ್ಯಕ್ರಮವು ಜರುಗಿತು. ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮೆನೇಜ್ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಚಂದ್ರ ಆಚಾರ್ ಮಾತನಾಡಿ, "ಶಿಕ್ಷಕರಲ್ಲಿ ವಿಷಯ ಪಾಂಡಿತ್ಯ ಇರಬೇಕು. ಶಿಕ್ಷಕರೆಂದರೆ ಜೀವನ ಪರ್ಯಂತ ಕಲಿಯುವವರು. ಕಾಲಕಾಲಕ್ಕೆ ಬದಲಾಗುವ ಬೋಧನಾ ಪ್ರಕ್ರಿಯೆಗಳನ್ನು ಕಲಿತು ಹೊಸತನವನ್ನು ರೂಢಿಸಿಕೊಳ್ಳುವುದು ಶಿಕ್ಷಕರ ಆದ್ಯ ಕರ್ತವ್ಯ. ಮಕ್ಕಳ ಮನಸ್ಥಿತಿಯನ್ನು ಅರಿತು, ಉತ್ತಮ ಸಂವಹನ ಕಲೆಯೊಂದಿಗೆ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಬೇಕು. ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ ಪ್ರೋತ್ಸಾಹವಿತ್ತು ಶಿಕ್ಷಕವೃತ್ತಿಯಲ್ಲಿ ನೂರಕ್ಕೆ ನೂರರಷ್ಟು ತೊಡಗಿಸಿಕೊಳ್ಳಬೇಕು" ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ನ ಉಪನ್ಯಾಸಕ ಚಂದ್ರ ನಾಯ್ಕ್ ಸ್ಫೂರ್ತಿದಾಯಕ ವೀಡಿಯೊ ಮತ್ತು ಸ್ಲೈಡ್ ಗಳ ಮೂಲಕ ಶಿಕ್ಷಕ ವೃತ್ತಿಯ ಮಹತ್ವದ ಕುರಿತು ವಿವರಿಸಿದರು. ಅವರು ಮಾತನಾಡಿ, "ಉತ್ತಮ ಗುರುಗಳಾಗಲು ನಾವು ದೃಢವಾದ ತಳಹದಿಯನ್ನು ಹಾಕಿಕೊಳ್ಳಬೇಕು. ಶಿಷ್ಯನೊಬ್ಬ ತನ್ನ ಬದುಕಿನಲ್ಲಿ ಯಶಸ್ವಿಯಾದರೆ ಅದೇ ಗುರುವಿಗೆ ಹೆಮ್ಮೆ. ಕೇವಲ ಬೋಧನೆಯೊಂದೇ ಶಿಕ್ಷಕರ ಕೆಲಸವಲ್ಲ. ಅವರು ಸುಗಮಕಾರರೂ, ಆಪ್ತ ಸಮಾಲೋಚಕರೂ ಮತ್ತು ಮಾರ್ಗದರ್ಶಕರೂ ಹೌದು. ವಿದ್ಯಾರ್ಥಿಗಳ ಸಮಸ್ಯೆಯನ್ನು ಸಹನೆಯಿಂದ ಆಲಿಸುವ ಗುಣ ಶಿಕ್ಷಕರಲ್ಲಿರಬೇಕು. ಶಿಕ್ಷಕರು ಸದಾ ಸ್ವ - ವಿಮರ್ಶೆ ಮಾಡಿಕೊಳ್ಳುತ್ತಿರಬೇಕು. ತಮ್ಮ ವೃತ್ತಿಯ ಬಗ್ಗೆ ಅಭಿಮಾನ ಹಾಗೂ ಗೌರವ ಬೆಳೆಸಿದಲ್ಲಿ ಅವರ ಕೌಶಲ್ಯಗಳೂ ವೃದ್ಧಿಯಾಗುವುವು" ಎಂದು ಕರೆಯಿತ್ತರು. ಸೂರ್ಯ ಚೈತನ್ಯ ಹೈಸ್ಕೂಲ್ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರುತಿ ಆಚಾರ್ಯ ತಾಂತ್ರಿಕ ಸಹಕಾರ ನೀಡಿದರು. ಪ್ರಾಂಶುಪಾಲ ಗುರುದತ್ತ ಸೋಮಯಾಜಿ ಸ್ವಾಗತಿಸಿ, ಸಹಶಿಕ್ಷಕಿ ವಾಣಿ ಸಂತೋಷ್ ಮತ್ತು ಸಹಶಿಕ್ಷಕ ಸುಧೀರ್ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ದೀಕ್ಷಾ ನಿರೂಪಿಸಿ, ಶಿಕ್ಷಕಿ ಕಾವ್ಯ ವಂದಿಸಿದರು. ಸಂಸ್ಥೆಯ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
Additional image
10 Dec 2021, 08:24 PM
Category: Kaup
Tags: