Updated News From Kaup

ಪಡುಬಿದ್ರಿ : ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜಯಂತಿ ಆಚರಣೆ

Thumbnail
Posted On: 14 Apr 2024, 01:44 PM

ಪಡುಬಿದ್ರಿ : ನಡ್ಸಾಲು ಗ್ರಾಮದ ಸಾಮಾಜಿಕ ಕಾರ್ಯಕರ್ತ ಸುಧಾಕರ್ ಕೆ ಪಡುಬಿದ್ರಿ ಇವರ ನಿವಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಾಪು ದಿವಾಕರ್ ಶೆಟ್ಟಿ, ವೈ. ಸುಧೀರ್ ಕುಮಾರ್, ನವೀನ್ ಚಂದ್ರ ಜೆ ಶೆಟ್ಟಿ, ಕಿರಣ್, ಗ್ರಾಮ ಪಂಚಾಯತ್ ಸದಸ್ಯ ರಮೀಜ್ ಹುಸೇನ್, ಬೂತ್ ಅಧ್ಯಕ್ಷರಾದ ಅಬ್ದುಲ್ ಖಾದರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ರವಿ ಪೂಜಾರಿ ಹಾಗೂ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.

ಕಾಪು : ತಹಶಿಲ್ದಾರರ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಣೆ

Thumbnail
Posted On: 14 Apr 2024, 11:39 AM

ಕಾಪು : ಸಂವಿಧಾನ ಶಿಲ್ಪಿ, ನೊಂದವರ ದನಿ, ಸಮಾನತಾವಾದಿ, ಶೋಷಿತರ ಆಶಾಕಿರಣ ಡಾ ಅಂಬೇಡ್ಕರ್ ರವರು ಸಾರ್ವಕಾಲಿಕ ಆದರ್ಶ ಮತ್ತು ಚಿಂತನೆಗಳನ್ನು ಹೊಂದಿದ್ದರು. ಅವರ ಚಿಂತನೆಗಳು ಭಾರತದ ಭವ್ಯ ಭವಿಷ್ಯದ ರೂವಾರಿ ಈ ಮಹಾಪುರುಷ. ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್. ಪ್ರತಿ ವರ್ಷ ಏಪ್ರಿಲ್ 14 ರಂದು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಕಾಪು ತಾಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್. ಹೇಳಿದರು. ಡಾ.ಬಿ. ಆರ್. ಅಂಬೇಡ್ಕರ್ ಭಾರತದ ಹೆಮ್ಮೆಯ ಪುತ್ರ. ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಪ್ರಮುಖರು. ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರು ಸಾಮಾಜಿಕವಾಗಿ ಮೂಡಿಸಿದ ಸಂಚಲನಗಳು ಅಷ್ಟು ಹಿರಿದಾಗಿದ್ದವು. ಇವರ ತತ್ವ ಆದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುವಂತಿದೆ. ಅದೂ ಅಲ್ಲದೆ, ಪ್ರತಿಯೊಬ್ಬ ಭಾರತೀಯರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು. ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಜಯಮಾಧವ, ಉಪ ತಹಶಿಲ್ದಾರ್ ಗಳಾದ ರವಿಕಿರಣ್, ಅಶೋಕ್ ಎನ್ ಕೋಟೇಕಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಪು : ಮನೆ ಮತದಾನ ಪ್ರಕ್ರಿಯೆ ಪ್ರಾರಂಭ - ತಮ್ಮ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು

Thumbnail
Posted On: 13 Apr 2024, 03:09 PM

ಕಾಪು : ಏಪ್ರಿಲ್ 13 ರಿಂದ 18 ರವರೆಗೆ ಮನೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಆ ಪ್ರಯುಕ್ತ ಕಾಪು ತಾಲೂಕಿನ ಕಲ್ಯ ಗ್ರಾಮಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಭೇಟಿ ನೀಡಿ ಪರಿಶೀಲಿಸಿದರು. 85 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು ದಿವ್ಯಾಂಗರ ಮನೆಗೆ ತೆರಳಿ ಚುನಾವಣಾ ಅಧಿಕಾರಿಗಳು ಮತದಾನ ಮಾಡಿಸಿದರು.

ಮಹಾಮಾಯ ಫೌಂಡೇಷನ್ : ಪಿಯು ಮಕ್ಕಳಿಗೆ ಆನ್ ಲೈನ್, ಆಫ್ ಲೈನ್ ತರಗತಿಗಳು, ವಿದ್ಯಾರ್ಥಿ ವೇತನ

Thumbnail
Posted On: 12 Apr 2024, 05:03 PM

ಮಣಿಪಾಲ್ ಫೌಂಡೇಶನ್ ನ ಆರ್ಥಿಕ ಸಹಯೋಗದೊಂದಿಗೆ ಶ್ರೀ ಕಾರ್ಕಳ ರುಕ್ಮ ರಂಗನಾಥ ಪೈ ಮೆಮೋರಿಯಲ್ ಮಹಾಮಾಯ ಫೌಂಡೇಶನ್ ಕಾರ್ಯಯೋಜನೆಯಲ್ಲಿ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಮತ್ತು ದ.ಕ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ ಲೈನ್ ವಿಭಾಗದ ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಫ್ ಲೈನ್ ತರಗತಿಯಲ್ಲಿ ಕೋಟ ಪಿಯು ಕಾಲೇಜಿನ ಶ್ರೀಪ್ರಿಯ (588), ಉಡುಪಿ ಸರಕಾರಿ ಪಿಯು ಕಾಲೇಜಿನ ಚಿರಂಜೀವಿ ಜಿ. (587), ಉಡುಪಿ ಎಮ್ ಜಿ ಎಮ್ ಕಾಲೇಜಿನ ವಿದ್ಯಾರ್ಥಿಗಳಾ ನಿಖಿತ (586), ಎಸ್ ವರುಣ್ ನಾಯಕ್ (578), ಪ್ರಥಮ್ (575), ಹಿರಿಯಡ್ಕ ಪಿಯು ಕಾಲೇಜಿನ ಸುಶಾನ್ (575), ಸುಹಾನ್ (571), ಬೈಲೂರು ಪಿಯು ಕಾಲೇಜಿನ ನಿಖಿತ (570) ಅಂಕ ಗಳಿಸಿದ್ದಾರೆ. ಆನ್ ಲೈನ್ ತರಗತಿಯಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ಪಿಯು ಕಾಲೇಜಿನ ಸಾತ್ವಿಕ್ ಎಚ್ ಎಸ್ (592), ಭುವನೇಂದ್ರ ಕಾಲೇಜಿನ ನಾಗೇಶ್ ಪ್ರಭು (588), ಕಾರ್ಕಳ ಕ್ರಿಸ್ತ ಕಿಂಗ್ ಕಾಲೇಜಿನ ಶ್ರೀಲಕ್ಷ್ಮಿ ಪ್ರಭು (582), ಉಡುಪಿ ಪಿಪಿಸಿ ಕಾಲೇಜಿನ ಪುನೀತ್ (578), ಮುಲ್ಕಿ ವಿಜಯ ಕಾಲೇಜಿನ ಅಭಿಜ್ಞಾ ಪ್ರಭು (577), ಸುನ್ನಾರಿ ಎಕ್ಸಲೆಂಟ್ ಪಿಯು ಕಾಲೇಜ್ ಆಶ್ರಿತ ಎಚ್ಆರ್ (574), ಕಾರ್ಕಳ ಜ್ಞಾನಸುಧ ಪಿಯು ಕಾಲೇಜಿನ ರಾಮ್ ಪ್ರಸಾದ್ ಪೈ (573), ಎಂಜಿಎಂ ಪಿಯು ಕಾಲೇಜಿನ ಪ್ರಶಾಂತ್ ಕೋಟ್ಯಾನ್ (572) ಅಂಕ ಗಳಿಸಿರುತ್ತಾರೆ. ಸಂಸ್ಥೆಯು 2014 ರಲ್ಲಿ ಪ್ರಾಂಭವಾಗಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳ ಜೊತೆಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ವಿದ್ಯಾರ್ಥಿವೇತನ ಜೊತೆಗೆ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಬಂಗಾರದ ಪದಕವನ್ನೂ ನೀಡಲಾಗುತ್ತಿದೆ.

ಉದ್ಯಾವರ : ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಸಹಿತ ಹಲವರು ಕಾಂಗ್ರೆಸ್ ಸೇರ್ಪಡೆ

Thumbnail
Posted On: 11 Apr 2024, 12:59 PM

ಉದ್ಯಾವರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉದ್ಯಾವರದಲ್ಲಿ ನಡೆದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಸಹಿತ ಮೂವರು ಕಾಂಗ್ರೆಸ್ ಸೇರ್ಪಡೆಗೊoಡರು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಫ್ರೀಡಾ ಡಿಸೋಜಾ ಸಹಿತ ಐವನ್ ಡಿಸೋಜಾ, ರಿಚರ್ಡ್ ಡಿಸೋಜಾ ರವರನ್ನು ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷ ಸಂತೋಷ್ ಕುಲಾಲ್, ಕಾರ್ಯಾಧ್ಯಕ್ಷ ಚರಣ್ ವಿಠ್ಠಲ್ ಪಕ್ಷದ ಶಾಲು ಹೊಂದಿಸಿ ಸೇರ್ಪಡೆಗೊಳಿಸಿದರು. ಈ ಸಂದರ್ಭದಲ್ಲಿ ಸೋಶಿಯಲ್ ಮಾಧ್ಯಮ ಉಸ್ತುವಾರಿ ನವೀನ್ ಶೆಟ್ಟಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್, ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ, ಶೇಖರ್ ಕೋಟ್ಯಾನ್, ಗಿರೀಶ್ ಕುಮಾರ್, ಹೆಲನ್ ಫೆರ್ನಾಂಡಿಸ್, ಗ್ರಾಮ ಪಂಚಾಯತ್ ಸದಸ್ಯರಾದ ಲಾರೆನ್ಸ್ ಡೆಸಾ, ನಿತಿನ್ ಸಾಲ್ಯಾನ್, ದಿವಾಕರ ಬೊಳ್ಜೆ, ಮಧುಲತಾ, ಆಶಾ ಸುರೇಶ್, ಆಶಾ ವಾಸು, ಪೂರ್ಣಿಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು - ಶೇ. 100 ಫಲಿತಾಂಶದೊಂದಿಗೆ 9 ರ‍್ಯಾಂಕ್ ಗಳು

Thumbnail
Posted On: 10 Apr 2024, 03:38 PM

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿಯೇ ಉತ್ತಮ ಫಲಿತಾಂಶ ವನ್ನು ನೀಡುತ್ತಾ ಬಂದಿರುವ ಕ್ರಿಯೇಟಿವ್ ಸಂಸ್ಥೆ ರಾಜ್ಯಮಟ್ಟದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ 9 ರ‍್ಯಾಂಕ್ ಗಳನ್ನು ಪಡೆಯುವ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಾನ್ವಿರಾವ್ 3ನೇ ಸ್ಥಾನ, ಭಕ್ತಿ ಕಾಮತ್ ಮತ್ತು ಎಎಸ್ ಚಿನ್ಮಯ 6ನೇ ಸ್ಥಾನ, ಎ ಅನನ್ಯ ಜೈನ್ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಿಂಚನ ಆರ್ ಎಚ್ 7ನೇ ಸ್ಥಾನ, ಸುಜಿತ್ ಡಿಕೆ ಮತ್ತು ಹಂಸಿನಿ ವಿ 8ನೇ ಸ್ಥಾನ, ಪ್ರೇಮ್ ಸಾಗರ್ ಪಾಟೀಲ್ ಮತ್ತು ವರ್ಷ ಎಚ್ ವಿ 10ನೇ ಸ್ಥಾನ ಪಡೆದಿರುತ್ತಾರೆ. ಇವರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದ.ಕ. ಪ್ರಥಮ ; ಉಡುಪಿ ದ್ವಿತೀಯ ಸ್ಥಾನ

Thumbnail
Posted On: 10 Apr 2024, 11:13 AM

ಉಡುಪಿ : ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇಂದು ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ 97.37% ನೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದೆ. ಉಡುಪಿ - 96.80% ನೊಂದಿಗೆ ದ್ವಿತೀಯ, ವಿಜಯಪುರ – 94.89% ನೊಂದಿಗೆ ತೃತೀಯ ಸ್ಥಾನ ಪಡೆದಿದೆ. ಗದಗ ಜಿಲ್ಲೆ 72.86% ನೊಂದಿಗೆ ಕೊನೆ ಸ್ಥಾನದಲ್ಲಿದೆ. ಮಾಚ್೯ 1ರಿಂದ 22 ರವರೆಗೆ ಪರೀಕ್ಷೆಗಳು ನಡೆದಿದ್ದು, ಮಂಡಳಿಯು ಮಾರ್ಚ್ 25 ರಂದು ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಪ್ರಾರಂಭಿಸಿತ್ತು. ಈ ಬಾರಿಯೂ ಬಾಲಕಿಯರದ್ದೇ ಮೇಲುಗೈಯಾಗಿದ್ದು ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ.

ಗುಣಮಟ್ಟದ ಶಿಕ್ಷಣಕ್ಕೆ ಅತ್ಯುತ್ತಮ ಆಯ್ಕೆ - ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು

Thumbnail
Posted On: 10 Apr 2024, 10:37 AM

ಉಡುಪಿ : ಜಿಲ್ಲೆಯಲ್ಲಿಯೇ ಅಮೋಘ ಫಲಿತಾಂಶವನ್ನು ನೀಡುತ್ತಾ ಬಂದಿರುವ ಕ್ರಿಯೇಟಿವ್ ಕಾಲೇಜು ವಿಜ್ಞಾನ ವಿಭಾಗ ಮಾತ್ರವಲ್ಲದೆ ವಾಣಿಜ್ಯ ವಿಭಾಗದಲ್ಲಿಯೂ ರಾಜ್ಯಮಟ್ಟದಲ್ಲಿ ಅಗ್ರ ರ‍್ಯಾಂಕ್ ಗಳನ್ನು ಪಡೆದುಕೊಂಡಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೊದಲ ದಿನದಿಂದಲೇ ತರಬೇತಿ ನೀಡಲಾಗುತ್ತಿದೆ. ಏಳು ಉಪನ್ಯಾಸಕರು ಸೇರಿಕೊಂಡು ನಿರ್ಮಿಸಿದ ಈ ಸಂಸ್ಥೆ ಇಂದು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಕಾಲೇಜ್ ಎಂದು ಗುರುತಿಸಿ ಕೊಂಡಿದೆ. ಶೈಕ್ಷಣಿಕ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿಕೊಂಡು ಬಂದಿದೆ. ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಹತ್ತು ರ‍್ಯಾಂಕ್ ಗಳಲ್ಲಿ ವಾಣಿಜ್ಯ ವಿಭಾಗಕ್ಕೆ 3 ರ‍್ಯಾಂಕ್ 2022-23 ನೆ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಪ್ರತಿ ವರ್ಷವ ಶೇ.100 ರಷ್ಟು ಫಲಿತಾಂಶದ ಜೊತೆ ಅನಘ (ಮೂರನೇ ರ‍್ಯಾಂಕ್) ದಿವಿತ್ ಗೌಡ(ಏಳನೇ ರ‍್ಯಾಂಕ್) ಹಾಗೂ ಅಕ್ಷತಾ ಪೈ(ಹತ್ತನೇ ರ‍್ಯಾಂಕ್) ನ್ನು ಪಡೆದಿರುತ್ತಾರೆ. CA ಫೌಂಡೇಷನ್ ಅರ್ಹತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ CA ಫೌಂಡೇಶನ್ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜ್ ನ 20 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿ ನೀಡುತ್ತಿದ್ದು ಅತ್ಯುತ್ತಮ ಹಾಗೂ ಕಡಿಮೆ ಶುಲ್ಕದೊಂದಿಗೆ ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ. CSEET ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ಪ್ರತಿ ವರ್ಷ ದಾಖಲೆಯ ಫಲಿತಾಂಶ : ICSI ನಡೆಸುವ ಕಂಪನಿ ಸೆಕ್ರೆಟರಿಯ ಅರ್ಹತಾ ಪರೀಕ್ಷೆಯಲ್ಲಿ ಈ ಶೈಕ್ಷಣಿಕ ವರ್ಷದ 23 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ನಿರಂತರ ನುರಿತ ಉಪನ್ಯಾಸಕ ರಿಂದ ತರಬೇತಿ ನೀಡಲಾಗುತ್ತಿದೆ. ಇದಲ್ಲದೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಟ್ಯಾಲಿ ಪ್ರೈಮ್, ಪೈತಾನ್, ಕಮ್ಯುನಿಕೇಶನ್ ಸ್ಕಿಲ್ಸ್ ಬಗ್ಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಕ್ರೀಡೆ, ಸಾಂಸ್ಕೃತಿಕ , ಸಾಹಿತ್ಯ, ರಾಷ್ಟ್ರೀಯ ಸೇವಾ ಯೋಜನೆ, ಕೆಸರಾಟ ಪಾಠ, ಯಕ್ಷಗಾನ, ಕೈಗಾರಿಕೆ ಭೇಟಿ ಸಂಗೀತ ತರಬೇತಿ ಗಳು ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನುನೀಡಲಾಗುತ್ತಿದೆ. ವಿಶೇಷವಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟಮಟ್ಟದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಸಜ್ಜುಗೊಳಿಸಲಾಗುತ್ತಿದೆ.

ಕರಾವಳಿಯಾದ್ಯಂತ ಸಂಭ್ರಮದ ಈದುಲ್ ಫಿತರ್ ಆಚರಣೆ

Thumbnail
Posted On: 10 Apr 2024, 10:03 AM

ಕಾಪು : ಕೇರಳದ ಪೊನ್ನಾನಿಯಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಪಶ್ಚಿಮ ಕರಾವಳಿ ಪ್ರದೇಶಗಳಾದ ದ.ಕ. ಉ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ಈದುಲ್ ಫಿತರ್ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಸ್ಲಿಮರು ಒಂದು ತಿಂಗಳ ಪವಿತ್ರ ಉಪವಾಸ ವ್ರತವನ್ನು ಮುಕ್ತಾಯಗೊಳಿಸಲಿದ್ದಾರೆ. ಈದ್ ನಮಾಝಿನ ನಂತರ ಮಸೀದಿ/ಈದ್ಗಾಗಳಲ್ಲಿ ಖುತ್ಬಾ (ಪ್ರಭಾಷಣ) ನೆರವೇರಿತು. ನಂತರ ಹಿರಿಯರು, ಕಿರಿಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯಗಳು ಕಂಡು ಬಂತು. ಈ ಸಂಬಂಧ ಉಡುಪಿ ಹಾಗೂ ದ.ಕ ಜಿಲ್ಲಾಧಿಕಾರಿಗಳು ಏಪ್ರಿಲ್ 10 (ಇಂದು) ಸರಕಾರಿ ಕಚೇರಿಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ. ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದೆಲ್ಲೆಡೆ ಏಪ್ರಿಲ್ 11, ಗುರುವಾರದಂದು ಈದ್ ಉಲ್ ಫಿತರ್ ಹಬ್ಬದ ಆಚರಣೆ ನಡೆಯಲಿದೆ.

ಉಡುಪಿ : ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ - 200ನೇ‌ ಸ್ವಯಂಪ್ರೇರಿತ ‌ರಕ್ತದಾನ ಶಿಬಿರ

Thumbnail
Posted On: 10 Apr 2024, 09:32 AM

ಉಡುಪಿ : ಖ್ಯಾತ ರಕ್ತದಾನ ಸಂಸ್ಥೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಮತ್ತು ರಕ್ತ ಕೇಂದ್ರ ಕೆಎಂಸಿ ಮಣಿಪಾಲ‌ ಇದರ‌‌ ಸಹಕಾರದಲ್ಲಿ ರಕ್ತ ಕೇಂದ್ರ‌ ಕೆಎಂಸಿ ಮಣಿಪಾಲದಲ್ಲಿ ನಡೆದ 200ನೇ‌ ಸ್ವಯಂಪ್ರೇರಿತ ‌ರಕ್ತದಾನ ಶಿಬಿರವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಎಚ್ ಅಶೋಕ್ ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಕೇವಲ‌‌ 4 ವರ್ಷದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ 200ನೇ ರಕ್ತದಾನ ಶಿಬಿರ ಆಯೋಜಿಸಿ ಉಡುಪಿ ಜಿಲ್ಲೆಯ ಹಿರಿಮೆ‌ ಹೆಚ್ಚಿಸಿದೆ. ಪ್ರತಿ ವರ್ಷವು ಉಡುಪಿ ಜಿಲ್ಲೆಯಲ್ಲಿ ಎಪ್ರಿಲ್,‌ ಮೇ ತಿಂಗಳಲ್ಲಿ ಕೃತಕ‌ ರಕ್ತದ ‌ಕೊರತೆ ತಲೆದೋರುತ್ತಿದ್ದು, ಇದರ ಶಾಶ್ವತ ಪರಿಹಾರಕ್ಕೆ ಏಪ್ರಿಲ್, ಮೇ‌ ತಿಂಗಳಲ್ಲಿ ಕಾಲೇಜ್ ಗಳಲ್ಲಿ ಹೆಚ್ಚು ಹೆಚ್ಚು ರಕ್ತದಾನ ಶಿಬಿರ ನಡೆಯುವಂತೆ ಪ್ರೇರೇಪಿಸಿದರೆ ಈ ಕೃತಕ ರಕ್ತದ ಅಭಾವದಿಂದ ಹೊರಬರಲು ಸಾಧ್ಯ ಎಂದರು. ಡಾ. ಶಮಿ ಶಾಸ್ತ್ರೀ ಸಭೆಯ ಅಧ್ಯಕ್ಷತೆ ವಹಿಸಿದರು. ಡಾ. ಟೋಮ್ ದೇವಸ್ಯ ಹೃದ್ರೋಗ ತಜ್ಞರು ಕೆಎಂಸಿ ‌ಮಣಿಪಾಲ, ಡಾ. ವಿಜಯ ಕುಮಾರ್,‌ ಮಕ್ಕಳ ಶಸ್ತ್ರಚಿಕಿತ್ಸೆ ತಜ್ಞ ವೈದ್ಯರು ಕೆಎಂಸಿ ಮಣಿಪಾಲ, ಡಾ. ದೇವಿಪ್ರಸಾದ್ ಹೆಜಮಾಡಿ ಪ್ರೊ. ಕೆಎಂಸಿ ಮಂಗಳೂರು, ಡಾ.ಆದರ್ಶ್ ಹೆಬ್ಬಾರ್, ವೈದ್ಯಕೀಯ ನಿರ್ದೇಶಕರು ಆದರ್ಶ ಆಸ್ಪತ್ರೆ ಕುಂದಾಪುರ, ರಕ್ತದ ಆಪತ್ಬಾಂದವ‌ ಸತೀಶ್ ಸಾಲ್ಯಾನ್ ಮಣಿಪಾಲ್,‌ ಅಧ್ಯಕ್ಷರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಡಾ. ಹರಿಣಾಕ್ಷಿ ಕರ್ಕೇರಾ ಅಧ್ಯಕ್ಷರು, ಜೆಸಿಐ ಉಡುಪಿ ಸಿಟಿ, ದೇವದಾಸ್ ಪಾಟ್ಕರ್, ರಾಘವೇಂದ್ರ ಪ್ರಭು ಕರ್ವಾಲು, ಶರತ್ ಕಾಂಚನ್ ಆನಗಳ್ಳಿ, ಉದಯ ನಾಯ್ಕ್ ಉಪಸ್ಥಿತರಿದ್ದರು. ಡಾ. ಬಾಲಕೃಷ್ಣ ಮದ್ದೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ ದಿನೇಶ್ ಹೆಗ್ಡೆ ಆತ್ರಾಡಿ ಧನ್ಯವಾದ ಅರ್ಪಿಸಿದರು. ಈ ಯಶಸ್ವಿ ರಕ್ತದಾನ ಶಿಬಿರಕ್ಕೆ ರೋಟರಿ ಪರ್ಕಳ, ಜಿಸಿಐ ಉಡುಪಿ ಸಿಟಿ ಹಾಗೂ ಎನ್ ಎಸ್ ಎಸ್ ಘಟಕ ಎಂಐಟಿ ಮಣಿಪಾಲ ಸಹಕಾರ‌ ನೀಡಿದ್ದು, ಒಟ್ಟು 56 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.