ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪೊಲಿಪು ಶಾಲೆಯ ಶಾಲಾಭಿವೃದ್ಧಿ ಸಮಿತಿಗೆ ತಡೆ: ಕಾಪುವಿನಲ್ಲಿ ಪತ್ರಿಕಾಗೋಷ್ಠಿ

Posted On: 17-09-2021 10:10PM

ಕಾಪು : ಪೊಲಿಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು ಶಿಕ್ಷಣ ಇಲಾಖೆ ನಿಯಮಾನುಸಾರ ರಚನೆಯಾಗಿದ್ದು, ಯಾವುದೇ ಸ್ಪಷ್ಟ ಕಾರಣ ನೀಡದೆ ತಡೆಹಿಡಿಯಲಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಜಿ. ಮೆಂಡನ್ ಬುಧವಾರ ಕಾಪು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಪಾಲಕರಲ್ಲದವರು ಸಮಿತಿಯಲ್ಲಿದ್ದುಕೊಂಡು ಉಸ್ತುವಾರಿ ನಡೆಸುತ್ತಿದ್ದು, ೨೦೦೮ರ ಬಳಿಕ ಶಾಲೆಯಲ್ಲಿ ಯಾವುದೇ ಎಸ್‌ಡಿಎಂಸಿ ರಚನೆಯಾಗಲಿಲ್ಲ. ಪೋಷಕರ ಒತ್ತಾಯದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ೨೦೨೧ ಮಾರ್ಚ್ ೧೦ರಂದು ಶಿಕ್ಷಣ ಇಲಾಖೆ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನೂತನ ಎಸ್‌ಡಿಎಂಸಿ ರಚಿಸಲಾಗಿದೆ. ಈ ಮಧ್ಯೆ ಪಾಲಕರಲ್ಲದ ವ್ಯಕ್ತಿಯೊಬ್ಬರು ನೂತನ ಎಸ್‌ಡಿಎಂಸಿ ರಚನೆ ಬಗ್ಗೆ ಆಕ್ಷೇಪಿಸಿ ಶಿಕ್ಷಣ ಇಲಾಖೆಗೆ ದೂರು ನೀಡಿದ್ದು, ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಮಗ್ರ ತನಿಖೆಯನ್ನೂ ನಡೆಸಿದ್ದರು.

ಆದರೆ ತನಿಖೆಯ ಬಳಿಕ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಈ ಕುರಿತಂತೆ ಉಪನಿರ್ದೇಶಕರಲ್ಲಿ ಹಲವು ಬಾರಿ ವಿಚಾರಿಸಿದರೂ ಸ್ಪಷ್ಟ ಉತ್ತರ ದೊರೆತಿಲ್ಲ. ಆದರೆ ಕಾನೂನು ಬದ್ದವಾಗಿ ರಚನೆಯಾಗಿರುವ ಎಸ್‌ಡಿಎಂಸಿಗೆ ಈವರೆಗೆ ಯಾವುದೇ ಅವಕಾಶ ನೀಡದಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಶಾಲಾಭಿವೃದ್ಧಿ ದೃಷ್ಟಿಯಿಂದ ಈಗ ರಚನೆಯಾಗಿರುವ ಎಸ್‌ಡಿಎಂಸಿಯನ್ನು ಮಾನ್ಯ ಮಾಡಬೇಕು. ನಾವು ಎಲ್ಲರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡುವ ಮೂಲಕ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಬದ್ದರಿರುವುದಾಗಿ ರಾಜೇಶ್ ಜಿ ಮೆಂಡನ್ ತಿಳಿಸಿದ್ದಾರೆ. ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರೇಮಾ ರಮೇಶ್, ಪಾಲಕರಾದ ಜಲಜಾಕ್ಷಿ, ಸೌಮ್ಯಾ ಆರ್ ಮೆಂಡನ್, ಹರೀಶ್ ಉಪಸ್ಥಿತರಿದ್ದರು.