Updated News From Kaup
ಉಡುಪಿ : ಯಕ್ಷಗಾನ ಗುರು, ಭಾಗವತ ತೋನ್ಸೆ ಜಯಂತ ಕುಮಾರ್ ವಿಧಿವಶ

Posted On: 26-06-2023 12:00PM
ಉಡುಪಿ : ಯಕ್ಷ ಗುರು, ಸವ್ಯಸಾಚಿ, ಯಕ್ಷ ವಾರಿಧಿ ಬಿರುದಾಂಕಿತ ತೋನ್ಸೆ ಜಯಂತ ಕುಮಾರ್ ಇಂದು ಮುಂಜಾನೆ ವಿಧಿವಶರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
1946ರಲ್ಲಿ ತೋನ್ಸೆಯವರು ಚೇತನ ಪ್ರೌಢಶಾಲೆ, ಹಂಗಾರಕಟ್ಟೆಯಲ್ಲಿ ಕಛೇರಿ ಅಧೀಕ್ಷಕರಾಗಿ ನಿವೃತ್ತರಾಗಿದ್ದರು. ಆದರೆ ಯಕ್ಷಗಾನದಲ್ಲಿ ಸದಾ ಪ್ರವೃತ್ತರು. ಸಂಚಾರಿ ಯಕ್ಷಗಾನ ಭಂಡಾರವೆಂದೇ ಖ್ಯಾತರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಸುಪುತ್ರರಾಗಿದ್ದ ಇವರಿಗೆ ತಂದೆಯೇ ಯಕ್ಷಗಾನ ಗುರು, ವೇಷದಾರಿಯಾಗಿ, ಯಕ್ಷಗಾನ ಗುರುಗಳಾಗಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಉಡುಪಿ ಶಾಸಕರ ನೇತೃತ್ವದ ಯಕ್ಷಶಿಕ್ಷಣ ಟಸ್ಟ್ ನಲ್ಲಿ ಆರಂಭದಿಂದಲೂ ಗುರುಗಳಾಗಿ ಅದರ ಯಶಸ್ಸಿಗೆ ಕಾರಣರಾಗಿದ್ದರು.
ಅವರು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗೆ ಭಾಜನರಾಗಿದರು. ಶ್ರೀ ಭಗವತಿ ತೀಯಾ ಸಮಾಜ ನೇಜಾರು ಇದರ ಮಾಜಿ ಅಧ್ಯಕ್ಷರಾಗಿದ್ದರು.
ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ.
ಉಚ್ಚಿಲ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸಭೆ

Posted On: 25-06-2023 03:43PM
ಉಚ್ಚಿಲ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಬಡಾಗ್ರಾಮ ಉಚ್ಚಿಲ ಇದರ ಜೀರ್ಣೋದ್ಧಾರ ಸಮಿತಿ ಸಭೆಯು ಇಂದು ನಡೆಯಿತು.
ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಅಶೋಕ್ ರಾಜ್ ಎರ್ಮಾಳು ಬೀಡು, ವೆಂಕಟೇಶ ನಾವಡ, ಸತೀಶ್ ಶೆಟ್ಟಿ ಅನ್ನಾವರ, ಗಂಗಾಧರ ಸುವರ್ಣ, ಸುಧೀರ್ ಹೆಗ್ಡೆ, ಚಂದ್ರಶೇಖರ, ಪ್ರಧಾನ ಅರ್ಚಕರಾದ ಗೋವಿಂದ ರಾಜ ಭಟ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಕಟಪಾಡಿ : ತ್ರಿಶಾ ಕ್ಲಾಸಸ್ - ಸಿ .ಎ. ಫೌಂಡೇಷನ್ ವಿದ್ಯಾರ್ಥಿಗಳ ಮಾಹಿತಿ ಕಾರ್ಯಗಾರ

Posted On: 25-06-2023 02:58PM
ಕಟಪಾಡಿ : ಸಿ.ಎ ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ. ಫೌಂಡೇಷನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ ಎ ಗೋಪಾಲ ಕೃಷ್ಣಭಟ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿ. ಎ. ತರಬೇತಿ ಪಡೆಯುವ ವಿದ್ಯಾರ್ಥಿಗಳನ್ನು ಕುರಿತು ಸರಿಯಾದ ಯೋಜನೆ ಹಾಗೂ ಛಲ ಬಿಡದ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ಸಫಲತೆಯ ಶಿಖರ ಏರಲು ಕಷ್ಟ ಪಟ್ಟು ಕೆಲಸ ಮಾಡುವುದೊಂದೇ ಹಾದಿ ಎಂದು ಹೇಳಿ, ಸಿ. ಎ. ಕೋರ್ಸಿನ ಬಗ್ಗೆ, ‘ಐ.ಸಿ.ಎ.ಐ’ನ ಹೊಸತಾಗಿ ತಿದ್ದುಪಡಿಯಾದ ನಿಯಮಗಳ ಬಗ್ಗೆ ಮತ್ತು ಪರೀಕ್ಷಾಪೂರ್ವ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಿದ್ಧಾಂತ್ ಫೌಂಡೇಶನ್ ನ ಖಜಾಂಚಿಯಾದ ನಮಿತಾ ಜಿ.ಭಟ್, ತ್ರಿಶಾ ವಿದ್ಯಾ ಕಾಲೇಜಿನ ಸಿಬ್ಬಂದಿ ವರ್ಗದವರು, ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೌರಿ ಕಾಮತ್ ನಿರೂಪಿಸಿ ವಂದಿಸಿದರು.
ಕಾಪು ಕ್ಷೇತ್ರದ ಪ್ರೌಢಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಬಗ್ಗೆ ಶಾಸಕರಿಂದ ಸಭೆ

Posted On: 24-06-2023 09:59PM
ಕಾಪು : ವಿಧಾನಸಭಾ ಕ್ಷೇತ್ರದ ಸರಕಾರಿ ಹಾಗೂ ಖಾಸಗಿ ಪ್ರೌಢಶಾಲಾ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಕರಾವಳಿಯ ಗಂಡು ಕಲೆ ಎಂದು ಪ್ರಸಿದ್ಧಿ ಪಡೆದ ಯಕ್ಷಗಾನ ಕಲೆಯನ್ನು ಕಲಿಸುವ ನಿಟ್ಟಿನಲ್ಲಿ ಶನಿವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಪು ಶಾಸಕರ ಕಚೇರಿಯಲ್ಲಿ ಯಕ್ಷಗಾನ ಕಲಾರಂಗ (ರಿ.) ಇದರ ಪದಾಧಿಕಾರಿಗಳೊಂದಿಗೆ ಮತ್ತು ಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಈ ಸಂದರ್ಭ ಮಾತನಾಡಿದ ಅವರು ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಮಕ್ಕಳ ನೈತಿಕ ಮೌಲ್ಯ ಹಾಗೂ ಜ್ಞಾನ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗ (ರಿ.) ಅಧ್ಯಕ್ಷರಾದ ಎಂ. ಗಂಗಾಧರ್ ರಾವ್, ಉಪಾಧ್ಯಕ್ಷರಾದ ವಿ.ಜಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗ್ಡೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಉಪಸ್ಥಿತರಿದ್ದರು.
ಉಡುಪಿ : ಡಾII ದೇವದಾಸ್ ಕಾಮತ್ ಹಿರಿಯಡ್ಕರವರಿಗೆ ಗೌರವಾಪ೯ಣೆ

Posted On: 24-06-2023 09:55PM
ಉಡುಪಿ : ಭಾರತೀಯ ವೈದ್ಯ ಸಂಘ ಕನಾ೯ಟಕ ಇದರ ವತಿಯಿಂದ ವೈದ್ಯರ ದಿನದ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾII ದೇವದಾಸ ಕಾಮತ್ ಡಾII ಸುಧಾ ಕಾಮತ್ ದಂಪತಿ ಹಿರಿಯಡ್ಕ ಇವರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ವತಿಯಿಂದ ಶನಿವಾರ ಕಾಮತ್ ಕ್ಲಿನಿಕ್ ನಲ್ಲಿ ಗೌರವಿಸಲಾಯಿತು.
ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ಗೌರವಾದ್ಯಕ್ಷ ವಿಶ್ವನಾಥ್ ಶೆಣೈ ಗೌರವಿಸಿ ಶುಭ ಹಾರೈಸಿದರು. ಈ ಸಂದಭ೯ ಕ .ಸಾ.ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ರಾಘವೇಂದ್ರ ಪ್ರಭು, ಕವಾ೯ಲು ಮತ್ತು ವೈದ್ಯರ ಕುಟುಂಬಸ್ಥರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕ ಬಿ ರಾಘವೇಂದ್ರ ರಾವ್ ಅವರ 56ನೇ ಕೃತಿ ಹಾವಿನ ಮನೆ ಬಿಡುಗಡೆ

Posted On: 24-06-2023 07:41PM
ಕಾರ್ಕಳ : ರಾಘವೇಂದ್ರ ರಾವ್ ಅವರು ಈಗಾಗಲೇ 55 ಕೃತಿಗಳನ್ನು ಪೂರೈಸಿದ್ದು, 56ನೇ ಕೃತಿ “ಹಾವಿನ ಮನೆ” ಪತ್ತೆದಾರಿ ಕಾದಂಬರಿ ಇತ್ತೀಚೆಗೆ ಬೆಂಗಳೂರಿನ ರಮಣಶ್ರೀ ಹೋಟೇಲಿನಲ್ಲಿ ವೀರಲೋಕ ಪ್ರಕಾಶನದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಶಿವಾಜಿ ಸುರತ್ಕಲ್ ಚಲನಚಿತ್ರ ಖ್ಯಾತಿಯ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಅವರು ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯಕ್ಕೆ ಪತ್ತೆದಾರಿ ಸಾಹಿತ್ಯದ ಅಗತ್ಯವಿದೆ. ಅದಕ್ಕೆ ಬಹುದೊಡ್ಡ ಓದುಗ ವರ್ಗವಿದೆ. ಈ ನಿಟ್ಟಿನಲ್ಲಿ ರಾಘವೇಂದ್ರ ರಾವ್ (ಅನು ಬೆಳ್ಳೆ) ಅವರ ʼಹಾವಿನ ಮನೆʼ ಮಹತ್ವದ ಕೃತಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಆಧುನಿಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು, ಯುವ ಲೇಖಕರಾಗಿ ಪ್ರಸಿದ್ಧಿಗೊಂಡು. ಅನೇಕ ಪತ್ರಿಕೆಗಳಲ್ಲಿ ನಿರಂತರವಾಗಿ ಧಾರಾವಾಹಿಯಾಗಿ ಪ್ರಕಟಗೊಂಡ ಕಥೆಗಳ ಕರ್ತೃವಾಗಿ, ಗುರುತಿಸಿಕೊಂಡು ತಮ್ಮದೇ ಅನುಭವದ ವಿಶೇಷ ಶೈಲಿಯ ಕಥೆಗಳನ್ನು ಪೋಣಿಸಿದ ಲೇಖಕ ರಾಘವೇಂದ್ರ ರಾವ್ ಅವರು. ಅನುಬೆಳ್ಳೆ ಎಂಬ ಕಾವ್ಯನಾಮದಿಂದಲೇ ಹೆಚ್ಚಿನ ಓದುಗರಿಗೆ ಪರಿಚಿತರು. ವೃತ್ತಿಯಲ್ಲಿ ಉಪನ್ಯಾಸಕರು ಪ್ರವೃತ್ತಿಯಲ್ಲಿ ಕಥೆಗಾರರು. ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಓದುಗ ವರ್ಗವನ್ನು ಹೊಂದಿದ್ದಾರೆ. ಕೃತಿಕಾರ ರಾಘವೇಂದ್ರ ರಾವ್ ಅವರು ಪ್ರಸ್ತುತ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಲೇಖಕ ಬಿ ರಾಘವೇಂದ್ರ ರಾವ್ ಅವರನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಶಿರ್ವ : ಸಂತ ಮೇರಿ ಮಹಾ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ

Posted On: 24-06-2023 02:21PM
ಶಿರ್ವ : ಇಂದಿನ ವಿವಿಧ ಕ್ಷೇತ್ರಗಳಲ್ಲಿ ದತ್ತಾಂಶ ಸಮಸ್ಯೆಗಳನ್ನು, ಪರಿಹರಿಸಲು ಡೇಟಾ ವಿಜ್ಞಾನವನ್ನು ಬಳಸುವ ಮೂಲಕ ದತ್ತಾಂಶ ಗಣಿಗಾರಿಕೆ, ಯಂತ್ರ ಕಲಿಕೆ ಮತ್ತು ಅಂಕಿಅಂಶಗಳ ವಿಶ್ಲೇಷಣೆಯ ಸಂಯೋಜನೆಯಾಗಿದೆ. ಯುವಕರು ಇಂತಹ ಡೇಟಾ ವಿಜ್ಞಾನದ ಕೌಶಲ್ಯಗಳನ್ನು ಕಲಿಯುವ ಮೂಲಕ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವ್ಯವಹಾರಗಳಿಗೆ ಉತ್ತಮ ನಿರ್ಧಾರಗಳನ್ನು ನೀಡುವ ಮೂಲಕ ಉತ್ತಮ ಉಪಾದಿಗಳನ್ನು ಪಡೆಯಬಹುದೆಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಏರ್ಪಡಿಸಿದ ಡಿಜಿಟಲ್ ಟೆಕ್ನಾಲಜಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ,ಡೇಟಾ ಸೈನ್ಸ್ ಮತ್ತು ಉದ್ಯೋಗ ಅವಕಾಶಗಳು ಎಂಬ ವಿಶೇಷ ಉಪನ್ಯಾಸದಲ್ಲಿ ಮಂಗಳೂರಿನ ಕಾಗ್ನೆಟಿವ್ ಸೊಲ್ಯೂಷನ್ಸ್ ನ ಅಸಿಸ್ಟೆಂಟ್ ಹೆಚ್ ಆರ್ ಲೀಡರ್ಟೀಮ್ ಕುಮಾರಿ ಕೃತಿಕಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಯುಗದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ತ್ವರಿತ ಬದಲಾವಣೆಗಳಿಂದಾಗಿ ಕಂಪ್ಯೂಟರ್ ಪದವೀಧರರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದಲ್ಲೇ ಉದ್ಯಮ ಕೌಶಲ್ಯಗಳನ್ನು ಕಲಿಯುವ ಮೂಲಕ ಉದ್ಯಮದ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ದರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು.

ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರವನ್ನು ಕಂಪ್ಯೂಟರ್ ಪದವೀಧರರು ಅರ್ಥ ಮಾಡಿಕೊಂಡು ಸಮಾಜಕ್ಕೆ ಬೇಕಾಗಿರುವ ತಂತ್ರಾಂಶ ಬಳಕೆಯನ್ನು ರೂಪಿಸುವಲ್ಲಿ ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಕಿವಿಮಾತು ನೀಡಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಫಾಧಿ , ಕಾಗ್ನಿಟಿವ್ ಸೊಲ್ಯೂಷನ್ ಮಂಗಳೂರಿನ ವ್ಯಾಪಾರ ಕಾರ್ಯಾಚರಣೆಯ ತಂಡದ ಮುಖ್ಯಸ್ಥರು ಸಂಪನ್ಮೂಲ ವ್ಯಕ್ತಿಯಾಗಿ ಅಧಿವೇಶನವನ್ನು ನಡೆಸಿದರು ಮತ್ತು ಸೆಮಿನಾರ್ನಲ್ಲಿ ವಿವಿಧ ವ್ಯಾಪಕವಾದ ಜ್ಞಾನವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಗ್ಲೋ ಟಚ್ ಪ್ಲೇಸ್ಮೆಂಟ್ ಡ್ರೈವಲ್ಲಿ ಆಯ್ಕೆಯಾದ ಶೆಟ್ಟಿ ತರುಣ್ ರಮೇಶ್, ಎಲ್ರುಷಾ ಮಿಲಿನಾ ಡಿ'ಸಾ, ಪ್ರಸಿದ್ಧ್ ಗೋಪಾಲ್ ಅಂಚನ್ ಇವರನ್ನು ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ-ಅಧ್ಯಾಪಕೇತರ ಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಲಿಸ್ಟರ್ ಸುಜಾಯ್ ಡಿಸೋಜ, ಅನುಪ್ ನಾಯಕ ಸಹಕರಿಸಿದರು. ದೀಪ್ತಿ ಮತ್ತು ಬಳಗ ಪ್ರಾರ್ಥಿಸಿದರು. ಚಂದನ ಸ್ವಾಗತಿಸಿ, ನಿವೇದಿತಾ ನಿಖಿಲ್ ಪೂಜಾರಿ ವಂದಿಸಿದರು. ಎಲ್ರುಷಾ ಮಿಲಿನಾ ಡಿ'ಸಾ ಕಾರ್ಯಕ್ರಮ ಸಂಯೋಜಿಸಿದರು.
ಕಟಪಾಡಿ : ತ್ರಿಶಾ ವಿದ್ಯಾ ಕಾಲೇಜು - ಫೋಕಸ್ 360 ಬ್ಯಾಚ್ ವಿದ್ಯಾಥಿಗಳ ಶಿಕ್ಷಕ-ರಕ್ಷಕ ಭೇಟಿ

Posted On: 24-06-2023 11:14AM
ಕಟಪಾಡಿ : ಪದವಿ ಶಿಕ್ಷಣ ಎನ್ನುವುದು ಕೇವಲ ಪುಸ್ತಕದ ಜ್ಞಾನವನ್ನು ಹೊಂದುವುದಲ್ಲ. ವ್ಯವಹಾರ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳು ಹಾಗೂ ಜ್ಞಾನವನ್ನು ಹೊಂದುವುದೂ ಮುಖ್ಯವಾಗುತ್ತದೆ. ಇಲ್ಲವಾದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೂಲೆ ಗುಂಪಾಗಿ ಬಿಡುತ್ತೇವೆ. ಅದಲ್ಲದೆ ವಿದ್ಯಾರ್ಥಿಯನ್ನು ಸತ್ಪ್ರಜೆಯನ್ನಾಗಿ ಮಾಡೋದು ವಿದ್ಯಾ ಸಂಸ್ಥೆಯ ಜೊತೆಗೆ ಹೆತ್ತವರ ಜವಾಬ್ದಾರಿಯೂ ಆಗಿದೆ ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಅವರು ತ್ರಿಶಾ ಸಂಸ್ಥೆಯ 'ಬಿ.ಕಾಂ ಫೋಕಸ್ 360' ಮಕ್ಕಳ ಶಿಕ್ಷಕ-ರಕ್ಷಕ ಭೇಟಿಯಲ್ಲಿ ಹೇಳಿದರು.
ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗುರುಪ್ರಸಾದ್ ರಾವ್ ಅವರು ಫೋಕಸ್ 360 ಬ್ಯಾಚ್ ನ ಕಾರ್ಯವೈಖರಿ ಹಾಗೂ ಮುಂದೆ ಬರುವ ಯೋಜನೆಗಳನ್ನು ಸವಿಸ್ತಾರವಾಗಿ ಪರಿಚಯಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ನಿರೂಪಿಸಿದರು.
ಕಾರ್ಕಳ : ಪರಶುರಾಮ ಥೀಂ ಪಾರ್ಕ್ ಭೇಟಿ - ತಾತ್ಕಾಲಿಕ ನಿಷೇಧ

Posted On: 24-06-2023 09:06AM
ಕಾರ್ಕಳ : ತಾಲೂಕು ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಶುರಾಮ ಥೀಂ ಪಾರ್ಕ್ನಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ, ಮೂರ್ತಿಗೆ ತುಕ್ಕು ನಿರೋಧಕ ಲೇಪನದ ಹಾಗೂ ಇನ್ನಿತರ ಮುಕ್ತಾಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಜೂನ್ 26 ರಿಂದ ಸೆಪ್ಟಂಬರ್ ಅಂತ್ಯದವರೆಗೆ ಪರಶುರಾಮ ರ್ಥೀಂ ಪಾರ್ಕ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜಮಾಡಿ : ಶಾಸಕರಿಂದ ಬಂದರು ಕಾಮಗಾರಿ ಪರಿಶೀಲನೆ

Posted On: 24-06-2023 07:02AM
ಹೆಜಮಾಡಿ : ಇಲ್ಲಿ 188 ಕೋಟಿ ರೂಪಾಯಿ ಅನುದಾನ ಮಂಜೂರಾಗಿ ಶೇಕಡಾ 60 ರಷ್ಟು ಪೂರ್ಣಗೊಂಡಿರುವ ಬಂದರಿನ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭ ಶಾಸಕರು ಗುಣಮಟ್ಟವನ್ನು ಕಾಯ್ದುಕೊಂಡು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಬಾಕಿ ಇರುವ ಅನುದಾನದ ಬಿಡುಗಡೆಯ ಬಗ್ಗೆ ಮೀನುಗಾರಿಕಾ ಸಚಿವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ, ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಾಣೇಶ್ ಹೆಜಮಾಡಿ, ಶರಣ್ ಮಟ್ಟು, ಜಗನ್ನಾಥ್, ನಳಿನಿ, ಸುಜಾತ, ಬಬಿತಾ, ಹೆಜಮಾಡಿ ಮೀನುಗಾರಿಕ ಬಂದರು ಸಮಿತಿಯ ಅಧ್ಯಕ್ಷರಾದ ಸದಾಶಿವ ಕೋಟ್ಯಾನ್, ಉಪಾಧ್ಯಕ್ಷರಾದ ರವಿ ಕುಂದರ್, ಪ್ರಧಾನ ಕಾರ್ಯದರ್ಶಿಗಳಾದ ವಿಜಯ ಬಂಗೇರ, ಮೀನುಗಾರ ಮುಖಂಡರಾದ ಹರೀಶ್ ಚಂದ್ರ ಮೆಂಡನ್, ನಾರಾಯಣ ಮೆಂಡನ್, ದಿವಾಕರ ಮೆಂಡನ್ ಮತ್ತು ಬಂದರು ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶ್ರೀನಿವಾಸ್ ಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಉದಯ್ ಕುಮಾರ್, ಸಹಾಯಕ ಅಭಿಯಂತರರಾದ ಜಯರಾಜ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.