ಶಿರ್ವ : ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿ ಅನೇಕ ವರ್ಷಗಳ ಕಾಲ ಜೈಲುವಾಸ ಸಹಿತ ಕಠಿಣ ಶಿಕ್ಷೆ ಅನುಭವಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಆದರ್ಶ ಗಾಂಧೀವಾದಿ ಕೆ.ಎಲ್.ಶರ್ಮಾ ಇವರ ನೆನಪಿನಲ್ಲಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಅವರ ಮಕ್ಕಳು ಶಾಲಾ ಶತಮಾನೋತ್ಸವದ ಸಂದರ್ಭದಲ್ಲಿ ತಾವು ಕಲಿತ ಶಾಲಾ ಕ್ರೀಡಾಂಗಣವನ್ನು ನವೀಕರಿಸಿ ಅವರ ನೆನಪಿನಲ್ಲಿ ನೀಡಿದ್ದು ಅದರ ನಾಮಫಲಕವನ್ನು ಪುತ್ರ ರಾಮಕೃಷ್ಣ ಶರ್ಮಾ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಶರ್ಮಾರವರ ಮಕ್ಕಳಾದ ಶಾರದಾ ಶರ್ಮಾ, ಶಶಿಕಲಾ ಶರ್ಮಾ, ಸುನಂದಾ ಶರ್ಮಾ, ಡಾ.ರಾಧಾಕೃಷ್ಣ ಶರ್ಮಾ, ಸೊಸೆ ಚಂದ್ರಕಾ ಶರ್ಮಾ ಉಪಸ್ಥಿತರಿದ್ದರು.
ಶಾಲಾ ಸಭಾಂಗಣದ ಉದ್ಘಾಟನೆ : ಶಾಲಾ ಮೂಲ ಸಭಾಭವನವನ್ನು ಸಂಪೂರ್ಣ ನವೀಕರಣಗೊಳಿಸಿದ ಶಾಲಾ ಹಳೆವಿದ್ಯಾರ್ಥಿ ಲೂವಿಸ್ ಮಾರ್ಟಿಸ್ ಮತ್ತು ಸಿಸಿಲಿಯಾ ಮಾರ್ಟಿಸ್, ಹಳೆವಿದ್ಯಾರ್ಥಿನಿಯರಾದ ಅವರ ಮಕ್ಕಳ ಸಹಭಾಗಿತ್ವದಲ್ಲಿ ಶತಮಾನೋತ್ಸವದ ಶುಭಾವಸರದಲ್ಲಿ ನೀಡಿದ್ದು, ಅದರ ಉದ್ಘಾಟನೆಯನ್ನು ಲೂವಿಸ್ ಮಾರ್ಟಿಸ್ ನೆರವೇರಿಸಿದರು. ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
