Updated News From Kaup
ಪಲಿಮಾರು: ವಿದ್ಯುತ್ ಲೈನ್ ಯೋಜನೆ - ಇನ್ನದಲ್ಲಿ ಬೃಹತ್ ಪ್ರತಿಭಟನೆ ; ತಾತ್ಕಾಲಿಕ ಸ್ಥಗಿತಕ್ಕೆ ಆದೇಶ
Posted On: 13 Jun 2024, 06:44 AM
ಪಲಿಮಾರು : ಇನ್ನ ಗ್ರಾಮ ಪಂಚಾಯಿತಿ ಬಳಿ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ಮತ್ತು ಸುತ್ತಮುತ್ತಲಿನ ಯೋಜನಾ ಸಂತ್ರಸ್ಥರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರೈತ ಪರ ಸಂಘ, ಸಂಸ್ಥೆಗಳು ಬುಧವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಭ ಪ್ರತಿಭನಾಕಾರರು ಹಕ್ಕೊತ್ತಾಯ ಮಂಡಿಸಿದರು. ಪ್ರತಿಭನಾ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ಯೋಜನೆಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಕೃಷಿಕರಿಗೆ ತೊಂದರೆ ಉಂಟು ಮಾಡುವ ಯಾವುದೇ ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರೊಂದಿಗೆ ಮಾತನಾಡುತ್ತೇನೆ. ಆ ಬಳಿಕ ಸಭೆ ಎಲ್ಲರನ್ನೂ ಸೇರಿಸಿ ಸಭೆ ನಡೆಸುವುದಾಗಿ ಹೇಳಿದರು. ಈ ಯೋಜನೆಗೆ ಎರಡು ವರ್ಷಗಳ ಹಿಂದೆಯೇ ಒಪ್ಪಿಗೆ ಸಿಕ್ಕಿತ್ತು. ಇಲ್ಲಿನ ಸ್ಥಳೀಯ ಶಾಸಕರು ಒಪ್ಪಿಗೆ ನೀಡುವ ಸಂದರ್ಭದಲ್ಲಿ ಇಂಧನ ಸಚಿವರಾಗಿದ್ದರು. ಮುಂದಿನ ಭವಿಷ್ಯಕ್ಕಾಗಿ ಅಭಿವೃದ್ಧಿ ಬೇಕು. ಆದರೆ ಜನರ ಜೀನವದಲ್ಲಿ ಚೆಲ್ಲಾಟವಾಡುವ ಇಂತಹ ಯೋಜನೆ ಬೇಡ ಎಂದರು. ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮಾಜಿ ಸಚಿವ ವಿನಯಕುಮಾರ ಸೊರಕೆ, ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ, ನಂದಳಿಕೆ ಟೋಲ್‌ಗೇಟ್ ಹೋರಾಟ ಸಮಿತಿಯ ಆಧ್ಯಕ್ಷ ಸುಹಾಸ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಮನೋಹರ್ ಶೆಟ್ಟಿ, ರಾಜು ಗೌಡ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮತ್ತಿತರರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಿತಾ ಶೆಟ್ಟಿ, ವಿವಿಧ ಪಕ್ಷದ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.
ಉಡುಪಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಕುರಿತು ಇಲಾಖಾಧಿಕಾರಿಗಳ ಸಭೆ
Posted On: 12 Jun 2024, 06:12 PM
ಉಡುಪಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಸಂಬಂಧಿಸಿದಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ದಾರಿ ದೀಪಗಳ ಸಮರ್ಪಕ ನಿರ್ವಹಣೆ ಮಾಡಬೇಕು ಮತ್ತು ಪಡುಬಿದ್ರಿ, ಕಟಪಾಡಿ ಭಾಗದಲ್ಲಿ ದಿನೇ ದಿನೇ ಅಪಘಾತಗಳು ಹೆಚ್ಚುತ್ತಿದ್ದು ಅಪಘಾತ ತಡೆಗೆ ಬ್ಯಾರಿಕೇಡ್ ಹಾಗೂ ರಿಫ್ಲೆಕ್ಟರ್ ಗಳನ್ನು ಅಳವಡಿಸುವಂತೆ ಮತ್ತು ಹೆಜಮಾಡಿಯ ಕನ್ನಂಗಾರ್ ಸುಜ್ಲಾನ್ ಗೇಟ್ ಬಳಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ರಾಷ್ಟ್ರೀಯ ಹೆದ್ದಾರಿಯ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಗ್ಯಾಸ್ ಪೈಪ್ ಲೈನ್ ಗುಂಡಿಗಳನ್ನು ತೆಗೆದಿದ್ದು ಮಳೆಗಾಲ ಸಮಯದಲ್ಲಿ ಇದರಲ್ಲಿ ನೀರು ತುಂಬಿ ಅಪಘಾತ ಸಂಭವಿಸುತ್ತದೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಸಹಾಯಕ ಆಯುಕ್ತರಾದ ರಶ್ಮಿ, ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರಗಜ್ಜನ ಅಭಯ - ಕೈ ಸೇರಿದ ಕಳವಾದ ದ್ವಿಚಕ್ರ ವಾಹನ ; ಭಕ್ತನಿಂದ ನಿತ್ಯವೂ ಸ್ವಚ್ಛತೆಯ ಕಾಯಕದ ಪ್ರಮಾಣ
Posted On: 12 Jun 2024, 04:55 PM
ಉಡುಪಿ : ಇಲ್ಲಿಯ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕೆಲಸಕಿದ್ದ ಪ್ರವೀಣ್ ಸೇರಿಗಾರ್ ರ ದ್ವಿಚಕ್ರ ವಾಹನ ಕಳವಾಗಿ ಮಾನಸಿಕವಾಗಿ ಕುಗ್ಗಿದಾಗ ಹೋಟೆಲ್ ಪಕ್ಕದ ಅಂಗಡಿಯಾತ ನೀಡಿದ ಸಲಹೆಯಂತೆ ಹತ್ತಿರದ ಕೊರಗಜ್ಜ ಸನ್ನಿಧಿಗೆ ಭೇಟಿಯಿತ್ತು ಹರಕೆ ಹೇಳಿಕೊಂಡಾದ ಬಳಿಕ 15 ದಿವಸದಲ್ಲಿ ಕಳಕೊಂಡ ವಾಹನ ಗೋವಾದಲ್ಲಿ ಪತ್ತೆಯಾದ ಬಗ್ಗೆ ಪೋಲೀಸರು ಮಾಹಿತಿ ನೀಡುತ್ತಾರೆ. ಇದರಿಂದ ಸಂತಸಗೊಂಡ ಆ ವ್ಯಕ್ತಿ ನನಗೆ ದೈವ ಕೈ ಬಿಡ್ಲಿಲ್ಲ ಎಂಬ ಖುಷಿಯಿಂದ ದೈವಸ್ಥಾನಕ್ಕೆ ಭೇಟಿ ಕೊಟ್ಟು ಹೇಳಿದ ಹರಕೆಯನ್ನು ಒಪ್ಪಿಸುತ್ತಾರೆ. ಮುಂದೆ ದಿನನಿತ್ಯ ದೈವಸ್ಥಾನಕ್ಕೆ ಸಂಜೆ 5ಗಂಟೆಗೆ ಬಂದು ದೈವ ಸನ್ನಿಧಿಯ ಸ್ವಚ್ಛತೆಯನ್ನು ಮಾಡುತ್ತಾರೆ. ಇದರಿಂದ ನೆಮ್ಮದಿ ಕೂಡ ಸಿಗುತ್ತದೆ ಎನ್ನುತ್ತಾರೆ. ಪ್ರವೀಣ್ ಸೇರಿಗಾರ್ ರ ಇಷ್ಟಾರ್ಥ ಪೂರೈಸಿದ ಕ್ಷೇತ್ರವೇ ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಅನಂತೇಶ್ವರ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಉಡುಪಿ ತೆಂಕು ಪೇಟೆ ವುಡ್ ಲ್ಯಾಂಡ್ ಹೋಟೆಲ್ ಹತ್ತಿರದ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನವಾಗಿದೆ. ಅಷ್ಟ ಮಠಗಳಿಗೂ ಈ ದೈವಸ್ಥಾನಕ್ಕೆ ನಿಕಟ ಸಂಬಂಧವಿದೆ. ವರ್ಷದಲ್ಲಿ 12 ಸಂಕ್ರಮಣ ಪೂಜೆ, ಎರಡು ಮಾರಿಪೂಜೆ, ಕಾಲಾವಧಿ ಮೂರು ದಿವಸ ನೇಮೋತ್ಸವ ಹಾಗೂ ಭಕ್ತರ ಹರಕೆಯ ದರ್ಶನ ಸೇವೆ ಕೋಲಸೇವೆ ಜರಗುತ್ತದೆ. ಪ್ರತಿ ತಿಂಗಳು ಸಂಕ್ರಮಣ ದಿವಸ ವಿಶೇಷ ಪೂಜೆ ಬೆಳಿಗ್ಗೆ 8:30 ರಿಂದ ಆರಂಭಗೊಂಡು ಮಧ್ಯಾಹ್ನ 2 ಗಂಟೆವರೆಗೆ ದೈವಸ್ಥಾನ ತೆರೆದಿರುತ್ತದೆ ಈ ಸಂದರ್ಭದಲ್ಲಿ ಊರ ಪರ ಊರ ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗುತ್ತಾರೆ.
ಕಾಪು : ದಂಡತೀರ್ಥ ವಿದ್ಯಾ ಸಂಸ್ಥೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ
Posted On: 12 Jun 2024, 04:49 PM
ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಬಾಲ ಕಾರ್ಮಿಕ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿಧರು. ಈ ಸಂದರ್ಭ ಮಾತನಾಡಿದ ಅವರು ಭಾರತದಲ್ಲಿರುವ ಬಡ ಕುಟುಂಬದ ಬಗ್ಗೆ ತಿಳಿಸಿ, ಆರ್ಥಿಕ ಅಸಮಾನತೆಯನ್ನು ಸರಿದೂಗಿಸುವುದಕ್ಕಾಗಿ ಜನರು ತಮ್ಮ ಮಕ್ಕಳನ್ನು ದುಡಿಮೆಗೆ ಕಳುಹಿಸುತ್ತಿದ್ದಾರೆ. ಆದರೆ ಇದು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ. ಇದರ ಬಗ್ಗೆ ನಾವು ಎಚ್ಚರವಹಿಸಬೇಕಾಗಿದೆ ಎಂದರು. ಸಂಸ್ಥೆಯ ಪ್ರಾಂಶುಪಾಲ ನೀಲಾನಂದ ನಾಯ್ಕ, ಶಿಕ್ಷಣ ಸಂಯೋಜಕರಾದ ಶಿವಣ್ಣ ಬಾಯಾರ್ ಹಾಗೂ ಶಿಕ್ಷಕ -ಶಿಕ್ಷಕೇತರರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರಿಗೆ ಉಡುಪಿಯಲ್ಲಿ ಅಭಿನಂದನೆ
Posted On: 11 Jun 2024, 09:13 PM
ಉಡುಪಿ : 2ನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಇವರನ್ನು ಉಡುಪಿ ಜಿಲ್ಲಾ ಕ್ರೈಸ್ತ ಸಮುದಾಯದವರು ಡಾನ್ ಬಾಸ್ಕೋ ಸಭಾಭವನದಲ್ಲಿ ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮಗುರು ಫಾ. ಚಾರ್ಲ್ಸ್ ಮಿನೇಜಸ್, ಐವನ್ ಡಿಸೋಜರವರು ಸಮಾಜ ಮತ್ತು ಪಕ್ಷಕ್ಕೆ ನೀಡಿದ ಸೇವೆಗೆ ಸಿಕ್ಕ ಪ್ರತಿಫಲ. ಸರ್ಕಾರ ನಮ್ಮ ಕ್ರೈಸ್ತ ಸಮಾಜಕ್ಕೆ ನೀಡಿದ ಕೊಡುಗೆ. ಐವನ್ ಡಿಸೋಜ ಇವರ ಸೇವೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲಿ ಎಂದು ಶುಭ ಹಾರೈಸಿದರು. ಕ್ರೈಸ್ತ ಬಾಂಧವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜ, ಈ ಹುದ್ದೆಯು ಕ್ರೈಸ್ತ ಸಮುದಾಯದ ಕೊಡುಗೆಯನ್ನು ಗುರುತಿಸಿ ಕಾಂಗ್ರೆಸ್ ಸರಕಾರ ಈ ಹುದ್ದೆಯನ್ನು ನೀಡಿದೆ. ಈ ಹುದ್ದೆಯನ್ನು ಪಡೆದ ನಾನು ಧನ್ಯನು. ನನ್ನ ಅವಧಿಯಲ್ಲಿ ಸಮಾಜದ ಕುಂದು ಕೊರತೆಗಳನ್ನು ನನ್ನ ಕೈಲಾದ ಮಟ್ಟಿಗೆ ಸರಿಪಡಿಸಲು ಪ್ರಯತ್ನಿಸುತ್ತೇನೆ. ಹಾಗೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ಸಮಾಜದ ಎಲ್ಲಾ ವರ್ಗದ ಹಾಗೂ ಧರ್ಮದ ಜನರನ್ನು ಒಗ್ಗೂಡಿಸಿ ಅವರ ದ್ವನಿಯಾಗಿ ವಿಧಾನ ಪರಿಷತ್ ಮತ್ತು ಸರಕಾರದ ಮಟ್ಟದಲ್ಲಿ ನನ್ನ ಕೊಡುಗೆಯನ್ನು ಕೊಡಲು ಬದ್ದನಿದ್ದೇನೆ. ಕಳೆದ ಅವಧಿಯಲ್ಲಿ ಜಾತಿ ಧರ್ಮ ನೋಡದೆ ಮುಖ್ಯಮಂತ್ರಿ ನಿದಿಯಿಂದ ಧಾಖಲೆಯ ಮಟ್ಟದಲ್ಲಿ ಪರಿಹಾರ ನಿಧಿಯನ್ನು ಅಗತ್ಯವಿದ್ದವರಿಗೆ ತಲುಪಿಸಿದ್ದೇನೆ. ನನ್ನಿಂದ ಕೆಲಸ ತೆಗೆಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ಫಾ| ಚಾರ್ಲ್ಸ್ ಮಿನೆಜಸ್, ಸಂತ ಮೇರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರಾದ ಫಾ| ವಿಜಯ್ ಡಿಸೋಜ, ಐವನ್ ಡಿಸೋಜರವರ ಧರ್ಮಪತ್ನಿ ಡಾ. ಕವಿತಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮ್ಯಾಕ್ಷಿಮ್ ಡಿಸೋಜ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿತೇಂದ್ರ ಪುರ್ತಾಡೋ, ಮೇರಿ ಡಿಸೋಜ, ಗ್ರೇಸಿ ಕರ್ಡೊಜ,ವಿಲ್ಸನ್ ರೋಡ್ರಿಗಸ್ ಶಿರ್ವ, ಮೆಲ್ವಿನ್ ಅರಾನ್ಹ, ಚಾರ್ಲ್ಸ್ ಅಂಬ್ಲರ್, ಕಥೋಲಿಕ್ ಸಭಾ ಉಡುಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಕರ್ನೆಲಿಯೋ, ಲೆಸ್ಲಿ ಕರ್ನೆಲಿಯೋ, ಪ್ರಶಾಂತ್ ಜತ್ತನ್ನ, ರೋಜಾರಿಯೋ ಡಿಸೋಜ, ಅನಿತಾ ಡಿಸೋಜ ಬೆಲ್ಮಣ್ ಮತ್ತಿತರರು ಹಾಜರಿದ್ದರು. ಸಮಾರಂಭದಲ್ಲಿ ಹಾಜರಿದ್ದ ಪ್ರಮುಖರು ಐವನ್ ಡಿಸೋಜರಿಗೆ ಸರಕಾರ ತನ್ನ ಸಂಪುಟದಲ್ಲಿ ಉನ್ನತ ಹುದ್ದೆಯನ್ನು ನೀಡಬೇಕಾಗಿ ಅಭಿಪ್ರಾಯ ಮಂಡಿಸಿದರು. ಅಭಿನಂದನ ಸಮಾರಂಭದ ಬಳಿಕ ಐವನ್ ಡಿಸೋಜರು ಧರ್ಮಧ್ಯಕ್ಷರನ್ನು ಭೇಟಿ ಮಾಡಿ ಆಶೀರ್ವಾಚನ ಪಡೆದರು. ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಇಫ್ಕಾ ಸಂಘಟನೆಯ ಮಾಜಿ ಅಧ್ಯಕ್ಷ ಲುವಿಸ್ ಲೋಬೊ ವಂದಿಸಿದರು.
ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನ ಅಮ್ಮ ರಕ್ಷೆಯಾಗಿದ್ದಾಳೆ : ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ
Posted On: 11 Jun 2024, 11:57 AM
ಕಾಪು : ಕರಾವಳಿಯ ಬಹುತೇಕ ದೈವಜ್ಞರು, ಜ್ಯೋತಿಷಿಗಳಿಗೆ ಗುರುಗಳಾಗಿ ಪ್ರಸಿದ್ಧರಾಗಿರುವ ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ ಅವರು ರವಿವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇಗುಲದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಾಪು ಶ್ರೀ ಮಾರಿಯಮ್ಮ ದೇವಿಯ ಸನ್ನಿಧಾನವು ಅತ್ಯಂತ ಜಾಗೃತ ಸಾನಿಧ್ಯವಾಗಿದ್ದು ಕ್ಷೇತ್ರ ವೈಭವೋಪೇತವಾಗಿ ಬೆಳಗುತ್ತಿದೆ. ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನಲ್ಲಿ ನೆಲೆಸಿರುವ ಮಾರಿಯಮ್ಮ ರಕ್ಷೆಯಾಗಿದ್ದಾಳೆ ಎಂದು ಹೇಳಿದರು. ಕಾಪು ಮಾರಿಗುಡಿ ಅತ್ಯುತ್ತಮ ರೀತಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ. ಕೆಂಪು ಇಳಕಲ್ ಶಿಲೆಯೊಂದಿಗೆ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನವು ದೇಶ ವಿದೇಶಗಳ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಉಡುಪಿ ಕ್ಷೇತ್ರ ವನ್ನು ಸಂದರ್ಶಿಸುವ ಭಕ್ತರು ಕಾಪು ಮಾರಿಯಮ್ಮನ ಸನ್ನಿದಿಗೂ ಭೇಟಿ ನೀಡುವ ಪುಣ್ಯಕಾಲ ನಮ್ಮ ಮುಂದಿದೆ ಎಂದರು. ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಜೀರ್ಣೋದ್ಧಾರ ಕಾಮಗಾರಿ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪ್ರಚಾರ ಸಮಿತಿಯ ಸಂಚಾಲಕ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರೀ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.
ಕಾಪು : ಮಳೆ ಸಂದರ್ಭದಲ್ಲಿ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳಿಗೆ ಶಾಸಕರಿಂದ ಸೂಚನೆ
Posted On: 11 Jun 2024, 11:53 AM
ಕಾಪು : ಕರಾವಳಿಗೆ ಈಗಾಗಲೇ ಮುಂಗಾರು ಪ್ರವೇಶಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಗಾಳಿ ಮಳೆ ಜೋರಿರುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿರುತ್ತದೆ. ಈ ನಿಟ್ಟಿನಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ವಿವಿಧ ಇಲಾಖೆಗಳಿಗೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಪತ್ರದ ಮೂಲಕ ಸೂಚಿಸಿದ್ದಾರೆ. ನಿರಂತರ ವಿದ್ಯುತ್ ಪೂರೈಕೆಯ ನಿಟ್ಟಿನಲ್ಲಿ, ವಿದ್ಯುತ್ ಅವಘಡ ಹಾಗೂ ಹಾನಿ ತಪ್ಪಿಸಲು ರಸ್ತೆ ಇಕ್ಕೆಲಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವುದು ಹಾಗೂ ಅಪಾಯಕಾರಿ ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು ಮತ್ತು ಹಳೆಯ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸುದು, ಸಾರ್ವಜನಿಕರಿಂದ ತಮ್ಮ ಇಲಾಖೆಗೆ ವಿದ್ಯುತ್ ವ್ಯತ್ಯಯ ಸಂಬಂಧಿ ದೂರುಗಳು ಬಂದಲ್ಲಿ ಶೀಘ್ರ ಸ್ಪಂದನೆ ನೀಡಿ ಕ್ರಮ ಕೈಗೊಳ್ಳುವ ಬಗ್ಗೆ ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಹಾಗೂ ಮಳೆ ನೀರು ಹರಿಯುವ ಚರಂಡಿಗಳಲ್ಲಿ ಹೂಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿದು ಜನ-ವಾಹನ ಸಂಚಾರಕ್ಕೆ ಅನಾನುಕೂಲವಾಗಿರುತ್ತದೆ ಆದ್ದರಿಂದ ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಹರಿಯುವ ಚರಂಡಿಗಳಲ್ಲಿರುವ ಹೂಳುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳುವುದು. ಹಾಗೆಯೇ ಮುಂದುವರೆದು ಪುರಸಭಾ ವ್ಯಾಪ್ತಿಯಲ್ಲಿನ ಕೆರೆ ಹಾಗೂ ಮದಗಗಳಲ್ಲಿ ನೀರು ತುಂಬಿ ಕೊಂಡಿದ್ದು, ಸೂಚನಾ ಫಲಕಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವಂತೆ ಇರಿಸುವುದು ಹಾಗೂ ಆಳ ಗುಂಡಿಗಳನ್ನು ಮ್ಯಾನ್ ಹೋಲ್ ಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅಪಾಯಕಾರಿ ದುರ್ಘಟನೆಗಳು ಆಗದಂತೆ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮತ್ತು ಹಿಂದಿನ ವರ್ಷದಲ್ಲಿ ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರಗಳಿಂದ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಜೀವ ಹಾನಿ ಆಗಿದ್ದು, ಸದ್ರಿ ವರ್ಷಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವುದು ಅತ್ಯಗತ್ಯವಾಗಿರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರ ಹಾಗೂ ಗೆಲ್ಲುಗಳನ್ನು ತೆರವುಗೊಳಿಸುವರೇ ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಜೊತೆಗೆ ಮಳೆ ನೀರು ಹರಿಯುವ ಚರಂಡಿಗಳಲ್ಲಿ ಹೂಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿದು ಜನ-ವಾಹನ ಸಂಚಾರಕ್ಕೆ ಅನಾನುಕೂಲವಾಗಿರುತ್ತದೆ. ಆದ್ದರಿಂದ ಲೋಕೋಪಯೋಗಿ ಇಲಾಖಾ ರಸ್ತೆಯ ಮಳೆ ನೀರು ಹರಿಯುವ ಪ್ರಮುಖ ಚರಂಡಿಗಳಲ್ಲಿರುವ ಹೂಳುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಮಳೆ ನೀರು ಹರಿಯುವ ಚರಂಡಿಗಳಲ್ಲಿ ಹೂಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿದು ಜನ-ವಾಹನ ಸಂಚಾರಕ್ಕೆ ಅನಾನುಕೂಲವಾಗಿರುತ್ತದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮಳೆ ನೀರು ಹರಿಯುವ ಪ್ರಮುಖ ಚರಂಡಿಗಳಲ್ಲಿರುವ ಹೂಳುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿವೈಡರ್ ಅನ್ನು ಸಮರ್ಪಕವಾಗಿ ಅಳವಡಿಸಿ ಪ್ರತಿಫಲಕಗಳನ್ನು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಿಗಳಿಗೆ ತೋರುವ ಹಾಗೆ ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ.
ಕಟಪಾಡಿ : ಧರ್ಮ, ರಾಷ್ಟ್ರ ಯೋಧರ ರಕ್ಷಣೆಗಾಗಿ ಶ್ರೀ ಸಾಯಿ ಈಶ್ವರ್ ಗುರೂಜಿ 108 ದಿನ 108 ದೇವಸ್ಥಾನ ಪ್ರದಕ್ಷಿಣೆ
Posted On: 11 Jun 2024, 11:50 AM
ಕಟಪಾಡಿ : ಶ್ರೀ ಸಾಯಿ ಮುಖ್ಯ ಪ್ರಾಣದೇವಸ್ಥಾನ ಶ್ರೀ ದ್ವಾರಕಾಮಯಿ ಮಠದ ಪೀಠಾಧೀಶರು ಮತ್ತು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಾಯಿಈಶ್ವರ್ ಗುರೂಜಿಯವರು ಧರ್ಮ, ರಾಷ್ಟ್ರ ಯೋಧರ ರಕ್ಷಣೆಗಾಗಿ ಜೂನ್ 14 ರಿಂದ ಸಪ್ಟೆಂಬರ್ 29 ರವರೆಗೆ 108 ದಿನ 108 ದೇವಸ್ಥಾನ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಜೂನ್ 14 ರಂದು ಬೆಳಿಗ್ಗೆ 9 ಕ್ಕೆ ಈ ಮಹಾ ಸಂಕಲ್ಪಕ್ಕೆ ಚಾಲನೆ ಕೊಟ್ಟು ಧರ್ಮ, ರಾಷ್ಟ್ರ, ಯೋಧರ ರಕ್ಷಣೆಯ ಬಗ್ಗೆ ನಿತ್ಯ ಪ್ರಾರ್ಥನೆಗಾಗಿ ಮನವಿ ನೀಡಲಿದ್ದಾರೆ. ಕ್ಷೇತ್ರ ದರ್ಶನದ ನೆನಪಿಗಾಗಿ ಬಿಲ್ವಪತ್ರೆಯ ಗಿಡವನ್ನು ದೇವಸ್ಥಾನದ ವಠಾರದಲ್ಲಿ ನೆಡಲಿದ್ದಾರೆ. ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ಎಂದಿನಂತೆ ಮುಂದುವರಿಯುತ್ತದೆ. ಗುರುಗಳ ಸಾರ್ವಜನಿಕ ಭೇಟಿ ಸಾಂತ್ವನ ಕಾರ್ಯಕ್ರಮಗಳ ಬಗ್ಗೆ ಕಚೇರಿಯನ್ನು ಸಂಪರ್ಕಿಸಬಹುದು. ಗುರುಗಳು ಭೇಟಿ ನೀಡುವ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ಮೊದಲು ತಿಳಿಸಲಾಗುವುದು ಧರ್ಮ, ರಾಷ್ಟ್ರಕ್ಕಾಗಿ ಭಕ್ತರು ಗುರುಗಳ ಜೊತೆ ಸೇರಿ ಪ್ರಾರ್ಥನೆಯಲ್ಲಿ ಭಾಗವಹಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.
ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಐದು ವಿದ್ಯಾರ್ಥಿಗಳಿಗೆ ಜೆ.ಇ.ಇ ಅಡ್ವಾನ್ಸ್ಡ್‌ನಲ್ಲಿ ಅರ್ಹತೆ
Posted On: 09 Jun 2024, 07:00 PM
ಕಾರ್ಕಳ : ದೇಶದ ಪ್ರತಿಷ್ಠಿತ IIT, IIST, IISc ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ (B.Tech) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸುಜಿತ್ ಡಿ. ಕೆ, ಕೆ ಧ್ರುವ ಬಂಡಾರ್ಕರ್,ಅರ್ಜುನ್ ಇ ನಾಯಕ್, ಕಾರ್ತಿಕ್ ಎ. ಎಸ್, ಶಮಿತ್ ಎನ್ ಉನ್ನತ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ಸುಜಿತ್ ಡಿ ಕೆ 3648, ಅರ್ಜುನ್ ಇ ನಾಯಕ್ 3298, ಕೆ ಧ್ರುವ ಬಂಡಾರ್ಕರ್ 4260ನೇ ಕೆಟಗರಿ ರ‍್ಯಾಂಕ್ ಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ. ಈ ಮೂಲಕ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ. ಸಂಸ್ಥೆಯು ಆರಂಭದ ವರ್ಷಗಳಲ್ಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವರ್ಗದವರು, ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯ ಸಂಯೋಜಕರಾದ ತಿರುಮಲ ರೆಡ್ಡಿ ರವರು ಅಭಿನಂದನೆ ಸಲ್ಲಿಸಿದ್ದಾರೆ.
ಕಾಪು : ಶ್ರೀ ದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು - ದಿ. ಕಾಪು ಲೀಲಾಧರ ಶೆಟ್ಟಿ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ
Posted On: 09 Jun 2024, 06:54 PM
ಕಾಪು : ಶ್ರೀ ದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು ಇದರ ನೇತೃತ್ವದಲ್ಲಿ ದಿ. ಕಾಪು ಲೀಲಾಧರ ಶೆಟ್ಟಿ ಇವರ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಜರಗಿತು. ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಅವರು ಕಾಪು ಲೀಲಾಧರ ಶೆಟ್ಟಿಯವರು ಹಾಗೂ ಅವರ ಕೊಡುಗೆಗಳನ್ನು ಸ್ಮರಿಸಿ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. ಶೈಕ್ಷಣಿಕ ವಿದ್ಯಾಭ್ಯಾಸ ಮಾತ್ರವಲ್ಲದೆ ಬದುಕಿನ ಮೌಲ್ಯವನ್ನು ತಿಳಿ ಹೇಳಿ, ಲೀಲಾಧರ ಶೆಟ್ಟಿ ಅವರ ಸಮಾಜ ಸೇವೆಯನ್ನು ಮಾದರಿಯಾಗಿ ಇಟ್ಟುಕೊಂಡು ಇಂದಿನ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಬೇಕೆಂದು ಸಂದೇಶ ನೀಡಿದರು. ಶ್ರೀದೇವಿ ಫ್ರೆಂಡ್ಸ್ ಕಾರ್ಯಕ್ರಮವನ್ನು ಶ್ಲಾಘಿಸಿ, ಮುಂದೆಯೂ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ, ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಶುಭ ಹಾರೈಸಿದರು. ಈ ಸಂದರ್ಭ ಮಾರಿಗುಡಿಯ ಗುರಿಕಾರರುಗಳಾದ ಶೇಖರ ರಾಣ್ಯ, ಎಂ. ಬಾಬು ರಾಣ್ಯ, ರಾಘು, ಸಮಾಜದ ಪ್ರಮುಖರಾದ ಬಿ ಕೆ ಶ್ರೀನಿವಾಸ, ಜಯ ರಾಣ್ಯ, ರವೀಂದ್ರ ಮಲ್ಲಾರ್, ಸಾಧು ರಾಣ್ಯ, ವಿಟ್ಟು, ರಾಣೆಯಾರು ಸಮಾಜ ಸೇವಾ ಸಂಘ ಕಾಪು ಇದರ ಅಧ್ಯಕ್ಷರಾದ ನಾಗಾರ್ಜುನ ಕಾಪು, ಶ್ರೀದೇವಿ ಫ್ರೆಂಡ್ಸ್ ಅಧ್ಯಕ್ಷರಾದ ಸೂರಜ್, ಉಪಾಧ್ಯಕ್ಷೆ ರಮ್ಯ ಉಪಸ್ಥಿತರಿದ್ದರು. ಸಾನ್ವಿತ್ ಪ್ರಾರ್ಥಿಸಿದರು. ಪ್ರಕಾಶ್ ಎಸ್ ನಿರೂಪಿಸಿದರು.
