ಕಟಪಾಡಿ : ಪಾಡ್ದನ ಕಲಾವಿದೆ ಗೋಪಿ ಪಾಣಾರರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ
Thumbnail
ತಂತ್ರಜ್ಞಾನದ ಅತಿಯಾದ ಬಳಕೆಯನ್ನು ಯುವ ಸಮುದಾಯ ಮಾಡುತ್ತಿದ್ದು ಇದರಿಂದ ನಮ್ಮ ಸಂಸ್ಕೃತಿ, ಜಾನಪದ ವಿಚಾರಗಳ ಕಡೆಗೆ ನಿರಾಸಕ್ತರಾಗುತ್ತಿದ್ದಾರೆ. ಮಕ್ಕಳಲ್ಲಿ ಇವೆಲ್ಲದರ ಪರಿಚಯ ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಖರಾಮ ಹಾವಂಜೆ ಹೇಳಿದರು. ಕಟಪಾಡಿಯ ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ತು, ಬೆಂಗಳೂರು ಕನ್ನಡ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕ ಮತ್ತು ಕನ್ನಡ ಜಾನಪದ ಪರಿಷತ್ತು, ಕಾಪು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಕನಕದಾಸ ಜಯಂತಿ ಆಚರಣೆ, ಕನಕದಾಸರ ಗೀತೆಗಳ ಗಾಯನ, ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಕೆ. ಸತ್ಯೇಂದ್ರ ಪೈ ಮಾತನಾಡಿ ಜಾನಪದ ವಸ್ತುವಿಷಯಗಳ ಬಗೆಗಿನ ವಿಚಾರ ಸಂಗ್ರಹದೊಂದಿಗೆ ಜಾನಪದವನ್ನು ಮನೆ ಮನೆಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆ ಶಿರ್ವ ಕನಕದಾಸ ಜಯಂತಿಯ ಅಂಗವಾಗಿ ಕನಕದಾಸರ ಬಗೆಗೆ ಉಪನ್ಯಾಸ ನೀಡಿದರು. ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ : ಕಟಪಾಡಿಯ ಮೂಡಬೆಟ್ಟುವಿನ ಹಿರಿಯ ಜಾನಪದ ಮತ್ತು ಅಪರೂಪದ ಸಂಧಿ ಪಾಡ್ದನ ಕಲಾವಿದೆ ಗೋಪಿ ಪಾಣಾರರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ರಾಕೇಶ್ ಕುಂಜೂರು ಇವರನ್ನು ಸನ್ಮಾನಿಸಲಾಯಿತು. ಕನಕದಾಸರ ಗೀತೆಗಳ ಗಾಯನ : ಕುಮಾರಿ ವೈಷ್ಣವಿ, ಕುಮಾರಿ ನಂದಿನಿ, ನಾರಾಯಣ ಮೂರ್ತಿ, ಶಂಕರ್, ಪ್ರಕಾಶ್ ಸುವರ್ಣ ಕಟಪಾಡಿ, ಸಖರಾಮ ಹಾವಂಜೆಯವರಿಂದ ಹಾಡು, ಯಶಸ್ ಪಿ. ಸುವರ್ಣರಿಂದ ಕೊಳಲುವಾದನ ಮತ್ತು ಗೋಪಿ ಪಾಣಾರರಿಂದ ತುಳು ಪಾಡ್ದನವು ಹಾಡಲ್ಪಟ್ಟಿತು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ತು, ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ವಹಿಸಿದ್ದರು. ಘಟಕದ ಕೋಶಾಧಿಕಾರಿ ನಾಗೇಶ್ ಕಾಮತ್, ಜೊತೆ ಕಾರ್ಯದರ್ಶಿ ಪವಿತ್ರ ಆರ್. ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ಕಾರ್ಯದರ್ಶಿ ಭುವನೇಶ್ ಪ್ರಭು ವಂದಿಸಿದರು.
Additional image Additional image Additional image
03 Dec 2020, 06:42 PM
Category: Kaup
Tags: