ನವ ಭಾರತಕ್ಕಾಗಿ ಒಂದಾಗೋಣ ಪುಲ್ವಾಮಾ ದಾಳಿಗೆ ದೈಯ೯ವಾಗಿ ಉತ್ತರಿಸೋಣ
ಫೆಬ್ರವರಿ 14 ಭಾರತದ ಪಾಲಿಗೆ ಎಂದೂ ಮರೆಯಲಾಗದ ದಿನ. ಇಂದು ನಮ್ಮ ಕೆಚ್ಚೆದೆಯ ವೀರರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ದಿನ. ಹೇಡಿ ಉಗ್ರರ ಪಾಪಕೃತ್ಯಕ್ಕೆ ಗಡಿಯಲ್ಲಿ ನಮ್ಮ ವೀರರು ಅಮರರಾಗಿದ್ದರು. ನರಿಬುದ್ಧಿ ಉಗ್ರರ ಈ ಕುಕೃತ್ಯದ ಫಲವಾಗಿ ನಮ್ಮ 40 ವೀರರು ಹುತಾತ್ಮರಾದ ದಿನವಿಂದು. ಪುಲ್ವಾಮಾದಲ್ಲಿ ನಡೆದಿದ್ದ ಈ ರಕ್ಕಸ ಕೃತ್ಯವನ್ನು ಇಡೀ ಭಾರತ ಎಂದೂ ಮರೆಯದು. ಇಂತಹ ನೋವಿನ ದಿನಕ್ಕೆ ಇವತ್ತಿಗೆ ಎರಡು ವರ್ಷ ತುಂಬಿದೆ. 2019ರ ಫೆಬ್ರವರಿ 14ರ ಶುಕ್ರವಾರ 40 ಸಿಆರ್‌ಪಿಎಫ್ ಯೋಧರಿದ್ದ ವಾಹನ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಈ ವೇಳೆ, ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೊರಾದಲ್ಲಿ ರಕ್ಕಸ ಉಗ್ರರು ದಾಳಿ ಮಾಡಿದ್ದರು.
ಭಾರತದ ಹೋರಾಟ ಅನನ್ಯ: ವಾಯುದಾಳಿಯ ನಂತರ ಪ್ರಧಾನಿ ಜಾಗತಿಕ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡು ಪ್ರಮುಖ ರಾಷ್ಟ್ರಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿ ಅದು ಮಿಸುಕಾಡದಂತೆ ಮಾಡಿದ ಪರಿಯಂತೂ ಅನನ್ಯವಾದ್ದು. ಶಕ್ತರಾಷ್ಟ್ರಗಳು ಮಾತ್ರ ಈ ಪರಿಯ ದಿಗ್ಬಂಧನ ಹೇರಬಹುದೆನ್ನುವುದಾದರೆ ಭಾರತ ಇಂದೂ ಅದೇ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ ಎಂದಾಯ್ತು. ಸ್ವತಃ ಚೀನಾ ಕೂಡ ಪಾಕಿಸ್ತಾನದ ಸಹಕಾರಕ್ಕೆ ಬರದೇ ದೂರವೇ ಉಳಿದು ಮೌನವನ್ನು ಕಾಪಾಡಿಕೊಂಡಿದ್ದು ಪಾಕಿಸ್ತಾನ ತನ್ನ ಆಲೋಚನಾ ದಿಸೆಯನ್ನು ಬದಲಾಯಿಸಬೇಕೆಂಬುದಕ್ಕೆ ಉದಾಹರಣೆಯಾಯ್ತು.
ಈ ನಡುವೆಯೇ ಬಂದ ಮತ್ತೊಂದು ಸುದ್ದಿ ಪಾಕಿಸ್ತಾನದ ಪಾಲಿಗೆ ಆಘಾತಕಾರಿಯೇ ಸರಿ. ಅಲ್ಲಿನ ಸೇನಾ ಮುಖ್ಯಸ್ಥ ಬಾಜ್ವಾನ ಗಮನಕ್ಕೂ ತರದಂತೆ ಸೈನಿಕರು ಮತ್ತು ಜೈಶ್-ಎ-ಮೊಹಮ್ಮದ್ ಕಮ್ಯಾಂಡರುಗಳು ಈ ಯೋಜನೆಯನ್ನು ರೂಪಿಸಿದ್ದರಂತೆ. ಅಂದರೆ ಭಯೋತ್ಪಾದಕರು ಈಗ ಸೇನೆಯನ್ನೂ ಮೀರಿ ಬೆಳೆದಿದ್ದಾರೆ. ಪಾಕಿಸ್ತಾನ ಬಿತ್ತಿದ ಬೀಜ ಹೆಮ್ಮಾರಿಯಾಗಿ ಅವರನ್ನೇ ತಿನ್ನುತ್ತಿದೆ. ವಿಕಾಸದ ಕನಸನ್ನು ಹೊತ್ತು ಬಂದ ಇಮ್ರಾನ್ ಹಿಂದೆಂದೂ ಇಲ್ಲದಂತಹ ಪ್ರತಿರೋಧವನ್ನು ಈಗ ಎದುರಿಸುತ್ತಿದ್ದಾರೆ. ಒಂದೆಡೆ ಬಲಾಢ್ಯವಾಗಿರುವ ಭಾರತ, ಮುಲಾಜಿಲ್ಲದ ಸಕಾ೯ರ ಮತ್ತೊಂದೆಡೆ ಕೈಗೇ ಸಿಗದ ಪಾಕಿಸ್ತಾನದ ಆಥಿ೯ಕತೆ ಮತ್ತು ರಾಷ್ಟ್ರವನ್ನೇ ಮೀರಿ ಬೆಳೆಯುತ್ತಿರುವ ಭಯೋತ್ಪಾದಕರು, ಇವು ಶತ್ರು ರಾಷ್ಟ್ರವನ್ನು ಖಂಡಿತವಾಗಿಯೂ ತಿನ್ನುತ್ತಿವೆ.
ಏನೇ ಆಗಲಿ ಮುಂದೆ ಈ ರೀತಿಯ ದಾಳಿ ಆಗದಂತೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ.ಭಯೋತ್ಪಾದನೆಯ ಮೂಲ ಬೇರು ಹೋಗುವವರೆಗೂ ಹೋರಾಡಬೇಕು.
ನಮ್ಮ ದೇಶದ ದೇಶ ಬಾಂಧವರು ಪ್ರೇಮಿಗಳ ದಿನಕ್ಕೆ ಹೆಚ್ಚು ಒತ್ತು ನೀಡದೆ ಈ ದಿನವನ್ನು ಸೈನಿಕರ ದಿನವಾಗಿ ಆಚರಿಸಿ ಅವರಿಗೆ ಮತ್ತಷ್ಟು ಶಕ್ತಿ ತುಂಬುವ ಕಾಯ೯ ಮಾಡಲಿ. ಏನೇ ಆಗಲಿ ಮುಂದೆ ಸಾಗೋಣ ನವ ಭಾರತ ಕಟ್ಟಲು ಈ ದಿನವನ್ನು ಮುಡಿಪಾಗಿಡೋಣ.
ಲೇಖನ : ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
