Updated News From Kaup
ಫೆಬ್ರವರಿ 20 : ಕವಿ ಸರ್ವಜ್ಞ ಜಯಂತಿ ಆಚರಣೆ

Posted On: 12-02-2024 10:35PM
ಉಡುಪಿ : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟ ಇವರ ಆಯೋಜನೆಯಲ್ಲಿ ಉಡುಪಿಯ ಅಜ್ಜರಕಾಡು ಪಿ. ಜಿ. ಎ.ವಿ ಹಾಲ್ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ಕಾಲೇಜು ಇಲ್ಲಿ ಫೆಬ್ರವರಿ 20 ರಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಕುಲಾಲ ಸಂಘಗಳ ಪ್ರಮುಖರ ಸಮ್ಮುಖದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಣೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕುಲಾಲ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿರುವರು.
ಓಮನ್ ಬಿಲ್ಲವಾಸ್ - ಕ್ರೀಡಾಮಹೋತ್ಸವ 2024 ಸಂಪನ್ನ

Posted On: 12-02-2024 06:52PM
ಮಸ್ಕತ್ : ಇಲ್ಲಿನ ಓಮನ್ ಬಿಲ್ಲವಾಸ್ ಸಂಘಟನೆಯಿಂದ ಒಂದು ದಿನದ ಹೊನಲು ಬೆಳಕಿನ ಕ್ರೀಡಾಕೂಟ ಸಂಘದ ಅಧ್ಯಕ್ಷರಾದ ಸುಜಿತ್ ಅಂಚನ್ ಪಾಂಗಳ ಇವರ ನೇತೃತ್ವದಲ್ಲಿ ಶುಕ್ರವಾರ ಮಸ್ಕತ್ತಿನ ಅಲ್ ಹೈಲ್ ಕ್ರಿಕೆಟ್ ಮೈದಾನದಲ್ಲಿ ಜರಗಿತು. ಸಂಘಟನೆಯ ಸ್ಥಾಪಕ ಅಧ್ಯಕ್ಷ ದಿವಂಗತ ಪಿ. ಬಿ. ಅಳಕೆ ಇವರ ಸ್ಮರಣಾರ್ಥ ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ಕ್ರಿಕೆಟ್ ಮತ್ತು ತ್ರೋಬಾಲ್. ಮಕ್ಕಳಿಗೆ, ಹಿರಿಯರಿಗೆ ವಿವಿದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪುರುಷರ ೮ ತಂಡಗಳು ಹಾಗೂ ಮಹಿಳೆಯರ ೪ ತಂಡಗಳು ಪ್ರಪ್ರಥಮವಾಗಿ ಆಯೋಜಿಸಲ್ಪಟ್ಟ 'Late Shri P. B. Alke Trophy 2024’ ಕ್ಕಾಗಿ ತಲಾ 5 ಓವರ್ ಗಳ ಲೀಗ್ ಮಾದರಿಯಲ್ಲಿ ರೋಚಕವಾಗಿ ಸೆಣಸಾಡಿದರು.

ಪುರುಷರ ತಂಡಗಳಾದ 'ಕುದ್ರೋಳಿ XI', 'ಬೆದ್ರ XI', 'ಬಿರ್ವ್ಹಾ ಸ್ಮ್ಯಾಶರ್ಸ್', 'ಜೇನುಗೂಡು', 'ಗೆಜ್ಜೆಗಿರಿ XI', 'ಕಟ್ಪಾಡಿ XI', 'ಸೋಹಾರ್ ವಾರಿಯರ್ಸ್', ಹಾಗೂ ‘ಕಾನ್ಸೆಪ್ಟ್ XI' ತಂಡಗಳು ಭಾಗವಹಿಸಿದ್ದವು. ಅಂತಿಮ ಸೆಣಸಾಟದಲ್ಲಿ ಸುಕುಮಾರ್ ಅಂಚನ್ ಪಾಂಗಾಳ ಇವರ ಮಾಲಕತ್ವದ ‘ಗೆಜ್ಜೆಗಿರಿ XI' ತಂಡವು ಸಂದೀಪ್ ಕರ್ಕೇರಾ ಮಾಲಕತ್ವದ 'ಬೆದ್ರ XI' ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯಭೇರಿಪಡೆದು ಪ್ರತಿಷ್ಠಿತ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ‘ ಬಿರ್ವ್ಹಾ ಬೊಳ್ಳಿಲು’, ‘ಟೀಮ್ ಶಕ್ತಿ’, ‘ಸೋಹಾರ್ ವಾರಿಯರ್ಸ್' ಹಾಗೂ ‘ಟೀಮ್ ಭೈರವಿ’ ತಂಡಗಳು ಭಾಗವಹಿಸಿದ್ದವು. ಫೈನಲ್ ಹಣಾಹಣಿಯಲ್ಲಿ 'ಟೀಮ್ ಶಕ್ತಿ' ತಂಡವು 'ಟೀಮ್ ಭೈರವಿ' ವಿರುದ್ಧ 6 ವಿಕೆಟ್ ಗಳ ರೋಚಕ ಗೆಲುವಿನೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿತು.
ಇನ್ನೊಂದೊಡೆ ತ್ರೋಬಾಲ್ ಪಂದ್ಯದಲ್ಲಿ 'ಟೀಂ ಶಕ್ತಿ', 'ಬಿರ್ವ್ಹಾ ಬೊಳ್ಳಿಲು’ ಹಾಗೂ 'ಬ್ರಾಮರಿ' ತಂಡಗಳು ಭಾಗವಹಿಸಿದ್ದವು. ಫೈನಲ್ ಮುಖಾಮುಖಿಯಲ್ಲಿ 'ಟೀಮ್ ಶಕ್ತಿ' ತಂಡವು ‘ಬಿರ್ವ್ಹಾ ಬೊಳ್ಳಿಲು’ ವಿರುದ್ಧ ಜಯಸಾಧಿಸಿ ಪ್ರಶಸ್ತಿಗಳಿಸುವಲ್ಲಿ ಸಫಲತೆಯನ್ನು ಕಂಡಿತು. ಉತ್ತಮ ಆಟಗಾರರಿಗೆ, ವಿಜೇತ ತಂಡಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ನವೀನ್ ಪೂಜಾರಿ, ಗಣೇಶ್ ಪೂಜಾರಿ ಮತ್ತು ನಿತೇಶ್ ತಂಡ ಊಟೋಪಚಾರದ ನೇತೃತ್ವವಹಿಸಿದ್ದರು. ಈ ಕ್ರೀಡಾಮಹೋತ್ಸವದಲ್ಲಿ ಅಧ್ಯಕ್ಷ ಸುಜಿತ್ ಅಂಚನ್, ಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಸುವರ್ಣ, ಎಸ್. ಕೆ. ಪೂಜಾರಿ, ಡಾ. ಅಂಚನ್ ಸಿ. ಕೆ, ಓಮನ್ ತುಳುವೆರ್ ಅಧ್ಯಕ್ಷ ರಮಾನಂದ ಶೆಟ್ಟಿ, ಮಸ್ಕತ್ ಮೊಗವೀರ್ಸ್ ಪ್ರತಿನಿಧಿ ಶ್ರೀಶ ಕಾಂಚನ್, ಕರಾವಳಿ ಫ್ರೆಂಡ್ಸ್ ನ ಹಿತೇಶ್, ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2024 : ಶಿವಾನಂದ ಕೋಟ್ಯಾನ್ ಗೆ ವಿಶ್ವಮಾನ್ಯ ಪ್ರಶಸ್ತಿ ಪ್ರದಾನ

Posted On: 12-02-2024 06:42PM
ಸೌದಿ ಅರೇಬಿಯಾ : 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2024 ಸೌದಿ ಅರೇಬಿಯಾದ ದಮಮ್ ನಲ್ಲಿ ಫೆಬ್ರವರಿ 8 ರಂದು ಅದ್ಧೂರಿಯಾಗಿ ಸಂಪನ್ನವಾಯಿತು. ಓಮಾನ್ ಮಸ್ಕತ್ ನಲ್ಲಿರುವ ಅನಿವಾಸಿಗ ಶಿವಾನಂದ ಕೋಟ್ಯನ್ ರವರಿಗೆ ವಿಶೇಷವಾಗಿ ಆಹ್ವಾನಿಸಿ ತಮ್ಮ ಕೊಡುಗೆ ಕಲೆ, ಸಾಹಿತ್ಯ ಮತ್ತು ಚಲನಚಿತ್ರಗಳ ಆಯೋಜನೆ, ಸಹಾಯ- ಸಹಕಾರ ಸಮಾಜ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿನ ಸೇವೆಯ ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
ವೈಭವಯುತವಾದ 17ನೇ ವಿಶ್ವ ಕನ್ನಡ ಸಂಸ್ಕೃತಿಕ ಸಮ್ಮೇಳನ ಪ್ರಥಮ ಬಾರಿಗೆ ಸೌದಿ ಅರೇಬಿಯಾದಲ್ಲಿ ಯಶಸ್ವಿಯಾಗಿ ಜರುಗಿತು. ಕನ್ನಡ ಭಾಷೆ, ನಡೆ ನುಡಿಯ ಬಗೆಗಿನ ಮನರಂಜನೆ, ಕವಿ ಗೋಷ್ಟಿ, ಯಕ್ಷಗಾನ ಕಾರ್ಯಕ್ರಮಗಳು ಜರಗಿದವು.
ಮುಖ್ಯ ಅತಿಥಿಗಳಾಗಿ ಸಭಾಪತಿ ಯು.ಟಿ. ಖಾದರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಅನಿವಾಸಿ ಕನ್ನಡಿಗರ ಕೋಶ ಉಪಾಧ್ಯಕ್ಷ ಡಾ. ಆರತಿ ಕೃಷ್ಣ, ಪುತ್ತೂರು ಶಾಸಕ ಅಶೋಕ್ ರೈ, ಪೌರ ಆಡಳಿತ ಮತ್ತು ಹಜ್ ಖಾತೆ ಸಚಿವ ಜನಾಬ್ ರಹೀಮ್ ಖಾನ್ ವಕೀಲ ಪದ್ಮರಾಜ್ ಆರ್, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ ಮಂಜುನಾಥ ಸಾಗರ್ ಉಪಸ್ಥಿತಿಯಿದ್ದರು.
ಜನಾಬ್ ಝಕರಿಯಾ ಬಜ್ಪೆ, ಜನಾಬ್ ಶೇಖ್ ಕರ್ನಿರೆ ಮತ್ತು ಸತೀಶ್ ಕುಮಾರ್ ಬಜಲ್ ಮತ್ತು ತಂಡವು ಕಾರ್ಯಕ್ರಮ ಆಯೋಜಿಸಿತ್ತು. ಕನ್ನಡ, ತುಳು ಗಾಯನ, ಹಾಗೂ ನೃತ್ಯ, ವೈವಿಧ್ಯವೂ ಜರಗಿತು.
ಪಾಂಗಳ ಬ್ರಿಡ್ಜ್ ಹತ್ತಿರ ಟಿಪ್ಪರ್ ಪತ್ತೆ ಟೈಯರ್ ನಾಪತ್ತೆ

Posted On: 12-02-2024 10:52AM
ವಾಹನ ಮಾಲೀಕರೇ ಚಾಲಕರೇ ಎಚ್ಚರ ಎಚ್ಚರ ಎಚ್ಚರ
ನೆನ್ನೆ ರಾತ್ರಿ ಪಡುಬಿದ್ರಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಟಿಪ್ಪರ್ ವಾಹನವನ್ನು ಕಳ್ಳತನ ಮಾಡಿ ಪಾಂಗಳ ಬ್ರಿಡ್ಜ್ ಹತ್ತಿರ ತಂದು ನಿಲ್ಲಿಸಿ ವಾಹನದ ಅಷ್ಟು ಟೈರುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿರುತ್ತಾರೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್ ಗೆ ತಿಳಿಸಿ.
ಫೆಬ್ರವರಿ 20 : ಕಾಪುವಿನಲ್ಲಿ ಆನಂದ ಲಹರಿ ಮಹಾ ಸತ್ಸಂಗ

Posted On: 10-02-2024 05:58PM
ಕಾಪು : ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಜೀವನ ಕಲೆ ಹಾಗೂ ಸುದರ್ಶನ ಕ್ರಿಯಾಯೋಗದ ಸ್ಥಾಪಕಾಚಾರ್ಯ, ಅಂತರಾಷ್ಟ್ರೀಯ ಖ್ಯಾತಿಯ ಪದ್ಮವಿಭೂಷಣ ಶ್ರೀ ರವಿಶಂಕರ್ ಗುರೂಜಿ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಫೆಬ್ರವರಿ 20, ಮಂಗಳವಾರದಂದು ಸಂಜೆ 5 ಗಂಟೆಗೆ ಕಾಪು ಸಮುದ್ರ ಕಿನಾರೆಯಲ್ಲಿರುವ ಮಂಥನ ರೆಸಾರ್ಟ್ ಬಳಿ ನಡೆಯಲಿರುವ ಆನಂದ ಲಹರಿ ಮಹಾ ಸತ್ಸಂಗದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಶನಿವಾರ ಮಂಥನ ರೆಸಾರ್ಟ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಾನವತಾವಾದಿ ಹಾಗೂ ಶಾಂತಿದೂತ ಶ್ರೀ ರವಿಶಂಕರ್ ಗುರೂಜಿ ಅವರ ಮಹಾ ಸತ್ಸಂಗವನ್ನು ಆಯೋಜಿಸಿರುತ್ತೇವೆ. ಜೀವನಕಲಾ ಸಂಸ್ಥೆಯ ಕಾರ್ಯಕ್ರಮಗಳು ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದು ಇಡೀ ಜಗತ್ತಿನಲ್ಲಿ ಲಾಭರಹಿತವಾದ ಶೈಕ್ಷಣಿಕ, ಮಾನವೀಯ ಮೌಲ್ಯಗಳುಳ್ಳ ಪ್ರಮುಖ ಸಂಸ್ಥೆಯಾಗಿದೆ. ಉಡುಪಿ ಜಿಲ್ಲೆಗೆ ಬಂದು ಆನಂದ ಲಹರಿ ಮಹಾ ಸತ್ಸಂಗದಲ್ಲಿ ಭಾಗವಹಿಸಿ ಜ್ಞಾನ, ಧ್ಯಾನ ಹಾಗೂ ಗಾನದ ಸವಿಯನ್ನು ನೀಡಲಿದ್ದಾರೆ. ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಆಟ್೯ ಆಫ್ ಲಿವಿಂಗ್ ಶಿಕ್ಷಕರಾದ ರಾಧಾ ಶೆಣೈ, ದಿನೇಶ್ ಕಾಮತ್, ವಸಂತ್ ಕುಮಾರ್, ಪ್ರಶಾಂತ್ ಪೈ, ವಿಮಲಾಕ್ಷಿ ದಿವಾಕರ್, ಶೈಲಜ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಪುಸ್ತಕ ಮನೆಯ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಯೋಜನೆಗೆ ಅಭೂತಪೂರ್ವ ಬೆಂಬಲ

Posted On: 10-02-2024 05:47PM
ಕಾರ್ಕಳ : ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅಭಿಯಾನ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲ್ ನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯ ನಡೆಯಿತು.
ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ ತಾಲೂಕಿನ ಸ್ಥಳೀಯ ಶಾಲೆಗಳನ್ನು ಸಂದರ್ಶಿಸಿ ಪುಸ್ತಕವನ್ನು ಕೊಡಮಾಡಲಾಯಿತು. ಸಾರ್ವಜನಿಕರಿಂದ ಮತ್ತು ವಿದ್ಯಾಭಿಮಾನಿಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಗಿ ಪ್ರತಿನಿತ್ಯ ಸುಮಾರು ಹತ್ತು ಪುಸ್ತಕಗಳನ್ನು ಪುಸ್ತಕ ದಾನಿಗಳ ನೆರವಿನೊಂದಿಗೆ ವಿತರಿಸಲಾಯಿತು.
ಈ ಯೋಜನೆಗೆ ಸಾರ್ವಜನಿಕರು, ಪುಸ್ತಕ ಪ್ರಿಯರಿಂದ ರೂ. 28,110 ಸಂಗ್ರಹಗೊಂಡು, ದಿನಕ್ಕೆ 10 ಪುಸ್ತಕದಂತೆ ಒಟ್ಟು 312 ಪುಸ್ತಕಗಳನ್ನು ಜನವರಿ ತಿಂಗಳಿನಲ್ಲಿ ಕಾರ್ಕಳವಲ್ಲದೆ ದೂರದ ಸುಳ್ಯ, ಪುತ್ತೂರಿನ ಶಾಲೆಗಳನ್ನೂ ಆಯ್ಕೆಮಾಡಿ ಪುಸ್ತಕ ವಿತರಿಸಲಾಗಿದೆ ಹಾಗೂ ಪುಸ್ತಕ ಸ್ವೀಕರಿಸಿದ ವಿದ್ಯಾರ್ಥಿಗಳೇ ಸ್ವತಃ ಪತ್ರ ಮುಖೇನ ತಮ್ಮ ಅಭಿಪ್ರಾಯ ತಿಳಿಸುವುದು ಹೆಮ್ಮೆಯ ಸಂಗತಿಯಾಗಿದೆ ಮತ್ತು ಪುಸ್ತಕ ಪ್ರೀತಿಯ ದ್ಯೋತಕವಾಗಿದೆ. ಇದೀಗ ಫೆಬ್ರವರಿ ತಿಂಗಳಿನ ಪುಸ್ತಕ ತಲುಪಿಸುವ ಕಾರ್ಯ ನಡೆಯುತ್ತಿದೆ. ಸಾಹಿತ್ಯಾಸಕ್ತರು, ಶಿಕ್ಷಣ ಪ್ರೇಮಿಗಳು, ಉಪನ್ಯಾಸಕರು, ಶಿಕ್ಷಕ ಬಂಧುಗಳು, ಸಾರ್ವಜನಿಕರು ಈ ಯೋಜನೆಗೆ ಕೈಜೋಡಿಸುವಂತೆ ವಿನಂತಿಸಿದ್ದಾರೆ.
ಕಾಪು ಮಾರಿಗುಡಿ ದೇವಸ್ಥಾನ ನಿರ್ಮಾಣಕ್ಕೆ ಮೊಗವೀರ ಭಾಂದವರು ಸಹಕಾರ ನೀಡುತ್ತೇವೆ : ದ.ಕ. ಮೊಗವೀರ ಮಹಾಜನ ಸಂಘ

Posted On: 10-02-2024 05:34PM
ಕಾಪು : ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ದೇಗುಲ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಇದಕ್ಕಾಗಿ ಮೊಗವೀರ ಸಂಘಟನೆಗಳಾದ ಮೊಗವೀರ ಮಹಾಸಭಾ ದ.ಕ, ಮೊಗವೀರ ಮಹಾಜನ ಸಂಘ(ರಿ.) ಮತ್ತು ಕಾಪು ನಾಲ್ಕು ಪಟ್ಣ ಮೊಗವೀರ ಸಭಾ ಹಾಗೂ ಮಹಿಳಾ ಮಂಡಳಿ ಇವರ ನೇತೃತ್ವದಲ್ಲಿ ಗುರುವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಅರ್ಚಕರಾದ ಜನಾರ್ದನ ತಂತ್ರಿ ಮತ್ತು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರು ಮೊಗವೀರ ಸಮುದಾಯಕ್ಕೆ ಅಪಾರ ಮತ್ಸ್ಯ ಸಂಪತ್ತು ದೊರಕುವಂತಾಗಲಿ ಮತ್ತು ಅಮ್ಮನ ದಯೆಯಿಂದ ಅತೀ ಹೆಚ್ಚು ಮೊಗವೀರ ಬಂಧುಗಳು "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರ್ಪಡೆಯಾಗಲಿ ಎಂದು ಪ್ರಾರ್ಥಿಸಿದರು.
ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಯಾಗಲು ಮನವಿ ಪತ್ರವನ್ನು ಕಾಪು ಕ್ಷೇತ್ರದ ಶಾಸಕರು, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಅವರು ದ. ಕ ಮೊಗವೀರ ಮಹಾಸಭಾದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ನಂತರ ಕಾಮಗಾರಿ ವೀಕ್ಷಣೆ ಮಾಡಲಾಯಿತು.
ಗೌರವಾಧ್ಯಕ್ಷರಾದ ನಾಡೋಜ ಡಾ. ಜಿ. ಶಂಕರ್ ಮತ್ತು ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಇವರ ಮುಂದಾಳತ್ವದಲ್ಲಿ ಉಪ್ಪಳದಿಂದ ಶಿರೂರು ಭಾಗದವರೆಗಿನ ಎಲ್ಲಾ ಮೊಗವೀರ ಸಮಾಜ ಬಾಂಧವರಿಗೆ ಈ ಮನವಿ ಪತ್ರವನ್ನು ತಲುಪಿಸಲಿದ್ದೇವೆ ಮತ್ತು ಅತೀ ಹೆಚ್ಚಿನ ಆರ್ಥಿಕ ಸಹಕಾರವನ್ನು ನಮ್ಮ ಸಮಾಜದಿಂದ ನೀಡಲಿದ್ದೇವೆ ಎಂದು ದ. ಕ. ಮೊಗವೀರ ಮಹಾಸಭಾದ ಕಾರ್ಯದರ್ಶಿ ಸುಧಾಕರ ಕುಂದರ್ ಅವರು ಹೇಳಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ನಡಿಕೆರೆ ರತ್ನಾಕರ ಶೆಟ್ಟಿ, ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್ ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ರಾಜೇಂದ್ರ ಹಿರಿಯಡಕ, ದಿನೇಶ್ ಏರ್ಮಾಳು, ಕಾಪು ನಾಲ್ಕು ಪಟ್ನ ಅಧ್ಯಕ್ಷರಾದ ಮನೋಜ್ ಕಾಂಚನ್, ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಮೋಹನ್ ಬಂಗೇರ, ದೇವಳದ ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರುಗಳಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಚಂದ್ರಶೇಖರ್ ಅಮೀನ್, ಬಾಬು ಮಲ್ಲಾರ್, ಶೈಲಜಾ ಪುರುಷೋತ್ತಮ್, ಪ್ರಚಾರ ಸಮಿತಿಯ ಸಂಚಾಲಕರುಗಳಾದ ಜಯರಾಮ್ ಆಚಾರ್ಯ, ಶ್ರೀಧರ ಕಾಂಚನ್, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಕಾಪು ಮೊಗವೀರ ಮಹಾಸಭಾ ಅಧ್ಯಕ್ಷರಾದ ಕುಶ ಸಾಲ್ಯಾನ್, ಶೀಲರಾಜ್, ಜಗದೀಶ್ ಮೆಂಡನ್, ಆಶಾ ಎಂ. ಕುಂದರ್, ಶಕುಂತಲಾ ಕೋಟ್ಯಾನ್, ಉಷಾ, ಕವಿತಾ, ಮಮತಾ, ಗೀತಾ ರಾಜ್, ಕೃಷ್ಣ ಕರ್ಕೇರ, ಭಾಸ್ಕರ ಅಮೀನ್, ಸುನೀತಾ, ಯಶವಂತಿ, ಸುನಿಲ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಪಡುಬಿದ್ರಿ : ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡ ಲಕ್ಷಾಂತರ ಮೌಲ್ಯದ ಮಾದಕ ವಸ್ತು ನಾಶ

Posted On: 10-02-2024 05:20PM
ಪಡುಬಿದ್ರಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 6 ಕೆಜಿ 912 ಗ್ರಾಂ ತೂಕದ ಅಂದಾಜು 2,76,000 ರೂ. ಬೆಲೆಯ ಗಾಂಜಾವನ್ನು ನಂದಿಕೂರಿನ ಔದ್ಯೋಗಿಕ ನಗರದಲ್ಲಿ ನಾಶಪಡಿಸಲಾಯಿತು.
ಸೆನ್ ಠಾಣೆಯ 3 ಪ್ರಕರಣ, ಮಣಿಪಾಲ ಠಾಣೆಯ 4 ಪ್ರಕರಣ ಹಾಗೂ ಕುಂದಾಪುರ, ಕೋಟ, ಮಲ್ಪೆ ಮತ್ತು ಪಡುಬಿದ್ರಿ ಠಾಣೆಯ ತಲಾ 1 ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ನ್ಯಾಯಾಲಯದ ಆದೇಶಾನುಸಾರ ನಾಶಗೊಳಿಸಲಾಗಿದೆ.
ಇದರಲ್ಲಿ 2008ರ ಒಂದು ಪ್ರಕರಣ, 2011ರ ಒಂದು ಪ್ರಕರಣ, 2016ರ ಒಂದು ಪ್ರಕರಣ, 2020ರ ಎರಡು ಪ್ರಕರಣ, 2022ರ ಒಂದು ಪ್ರಕರಣ ಹಾಗೂ 2023ರ 5 ಪ್ರಕರಣ ಸೇರಿವೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿಯ ಅಧ್ಯಕ್ಷರಾದ ಡಾ. ಅರುಣ್ ಕೆ. ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಫೆ. 9 - 17 : ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವ ; ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು

Posted On: 10-02-2024 04:54PM
ಕಟಪಾಡಿ : ಇಲ್ಲಿನ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪರವೂರು ರಾಕೇಶ್ ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ದೇವದಾಸ ಶಾಂತಿಯವರ ಪೌರೋಹಿತ್ಯದಲ್ಲಿ ಫೆಬ್ರವರಿ 9, ಶುಕ್ರವಾರದಿಂದ, 17 ಶನಿವಾರದವರೆಗೆ ರವರೆಗೆ ಜರಗಲಿದೆ.

ಜಾತ್ರಾ ಉತ್ಸವದ ಪವಿತ್ರ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರಗಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಚ್ಚಿಲ : ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ನಿಧಿ ಟಿ. ಶೆಟ್ಟಿ

Posted On: 10-02-2024 04:34PM
ಉಚ್ಚಿಲ : ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲಾ ಹತ್ತನೇ ತರಗತಿಯ ವಿದ್ಯಾರ್ಥಿನಿ ನಿಧಿ ಟಿ. ಶೆಟ್ಟಿಯವರು ತುಳು ಭಾಷಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಬಹುಮಾನ ಪಡೆದಿದ್ದಾರೆ.
ಧಾರವಾಡದ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜನತಾ ಶಿಕ್ಷಣ ಸಮಿತಿ ಸಹಯೋಗದಲ್ಲಿ ಗುರುವಾರ ಮತ್ತು ಶುಕ್ರವಾರ ಸನ್ನಿಧಿ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆದಿದ್ದು, ಕುಮಾರಿ ನಿಧಿ ಶೆಟ್ಟಿ ತುಳು ಭಾಷಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಕುಮಾರಿ ನಿಧಿ ಶೆಟ್ಟಿಯವರನ್ನು ಶಾಲಾ ಆಡಳಿತ ಮಂಡಳಿ ಮೊಗವೀರ ಹಿತ ಸಾಧನ ವೇದಿಕೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ನಿಧಿ ಶೆಟ್ಟಿಯವರು ಕುಂಜೂರು ಕಿನ್ನೋಡಿ ಗುತ್ತು ತಿಮ್ಮಪ್ಪ ಶೆಟ್ಟಿ ಮತ್ತು ಶಾಂತ ಶೆಟ್ಟಿ, ದಂಪತಿಯ ಪುತ್ರಿ.