ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಶಾಲಾ ಕಾಲೇಜುಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ ಪರಿಶೀಲನೆ

Posted On: 16-09-2021 10:26PM

ಉಡುಪಿ : ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲನೆ ಮಾಡುತ್ತಿರುವ ಕುರಿತಂತೆ, ಕರ್ನಾಟಕ ಲೋಕಾಯುಕ್ತರು, ಬೆಂಗಳೂರು ಇವರ ಸೂಚನೆಯಂತೆ, ಮಂಗಳೂರಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ, ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಗದೀಶ್ ಎಂ, ಪೊಲೀಸ್ ನಿರೀಕ್ಷಕ ಜಯರಾಮ ಡಿ ಗೌಡ, ರಾಜಶೇಖರ ಎಲ್ ಹಾಗೂ ಸಿಬ್ಬಂದಿಗಳು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂಜಿಬೆಟ್ಟುವಿನ ಮಹಾತ್ಮಗಾಂಧೀ ಮೆಮೋರಿಯಲ್ ಕಾಲೇಜು, ಇಂದ್ರಾಳಿ ಪ್ರೈಮರಿ ಮತ್ತು ಹೈಯರ್ ಪ್ರೈಮರಿ ಸ್ಕೂಲ್, ಉಡುಪಿಯ ಸರಕಾರಿ ಬೋರ್ಡ್ ಹೈಸ್ಕೂಲ್ ಗಳಿಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಶಾಲಾ ಭೇಟಿ ವೇಳೆ, ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸೇಶನ್ ಮಾಡುವುದು ಮತ್ತು ಮನೆಯಿಂದಲೇ ಬಿಸಿ ನೀರು ಮತ್ತು ಆಹಾರ ಪದಾರ್ಥಗಳನ್ನು ತರುವ ಬಗ್ಗೆ ಮತ್ತು ಶಾಲೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಜಾಗೃತಿ ಮೂಡಿಸಿ, ಸರ್ಕಾರದ ಮಾರ್ಗಸೂಚಿಯಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶಾಲಾ ಮುಖ್ಯಸ್ಥರಿಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ಕುಮಾರಸ್ವಾಮಿ ಸೂಚಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಭೇಟಿ ವೇಳೆ, ಶಾಲಾ ಕಾಲೇಜುಗಳಿಗೆ ಭೇಟಿ ನೀಡಲಿದ್ದು, ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು ಸರ್ಕಾರದ ಸುತ್ತೋಲೆಯಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಕೋವಿಡ್ ನಿಯಮ ಪಾಲಿಸುವಂತೆ ಸೂಚಿಸಿದರು.