Updated News From Kaup
ಮೇ 12: ನಿಖಿತಾ ಕುಲಾಲ್ ಸ್ಮರಣಾರ್ಥ ಉಚಿತ ನೋಟ್ ಬುಕ್ ವಿತರಣೆ
Posted On: 08 May 2024, 06:28 PM
ಕಾಪು : ನಿಖಿತಾ ಕುಲಾಲ್ ನೆನಪಿನಲ್ಲಿ ಅವರ ಮನೆಯವರು ಕೊಡಮಾಡುವ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಮೇ 12 ರಂದು ಕುತ್ಯಾರು ರಾಮೋಟ್ಟು ಬನತೋಡಿ ಗದ್ದೆಯಲ್ಲಿ ನಡೆಯಲಿದೆ ಎಂದು ಕುಲಾಲ ಸಂಘ (ರಿ.) ಕಾಪು ವಲಯ ಪ್ರಕಟಣೆಯಲ್ಲಿ ತಿಳಿಸಿರುವರು.
ಮೇ 11,14 : ಕುತ್ಯಾರು ಕಲ್ಯಾಣಿ ನಿಲಯ ಪಡುಮನೆಯಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ, ನೇಮೋತ್ಸವ
Posted On: 08 May 2024, 06:25 PM
ಕಾಪು : ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಯಾಣಿ ನಿಲಯ ಪಡುಮನೆ ಇಲ್ಲಿ ಸೇವೆ ರೂಪದಲ್ಲಿ ಮೇ11ರಂದು ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಮೇ 14 ರಂದು ಹರಕೆಯ ನೇಮೋತ್ಸವ ನಡೆಯಲಿದೆ ಎಂದು ಪಡುಮನೆ ಕುತ್ಯಾರು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟಪಾಡಿ ಸೃಷ್ಠಿ ಫೌಂಡೇಶನ್, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಸಂಸ್ಥೆಯ ವತಿಯಿಂದ ಸಹಾಯಧನ ವಿತರಣೆ
Posted On: 08 May 2024, 06:22 PM
ಕಟಪಾಡಿ : ಇಲ್ಲಿನ ಸೃಷ್ಠಿ ಫೌಂಡೇಶನ್ (ರಿ.) ಮತ್ತು ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಸಂಸ್ಥೆಯ ವತಿಯಿಂದ ಅಕಾಲಿಕವಾಗಿ ನಿಧನರಾದ ಪತ್ರಕರ್ತ ಡಾ.ಶೇಖರ್ ಅಜೆಕಾರ್ ಅವರ ಕುಟುಂಬಕ್ಕೆ ರೂ.20 ಸಾವಿರ ಸಹಾಯಧನವನ್ನು ಉಡುಪಿ ಜಗನ್ನಾಥ ಸಭಾ ಭವನದಲ್ಲಿ ವಿತರಿಸಲಾಯಿತು. ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅವರು ತಾರಾ ಶೇಖರ್ ಅವರಿಗೆ ಠೇವಣಿ ಸರ್ಟಿಫಿಕೇಟ್ ಹಸ್ತಾಂತರಿಸಿದರು. ಸೃಷ್ಠಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷ ನಾಗೇಶ್ ಕಾಮತ್ ಕಟಪಾಡಿ, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ, ಚಲನಚಿತ್ರ ಕಲಾವಿದರಾದ ಶೋಭರಾಜ್ ಪಾವೂರು, ರಾಹುಲ್ ಅಮೀನ್, ವಿನೀತ್ ಕುಮಾರ್, ಶೈಲಶ್ರೀ ಮುಲ್ಕಿ, ಸಿನೆಮಾ ನಿರ್ಮಾಪಕರಾದ ದತ್ತಾತ್ರೇಯ ಪಾಟ್ಕರ್, ಚಂದ್ರಕಲಾ ರಾವ್, ಕ್ಲಿಂಗ್ ಜಾನ್ಸನ್, ಸಂದೀಪ್ ಕಾಮತ್, ಭುವನೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಇನ್ನಂಜೆ ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ 46ನೇ ಭಜನಾ ಮಂಗಳೋತ್ಸವ ಸಂಪನ್ನ
Posted On: 08 May 2024, 06:18 PM
ಇನ್ನಂಜೆ : ಇಲ್ಲಿನ ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ 46ನೇ ಭಜನಾ ಮಂಗಳೋತ್ಸವವು ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ ಹಾಗೂ ವಿವಿಧ ಭಜನಾ ಮಂಡಳಿಯ ತಂಡದಿಂದ ಭಜನಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ಸನ್ಮಾನ : ಗ್ರಾಮದ ಹಿರಿಯ ಸಾಧಕರಾದ ದಯಾನಂದ ಎಸ್ ಶೆಟ್ಟಿ, ಪ್ರವಚನಕಾರರದ ಕೃಷ್ಣ, ಜುಮಾದಿ ಪಾತ್ರಿ ಲೋಕು ಪಾತ್ರಿ, ಜುಮಾದಿ ದೈವಸ್ಥಾನದ ಮುಕ್ಕಾಲ್ದಿ ರಾಘು ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಗ್ರಾಮದ ಮಕ್ಕಳ ನೃತ್ಯ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವೇಣುಧರ ಜಿ ಶೆಟ್ಟಿ ಕಲ್ಯಾಣಿ ಗುಂಡುಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಯಕ್ಷಕಲಾ ಕೇಂದ್ರ ಇಂದ್ರಾಳಿ ಉಡುಪಿ ಇವರಿಂದ ಯಕ್ಷಗಾನ ಬಯಲಾಟ ನಡೆಯಿತು. ರಾತ್ರಿ ಅನ್ನದಾನವನ್ನು ಶಾರದ ಶೆಟ್ಟಿ ಕುಂಜರೊಟ್ಟು ಮನೆ ಮಂಡೇಡಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಮಂಡಳಿಯ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ವೇಣುಧರ ಜಿ. ಶೆಟ್ಟಿ, ಗೌರವ ಸಲಹೆಗಾರ ಜೀವನ್ ಪ್ರಕಾಶ್ ಶೆಟ್ಟಿ, ರಮೇಶ್ ಶೆಟ್ಟಿ, ಗ್ರಾಮದ ಮಧ್ಯಸ್ಥರಾದ ರಮೇಶ್ ಶೆಟ್ಟಿ, ಮುಕ್ಕಾಲ್ದಿ ರಮಾನಂದ ಶೆಟ್ಟಿ, ಸ್ಥಾಪಕ ಅಧ್ಯಕ್ಷರಾದ ಜಯಕರ ಶೆಟ್ಟಿ, ಕೋಶಾಧಿಕಾರಿ ಸಂತೋಷ ಎಸ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ್ ಶೆಟ್ಟಿ, ಶಿವರಾಮ ಜೆ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ಮಲ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಎನ್ ಶೆಟ್ಟಿ ಮತ್ತು ರೇಷ್ಮಾ ಚಂದ್ರಹಾಸ ಶೆಟ್ಟಿ ಸಹಕರಿಸಿದರು. ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಕಾಪು : ದಂಡ ತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ನೀಲಾನಂದ ನಾಯ್ಕ್ ಅಧಿಕಾರ ಸ್ವೀಕಾರ
Posted On: 05 May 2024, 09:56 PM
ಕಾಪು : ಇಲ್ಲಿನ ಪ್ರತಿಷ್ಠಿತ ದಂಡ ತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ನೀಲಾನಂದ ನಾಯ್ಕ್ ಅಧಿಕಾರ ವಹಿಸಿಕೊಂಡಿದ್ದಾರೆ. ಮಕ್ಕಳ ನೆಚ್ಚಿನ ಶಿಕ್ಷಕರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾಪು : ಕನ್ನಡ ಸಾಹಿತ್ಯ ಪರಿಷತ್ತು ಇದರ ೧೧೦ನೇ ಸಂಸ್ಥಾಪನಾ ದಿನಾಚರಣೆ
Posted On: 05 May 2024, 09:26 PM
ಕಾಪು : ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಿರಿಯ ಸಾಹಿತಿಗಳ ಕೊಡುಗೆ ಅಪಾರ. ಪ್ರಾಕೃತಿಕ ಅನುಭವ, ಲೋಕಜ್ಞಾನ, ಅಧ್ಯಯನ ಜ್ಞಾನ, ಭಾಷಾ ಜ್ಞಾನ ಬೆಳೆದಾಗ ಸಾಹಿತ್ಯ ಸೃಷ್ಟಿಗೆ ಬೇಕಾದ ಮನೋಸ್ಥಿತಿ ನಿರ್ಮಾಣ ಆಗುತ್ತದೆ. ಆಂಗ್ಲ ಮಾಧ್ಯಮದ ಪ್ರಭಾವದಿಂದ ಕನ್ನಡ ಭಾಷಾಭಿಮಾನ ಕುಂಠಿತಗೊಳ್ಳುತ್ತಿದೆ. ಕನ್ನಡ ಭಾಷಾ ಪುನಶ್ಚೇತನಕ್ಕೆ ಕಾಯಕಲ್ಪ ಅಗತ್ಯ ಎಂದು ಹಿರಿಯ ವಿದ್ವಾಂಸರಾದ ವೇದಮೂರ್ತಿ ಅಶೋಕ ಆಚಾರ್ಯ ಕಲ್ಯಾ ಅಭಿಪ್ರಾಯಪಟ್ಟರು. ಅವರು ರವಿವಾರ ಕಾಪು ರೋಟರಿ ಶತಾಬ್ದಿ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇದರ "೧೧೦ನೇ ಸಂಸ್ಥಾಪನಾ ದಿನಾಚರಣೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ೧೧೦ ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ನಾಲ್ವಾಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಇವರ ಮುಂದಾಳತ್ವದಲ್ಲಿ ಅಂದಿನ ಹಿರಿಯ ವಿದ್ವಾಂಸರು,ಚಿಂತಕರ ವಿಶೇಷ ಮುತುವರ್ಜಿಯಲ್ಲಿ ಸ್ಥಾಪನೆಗೊಂಡ ಸಂಘಟನೆ ಇಂದು ರಾಷ್ಟೀಯ ಮಟ್ಟದಲ್ಲಿ ಅಲ್ಲದೆ ದೇಶವಿದೇಶಗಳಲ್ಲಿ ಇರುವ ಕನ್ನಡ ಸಂಘಟನೆಗಳನ್ನು ಸಾಹಿತ್ಯ ಪರಿಷತ್ತು ಇವರ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ. ಕನ್ನಡ ನಾಡು,ನುಡಿ ಸಂಸ್ಕೃತಿ,ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನ ಮಾಡುತ್ತಿದೆ ಎಂದರು. ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಾಪು ರೋಟರಿ ಕ್ಲಬ್ ಅಧ್ಯಕ್ಷ ರಾಜೇಂದ್ರನಾಥ್ ಸಾಂದರ್ಭಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಸಾಪ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ನರಸಿಂಹ ಮೂರ್ತಿ, ಕಸಾಪ ಹಿರಿಯ ಸದಸ್ಯರುಗಳಾದ ಪ್ರಜ್ಞಾ ಮಾರ್ಪಳ್ಳಿ, ಮಧುಕರ್ ಎಸ್.ಕಲ್ಯಾ, ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್, ದೇವದಾಸ ಪಾಟ್ಕರ್, ಸತ್ಯಸಾಯಿ ಪ್ರಸಾದ್, ಡಿ.ಆರ್.ನೊರೋನ್ಹಾ, ಗ್ರೆಟ್ಟಾ ಮೋರಾಸ್, ಸುಧಾಕರ ಶೆಣೈ, ಅಬ್ಬಾಸ್ ಎಂ.ಎಸ್.ಕಣ್ಣಂಗಾರ್, ವೇಣುಕೃಷ್ಣ, ಶಿವಾನಂದ ಕಾಮತ್ ಶಿರ್ವ, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜಾನಪದ ಕಲಾವಿದೆ ಗಣೇಶ್ ಗಂಗೊಳ್ಳಿ ನಾಡಗೀತೆ, ಭಾವಗೀತೆಗಳನ್ನು ಹಾಡಿದರು. ಸಮಿತಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು ನಿರೂಪಿಸಿದರು. ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ವಂದಿಸಿದರು.
ಪಾದೂರು : ವೈದ್ಯಕೀಯ ತಪಾಸಣಾ ಶಿಬಿರ
Posted On: 05 May 2024, 09:03 PM
ಪಾದೂರು : ಸಿ.ಎಸ್.ಐ ಇಮಾನ್ಯೂಲ್ ಚಚ್೯ ಪಾದೂರು ಕಾಪು, ಮಿಷನ್ ಆಸ್ಪತ್ರೆ, ಜಯಂಟ್ಸ್ ಗ್ರೂಪ್ ,ವೈದ್ಯಕೀಯ ಪ್ರತಿನಿಧಿಗಳ ಸಂಘ ಮತ್ತು ಗಿರಿಜಾ ಸಜಿ೯ಕಲ್ ಮತ್ತು ಐ ನೀಡ್ಸ್ ಅಪ್ಟಿಕಲ್ ವತಿಯಿಂದ ಪಾದೂರು ಯು.ಬಿ.ಎಂ ಶಾಲಾ ವಠಾರದಲ್ಲಿ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ. ಗಣೇಶ್ ಕಾಮತ್, ಡಾ.ಅಜು೯ನ್ ಬಲ್ಲಾಳ, ಡಾ.ಪ್ರತೀಕ್ಷಾ, ಡಾ.ಬ್ಲೆಸ್ಲಿoಗ್ ಡಾಲಿ ಎಸ್. ಮುಂತಾದವರಿದ್ದರು. ಆಸ್ಪತ್ರೆಯ ಪಿ.ಆರ್. ಒ ರೋಹಿ ರತ್ನಾಕರ್, ವೈದ್ಯಕೀಯ ಪ್ರತಿನಿಧಿ ಸುಕೇಶ್, ಚಚ್೯ ನ ಸಭಾ ಪಾಲನಾ ಸಮಿತಿಯವರು ಉಪಸ್ಥಿತರಿದ್ದರು.
ಪಡುಬಿದ್ರಿ : ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ
Posted On: 05 May 2024, 01:04 PM
ಪಡುಬಿದ್ರಿ : ಶಿಬಿರಗಳು ವ್ಯಕಿತ್ವ ನಿರ್ಮಾಣ, ನಾಯಕತ್ವ ಗುಣ, ಸ್ನೇಹ ವಲಯ ಹಾಗು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಆತ್ಮ ವಿಶ್ವಾಸ ವೃದ್ಧಿ ಇಂತಹ ಗುಣಗಳು ಮಕ್ಕಳಲ್ಲಿ ಬೆಳೆಯಲು ಸಹಕಾರಿ ಅಗುತ್ತದೆ. ಕ್ರಿಯಾಶೀಲತೆಯಿಂದ ಕೂಡಿರಲು ಹಾಗು ಅವರ ಪ್ರತಿಭೆಯು ಹೊರಹೊಮ್ಮಲು ಮಕ್ಕಳಿಗೆ ಶಿಬಿರವು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಜೆಸಿಐ ಇಂಡಿಯಾ ವಲಯ ತರಬೇತುದಾರೆ ರೇಶ್ಮಾ ಉದಯ ಕುಮಾರ್ ಶೆಟ್ಟಿ ಹೇಳಿದರು. ಅವರು ರವಿವಾರ ಪಡುಬಿದ್ರಿ ಓಂಕಾರ ಕಲಾ ಸಂಗಮದ ವತಿಯಿಂದ ಸತತ ಮೂರನೇ ಬಾರಿ ನಡೆಯುವ ಹದಿನೈದು ದಿನಗಳ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಸಿ ಮಾತನಾಡಿದರು. ಝೀ ಕನ್ನಡ ಡ್ರಾಮ ಜೂನಿಯರ್ ಫೈನಲಿಸ್ಟ್ ಸಿಂಚನ ಕೋಟೇಶ್ವರರವರನ್ನು ಸನ್ಮಾನಿಸಲಾಯಿತು. ಓಂಕಾರ ಕಲಾ ಸಂಗಮದ ಪಾಲುದಾರೆ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಝೀ ಕನ್ನಡ ಡ್ರಾಮ ಜೂನಿಯರ್ ಫೈನಲಿಸ್ಟ್ ಸಿಂಚನ ಕೋಟೇಶ್ವರ, ಕಾಪು ವಲಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಮಲ್ಲಾರು, ಸಂಸ್ಥೆಯ ಪಾಲುದಾರಾದ ಉದಯ ಕುಮಾರ್ ಭಟ್, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಗೀತಾ ಅರುಣ್ ಸ್ವಾಗತಿಸಿದರು. ದೀಪಾಶ್ರೀ ಕರ್ಕೇರ ವಂದಿಸಿದರು. ಕಾರ್ತೀಕ್ ಮುಲ್ಕಿ ನಿರೂಪಿಸಿದರು. ಶಿಬಿರದಲ್ಲಿ 49 ವಿದ್ಯಾರ್ಥಿಗಳು ಭಾಗವಹಿಸಿದರು.
ಕಾಪು : ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿ ಕೋಲಕ್ಕೆ ಚಾಲನೆ
Posted On: 04 May 2024, 04:24 PM
ಕಾಪು : ಎರಡು ವರ್ಷಕ್ಕೊಮ್ಮೆ ಮಹತ್ವಪೂರ್ಣವಾಗಿ ನಡೆಯುವ ಕಾಪುವಿನ ಪಿಲಿಕೋಲಕ್ಕೆ ಇಂದು ಕಾಪುವಿನ ಹಳೆ ಮಾರಿಯಮ್ಮ ದೇವಸ್ಥಾನದ ಸಮೀಪದ ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಹತ್ತಿರದ ಕೆರೆಯಲ್ಲಿ ಪಿಲಿದೈವ ನರ್ತಕ ಸ್ನಾನಾದಿ ಕಾರ್ಯ ಮುಗಿಸಿ ಬಳಿಕ ದೈವಸ್ಥಾನದ ಮುಂಭಾಗದಲ್ಲಿ ತೆಂಗಿನ ಗರಿಗಳಿಂದ ತಯಾರಿಸಲಾದ ಸಿರಿಯಿಂದ ಮಾಡಿದ ಗುಂಡದೊಳಗೆ ಹುಲಿವೇಷದ ಬಣ್ಣಗಾರಿಕೆ ನಡೆಯುತ್ತದೆ. ಈ ವೇಳೆ ಗುಂಡದೊಳಗೆ ಹಾಗೂ ಸುತ್ತಮುತ್ತ ಯಾರೂ ಪ್ರವೇಶ ಮಾಡುವಂತಿಲ್ಲ. ಹುಲಿವೇಷದ ಬಣ್ಣಗಾರಿಕೆಯೊಂದಿಗೆ ವಿಚಿತ್ರವಾಗಿ ಹುಲಿಯಂತೆ ಆರ್ಭಟಿಸುತ್ತ ಒಲಿಗುಂಡದಿಂದ ವೇಷಧಾರಿ ವೈಭವದಿಂದ ಹೊರಬರುವ ಮೂಲಕ ಪಿಲಿಕೋಲಕ್ಕೆ ಚಾಲನೆ ದೊರೆಯುತ್ತದೆ. ಹುಲಿ ಬೇಟೆಯ ಜೊತೆಗೆ ಗ್ರಾಮ ಸಂಚಾರಕ್ಕೆ ಹೊರಟು ಹಳೆ ಮಾರಿಗುಡಿ ಮುಂಭಾಗದ ಬಾಳೆಯ ಗರುಡ- ಗಂಬವನ್ನು ಮುರಿಯುವ ಹುಲಿ ವೇಷಧಾರಿ, ಜೀವಂತ ಕೋಳಿಯ ರಕ್ತ ಹೀರುವ ಸನ್ನಿವೇಶ ಮೈ ಜುಮ್ಮೆನಿಸುತ್ತದೆ. ಈ ಸಮಯದಲ್ಲಿ ಹುಲಿಯ ಅರ್ಭಟ, ಹಾರಾಟ ಮೈನವಿರೇಳಿಸುತ್ತದೆ. ಅನಾದಿ ಕಾಲದಿಂದ ಬಂದ ಈ ವಿಶಿಷ್ಟ ಆಚರಣೆ ವೀಕ್ಷಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ತುಳುವರು ಬರುತ್ತಾರೆ. ಕಾರಣಿಕ ಹಾಗೂ ದೈವಿಕ ಹಿನ್ನೆಲೆ ಹೊಂದಿರುವ ಪಿಲಿಭೂತ ಕೋಲದಲ್ಲಿ ಹುಲಿ ಮುಟ್ಟಿದರೆ ಮರಣ ಭೀತಿಯ ನಂಬಿಕೆ ಇರುವುದರಿಂದ ಪಿಲಿಕೋಲವನ್ನು ಸಾಕಷ್ಟು ದೂರದಲ್ಲಿ ನಿಂತು ಜನರು ವೀಕ್ಷಿಸುತ್ತಾರೆ. ಇತರ ದೈವಗಳ ಕೋಲಗಳಂತೆ ಹತ್ತಿರದಿಂದ ಹುಲಿಕೋಲವನ್ನು ವೀಕ್ಷಿಸಲಾಗುವುದಿಲ್ಲ. ದೈವಕ್ಕೆ ಕೋಳಿ ಮತ್ತು ಹಾಲನ್ನು ಹರಕೆಯಾಗಿ ಭಕ್ತರು ಸಮರ್ಪಿಸುತ್ತಾರೆ. ಕಾಪು ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಈ ಅವಧಿಯಲ್ಲಿ ಪಿಲಿಕೋಲ ಮಾತ್ರವಲ್ಲದೆ ಮುಗ್ಗೇರ್ಕಳ, ತನ್ನಿಮಾನಿಗ, ಬಬ್ಬರ್ಯ, ಗುಳಿಗ ಹಾಗೂ ಪರಿವಾರ ದೈವಗಳ ನೇಮೋತ್ಸವವೂ ನಡೆಯುತ್ತದೆ. ಆದರೆ, ಕೊನೆಯಲ್ಲಿ ನಡೆಯುವ ಪಿಲಿಕೋಲವನ್ನು ನೋಡಲು ಜನಸಾಗರವೇ ಹರಿದು ಬರುವುದು ವಿಶೇಷ. ಕಾಪು ಪಿಲಿಭೂತದ ಹಿನ್ನೆಲೆ :ಕಾಪು ಸೀಮೆ ಆಳುತ್ತಿದ್ದ ಭೈರರಸು ಅರಮನೆಯ ಪಂಜರದಲ್ಲಿ ಹುಲಿ ಸಾಕುತ್ತಿದ್ದರು ಎಂಬ ಪ್ರತೀತಿ ಇದೆ. ಕಾಲಕ್ರಮೇಣ ಹುಲಿ ಸಾಕಲು ಕಷ್ಟವಾದಾಗ ಸೀಮೆ ಪೊರೆಯುವ ಮಾರಿಯಮ್ಮನ ಅನುಮತಿ ಕೇಳಿ ಹುಲಿಯನ್ನು ಕಾಡಿಗೆ ಬಿಡುವ ಆಲೋಚನೆ ಮಾಡಿದರು. ನಂತರ ರಾತ್ರಿ ರಾಜನ ಕನಸಲ್ಲಿ ಬಂದ ಮಾರಿಯಮ್ಮ ಹುಲಿ ದೈವಾಂಶ ಸಂಭೂತವಾಗಿದ್ದು, ದೇವಸ್ಥಾನದ ಬಲಭಾಗದಲ್ಲಿರುವ ಸ್ಥಳದಲ್ಲಿ ಹುಲಿಗಳಿಗೊಂದು ಆಲಯ ಕಟ್ಟಿಸಿ ಆರಾಧಿಸಲು ಸೂಚಿಸುತ್ತಾಳೆ. ಅದರಂತೆ ಪಿಲಿಭೂತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ಪೌರಾಣಿಕ ಹಿನ್ನೆಲೆ. ಹುಲಿ ವೇಷಧಾರಿಯನ್ನು ಹಗ್ಗಹಾಕಿ ನಿಯಂತ್ರಿಸಿದರೂ ಜನನಿಬಿಡ ಪ್ರದೇಶಕ್ಕೆ ಚಂಗನೆ ಹಾರುವ, ಅಟ್ಟಿಸಿಕೊಂಡು ಹೋಗುವಾಗ ಸಾರ್ವಜನಿಕರು ಚೆಲ್ಲಾಪಿಲ್ಲಿಯಾಗಿ ಓಡುವ ದೃಶ್ಯ ಮೈನವಿರೇಳುತ್ತದೆ. ಸಂಜೆ ವೇಳೆಗೆ ಹುಲಿ ದೈವಸ್ಥಾನಕ್ಕೆ ವಾಪಸ್ಸಾಗುವ ಮೂಲಕ ಪಿಲಿಕೋಲಕ್ಕೆ ತೆರೆಬೀಳುತ್ತದೆ.
ಹೆಚ್ಚು ಕೆಲಸ ಶಿಸ್ತು ಬದ್ಧ ಜೀವನ ನಾಯಕನ ಗುಣವಾಗಬೇಕು : ಸಂದೀಪ್ ಕುಮಾರ್ ಮಂಜ
Posted On: 02 May 2024, 02:13 PM
ಉಡುಪಿ : ನಾಯಕತ್ವ ಎಂಬುದು ಜವಾಬ್ದಾರಿಯಾಗಿದೆ ಇದು ಅಧಿಕಾರ ಎಂದು ತಿಳಿಯದೆ, ಹೆಚ್ಚು ಕೆಲಸ ಶಿಸ್ತು ಬದ್ಧ ಜೀವನ ನಾಯಕನ ಗುಣವಾಗಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ , ಪೂವ೯ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್ ಮಂಜ ಹೇಳಿದರು. ಅವರು ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಸಿ.ಎಸ್.ಐ ಬಾಲಕರ ವಸತಿ ನಿಲಯದಲ್ಲಿ ನಡೆದ ಕುಟುಂಬೋತ್ಸವ ಮತ್ತು ಲೀಡರ್ಶಿಪ್ ತರಬೇತಿ ಕಾಯ೯ಕ್ರಮದಲ್ಲಿ ಮಾತನಾಡಿದರು. ನಾಯಕತ್ವದ ಗುಣಗಳನ್ನು ನಾವೆಲ್ಲರೂ ರೂಢಿಸಬೇಕೆಂದರು. ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಡಾI ಹರಿಣಾಕ್ಷಿ ಕಕೇ೯ರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂವ೯ ಅಧ್ಯಕ್ಷರಾದ ರಫೀಕ್ ಖಾನ್, ಜಗದೀಶ್ ಶೆಟ್ಟಿ ಕೀಳಂಜೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರಕಾಶ್ ದೇವಾಡಿಗ, ಸಂಧ್ಯಾ ಕುಂದರ್, ವಾಡ೯ನ್ ಜಾನ್ ಸುದಶ೯ನ ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ಉದ್ಯಮಿ ದಿನೇಶ್ ಎಂ ಪೂಜಾರಿ ಮತ್ತು ಶಿಕ್ಷಕರಾದ ಚಂದ್ರ ಬಿ ಅಮೀನ್ ರವರಿಗೆ ನೀಡಿ ಗೌರವಿಸಲಾಯಿತು. ವಲಯ ಮಟ್ಟದ ತರಬೇತಿಯಲ್ಲಿ ಭಾಗವಹಿಸಲಿರುವ ಬಾಸುಮ ಕೊಡಗು, ಉದಯ್ ನಾಯ್ಕ್ ರವರನ್ನು ಗುರುತಿಸಲಾಯಿತು.
