ಮುದರಂಗಡಿ : ಯಾವುದೇ ಜಾತಿ,ಮತ, ಪಂಥಗಳ ಭೇದವಲ್ಲದೆ ಸಂಕಷ್ಟಕ್ಕೆ ಒಳಗಾದ ಅಸಾಯಕರಿಗೆ ಸಹಾಯ ಮಾಡಿ ಸಾಂತ್ವಾನ ನೀಡುವ ಕಾರ್ಯವೇ ದೇವರ ಸೇವೆ. ಮನುಷ್ಯರಾಗಿ ಹುಟ್ಟಿದ ಮೇಲೆ ಈಶಸೇವೆ, ದೇಶಸೇವೆ, ಜನಸೇವೆ, ಕಲಾಸೇವೆಯ ಮೂಲಕ ಜನರಿಗೆ ಹತ್ತಿರವಾಗುತ್ತೇವೆಯೋ ಆಗ ದೇವರಿಗೂ ಹತ್ತಿರವಾಗುತ್ತೇವೆ. ಕಷ್ಟದಲ್ಲಿರುವವರ ಸಂಕಷ್ಟಕ್ಕೆ ತಕ್ಷಣ ಸಹಾಯ ಮಾಡುವುದೇ ಈಶ ಸೇವೆ ಎಂದು ಮೂಡುಬಿದ್ರೆ ಸಂಪಿಗೆ ನಗರದ ಹೋಲಿ ಸ್ವಿರಿಟ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಡಿಸೋಜಾ ನುಡಿದರು.
ಅವರು ಮುದರಂಗಡಿ ಸಂತ ಪ್ರಾನ್ಸಿಸ್ ದೇವಾಲಯದ ವಾರ್ಷಿಕೋತ್ಸವ ಶುಭಾವಸರದಲ್ಲಿ ಕಂಪ್ಯಾಶನೇಟ್ ಫ್ರೆಂಡ್ಸ್ ಎಸೋಸಿಯೇಶನ್ (ರಿ.) ಮುದರಂಗಡಿ ಇದರ ವತಿಯಿಂದ ಸಾರ್ವಜನಿಕ ಆಟದ ಮೈದಾನದಲ್ಲಿ ಜರುಗಿದ 9ನೇ ವರ್ಷದ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನದಲ್ಲಿ ಈ ಕರುಣಾಮಯೀ ಸಂಸ್ಥೆ ಬಡವರ್ಗದ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಆರ್ಥಿವಾಗಿ ಬಲ ತುಂಬುವ ಕಾರ್ಯವನ್ನು ನಡೆಸುತ್ತಿರುವುದು ದೇವರು ಮೆಚ್ಚುವ ಕಾರ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿ ಮೂಲತ: ಮುದರಂಗಡಿಯವರೇ ಆದ ಗಲ್ಫ್ ಕಂಟ್ರಿಯಲ್ಲಿ ಉದ್ಯೋಗ ಮಾಡಿ ವಯೋನಿವೃತ್ತಿಯ ಬಳಿಕ ಊರಿನಲ್ಲಿ ಸೇವೆಗಾಗಿಯೇ ಸಂಘಟನೆಯನ್ನು ಕಟ್ಟಿ ತಮ್ಮ ಆದಾಯದ ಸ್ವಲ್ಪಾಂಶವನ್ನು ಕ್ರೋಢೀಕರಿಸಿ ಆ ಮೂಲಕ ಪರಿಸರದ ಬಡ ಅನಾರೋಗ್ಯ ಪೀಡಿತರಿಗೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ವಿಕಲಚೇತರರು, ಆಕಸ್ಮಿಕ ಅಪಘಾತದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ, ಮನೆರಿಪೇರಿ, ತುರ್ತುಚಿಕಿತ್ಸೆ, ವಿದ್ಯುತ್ ಸಂಪರ್ಕ ಇತ್ಯಾದಿ ಮಾನವೀಯ ನೆಲೆಯಲ್ಲಿ ಕಳೆದ 9 ವರ್ಷಗಳಿಂದ 45 ಲಕ್ಷಕ್ಕೂ ಅಧಿಕ ನಿಧಿಯನ್ನು ವಿತರಿಸಿರುವುದು ಇತರರಿಗೂ ಮಾದರಿಯಾದ ಸೇವೆಯಾಗಿದೆ ಎಂದರು.
ಸಂಸ್ಥೆಯ ಗೌರವಾಧ್ಯಕ್ಷರೂ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಹಬ್ಬದ ಶುಭ ದಿನದಲ್ಲಿ ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಕೊಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಒಳ್ಳೆಯ ಕಾರ್ಯಕ್ಕೆ ಸಮಾಜದ ಸ್ಪಂದನವೂ ಸಿಗುತ್ತದೆ. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ, ಜಗತ್ತಿಗೆ ಮಾದರಿಯಾಗಿದೆ. ಇಂತಹ ಕಾರ್ಯ ಬೆಳೆಯಬೇಕು, ಬೆಳೆಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಮೈಕಲ್ ರಮೇಶ್ ಡಿಸೋಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸಂಸ್ಥೆಯ ಆಶಯಕ್ಕೆ ಸ್ಪಂದಿಸಿ ಕೈಜೋಡಿಸಿದ ಸಮಾನಮನಸ್ಕರ ಕೊಡುಗೆಯನ್ನು ಸ್ಮರಿಸಿ, 9ವರ್ಷಗಳ ಈ ಕಾರ್ಯ ಸಂತೃಪ್ತಿಯನ್ನು ನೀಡಿದೆ. ಮುಂದಿನ ವರ್ಷ ದಶಮಾನೋತ್ಸವದ ಸಂದರ್ಭದಲ್ಲಿ ಈ ಸ್ತುತ್ಯ ಕಾರ್ಯಕ್ಕೆ ಕೈಜೋಡಿಸುವಂತೆ ವಿನಂತಿಸಿದರು.
ಮುಖ್ಯ ಅತಿಥಿಗಳಾಗಿ ಮುದರಂಗಡಿ ಗ್ರಾ.ಪಂ.ಉಪಾಧ್ಯಕ್ಷ ಶರತ್ ಶೆಟ್ಟಿ, ಉಡುಪಿ ಶೋಕಮಾತಾ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಬರ್ಟ್ ಮ್ಯಾಕ್ಸಿಮ್ ಡಿಸೋಜ, ಪಿಲಾರು ಉದ್ಯಮಿ ವಿಶ್ವನಾಥ್ ಶೆಟ್ಟಿ, ಉದ್ಯಮಿ ಕುತ್ಯಾರು ಸಾಯಿನಾಥ್ ಶೆಟ್ಟಿ, ಫೆಲಿಕ್ಸ್ ಡಿಸೋಜ, ಸ್ಟೀವನ್ ಕೊಲಾಸೋ ಉದ್ಯಾವರ ಭಾಗವಹಿಸಿದ್ದರು. ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿ, ವಂದಿಸಿದರು. ಅನಿತಾ, ಗ್ರೆಟ್ಟಾ ಪ್ರಾರ್ಥಿಸಿದರು.
