Updated News From Kaup
ಜುಲೈ 22 : ದೊಂದಿ ಬೆಳಕಿನ ಕೊರಗಜ್ಜ ದೈವದ ನೇಮೋತ್ಸವ

Posted On: 17-07-2023 07:34PM
ಉಡುಪಿ : ಇಲ್ಲಿನ ವುಡ್ಲ್ಯಾಂಡ್ಸ್ ಹೋಟೆಲ್ ಹತ್ತಿರದ ಬೊಬ್ಬರ್ಯಕಟ್ಟೆ ಶ್ರೀ ಬೊಬ್ಬರ್ಯ, ಕಾಂತೇರಿ ಜುಮಾದಿ ಹಾಗೂ ಕಲ್ಕುಡ, ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಬೊಬ್ಬರ್ಯ ಯುವ ಸೇವಾ ಸಮಿತಿ ಉಡುಪಿ ಸುಪ್ರಸಾದ್ ಶೆಟ್ಟಿ ಅಭಿಮಾನಿ ಬಳಗ ಉಡುಪಿ ಹಾಗೂ ಮಮತಾ ಪಿ. ಶೆಟ್ಟಿ ಅಭಿಮಾನಿ ಬಳಗ ಉಡುಪಿ ಇವರ ವತಿಯಿಂದ ದೊಂದಿ ಬೆಳಕಿನ ಕೊರಗಜ್ಜ ದೈವದ ನೇಮೋತ್ಸವ ಜುಲೈ 22, ಶನಿವಾರ ಸಂಜೆ 7 ಗಂಟೆಗೆ ಜರಗಲಿದೆ.
ನೇಮೋತ್ಸವದ ನೇರ ಪ್ರಸಾರವವು ನಮ್ಮ ಉಡುಪಿ ಟಿ.ವಿ. ಚಾನೆಲ್ ಹಾಗೂ ಫೇಸ್ಬುಕ್ ಪೇಜ್ನಲ್ಲಿ ಪ್ರಸಾರವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಟಿಪ್ಪರ್ನ ಹಿಂಬದಿಗೆ ಸಿಲುಕಿದ ಕಾರು ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ; ಪ್ರಕರಣ ದಾಖಲು

Posted On: 17-07-2023 07:05PM
ಪಡುಬಿದ್ರಿ : ಟಿಪ್ಪರ್ನ ಹಿಂಬದಿಗೆ ಸಿಲುಕಿದ ಸ್ಯಾಂಟ್ರೋ ಕಾರನ್ನು ಕಿಲೋಮೀಟರ್ ದೂರ ಟಿಪ್ಪರ್ ಎಳೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

ಕಾರು ಸಾಗರದಿಂದ ಮಂಗಳೂರು ಕಡೆ ಹಾಗೂ ಟಿಪ್ಪರ್ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಬಳಿಕ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದ ಸಾರ್ವಜನಿಕರು ಬೈಯ್ದು ನಿಲ್ಲಿಸಿದ್ದು, ಪಡುಬಿದ್ರಿ ಪೊಲೀಸರು ಟಿಪ್ಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯವಾಗಿದ್ದು, ಗಾಯಗಳನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವ ಜನತೆ ಉನ್ನತ ಸಾಧನೆಯ ಗುರಿ ಇಟ್ಟುಕೊಳ್ಳಬೇಕು : ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ.

Posted On: 17-07-2023 06:33PM
ಉಡುಪಿ : ಯುವ ಜನತೆ ತಮ್ಮ ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಸ್ಪಷ್ಟ ಗುರಿ ಇಟ್ಟುಕೊಂಡು, ಆ ಗುರಿ ತಲುಪಲು ನಿರಂತರವಾಗಿ ಪರಿಶ್ರಮ ಪಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆದ ಆಗ್ನಿಪಥ್ ಸೇನಾ ನೇಮಕಾತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಯುವಜನತೆ ತಾವು ಇಟ್ಟುಕೊಂಡ ಗುರಿ ಸಾಧನೆಗೆ ಕಠಿಣ ಶ್ರಮ ಪಡಬೇಕು. ಶ್ರಮ ಪಟ್ಟರೆ ಸ್ವಲ್ಪ ತಡವಾದರೂ ಉತ್ತಮ ಪ್ರತಿಫಲ ದೊರಕೇ ದೊರೆಯುತ್ತದೆ. ಯಾವುದೇ ಸಂದರ್ಭದಲ್ಲಿ ನಿರಾಶರಾಗದೇ ಮುಂದೆ ಸಾಗಿದ್ದಲ್ಲಿ ಯಶಸ್ಸು ಸಿಗಲಿದೆ. ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡುವ ನಿಟ್ಟಿನಲ್ಲಿ ಯುವ ಜನತೆ ಕಾರ್ಯೋನ್ಮುಖರಾಗಬೇಕು ಎಂದರು. ಉನ್ನತ ಧ್ಯೇಯದಿಂದ ಅಗ್ನಿಪಥ್ ಮೂಲಕ ದೇಶರಕ್ಷಣೆಗಾಗಿ ಸೇನೆಗೆ ಸೇರ್ಪಡೆಯಾಗುತ್ತಿರುವ ಯುವಜನರ ಕನಸು ಸಾಕಾರಗೊಂಡು ಯಶಸ್ಸು ದೊರೆಯಲಿ, ಮುಂದಿನ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಸೇನೆಯ ಮೇಜರ್ ಜನರಲ್ ಆರ್.ಆರ್.ರೈನಾ, ವಿಶಿಷ್ಠ ಸೇವಾ ಮೆಡಲ್, ಅಡಿಷನಲ್ ಡೈರಕ್ಟರ್ ಜನರಲ್, ನೇಮಕಾತಿ ವಿಭಾಗ ಮತ್ತು ಮಂಗಳೂರು ಸೇನಾ ನೇಮಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ಅನುಜ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.
ಇಂದು ನಡೆದ ರ್ಯಾಲಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 41, ಉಡುಪಿಯ 59, ದ.ಕನ್ನಡದ 88, ದಾವಣಗೆರೆಯ 91, ಶಿವಮೊಗ್ಗದ 92 ಹಾಗೂ ಹಾವೇರಿ ಜಿಲ್ಲೆಯ 294 ಸೇರಿದಂತೆ ಒಟ್ಟು 665 ಅಭ್ಯರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 6.30 ರಿಂದ ನಡೆದ ಓಟದ ಸ್ಪರ್ಧೆಯಲ್ಲಿ ಅಭ್ಯರ್ಥಿಗಳನ್ನು ತಲಾ 100 ಜನರಂತೆ ತಂಡಗಳಾಗಿ ವಿಂಗಡಿಸಲಾಗಿದ್ದು, ನಿಗದಿತ ದೂರ 1600 ಮೀ. (ಕ್ರೀಡಾಂಗಣದ 4 ಸುತ್ತು) ನ್ನು 5.30 ನಿಮಿಷದೊಳಗೆ ಪೂರ್ಣಗೊಳಿಸಿದವರನ್ನು ಮತ್ತು 5.30 ರಿಂದ 5.45 ನಿಮಿಷದೊಳಗೆ ಪೂರ್ಣಗೊಳಿಸಿದವರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿತು. ಅದರ ನಂತರ ಓಡಿದ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಯಿತು. ಕೆಲವೇ ಸೆಕಂಡ್ಗಳ ಅಂತರದಲ್ಲಿ ಓಟವನ್ನು ಪೂರ್ಣಗೊಳಿಸಲಾಗದೇ ವಿಫಲರಾದ ಹಲವು ಅಭ್ಯರ್ಥಿಗಳು ಸ್ಥಳದಲ್ಲೇ ರೋಧಿಸಿ, ತಮ್ಮನ್ನು ಅರ್ಹತೆಗೆ ಪರಿಗಣಿಸುವಂತೆ ಸೇನೆಯ ಅಧಿಕಾರಿಗಳಲ್ಲಿ ಬೇಡಿಕೊಳ್ಳುತ್ತಿದ್ದರು. ಆದರೆ ಸೇನೆಯ ಅಧಿಕಾರಿಗಳು ಅವರನ್ನು ಮುಂದಿನ ರ್ಯಾಲಿಯಲ್ಲಿ ಮತ್ತೊಮ್ಮೆ ಪ್ರಯತ್ನಿಸುವಂತೆ ಸಮಾಧಾನ ಮಾಡಿ ಕಳುಹಿಸುತ್ತಿದ್ದರು. 4 ಓಟದ ಸ್ಪರ್ಧೆಯಲ್ಲಿ ಸಂಪೂರ್ಣ ನಿತ್ರಾಣರಾದವರಿಗೆ ತುರ್ತು ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲು ಅಂಬುಲೆನ್ಸ್ ಸಹಿತ ವೈಧ್ಯಾಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಸ್ಥಳದಲ್ಲಿ ಯಾವುದೇ ಗದ್ದಲ, ನೂಕು ನುಗ್ಗಲು ಉಂಟಾಗದಂತೆ ಪೊಲೀಸ್ ಸಿಬ್ಬಂದಿ ಅಗತ್ಯ ಮುಂಜಾಗ್ರತೆ ವಹಿಸಿದ್ದರು. ರ್ಯಾಲಿಯಲ್ಲಿ ಅಭ್ಯರ್ಥಿಗಳಿಗೆ 1600 ಮೀ ಓಟದ ಜೊತೆಗೆ 9 ಅಡಿ ಕಂದಕ ಜಿಗಿತ, ಫುಲ್ ಅಪ್, ಎತ್ತರ, ಎದೆಯ ಸುತ್ತಳತೆ ಮತ್ತು ತೂಕ ಹಾಗೂ ವೈದ್ಯಕೀಯ ಪರೀಕ್ಷೆ ಮುಂತಾದ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜುಲೈ 17 ರಿಂದ 25 ರ ವರೆಗೆ ನಡೆಯುವ ರ್ಯಾಲಿಗೆ ಜಿಲ್ಲಾಡಳಿದ ಮೂಲಕ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಅಭ್ಯರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 6,800 ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಂಡಿದ್ದು, ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮೆನ್, ಅಗ್ನಿವೀರ್ ಕ್ಲಕ್/ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.
ಮೀನುಗಾರರಿಗೆ ಸಾಮೂಹಿಕ ಅಪಘಾತ ವಿಮಾ ಯೋಜನೆ

Posted On: 17-07-2023 06:25PM
ಉಡುಪಿ : ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯತ್ವ ಹೊಂದಿರುವ 18 ರಿಂದ 60 ವರ್ಷದೊಳಗಿನ ಮೀನುಗಾರರು, ಮೀನುಗಾರಿಕೆಯಲ್ಲಿ ಹಾಗೂ ಮೀನುಗಾರಿಕೆಗೆ ಪೂರಕವಾದ ಇತರೇ ಚಟುವಟಿಕೆಗಳಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಅಥವಾ ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಿಂದ ಜೀವ ಹಾನಿಯಾದಲ್ಲಿ ಅಂತಹ ಕುಟುಂಬದವರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ಸಾಮೂಹಿಕ ಅಪಘಾತ ವಿಮಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.
ಮೀನುಗಾರಿಕೆ ಸಹಕಾರ ಸಂಘದ ಸದಸ್ಯತ್ವ ಹೊಂದಿರುವ ಮೀನುಗಾರರ ಹಾಗೂ ವಿಮೆ ಸೌಲಭ್ಯಕ್ಕಾಗಿ ನಾಮನಿರ್ದೇಶನ ಮಾಡುವ ಕುಟುಂಬ ಸದಸ್ಯರ ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಪ್ರತಿ ಹಾಗೂ ಇತರೆ ವಿವರಗಳನ್ನು ತಾವು ಸದಸ್ಯತ್ವ ಹೊಂದಿರುವ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಜುಲೈ 28 ರ ಒಳಗೆ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಆಟಿ ಅಮಾವಾಸ್ಯೆಯ ಕಷಾಯ ವಿತರಣೆ

Posted On: 17-07-2023 05:44PM
ಪಡುಬಿದ್ರಿ : ಇಲ್ಲಿನ ಸಾಯಿ ಆರ್ಕೇಡ್ ನಲ್ಲಿ ಸಾರ್ವಜನಿಕರಿಗೆ ಆಟಿ ಅಮಾವಾಸ್ಯೆಯ ಕಷಾಯ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಹಿರಿಯ ತುಳು ಜಾನಪದ ವಿದ್ವಾಂಸರಾದ ಸದಾನಂದ ಪಿ.ಕೆ, ಆಷಾಢ ಮಾಸದ (ಆಟಿ ಅಮಾವಾಸ್ಯೆ) ಹಾಲೆ ಮರದ ಕೆತ್ತೆಯನ್ನು ನಡುರಾತ್ರಿ ವಿವಸ್ತ್ರವಾಗಿ ಹೋಗಿ ಕಲ್ಲಿನಿಂದ ಕೆತ್ತಿ ತಂದು ಮೇಲಿನ ತೊಗಟೆಯನ್ನು ತೆಗದು , ಗುದ್ದಿ ರಸ ತೆಗದು ಆ ಮೇಲೆ ಬೆಳ್ಳುಳ್ಳಿ , ಕರಿ ಮೆಣಸು ಮತ್ತು ಓಮವನ್ನು ಸೇರಿಸಿ ಅದನ್ನು ಸರಿಯಾದ ರೀತಿಯಲ್ಲಿ ಹುರಿದು, ಕಷಾಯ ದಲ್ಲಿರುವ ಶೀತದ ಅಂಶವನ್ನು ತೆಗೆಯುವ ಉದ್ದೇಶ ದಿಂದ ಕಾಯಿಸಿದ ಬಿಳಿ ಬೋರ್ಗಲ್ಲನ್ನು ಕಷಾಯಕ್ಕೆ ಹಾಕಿ ನಂತರ ತೆಗೆದು ತಯಾರಿಸುವ ಕಷಾಯವೇ ಆಟಿ ಅಮಾವಾಸ್ಯೆ ಕಷಾಯ ಆಗಿದೆ ಎಂದರು.
ಈ ಸಂದರ್ಭದಲ್ಲಿ ಗಾ.ಪಂ. ಅಧ್ಯಕ್ಷ ರವಿ ಶೆಟ್ಟಿ, ಸದಸ್ಯೆ ವಿದ್ಯಾಶ್ರೀ , ಹೆಜಮಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಹಿತೇಶ್ ಪಡುಬಿದ್ರಿ, ಶೀಲಾ ಪಡುಬಿದ್ರಿ ಉಪಸ್ಥಿತರಿದ್ದರು.
ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ನಾಲ್ಕನೇ ವರುಷದ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಣೆ

Posted On: 17-07-2023 05:30PM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಸಂಸ್ಥೆಯ ವತಿಯಿಂದ ಸತತ ನಾಲ್ಕನೇ ವರುಷದ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಿಸಲಾಯಿತು.
ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ, ಶರತ್ ಉಡುಪ, ಹೊಯಿಗೆ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ರಿತೇಶ್ ದೇವಾಡಿಗ, ಉಪಾಧ್ಯಕ್ಷ ಸಂತೋಷ್ ದೇವಾಡಿಗ, ಕಾರ್ಯದರ್ಶಿ ಸತೀಶ ಕುಮಾರ್, ರಾಘವೇಂದ್ರ ಸುವರ್ಣ, ಲಕ್ಷ್ಮಣ್ ಕೋಟ್ಯಾನ್, ಅರುಣ್ ಪೂಜಾರಿ, ರೋಷನ್, ಶ್ರೀನಿತ್, ಶ್ರೀಜಿತ್, ಅಂಕಿತ್ ಉಪಸ್ಥಿತರಿದ್ದರು.
ಮೂಳೂರು : ಸತತ 8ನೇ ವರ್ಷದ ಆಟಿ ಕಷಾಯ ವಿತರಣೆ

Posted On: 17-07-2023 05:24PM
ಮೂಳೂರು : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು, ಟ್ರಸ್ಟ್ ಸದಸ್ಯರು ಹಾಗೂ ಸಂಜೀವ ಪೂಜಾರಿ ಸಹಕಾರದೊಂದಿಗೆ ಆಟಿ ಅಮಾವಾಸ್ಯೆಯ ಪ್ರಯುಕ್ತ ಸತತ 8ನೇ ವರ್ಷ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಸರಕಾರಿ ಸಂಯುಕ್ತ ಶಾಲೆ ಮೂಳೂರಿನಲ್ಲಿ ಉಚಿತವಾಗಿ ವಿತರಿಸುವ ಮೂಲಕ ಈ ಪುರಾತನ ಸಂಪ್ರದಾಯದ ಪ್ರಯೋಜನವನ್ನು ಸುಮಾರು ೧೨೦೦ ಜನರು ಪಡೆದರು.
ಗೌರವ ಸಲಹೆಗಾರರಾದ ಅಶೋಕ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ, ಟ್ರಸ್ಟೀ ನಾಗೇಶ್ ಅಮೀನ್, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಸುಖೇಶ್ ಡಿ ಮೂಳೂರು, ಅಶೋಕ್ ಕರ್ಕೇರ, ಸುಜಯ್ ಕುಕ್ಯನ್, ಅರುಣ್ ಕುಲಾಲ್, ಹವ್ಯಾಸ್ ಪೂಜಾರಿ, ಗಗನ್ ಮೆಂಡನ್, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರ ಪ್ರಯಾಣ

Posted On: 17-07-2023 04:55PM
ಉಡುಪಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯ ಸರಕಾರಿ ಬಸ್ ಗಳಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ ಜುಲೈ 14 ರ ವರೆಗೆ ಇದುವರೆಗೆ 3.62 ಕೋಟಿ ರೂ ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಮತ್ತು ಕುಂದಾಪುರ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಸಾರಿಗೆ ಈ ಎಲ್ಲಾ ವರ್ಗದಲ್ಲಿಯೂ ಮಹಿಳಾ ಪ್ರಯಾಣಿಕರ ಸಂಚಾರದಲ್ಲಿ ಗಣನೀಯ ಏರಿಕೆಯಾಗಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸುಮಾರು 25 ರಿಂದ 30 % ರಷ್ಟು ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದೆ. ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಅಂದಿನಿಂದ ಜೂನ್30 ರ ವರೆಗೆ ಉಡುಪಿ ಘಟಕದಲ್ಲಿ , ನಗರ ಸಾರಿಗೆ ಬಸ್ ಗಳಲ್ಲಿ 100838 ಮಹಿಳಾ ಪ್ರಯಾಣಿಕರು ಸಂಚರಿಸಿ 1470793 ರೂ, ವೇಗದೂತ ಬಸ್ ಗಳಲ್ಲಿ 94998 ಮಹಿಳಾ ಪ್ರಯಾಣಿಕರು ಸಂಚರಿಸಿ 7409003 ರೂ, ಸಾಮಾನ್ಯ ಬಸ್ ಗಳಲ್ಲಿ 40232 ಮಹಿಳಾ ಪ್ರಯಾಣಿಕರು ಸಂಚರಿಸಿ 794933 ರೂ, ಆದಾಯ ಬಂದಿದ್ದರೆ, ಕುಂದಾಪುರ ಘಟಕದಲ್ಲಿ ವೇಗದೂತ ಬಸ್ ಗಳಲ್ಲಿ 71410 ಮಹಿಳಾ ಪ್ರಯಾಣಿಕರು ಸಂಚರಿಸಿ 6325419 ರೂ, ಸಾಮಾನ್ಯ ಬಸ್ ಗಳಲ್ಲಿ 241497 ಮಹಿಳಾ ಪ್ರಯಾಣಿಕರು ಸಂಚರಿಸಿ 4352614 ರೂ, ಆದಾಯ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5,48,975 ಮಹಿಳಾ ಪ್ರಯಾಣಿಕರು ಸಂಚರಿಸಿ 2,03,52,762 ರೂ ಆದಾಯ ಸಾರಿಗೆ ನಿಗಮಕ್ಕೆ ಬಂದಿದೆ. ಜುಲೈ 14 ರ ವರೆಗೆ ಉಡುಪಿ ಘಟಕದಲ್ಲಿ ಒಟ್ಟು 1,92,641 ಮಹಿಳೆಯರು ಸಂಚರಿಸಿದ್ದು, 78,40,072 ರೂ ಆದಾಯ, ಕುಂದಾಪುರ ಘಟಕದಲ್ಲಿ 2,29,557 ಮಹಿಳೆಯರು ಸಂಚರಿಸಿದ್ದು, 80,88,362 ರೂ ಆದಾಯ ಗಳಿಕೆಯಾಗುವ ಮೂಲಕ ಯೋಜನೆ ಜಾರಿಗೆಯಾದಾಗಿನಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ 3.62 ಕೋಟಿ ರೂ ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾಬಲ್ಯವಿದ್ದರೂ ಸಹ ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಸರಕಾರಿ ಬಸ್ ಗಳಲ್ಲಿ ಸಂಚರಿಸಲು ಉತ್ಸಾಹ ತೋರುತ್ತಿದ್ದು, ಸರಕಾರದ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಉಡುಪಿಯ ಘಟಕದಲ್ಲಿ 65 ಬಸ್ ಮತ್ತು ಕುಂದಾಪುರ ಘಟಕದ ಬಸ್ ಗಳು 68 ಬಸ್ ಗಳು ಶಕ್ತಿ ಯೋಜನೆಯಡಿ ಪ್ರತಿದಿನ ಸೇವೆ ನೀಡುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಕಡೆಗಳಿಲ್ಲಿ ಮತ್ತು ಜಿಲ್ಲೆಯ ಹೊರಗೆ ಹಲವಾರು ಟ್ರಿಪ್ ಸಂಚರಿಸುತ್ತಿವೆ. ವಾರಾಂತ್ಯದಲ್ಲಿ ಉಡುಪಿಯ ಶ್ರೀ ಕೃಷ್ಠ ಮಠ, ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದು, ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಸಹ ಆದಾಯ ಬರುತ್ತಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಈ ಶಕ್ತಿ ಯೋಜನೆಯು ಮಹಿಳೆಯರು ಸ್ವಾಭಿಮಾನ ಮತ್ತು ಸ್ವಾವಲಂಬಿಯಾಗಿ ಬದುಕಲು ನೆರವಾಗುವುದರ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆ ಹಾಗೂ ಆರ್ಥಿಕ ಬೆಳವಣಿಗೆಗೂ ಸಹ ನೆರವು ನೀಡುತ್ತಿದ್ದು, ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರ ಸಂಖ್ಯೆಯೂ ಸಹ ಅಧಿಕಗೊಂಡಿದ್ದು, ನಷ್ಟದಲ್ಲಿದ್ದ ರಾಜ್ಯದ ಎಲ್ಲಾ ಸರ್ಕಾರಿ ಸಾರಿಗೆ ನಿಗಮಗಳು ಸಹ ಲಾಭದಾಯಕವಾಗಿ, ಶೀಘ್ರದಲ್ಲಿಯೇ ಸ್ವಾವಲಂಬನೆಯ ಹಾದಿಯಲ್ಲಿ ನಡೆಯಲಿವೆ.
ಬಂಟಕಲ್ಲು : ಆಟಿಡೊಂಜಿದಿನ ಸಂಭ್ರಮ

Posted On: 16-07-2023 10:45PM
ಬಂಟಕಲ್ಲು : ಶ್ರೀ ವಿಶ್ವಕರ್ಮ ಸಂಘ ಬಂಟಕಲ್ಲು ಇದರ ಗಾಯತ್ರಿ ಮಹಿಳಾ ಬಳಗದ ವತಿಯಿಂದ ಅಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಂಜರಪಲ್ಕೆ ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಗಾಯತ್ರಿ ಅಶೋಕ ಆಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮುಂದಿನ ಜನಾಂಗದ ಏಳಿಗೆಗಾಗಿ ನಮ್ಮ ಬದುಕಿನ ಚಿತ್ರಣ, ಕಷ್ಟದ ಜೀವನದ ಬದುಕು ತಿಳಿಯಬೇಕಿದ್ದರೆ ನಮ್ಮ ಆಚರಣೆಗಳು ತಿಳಿಸುವುದು ಅತ್ಯವಶ್ಯಕ ಅಂತ ಕಾರ್ಯಕ್ರಮ ರೂಪಿಸುವ ಸಂಸ್ಥೆಗೆ ನಾವು ತಲೆಬಾಗಲೇಬೇಕು ಶಾಲೆಗೆ ಕಳಿಸುವುದು ಪಾಠವಲ್ಲ ಅದನ್ನು ನಮ್ಮ ಜೀವನದ ಬದುಕು ಮಕ್ಕಳಿಗೆ ತಿಳಿಸುವುದು ಮತ್ತು ಅದನ್ನು ಅಳವಡಿಸಿಕೊಳ್ಳುವಲ್ಲಿ ಮಹಿಳೆಯರು ಜವಾಬ್ದಾರಿಯುತರಾಗಿರಬೇಕು ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಗಣಪತಿ ಆಚಾರ್ಯರು ಹಿಂದಿನ ಕಷ್ಟ ಕಾಲದ ಬದುಕು ಇಂದಿಲ್ಲ. ಮುಂದಿನ ಜನಾಂಗಕ್ಕೆ ಜೀವನ ಚಿತ್ರಣ ನೀಡುವ ಉತ್ತಮ ಕಾರ್ಯಕ್ರಮ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಮುರಳೀಧರ ಆಚಾರ್ಯ, ಯುವಕ ಸೇವಾದಳದ ಅಧ್ಯಕ್ಷ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು 12 ವರ್ಷ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವೆ ಸಲ್ಲಿಸಿದ ವಸಂತಿ ಅಶೋಕ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಶಾಲಿನಿ ದಾಮೋದರಾಚಾರ್ಯ ಆಚಾರ್ಯ ಪ್ರಾರ್ಥಿಸಿದರು. ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಸ್ವಾಗತಿಸಿದರು. ಶ್ರೀಮತಿ ವಿನುತಾ ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಆಶಾ ಆನಂದ ಆಚಾರ್ಯ ವಂದಿಸಿದರು. ಸುಮಾರು 35 ಬಗೆಯ ತಿನಿಸುಗಳನ್ನು ಉಣಬಡಿಸಲಾಯಿತು
ಉಚ್ಚಿಲ : ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗುರು ಪೂರ್ಣಿಮಾ ಆಚರಣೆ

Posted On: 16-07-2023 07:56PM
ಉಚ್ಚಿಲ : ನಮ್ಮೊಳಗಿನ ನಮ್ಮನ್ನು ಅರಿತುಕೊಳ್ಳಲು, ಲೌಕಿಕ ಸಮಸ್ಯೆಗಳನ್ನು ನಿವಾರಿಸಲು ಆಧ್ಯಾತ್ಮವು ಸಕಾರಾತ್ಮಕ ದಾರಿಯಾಗಿದ್ದು, ನಾವೆಲ್ಲರೂ ಆಧ್ಯಾತ್ಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು. ದ.ಕ, ಉಡುಪಿ ಮತ್ತು ಉ.ಕ ವ್ಯಾಪ್ತಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ವತಿಯಿಂದ ಉಚ್ಚಿಲ ಮಹಾಲಕ್ಷ್ಮೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರು ಪೂರ್ಣಿಮಾ ಆಚರಣೆಯ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.

ಗ್ರಹಚಾರಾಧಿ ಸಂಕಷ್ಟ ನಿವಾರಣೆ, ಸಾಮಾಜಿಕ ಒಳಿತು ಹಾಗೂ ಆಧ್ಯಾತ್ಮಿಕ ಜಾಗೃತಿಗಾಗಿ ಮಹಾ ಮೃತ್ಯುಂಜಯ ಹೋಮ, ಸರ್ವೈಷ್ವರ್ಯ ಸೌಭಾಗ್ಯ ಪೂಜೆ, ಗುರು ಪೂಜೆ, ಸರ್ವ ಮಂಗಳ ಪೂಜೆ ಏಕ ಕಾಲದಲ್ಲಿ ನೆರವೇರಿದ್ದು ಸಾವಿರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದರು.
ಇದೇ ಸಂದರ್ಭ ಪರಿಸರ ಜಾಗೃತಿ ಮತ್ತು ಸಹಭಾಗಿತ್ವದ ನೆಲೆಯಲ್ಲಿ ಸುಮಾರು 2 ಸಾವಿರ ಸಸಿಗಳನ್ನು ವಿತರಿಸಲಾಯಿತು. ಮಂಗಳೂರಿನ ಅಮೃತಾ ವಿದ್ಯಾಲಯಂ ನ ವಿದ್ಯಾರ್ಥಿಗಳು ಸಾಮೂಹಿಕ ಮಂತ್ರ ಪಠಣೆ ಮಾಡಿದರು. 25 ವರುಷಗಳ ಕಾಲ ಆಧ್ಯಾತ್ಮಿಕವಾಗಿ ನಿಸ್ವಾರ್ಥ ಸೇವೆ ಮಾಡಿದ 35 ಹಿರಿಯ ಭಕ್ತರಿಗೆ ಮಠದ ವತಿಯಿಂದ ಗೌರವಿಸಿ ಪ್ರಸಾದ ನೀಡಲಾಯಿತು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಆನಂದ್ ಸಿ. ಕುಂದರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಪ್ರಸಾದ್ ರಾಜ್ ಕಾಂಚನ್, ಭರತ್ ಏರ್ಮಾಳ್, ಮಂಗಳೂರು ಅಧ್ಯಕ್ಷ ಡಾ ವಸಂತ್ ಕುಮಾರ್ ಪೆರ್ಲ, ಸುರೇಶ್ ಅಮೀನ್, ಕುಂದಾಪುರ ಅಧ್ಯಕ್ಷ, ಸುರೇಶ್ ಬೆತ್ತಿನ್, ಉಡುಪಿ ಅಧ್ಯಕ್ಷ ಯೋಗೀಶ್ ಬೈಂದೂರು, ಸುಬ್ರಹ್ಮಣ್ಯ ಅಧ್ಯಕ್ಷ ಚಂದ್ರಶೇಖರ್ ನಾಯರ್, ಮೂಲ್ಕಿ ಅಧ್ಯಕ್ಷ ವೈ.ಎನ್ ಸಾಲ್ಯಾನ್, ಕಾರವಾರ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು. ಡಾ. ಅಶೋಕ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.