ಕಾಪು ತಾಲೂಕಿನ ಕುತ್ಯಾರು ಮೂಲ್ದೊಟ್ಟು ನಾಗಬನದ ಇತಿಹಾಸ
Thumbnail
ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಿಂದ ಸುಮಾರು 40ಕಿಲೋಮೀಟರ್ ದೂರದ ಶಿರ್ವ-ಮಂಚಕಲ್ ಸಮೀಪದ ಕುತ್ಯಾರು ಮಾಗಣೆಯ ಮೂಲದ ಬೆಟ್ಟುವಿನಲ್ಲಿದೆ ಈ ನಾಗ ಬನ. ಸಣ್ಣ ತೋಡು ಕಳೆದು ಸಿಗುವ ಗದ್ದೆಗಳ (ಬೈಲು) ಬದಿಯಲ್ಲೇ ಎತ್ತರ ಪ್ರದೇಶದಲ್ಲಿರುವ ಈ ನಾಗ ಬನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಮೊಗೇರರ ಆರಾಧ್ಯ ದೈವಗಳಾದ ಮುದ್ದ-ಕಳಲ ಹಾಗೂ ತನ್ನಿಮಾನಿಗ ಮಹಾತಾಯಿ ಜನಿಸಿದ ಸ್ಥಳವಾಗಿದೆ,ಯುದ್ಧದಲ್ಲಿ ಹೋರಾಡಿ ಜಯವನ್ನು ತಂದಿತ್ತ ಮೊಗೇರರಿಗೆ ಕುತ್ಯಾರು ಬೈಲ ಸೂಡ ಅರಸರು ಸನ್ಮಾನ ಏರ್ಪಡಿಸಿದ್ದಾಗ, ಬೇಯಿಸಿದ ಅನ್ನದ ಕೊಪ್ಪರಿಗೆಗೆ ಕುತ್ಯಾರು ಬೈಲ ಮಂತ್ರಿಯು ವಿಷದ ಕಾಯಿಯನ್ನು ಬೆರೆಸಿದ ಕಾರಣ ಮೊಗೇರರ ಕುಲವೇ ವಿನಾಶದತ್ತ ಸಾಗಿದಾಗ ಮುದ್ದ, ಕಳಲ, ತನ್ನಿಮಾನಿಗ ಈ ಮೂರು ಪುಟ್ಟ ಮಕ್ಕಳು ಪವಾಡ ಸದೃಶ ಸಾವಿನಿಂದ ಪಾರಾಗಿ ಬದುಕುಳಿಯುತ್ತಾರೆ. ಇವರನ್ನು ಈ ಮೂಲ್ದೊಟ್ಟು ನಾಗಬನದ ಬಳಿ ಅರಸರು ತಂದು ‘ಪೂರ್ವ ಕಾಲದಿಂದಲೇ ಮೊಗೇರರು ನಡೆಸುತ್ತಿದ್ದ ತನುತರ್ಪಣ ವನ್ನು ಈ ಬನದಲ್ಲಿ ಅದೇ ರೀತಿ ಮುಂದುವರೆಸಿಕೊಂಡು ಬರುತ್ತೇನೆಂದು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರಂತೆ. ಆನಂತರ ಆ ಮಕ್ಕಳು ವೀರರಾಗಿ ಮೆರೆದು, ಧೈವತ್ವವನು ಪಡೆದು ಮೊಗೇರ ಜನಾಂಗದ ಆರಾಧ್ಯ ಧೈವವಾಗಿ ಮೂಲ್ದೊಟ್ಟು ಬನವು ಕಾರಣಿಕ ಶಕ್ತಿ ಕೇಂದ್ರವಾಗಿ,ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿದೆ. ನಾಗವೃಕ್ಷ,ಜಲಸಂಬಂಧಿ,ಹೀಗೆ ಬನಗಳು ಹುಟ್ಟಿಕೊಂಡಿವೆ. ನಾಗಾರಾಧನೆಯ ಪ್ರಥಮ ಹಂತವೇ ನಾಗಬನ. ಬರೀ ನಾಗನನ್ನು ಪೂಜಿಸುವ ವೈದಿಕೇತರ ಕ್ರಮ ಆದಿಮ ಸ್ಥಿತಿಯಾಗಿದೆ. ಮೂಲ್ದೊಟ್ಟು ಬನದಲ್ಲಿ ಕಾಂಕ್ರೀಟ್ ಕಟ್ಟೆಯಿಲ್ಲ. ಹಗ್ಗದ ಸಹಾಯದಿಂದ ಎತ್ತರದ ಬನ ಹತ್ತುತ್ತಿರುವ ಇಲ್ಲಿ ಕಾಂಕ್ರೀಟ್ ಮೆಟ್ಟಿಲು ನಿರ್ಮಿಸಲು ಯಾರೂ ಒಪ್ಪುವುದಿಲ್ಲ. ಆದಿ ಬನವನ್ನು ಮೂಲ ರೂಪದಲ್ಲಿಯೇ ನೈಸರ್ಗಿಕವಾಗಿ ಉಳಿಸಿಕೊಂಡಿದ್ದಾರೆ. ವೃಷಭ ಮಾಸದ (ಸಾಮಾನ್ಯವಾಗಿ ಮೇ 14ರ ಆನಂತರ ಸಿಗುವ) ಮೊದಲ ಗುರುವಾರದಂದು ಬೆಳಿಗ್ಗೆಯೇ ಮೊಗೇರರೆಲ್ಲರೂ ಬಂದು ಮೂಲದ ಬೆಟ್ಟುಗುತ್ತು ಮನೆಯಲ್ಲಿ ಬಾಯಾರಿಕೆ ಕುಡಿದು ಬನದ ಕೆಳಗಿರುವ ಗದ್ದೆಯಲ್ಲಿ ಸೇರುತ್ತಾರೆ. ಸಾಧಾರಣ 09:30ಕ್ಕೆ ಮೊಗೇರ ಗುರಿಕಾರರೊಂದಿಗೆ ಕೆಲವು ಮೊಗೇರ ಪುರುಷರು ನಾಗಬನದ ಬಳಿಗೆ ಹೋಗಿ ಗದ್ದೆಯ ಬದಿಯಲ್ಲಿ ನಿಂತು “ವರ್ಷದ ಬೇಸ್ಯ ತಿಂಗಳ ತನು ತರ್ಪಣಕ್ಕೆ ಬಂದಿದ್ದೇವೆ. ನಾವು ಮಿಂದು ಬರುವ ಹೊತ್ತಿಗೆ ನಿಜ ನಾಗ ಸಂತತಿಗಳು ಬನದಿಂದ ತೆರಳಿ ತನು ತಂಬಿಲಕ್ಕೆ ಅನುಕೂಲ ಮಾಡಿಕೊಡಬೇಕೆಂದು” ಪ್ರಾರ್ಥಿಸುತ್ತಾರೆ.ಬಳಿಕ ಪುರುಷರೆಲ್ಲರು ಸ್ನಾನಕ್ಕೆ ತೆರಳಿ ಶ್ವೇತ ವಸ್ತ್ರಧಾರಿಗಳಾಗಿ ಬಂದು ಮತ್ತೊಮ್ಮೆ ಪ್ರಾರ್ಥಿಸಿ, ಕೆಲವರು ಬನ ಪ್ರವೇಶಿಸಿ, ಅಲ್ಲಿದ್ದ ತರಗೆಲೆಗಳನ್ನು ಹೊರಹಾಕಿ, ನಾಗನ ಕಲ್ಲುಗಳನ್ನು ನೀರಿನಿಂದ ತೊಳೆಯುತ್ತಾರೆ. ಆ ಹೊತ್ತಿನಲ್ಲಿ ಹರಕೆಯಿದ್ದ ‘ಮೂರಿ’ (ನಾಗನ ಬಿಂಬವುಳ್ಳ ಮಣ್ಣಿನ ಮಡಕೆ) ಯನ್ನು ಹೊತ್ತುಕೊಂಡು ಬಂದು ನಾಗನ ಕಲ್ಲಿನ ಬಳಿ ಇಡುತ್ತಾರೆ. ತದನಂತರ ಇತರರೊಂದಿಗೆ ಮಹಿಳೆಯರೂ, ಮಕ್ಕಳೂ ಬನಕ್ಕೆ ಪ್ರವೇಶಿಸುತ್ತಾರೆ.ನಾಗನ ಕಲ್ಲುಗಳನ್ನು ಸ್ವಚ್ಛಗೊಳಿಸಿದ ಬಳಿಕ ಹಾಲು, ಜೇನು, ಸೀಯಾಳ ದಿಂದ ಮೊಗೇರ ಗುರಿಕ್ಕಾರರು ಅಭಿಷೇಕ ಮಾಡುತ್ತಾರೆ. ಆ ಬಳಿಕ ನಾಗನ ಎಲ್ಲಾ ಕಲ್ಲುಗಳಿಗೂ ಅರಶಿಣ ಹುಡಿಯನ್ನು ಸಿಂಪಡಿಸುತ್ತಾರೆ. ತದನಂತರ ಸಂಪಿಗೆ, ಕೇದಗೆ, ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಹಿಂಗಾರ ಮೊದಲಾದ ಹೂವುಗಳಿಂದ ಶೃಂಗರಿಸುತ್ತಾರೆ. ಇದಾದ ಮೇಲೆ ತಂಬಿಲ, ಪೂಜೆ ನೆರವೇರಿಸುತ್ತಾರೆ. ಆಮೇಲೆ ಎಲ್ಲರೂ ಸರದಿಯಲ್ಲಿ ನಾಗನನ್ನು ಪ್ರಾರ್ಥಿಸಿ ಮೊಗೇರ ಗುರಿಕ್ಕಾರರಿಂದ ತೀರ್ಥ, ಪ್ರಸಾದ ಸ್ವೀಕರಿಸುತ್ತಾರೆ.ಎಲ್ಲರಿಗಿಂತ ಕೊನೆಗೆ ಗುರಿಕ್ಕಾರನು ಬನದಿಂದ ಇಳಿಯುತ್ತಾರೆ.ಗುರಿಕ್ಕಾರ ಇಳಿದ ನಂತರ ಮತ್ತೆ ಬನ ಹತ್ತಲು ಯಾರಿಗೂ ಅವಕಾಶವಿಲ್ಲ. ಅದು ಇನ್ನು ಮುಂದಿನ ವೃಷಭ ಮಾಸದ 14ರ ಆನಂತರ ಸಿಗುವ ಮೊದಲ ಗುರುವಾರವೆ. ಜೈ ತುಳುನಾಡ್
28 Jul 2020, 08:15 PM
Category: Kaup
Tags: