Updated News From Kaup
ಉಡುಪಿ : ಮಿತ್ರ ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸ್ ರೆ ವಿಭಾಗ ಉದ್ಘಾಟನೆ

Posted On: 24-06-2023 06:59AM
ಉಡುಪಿ : ಇಲ್ಲಿನ ಮಿತ್ರ ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸ್ ರೆ ವಿಭಾಗವನ್ನು ಡಾ. ಬಿ.ಜಿ. ಆಚಾರ್ಯ ಮತ್ತು ಡಾ. ಶ್ರೀಪತಿ ಎಂ ಭಟ್ ಶುಕ್ರವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಸಚಿನ್ ಹೊಳ್ಳ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಶ್ಮಿ ಹೊಳ್ಳ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸಾಧನ ಹೊಳ್ಳ ವಂದಿಸಿದರು.
ಬೈರಂಪಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನೆ

Posted On: 23-06-2023 05:45PM
ಕಾಪು : ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಬೈರಂಪಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಇಂದು ಬೈರಂಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಅಭಿನಂದನಾ ಸಮಾರಂಭ ನೆರವೇರಿತು.
ಈ ಸಂದರ್ಭ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಸಾರ್ವಜನಿಕರ ದೂರುಗಳ ನಿವಾರಣೆಗೆ ವಿಳಂಬ ಮಾಡದೆ ತಕ್ಷಣದಲ್ಲಿ ಸ್ಪಂದಿಸಬೇಕು. ವೃತ್ತಿ ಹಾಗೂ ಪ್ರವೃತ್ತಿ ಬೇರೆ ಇರಬಹುದು ಆದರೆ ಈ ಸಮಾಜದ ಕಟ್ಟ ಕಡೆಯ ಜನರಿಗೆ ನಾವು ಧ್ವನಿ ಆಗಬೇಕು ಜೊತೆಗೆ ಸಮಾಜದ ಕಟ್ಟ ಕಡೆಯ ಜನರ ಕಣ್ಣೀರು ಒರೆಸುವ ಕಾರ್ಯ ನಮ್ಮಿಂದಾಗಬೇಕು. ಸರಕಾರದ ಮತ್ತು ಸಮಾಜದ ಒಬ್ಬ ಸೇವಕನಾಗಿ, ಪ್ರತಿನಿಧಿಯಾಗಿ ಸೇವೆ ಮಾಡುವಂತಹ ಅವಕಾಶ ನನಗೆ ಭಗವಂತ ನೀಡಿದ್ದಾರೆ. ಹಾಗಾಗಿ ನಾವು ನೀವೆಲ್ಲರೂ ಒಟ್ಟಾಗಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ಉಪಾಧ್ಯಕ್ಷರಾದ ಸುಚೇತಾ, ಬೈರಂಪಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಶೆಟ್ಟಿ ಹಾಗೂ ಬೈರಂಪಳ್ಳಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ಕಾಪು : ವೈದ್ಯರ ನಿರ್ಲಕ್ಷ್ಯ ಆರೋಪ - ಕೆಮುಂಡೇಲ್ ಯುವತಿ ಸಾವು

Posted On: 22-06-2023 10:07PM
ಕಾಪು : ವಿದ್ಯಾರ್ಥಿ ಜೀವನದಲ್ಲಿದ್ದು ಮುಂದೆ ಬಾಳಿ ಬದುಕಬೇಕಾಗಿದ್ದ ಯುವತಿಯೋರ್ವಳು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಘಟನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕೆಮುಂಡೇಲ್ ನ ಜನಾರ್ದನ ಮೂಲ್ಯ ಹಾಗೂ ಶೋಭಾ ಅವರ ಏಕೈಕ ಪುತ್ರಿ ನಿಖಿತ ಕುಲಾಲ್ (20)ಮೃತಪಟ್ಟ ದುರ್ದೈವಿ. ಕೆಪಿಟಿಯಲ್ಲಿ ದ್ವೀತಿಯ ವರ್ಷದ ಡಿಪ್ಲೋಮ ವಿದ್ಯಾರ್ಥಿನಿಯಾಗಿದ್ದರು.
ಜೂ.13ರ ಸೋಮವಾರ ರಾತ್ರಿ ನಿಖಿತ ವಿಪರೀತ ವಾಂತಿಯಿಂದ ಬಳಲಿ ಅಸ್ವಸ್ಥಗೊಂಡಿದ್ದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ಸ್ಕ್ಯಾನಿಂಗ್ ನಡೆಸಿದರೂ ಸರಿಯಾದ ಕಾರಣ ಪತ್ತೆಹಚ್ಚಲಾಗಲಿಲ್ಲ, ಬೇರೆ ಆಸ್ಪತ್ರೆಗೆ ಸೇರಿಸಲು ಆಸ್ಪತ್ರೆಯವರು ಬಿಡಲಿಲ್ಲ ಎಂದು ವಿದ್ಯಾರ್ಥಿನಿಯ ಚಿಕ್ಕಮ್ಮ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಪತ್ರೆಯ ಬೇಜವಾಬ್ದಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾವಿನ ತನಿಖೆಗೆ ಆಗ್ರಹಿಸಿ ಶುಕ್ರವಾರ ಎಬಿವಿಪಿ ಸಂಘಟನೆ ಆಸ್ಪತ್ರೆಯ ಎದುರು ಪ್ರತಿಭಟನೆಗೆ ಕರೆ ಕೊಟ್ಟಿದೆ. ಕಾಪು ಕುಲಾಲ ಸಂಘ ಮತ್ತು ಕಾಪು ಕುಲಾಲ ಯುವವೇದಿಕೆ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.
ಜೂನ್ 24 : ಕಾಪುವಿನಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

Posted On: 22-06-2023 02:02PM
ಕಾಪು : ದೇಸಿಕ್ರೂ ಕಾಪು ಪ್ರೈ.ಲಿ., ಜೇಸಿಐ ಕಾಪು ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಜೂನ್ 24, ಶನಿವಾರ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದೇಸೀ ಕ್ರೂ ಪ್ರೈ. ಲಿ., N.H. 66, ದಂಡತೀರ್ಥ, ಉಳಿಯಾರಗೋಳಿ, ಕಾಪು ಇಲ್ಲಿ ನಡೆಯಲಿದೆ.
ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು. ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಗ್ಲುಕೋಮಾ ಹಾಗೂ ಕಣ್ಣಿನ ಇತರ ಚಿಕಿತ್ಸೆಗಳನ್ನು ನಡೆಸಲಾಗುವುದು. ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಅದೇ ದಿನಾಂಕದಂದು ಆಸ್ಪತ್ರೆಯಿಂದ ಉಚಿತ ವಾಹನ ಸೌಲಭ್ಯವಿದೆ. ಶಸ್ತ್ರ ಚಿಕಿತ್ಸೆಯ ನಂತರ, ಮರು ತಪಾಸಣೆಗೆ ತಿಳಿಸಿದ ದಿನಾಂಕದಂದು ಶಿಬಿರ ನಡೆದ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಾಗತಕ್ಕದು. ರೆಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಪ್ರತಿಯನ್ನು ತರಬೇಕು. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9448501172, 9326012660
ಶಿರ್ವ : ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ

Posted On: 21-06-2023 02:19PM
ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ವಿಶ್ವ ಯೋಗ ದಿನಾಚರಣೆಯನ್ನು ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಆಯುಷ್ ಮಂತ್ರಾಲಯ ನೀಡಿದ ಯೋಗ ವಿಡಿಯೋ ಪ್ರಾಯೋಗಿಕ ಪ್ರದರ್ಶನವನ್ನು ಅನುಸರಿಸಿ ಆಚರಿಸಲಾಯಿತು .

ಇಂದಿನ ಬಿಡುವಿಲ್ಲದ ಜೀವನದಲ್ಲಿ ಯುವಕರು ಯೋಗದತ್ತ ಗಮನಹರಿಸಬೇಕು, ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಕಾಪಾಡಿಕೊಳ್ಳಲು ಯೋಗ ಮುಖ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿಸಿ, ಶುಭ ಹಾರೈಸಿದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.

ಯೋಗವು ಮೂಲಭೂತವಾಗಿ ಭಾರತದ ಉಪಖಂಡದಲ್ಲಿ ಹುಟ್ಟಿಕೊಂಡಿತು. ಪ್ರಾಚೀನ ಕಾಲದಿಂದಲೂ ಯೋಗವನ್ನು ಯೋಗಿಗಳು ನಿರ್ವಹಿಸುತ್ತಾರೆ. ಯೋಗದ ಪದದ ಅರ್ಥ ಒಕ್ಕೂಟ ಮತ್ತು ಶಿಸ್ತು ಎಂದು ಸಂಸ್ಕೃತದಿಂದ ಅನುವಾದಿಸುತ್ತದೆ. ಯೋಗವು ಜೀವನದಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ. ಹೀಗಾಗಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಯೋಗದ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ ಎಂದು ಕ್ಯಾಡೆಟ್ ಆಶಿಕಾ ತಿಳಿಸಿ, ವಿಶ್ವ ಯೋಗ ದಿನಾಚರಣೆಯ ಪ್ರಾಮುಖ್ಯತೆಯನ್ನು ಮತ್ತು ಉದ್ದೇಶವನ್ನು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್ ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು.ಕ್ಯಾಡೆಟ್ಗಳಾದ ಅನುಪ್ ನಾಯಕ ಹಾಗೂ ಅಲಿಸ್ಟರ್ ಸುಜಾಯ್ ಡಿಸೋಜಾ ಸಹಕರಿಸಿದರು.

ಲ್ಲ್ಯಾನ್ಸ್ ಕಾರ್ಪೊರಲ್ ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಸ್ವಾಗತಿಸಿ , ಕೆಡೆಟ್ ಕೃತಿಕಾ ವಂದಿಸಿದರು. ಕೆಡೆಟ್ ಸೋನಾಲಿ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಉದ್ಯಾವರ : ಆಟೋ ಚಾಲಕರ ಮಾಲಕರ ಸಂಘದ ಮಾಜಿ ಅಧ್ಯಕ್ಷ ರಾಮ ಪೂಜಾರಿ ಕುತ್ಪಾಡಿ ನಿಧನ

Posted On: 20-06-2023 08:09PM
ಉದ್ಯಾವರ : ಎಸ್.ಡಿ.ಎಂ. ಆಟೋ ಚಾಲಕರ ಮಾಲಕರ ಸಂಘ ಕುತ್ಪಾಡಿ ಉದ್ಯಾವರ ಇದರ ಮಾಜಿ ಅಧ್ಯಕ್ಷ ರಾಮ ಪೂಜಾರಿ ಕುತ್ಪಾಡಿ (55) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.
32ಕ್ಕೂ ಅಧಿಕ ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಇವರು, ಎಸ್.ಡಿ.ಎಂ. ಆಟೋ ಚಾಲಕರ ಮತ್ತು ಮಾಲಕರ ಸಂಘದಲ್ಲಿ ಸಕ್ರಿಯರಾಗಿದ್ದು, ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು ನಾಲ್ಕು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿಯ ಪ್ರತಿಷ್ಠಿತ ಯಶೋಧ ಆಟೋ ಯೂನಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಅತ್ಯಂತ ಶ್ರಮಜೀವಿಯಾಗಿದ್ದರು.
ಎಸ್ ಡಿ ಎಂ ಆಟೋ ಚಾಲಕರ ಮತ್ತು ಮಾಲಕರ ನಿಲ್ದಾಣಕ್ಕೆ ಅಗತ್ಯವಿದ್ದ ಮೇಲ್ಚಾವಣಿಯನ್ನು ಅಂದಿನ ಸಚಿವ ಪ್ರಮೋದ್ ಮಧ್ವರಾಜ್‍ರವರ ಮೂಲಕವಾಗಿ ದೊರಕಿಸಿಕೊಳ್ಳಲು ಅತ್ಯಂತ ಶ್ರಮಪಟ್ಟು ಯಶಸ್ವಿಯಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಾಪು : ರವಿಶಂಕರ್ ಗುರೂಜಿ ಭೇಟಿಯಾದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Posted On: 20-06-2023 08:03PM
ಕಾಪು : ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದರು.
ಈ ಸಂದರ್ಭ ಸುರೇಶ್ ಶೆಟ್ಟಿಯವರ ಸಹೋದರ ಹರೀಶ್ ಶೆಟ್ಟಿ, ಸಂಬಂಧಿಕರಾದ ಆಶಾ ಶೆಟ್ಟಿ, ಬೆಂಗಳೂರು ಹೋಟೆಲ್ ಉದ್ಯಮಿ ಉದಯ ಶೆಟ್ಟಿ ಉಪಸ್ಥಿತರಿದ್ದರು.
ಪಡುಬಿದ್ರಿ : ಹಿರಿಯರ ಜೊತೆ ಕಿರಿಯರು ಒಟ್ಟಾದಾಗ ಸಂಸ್ಥೆಯ ಭವಿಷ್ಯ ಭದ್ರ - ಸೌಮ್ಯ ನಿತೇಶ್

Posted On: 19-06-2023 11:56AM
ಪಡುಬಿದ್ರಿ : ಯುವವಾಹಿನಿ ಸದಸ್ಯರ ನಡುವಿನ ಬಾಂಧವ್ಯ ಗಟ್ಟಿಯಾಗಲು ಕುಟುಂಬ ಕಲರವದಂತಹ ಕಾರ್ಯಗಳು ಅನಿವಾರ್ಯ. ಹಿರಿಯರ ಜೊತೆ ಕಿರಿಯರು ಒಟ್ಟಾದಾಗ ಸಂಸ್ಥೆಯ ಭವಿಷ್ಯ ಭದ್ರವಾಗುತ್ತದೆ. ಯುವವಾಹಿನಿ ಪಡುಬಿದ್ರಿ ಘಟಕದಿಂದ ಇನ್ನಷ್ಟು ಕಾರ್ಯಗಳು ನಡೆಯಲಿ ಎಂದು ಪಡುಬಿದ್ರಿ ಕೆನರಾ ಬ್ಯಾಂಕ್ ಪ್ರಬಂಧಕಿ ಸೌಮ್ಯ ನಿತೇಶ್ ಹೇಳಿದರು. ಅವರು ರವಿವಾರ ಪಡುಬಿದ್ರಿ ಸುಜ್ಲಾನ್ ಕಾಲೋನಿಯ ಸಭಾಗೃಹದಲ್ಲಿ ಯುವವಾಹಿನಿ ಪಡುಬಿದ್ರಿ ಘಟಕದ ಕುಟುಂಬದ ಸದಸ್ಯರಿಗಾಗಿ ನಡೆದ ಕುಟುಂಬ ಕಲರವ - 2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾದ ಡಾ. ಎನ್. ಟಿ. ಅಂಚನ್ ಮಾತನಾಡಿ ಯುವವಾಹಿನಿ ಸಂಸ್ಥೆಯ ಮೂಲ ಉದ್ದೇಶವಾದ ವಿದ್ಯೆ, ಉದ್ಯೋಗ, ಸಂಪರ್ಕದ ನೆಲೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕವಾಗಿ ಯುವವಾಹಿನಿ ಸಂಸ್ಥೆ ದುಡಿಯುತ್ತಿದೆ. ಯುವವಾಹಿನಿಯ ಕಾರ್ಯಕ್ರಮಗಳಲ್ಲಿ ಕಿರಿಯರಿಂದ ಹಿರಿಯರಾದಿಯಾಗಿ ಮುತುವರ್ಜಿಯ ಭಾಗವಹಿಸುವಿಕೆ ನೋಡಲು ಸಾಧ್ಯ. ಸಮಾಜದಲ್ಲಿ ಪ್ರತಿಭೆಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದಾಗ ಸಮಾಜಕ್ಕೆ ಬೆಳಕಾಗುವ ಶಕ್ತಿ ಮೂಡಲು ಸಾಧ್ಯ. ಯುವವಾಹಿನಿ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಈ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಘಟಕದ ಸುದೀಪ್ ಎಸ್ ಕೋಟ್ಯಾನ್ ಮತ್ತು ಸ್ನೇಹರನ್ನು ಸನ್ಮಾನಿಸಲಾಯಿತು. ಘಟಕದ ಕುಟುಂಬದ ಸದಸ್ಯರಿಗಾಗಿ ನಡೆದ ವಿವಿಧ ಮನೋರಂಜನಾತ್ಮಕ ಆಟಗಳ ಬಹುಮಾನ ವಿತರಿಸಲಾಯಿತು.

ಪಡುಬಿದ್ರಿ ಘಟಕದ ಉಪಾಧ್ಯಕ್ಷರಾದ ಅಶ್ವಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಉದಯ್ ಕಾವೂರು, ಕಾರ್ಯಕ್ರಮ ಸಂಚಾಲಕ ಪ್ರಜ್ವಲ್, ಘಟಕದ ಕಾರ್ಯದರ್ಶಿ ಡಾ. ಐಶ್ವರ್ಯ ಸಿ ಅಂಚನ್ ಉಪಸ್ಥಿತರಿದ್ದರು.

ಘಟಕದ ಸದಸ್ಯೆ ಸುಗಂಧಿ ಶ್ಯಾಮ್ ಪ್ರಾರ್ಥಿಸಿ, ಮಾಜಿ ಅಧ್ಯಕ್ಷ ಸುಜಿತ್ ಕುಮಾರ್ ಪ್ರಸ್ತಾವಿಸಿದರು. ಮಾಜಿ ಅಧ್ಯಕ್ಷರಾದ ರವಿರಾಜ್ ಎನ್. ಕೋಟ್ಯಾನ್ ಮತ್ತು ಜೊತೆ ಕಾರ್ಯದರ್ಶಿ ಪೂರ್ಣಿಮ ವಿಧಿತ್ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕರಾದ ಪ್ರಜ್ವಲ್ ವಂದಿಸಿದರು.
ಉಚ್ಚಿಲ : ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್ ವೈದ್ಯರಿಗೆ ಅಭಿನಂದನೆ

Posted On: 16-06-2023 08:53PM
ಉಚ್ಚಿಲ : ಮೊಗವೀರ ಮಹಾಜನ ಸಂಘದ ವತಿಯಿಂದ ಕರ್ನಾಟಕ ಸರಕಾರದ ನೂತನ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಮಂಕಾಳ ಎಸ್ ವೈದ್ಯರಿಗೆ ಶುಕ್ರವಾರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಜರಗಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ಎಸ್ ವೈದ್ಯ, ಜಿ ಶಂಕರ್ ರವರ ದಾನ ಧರ್ಮದಿಂದ ಸಮಾಜದ ಆಶೀರ್ವಾದ ಅವರ ಮೇಲಿದೆ. ಹೆಜಮಾಡಿ ಬಂದರು ಕಾಮಗಾರಿಗೆ ಬಾಕಿ ಅನುದಾನ ಬಿಡುಗಡೆ ಮಾಡಿ ಸಂಪೂರ್ಣ ಮಾಡಲು ಸರಕಾರ ಬದ್ಧವಾಗಿದೆ. ಪಕ್ಷ ಬೇಧ ಮರೆತು ಕರಾವಳಿಯ ಅಭಿವೃದ್ಧಿಗೆ ಶ್ರಮವಹಿಸೋಣ ಎಂದರು.
ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೀನುಗಾರರಿಗೆ ಸರಿಯಾದ ಸವಲತ್ತು ಸರಕಾರದಿಂದ ಲಭಿಸಲು ಸಚಿವರು ಶ್ರಮಿಸಬೇಕು. ಮೀನುಗಾರಿಕಾ ಸಮುದಾಯದವರಾದ ಸಚಿವರಿಗೆ ಮೀನುಗಾರರ ಸಮಸ್ಯೆಗಳ ಬಗ್ಗೆ ತಿಳಿಸಿ ಹೇಳಬೇಕಾಗಿಲ್ಲ. ಅತಿ ಹೆಚ್ಚು ಮೀನುಗಾರರಿರುವ ಜಿಲ್ಲೆ ಉಡುಪಿ. ಮೀನುಗಾರರ ಶ್ರೇಯೋಭಿವೃದ್ಧಿಗೆ ಸರಕಾರ ಸಹಕರಿಸಬೇಕು. ಕರಾವಳಿಯ ೩ ಜಿಲ್ಲೆಯ ಮೀನುಗಾರರಿಗೆ ಸಿಗುವ ಎಲ್ಲಾ ಸೌಲಭ್ಯಗಳ ಮಾಹಿತಿ ಸಿಗುವಂತಾಗಬೇಕು. ಡ್ರೆಜ್ಜಿಂಗ್, ಸೀ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ ಜಿ. ಶಂಕರ್ ವಹಿಸಿದ್ದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಆನಂದ ಸಿ. ಕುಂದರ್, ಪ್ರಸಾದ್ ರಾಜ್ ಕಾಂಚನ್, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.
ಕಟಪಾಡಿ : ತ್ರಿಶಾ ವಿದ್ಯಾ ಪಿ.ಯು ಕಾಲೇಜು - ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ

Posted On: 16-06-2023 12:41PM
ಕಟಪಾಡಿ : ಸತತ ಪರಿಶ್ರಮ ಇದ್ದಾಗ ಮಾತ್ರ ಗೆಲುವು ಸಾಧ್ಯ. ಪ್ರಸ್ತುತ ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಅವಕಾಶಗಳು ಬಹಳಷ್ಟಿವೆ. ಅದನ್ನು ಸಾಧಿಸಲು ಛಲ ಹಾಗೂ ಪ್ರಯತ್ನ ಬೇಕು. ಶಿಕ್ಷಣ ಮಾತ್ರ ವಿದ್ಯಾರ್ಥಿಯ ಜೀವನವನ್ನು ಬೆಳಗಿಸುವಂತದ್ದು. ಜೊತೆಗೆ ಬದಲಾವಣೆಗಳಿಗೆ ಹೊಂದಿಕೊಂಡು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೇವೆ ಅನ್ನುವುದು ನಿರ್ಣಾಯಕ. ದೈಹಿಕ ಹಾಗೂ ಮಾನಸಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ವಿದ್ಯಾರ್ಥಿಯು ಪ್ರಬುದ್ಧನಾಗಲು ಸಾಧ್ಯ ಎಂದು ತ್ರಿಶಾ ಸಂಸ್ಥೆಯ ಸಂಸ್ಥಾಪಕ ಸಿ. ಎ ಗೋಪಾಲಕೃಷ್ಣ ಭಟ್ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪುನಶ್ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕುರಿತು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇಂದ್ರ ಪೈ ರವರು ತ್ರಿಶಾ ಕಾಲೇಜು ಕಟಪಾಡಿ ಗ್ರಾಮಕ್ಕೆ ಹೆಮ್ಮೆಯ ಸಂಗತಿ. ಕೇವಲ ಪಾಠಗಳಷ್ಟೇ ಅಲ್ಲದೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿರುವುದು ಕಾಲೇಜಿನ ವಿಶೇಷವೇ ಸರಿ. ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವುದು ಶ್ಲಾಘನೀಯ ವಿಷಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿದ್ಧಾಂತ ಫೌಂಡೇಶನ್ ನ ಖಜಾಂಚಿಯಾದ ನಮಿತಾ ಜಿ. ಭಟ್ ಉಪಸ್ಥಿತರಿದ್ದರು.
ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಂತ್ ಪೈ ರವರು,ವಿಜ್ಞಾನದಲ್ಲಿ ಪಿ.ಸಿ.ಎಂ.ಬಿ ಹಾಗೂ ಪಿ.ಸಿ.ಎಂ.ಸಿ ವಿಭಾಗದ ಮಹತ್ವದ ಜೊತೆಗೆ ಜೆ.ಇ.ಇ, ಎನ್.ಇ.ಇ.ಟಿ ತಯಾರಿಯ ಬಗೆಗೆ ಹೇಳಿದರು. ಅಲ್ಲದೆ ವಾಣಿಜ್ಯ ವಿಭಾಗದಲ್ಲಿ ಬಿ.ಎ.ಎಂ.ಎಸ್. ಕೋರ್ಸ್ ನ ಮಹತ್ವ ಹಾಗೂ ಸಿ.ಎ, ಸಿ.ಎಸ್ ನ ತಯಾರಿಯ ಬಗೆಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆತ್ತವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಂತ್ ಪೈ ಸ್ವಾಗತಿಸಿ, ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ನಿರೂಪಿಸಿ, ಪ್ರಾಧ್ಯಾಪಕಿ ವರ್ಷ ಧನ್ಯವಾದ ಸಮರ್ಪಿಸಿದರು.