ಮಳೆ ಹಾನಿಗೆ ತಕ್ಷಣ ಪರಿಹಾರ ವಿತರಿಸಿ: ಸಚಿವ ಬೊಮ್ಮಾಯಿ
ಉಡುಪಿ ಆಗಸ್ಟ್ 6 : ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ತಕ್ಷಣವೇ ಪರಿಹಾರ ವಿತರಿಸುವಂತೆ ರಾಜ್ಯ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಗುರುವಾರ, ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಮಳೆ ಹಾನಿ ಹಾಗೂ ಕೋವಿಡ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪ್ರಾಥಮಿಕ ಹಂತದ ಪರಿಹಾರ ಬಿಡುಗಡೆಗೊಳಿಸಿ, ಮನೆ ಹಾನಿಯ ವಿವರ ಕುರಿತು ರಾಜೀವ ಗಾಂಧಿ ವಸತಿ ನಿಗಮದ ಪೋರ್ಟಲ್ ನಲ್ಲಿ , ಹಾನಿಯದ ದಿನವೇ ಅಪ್‌ಲೋಡ್ ಮಾಡುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ಕೃಷಿ ಬೆಳೆ ಹಾನಿ ಪರಿಶೀಲಿಸಲು ತಾಲೂಕುವಾರು ಕಂದಾಯ, ಕೃಷಿ ಮತ್ತು ಪಿಡಿಓ ಒಳಗೊಂಡ ತಂಡಗಳನ್ನು ರಚಿಸಿ, ಹಾನಿಯ ಸಮೀಕ್ಷೆಯನ್ನು ಶೀಘ್ರದಲ್ಲಿ ನಡೆಸಿ ವರದಿ ಪಡೆದು ಪರಿಹಾರ ನೀಡಲು ಕ್ರಮ ಕೈಗೊಂಡು ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ, ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿದ್ದಲ್ಲಿ ಅಲ್ಲಿನ ಜನತೆಗೆ ಈ ತಿಂಗಳ ಪಡಿತರದ ಜೊತೆಗೆ , ಮುಂದಿನ ತಿಂಗಳು ಪಡಿತರವನ್ನು ಮುಂಚಿತವಾಗಿ ವಿತರಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಇದುವರೆಗೆ 116 ಮನೆಗಳಿಗೆ ಭಾಗಶ: ಹಾನಿ ಮತ್ತು 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅವುಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ, ವಿಪತ್ತು ಪರಿಹಾರ ನಿಧಿಯಲ್ಲಿ ಹಣದ ಕೊರತೆ ಇಲ್ಲ, ತಹಸೀಲ್ದಾರ್ ಗಳಿಗೆ ಹಾನಿಯ ಪರಿಹಾರ ವಿತರಿಸುವ ಅಧಿಕಾರ ನೀಡಲಾಗಿದೆ, ಸಂಬಂಧಪಟ್ಟ ತಹಸೀಲ್ದಾರ್ ಗಳಿಗೆ ಹಣ ಬಿಡುಗಡೆ ಮಾಡಲಾಗಿದೆ, ಪ್ರವಾಹದಿಂದ ಜನರನ್ನು ಸ್ಥಳಾಂತರಿಸುವ ಪರಿಸ್ಥಿತಿ ಜಿಲ್ಲೆಯಲ್ಲಿ ಇಲ್ಲ, ಪ್ರವಾಹ ಪೀಡಿತ ಸಂಭವವಿರುವ 26 ಗ್ರಾಮಗಳನ್ನು ಗುರುತಿಸಲಾಗಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಎಲ್ಲಾ ಅಧಿಕಾರಿಗಳಿಗೆ ಕೇಂದ್ರಸ್ಥಾನದಲ್ಲಿರಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಚಿವರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಈ ತಿಂಗಳ ಪಡಿತರ ಎತ್ತುವಳಿ ಆಗಿದ್ದು, ಕಳೆದ ತಿಂಗಳು 95% ಪಡಿತರ ವಿತರಣೆ ಆಗಿದೆ, 1000 ಟನ್ ರಸಗೊಬ್ಬರದ ಅವಶ್ಯಕತೆಯಿದ್ದು, ಎಂಸಿಎಫ್ ನಿಂದ ನಾಳೆ ಸರಬರಾಜು ಆಗಲಿದ್ದು, ರಸಗೊಬ್ಬರದ ಸಮಸ್ಯೆ ಇಲ್ಲ, ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, 88% ಪೂರ್ಣಗೊಂಡಿದೆ , ಮರವಂತೆ ಮತ್ತು ನಾವುಂದ ಕ್ಕೆ ಭೇಟಿ ನೀಡಿ ನೆರೆ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಡಿಸಿ ಹೇಳಿದರು.
ಜಿಲ್ಲೆಗೆ ಪ್ರಾಕೃತಿಕ ವಿಕೋಪ ನಿಧಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಸಚಿವ ಬೊಮ್ಮಾಯಿ , ಜಿಲ್ಲೆಯ ಪ್ರತಿದಿನದ ಹಾನಿಯ ವರದಿಯನ್ನು ತಮಗೆ ನೀಡುವಂತೆ ಹಾಗೂ ಜಿಲ್ಲೆಯ ನಾಗರೀಕರಿಗೆ ಮಳೆಯಿಂದಾಗಿ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ , ತಕ್ಷಣವೇ ಸ್ಪಂದಿಸಿ ಅಗತ್ಯ ನೆರವು ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್19 ಸ್ಥಿತಗತಿ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕಳೆದ ವಾರದಿಂದ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 145 ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಸ್ತುತ 2100 ಸಕ್ರಿಯ ಪ್ರಕರಣಗಳಿದ್ದು, 1000 ಮಂದಿ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ನಲ್ಲಿ ಮತ್ತು 1100 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ, ಇದುವರೆಗೆ ಒಟ್ಟು 46 ಮರಣ ಸಂಭವಿಸಿದ್ದು, 15 ದಿನಗಳಿಂದ ಮರಣದ ಸಂಖ್ಯೆ ಅಧಿಕವಾಗಿದೆ.
ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಬೆಡ್ ಗಳು , ವೆಂಟಿಲೇಟರ್ ಮತ್ತು ಹೈ ಪ್ಲೋ ಆಕ್ಸಿಜಿನ್ ಬೆಡ್ ಗಳ ಕೊರತೆ ಇಲ್ಲ , ಪಾಸಿಟಿವ್ ಬಂದ ಕೊನೆಯ ಹಂತದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಮರಣ ಅಧಿಕವಾಗಿದ್ದು, ಇದನ್ನು ತಪ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಕ್ಷಣೆ ನಡೆಸಬೇಕಿದ್ದು, ಇದಕ್ಕಾಗಿ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಅನುಮತಿ ನೀಡುವಂತೆ ಸಚಿವರಲ್ಲಿ ಕೋರಿದರು.
ಜಿಲ್ಲೆಯಲ್ಲಿನ ಸರ್ಕಾರಿ ಕೋವಿಡ್ ಲ್ಯಾಬ್ ಕಾರ್ಯ, ಪರೀಕ್ಷಾ ಕಿಟ್ ಗಳ ಸರಬರಾಜು ಕುರಿತು ಮಾಹಿತಿ ಪಡೆದ ಉಸ್ತುವಾರಿ ಸಚಿವರು, ತುರ್ತು ಸಂದರ್ಭಗಳಲ್ಲಿ ಮಾತ್ರ ಆಂಟಿಜಿನ್ ಕಿಟ್ ಗಳ ಬಳಕೆ ಮಾಡುವಂತೆ ಮತ್ತು ರೋಗ ಲಕ್ಷಣವಿರುವ ವ್ಯಕ್ತಿಗಳನ್ನು ಆರ್.ಟಿ.ಪಿ.ಸಿ.ಆರ್. ಮೂಲಕ ಪರೀಕ್ಷೆ ನಡೆಸುವಂತೆ ಸೂಚಿಸಿದರು, ಆರೋಗ್ಯ ಇಲಾಖೆಯಲ್ಲಿ ಸರ್ವೆಕ್ಷಣಾ ಸಿಬ್ಬಂದಿ ನೇಮಕ ಕುರಿತಂತೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬೊಮ್ಮಾಯಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಉಪಸ್ಥಿತರಿದ್ದರು
