ಸಮುದ್ರದ ಅಲೆಗಳನ್ನು ಗೆದ್ದ ಮುಂಬೈ ಹುಡುಗಿ : 5 ಕಿ.ಮೀ ಈಜಿ ದಾಖಲೆ ಬರೆದ ದಿಶಿತಾ ಚಂದ್ರಶೇಖರ್ ಪೂಜಾರಿ
Thumbnail

ಕಾಪು : ಮುಂಬೈನ ಗೋರೆಗಾಂವ್ ಪಶ್ಚಿಮದ ಓಜೋನ್ ಈಜುಕೊಳದಲ್ಲಿ ತನ್ನ ಎಂಟನೇ ವಯಸ್ಸಿನಿಂದಲೇ ಈಜು ತರಬೇತಿಯನ್ನು ಆರಂಭಿಸಿದ ಬಾಲಕಿ ದಿಶಿತಾ ಚಂದ್ರಶೇಖರ್ ಪೂಜಾರಿ ಈಗ ಸಮುದ್ರದ ಅಲೆಗಳನ್ನು ಮೆಟ್ಟಿ ನಿಂತು ಹೊಸ ಇತಿಹಾಸ ಬರೆದಿದ್ದಾಳೆ. 

2023 ಮತ್ತು 2024ರಲ್ಲಿ ಸಿಂಧುದುರ್ಗ ಜಿಲ್ಲೆಯ ಮಾಲ್ವಣ್‌ನ ಚಿವ್ಲಾ ಬೀಚ್‌ನಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಸಮುದ್ರ ಈಜು ಸ್ಪರ್ಧೆಯಲ್ಲಿ ಸತತ ಎರಡು ಬಾರಿ 2 ಕಿಲೋಮೀಟರ್ ದೂರವನ್ನು ಯಶಸ್ವಿಯಾಗಿ ಈಜುವ ಮೂಲಕ ಫಿನಿಶರ್ ಮೆಡಲ್ ಪಡೆದಿದ್ದ ಈಕೆ, 2025ರಲ್ಲಿ ಮುಂಬೈನ ಸನ್ ಕ್ರೋಕ್‌ನಿಂದ ಗೇಟ್‌ವೇ ಆಫ್ ಇಂಡಿಯಾವರೆಗಿನ 2 ಕಿಲೋಮೀಟರ್ ದೂರವನ್ನು ಕ್ರಮಿಸಿ ಎಲ್ಲರ ಗಮನ ಸೆಳೆದಿದ್ದಳು. ಇದೀಗ ತನ್ನ ಸಾಧನೆಯ ಹಾದಿಯನ್ನು ಮತ್ತಷ್ಟು ವಿಸ್ತರಿಸಿರುವ ದಿಶಿತಾ, ಫೆಬ್ರವರಿ 22, 2026ರಂದು ನಡೆದ ಸನ್ ಕ್ರೋಕ್‌ನಿಂದ ಗೇಟ್‌ವೇ ಆಫ್ ಇಂಡಿಯಾವರೆಗಿನ ಕಠಿಣವಾದ 5 ಕಿಲೋಮೀಟರ್ ಸಮುದ್ರ ಈಜು ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿ ಪದಕ ಮುಡಿಗೇರಿಸಿಕೊಂಡಿದ್ದಾಳೆ.

ಈಕೆ ಗೋರೆಗಾಂವ್ ಪಶ್ಚಿಮ ಕಾಮರಾಜ್ ನಗರ ಶ್ರೀ ರಾಮ ಸಮರ್ಥ್ ಸೊಸೈಟಿ ನಿವಾಸಿ ಚಂದ್ರಶೇಖರ್ ಪೂಜಾರಿ ಮತ್ತು ಸವಿತಾ ಪೂಜಾರಿ ದಂಪತಿಯ ಸುಪುತ್ರಿ ಮತ್ತು ಇನ್ನಂಜೆ ಗ್ರಾಮದ ಮಡುಂಬು ಸಂಜೀವ ಪೂಜಾರಿ ಮತ್ತು ಶಾಂತ ಪೂಜಾರ್ತಿಯವರ ಮೊಮ್ಮಗಳಾಗಿದ್ದು, ಸೈಂಟ್ ಥೋಮಸ್ ಅಕಾಡೆಮಿಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ದಿಶಿತಾಳ ಈ ಅಪ್ರತಿಮ ಸಾಹಸಕ್ಕೆ ಕ್ರೀಡಾ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮುಂಬೈನ ಕಡಲತೀರದಲ್ಲಿ ಅವಳ ಸಾಧನೆಯ ಹಾದಿ ಇತರ ಯುವ ಈಜುಗಾರರಿಗೆ ಸ್ಫೂರ್ತಿಯಾಗಿದೆ.

    

03 Mar 2026, 04:10 PM
Category: Kaup
Tags: