<b>ಮಂಗಳೂರು ಡ್ರಗ್ಸ್ ಪ್ರಕರಣ ಭೇದಿಸುವರೇ ನೂತನ ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ?</b>
Thumbnail
ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರ ತಂಡದಲ್ಲಿದ್ದ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ ರಾಜೇಂದ್ರ ನಾಯಕ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಕಾಪು ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ಶಿವಪ್ರಕಾಶ್ ಅವರ ಸ್ಥಾನಕ್ಕೆ ನಿಯೋಜಿಸಲಾಗಿದೆ. ಡ್ರಗ್ಸ್ ಜಾಲವನ್ನು ಬೇಧಿಸಲು ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಲ್ಪಟ್ಟಿರುವ ನೈಜೀರಿಯಾದ ಪ್ರಜೆ ಫ್ರಾಂಕ್ ಎಂಬಾತನ ವಿಚಾರಣೆ ತೀವ್ರಗೊಳಿಸಿದ್ದಾರೆ. ಈತ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಸ್ಥಳಗಳಲ್ಲಿ ತಪಾಸಣೆ ನಡೆಸುವ ಜೊತೆಗೆ ಬೆಂಗಳೂರಿನಲ್ಲಿ ಆತನೊಂದಿಗೆ ಸಂಪರ್ಕದಲ್ಲಿದ್ದ ಇತರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತ ಸಂಗ್ರಹಿಸಿಟ್ಟುಕೊಂಡಿರಬಹುದಾದ ಮಾದಕ ಪದಾರ್ಥಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಗೂ ಪೊಲೀಸರು ಮುಂದಾಗಿದ್ದಾರೆ. ಬೆಟ್ಟಿಂಗ್, ಸಿನಿಮಾಕ್ಕೂ ಡ್ರಗ್ಸ್ ನಂಟು:
ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳು ಮತ್ತು ಸಿನಿಮಾರಂಗದ ಕೆಲವರಿಗೂ ಮಂಗಳೂರಿನ ಡ್ರಗ್ಸ್ ಪ್ರಕರಣದೊಂದಿಗೆ ನಂಟಿದೆ. ಬಂಧಿಸಲ್ಪಟ್ಟಿರುವವರು ಡ್ರಗ್ಸ್ ಪಾರ್ಟಿ ನಡೆಸಿರುವುದು ಅದರಲ್ಲಿ ಕೆಲವು ಮಂದಿ ಬುಕ್ಕಿಗಳು ಮುಂಬೈ, ಬೆಂಗಳೂರಿನ ಸಿನಿಮಾ ಕ್ಷೇತ್ರದವರು ಕೂಡ ಪಾಲ್ಗೊಂಡಿರುವ ಬಗ್ಗೆ ಪೊಲೀಸರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇರಳದಿಂದ ಗಾಂಜಾ ಪೂರೈಕೆ
ಒಂದೆಡೆ ಸಿಂತೆಟ್ ಡ್ರಗ್ಸ್ ಗಳ ಪೂರೈಕೆ ಜಾಲದ ಹಿಂದೆ ಸಿಸಿಬಿ ಎಕನಾಮಿಕ್ ಎಂ ನಾರ್ಕೊಟಿಕ್ ಪೊಲೀಸರು ಬೆನ್ನು ಬಿದ್ದಿದ್ದು ಇನ್ನೊಂದೆಡೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯವರು ಗಾಂಜಾ, ಚರಸ್ ಮೊದಲಾದ ಮಾದಕ ವಸ್ತುಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಂಗಳೂರಿಗೆ ಕೇರಳ ಶಿವಮೊಗ್ಗ ಮೊದಲಾದೆಡೆಗಳಿಂದ ಭಾರೀ ಪ್ರಮಾಣದಲ್ಲಿ ಸಾಗಾಟವಾಗುತ್ತಿದೆ ಎನ್ನಲಾಗಿದ್ದು ಪ್ರಮುಖ ಪೆಡ್ಲರ್ಗಳೊಂದಿಗೆ ಸಂಪರ್ಕ ಹೊಂದಿರುವವರ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
01 Oct 2020, 06:35 PM
Category: Kaup
Tags: