Updated News From Kaup

ಸರ್ಕಾರದ ಸೌಲಭ್ಯ ಪಡೆಯಲು ರೈತರು ಜಮೀನು ವಿವರ FRUITSನಲ್ಲಿ ದಾಖಲಿಸಿ : ತಹಶಿಲ್ದಾರ್ ಡಾ. ಪ್ರತಿಭಾ ಆರ್. ಸೂಚನೆ

Posted On: 22-11-2023 08:57PM

ಕಾಪು : ರೈತರು ಸರ್ಕಾರದ ಸೌಲಭ್ಯ ಪಡೆಯಲು, ಯಾವುದೇ ಭಯ ಇಲ್ಲದೇ ಜಮೀನಿನ ವಿವರಗಳನ್ನು FRUITS ತಂತ್ರಾಂಶದಲ್ಲಿ ದಾಖಲು ಮಾಡಬೇಕು ಕಾಪು ತಾಲ್ಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ ತಿಳಿಸಿದ್ದಾರೆ. ಬೆಳೆ ನಷ್ಟವಾಗಿರುವ ರೈತರು ಪರಿಹಾರ ಧನ ಪಡೆಯಲು ಭೂಮಿ ವಿವರ ಇರುವ ಎಫ್‌ಐಡಿ Fruits ID (FID) ಹೊಂದಿರಬೇಕು. ಎಫ್‍ಐಡಿ ಗುರುತಿನ ಸಂಖ್ಯೆ ಪಡೆಯಲು ರೈತರು FRUITS ತಂತ್ರಾಂಶದಲ್ಲಿ ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು.

ರೈತರು ಸರ್ಕಾರದ ಸೌಲಭ್ಯ ಪಡೆಯಲು ಎಫ್‍ಐಡಿ ಬೇಕು, ಏನಿದು ಐಡಿ ? : ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಪೂರಕವಾದ ಇಲಾಖೆಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಅಧೀನ ಕಚೇರಿಗಳಲ್ಲಿ ರೈತರ ಫ್ರೂಟ್ಸ್ ಐಡಿ ಸೃಷ್ಟಿಸಲು ವ್ಯವಸ್ಥೆ ಮಾಡಿದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಲಾಗಿದೆ. FRUITS (Farmers Registration & Unified beneficiary Information System) ಗುರುತಿನ ಸಂಖ್ಯೆಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೇ ನಂಬರ್ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ (Fruits) ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು. ನವೆಂಬರ್ 30ರ ತನಕ ದಾಖಲು ಮಾಡಲು ಅವಕಾಶ ನೀಡಲಾಗಿದೆ. ರೈತರ ಫ್ರೂಟ್ಸ್ ಐಡಿಯಲ್ಲಿ ರೈತರ ಜಮೀನು, ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲಾ ವಿವರ ಇರುತ್ತದೆ. ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೆ ಡಿಬಿಟಿ (Direct Beneficiary Transfer) ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಕಾಪು ತಾಲ್ಲೂಕಿನಲ್ಲಿ FRUITS ತಂತ್ರಾಂಶದಲ್ಲಿ ರೈತರ ಎಲ್ಲಾ ಜಮೀನಿನ ಮಾಹಿತಿಯನ್ನು ನವೆಂಬರ್ 30 ರೊಳಗೆ ದಾಖಲಿಸಲು ಮನವಿ ಮಾಡಲಾಗಿದೆ. ಈ ಕಾರ್ಯವನ್ನು ಕ್ಷೇತ್ರ ಮಟ್ಟದಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಲಾಗಿನ್‌ಗಳ‌ ಮೂಲಕ ಮುಂದಿನ ದಿನಗಳಲ್ಲಿ ಅಭಿಯಾನ ರೂಪದಲ್ಲಿ ಕೈಗೊಂಡು, FRUITS ತಂತ್ರಾಂಶದಲ್ಲಿ ಶೇ. 100 ರಷ್ಟು Land Updation ಪ್ರಗತಿ ಸಾಧಿಸಲು ಸರ್ಕಾರ ನಿರ್ದೇಶನ ನೀಡಿದೆ. FRUITS ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆ ವಿಮೆ, ಬೆಳೆ ಸಾಲ ವಿತರಣೆ, ಬೆಳೆ ಪರಿಹಾರ ವಿತರಣೆ, ಬೆಂಬಲ ಬೆಲೆ ಅನುಷ್ಟಾನ, ಪಹಣಿಯಲ್ಲಿ ಬೆಳೆ ದಾಖಲಾತಿ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ವಿತರಣೆಗೆ ಬಳಕೆ ಮಾಡುತ್ತಿದ್ದು, ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ, ಸಹಕಾರ ಇಲಾಖೆ ಹಾಗೂ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ದತ್ತಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಜಿಲ್ಲೆಯ ರೈತ ಬಾಂಧವರು ತಮ್ಮ ಆಧಾರ್ ಕಾರ್ಡ್‌ ಪ್ರತಿ, ಬ್ಯಾಂಕ್ ಖಾತೆ ಮತ್ತು ಶಾಖೆಯ ವಿವರ, ಬ್ಯಾಂಕ್ ಐ.ಎಫ್.ಎಸ್.ಸಿ ಕೋಡ್, ಪಡಿತರ ಚೀಟಿಯ ವಿವರ, ಮೊಬೈಲ್ ಸಂಖ್ಯೆ, ಪರಿಶಿಷ್ಟ ಜಾತಿ/ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ತಮ್ಮ ಮಾಲೀಕತ್ವದ ಎಲ್ಲಾ ಜಮೀನಿನ ಸರ್ವೇ ನಂಬರ್ ವಿವರವನ್ನು ತಮ್ಮ ಹತ್ತಿರದ ತಹಶೀಲ್ದಾರ್‌ ಕಛೇರಿ, ಕಂದಾಯ ನಿರೀಕ್ಷಕರ ಕಛೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ನ್ಯಾಯಬೆಲೆ ಅಂಗಡಿ ಅಥವಾ ಕೃಷಿ/ ತೋಟಗಾರಿಕೆ/ ರೇಷ್ಮೆ ಇಲಾಖೆಯ ಕಛೇರಿಗಳಿಗೆ ಕೂಡಲೇ ಒದಗಿಸಿ ತಮ್ಮ ಮಾಲೀಕತ್ವದ ಎಲ್ಲಾ ಪಹಣಿಯ ದಾಖಲೆಗಳನ್ನು ನವೆಂಬರ್ 30ರೊಳಗೆ ನೋಂದಾಯಿಸಿಕೊಳ್ಳಲು ಕಾಪು ತಾಲ್ಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಸೂಚಿಸಿದ್ದಾರೆ.

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶಕುಂತಲಾ ಪೂಜಾರಿ ನಿಧನ

Posted On: 22-11-2023 08:06PM

ಉಚ್ಚಿಲ : ಇಲ್ಲಿನ ಬಡಾ ಗ್ರಾಮ ಪಂಚಾಯತಿಯ ಮಾಜಿ ಸದಸ್ಯೆ ಶಕುಂತಲಾ ಪೂಜಾರಿ (75) ಮಂಗಳವಾರ ರಾತ್ರಿ ಹೃದಯಘಾತದಿಂದ ಮೃತ ಪಟ್ಟಿದ್ದಾರೆ.

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಶಕುಂತಲಾರವರು ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು.

ಉಚ್ಚಿಲ ಬಡ ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಕುಮಾರ್ ಮೆಂಡನ್, ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮೃತರ ಅಂತಿಮ ದರ್ಶನ ಪಡೆದರು.

ಬೆಳಪುವಿನ ರುದ್ರ ಭೂಮಿಯಲ್ಲಿ ಬುಧವಾರ ಅಂತಿಮ ಸಂಸ್ಕಾರ ನಡೆಸಲಾಯಿತು. ಮೃತರು ಮಗ, ಸೊಸೆ, ಮೊಮ್ಮಗಳು ಹಾಗೂ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ.

ಕೇರಳ ರಾಜ್ಯದ 2023 ರ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಾಕರ ಬಿ ಶೆಟ್ಟಿ ಕಳತ್ತೂರು

Posted On: 22-11-2023 07:57PM

ಕೇರಳ ರಾಜ್ಯ ಕಾಸರಗೋಡುನಲ್ಲಿ ನಡೆದ ಗಡಿನಾಡ ಸಾಹಿತ್ಯ ಅಕಾಡೆಮಿ (ರಿ.) ಕಾಸರಗೋಡು ಇವರ ಆಶ್ರಯದಲ್ಲಿ ನಡೆದ 2023 ರ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಳತ್ತೂರು ದಿವಾಕರ ಬಿ ಶೆಟ್ಟಿ ಪುರಸ್ಕೃತರಾಗಿದ್ದಾರೆ.

ಪತ್ರಿಕೋದ್ಯಮ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಕಂಡು ಈ ಪ್ರಶಸ್ತಿ ನೀಡಿದ್ದಾರೆ ಪ್ರಶಸ್ತಿಯನ್ನು ಕೇಂದ್ರದ ಮಾಜಿ ಸಚಿವರಾದ ಪ್ರಸ್ತುತ ಸಂಸದರಾದ ರಮೇಶ್ ಚಂದ್ರಪ್ಪ ಜಿಗಜಿಣಗಿ ಇವರು ಪ್ರಶಸ್ತಿ ವಿತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ ,ಒಡಿಯೂರು ಸಂಸ್ಥಾನದ ಸಾದ್ವಿ ಮಾತಾನಂದಮಾಯಿ ಶ್ರೀ ಕ್ಷೇತ್ರ ಓಡಿಯೂರು, ಮಂಜೇಶ್ವರ ಶಾಸಕರಾದ ಕೆ. ಎಂ ಅಶ್ರಫ್, ಗಡಿನಾಡ ಸಾಹಿತ್ಯ ಅಕಾಡೆಮಿ(ರಿ.) ಇದರ ಸ್ಥಾಪಕಧ್ಯಕ್ಷರಾದ ಎಸ್ ಪ್ರದೀಪ್ ಕಲ್ಕೂರ, ಗಡಿನಾಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಣಿಯಪ್ಪ ನಾಯ್ಕ್ ಏನ್, ಕಾರ್ಯದರ್ಶಿ ಅಖಿಲೇಶ್ ನಗುಮುಗಮ್, ಕೋಶಾಧಿಕಾರಿ ಝೆಡ್ ಎ ಕಯ್ಯಾರ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿಯ ಖ್ಯಾತ ಛಾಯಾಗ್ರಾಹಕ ಪ್ರಸಾದ್ ಜತ್ತನ್ ರಿಗೆ ಅಂತಾರಾಷ್ಟ್ರೀಯ ಗೌರವ

Posted On: 22-11-2023 07:48PM

ಉಡುಪಿ : ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದಲ್ಲಿ 85ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಂಗ ಸಂಸ್ಥೆಯನ್ನು ಹೊಂದಿರುವ UNESCO ಮಾನ್ಯತೆ ಪಡೆದ ವಿಶ್ವದ ಏಕೈಕ ಸಂಸ್ಥೆಯಾದ FIAP ವತಿಯಿಂದ ಉಡುಪಿಯ ಖ್ಯಾತ ಛಾಯಾಗ್ರಾಹಕ ಪ್ರಸಾದ್ ಜತ್ತನ್ ಅವರಿಗೆ ಅಂತಾರಾಷ್ಟ್ರೀಯ EFIAP Distinction ಗೌರವ ಲಭಿಸಿದೆ.

ಈ ಗೌರವ ಲಭಿಸಲು 20ಕ್ಕೂ ಅಧಿಕ ದೇಶಗಳಲ್ಲಿ ಚಿತ್ರಗಳು ಪ್ರದರ್ಶನಗೊಂಡಿರಬೇಕು. ಕನಿಷ್ಠ ಹೊರಗಿನ 2 ದೇಶಗಳಲ್ಲಾದರೂ ಪ್ರಶಸ್ತಿ ಬಂದಿರಬೇಕು ಮತ್ತು ಕನಿಷ್ಠ 250 ಚಿತ್ರಗಳು ಆಯ್ಕೆಗೊಂಡಿರಬೇಕು.

ಇವರ ಛಾಯಾಚಿತ್ರಗಳು ಅಮೇರಿಕ,ಇಂಗ್ಲೆಂಡ್, ಸಿಂಗಾಪುರ್, ಸ್ವಿಟ್ಜರ್ಲ್ಯಾಂಡ್, ಪೋಲೆಂಡ್ ಮತ್ತು ಗ್ರೀಸ್ ಮುಂತಾದ 21 ದೇಶಗಳಲ್ಲಿ ಪ್ರದರ್ಶನ ಕಂಡಿವೆ, ಇವರು ಉಡುಪಿಯ ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ಅವರ ಶಿಷ್ಯ.

ಉಡುಪಿ ಜಿಲ್ಲಾಧಿಕಾರಿ ಭೇಟಿಯಾಗಿ ಬರ, ಬೆಲೆ ಸಮೀಕ್ಷೆ ವರದಿ ಸಲ್ಲಿಸಿದ ಜಿಲ್ಲೆಯ ಜೆಡಿಎಸ್ ತಂಡ

Posted On: 22-11-2023 06:58PM

ಉಡುಪಿ : ಮಾಜಿ ಪ್ರಧಾನಿ ದೇವೇಗೌಡರ ಮತ್ತು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠರ ಸೂಚನೆಯಂತೆ ಉಡುಪಿ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿಯವರ ನೇತೃತ್ವದ ತಂಡವು ಉಡುಪಿ ಜಿಲ್ಲೆಯಲ್ಲಿ ಬರ ಹಾಗೂ ಬೆಲೆ ಸಮೀಕ್ಷೆಯನ್ನು ನಡೆಸಿ ರೈತರಿಗಾಗಿರುವ ಸಮಸ್ಯೆಯನ್ನು ಪರಿಶೀಲನೆ ನಡೆಸಿ ಬುಧವಾರ ಉಡುಪಿ ಜಿಲ್ಲಾಧಿಕಾರಿಯಾದ ಡಾ. ಕೆ ವಿದ್ಯಾ ಕುಮಾರಿಯವರಿಗೆ ಪಕ್ಷದ ವತಿಯಿಂದ ವರದಿಯನ್ನು ಸಲ್ಲಿಸಿದರು.

ಈ ಸಂದರ್ಭ ಕಾರ್ಯಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಶ್ರೀಕಾಂತ್ ಪೂಜಾರಿ ಹೆಬ್ರಿ, ರಮೇಶ್ ಕುಂದಾಪುರ, ರಝಕ್ ಉಚ್ಚಿಲ, ವೆಂಕಟೇಶ್, ಅಶ್ರಫ್, ಅಮಿರ್ ಶಿರ್ವ, ಉದಯ ಶೆಟ್ಟಿ, ರವಿರಾಜ್ ಸಾಲ್ಯಾನ್, ಬಿ.ಕೆ ಹೆಜಮಾಡಿ ಮತ್ತು ರಶೀದ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಜೆಡಿಎಸ್ ತಂಡದಿಂದ ನೇಜಾರುವಿನ ಮೃತ ಆಯ್ನಾಝ್ ತಂದೆ, ಕುಟುಂಬಸ್ಥರ ಭೇಟಿ

Posted On: 22-11-2023 06:39PM

ಉಡುಪಿ : ಜೆಡಿಎಸ್ ಜಿಲ್ಲಾಧ್ಯಕ್ಷರ ಸಹಿತ ಪದಾಧಿಕಾರಿಗಳು ನೇಜಾರಿನಲ್ಲಿ ಹತ್ಯೆಗೀಡಾದವರ ಮನೆಗೆ ಭೇಟಿ‌ ನೀಡಿ ಸಾಂತ್ವನ ಹೇಳಿದರು.

ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿಯವರು ಮೃತ ಆಯ್ನಾಝ್ ತಂದೆ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕರೆಮಾಡಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಶ್ರೀಕಾಂತ್ ಪೂಜಾರಿ ಹೆಬ್ರಿ, ರಝಕ್ ಉಚ್ಚಿಲ, ವೆಂಕಟೇಶ್, ಅಶ್ರಫ್, ಅಮಿರ್ ಶಿರ್ವ, ಉದಯ ಶೆಟ್ಟಿ, ಬಿ.ಕೆ ಹೆಜಮಾಡಿ ಮತ್ತು ರಶೀದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ : ಕಾಪು ವಲಯದ ಪದಪ್ರದಾನ ಸಮಾರಂಭ

Posted On: 22-11-2023 07:41AM

ಕಾಪು : ಬೇರೆಯವರ ಮುಖದಲ್ಲಿ ನಗು ತರಿಸುವ ಛಾಯಾಗ್ರಾಹಕರ ಕಾರ್ಯ ದೇವರು ಮೆಚ್ಚುವಂತದ್ದು. ತಂತ್ರಜ್ಞಾನ ಬದಲಾವಣೆಗೆ ತಕ್ಕಂತೆ ಛಾಯಾಗ್ರಾಹಕರು ಇರಬೇಕಾಗಿದೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ‌ಗುರ್ಮೆ ಹೇಳಿದರು. ಅವರು ಮಂಗಳವಾರ ಕಾಪುವಿನ ಹೋಟೆಲ್ ಕೆ 1 ನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಇದರ ಕಾಪು ವಲಯದ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಧಿಕಾರ ಹಸ್ತಾಂತರ : ಎಸ್ ಕೆ ಪಿ ಎ ದ.ಕ, ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಸಮ್ಮುಖದಲ್ಲಿ ಎಸ್ ಕೆ ಪಿ ಕಾಪು ವಲಯದ ಅಧ್ಯಕ್ಷ ವಿನೋದ್ ಕಾಂಚನ್ ನಿಯೋಜಿತ ಅಧ್ಯಕ್ಷ ಸಚಿನ್ ಉಚ್ಚಿಲ ಅವರಿಗೆ, ಕಾರ್ಯದರ್ಶಿ ರಾಜೇಶ್ ಶಂಕರಪುರ ನಿಯೋಜಿತ ಕಾರ್ಯದರ್ಶಿ ರಾಘವೇಂದ್ರ ಭಟ್ ಅವರಿಗೆ, ಕೋಶಾಧಿಕಾರಿ ರಾಘವೇಂದ್ರ ಭಟ್ ನಿಯೋಜಿತ ಕೋಶಾಧಿಕಾರಿ ಕಿರಣ್ ಕಾಪುರವರಿಗೆ ಅಧಿಕಾರ ಹಸ್ತಾಂತರಿಸಿದರು. ಸನ್ಮಾನ : ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ರಂಗಕರ್ಮಿ ಗಣೇಶ್ ರಾವ್ ಎಲ್ಲೂರು, ನೂತನ ಅಧ್ಯಕ್ಷ ಸಚಿನ್ ಉಚ್ಚಿಲ, ನಿರ್ಗಮಿತ ಅಧ್ಯಕ್ಷ ವಿನೋದ್ ಕಾಂಚನ್ ದಂಪತಿಗಳನ್ನು ಸನ್ಮಾನಿಸಲಾಯಿತು. ಬಹುಮಾನ ವಿತರಣೆ : ಉಚ್ಚಿಲ ದಸರಾ ಬಗ್ಗೆ ಆಯೋಜಿಸಲಾದ ವಿಡಿಯೋಗ್ರಫಿ ಸ್ಪರ್ಧಾ ವಿಭಾಗದಲ್ಲಿ ಸಂತೋಷ್ ಕಾಪು (ಪ್ರಥಮ), ರಾಘವೇಂದ್ರ ಜೋಗಿ (ದ್ವಿತೀಯ), ಪ್ರಕಾಶ್ ಆಚಾರ್ಯ (ತೃತೀಯ), ಛಾಯಾಗ್ರಹಣ ವಿಭಾಗದಲ್ಲಿ ಪ್ರದೀಪ್ ಉಪ್ಪೂರು (ಪ್ರಥಮ), ಹರೀಶ್ ಆಚಾರ್ಯ ಉಡುಪಿ (ದ್ವಿತೀಯ), ರತನ್ ಶೆಟ್ಟಿ (ತೃತೀಯ) ಬಹುಮಾನ ಪಡೆದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಕೆ ಪಿ ಎ ದ.ಕ, ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ವಹಿಸಿದ್ದರು. ಈ ಸಂದರ್ಭ ಮೊಗವೀರ ಮಹಾಜನ ಸಂಘ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಎಸ್ ಕೆ ಪಿ ಎ ದ.ಕ ಮತ್ತು ಉಡುಪಿ ಸಂಚಾಲಕರಾದ ಕರುಣಾಕರ ಕಾನಂಗಿ, ಎಸ್ಕೆಪಿಎ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್ ಬಂಟ್ವಾಳ, ಎಸ್ ಕೆ ಪಿ ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ,ಎಸ್ ಕೆಪಿಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಎಸ್ ಕೆ ಪಿ ಎ ಉಪಾಧ್ಯಕ್ಷ ಜಯಕರ ಸುವರ್ಣ, ಪದಾಧಿಕಾರಿಗಳಾದ ಕರುಣಾಕರ ನಾಯಕ್, ಸತೀಶ್ ಶರ್ಮಾಳು, ಸಂತೋಷ್ ಕಾಪು, ದೀಪಕ್ ಶೆಣೈ, ಕಿರಣ್ ಕಾಪು, ಪ್ರವೀಣ್ ಕಾಪು, ಅರುಲ್ ಶಿರ್ವ, ವಿಕ್ರಂ ಭಟ್, ಉದಯ ಇನ್ನಾ, ವೀರೇಂದ್ರ ಶಿರ್ವ, ವಿನೋದ್ ಕಾಂಚನ್, ಕೃಷ್ಣರಾವ್, ರವಿ ಕುಮಾರ್, ಶ್ರೀನಿವಾಸ ಐತಾಳ್, ಉದಯ್ ಮುಂಡ್ಕೂರು, ಅಶೋಕ್ ಪಡುಬಿದ್ರಿ, ಅಶೋಕ್ ಸುರಭಿ, ಇರ್ಷಾದ್ ಬೆಳಪು, ರವಿರಾಜ್ ಶೆಟ್ಟಿ ಬೆಳ್ಮಣ್ ಮತ್ತಿತರರು ಉಪಸ್ಥಿತರಿದ್ದರು.

ರವಿ ಕುಮಾರ್ ಕಟಪಾಡಿ ಸ್ವಾಗತಿಸಿದರು. ರಾಘವೇಂದ್ರ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಭಟ್ ವಂದಿಸಿದರು.

ಶಿರ್ವ : ಸಾಹಿತ್ಯಕ್ಕೆ ಜಾತಿ ಧರ್ಮದ ಬೇಧವಿಲ್ಲ ಅದು ಎಲ್ಲರನ್ನೂ ಒಂದುಗೂಡಿಸುತ್ತದೆ - ಪ್ರೊ.ವೈ.ಭಾಸ್ಕರ್ ಶೆಟ್ಟಿ

Posted On: 21-11-2023 04:05PM

ಶಿರ್ವ : ದೇಶಾಭಿಮಾನದ ಜೊತೆಗೆ ಭಾಷಾಭಿಮಾನ ಕೂಡ ಇರಬೇಕು. ಭಾಷೆಯ ಮೇಲೆ ಅಭಿಮಾನ ಇರಬೇಕು ಹೊರತು ಅಹಂಕಾರ ಇರಬಾರದು. ಸಾಹಿತ್ಯಕ್ಕೆ ಜಾತಿ ಧರ್ಮದ ಬೇಧವಿಲ್ಲ ಅದು ಎಲ್ಲರನ್ನೂ ಒಂದುಗೂಡಿಸುತ್ತದೆ. ಲಕ್ಷ ಲಕ್ಷದಲ್ಲಿ ಜನಪ್ರತಿನಿಧಿಗಳು ತಮಗಾಗಿ ವೆಚ್ಚ ಮಾಡುತ್ತಿರುವಾಗ ಅವರಿಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಲಕ್ಷ್ಯವಿಲ್ಲ. ಇದು ರಾಜಕೀಯ ವ್ಯವಸ್ಥೆಯ ದುರಂತವಾಗಿದೆ ಎಂದು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ್ ಶೆಟ್ಟಿ ಹೇಳಿದರು. ಅವರು‌ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಮಾಸಾಚಾರಣೆ ಸಂಪದ - 2023 ತಿಂಗಳ ಸಡಗರ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಶಿರ್ವದ ಎಂ. ಎಸ್. ಆರ್. ಎಸ್ ಕಾಲೇಜಿನಲ್ಲಿ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ‌ ವಿದ್ಯಾ ಅಮ್ಮಣ್ಣಾಯ ಮಾತನಾಡಿ ಅಮ್ಮನ ಮಡಿಲಿನಿಂದ ಸಾಹಿತ್ಯವು ಆರಂಭವಾಗಿ ನಮ್ಮ ಬದುಕಿನ ಉದ್ದಕ್ಕೂ ಇರುತ್ತದೆ. ಸಾಹಿತ್ಯವು ಪದಗಳ ಜೋಡಣೆಯೊಂದಿಗೆ, ಅನುಭವ ಜೊತೆಗೆ ಭಾವನಾತ್ಮಕತೆಯನ್ನು ಹೊಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ‌ಕಾಪು ತಾಲೂಕು ಘಟಕದ ಅಧ್ಯಕ್ಷರಾದ ‌ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ‌ಪರಿಷತ್ತಿನ ಪ್ರತಿನಿಧಿ‌ ದೇವದಾಸ ಹೆಬ್ಬಾರ್, ಎಂ. ಎಸ್. ಆರ್. ಎಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ನಯನ ಪಕ್ಕಳ, ಕಾಪು ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ದೀಪಕ್ ಕೆ. ಬೀರ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ‌ಪರಿಷತ್ತಿನ ಪ್ರತಿನಿಧಿ‌ ದೇವದಾಸ ಹೆಬ್ಬಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ಎಂ. ಎಸ್. ಆರ್. ಎಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ವರಮಹಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ವಂದಿಸಿದರು.

ಹೆಜಮಾಡಿ‌ : ಫಾತಿಮಾ ರಲಿಯಾ ಅವರ 'ಕಡಲು ನೋಡಲು ಹೋದವಳು' ಕೃತಿ ಪಿ. ಲಂಕೇಶ್ ಪ್ರಶಸ್ತಿಗೆ ಆಯ್ಕೆ

Posted On: 21-11-2023 03:44PM

ಹೆಜಮಾಡಿ : ಗ್ರಾಮದ ಫಾತಿಮಾ ರಲಿಯಾ ಅವರ 'ಕಡಲು ನೋಡಲು ಹೋದವಳು' ಕೃತಿ ಶಿವಮೊಗ್ಗದ ಕರ್ನಾಟಕ ಸಂಘ ಪ್ರತೀ ವರ್ಷ ನೀಡುವ ಪಿ. ಲಂಕೇಶ್ ಪ್ರಶಸ್ತಿಗೆ ಆಯ್ಕೆಯಾಗಿದೆ.

ನವೆಂಬರ್ 26ರಂದು ಶಿವಮೊಗ್ಗದ ಹಸೂಡಿ ವೆಂಕಟ ಶಾಸ್ತ್ರಿಗಳ ಸಾಹಿತ್ಯ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಹತ್ತು ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿದೆ. ಫಾತಿಮಾ ರಲಿಯಾರವರ ಪ್ರಥಮ ಕೃತಿಯಾಗಿದೆ. ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.

ಡಿಸೆಂಬರ್ 24 : ಪಲಿಮಾರಿನಲ್ಲಿ ರಕ್ತದಾನ ಶಿಬಿರ

Posted On: 21-11-2023 02:47PM

ಪಲಿಮಾರು : ಹೊಯಿಗೆ ಫ್ರೆಂಡ್ಸ್ ಹೊಯಿಗೆ (ರಿ.) ಪಲಿಮಾರು, ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಡಿಸೆಂಬರ್ 24, ಆದಿತ್ಯವಾರ ಬೆಳಿಗ್ಗೆ 8 ರಿಂದ ಅಪರಾಹ್ನ 2 ರವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಪಲಿಮಾರು : ಹೊಯಿಗೆ ಫ್ರೆಂಡ್ಸ್ ಹೊಯಿಗೆ (ರಿ.) ಪಲಿಮಾರು, ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಡಿಸೆಂಬರ್ 24, ಆದಿತ್ಯವಾರ ಬೆಳಿಗ್ಗೆ 8 ರಿಂದ ಅಪರಾಹ್ನ 2 ರವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರಿತೇಶ್ ದೇವಾಡಿಗ : 8660365719 ಹರೀಶ್ : 9964553031