ಕೊನೆಗೂ ಮಣಿದ ಟೋಲ್ ಅಧಿಕಾರಿಗಳು, ಹೆಜಮಾಡಿ ಗ್ರಾಮ ಪಂಚಾಯತಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಹೆಜಮಾಡಿ ಗ್ರಾಪಂ ಸದಸ್ಯರಿಂದ ಟೋಲ್ ವಿನಾಯತಿಗೆ ಆಗ್ರಹಿಸಿ ಪರ್ಯಾಯ ರಸ್ತೆ ನಿರ್ಮಾಣ, ಮಾತಿನ ಚಕಮಕಿ ನಡೆಯಿತು.
ಹೆಜಮಾಡಿ ಗ್ರಾಮದ ಸ್ಥಳೀಯರಿಗೆ ಟೋಲ್‌ನಿಂದ ವಿನಾಯಿತಿ ನೀಡದ ಕಾರಣ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಸಹಿತ ಎಲ್ಲಾ ಸದಸ್ಯರು ಜೊತೆಗೂಡಿ ಟೋಲ್ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ವಾಹನವನ್ನು ಕಳುಹಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಘಟಿಸಿದೆ.
ಹೆಜಮಾಡಿ ಗ್ರಾಮ ಪಂಚಾಯತ್‌ನ ಎಲ್ಲಾ ೨೧ ಸದಸ್ಯರು ವಾರದ ಹಿಂದೆ ಟೋಲ್ ಅಧಿಕಾರಿ ಶಿವಪ್ರಸಾದ್ ರೈಯವರಿಗೆ ಮನವಿ ನೀಡಿ, ಹೆಜಮಾಡಿ ಗ್ರಾಮದ ವಾಹನಗಳಿಗೆ ಮತ್ತು ಮುಲ್ಕಿ ಶಾಲೆಗೆ ತೆರಳುವ ಬಸ್ಸ್ಗಳಿಗೆ ಟೋಲ್‌ನಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.
ಆದರೆ ವಾರದ ಬಳಿಕವೂ ಟೋಲ್ ಅಧಿಕಾರಿಗಳು ಸ್ಪಂದಿಸದ ಕಾರಣ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಪ್ರತ್ಯೇಕ ರಸ್ತೆ ನಿರ್ಮಿಸಿ, ವಾಹನಗಳನ್ನು ಬಿಡಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಟೋಲ್ ಅಧಿಕಾರಿಗಳ ಮಧ್ಯೆ ಮಾತುಕತೆಯೂ ಜರಗಿತು. ಪಡುಬಿದ್ರಿ ಠಾಣಾಧಿಕಾರಿ ದಿಲೀಪ್‌ರವರು ಸ್ಥಳಕ್ಕೆ ಆಗಮಿಸಿ ಸಂಧಾನ ಮಾಡಲು ಪ್ರಯತ್ನಿಸಿದರಾದರೂ, ಮೊದಲಿಗೆ ಒಮ್ಮತ ಆಗಿಲ್ಲ.
ಕಡೆಗೆ ಟೋಲ್ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡುವ ತನಕ ಪ್ರತ್ಯೇಕ ರಸ್ತೆಯಲ್ಲಿ ಹೋಗುವುದೆಂದು ತೀರ್ಮಾನಿಸಲಾಯಿತು.
ಟೋಲ್ ಮೆನೇಜರ್ ಶಿವಪ್ರಸಾದ್‌ರವರು ಉನ್ನತ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಲಿಖಿತವಾಗಿ ಬರೆದು ಕೊಟ್ಟ ಬಳಿಕ ಟೊಲ್‌ಗೇಟಿನ ರಸ್ತೆಯಲ್ಲಿಯೇ ವಾಹನಗಳು ಸಂಚರಿಸಿದವು.
ಪ್ರತಿಭಟನೆಯ ನೇತೃತ್ವವನ್ನು ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ವಹಿಸಿದ್ದು, ಗ್ರಾಮದ ಎಲ್ಲಾ ೨೧ ಸದಸ್ಯರೂ ಭಾಗಿಯಾಗಿದ್ದರು.
ಪಡುಬಿದ್ರಿ ಠಾಣಾಧಿಕಾರಿ ಸೂಕ್ತ ಬಂದೋಬಸ್ತನ್ನು ವಹಿಸಿದ್ದರು.
