ಕನ್ನಡ ಚಿತ್ರರಂಗದ ನಿರ್ದೇಶಕಿ, ನಟಿ ರೂಪ ಐಯ್ಯರ್ ಕಾಪು ಹೊಸ ಮಾರಿಗುಡಿ ಭೇಟಿ ; ನವದುರ್ಗಾ ಲೇಖನ ಯಜ್ಞ ಸಂಕಲ್ಪ
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ ಭೇಟಿ ನೀಡಿ, ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.
ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಅವರ ಸಮಕ್ಷಮದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಪರವಾಗಿ ಗೌರವಿಸಲಾಯಿತು.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.
ದೇವಳದ ಪ್ರಥಮ ಮತ್ತು ದ್ವಿತೀಯ ಹಂತದ ಕಾಮಗಾರಿಯನ್ನು ವೀಕ್ಷಿಸಿ ನಂತರ, ನವದುರ್ಗಾ ಲೇಖನ ಮಂಟಪಕ್ಕೆ ಆಗಮಿಸಿ, ಲೇಖನ ಬರೆಯುವ ಸಂಕಲ್ಪ ಮಾಡಿ, ಒಂದು ದಿನದ ಲೇಖನವನ್ನು "ಲೇಖನ ಯಜ್ಞದ ಪುಣ್ಯಭೂಮಿ" ಯಲ್ಲಿ ಬರೆದರು.
ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಮಾರಿಯಮ್ಮ ದೇವಿಯ ದರುಶನ ಮಾಡೋಕೆ ಸಿಕ್ಕಿರೋದು ನನ್ನ ಸೌಭಾಗ್ಯ, ದೇವಿಯ ಒಂಬತ್ತು ಹೆಸರುಗಳನ್ನು ಬರೆಯುವ ಸೇವೆಯಲ್ಲಿ ನನ್ನಂತೆ ನೀವೆಲ್ಲರೂ ಭಾಗಿಯಾಗಿ, ನಾವೇಲ್ಲೆ ಇದ್ದರೂ ನಮ್ಮನ್ನು ಸೆಳೆಯುವ ಶಕ್ತಿ ಈ ದೇವಿಗಿದೆ, ದೇವಿಯ ಪ್ರೇರಣೆಯಂತೇ ನಾನಿಲ್ಲಿಗೆ ಬಂದು ಸೇವೆ ಸಲ್ಲಿಸಿ, ಪ್ರಾರ್ಥಿಸಿಕೊಂಡಿದ್ದೇನೆ, ಎಲ್ಲರಿಗೂ ಅವಳ ಅನುಗ್ರಹ ಇರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಮತ್ತು ಆರ್ಥಿಕ ಸಮಿತಿ ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕಿ ಬೀನಾ ವಿ.ಶೆಟ್ಟಿ ಹಾಗೂ ನವದುರ್ಗಾ ಲೇಖನ ಯಜ್ಞದ ಮಹಿಳಾ ಸಮಿತಿ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್ ಉಪಸ್ಥಿತರಿದ್ದರು.
