ಏಳು ತಿಂಗಳಿನಲ್ಲಿ ಲಕ್ಷಕ್ಕೂ ಮೀರಿ ಫಾಲೋವಸ್೯ ಪಡೆದ ಕರಾವಳಿಯ ಖ್ಯಾತ ಗಾಯಕ
ಸಾಮಾಜಿಕ ಜಾಲತಾಣ ಅದೆಷ್ಟೋ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಸರ್ವರೂ ಗುರುತಿಸುವಂತೆ ಮಾಡುವ ತಾಣವಾಗಿದೆ. ಕೋವಿಡ್ ಎಂಬ ಹೆಮ್ಮಾರಿಯು ಕಲಾವಿದರ ಬದುಕು ಕಸಿದ ಸಂದರ್ಭ ತಾವು ಕಷ್ಟದಲ್ಲಿದ್ದರೂ ತಮ್ಮ ಕಷ್ಟ ತೋರ್ಪಡಿಸದೆ ತಮ್ಮ ಕಲಾ ನೈಪುಣ್ಯತೆಯ ಮೂಲಕ ಅದೆಷ್ಟೋ ಜನ ಮನಗಳಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಮನ ತೃಪ್ತಿ ನೀಡಿದ ಕಲಾವಿದರ ಸಾಲಿನಲ್ಲಿ ಅಗ್ರಗಣ್ಯರಾದ ಹಾಡುಗಾರ ಅರವಿಂದ್ ವಿವೇಕ್.
ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಉಪಯೋಗಿಸುವವರಲ್ಲಿ ಈ ಹೆಸರು ಕೇಳದವರೇ ಇಲ್ಲ. ಅಷ್ಟು ಪ್ರಸಿದ್ಧರಾಗಿದ್ದಾರೆ. ಲಾಕ್ಡೌನ್ ಸಂದರ್ಭ ಫೇಸ್ ಬುಕ್ ನಲ್ಲಿ ಯಾವುದೋ ಒಂದು ಲೈವ್ ಕಾರ್ಯಕ್ರಮ ನೋಡಿ ತಾನೂ ತನ್ನ ಕಲೆಯನ್ನು ತೋರ್ಪಡಿಸಿದರೆ ಹೇಗೆ ಎಂದು ನಿಶ್ಚಯಿಸಿ ಮೊದಲ ಲೈವ್ ಬಂದಾಗ ಇವರ ಹಾಡನ್ನು ಕೇಳಲು ಕೇವಲ 14 ಜನರಿದ್ದರು. ನಂತರ ಲೈವ್ ಕಾರ್ಯಕ್ರಮ ನೀಡುತ್ತಾ ಬಂದರು ನೋಡುಗರ ಸಂಖ್ಯೆಯಲ್ಲಿ ಏರಿಕೆಯ ಜೊತೆಗೆ ಜನರ ಪ್ರೋತ್ಸಾಹದ ಹಾರೈಕೆಗಳಿಂದ ಮತ್ತಷ್ಟು ಉತ್ಸುಕರಾದರು. ಇಂದು ಲಕ್ಷಾಂತರ ಮಂದಿ ಇವರ ಲೈವ್ ಹಾಡುಗಾರಿಕೆಗೆ ಮನಸೋತಿದ್ದಾರೆ. ಅದರಲ್ಲೂ ಹಲವಾರು ದೇಶಗಳಿಂದ ಇವರ ಲೈವ್ ವೀಕ್ಷಿಸುತ್ತಾರೆ ಎಂಬುದು ಗಮನಾರ್ಹವಾಗಿದೆ. ಅರವಿಂದ್ ರವರ ಹಾಡಿನ ಮೋಡಿಗೆ ಇಂದು ಫೇಸ್ ಬುಕ್ ನಲ್ಲಿ ಅವರ ಪೇಜ್ ಗೆ ಒಂದು ಲಕ್ಷ ಜನ ಫಾಲೋವರ್ಸ್ ಗಳಿದ್ದಾರೆ. ಅದು ಇನ್ನೂ ಏರಿಕೆಯಾಗಲೂ ಬಹುದು. ಇದು ಇವರ ಹಾಡುಗಾರಿಕೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ತಾನು ಬೆಳೆದರೆ ಸಾಲದು ತನ್ನ ಸುತ್ತಮುತ್ತಲಿನ ಪ್ರತಿಭೆಗಳಿಗೂ ಅವಕಾಶವಿತ್ತವರು. ಮದುವೆ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 9 ಸಾವಿರಕ್ಕೂ ಅಧಿಕ ಹಾಡು ಹಾಡಿರುತ್ತಾರೆ. ತನ್ನದೇ ಸಂಗೀತದ ತಂಡವೂ ಇವರ ಬಳಿಯಿದೆ. ಸಂಗೀತವೇ ಇವರಿಗೆ ಬದುಕು ಕಟ್ಟುವ ಉದ್ಯೋಗವಾಗಿದೆ ಎನ್ನುವ ಅರವಿಂದ್ ವಿವೇಕ್ ರ ಸಂಗೀತದ ಪಯಣ ಹೀಗೆಯೇ ಮುಂದುವರಿಯಲಿ...
ದೀಪಕ್ ಬೀರ
ಪಡುಬಿದ್ರಿ
