Updated News From Kaup
ಕಾಪು : ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರು ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಗೆ ಅಭಿನಂದನೆ

Posted On: 10-06-2023 05:50PM
ಕಾಪು : ಪೈಯ್ಯಾರು ಕರಿಯಣ್ಣ ಶೆಟ್ಟಿ (ಪಿ.ಕೆ.ಎಸ್) ಪ್ರೌಢಶಾಲೆ, ಕಳತ್ತೂರು ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಶನಿವಾರ ಅಭಿನಂದನಾ ಕಾರ್ಯಕ್ರಮ ನೆರವೇರಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕರು ವಿದ್ಯಾರ್ಥಿಗಳಿಗೆ ನಾನು ಕನ್ನಡ ಮೀಡಿಯಂ ಎಂಬ ಕೀಳರಿಮೆ ಬೇಡ. ಮನುಷ್ಯ ಪ್ರಯತ್ನ ಪಟ್ಟರೆ ಏನನ್ನು ಸಾಧಿಸಬಹುದು ಪ್ರತಿ ವಿದ್ಯಾರ್ಥಿಯಲ್ಲೂ ಅವರದ್ದೇ ಆದ ಪ್ರತಿಭೆ ಇದ್ದೇ ಇರುತ್ತದೆ. ಆತ್ಮವಿಶ್ವಾಸದಿಂದ ಮುಂದೆ ಸಾಗಿ ಎಂದರು.
ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ನಿತ್ಯಾನಂದ ಆರ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ, ಸಂಚಾಲಕರಾದ ಶಿವರಾಮ ಶೆಟ್ಟಿ, ಖಜಾಂಚಿಗಳಾದ ಅರುಣ ಡಿ ಶೆಟ್ಟಿ, ಸದಸ್ಯರುಗಳಾದ ಲವ ಶೆಟ್ಟಿ, ವೇಣುಗೋಪಾಲ ಎಂ, ಯೋಗೀಶ್ ಆಚಾರ್ಯ, ಕಾಂತಾರ ಟೈಲರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಪೈಯ್ಯಾರ್, ಶಾಲಾ ಮುಖ್ಯ ಶಿಕ್ಷಕರಾದ ಗಂಗಾ ನಾಯ್ಕ ಉಪಸ್ಥಿತರಿದ್ದರು. ಚಂದ್ರಕಾಂತ ನಾಯ್ಕ ವಂದಿಸಿದರು.
ಜೂನ್ 11 - 12 : ಕಾಪು ಹೊಸ ಮಾರಿಗುಡಿ - ಸಾನಿಧ್ಯ ಚಲನಾ ಸಮಾರಂಭ

Posted On: 10-06-2023 05:36PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶ್ರೀ ಮಾರಿಯಮ್ಮ ಮತ್ತು ಶ್ರೀ ಉಚ್ಚಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ ಧಾರ್ಮಿಕ ಕಾರ್ಯಕ್ರಮವು ಜೂ. 11 ಮತ್ತು 12 ರಂದು ನಡೆಯಲಿದೆ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶುಕ್ರವಾರ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೊದಲ ಹಂತದ ಕಾಮಗಾರಿಗೆ ಅನುಗುಣವಾಗಿ ಅಗ್ರಸಭೆ, ಮುಖ ಮಂಟಪ ನಿರ್ಮಾಣವಾಗಬೇಕಿದ್ದು, ಅದಕ್ಕೆ ಪೂರ್ವಭಾವಿಯಾಗಿ ಪ್ರಸ್ತುತ ಇರುವ ಮಾರಿಯಮ್ಮ ಗುಡಿ ಮತ್ತು ಉಚ್ಚಂಗಿ ಗುಡಿಗಳನ್ನು ವಿಸರ್ಜಿಸಬೇಕಾಗಿದೆ. ಈ ಉದ್ದೇಶದಿಂದ ಅಮ್ಮನ ಅಭಯ ನುಡಿ ಮತ್ತು ಪ್ರಾಜ್ಞರ ಪ್ರಶ್ನಾ ಚಿಂತನೆಯಂತೆ ತಾತ್ಕಾಲಿಕ ಗುಡಿಗಳನ್ನು ನಿರ್ಮಿಸಲಾಗಿದ್ದು ಜೂ.11ರಂದು ಬೆಳಿಗ್ಗೆ ಗಂಟೆ 8 ರಿಂದ ಚಂಡಿಕಾಯಾಗ ಪ್ರಾರಂಭಗೊಂಡು, 11 ಕ್ಕೆ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ.

ಜೂ.12ರಂದು ಅಮ್ಮನ ಗದ್ದುಗೆ ಸಾನ್ನಿಧ್ಯ ಚಲನೆ ನಡೆಯಲಿದ್ದು ಬೆಳಿಗ್ಗೆ ಗಂಟೆ 7 ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದು 8.30 ಕ್ಕೆ ನೂತನ ತಾತ್ಕಾಲಿಕ ಗುಡಿಯಲ್ಲಿ ಸಾನಿಧ್ಯ ಪ್ರತಿಷ್ಠೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಜ್ಯೋತಿರ್ವಿದ್ವಾನ್ ಕೆ.ಜಿ. ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ, ಜ್ಯೋತಿರ್ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಅವರ ಸಹಕಾರದೊಂದಿಗೆ ಚಂಡಿಕಾಯಾಗ, ಸಾನಿಧ್ಯ ಚಲನೆ, ಮತ್ತು ಸಾನಿಧ್ಯ ಪ್ರತಿಷ್ಠಾಪೂರ್ವಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 10 ಗಂಟೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಉಡುಪಿ ಜಿಲ್ಲಾಧಿಕಾರಿ ಡಾ| ಕೂರ್ಮಾ ರಾವ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಸಮಿತಿ ಮುಖಂಡರಾದ ಸರ್ವೋತ್ತಮ ಶೆಟ್ಟಿ ಅಬುದಾಭಿ, ಮಲ್ಲಾರು ಶಶಿಧರ್ ಶೆಟ್ಟಿ ಮಸ್ಕತ್, ಮೂಳೂರು ಸುಧಾಕರ ಹೆಗ್ಡೆ ಮುಂಬಯಿ, ರವಿ ಸುಂದರ್ ಶೆಟ್ಟಿ ಮುಂಬಯಿ, ಸಂತೋಷ್ ಶೆಟ್ಟಿ ಇನ್ನಾ ಬಾಳಿಕೆ ಕುರ್ಕಿಲಬೆಟ್ಟು, ಉಪೇಂದ್ರ ಶೆಟ್ಟಿ ಬೆಂಗಳೂರು, ವಿವಿಧ ಸಮಾಜದ ಗಣ್ಯರಾದ ಎಂ.ಬಿ. ಪುರಾಣಿಕ್, ಆನಂದ್ ಎಂ. ಶೆಟ್ಟಿ, ಡಾ| ಜಿ. ಶಂಕರ್, ಬಿ.ಎನ್. ಶಂಕರ ಪೂಜಾರಿ, ಧರ್ಮಪಾಲ್ ಯು, ದೇವಾಡಿಗ, ಗಂಗಾಧರ ಆಚಾರ್ಯ, ರಾಮದಾಸ್ ಶೆಟ್ಟಿಗಾರ್, ಗೋಕುಲ್‌ದಾಸ್ ಬಾರ್ಕೂರು, ಜಯ ರಾಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ , ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಉಪಾಧ್ಯಕ್ಷರುಗಳಾದ ಗಂಗಾಧರ್ ಸುವರ್ಣ, ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ್ ಶೆಟ್ಟಿ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.
ಶಿರ್ವ : ಬಂಟಕಲ್ಲು ಆಟೋ ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆ

Posted On: 10-06-2023 07:06AM
ಶಿರ್ವ : ಬಂಟಕಲ್ಲು ಆಟೋ ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷರಾಗಿ ಬಂಟಕಲ್ಲು ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರು, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಬಂಟಕಲ್ಲು ಇದರ ಗುರುಸ್ವಾಮಿ ಆಗಿರುವ ಮಂಜುನಾಥ ಪೂಜಾರಿ ಇವರು ತೃತೀಯ ಬಾರಿಗೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಬಂಟಕಲ್ಲು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಮಾಧವ ಕಾಮತ್, ಉಪಾಧ್ಯಕ್ಷರಾಗಿ ಸತೀಶ್ ಅರಸಿಕಟ್ಟೆ, ಕಾರ್ಯದರ್ಶಿಯಾಗಿ ಡೆನಿಸ್ ಡಿಸೋಜ, ಜೊತೆ ಕಾರ್ಯದರ್ಶಿಯಾಗಿ ದಿವಾಕರ ಶೆಟ್ಟಿ, ಕೋಶಾಧಿಕಾರಿ ಸುಧಾಕರ್ ಅರಸಿಕಟ್ಟೆ, ಕ್ರೀಡಾ ಕಾರ್ಯದರ್ಶಿ ಅಶೋಕ್ ಅರಸಿಕಟ್ಟೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮೇಶ್ ಪ್ರಭು ಪಾಲಮೆ, ರಾಘವೇಂದ್ರ ಹೇರೂರು, ಶೈಲೇಶ್ ಕಲ್ಲುಗುಡ್ಡೆ, ವಿಠಲ ಮೂಲ್ಯ ಅರಸಿಕಟ್ಟೆ, ನವೀನ್ ಸನಿಲ್, ಕೇಶವ, ರವಿ ಕುಲಾಲ್, ಸುರೇಶ್ ಕುಲಾಲ್, ಹರೀಶ್ ಹೇರೂರು, ಗೋಪಾಲ್ ದೇವಾಡಿಗ ಹೇರೂರು ಆಯ್ಕೆಯಾಗಿದ್ದಾರೆ.
ಪಡುಬಿದ್ರಿ : ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಪಿ.ಎ. ಮೊಹಿದ್ದೀನ್ ಸನ್ಮಾನ

Posted On: 10-06-2023 07:02AM
ಪಡುಬಿದ್ರಿ: ಗಡಿ ಭದ್ರತಾ ಪಡೆಯಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಿವೃತ್ತ ಹೊಂದಿದ ಪಡುಬಿದ್ರಿ ಜಮಾಅತ್ ಸದಸ್ಯರಾದ ಪಿ.ಎ. ಮೊಹಿದ್ದೀನ್ ಅವರನ್ನು ಪಡುಬಿದ್ರಿ ಜಮಾಅತ್ ಸಮಿತಿಯ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಬಿಎಸ್‌ಎಫ್‌ನಲ್ಲಿ ೩೫ ವರ್ಷಗಳ ಕಾಲ ದೇಶದ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಇತ್ತೀಚೆಗೆ ನಿವೃತ್ತರಾದ ಪಿ.ಎ. ಮೊಹಿದ್ದೀನ್ ಅವರನ್ನು ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ನಡೆದ ಸಮಾರಂಭದಲ್ಲಿ ಜುಮ್ಮಾ ಮಸೀದಿ ಖತೀಬ್ ಎಸ್.ಎಮ್. ಅಬ್ದುಲ್ ರಹ್ಮಾನ್ ಮದನಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಹಜ್ ಯಾತ್ರೆಕೈಗೊಳ್ಳಲಿರುವ ಜಮಾಅತ್ ಸದಸ್ಯ ವೈ. ಜಲೀಲ್ ಸಾಹೇಬ್ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.
ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ. ಮಯ್ಯದ್ದೀನ್ ಲಚ್ಚಿಲ್, ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶೇಖ್ ಇಸ್ಮಾಯಿಲ್ ಮಾಸ್ಟರ್, ಉಪಾಧ್ಯಕ್ಷ ಅಬ್ದುಲ್ ಶುಕೂರ್ ದಾವೂದ್ ಸಾಹೇಬ್, ಕೋಶಾಧಿಕಾರಿ ಎ.ಎಚ್. ಮುಹಮ್ಮದ್ ಹಾಜಿ, ಮಾಜಿ ಅಧ್ಯಕ್ಷ ಹಾಜಿ ಪಿ.ಎ. ಅಬ್ದುಲ್ ರಹ್ಮಾನ್, ಹಾಜಿ ಎಂ.ಎಚ್. ಹಮ್ಮಬ್ಬ, ಜಮಾಅತ್ ಸದಸ್ಯರಾದ ಪಿ.ಎಂ, ಅಕ್ಬರ್, ನಜೀರ್ ಸಿ.ಪಿ ಕಂಚಿನಡ್ಕ, ಹಂಝ ಅಬ್ಬಾಸ್, ಮಯ್ಯದ್ದಿ ಮಜಲಕೋಡಿ, ಇಮ್ತಿಯಾಝ್ ಚಾಬು ಸಾಹೇಬ್, ಇಸ್ಮಾಯಿಲ್ ಕಾಡಿಪಟ್ಣ, ಭಾಷಾ ಬೇಂಗ್ರೆ ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ದ.ಕ ಜಿಲ್ಲೆಗೆ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್

Posted On: 09-06-2023 06:53PM
ಉಡುಪಿ : ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಭಾಸ್ಕರ್ ಕೋಟ್ಯಾನ್ ನಿಧನ

Posted On: 09-06-2023 06:39PM
ಕಾಪು : ಹಿರಿಯ ಕಾಂಗ್ರೆಸಿಗ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಭಾಸ್ಕರ್ ಕೋಟ್ಯಾನ್ (67) ಹೃದಯಾಘಾತದಿಂದ ನಿಧನ ಹೊಂದಿದರು.
ಉಡುಪಿ ತಾಲೂಕು ಪಂಚಾಯತಿಗೆ ಉದ್ಯಾವರ ಕ್ಷೇತ್ರದಿಂದ ಒಂದು ಬಾರಿ ಆಯ್ಕೆಯಾಗಿದ್ದ ಇವರು, ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉದ್ಯಾವರ ಬಿಲ್ಲವ ಮಹಾಜನ ಸಂಘ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದ್ದುದನ್ನು ನೇರವಾಗಿ ಹೇಳುತ್ತಿದ್ದ ಇವರು ಉದ್ಯಾವರದಲ್ಲಿ ಹಲವು ವರ್ಷಗಳ ಹಿಂದೆ ನಡೆದ ಫಿಶ್ ಮಿಲ್ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ಸಿನಲ್ಲಿ ಸಕ್ರಿಯವರಾಗಿದ್ದು, ಪತ್ನಿ, ಮಗಳು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಕಾಪು : ಮುದರಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಗೆ ಅಭಿನಂದನೆ

Posted On: 08-06-2023 11:06AM
ಕಾಪು : ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ಮುದರಂಗಡಿ ಇದರ ವತಿಯಿಂದ ಜೂನ್ 7ರಂದು ಮುದರಂಗಡಿಯ ಸ್ಪಂದನ ಸಭಾಭವನದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಬಿಜೆಪಿ ಕಾಪು ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗಿಣಿ ಶೆಟ್ಟಿ, ಮುದರಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವರಾಮ್ ಭಂಡಾರಿ, ಮುದರಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಹಿರಿಯರಾದ ಗಂಗಾಧರ ಶೆಟ್ಟಿ, ಸಮಾಜ ಸೇವಕರಾದ ವಿಶ್ವನಾಥ ಶೆಟ್ಟಿ ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಪು : ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯ ಸರಕಾರದ ವಚನಭೃಷ್ಟತೆ ನೀತಿ ಖಂಡಿಸಿ ಪ್ರತಿಭಟನೆ

Posted On: 05-06-2023 07:02PM
ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ಕಾಪು ಪೇಟೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಸಭೆ ಸೋಮವಾರ ನಡೆಯಿತು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ರಾಜ್ಯ ಸರಕಾರ 200 ಯುನಿಟ್ ವಿದ್ಯುತ್ ಎಲ್ಲರಿಗೂ ಉಚಿತ ಎಂದು ಹೇಳಿ ಇದೀಗ ವಾರ್ಷಿಕ ಸರಾಸರಿಯ ಶೇ.10 ರಷ್ಟು ಹೆಚ್ಚು ಮಾತ್ರ ಉಚಿತ ಎಂದು ಹೇಳಿ ಜನರಿಗೆ ಕೊಟ್ಟ ವಚನ ಮುರಿದು ವಚನಭ್ರಷ್ಟ ರಾಗಿದ್ದಾರೆ. ಅಲ್ಲದೆ ಪ್ರತಿ ಯುನಿಟ್ ವಿದ್ಯುತ್ ಗೆ ಸುಮಾರು 70 ಪೈಸೆ ಯಷ್ಟು ವಿದ್ಯುತ್ ದರ ಏರಿಸಿ ಜನವಿರೋಧಿ ನೀತಿ ತೋರಿಸಿದ್ದಾರೆ.
ಇನ್ನು ಪಶುಸಂಗೋಪನಾ ಇಲಾಖೆಯ ಸಚಿವರಾದ ವೆಂಕಟೇಶ್ ರವರು ಗೋವುಗಳನ್ನು ಯಾಕೆ ಕಡಿಯಬಾರದು ಎಂದು ಹಿಂದೂಗಳ ಭಾವನೆಗಳ ಮೇಲೆ ಚೆಲ್ಲಾಟವಾಡುವ ಮಾತನ್ನಾಡಿದ್ದಾರೆ. ಗೋವುಗಳೆಂದರೆ ಭಾರತೀಯರಿಗೆ ಪರಮ ಪವಿತ್ರವಾದದು. ಯಾವುದೇ ಕೆಲಸ ಶುಭಾರಂಭ ಮಾಡುವುದಾದರೆ ಮೊದಲು ಗೋಪೂಜೆ ಮಾಡುವರು. ಗ್ರಹಪ್ರವೇಶ ಮಾಡುವುದಾರೂ ಮೊದಲು ಗೋವನ್ನು ಪ್ರವೇಶ ಮಾಡಿಸಿ ನಂತರ ನಾವು ಪ್ರವೇಶ ಮಾಡುವೆವು. ಭಾರತೀಯರದ್ದು ಗೋವು ಆಧಾರಿತ ಕೃಷಿ ಜೀವನ ಪದ್ಧತಿ. ಅಂತಹ ಗೋವುಗಳನ್ನು ಕಡಿಯುವ ಮಾತನ್ನಾಡುವ ಮೂಲಕ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವರು. ಈ ಕಾಯ್ದೆ ಹಿಂಪಡೆಯುವ ಪ್ರಯತ್ನ ಮಾಡಿದಲ್ಲಿ ಬಿಜೆಪಿ ಕಾರ್ಯಕರ್ತರು ನಿಮ್ಮ ಮುಂದಿನ ಎಲ್ಲ ಕಾರ್ಯಕ್ರಮಗಳಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ಮಾಡುವೆವು. ಗ್ರಾಮ ಗ್ರಾಮಗಳಲ್ಲಿ ಜನಜಾಗ್ರತಿ ಮೂಡಿಸುವೆವು ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ವೃದ್ಧ ಗೋವುಗಳನ್ನು ಏನು ಮಾಡುವುದು ಎಂಬ ಪ್ರಶ್ನೆಗೆ ನಿಮ್ಮ ವೃದ್ಧ ತಂದೆ ತಾಯಿ ಇದ್ದರೆ ಏನು ಮಾಡುವಿರೋ ಗೋವನ್ನೂ ಅದೇ ರೀತಿಯಲ್ಲಿ ನೋಡುವ ಸಂಸ್ಕ್ರತಿ ನಮ್ಮದು ಎಂದರು. ಚಕ್ರವರ್ತಿ ಸೂಲಿಬೆಲೆಗೆ ಜೈಲು ಸೇರಬೇಕಾದೀತು ಎನ್ನುವ ಸಚಿವ ಎಮ್ ಬಿ ಪಾಟೀಲ್ ಹೇಳಿಕೆ ಖಂಡಿಸಲಾಗಿ ರಾಜ್ಯ ಸರಕಾರದ ಜನವಿರೋಧಿ ನೀತಿ ಬಿಡದಿದ್ದರೆ ದಿನಂಪ್ರತಿ ಹೋರಾಟಕ್ಕೂ ನಾವು ಸಿಧ್ಧ ಎನ್ನುವ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್ ಕೆ, ಚಂದ್ರಶೇಖರ್ ಕೋಟ್ಯಾನ್, ಸುಧಾಮ ಶೆಟ್ಟಿ, ಮಂಡಲ ಪ್ರಧಾನಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಂಡಲ ಕಾರ್ಯದರ್ಶಿಗಳಾದ ಲತಾ ಆಚಾರ್ಯ, ಚಂದ್ರ ಮಲ್ಲಾರ್, ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಎಸ್ ಸಿ ಮೋರ್ಚ ಅಧ್ಯಕ್ಷರಾದ ಎಮ್ ಜಿ ನಾಗೇಂದ್ರ, ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಶೈಲೇಶ್, ಪ್ರಮುಖರಾದ ಶರಣ್ ಕುಮಾರ್ ಮಟ್ಟು, ಪ್ರವೀಣ್ ಶೆಟ್ಟಿ ಇನ್ನಂಜೆ, ದಿನೇಶ್ ಕೋಟ್ಯಾನ್, ಜಗದೀಶ್ ಮೆಂಡನ್, ಶೈಲೇಶ್ ಶೆಟ್ಟಿ, ರಮಾ ಶೆಟ್ಟಿ, ಗೌರಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಭೇಟಿಯಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Posted On: 05-06-2023 06:53PM
ಕಾಪು : ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಏಕನಾಥ ಶಿಂಧ ಅವರನ್ನು ಜೂನ್ 5ರಂದು ಮುಂಬೈನಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾದರು.
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಪು ಕ್ಷೇತ್ರಕ್ಕೆ ತನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕಾಪು ಕ್ಷೇತ್ರ ಸರ್ವಾಂಗೀಣ ರೀತಿಯಲ್ಲಿ ಅಭಿವೃದ್ಧಿ ಹೊಂದುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳಾದ ರಿತೇಶ್ ಶೆಟ್ಟಿ, ಜೀವನ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಕಳ : ಕುಲಾಲ ಸಂಘ ಬೋಳ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ - ವಾರ್ಷಿಕ ಮಹಾಸಭೆ

Posted On: 05-06-2023 06:19PM
ಕಾರ್ಕಳ : ನೂರಾರು ಕುಟುಂಬಗಳ ಸದಸ್ಯರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡುವಾಗ ಒಮ್ಮತವೇರ್ಪಡದಿರುವುದು ಸಹಜ. ಆದರೆ ಉತ್ತಮ ಕಾರ್ಯ ಸಿದ್ಧಿಯಾಗಬೇಕಾದರೆ, ಇಂತಹ ಭಿನ್ನಾಭಿಪ್ರಾಯಗಳನ್ನು ಮೂಲದಲ್ಲಿಯೇ ಸರಿಪಡಿಸಿಕೊಂಡು ಏಕತೆಯಿಂದಿದ್ದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೊಸ್ಮಾರು ಕುಲಾಲ ಸಮಾಜ ಕಲ್ಯಾಣ ಸಂಘದ ಅಧ್ಯಕ್ಷ ಪ್ರಮೋದ್ ಕುಲಾಲ್ ಅಭಿಪ್ರಾಯಪಟ್ಟರು. ಅವರು ಕುಲಾಲ ಸಂಘ ಬೋಳದ ವತಿಯಿಂದ ಜೂ.4ರಂದು ನಡೆದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಂಭತ್ತನೇ ವರ್ಷದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದೈವ ದೇವರ ಆರಾಧನೆ ಮಾತ್ರವಲ್ಲದೆ ಸೇವೆಯಲ್ಲಿಯೂ ಕುಲಾಲ ಸಮಾಜದ ಬಂಧುಗಳ ಪಾತ್ರ ಮಹತ್ವವಾದುದು. ಶ್ರದ್ಧಾ ಭಕ್ತಿಯಿಂದ, ಪ್ರಾಮಾಣಿಕತೆಯಿಂದ ದುಡಿಯುವ ಇಂತಹ ಸೇವಕರನ್ನು ಗುರುತಿಸಿ,ಗೌರವಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕೆಂದರು.
ಸನ್ಮಾನ : ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 94.33% ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಚಿಂತನ್ ಕುಲಾಲ್ ರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕುಲಾಲ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಮಕ್ಕಳಿಗೆ ವಸಂತಿ ಮಹಾಬಲ ಮೂಲ್ಯರ ವತಿಯಿಂದ ಪುಸ್ತಕ ವಿತರಿಸಲಾಯಿತು. ಸಂಘದ ಅಧ್ಯಕ್ಷ ಗಣೇಶ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.
ಸ್ಥಾಪಕಾಧ್ಯಕ್ಷ ಮಹಾಬಲ ಮೂಲ್ಯ, ಗೌರವಾಧ್ಯಕ್ಷ ವಸಂತ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪವನ್ ಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ಶ್ರೀಶಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸಂಗೀತಾ ಕುಲಾಲ್ ವಂದಿಸಿದರು.