ಅಸಮಾನತೆ ನಿವಾರಣೆಯಿಂದ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ: ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ
ಉಡುಪಿ : ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು ಹಾಕಿ, ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿದಾಗ, ಪ್ರತಿಯೊಬ್ಬ ನಾಗರೀಕರ ಹಕ್ಕುಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗಲಿದ್ದು, ಇದರಿಂದ ಮಾನವ ಹಕ್ಕುಗಳ ರಕ್ಷಣೆ ಸಹ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತದ ವತಿಯಿಂದ ನಡೆದ, ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೋವಿಡ್-19 ಲಸಿಕೆ ತಲುಪುವುದರೊಂದಿಗೆ, ಈ ಸಾಲಿನ ಮಾನವ ಹಕ್ಕುಗಳ ದಿನಾಚರಣೆ ಆಚರಣೆಯ ಧ್ಯೇಯ ವಾಕ್ಯವಾದ, ಸಮಾನತೆ : ಅಸಮಾನತೆಯನ್ನು ತಗ್ಗಿಸಿದರೆ, ಮಾನವ ಹಕ್ಕುಗಳನ್ನು ಸಂರಕ್ಷಿಸಿದಂತೆ. ಈ ನಿಟ್ಟಿನಲ್ಲಿ ರಜಾ ದಿನಗಳಲ್ಲಿಯೂ ಸಹ ಜಿಲ್ಲೆಯ ಪ್ರತಿಯೊಬ್ಬ ಅರ್ಹ ವ್ಯಕ್ತಿಗಳಿಗೂ ಸಹ ಕೋವಿಡ್-19 ಲಸಿಕೆ ತಲುಪಿಸುವ ಉದ್ಧೇಶದಿಂದಾಗಿ ಶ್ರಮಿಸುತ್ತಿರುವ ಎಲ್ಲಾ ಇಲಾಖೆಯ ಸಿಬ್ಬಂದಿಗಳ ಅವಿರತ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಉಡುಪಿಯ ಅಧ್ಯಕ್ಷ ರವೀಂದ್ರನಾಥ್ ಶಾನುಭಾಗ್ ಮಾತನಾಡಿ, ಕೊರೋನೋತ್ತರದ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿಷೇಷವಾಗಿ ಹಿರಿಯ ನಾಗರೀಕರಿಗೆ ಸಂಬಂಧಿಸಿ ಸಮಸ್ಯೆಗಳು ಮೂರು ಪಟ್ಟು ಹೆಚ್ಚಾಗಿದ್ದು, ಇಂತಹ ಸಂಧರ್ಭಗಳಲ್ಲಿ ವಯೋವೃದ್ದರ, ಅಶಕ್ತರ, ಅಂಗವಿಕಲರ, ಮಕ್ಕಳು ಮತ್ತು ಮಹಿಳೆಯರ ಘನತೆ - ಗೌರವಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿ ಉಂಟಾಗದಂತೆ ಅವರ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರೂ ಶ್ರಮಿಸುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಮಾನವ ಹಕ್ಕು ಕುರಿತ ಪ್ರತಿಜ್ಞಾ ವಿಧಿ ಭೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾಧಿಕಾರಿ ಕಛೇರಿಯ ಸಿಬ್ಬಂದಿಗಳು ಹಾಗೂ ಕಾನೂನು ಕಾಲೇಜಿನ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
