ಕಾಪು : ಯಕ್ಷ ಪ್ರಿಯರು ಕಲಾ ಸಂಘಟನೆ ಉದ್ಘಾಟನೆ
ಕಾಪು : ಕರಾವಳಿಯ ಗಂಡುಕಲೆ ಎಂದೇ ಬಿಂಬಿತವಾಗಿರುವ ಯಕ್ಷಗಾನ ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮತ್ತು ಕಲಾವಿದರನ್ನು ಪೋಷಿಸುವ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಯಕ್ಷ ಪ್ರಿಯರು ಕಾಪು ಸಂಘಟನೆಯು ಮಾ.೧೩ರಂದು ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಬಳಿಯಲ್ಲಿರುವ ಕಾಪು ಬಂಟರ ಸಂಘದ ಅಂಬಾ ಮಹಾಬಲ ಶೆಟ್ಟಿ ಆವರಣದಲ್ಲಿ ಉದ್ಘಾಟನೆಗೊಂಡಿತು.
ಯಕ್ಷಪ್ರಿಯರು ಕಾಪು ಸಂಸ್ಥೆಯನ್ನು ಉದ್ಘಾಟಿಸಿದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪುವಿನಲ್ಲಿ ನೂತನವಾಗಿ ಆರಂಭಗೊಂಡ ಯಕ್ಷ ಪ್ರಿಯರು ಸಂಸ್ಥೆಯ ಮೂಲಕವಾಗಿ ಯಕ್ಷಗಾನ ಕಲಾವಿದರು, ಕಲೆ ಮತ್ತು ಸಂಸ್ಕೃತಿಯ ಅನಾವರಣಗೊಳ್ಳುತ್ತಿರುವುದು ಪ್ರಶಂಸನೀಯವಾಗಿದೆ. ಕರಾವಳಿಯ ಗಂಡು ಕಲೆ ಯಕ್ಷಗಾವನ್ನು ಇಂದಿನ ಯುವಜನರಿಗೆ ಪರಿಚಯಿಸಿಕೊಡುವ ಉದ್ದೇಶದಿಂದ ಪ್ರಾರಂಭಗೊಂಡಿರುವ ಈ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಶುಭ ಹಾರೈಸಿದರು.
ಯಕ್ಷ ಪ್ರಿಯರು ಸಂಘಟನೆಯ ಉದ್ಘಾಟನೆಯ ಅಂಗವಾಗಿ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಕಾರ್ನಿಕದ ಕೊರಗಜ್ಜೆ ಕಾಲಮಿತಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಯಿತು.
ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅರ್ಚಕ ವೇ| ಮೂ| ಜನಾರ್ದನ ತಂತ್ರಿ, ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ್ ಆಚಾರ್ಯ, ಗುತ್ತಿನಾರ್ ರಮೇಶ್ ಶೆಟ್ಟಿ ಬೈರುಗುತ್ತು, ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು, ಶ್ರೀ ವೀರಭದ್ರ ದೇವಸ್ಥಾನದ ಪ್ರತಿನಿಽ ಅಶೋಕ್ ಶೆಟ್ಟಿಗಾರ್, ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮೇಳದ ವ್ಯವಸ್ಥಾಪಕ ಎಸ್.ಎ. ವರ್ಕಾಡಿ, ಸಂಚಾಲಕ ಸತ್ಯಪಾಲ ರೈ ಕೆಡಿಂಜೆ, ಹಿರಿಯ ಕಲಾವಿದ ಕೆ.ಎಚ್. ದಾಸಪ್ಪ ರೈ ಪುತ್ತೂರು, ಸಂಘಟಕ ಅರುಣ್ ಶೆಟ್ಟಿ ಪಾದೂರು ಉಪಸ್ಥಿತರಿದ್ದರು.
ಸಂಘಟಕರಾದ ಕೆ. ಲೀಲಾಧರ ಶೆಟ್ಟಿ ಪ್ರಸ್ತಾವನೆಗೈದರು. ಪತ್ರಕರ್ತ ರಾಕೇಶ್ ಕುಂಜೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ್ ಸಾಲ್ಯಾನ್ ವಂದಿಸಿದರು.
