ರಕ್ತದಾನದಲ್ಲಿ ಉಡುಪಿ ಮುಂಚೂಣಿ : ಜಿಲ್ಲಾಧಿಕಾರಿ ಜಿ.ಜಗದೀಶ್
Thumbnail
ಉಡುಪಿ : ಉಡುಪಿ ಜಿಲ್ಲೆಯಲ್ಲಿ ರಕ್ತದಾನಿಗಳು ನಿರಂತರವಾಗಿ ರಕ್ತದಾನ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ರಕ್ತದ ಕೊರತೆ ಅಷ್ಟಾಗಿ ಕಂಡುಬರುತ್ತಿಲ್ಲ, ಇದರಿಂದಾಗಿ ರಕ್ತದಾನದಲ್ಲಿ ಜಿಲ್ಲೆಯು ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಮಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಅವರು ಗುರುವಾರ ಉಡುಪಿಯ ಪುರಭವನದಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ, ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿ, ಅಭಯ ಹಸ್ತ ಸ್ವಯಂ ಸೇವಾ ಸಂಸ್ಥೆ ಉಡುಪಿ, ಹೋಟೆಲ್ ಓಷಿಯಲ್ ಪರ್ಲ್ ಮತ್ತು ಜೋಸ್ ಅಲ್ಯೂಕಾಸ್ ಉಡುಪಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಮತ್ತು ಮೊಗವೀರ ಯುವ ಸಂಘಟನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ “ರಕ್ತವನ್ನು ಸ್ವಯಂಪ್ರೇರಿತರಾಗಿ ದಾನಮಾಡಿ ಮತ್ತು ಕರೋನ ವಿರುದ್ಧದ ಹೋರಾಟಕ್ಕೆ ಕೊಡುಗೆಯಾಗಲಿ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಮತ್ತು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ರಕ್ತದಾನ ಶಿಬಿರಗಳು ನಡೆಯದ ಕಾರಣ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ರಕ್ತದ ಕೊರತೆ ಕಂಡು ಬಂದಿದ್ದು, ಈ ಸಂದರ್ಭದಲ್ಲಿ ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ಬಂದು ರಕ್ತದಾನ ಮಾಡಿದ ಕಾರಣ ಸಮಸ್ಯೆ ಬಗೆಹರಿಯಿತು, ಜಿಲ್ಲೆಯಲ್ಲಿ ರಕ್ತದಾನ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ದಾನಿಗಳು ರಕ್ತದಾನ ಮಾಡುತ್ತಿರುವುದರಿಂದ ರಕ್ತದ ಕೊರತೆ ಇಲ್ಲ, ಈ ಎಲ್ಲಾ ಶ್ರೇಯವು ರಕ್ತದಾನಿಗಳಿಗೆ ಸಲ್ಲಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್ ಮಾತನಾಡಿ, ಯುವ ಪೀಳಿಗೆಯಲ್ಲಿ 6 ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡಬೇಕು, ರಕ್ತದಾನಿಗಳು ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ತಮ್ಮ ಹೆಸರು ನೊಂದಾಯಿಸಿಕೊAಡು ರಕ್ತನಿಧಿಗೆ ತುರ್ತು ಅಗತ್ಯ ಬಿದ್ದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು. ರಕ್ತದಲ್ಲಿ ನೆಗೆಟಿವ್ ಗುಂಪಿನ ರಕ್ತ ಹೊಂದಿರುವವರ ಸಂಖ್ಯೆ ಕಡಿಮೆಯಿದ್ದು, ನೆಗೆಟಿವ್ ಗುಂಪು ಹೊಂದಿರುವ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದರು. ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದ ಮತ್ತು ರಕ್ತದಾನ ಮಾಡಿದ, ಡಾ. ಸಚ್ಚಿದಾನಂದ ಪ್ರಭು, ಶಿವರಾಮ ಕೋಟಾ, ಜಯಕರ ಶೆಟ್ಟಿ, ಪದ್ಮನಾಭ ಕಾಮತ್, ಶಾಲಿನಿ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಮಣಿಪಾಲ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಗಮನ ಸೆಳೆದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಎಂ.ಐ.ಟಿ.ಯ ಮುಖ್ಯ ಭದ್ರತಾ ಅಧಿಕಾರಿ ರತ್ನಾಕರ ಸಾಮಂತ್ ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಸ್ವಾಗತಿಸಿದರು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್ ವಂದಿಸಿದರು, ಹಿರಿಯ ಚಿಕಿತ್ಸಾ ಮೆಲ್ವಿಚಾರಕ ಮಂಜುನಾಥ್ ನಿರೂಪಿಸಿದರು.
Additional image Additional image
13 Nov 2020, 04:10 PM
Category: Kaup
Tags: