ಮಾದರಿಯಾದ ಪುಸ್ತಕ ಬಿಡುಗಡೆ ಕಾಯ೯ಕ್ರಮ
Thumbnail
ಉಡುಪಿ : ನ್ಯಾಯವಾದಿ, ಯುವ ಲೇಖಕ ಮೊಹಮ್ಮದ್ ಸುಹಾನ್ ಸಾಸ್ತಾನ ಅವರ 8ನೇ ಕೃತಿ “ಸುಹಾನ ಸೋಪಾನ” ಇಂದು ಅರ್ಥಪೂರ್ಣ ರೀತಿಯಲ್ಲಿ ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದ ಬಳಿ ಬಿಡುಗಡೆಯಾಯಿತು. ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ಮತ್ತು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ರವರು, ಬರೆಯುವ ಆಸಕ್ತಿ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನ್ಯಾಯವಾದಿಯೊಬ್ಬರು ಬಿಡುವು ಮಾಡಿಕೊಂಡು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪ ಆಗುವಂತಹ ಪುಸ್ತಕ ಬರೆದಿರುವ ವಿಚಾರ ಶ್ಲಾಘನೀಯ. ಯುವಜನತೆ ಸನ್ಮಾರ್ಗದಲ್ಲಿ ನಡೆಯಲು ವಿಶೇಷವಾಗಿ ಶ್ರಮ ವಹಿಸುತ್ತಿರುವ ಸುಹಾನ್ ಸಾಸ್ತಾನ್ ಅವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು. ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಸುಹಾನ್ ಸಾಸ್ತಾನ್ ಹೊರತಂದಿರುವ ಈ ಕೃತಿಯು ಬಲಿಷ್ಠ ಸಮಾಜದ ಪರಿಕಲ್ಪನೆ ಸಾಕಾರಗೊಳಿಸಲು ಮತ್ತು ಯುವಜನತೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಲು ಬಹಳ ಉಪಯುಕ್ತವಾಗಿದೆ. ಮಾದರಿಯಾದ ರೀತಿಯಲ್ಲಿ ಅರ್ಥಪೂರ್ಣವಾಗಿ ಪುಸ್ತಕ ಬಿಡುಗಡೆ ಆಗುತ್ತಿರುವ ವಿಚಾರ ಶ್ಲಾಘನೀಯ ಎಂದರು. ರಂಗಭೂಮಿ ನಿರ್ದೇಶಕ ಬಾಸುಮ ಕೊಡಗು ಪುಸ್ತಕ ಪರಿಚಯ ನಡೆಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ರವರು ಕೋವಿಡ್ ಜಾಗೃತಿ ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ “ಎಚ್ಚರಿಕೆ ವಹಿಸಿ ಕೋವಿಡ್ ಸೋಲಿಸಿ” ಎಂಬ ವಿಡಿಯೋ ಸಂದೇಶ ಅಭಿಯಾನಕ್ಕೆ ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಲೇಖಕ ಸುಹಾನ್ ಸಾಸ್ತಾನ್ ರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ ಹಮ್ಜದ್ ಹೆಜಮಾಡಿ, ಜೇಸಿಐ ಉಡುಪಿ ಸಿಟಿ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ, ಮಲಬಾರ್ ಗೋಲ್ಡ್ ಡೈಮಂಡ್ಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್, ಜೇಸಿಐ ಉಡುಪಿ ಸಿಟಿ ಕಾರ್ಯದರ್ಶಿ ಉದಯ ನಾಯ್ಕ್, ವಿಜಯ ಭಟ್, ಮಾಜಿ ಯೋಧ ವಾದಿರಾಜ್ ಹೆಗ್ಡೆ, ನವೀನ್ ಶೆಟ್ಟಿಬೆಟ್ಟು, ಸಂತೋಷ್ ಹಿರಿಯಡ್ಕ, ಸುಧೀರ್, ತಿಲಕ್ ಮುಂತಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಮೊಹಮ್ಮದ್ ಸುಹಾನ್ ಸ್ವಾಗತಿಸಿ ವಂದಿಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
24 Oct 2020, 10:45 PM
Category: Kaup
Tags: