Updated News From Kaup

ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರ : ಸಿ.ಎ ಗೋಪಾಲಕೃಷ್ಣ ಭಟ್

Posted On: 02-07-2023 07:35AM

ಕಟಪಾಡಿ : "ಲೆಕ್ಕ ಪರಿಶೋಧಕರಿಗೆ (ಸಿ.ಎ) ಸಮಾಜದಲ್ಲಿ ಒಂದು ವಿಶೇಷವಾದ ಉನ್ನತ ಸ್ಥಾನಮಾನವಿದೆ. ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರವಾದದ್ದು, ದೇಶದ ಏಳಿಗೆಗೆ ನಾವು ದುಡಿಯಬೇಕು" ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ರವರು, ಜುಲೈ 1 ರಂದು ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಆಚರಿಸಲಾದ 'ಚಾರ್ಟರ್ಡ್ ಅಕೌಂಟೆಂಟ್ಸ್ ಡೇ'ಯಲ್ಲಿ ಹೇಳಿದರು.

ಜೊತೆಗೆ ವೇದಿಕೆಯಲ್ಲಿದ್ದ ಸಿ.ಎ ಆದರ್ಶ್ ಶೆಣೈ ಹಾಗೂ ಸಿ.ಎ ನಾಗೇಂದ್ರ ಭಕ್ತ ಇವರು "ಜೀವನದಲ್ಲಿ ಸಾಧನೆ ಯಾವುದೇ ಅದೃಷ್ಟದಿಂದ ಬರುವುದಿಲ್ಲ ಸತತ ಪರಿಶ್ರಮ ಒಂದೇ ಅದರ ಹಾದಿ" ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.

ತ್ರಿಶಾ ಸಂಸ್ಥೆಯ ಅಧ್ಯಕ್ಷರ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಐಶ್ವರ್ಯಾ ಕಾಮತ್ ಬಿ. ರವರು ಗಣ್ಯರಿಗೆ 'ರಾಪಿಡ್ ಫಯರ್ ರೌಂಡ್' ನಡೆಸಿದರು.

ಕಾರ್ಯಕ್ರಮದಲ್ಲಿ ಸಿದ್ಧಾಂತ್ ಫೌಂಡೇಶನ್ ನ ಖಜಾಂಚಿ ನಮಿತಾ ಜಿ ಭಟ್, ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೌರಿ ಕಾಮತ್ ನಿರೂಪಿಸಿ ವಂದಿಸಿದರು.

ಕಾಪು : ಹಿರಿಯಡಕ ಶಾಸಕರ ಕಚೇರಿ ಉದ್ಘಾಟನೆ

Posted On: 30-06-2023 04:27PM

ಕಾಪು : ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಹಿರಿಯಡಕ ಶಾಸಕರ ಕಚೇರಿ ಉದ್ಘಾಟನಾ ಸಮಾರಂಭ ಇಂದು ನಡೆಯಿತು.

ಶಾಸಕರು ಅಂಜಾರು, ಮರ್ಣೆ, ಮಣಿಪುರ, ಬೊಮ್ಮರಬೆಟ್ಟು ಗ್ರಾಮದ ಒಟ್ಟು 17 ಫಲಾನುಭವಿಗಳಿಗೆ 94/ಸಿ ಹಾಗೂ 94/ಸಿ.ಸಿ ಅಡಿ ಹಕ್ಕುಪತ್ರ ವಿತರಿಸಿ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನದ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿದ ಅವರು ವಾರದಲ್ಲಿ ಪ್ರತಿ ಸೋಮವಾರ ಹಿರಿಯಡಕ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ರೀಶ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ ಶೆಟ್ಟಿ, ಕಾಪು ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸುಮಾ ಶೆಟ್ಟಿ, ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯರಾದ ಶ್ಯಾಮಲ ಕುಂದರ್, ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಗೀತಾಂಜಲಿ ಸುವರ್ಣ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಹಿರಿಯರು, ಮುಖಂಡರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಉಡುಪಿ : ವಿಧಾನಸಭಾ ಚುನಾವಣೆಯಲ್ಲಿ ಜನರು ಸಹಕಾರ ಮಾಡಲಿಲ್ಲ, ಕಾರಣಗಳು ಅನೇಕ - ಯೋಗೀಶ್ ವಿ ಶೆಟ್ಟಿ

Posted On: 30-06-2023 04:21PM

ಉಡುಪಿ : ಜಿಲ್ಲಾ ಜನತಾದಳ( ಜಾತ್ಯತೀತ ) ಪಕ್ಷದ ಚಿಂತನಾ ಸಭೆಯು ಗುರುವಾರ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಪಕ್ಷ ಕಚೇರಿಯಲ್ಲಿ ಜರಗಿತು.

ಈ ಸಂದರ್ಭ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಪಕ್ಷದ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಆಶಾ ಭಾವನೆಯಲ್ಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನವ ಕರ್ನಾಟಕ ನಿರ್ಮಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಜನತಾ ಜಲಧಾರೆ, ಪಂಚರತ್ನ ಯೋಜನೆಯ ಸೂತ್ರಗಳ ಪ್ರಕಾರ, ಶಿಕ್ಷಣ, ಆರೋಗ್ಯ, ರೈತ ಚೈತನ್ಯ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ, ವಸತಿ ಆಸರೆ, ಗಳನ್ನು ಮುಂದಿಟ್ಟು ಮಾದರಿ ಕರ್ನಾಟಕ ನಿರ್ಮಾಣಕ್ಕಾಗಿ ತುಂಬಾ ಹೋರಾಟವನ್ನು ಮಾಡಿದರು. ಆದರೂ ಜನರು ಸಹಕಾರ ಮಾಡಲಿಲ್ಲ, ಕಾರಣಗಳು ಅನೇಕ ಇದೆ ಎಂದು ಸಭೆಗೆ ತಿಳಿಸಿದರು.

ಕಾರ್ಯಕರ್ತರು ಎದೆಗುಂದುವುದು ಬೇಡ ಯಾವುದೇ ತೊಂದರೆಯಾದರೆ ಪಕ್ಷ ನಾವಿದ್ದೇವೆ. ಮುಂದೆ ಹೊಸಬರು, ಸಮರ್ಥರನ್ನು ಪಕ್ಷಕ್ಕೆ ಸೇರಿಸಿ ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ಪುನರ್ ಸಂಘಟಿಸಲಾಗುತ್ತದೆ. ಮುಂದೆ ಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವೆಲ್ಲರೂ ಸನ್ನದ್ಧರಾಗಬೇಕೆಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಬಾಲಕೃಷ್ಣ ಆಚಾರ್ಯ, ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ರಮೇಶ್ ಕುಂದಾಪುರ, ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶ್ರೀಕಾಂತ ಪೂಜಾರಿ, ಕುಚ್ಚೂರು, ನಾಯಕರಾದ ರಾಮರಾವ್, ರಂಗಕೋಟ್ಯಾನ, ಸಂಶುದ್ದೀನ್ ಮಜೂರು, ಉದಯಕುಮಾರ್, ಹಾಗೂ ಪಕ್ಷ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೊರಂಗ್ರಪಾಡಿ ವಸತಿ ನಿವೇಶನದಲ್ಲಿ ವನಮಹೋತ್ಸವ ಕಾರ್ಯಕ್ರಮ

Posted On: 30-06-2023 01:01PM

ಉಡುಪಿ : ಕರ್ನಾಟಕ ಅರಣ್ಯ ಇಲಾಖೆ ಉಡುಪಿ ವಲಯ ಕುಂದಾಪುರ ವಿಭಾಗ, ಕರ್ನಾಟಕ ಗೃಹ ಮಂಡಳಿ, ಉಡುಪಿ, ತ್ರಿಷಾ ಕಾಲೇಜು, ಕಟಪಾಡಿ ಇವರ ಸಹಯೋಗದೊಂದಿಗೆ ಶುಕ್ರವಾರ ಕರ್ನಾಟಕ ಗೃಹ ಮಂಡಳಿ ವಸತಿ ನಿವೇಶನ ಕೊರಂಗ್ರಪಾಡಿಯಲ್ಲಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾ, ಸದಸ್ಯರಾದ ಲಿವಿತಾ ದೇಸಿ, ಅಮೃತಾ ಪೂಜಾರಿ, ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಹನಾ, ಸಹಾಯಕ ಅಭಿಯಂತರರಾದ ಹರೀಶ್, ಉಡುಪಿ ವಲಯ ಅರಣ್ಯಾಧಿಕಾರಿಗಳಾದ ಸುಬ್ರಮಣ್ಯ ಆಚಾರ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜೀವನ್ ದಾಸ್ ಶೆಟ್ಟಿ, ಗುರುರಾಜ್ ಕೆ, ತ್ರಿಶಾ ಕಾಲೇಜಿನ ಉಪನ್ಯಾಸಕರಾದ ಚೇತನಾ ಸುನಿಲ್, ಧೀರಜ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜುಲೈ 3 - ಸೆಪ್ಟೆಂಬರ್ 29 : ಪಡುಕುತ್ಯಾರುವಿನಲ್ಲಿ ಆನೆಗುಂದಿಶ್ರೀಗಳ ಚಾತುರ್ಮಾಸ್ಯ ; ಸಿದ್ಧತೆಗಳು ಪೂರ್ಣ

Posted On: 29-06-2023 07:57PM

ಕಾಪು : ಪಡುಕುತ್ಯಾರು ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಜುಲೈ 3ರಿಂದ ಸೆಪ್ಟೆಂಬರ್ 29ರ ವರೆಗೆ ಪಡುಕುತ್ಯಾರಿನಲ್ಲಿ ನಡೆಯಲಿದೆ.

ಆನೆಗುಂದಿ ಶ್ರೀಗಳವರ ಶೋಭಕೃತ್‌ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯವಾಗಿದ್ದು ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ 8ನೇ ಬಾರಿಗೆ ಸಂಪನ್ನಗೊಳ್ಳಲಿದೆ. ಜುಲೈ 3ರಂದು ವಿಶ್ವಕರ್ಮ ಯಜ್ಞ, ವ್ಯಾಸ ಪೂಜೆ ಯೊಂದಿಗೆ ವ್ರತ ಸಂಕಲ್ಪ ನಡೆಯಲಿದ್ದು ಗುರುಪಾದ ಪೂಜೆಯ ಬಳಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯು ನಡೆಯಲಿದೆ. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಭಜನಾ ಸಂಕೀರ್ತಾನಾ ಸೇವೆ, ಗುರುಪಾದಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ದುರ್ಗಾ ನಮಸ್ಕಾರ ಪೂಜೆ, ಪಾರಾಯಣ, ಭಾನುವಾರಗಳಂದು ವಿಶೇಷ ಉಪನ್ಯಾಸ, ವಿಚಾರಗೋಷ್ಠಿಗಳು ನಡೆಯಲಿವೆ.

ಜುಲೈ 15ರಂದು ಆನೆಗುಂದಿಶ್ರೀಗಳವರ ಜನ್ಮವರ್ಧಂತಿಯು ನಡೆಯಲಿದ್ದು ವಿಶೇಷ ಹೋಮ ಹವನ ವೈದಿಕ ಕಾರ್ಯಕ್ರಮಗಳು, ಜಗದ್ಗುರುಗಳವರ ತುಲಾಭಾರ ಸೇವೆ ನಡೆಯಲಿದೆ. ಬಳಿಕ ನಡೆಯುವ ಧರ್ಮ ಸಂಸತ್ತಿನಲ್ಲಿ ವೇ. ಬ್ರ ಶಂಕರ ಆಚಾರ್ಯ ಕಡ್ಲಾಸ್ಕರ್‌ ಪಂಡಿತ್‌ ಅವರಿಗೆ ವೈದಿಕ ವಿಭಾಗದಲ್ಲಿ ಮಹಾಸಂಸ್ಥಾನದ ಆಸ್ಥಾನ ವಿದ್ವಾನ್‌ ಪದವಿಯನ್ನು ಪ್ರದಾನ ಮಾಡಲಾಗುವುದು. ಇದೇ ದಿನ ಶ್ರೀ ನಾಗಧರ್ಮೇಂದ್ರ ಸರಸ್ವತೀ ವಿದ್ಯಾರ್ಥಿ ಭವನದ ಉದ್ಘಾಟನೆ ನಡೆಯಲಿದ್ದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಭಾಗವಹಿಸಲಿದ್ದಾರೆ. ಮಾಜಿ ಸಚಿವರಾದ ವಿನಯ್‌ ಕುಮಾರ್‌ ಸೊರಕೆ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌ ಕಾರ್ಕಳ, ಸ್ಥಳೀಯ ಶಾಸಕ ಸುರೇಶ್‌ ಶೆಟ್ಟಿ, ಸಮಾಜ ಸೇವಕ ಮಿಥುನ್‌ ಕುಮಾರ್‌ ರೈ ಮುಂತಾದವರು ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್ 29ರಂದು ಚಾತುರ್ಮಾಸ್ಯದ ಸಮಾರೋಪವು ನಡೆಯಲಿದ್ದು ಸೀಮೋಲ್ಲಂಘನ ಧಾರ್ಮಿಕ ಸಭೆಯು ನಡೆಯಲಿದ್ದು ವಿವಿಧ ಸಚಿವರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ ಬಿ. ಆಚಾರ್‌ ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : ಉಚಿತ ನೇತ್ರ ತಪಾಸಣೆ, ದಂತ ಚಿಕಿತ್ಸೆ, ವ್ಯೆದ್ಯಕೀಯ ತಪಾಸಣಾ ‌ಶಿಬಿರ

Posted On: 29-06-2023 07:47PM

ಪಡುಬಿದ್ರಿ : ಇಲ್ಲಿನ ಆತ್ಮ ಶಕ್ತಿ ವಿವಿದ್ದೋದೇಶ ಸಹಕಾರಿ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಪಡುಬಿದ್ರಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಡುಬಿದ್ರಿ ಬೋರ್ಡ್ ಶಾಲೆಯಲ್ಲಿ  ಉಚಿತ ನೇತ್ರ ತಪಾಸಣೆ, ದಂತ ಚಿಕಿತ್ಸೆ ಮತ್ತು ಸಾಮಾನ್ಯ ವ್ಯೆದ್ಯಕೀಯ ತಪಾಸಣಾ ಶಿಬಿರ ಗುರುವಾರ ಜರಗಿತು.

ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಕೇವಲ  ಲಾಭದ ದೃಷ್ಟಿಯನ್ನುಹೊಂದದೆ ಜೊತೆಗೆ  ಜನರ ಆರೋಗ್ಯ ದೃಷ್ಟಿಯಿಂದ  ಉಚಿತವಾಗಿ ಸಾರ್ವಜನಿಕರಿಗೆ ವ್ಯೆದಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಉತ್ತಮ ಗುಣಮಟ್ಟದಲ್ಲಿ ನೀಡುತ್ತಿರುವುದು  ಶ್ಲಾಘನೀಯ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಅತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಆತ್ಮ ಶಕ್ತಿ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಾಜಿ ತಾ.ಪಂ. ಸದಸ್ಯ ನವೀನಚಂದ್ರ ಜೆ. ಶೆಟ್ಟಿ, ಪಡುಬಿದ್ರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವೈ. ಸುಕುಮಾರ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯ ಕೃಷ್ಣಯ್ಯ , ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಕೃಷ್ಣ ಬಂಗೇರ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪದ್ಮಿನಿ ತಂತ್ರಿ, ಅಮೃತಾನಂದಮಯಿ ಮಠ ಬೋಳೂರು ಇಲ್ಲಿನ ವೆೃದ್ಯಾಧಿಕಾರಿಗಳಾದ ಡಾ. ಸುಚಿತ್ರಾ ಸೊರಕೆ , ಡಾ. ದೇವದಾಸ್, ಉಡುಪಿ ಪ್ರಸಾದ್  ನೇತ್ರಾಲಯದ ವ್ಯೆದ್ಯಾಧಿಕಾರಿ ಡಾ. ಅಕ್ಷತಾ, ಮುಕ್ಕ  ಶ್ರೀನಿವಾಸ್  ಆಸ್ಪತ್ರೆಯ ವ್ಯೆದ್ಯಾಧಿಕಾರಿ ಡಾ. ಅಧ್ರಾ ಮಂಗಳೂರು ವೆನ್ ಲಾಕ್ ಆಸ್ಪತ್ರೆ ಯ ಬ್ಲಡ್ ಬ್ಯಾಂಕ್, ಲ್ಯಾಬ್ ಟೆಕ್ನಿಷನ್ ಜೋಯಾಸನ್ ಉಪಸ್ಥಿತರಿದ್ದರು.

ಸುಮಾರು 350 ಮಂದಿ ಶಿಬಿರದ ಪ್ರಯೋಜನ ಪಡೆದರು. ಪಡುಬಿದ್ರಿ ‌ಶಾಖಾ ಪ್ರಬಂಧಕರಾದ ಸ್ವಾತಿ ಸ್ವಾಗತಿಸಿದರು. ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ದೀಪಿಕಾ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು.

ಜೂನ್ 30 (ನಾಳೆ) : ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಹಿರಿಯಡಕ ಕಚೇರಿ ಉದ್ಘಾಟನೆ

Posted On: 29-06-2023 07:24PM

ಕಾಪು : ತಾಲೂಕಿನ ಹಿರಿಯಡಕ ಬೊಮ್ಮರಬೆಟ್ಟು ಗ್ರಾಮಪಂಚಾಯತ್ ಬಳಿ‌ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ನೂತನ ಶಾಸಕರ ಕಚೇರಿಯ ಉದ್ಘಾಟನಾ ಸಮಾರಂಭ ಬೆಳಿಗ್ಗೆ 10 ಗಂಟೆಗೆ ಜರಗಲಿದೆ.

ಇದರ ಜೊತೆಗೆ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ : ಸಮಾನ ಮನಸ್ಕರ ತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Posted On: 29-06-2023 06:57PM

ಕಟಪಾಡಿ : ಶಶಿಧರ ಪುರೋಹಿತ ಕಟಪಾಡಿ ಇವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ಪುಸ್ತಕವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ವಿತರಿಸಿದರು.

ಈ ಸಂದರ್ಭ ಶಾಸಕರು ಉಚಿತ ಪುಸ್ತಕ ವಿತರಣೆ ಮಾಡಿದ ಸಮಾನ ಮನಸ್ಕ ತಂಡಕ್ಕೆ ಮತ್ತು ಇದಕ್ಕೆ ಸಹಕರಿಸಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಶಿಧರ ಪುರೋಹಿತ, ಸದಾಶಿವ ಆಚಾರ್ಯ, ಸಹನಾ ದೇವರಾಜ ಆಚಾರ್ಯ, ಅಚ್ಚುತ ಆಚಾರ್ಯ ಕಾಪು, ನಿವೃತ್ತ ತಹಶೀಲ್ದಾರರಾದ ಕೆ. ಮುರಳಿಧರ ಆಚಾರ್ಯ, ನಿವೃತ್ತ ಯೋಧ ವಾದಿರಾಜ ಆಚಾರ್ಯ, ಕಾಪು ಕಾಳಿಕಾಂಬ ದೇವಸ್ಥಾನ ಮೊಕ್ತೇಸರರಾದ ಶೇಖರ ಆಚಾರ್ಯ, ಗಣೇಶ್ ಆಚಾರ್ಯ ಉಚ್ಚಿಲ, ಭಾಸ್ಕರ ಆಚಾರ್ಯ, ಚಂದ್ರಶೇಖರ ಆಚಾರ್ಯ, ದಿವಾಕರ ಆಚಾರ್ಯ, ಕಾರ್ತಿಕ್ ಆಚಾರ್ಯ, ಬಿ.ಎ ಆಚಾರ್ಯ ಮಣಿಪಾಲ, ರವಿ ಪುರೋಹಿತ ಉಪಸ್ಥಿತರಿದ್ದರು.

ಕಾಪು : ಮಳೆಯಿಂದ ಗೋಶಾಲೆಗೆ ಹಾನಿ, ತಾತ್ಕಾಲಿಕ ಶೆಡ್ ನಿರ್ಮಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Posted On: 29-06-2023 04:23PM

ಕಾಪು : ಇಲ್ಲಿನ ಮಟ್ಟಾರು ಕಡಂಬುನಲ್ಲಿರುವ ಧರ್ಮ ಫೌಂಡೇಶನ್ ಗಿರೀಶ್ ಜಿ. ಏನ್ ರವರ ಗೋಶಾಲೆಯ ಶೆಡ್ ಮಳೆಗೆ ಹಾನಿಯಾಗಿದ್ದು, ಇಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಟ್ಟಾರು ಘಟಕದ ಕಾರ್ಯಕರ್ತರು ತಾತ್ಕಾಲಿಕ ಶೆಡ್ ನಿರ್ಮಿಸಿದರು.

ಉಡುಪಿ : ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ, ಬಿರುಗಾಳಿ ಸಾಧ್ಯತೆ ; ಆರೆಂಜ್ ಅಲರ್ಟ್

Posted On: 29-06-2023 02:50PM

ಉಡುಪಿ : ಮುಂದಿನ 24 ಗಂಟೆಗಳಲ್ಲಿ ಉಡುಪಿ ,ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಣೆಯಾಗಿದೆ.

ಶಿವಮೊಗ್ಗ ಚಿಕ್ಕಮಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆಯಿದ್ದು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.

ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿ ಗಂಟೆಗೆ 40-45 ಕಿ.ಮೀ ವೇಗದಲ್ಲಿ ಬೀಸಲಿದ್ದು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.