ಶಿರ್ವ : ಅತೀ ಶುದ್ಧ ಪ್ರೀತಿ, ಜ್ಞಾನ ವಿಜ್ಞಾನದ ತತ್ವಗಳನ್ನು ಒಳಗೊಂಡ ಸರಳ ಜೀವನ ಮೌಲ್ಯಗಳು, ಚಿಂತನಾಶೀಲ ಸಕಾಲಿಕ ವಿಚಾರಗಳನ್ನು ತಿಳಿಸಿ ಓದುಗರನ್ನು ಸ್ವವಿಮರ್ಶೆಗೆ ಒಳಪಡಿಸುವ ನಿಟ್ಟಿನಲ್ಲಿ ಎಸ್ ಎಸ್.ಪ್ರಸಾದ್‌ರವರ ಸುಪ್ರಭಾತದ ಲೇಖನಗಳು ಮನ ಮುಟ್ಟುವಂತಿವೆ ಎಂದು ಹಿರಿಯ ಆಧ್ಯಾತ್ಮದ ಚಿಂತಕಿ ಬಂಟಕಲ್ಲು ಕೃಷ್ಣಛಾಯಾದ ಪ್ರಫುಲ್ಲಾ ಜಯ ಶೆಟ್ಟಿ ನುಡಿದರು.
ಅವರು ರವಿವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ವತಿಯಿಂದ ಪ್ರಸಾದ್‌ರವರ ನಿವಾಸ "ಅನ್ನಪೂರ್ಣ"ದಲ್ಲಿ ಏರ್ಪಡಿಸಿದ "ಮನೆಯಂಗಳದಲ್ಲಿ ಸಾಹಿತ್ಯ" ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸತ್ಯಸಾಯಿ ಪ್ರಸಾದ್ ಇವರ ನಾಲ್ಕನೇ ಕೃತಿ"ಸಾಯಿ ಕೃಷ್ಣ" ಇದರ ಬಿಡುಗಡೆಗೊಳಿಸಿ ಮಾತನಾಡಿ ಖುಷಿಯನ್ನು ಹಂಚಿದರೆ ಖುಷಿಯೇ ಹಿಂದಕ್ಕೆ ಬರುತ್ತದೆ. ಇಂತಹ ಅನೇಕ ಕೃತಿಗಳು ಇವರಿಂದ ಮೂಡಿಬರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಣಿಪಾಲ ರಾಜೀನನಗರ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪಿ.ಬಾಲಕೃಷ್ಣ ಮಾತನಾಡಿ ಪ್ರಸಾದ್‌ರವರ ಕೃತಿಗಳು ನಮ್ಮ ನಡೆ,ನುಡಿಗೆ ದಾರಿದೀಪವಾಗಿದೆ. ಹಿಂದಿನ ಕೃತಿಗಳಾದ ಸಾಯಿ ಸಂದೇಶ,ಸಾಯಿ ಪ್ರಸಾದ, ಸಾಯಿ ತೀರ್ಥ ಕೃತಿಗಳು ಭಾವ ಹಾಗೂ ಭಾವನೆಗಳ ಸಮ್ಮಿಲಿತವಾಗಿವೆ ಎಂದರು.
ಹಿರಿಯ ಜಾನಪದ ವಿದ್ವಾಂಸರಾದ ಕೆ.ಎಲ್.ಕುಂಡಂತಾಯ ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮಾಡಿ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನು ಹಾರೈಸಿ, ಪ್ರಸಾದ್‌ರವರು ಶಿಕ್ಷಕರಾಗಿ ಸಲ್ಲಿಸಿದ ಸೇವೆ ಹಾಗೂ ಸಾಧನೆಗಳ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಪ್ರಫುಲ್ಲಾ ಜಯ ಶೆಟ್ಟಿ ಇವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಕೃತಿ ಲೇಖಕ ಪ್ರಸಾದ್ ಮಾತನಾಡಿ ಸಾಹಿತ್ಯ ರಚನೆಗೆ ಪ್ರೇರಣಾ ಶಕ್ತಿಯಾದ ತಮ್ಮ ಮಾತಾಪಿತರನ್ನು ಸ್ಮರಿಸಿದರು. ಸಹೋದರಿ ಪ್ರೇಮಕಾತಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ, ಜಿಲ್ಲಾ ಸಮಿತಿ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಬೆಂಗಳೂರು ರಾಜಾಜಿನಗರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಹೆರಾಲ್ಡ್ ಕ್ವಾಡ್ರಸ್, ವೀರಮಾರುತಿ ಕಲಾ ಸಂಘದ ಅಧ್ಯಕ್ಷ ಸುಜಿತ್ ಕುಮಾರ್,ಇಂದಿರಾ ಎಸ್.ಪ್ರಸಾದ್, ರಾಜೀವನಗರ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್, ಮಧುಕರ್ ಎಸ್,ಬಿಳಿಯಾರು ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.
ಬಂಟಕಲ್ಲು ಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಧನ್ಯವಾದವಿತ್ತರು. ಖ್ಯಾತ ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿಯವರಿಂದ ನಾಡಗೀತೆ, ಕನ್ನಡ ಗೀತಾಗಾಯನ ನಡೆಯಿತು.
