Updated News From Kaup
ಕಾಪು : ಮತದಾನ ಬಹಿಷ್ಕಾರ ಹಿಂಪಡೆದ ಕಟ್ಟಿಂಗೇರಿ ವಾಡ್೯ನಲ್ಲಿ ಬಿರುಸಿನ ಮತದಾನ
Posted On: 26 Apr 2024, 05:35 PM
ಕಾಪು : ಊರಿನ ಸಮಸ್ಯೆಗಳು ಪರಿಹಾರ ಕಾಣದೆ ಮತದಾನ ಬಹಿಷ್ಕಾರಕ್ಕೆ ನಿರ್ಣಯಿಸಿದ್ದ ಕಟ್ಟಿಂಗೇರಿ ನಿವಾಸಿಗಳು ಕೊನೆಗೆ ರಾಜಕೀಯ ನಾಯಕರ ಭರವಸೆಯಿಂದ ಮತದಾನ ಬಹಿಷ್ಕಾರ ಹಿಂಪಡೆದಿದ್ದು ಇಂದು ವಾರ್ಡ್ 1 ಬೂತ್ ನಂಬರ್ 104 ರಲ್ಲಿ ಮತದಾನ ಮಾಡಿದರು. ಈ ವಾರ್ಡ್ ನ ಮತದಾರರು ಅತೀ ಉತ್ಸಾಹದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಉದ್ಯಾವರ : ಹಿರಿಯ ದಂಪತಿಗಳಿಂದ ಮತದಾನ
Posted On: 26 Apr 2024, 03:29 PM
ಉದ್ಯಾವರ : ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಂತ ಹಿರಿಯ ದಂಪತಿ ಪಾಸ್ಕಲ್ ಡಿಸೋಜಾ (98 ವರ್ಷ) ಮತ್ತು ಕ್ರಿಸ್ತಿನ್ ಡಿಸೋಜಾ (93 ವರ್ಷ) ತನ್ನ ಪುತ್ರ ಮತ್ತು ಸೊಸೆಯೊಂದಿಗೆ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತವನ್ನು ಚಲಾಯಿಸಿದರು.
ಉಡುಪಿ -ಚಿಕ್ಕಮಗಳೂರು, ದ.ಕ ಕಾಂಗ್ರೆಸ್, ಬಿಜೆಪಿ ಲೋಕಸಭಾ ಅಭ್ಯರ್ಥಿಗಳಿಂದ ಮತದಾನ
Posted On: 26 Apr 2024, 03:23 PM
ಉಡುಪಿ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪೂಜಾರಿಯವರು ಕುಂದಾಪುರದಲ್ಲಿ ಮತ ಚಲಾಯಿಸಿದ ಬಳಿಕ ಸೆಲ್ಫಿ ಪಾಯಿಂಟಿನಲ್ಲಿ ಫೋಟೋವನ್ನು ತೆಗೆಸಿಕೊಂಡರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮನೆ ಸಮೀಪದ ಕೊರ್ಗಿ ಶ್ರೀಮತಿ ಗಿರಿಜಾ ಚಂದ್ರಶೇಖರ ಹೆಗ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 97ರಲ್ಲಿ ಸಹೋದರಿಯರಾದ ಸರೋಜಿನಿ ಹೆಗ್ಡೆ ಹಾಗೂ ಶಶಿಕಲಾ ಹೆಗ್ಡೆಯೊಂದಿಗೆ ಆಗಮಿಸಿ ಬೆಳಿಗ್ಗೆ 7 ಗಂಟೆಗೆ ಮತದಾನ ಮಾಡಿದರು. ದ.ಕ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಮತದಾನ : ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ಬೆಳಗ್ಗೆಯೇ ನಗರದ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಂಗಳೂರು ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ರಥಬೀದಿಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ತಾಯಿ - ತಂದೆಯರೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಎಪ್ರಿಲ್ 27 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 'ಶ್ರೀರಾಮ ವೈಭವ' - ನೃತ್ಯರೂಪಕ
Posted On: 26 Apr 2024, 03:08 PM
ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 25ರಿಂದ ಮೊದಲ್ಗೊಂಡು ಮೇ 9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಈ ನಿಮಿತ್ತ ಎಪ್ರಿಲ್ 27, ಶನಿವಾರ ಶ್ರೀಮತಿ ಸ್ವಾತಿ ಕೃಷ್ಣಾನಂದ ಭಟ್, ಯಸ್ಯ ನಾಟ್ಯಾಲಯ, ಮುದರಂಗಡಿ ಇವರಿಂದ ಸಂಜೆ ಗಂಟೆ 6:30ರಿಂದ 'ಶ್ರೀರಾಮ ವೈಭವ' - ನೃತ್ಯರೂಪಕ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಎ.26 - 27 : ಶ್ರೀ ಧೂಮಾವತಿ ದೈವಸ್ಥಾನ ಮಲಂಗೋಲಿ ಕಳತ್ತೂರು - ವಿವಿಧ ಧಾರ್ಮಿಕ ಕಾರ್ಯಕ್ರಮಗಳು
Posted On: 26 Apr 2024, 02:56 PM
ಕಾಪು : ತಾಲೂಕಿನ ಕಳತ್ತೂರು ಮಲಂಗೋಳಿ ಶ್ರೀ ಧೂಮವತಿ ದೈವಸ್ಥಾನದಲ್ಲಿ ನವೀಕೃತ ಗರ್ಭಗೃಹ ಸಮರ್ಪಣೆ, ಪುನಃ ಪ್ರತಿಷ್ಠೆ - ದೈವ ಸಂದರ್ಶನ, ಅನ್ನ ಸಂತರ್ಪಣೆಯು ನಡೆಯಲಿದೆ ಎಂದು ದೈವಸ್ಥಾನದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮತದಾನ
Posted On: 26 Apr 2024, 02:38 PM
ಕಾಪು : ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯಲ್ಲಿ ಕಳತ್ತೂರು ವಾರ್ಡಿನ ಮತಗಟ್ಟೆ ಸಂಖ್ಯೆ 157 ರಲ್ಲಿ ಮತದಾನ ಮಾಡಿದರು.
ಎ.25 - ಮೇ9 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
Posted On: 26 Apr 2024, 11:10 AM
ಕಾಪು : ತಾಲೂಕಿನ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದೊಂದಿಗೆ ಎಪ್ರಿಲ್ 25ರಿಂದ ಮೊದಲ್ಗೊಂಡು ಮೇ 9ರವರೆಗೆ ಮಹಾಗಣಪತಿ ದೇವರ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ – ಬಿಂಬ ಪುನಃಪ್ರತಿಷ್ಠೆ, 500 ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಸಹಸ್ತ್ರ ನಾಲಿಕೇರ ಮಹಾಗಣಪತಿ ಯಾಗ, ಸಹಸ್ತ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಏಕಪವಿತ್ರ ಶ್ರೀ ನಾಗಬ್ರಹ್ಮಮಂಡಲೋತ್ಸವ, ಮನ್ಮಹಾರಥೋತ್ಸವ, ಮಹಾಅನ್ನಸಂತರ್ಪಣೆಯು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಕಾಪು : ಮತದಾನ ಪ್ರಕ್ರಿಯೆ ಆರಂಭ
Posted On: 26 Apr 2024, 10:21 AM
ಕಾಪು : ವಿಧಾನ ಸಭಾ ಕ್ಷೇತ್ರದಲ್ಲಿ 209 ಬೂತ್ ಗಳಲ್ಲಿ ಮತದಾನ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದು, ಜನರು ಬಿಸಿಲ ಬೇಗೆ, ಮದುವೆ ಇನ್ನಿತರ ಕಾರ್ಯಕ್ರಮದ ನಿಮಿತ್ತ ಬೇಗನೆ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದು ಕಂಡು ಬಂದಿದೆ. ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಗಳಿಗಾಗಿ 1715 ಮಂದಿ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮತಗಟ್ಟೆಗಳ ವಿಂಗಡಣೆ : ಕೈಪುಂಜಾಲು ಶಾಲೆ, ದಂಡತೀರ್ಥ ಶಾಲೆ, ಕಾಪು ಪಡು ಸರಕಾರಿ ಮಾದರಿ ಶಾಲೆ, ಮಲ್ಲಾರು ಜನರಲ್ ಶಾಲೆ, ಮೂಳೂರು ಸರಕಾರಿ ಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನಾಗಿ, ಕಟಪಾಡಿ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನರ ನಿರ್ವಹಣೆ, ಬೆಳಪು ಸರಕಾರಿ ಪ್ರೌಢಶಾಲಾ ಮತಗಟ್ಟೆಯನ್ನು ಯುವಜನ ನಿರ್ವಹಣೆ, ಪಾದೂರು ಬಾಷೆಲ್ ಮಿಷನ್ ಶಾಲೆ ಮತಗಟ್ಟೆಯನ್ನು ಧ್ಯೇಯ ಆಧಾರಿತ, ಎರ್ಮಾಳು ತೆಂಕ ಸರಕಾರಿ ಮಾದರಿ ಶಾಲೆಯ ಮತಗಟ್ಟೆಯನ್ನು ಸಾಂಪ್ರದಾಯಿಕ ಮತಗಟ್ಟೆಯನ್ನಾಗಿ, ಪೆರ್ಡೂರು ಬಾಷೆಲ್ ಮಿಷನ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಕೈಪುಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುಬಿದ್ರಿ ನಡ್ಸಾಲು ಕಂಚಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ಅತೀಸೂಕ್ಷ್ಮ ಮತಗಟ್ಟೆಯನ್ನಾಗಿ ವಿಂಗಡಿಸಲಾಗಿದೆ. ಮೊಬೈಲ್ ಬಳಕೆ ನಿಷಿದ್ಧ : ಮತದಾನ ವೇಳೆ ಮೊಬೈಲ್ ಕೊಂಡೊಯ್ಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಮತದಾನದ ವಿಡಿಯೋ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆ ಹೊರಗೆ ಮೊಬೈಲ್ ಇಟ್ಟು ಹೋಗಲು ಸೂಚನೆ ನೀಡಲಾಗುತ್ತಿದೆ. ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ.
ಕಾಪು : ಚುನಾವಣೆಗೆ ಪೂರ್ವಭಾವಿಯಾಗಿ ಪೊಲೀಸ್ ಪಥಸಂಚಲನ
Posted On: 23 Apr 2024, 04:35 PM
ಕಾಪು : ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿ,ಸೌಹಾರ್ದತೆಯಿಂದ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಕಾಪುವಿನ ಪೊಲಿಪು ಮಸೀದಿಯಿಂದ K1 ಹೋಟೆಲ್ ವರೆಗೆ ಮಂಗಳವಾರ ಪಥಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಪೋಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಟಿ ಸಿದ್ದಲಿಂಗಪ್ಪ, DYSP ಅರವಿಂದ್, ಸರ್ಕಲ್ ಇನ್ಸ್ಪೆಕ್ಟರ್ ಜಯಶ್ರೀ ಹಾಗೂ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಭಾಗವಹಿಸಿ, ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಪೋಲೀಸ್ ವರಿಷ್ಠಾಧಿಕಾರಿಗಳಾದ ಟಿ ಸಿದ್ದಲಿಂಗಪ್ಪ ಮಾತನಾಡಿ, ಮತದಾರರು ನಿರ್ಭೀತಿಯಿಂದ ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡಲು ಪೋಲೀಸ್ ಇಲಾಖೆ ಸಜ್ಜಾಗಿದ್ದು ಮುಂಜಾಗ್ರತೆ ಮತ್ತು ಜನಜಾಗೃತಿ ಮೂಡಿಸುವ ಸಲುವಾಗಿ ಪೋಲೀಸ್ ಇಲಾಖೆಯ ಸಿದ್ದತೆ ಇದಾಗಿದೆ ಎಂದರು. ಕಾಪು ತಾಲ್ಲೂಕಿನ ದಂಡಾಧಿಕಾರಿ ಡಾ.ಪ್ರತಿಭಾ ಆರ್ ಮಾತನಾಡಿ, ಪೋಲೀಸ್ ವರಿಷ್ಠಾಧಿಕಾರಿಗಳಾದ ಟಿ ಸಿದ್ದಲಿಂಗಪ್ಪ ಇವರು ಸ್ವತಃ ಇಡೀ ಪಥಸಂಚನದಲ್ಲಿ ಭಾಗವಹಿಸಿದ್ದರಿಂದ ಜಾಗೃತಿ ಸಂದೇಶ ಪರಿಣಾಮಕಾರಿಯಾಗಿ ತಲುಪಿದೆ. ಕಾಪು ವಿಧಾನಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆಯಲು ಕಂದಾಯ ಇಲಾಖೆ ಕೂಡಾ ಸರ್ವಸನ್ನದ್ಧವಾಗಿದೆ ಎಂದರು.
ಬೆಳಪು ಸ್ಪೋರ್ಟ್ಸ್ ಕ್ಲಬ್ : 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ
Posted On: 23 Apr 2024, 10:58 AM
ಬೆಳಪು : ಇಲ್ಲಿನ ಬೆಳಪು ಸ್ಪೋರ್ಟ್ಸ್ ಕ್ಲಬ್ ಇದರ 30ನೆ ವರ್ಷದ ಸಂಭ್ರಮದ ಅಂಗವಾಗಿ 2024ನೇ ಸಾಲಿನ ಸಾಮಾಜಿಕ ಕಾರ್ಯ ಚಟುವಟಿಕೆಯ ಬಾಗವಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕಳತ್ತೂರು ಪಿ. ಕೆ. ಎಸ್. ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀ. ಗಂಗನಯಕ್ ಅವರು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಬೆಳಪು ಸ್ಪೋರ್ಟ್ಸ್ ಕ್ಲಬ್ ನಿರಂತರವಾಗಿ ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳ ತುಂಬ ಅಗತ್ಯವಿದೆ, ಪ್ರತಿ ವರ್ಷವು ಕೂಡ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿ ವಿನಂತಿಸಿದರು. ಪಿ. ಕೆ. ಎಸ್. ಪ್ರೌಢಶಾಲೆ ಕಳತ್ತೂರು, ಮೌಲಾನ ಅಝದ್ ಮಾಡೆಲ್ ಪ್ರೌಢಶಾಲೆ ಮಲ್ಲಾರು, ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮಲ್ಲಾರು ಹಾಗೂ ಬೆಳಪು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಖಲೀಲ್ ಅಹಮ್ಮದ್ ಲೈಫ್ & ಕರಿಯರ್ ಕೋಚ್ - ಇನ್ಸೖಟ್ ಕರಿಯರ್ ಅಕಾಡೆಮಿ, ಉಡುಪಿ ಇವರು ವೃತ್ತಿ ಮಾರ್ಗದರ್ಶಕ ಕಾರ್ಯಕ್ರಮವನ್ನು ನೆರವೇರಿಸಿದರು. ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶಾನಾವಾಝ್ ಫಝಲುದ್ದೀನ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಾಹೀದ್ ನವಾಜ್, ಕಾರ್ಯದರ್ಶಿ ರಿಯಾನ್ ಅನ್ಸಾರ್, ಜೊತೆ ಕಾರ್ಯದರ್ಶಿ ಸಕ್ಲೆನ್ ಅಹಮ್ಮದ್, ಸದಸ್ಯರಾದ ಶಮೀಮ್ ಖುಷ್ದಿಲ್, ನದಿಮ್ ಖುಷ್ದಿಲ್, ಯಸಿರ್ ಅಲಿ, ಮುಪೀದ್ ಹನೀಫ್ ಹಾಗೂ ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಹಿರಿಯ ಸದಸ್ಯರುಗಳಾದ ಶಾನವಾಜ್ ನುರುಲ್ಲಾ, ಶೇಖ್ ಖಾಲಿದ್ ಅಹ್ಮದ್, ಇರ್ಫಾನ್ ರಫೀಕ್, ಅಸ್ಲಂ ನಸ್ರೊಲ್ಲಾ, ಸಹೀದ್ ಅಹ್ಮದ್, ಅಕ್ರಮ್ ಮಹತಾಬ್ ಮತ್ತು ಅಲ್ತಾಫ್ ಅಬ್ದುಲ್ ಘನಿ ಉಪಸ್ಥಿತರಿದ್ದರು.
