ಕಾಪುವಿನಲ್ಲಿ ಉದ್ಘಾಟನೆಗೊಂಡ ಬಲೆ ತುಲು ಲಿಪಿ ಕಲ್ಪುಗ ತರಬೇತಿ ಕಾರ್ಯಾಗಾರ
ಕಾಪು : ತುಳು ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆಯಿದೆ. ನಮ್ಮ ಭಾಷೆಯನ್ನು ನಮ್ಮೂರಿನ ಫಲಕಗಳಲ್ಲಿ ಅಳವಡಿಸಬೇಕಾಗಿದೆ. ತುಳು ಲಿಪಿ ಕಲಿಕೆಯು ನಿರಂತರತೆಯನ್ನು ಕಾಯ್ದುಕೊಳ್ಳಬೇಕಾಗಿದೆ. ಪ್ರತಿ ಶಾಲೆಯಲ್ಲಿ ವಾರದಲ್ಲಿ ಒಂದು ದಿನವಾದರೂ ತುಳು ಲಿಪಿ ಕಲಿಕೆಯನ್ನು ಅಳವಡಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ ಎಂದು ಕಾಪು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಕಾಪು ಇದರ ಅಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಹೇಳಿದರು.
ಅವರು ಕಾಪು ಸಿ.ಎ ಬ್ಯಾಂಕ್ ಕಟ್ಟಡದ ಭಾಸ್ಕರ ಸೌಧ ಸಭಾಂಗಣದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.), ಜೇಸಿಐ ಕಾಪು, ಯುವವಾಹಿನಿ (ರಿ.) ಕಾಪು ಘಟಕ, ನಮ್ಮ ಕಾಪು ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ಜರಗಿದ ಬಲೆ ತುಲು ಲಿಪಿ ಕಲ್ಪುಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಆಕಾಶ್ ರಾಜ್ ಜೈನ್ ಮಾತನಾಡಿ ತುಳು ಭಾಷೆಯ ಶಬ್ದಗಳನ್ನು ಪ್ರದಕ್ಷಿಣಾಕಾರವಾಗಿ ಬರೆಯುವುದರಿಂದ ದೈವತ್ವದ ಭಾಷೆ, ಅಳುಪರ ಕಾಲದಲ್ಲಿ ಮನ್ನಣೆಯಿದ್ದ ಭಾಷೆ ಕಾಲಕ್ರಮೇಣ ಮನ್ನಣೆಯಿಲ್ಲದಾಯಿತು. ಇದೀಗ ಸರ್ವರೂ ಮನ್ನಣೆಯಿತ್ತರೂ ಸರಕಾರದ ಮಟ್ಟದಲ್ಲಿ ಅಧಿಕೃತ ಭಾಷೆಯ ಮನ್ನಣೆ ನೀಡುತ್ತಿಲ್ಲ ಈ ನಿಟ್ಟಿನಲ್ಲಿ ಸರ್ವರ ಪ್ರಯತ್ನ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ತಾರಾ ಉಮೇಶ್ ಆಚಾರ್ಯ, ಜೇಸಿಐ ವಲಯ 15ರ ಉಪಾಧ್ಯಕ್ಷರಾದ ಜೇಸಿ ಗಿರೀಶ್ ಎಸ್. ಪಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು, ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಸೌಮ್ಯ ರಾಕೇಶ್, ಜೇಸಿಐ ಕಾಪು ಅಧ್ಯಕ್ಷೆ ಜೇಸಿ ಅರುಣಾ ಐತಾಳ್, ನಮ್ಮ ಕಾಪು ನ್ಯೂಸ್ ನ ಮುಖ್ಯಸ್ಥರಾದ ವಿಕ್ಕಿ ಮಡುಂಬು, ತುಳು ಶಿಕ್ಷಕರಾದ ರಾಜೇಶ್ ತುಳುವೆ, ಅಕ್ಷತಾ ಕುಲಾಲ್, ಪೂರ್ಣಿಮಾ ದಕ್ಷ, ನೀತಾ ಕೆಮ್ತೂರು ಉಪಸ್ಥಿತರಿದ್ದರು.
ಸೌಮ್ಯ ರಾಕೇಶ್ ಸ್ವಾಗತಿಸಿ, ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವಿಸಿ, ಶಿವಣ್ಣ ಬಾಯಾರು ನಿರೂಪಿಸಿ, ವಿಕ್ಕಿ ಮಡುಂಬು ವಂದಿಸಿದರು.
