ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್‌ : ಫುಡ್ ಕೋರ್ಟ್, ಕಾಯಕಿಂಗ್, ಬೋಟಿಂಗ್ ವ್ಯವಸ್ಥೆಗಳ ಉದ್ಘಾಟನೆ
Thumbnail
ಕಾಪು : ಉಡುಪಿ ಜಿಲ್ಲೆಯ ಜನಾಕರ್ಷಣೆಯ ತಾಣ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ಗೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಭೇಟಿ ನೀಡಿ ಫುಡ್ ಕೋರ್ಟ್, ಪ್ರವಾಸೀ ಆಕರ್ಷಣೆಗಾಗಿ ಆರಂಭಿಸಲಾದ ಕಾಯಕಿಂಗ್, ಬೋಟಿಂಗ್ ವ್ಯವಸ್ಥೆಗಳನ್ನು ಉದ್ಘಾಟಿಸಿ, ಕಾಮಿನೀ ಹೊಳೆಯಲ್ಲಿ ಕಾಯಕಿಂಗ್ ಅನುಭವವನ್ನು ಆನಂದಿಸಿದರು. ಈ ಸಂದರ್ಭ ಮಾತನಾಡಿದ ಅವರು ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ರಾಜ್ಯ ಸರಕಾರದ ಅನುದಾನದೊಂದಿಗೆ ತೇಲುವ ರೆಸ್ಟೋರೆಂಟ್ ಪ್ರಾರಂಭ, ಈಗಿನ ೪೯ ಮಂದಿ ಸಿಬ್ಬಂದಿ ವರ್ಗವನ್ನು ಉಳಿಸಿಕೊಂಡು ಮುಂದಿನ ಎರಡು ವರ್ಷಗಳಲ್ಲಿ ೧೦೦ ಮಂದಿಗೆ ಉದ್ಯೋಗ ಸೃಷ್ಟಿ ಯೋಜನೆ, ಹೆಚ್ಚಿನ ಪ್ರವಾಸೀ ಆಕರ್ಷಣೆ ಹಾಗೂ ತೂಗು ಸೇತುವೆ ನಿರ್ಮಾಣದ ಮೂಲಕ ಅಭಿವೃದ್ಧಿಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಇದೀಗ ಮೂರು ಕಾಯಕಿಂಗ್ ಬೋಟ್‌ಗಳಿದ್ದು ಇನ್ನೂ ಮೂರನ್ನು ಶೀಘ್ರದಲ್ಲೇ ಸೇರ್ಪಡೆಗೊಳಿಸಲಾಗುವುದು. ಕಾಯಕಿಂಗ್‌ಗೆ ಅರ್ಧ ಗಂಟೆಗೆ ೧೦೦ರೂ. ದರ ಹಾಗೂ ಬೋಟಿಂಗ್‌ಗೆ ಪ್ರತೀ ಪ್ರವಾಸಿಗರಿಗೆ ೫೦ರೂ. ದರ ನಿಗದಿಪಡಿಸಲಾಗಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಪ್ರವಾಸೋದ್ಯಮ ಇಲಾಖಾ ಉಪ ನಿರ್ದೇಶಕ ಸೋಮಶೇಖರ್, ಬ್ಲೂ ಫ್ಲ್ಯಾಗ್ ಬೀಚ್ ನೋಡೆಲ್ ಅಧಿಕಾರಿ ಚಂದ್ರಶೇಖರ್ ನಾಯಕ್, ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಗಣೇಶ್, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಉಡುಪಿ ತಾ. ಪಂ. ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮನೋಹರ ಶೆಟ್ಟಿ ಕಾಪು ಹಾಗೂ ಕಾರ್ಯದರ್ಶಿ ಗೌರವ್ ಶೇಣವ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋದ ಮತ್ತಿತರು ಉಪಸ್ಥಿತರಿದ್ದರು.
02 Apr 2021, 07:52 PM
Category: Kaup
Tags: