ಪ್ರತಿ ಗ್ರಾಮದಲ್ಲಿ ಗೋಶಾಲೆ ಪ್ರಾರಂಭವಾಗಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಕರೆ
ಉಡುಪಿ :- ಹಿಂದೆ ಪ್ರತಿ ಮನೆಯಲ್ಲಿಯೂ ಗೋವುಗಳಿದ್ದವು. ಆದರೆ ಯಂತ್ರಾಧಾರಿತ ಕೃಷಿ ಎಲ್ಲೆಡೆ ವ್ಯಾಪಿಸಿದ ಬಳಿಕ ಮನೆಯಲ್ಲಿ ಗೋವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಗೋವುಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ನಮ್ಮ ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಗೋವುಗಳಿಗಾಗಿಯೇ ಇರುವಂತಹ ಗೋಮಾಳಗಳನ್ನು ಅನ್ಯ ಕಾರ್ಯಕ್ಕಾಗಿ ನೀಡದೆ ಅದನ್ನು ಗ್ರಾಮಗಳಲ್ಲಿ ಉಳಿಸುವ ಮೂಲಕ ಪ್ರತಿ ಗ್ರಾಮಗಳಲ್ಲಿಯೂ ಗೋಶಾಲೆಯನ್ನು ನಿರ್ಮಿಸಿ ಗ್ರಾಮಗಳ ನಿಜವಾದ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದರು.
ನೀಲಾವರ ಗೋಶಾಲೆಯಲ್ಲಿ ಸೆ.13ರಂದು ಗೋವಿಗಾಗಿ ಮೇವು ಅಭಿಯಾನದ ಬಗ್ಗೆ ವಿಸ್ತ್ರತವಾಗಿ ಮಾತನಾಡುತ್ತಾ ಗೋವುಗಳ ಅಗತ್ಯತೆಯ ಬಗ್ಗೆ ಶ್ರೀಪಾದರು ಬೆಳಕನ್ನು ಚೆಲ್ಲಿದರು. ಯುವಕ ಮಂಡಲ ಮತ್ತು ಇತರ ಸಂಘಟನೆಗಳ ಮಾಧ್ಯಮದಿಂದ ಯುವಕರು ಮುಂದೆ ಬರುವ ಮೂಲಕ ಗೋವಿಗಾಗಿ ಮೇವು ಅಭಿಯಾನವನ್ನು ಇನ್ನಷ್ಟು ಬಲಪಡಿಸಬೇಕು. ಕೋವಿಡ್ ಸಂದರ್ಭದಲ್ಲಿ ಗೋಶಾಲೆಗಳಿಗೆ ಆರ್ಥಿಕ ಸಹಾಯವು ಬರುವುದು ವಿರಳವಾಗುತ್ತಿರುವ ಸಂದರ್ಭದಲ್ಲಿ ಹಸಿ ಹುಲ್ಲನ್ನು ನೀಲಾವರ ಗೋಶಾಲೆಗೆ ನೀಡಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ. ಹಿಂದೆ ಗೋಗ್ರಾಸ ನೀಡಿ ಮತ್ತೆ ನಾವು ಆಹಾರ ಸ್ವೀಕರಿಸುವ ಪದ್ಧತಿಯಿತ್ತು. ಆದರೆ ಇಂದು ಯಂತ್ರಾಧಾರಿತ ಬದುಕು ಆ ಪದ್ಧತಿಯನ್ನು ಕೈಬಿಡುವಂತೆ ಮಾಡಿದೆ. ಆದರೆ ಊಟ ಮಾಡುವ ಮೊದಲು ಗೋಗ್ರಾಸಕ್ಕಾಗಿ ಕಿಂಚಿತ್ ಧನವನ್ನು ಪ್ರತಿದಿನ ತೆಗೆದಿಟ್ಟು ಬಳಿಕ ಅದನ್ನು ಸ್ಥಳೀಯ ಗೋಶಾಲೆಗೆ ನೀಡಿದರೆ ಗೋವುಗಳ ಪಾಲನೆಗೆ ದೊಡ್ಡ ಮಟ್ಟಿನ ಸಹಕಾರವನ್ನು ನೀಡಿದಂತೆ ಆಗುತ್ತದೆ ಎಂದರು.
ಮಳೆಗಾಲದ ಬಳಿಕ ಒಣ ಹುಲ್ಲನ್ನು ಕೂಡ ನೀಡಲು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಕರೆ ನೀಡಿದ ಪೇಜಾವರ ಶ್ರೀಗಳು, ಗೋವಿನ ಆಹಾರವನ್ನು ವ್ಯರ್ಥಮಾಡಬಾರದು. ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯ ಬಳಿಕ ಒಣ ಹುಲ್ಲನ್ನು ಗೋವುಗಳಿಗಾಗಿ ಗೋಶಾಲೆಗಳಿಗೆ ಒದಗಿಸಿದರೆ ಅದೊಂದು ಪುಣ್ಯದ ಕಾರ್ಯ ಎಂದರು.
ಗೋವಿಗಾಗಿ ಮೇವು ಅಭಿಯಾನದ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡುತ್ತಾ, ಆಗಸ್ಟ್ 1 ರಂದು ಮಂದರ್ತಿಯ ಕಾಮಧೇನು ಗೋಸೇವಾ ಸಮಿತಿಯ ವತಿಯಿಂದ ಆರಂಭಿಸಿದ ಗೋವಿಗಾಗಿ ಮೇವು ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಪಕ ರೀತಿಯಲ್ಲಿ ಬಿತ್ತರಿಸಿದ ಪರಿಣಾಮದಿಂದ ಅದರಿಂದ ಪ್ರೇರಣೆ ಪಡೆದ ಯುವಜನರು ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 250 ಸಂಘಟನೆಗಳು ಮುಂದೆ ಬಂದು ನೀಲಾವರ ಗೋಶಾಲೆಗೆ ಹಸಿ ಹುಲ್ಲನ್ನು ನೀಡುವ ಮೂಲಕ ಗೋಸೇವೆಗಾಗಿ ವಿಶೇಷ ರೀತಿಯಲ್ಲಿ ಸಹಕಾರವನ್ನು ನೀಡಿವೆ ಎಂದರು.
ಖ್ಯಾತ ವೈದ್ಯರಾದ ಡಾ. ವಿಜಯ್ ನೆಗಳೂರು ಹಾಗೂ ಡಾ. ಚಿತ್ರ ನೆಗಳೂರು ಒಂದು ಟೆಂಪೋ ಹಸಿ ಹುಲ್ಲನ್ನು ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.
