Updated News From Kaup
ಶಿರ್ವ : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ - 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಸಂಪನ್ನ
Posted On: 26 Aug 2023, 10:51 PM
ಶಿರ್ವ : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ ವತಿಯಿಂದ ಶುಕ್ರವಾರ ಗಾಂಧಿನಗರ ಕಲಾವೃಂದದ ವೇದಿಕೆಯಲ್ಲಿ 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಸಂಪನ್ನಗೊಂಡಿತು. ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರು ವರಮಹಾಲಕ್ಷ್ಮೀ ಪೂಜೆಯನ್ನು ನೆರವೇರಿಸಿದರು ಈ ನಿಮಿತ್ತ ಸಾಮೂಹಿಕ ಪ್ರಾರ್ಥನೆ, ಕಲಶ ಪ್ರತಿಷ್ಠೆ, ಚೂಡಿ ಪೂಜೆ, ಕುಂಕುಮಾರ್ಚನೆ, ಭಜನಾ ಕಾರ್ಯಕ್ರಮ, ಮಂಗಳಾರತಿ ಮಹಾಪೂಜೆ ತದನಂತರ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭ ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಶಿರ್ವ : ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ
Posted On: 26 Aug 2023, 08:39 PM
ಶಿರ್ವ : ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 26ರಂದು ಶಿರ್ವದ ಮೋನಿಶ್ ಕಾಂಪ್ಲೆಕ್ಸ್ ನ ರಿಯೋನ ಹಾಲ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿ ಸಂಫವು 2022-23 ಸಾಲಿನಲ್ಲಿ ವ್ಯವಹಾರ ನಡೆಸಿ ರೂ.44,70,853.15 ಲಾಭ ಗಳಿಸಿ, ಸದಸ್ಯರಿಗೆ 10% ಲಾಭಾಂಶ ವಿತರಿಸಲು ಶಕ್ತವಾಗಿದೆ. O% ಬಡ್ಡಿದರದಲ್ಲಿ ಕೃಷಿಕರಿಗೆ ಸುಮಾರು ಮೂರು ಕೋ.ರೂ.ಗಳಿಗೂ ಮಿಕ್ಕಿಸಾಲ ವಿತರಣೆ ನಡೆಸಿದ್ದು, ಸಿಬಂದಿಗಳ ಸಹಕಾರದಿಂದ ಶೇ.90% ಸಾಲಗಳನ್ನು ವಸೂಲಾತಿ ಮಾಡುವ ಪ್ರಯತ್ನ ನಡೆಸಲಾಗಿದೆ,ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಕೃಷಿ ತರಬೇತಿ ಶಿಬಿರಗಳನ್ನು ಆಯೋಜಿಸಿ, ಸಂಘದ ಕಾರ್ಯವ್ಯಾಪ್ತಿಯಲ್ಲಿ ಕೃಷಿ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಂಡು ರೈತರ ಆದಾಯ ಹೆಚ್ಚಿಸಲು ಪ್ರಯತ್ನಿಸಲಾಗುತಿದೆ ಎಂದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಸಂಘದ 2022-23 ನೇ ಸಾಲಿನ ಪರಿಶೋಧಿತ ಲೆಕ್ಕ ಪತ್ರಗಳ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ವಾರಿಜ ಪೂಜಾರ್ತಿ, ನಿರ್ದೇಶಕರಾದ ನಾರಾಯಣ ನಾಯ್ಕ್, ಕೃಷ್ಣ ವಿಜಯ ಪೂಜಾರಿ, ರಮೇಶ್ ಪ್ರಭು, ಕೆ ವೀರೇಂದ್ರ ಪಾಟ್ಕರ್, ಅಶೋಕ್ ರಾವ್, ಉಮೇಶ್ ಆಚಾರ್ಯ, ರೀಟಾ ಮತಾಯಸ್, ವಿಲಿಯಂ ಬ್ಯಾಪಿಸ್ಟ್ ಮಚಾದೋ, ಸಂಜೀವ ಕುಲಾಲ್, ಹರಿಣಾಕ್ಷ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣ ಭಟ್ ವೇದಿಕೆಯಲ್ಲಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಸ್ವಾಗತಿಸಿದರು. ಲೆಕ್ಕಿಗ ಹರೀಶ್ ಪೂಜಾರಿ ನಿರೂಪಿಸಿ, ಸಿಬ್ಬಂದಿ ಪ್ರದೀಪ್ ಪಾಟ್ಕರ್ ವಂದಿಸಿದರು.
ಬಂಟಕಲ್ಲು : ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
Posted On: 26 Aug 2023, 08:10 PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 10ನೇ ಪದವಿ ಪ್ರದಾನ ಸಮಾರಂಭವು ಶನಿವಾರ ಕಾಲೇಜಿನ ಆವರಣದಲ್ಲಿ ನಡೆಯಿತು. ಉಡುಪಿ ಕಾಣಿಯೂರು ಮಠದ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿಯವರು ತಮ್ಮ ಆಶೀರ್ವಚನದಲ್ಲಿ ಸದ್ಗುಣವಂತ ಪದವೀಧರರು ಸಮಾಜದ ನಿಜವಾದ ಆಸ್ತಿ. ಜೀವನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಳಿ ನೈತಿಕತೆ ಮತ್ತು ಉತ್ತಮ ಚಾರಿತ್ರ್ಯ ವನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಚಂದ್ರಯಾನ -3ರ ಸಫಲತೆಯನ್ನು ಉಲ್ಲೇಖಿಸಿ ಈ ಸಂಸ್ಥೆಯ ಪದವೀಧರರು ಇಸ್ರೋದ ವಿಜ್ಞಾನಿಗಳಂತೆ ಆವಿಷ್ಕಾರ ಹಾಗೂ ಸಾಧನೆಗಳನ್ನು ಮಾಡಲಿ ಎಂದು ಆಶೀರ್ವದಿಸಿದರು. ಮಂಗಳೂರಿನ ಪ್ರತಿಷ್ಠಿತ ಎಸ್. ಎಲ್. ಶೇಟ್ ಜ್ಯುವೆಲರ್ಸ್ ಪ್ರಶಾಂತ್ ಶೇಟ್ ಇವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅನ್ವಿತಾ, ಗಣಕಯಂತ್ರ ವಿಭಾಗದ ವೈಷ್ಣವಿ ಡಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಕ್ಷತಾ ಅನಿಲ್ ಕುಮಾರ್ ರೆಂಜಾಲ್ ಮತ್ತು ಮೆಕ್ಯಾನಿಕಲ್ ವಿಭಾಗದ ರತನ್ ಪಾಟ್ಕರ್ ಇವರ ಶೈಕ್ಷಣಿಕ ಸಾಧನೆಗಾಗಿ ನೀಡಿ ಆಶೀರ್ವದಿಸಿದರು. ಈ ಸಮಾರಂಭದಲ್ಲಿ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷರಾದ ಡಾ. ಗೋಪಾಲ್ ಮುಗೆರಾಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಸಮಾರಂಭದ ವಿಶೇಷ ಉಪನ್ಯಾಸ ನೀಡಿದರು. ಮಂಗಳೂರಿನ ಕಂಬಳ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸೋಮನಾಥ ಜೋಗಿ ಇವರು ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀರತ್ನಕುಮಾರ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರಿಯಾ ಕ್ಯಾಸ್ತೆಲಿನೊ ಮತ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಇವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸುಧೀರ್ ಅವರು ಸ್ವಾಮಿಜಿಯವರನ್ನು ಪರಿಚಯಿಸಿದರು. ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಅವರು ಪದವೀಧರರಿಗೆ ಪ್ರಮಾಣವಚನ ಭೋದಿಸಿದರು. ಡಾ. ಸುದರ್ಶನ್ ರಾವ್ ನಾಲ್ಕು ವಿಭಾಗಗಳಲ್ಲಿ ಚಿನ್ನದ ಪದಕ ಪಡೆದವರ ಹೆಸರನ್ನು ಹಾಗೂ ವಿಭಾಗ ಮುಖ್ಯಸ್ಥರು ಪದವೀಧರರ ಹೆಸರನ್ನು ಘೋಷಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಹೆಚ್ ಜೆ ವಂದಿಸಿದರು. ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಲಹರಿ ವೈದ್ಯ ಮತ್ತು ಪೂಜಶ್ರೀ ನಿರೂಪಿಸಿದರು.
ಸೆಪ್ಟೆಂಬರ್ 2 : ಬೆಳಪು ಸಹಕಾರಿ ಸಂಘದ ಅಮೃತ ಮಹೋತ್ಸವ ; ಸಹಕಾರಿ ಮಹಲ್ ಉದ್ಘಾಟನೆ
Posted On: 26 Aug 2023, 05:38 PM
ಉಚ್ಚಿಲ : ಬಡಾ, ಎಲ್ಲೂರು, ಬೆಳಪು ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ದೇಶ ಹೊಂದಿ 1948ರಲ್ಲಿ ಸ್ಥಾಪಿತವಾದ ಬೆಳಪು ವ್ಯವಸಾಯ ಸಹಕಾರಿ ಸಂಘವು ಈಗಾಗಲೇ 5 ಶಾಖೆಗಳನ್ನು ಹೊಂದಿದ್ದು ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ನಿಮಿತ್ತ ಸೆಪ್ಟೆಂಬರ್ 2, ಶನಿವಾರದಂದು ಬಡಾ ಗ್ರಾಮ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಲಿರುವ ಅಮೃತ ಮಹೋತ್ಸವ ಸಂಭ್ರಮಾಚರಣೆ, ನವೀಕೃತ ಶಾಖೆ ಹಾಗೂ ಸಹಕಾರಿ ಮಹಲ್ ಉದ್ಘಾಟನಾ ಸಮಾರಂಭ ಮತ್ತು ಸಹಕಾರಿ ರಂಗದ ಅಗ್ರಗಣ್ಯ ನಾಯಕ ಡಾ| ಎಂ.ಎನ್. ಆರ್ ರವರಿಗೆ ಸಹಕಾರಿ ಧ್ರುವ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅವರು ಬೆಳಪು ಪಣಿಯೂರು ಸಹಕಾರಿ ಸಂಘದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಂಘದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಉಚಿಲದಲ್ಲಿ, ನಿರ್ಮಿಸಲಾಗಿರುವ ಸಂಘದ ನವೀಕೃತ ಶಾಖೆ ಮತ್ತು ನೂತನ ಸಹಕಾರಿ ಮಹಲ್ ಕಟ್ಟಡ ಹಾಗೂ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಕಾನ್ಫರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹವಾನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್ - ಭದ್ರತಾ ಕೊಠಡಿಯು ಸೆ. 2ರಂದು, ಬೆಳಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಉಚ್ಚಿಲ ಸಹಕಾರಿ ಮಹಲ್‌ವರೆಗೆ ಸಹಕಾರಿ ಮೆರವಣಿಗೆ ನಡೆಯಲಿದೆ. ಮಹೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ನೂತನ ಸಹಕಾರಿ ಮಹಲ್‌ನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸಹಕಾರಿ ಸಭಾಂಗಣವನ್ನು ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ. ರಮೇಶ್, ನವೋದಯ ಸಭಾಂಗಣವನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಡಾ|ಎಂ.ಎನ್.ಆರ್ ಕಾನ್ಫರೆನ್ಸ್ ಹಾಲ್‌ನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಮೃತ ದರ್ಪಣ ಸ್ಮರಣ ಸಂಚಿಕೆಯನ್ನು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಇಂದ್ರಾಳಿ, ನಬಾರ್ಡ್ ಡಿಡಿಎಂ ಸಂಗೀತಾ ಎಸ್ ಕರ್ತ, ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್, ದ.ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಬಡಾ ಗ್ರಾ. ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ನಬಾರ್ಡ್ ಸಹಭಾಗಿತ್ವದಲ್ಲಿ ಸುಮಾರು 3.70 ಕೋಟಿ ವೆಚ್ಚದಲ್ಲಿ, ನಿರ್ಮಾಣಗೊಂಡಿರುವ ಸಹಕಾರಿ ಮಹಲ್ ಬೆಳಪು ವ್ಯವಸಾಯ ಸಹಕಾರಿ ಸಂಘದ ಕೀರ್ತಿಯನ್ನು ಹೆಚ್ಚಿಸಲಿದೆ. ಸದ್ರಿ ಮಹಲ್‌ನಲ್ಲಿ ಶಾಪಿಂಗ್ ಮಹಲ್, ಸಹಕಾರಿ ಸಭಾಂಗಣ, ರೈತರ ದಾಸ್ತಾನು ಕೊಠಡಿ ಮತ್ತು ವಿವಿಧ ರೈತ ಸಲಕರಣೆಗಳ ಮಾರಾಟ ಮಳಿಗೆ ಹಾಗೂ ಗ್ರಹೋಪಯೋಗಿ ವಸ್ತುಗಳ ಮಳಿಗೆ ಸ್ಥಾಪನೆಗೊಳ್ಳಲಿದ್ದು ಸಾರ್ವಜನಿಕ ಸೇವಾ ಮನೋಭಾವನೆಯೊಂದಿಗೆ ಪ್ರಧಾನ ಮಂತ್ರಿ ಜನೌಷಧಾಲಯ ಪ್ರಾರಂಭಗೊಳ್ಳಲಿದೆ ಎಂದರು. ಈ ಸಂದರ್ಭ ಆಡಳಿತ ಮಂಡಳಿಯ ನಿರ್ದೇಶಕರಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿ ಸೋಜ, ಪಾಂಡು ಎಂ. ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್. ಭಟ್, ಬಾಲಕೃಷ್ಣ, ಎಸ್. ಆಚಾರ್ಯ, ಶೋಭಾ ಬಿ, ಭಟ್, ಮೀನಾ ಪೂಜಾರ್ತಿ, ವಿಮಲ ಅಂಚನ್, ಅನಿತಾ ಆನಂದ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾಪು : ಕೊಪ್ಪಲಂಗಡಿಯಲ್ಲಿ ನೈಟ್ರೋಜನ್ ಟ್ಯಾಂಕರ್ ನಲ್ಲಿ ಒತ್ತಡ ಹೆಚ್ಚಳ ; ಸಾರ್ವಜನಿಕರಲ್ಲಿ ಆತಂಕ
Posted On: 26 Aug 2023, 11:18 AM
ಕಾಪು : ಇಲ್ಲಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಳ್ಳಾರಿಯ ಹೊಸಪೇಟೆಯಿಂದ ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಗೆ ಸಾಗಿಸುತ್ತಿದ್ದ ನೈಟ್ರೋಜನ್ ಅನಿಲ ಟ್ಯಾಂಕರ್ ನಲ್ಲಿ ಒತ್ತಡ ಹೆಚ್ಚಾದ ಪರಿಣಾಮ ಅದರ ಚಾಲಕರು ನೈಟ್ರೋಜನ್ ಬಿಡುಗಡೆಗೊಳಿಸಿದ ಘಟನೆ ಶನಿವಾರ ಬೆಳಗ್ಗೆ ಘಟಿಸಿದೆ. ಈ ಸಂದರ್ಭ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಆತಂಕಿತರಾಗಿದ್ದು ಕಂಡು ಬಂದಿದೆ. ಈ ಮಧ್ಯೆ ಪತ್ರಕರ್ತರು ಟ್ಯಾಂಕರ್ ಚಾಲಕರಲ್ಲಿ ವಿಚಾರಿಸಿದಾಗ ಜನರು ಆತಂಕ ಪಡುವ ವಿಷಯ ಏನಿಲ್ಲ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ನೈಟ್ರೋಜನ್ ನ ಒತ್ತಡ ಹೆಚ್ಚಾದ ಪರಿಣಾಮ ನಾವು ಅದನ್ನು ಸ್ವಲ್ಪ ಮಟ್ಟಿಗೆ ಬಿಡುಗಡೆಗೊಳಿಸುತ್ತಿದ್ದೇವೆ ಎಂದರು.
ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ “ಕೆಸರ್ಡೊಂಜಿ ದಿನ” : ಮಣ್ಣಿನೊಂದಿಗೆ ಕಲಿಕಾ ಅನುಭವ ಕಾರ್ಯಕ್ರಮ
Posted On: 26 Aug 2023, 07:26 AM
ಕಾರ್ಕಳ : ಇಲ್ಲಿನ ಹಿರ್ಗಾನ ಗ್ರಾಮದಲ್ಲಿರುವ ʼಬೆಂಗಾಲ್ʼ ಕೃಷಿ ಭೂಮಿಯಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನದೊಂದಿಗೆ ಕೆಸರಿನಲ್ಲಿ ಜೀವನದ ಕಲಿಕೆ ಮತ್ತು ವಿವಿಧ ಆಟೋಟ ಕಾರ್ಯಕ್ರಮಗಳು ನಡೆದವು. ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ನೇಜಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಿರ್ಗಾನ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಇಂದು ನಮಗೆ ಧನ ಸಂಪಾದನೆಗೆ ಅನೇಕ ಮಾರ್ಗಗಳಿವೆ. ಆದರೆ ಹೊಟ್ಟೆ ತುಂಬಿಸಲು ರೈತ ಬೆಳೆದ ಬೆಳೆಯೇ ಬೇಕಾಗುತ್ತದೆ. ಆಹಾರದ ಉತ್ಪಾದನೆ ಇಲ್ಲದೇ ಹೋದರೆ ಎಷ್ಟೇ ಹಣವಿದ್ದರೂ ಬದುಕಲು ಅಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಕೃಷಿಯನ್ನು ತುಚ್ಛವಾಗಿ ಕಾಣದೇ ಭೂಮಿತಾಯಿಯ ಸೇವೆ ಎಂದು ಭಾವಿಸುವಂತಾಗಿ, ಭಾರತವು ಎಲ್ಲಾ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತಾಗಲಿ, ಹಾಳು ಬಿದ್ದಿರುವ ಕೃಷಿ ಜಮೀನು ಬೆಳೆ ಬೆಳೆಯುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿ ʼಕೈಕೆಸರಾದರೆ ಬಾಯಿ ಮೊಸರುʼ ಎಂಬ ಮಾತಿನಂತೆ ಇಂದು ಎಲ್ಲರೂ ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದೇವೆ. ಒಬ್ಬ ಕೃಷಿಕ ಪಡುವ ಕಷ್ಟ, ಬೆಳೆ ಬೆಳೆದು ರೈತನ ಕೈ ಸೇರಬೇಕಾದರೆ ತುಂಬಾ ದಿನಗಳು ಬೇಕಾಗುತ್ತದೆ. ಆಧುನಿಕತೆಯ ಭರಾಟೆಯ ಮಧ್ಯೆ ನಾವು ನಮ್ಮ ಮೂಲ ಕಸುಬಾದ ಕೃಷಿ, ಉಳುಮೆಯನ್ನೇ ಮರೆಯುತ್ತಿದ್ದೇವೆ. ಮುಂದೊಂದು ದಿನ ಆಹಾರದ ಕೊರತೆ ಉಂಟಾಗುವ ಸಂದರ್ಭ ಎದುರಾಗಬಹುದು ಅದಕ್ಕಾಗಿ ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ. ಕೆಸರಿನಿಂದ ಅನೇಕ ರೋಗ ರುಜಿನಗಳು ದೂರವಾಗುತ್ತದೆ ಎಂದು ನುಡಿದರು. ಸಂಸ್ಥಾಪಕರಲ್ಲಿ ಒಬ್ಬರಾದ ಅಮೃತ್ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಗತಿಪರ ಕೃಷಿಕ ಜಗದೀಶ್ ಕಡಂಬ, ಉದ್ಯಮಿ ಶ್ರೀಧರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದದರು. ಕುಮಾರಿ ತ್ರಿಶಾ ಶೆಟ್ಟಿ ಸ್ವಾಗತಿಸಿದರು. ಕುಮಾರಿ ಸಾನ್ವಿ ರಾವ್ ನಿರೂಪಿಸಿ ವಂದಿಸಿದರು. ನಂತರ ತುಳುನಾಡಿನ 50ಕ್ಕೂ ಅಧಿಕ ವಿಶೇಷ ತಿಂಡಿ ತಿನಿಸುಗಳ ವಿತರಣೆ ನಡೆಯಿತು. ಹಳೆಯ ಕಾಲದ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ವಿಠ್ಠಲ್ ಕುಲಾಲ್, ಗೋಕುಲ್ ದಾಸ್ ವಾಗ್ಳೆಯವರನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭ : ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ ಯೋಗೀಶ್ ಕಿಣಿಯವರು ಕೃಷಿ ಸಂಸ್ಕೃತಿಯೇ ಭಾರತದ ಜೀವಾಳ ಇದನ್ನು ನಾವು ಅರಿತು ಬದುಕಬೇಕಾಗಿದೆ ಎಂದರು ಹಾಗೂ ಪತ್ರಕರ್ತ ರಾಮ್ ಅಜೆಕಾರ್ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ರವರು ವೈಜ್ಞಾನಿಕ ಪ್ರಗತಿಯಷ್ಟೇ, ಕೃಷಿ ಕ್ಷೇತ್ರದಲ್ಲೂ ಆವಿಷ್ಕಾರ ನಡೆದು ಆರೋಗ್ಯಯುತವಾದ ಸಂಮೃದ್ಧ ಬದುಕು ಎಲ್ಲರಿಗೂ ದೊರೆಯುವಂಯತಾಗಲಿ ಎಂದು ಹಾರೈಸಿದರು. ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡುತ್ತಾ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಬಡತನವಿಲ್ಲ, ಪ್ರತಿ ಅನ್ನದ ಅಗುಳಿನ ಮೇಲೆ ಅತೀವ ಗೌರವವಿರಲಿ ಎಂದು ಕಿವಿಮಾತು ಹೇಳಿದರು. ಸಂಸ್ಥಾಪಕರಾದ ಆದರ್ಶ ಎಂ.ಕೆ, ಅಮೃತ್ ರೈ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ವಿನಾಯಕ ಜೋಗ್ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು, ರಾಘವೇಂದ್ರ ರಾವ್ ಸ್ವಾಗತಿಸಿದರು, ಉಮೇಶ್ ಕಾರ್ಯಕ್ರಮ ನಿರೂಪಿಸಿದರು, ಚಂದ್ರಕಾಂತ ಆಚಾರ್ಯ ವಂದಿಸಿದರು.
ಮುದರಂಗಡಿ ಅಂಗನವಾಡಿ ಎದುರು ಅಪಾಯಕಾರಿ ಸ್ಥಿತಿಯಲ್ಲಿ ಮರಗಳು ; ಅರಣ್ಯ ಇಲಾಖೆಯ ವಿಳಂಬ ನೀತಿ ; ಶೀಘ್ರ ತೆರವಿಗೆ ಆಗ್ರಹ
Posted On: 26 Aug 2023, 07:02 AM
ಕಾಪು : ತಾಲೂಕಿನ ಮದರಂಗಡಿ ಗ್ರಾಮ ಪಂಚಾಯಿತಿಯ ಸಾಂತೂರು ಗ್ರಾಮದ ಚರ್ಚ್ ಎದುರಿರುವ ಅಂಗನವಾಡಿಯ ಎದುರು ನಾಲ್ಕು ಬೃಹತ್ ಮರಗಳಿದ್ದು, ಮರ ತೆರವುಗೊಳಿಸಲು ಅರಣ್ಯ ಇಲಾಖೆ ವಿಳಂಬವಹಿಸುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇಪ್ಪತ್ತಕ್ಕೂ ಅಧಿಕ ಮಕ್ಕಳಿದ್ದ ಅಂಗನವಾಡಿಯಲ್ಲಿ ಈಗ ಕೇವಲ 10 ಮಕ್ಕಳು ಮಾತ್ರ ಇದ್ದಾರೆ. ಮುದರಂಗಡಿ ಗ್ರಾಮ ಪಂಚಾಯತ್ ಹಲವಾರು ಬಾರಿ ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಅರಣ್ಯ ಇಲಾಖಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೆಲಸ ಬಾಕಿ ಉಳಿದಿದೆ. ಗಾಳಿ, ಮಳೆಗೆ ಯಾವ ಹೊತ್ತಿನಲ್ಲೂ ಮರ ಅಂಗನವಾಡಿ ಕೇಂದ್ರದ ಮೇಲೆ ಉರುಳಿ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಶರತ್ ಶೆಟ್ಟಿ ಹಾಗೂ ಶಿವರಾಮ್ ಭಂಡಾರಿ ಅವರು ಆಕ್ರೋಶಿತರಾಗಿ ಮಾತನಾಡಿದ್ದಾರೆ. ಮುದರಂಗಡಿ ಗ್ರಾಮ ಪಂಚಾಯತ್ ಪಿಡಿಓ ಮುತ್ತುರವರು ಪ್ರತಿಕ್ರಿಯಿಸಿ, ಈಗಾಗಲೇ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಅವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು. ಅಂಗನವಾಡಿಯಲ್ಲಿರುವ ಮಕ್ಕಳ ಪಾಲಕರು ಶೀಘ್ರ ಮರ ತೆರವಿಗೆ ಆಗ್ರಹಿಸಿದ್ದಾರೆ.
ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಶಿರ್ವ ಶಾಖೆಯಿಂದ ವಿಶೇಷ ಶಾಲೆಗೆ ಅಗತ್ಯ ವಸ್ತುಗಳ ವಿತರಣೆ
Posted On: 25 Aug 2023, 09:51 PM
ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಮಾನಸ ವಿಶೇಷ ಶಾಲೆ ಪಾಂಬೂರು ಇಲ್ಲಿನ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕ್ರೈಸ್ತ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ನ್ಯಾಯವಾದಿ ಮೆಲ್ವಿನ್ ಡಿಸೋಜ, ಸಮಾಜ ಸೇವಕರಾದ ಹಸನ್ ಇಬ್ರಾಹಿಂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಶಾಂತ್ ಜತ್ತನ್ನ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಮುಗ್ಧ ಮಕ್ಕಳಿಗೆ ಉಡುಗೊರೆ ನೀಡುವ ಮೂಲಕ ದೇವರ ಮೆಚ್ಚುಗೆಗೆ ಪಾತ್ರವೆಂದು ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಮೆಲ್ವಿನ್ ಡಿಸೋಜ ಮಾತನಾಡಿ ಶಿರ್ವ ಶಾಖೆಯ ಜನಸ್ನೇಹಿ ಸೇವೆಯನ್ನು ಸ್ಮರಿಸುತ್ತಾ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ಸಂಸ್ಥೆಯಿಂದ ನಡೆಯಲಿ ಎಂದು ಆಶಿಸಿದರು. ಈ ವೇಳೆ ಶಾಲಾ ಪ್ರಾಂಶುಪಾಲೆ ಸಿ| ಅನ್ಸಿಲ್ಲಾ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಶಿರ್ವ ಶಾಖೆಯ ತೃಪ್ತಿ, ಹರ್ಷಿತಾ, ಬೆಸ್ಸಿ, ಮನೀಶ್ ರವರು ಸಹಕರಿಸಿದರು. ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮೆನೆಜಸ್ ಸ್ವಾಗತಿಸಿದರು. ಶಾಖಾ ಪ್ರಬಂಧಕಿ ಪ್ರಮೀಳಾ ಲೋಬೋ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾನಸ ಸಂಸ್ಥೆಯ ಶಿಕ್ಷಕಿ ಶಶಿಕಲ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಸಹಾಯಕ ವ್ಯವಸ್ಥಾಪಕರಾದ ವಿಲ್ಸನ್ ಪ್ರಿತೇಶ್ ವಂದಿಸಿದರು.
ಆಗಸ್ಟ್ 27: ಪೆರ್ಡೂರು ಕುಲಾಲ ಸಂಘದಲ್ಲಿ ಮಹಾಸಭೆ, ವಿದ್ಯಾರ್ಥಿ ವೇತನ ವಿತರಣೆ, ಕುಂಭ ಕಲಾ ಸಂಭ್ರಮ
Posted On: 25 Aug 2023, 09:32 PM
ಪೆರ್ಡೂರು : ತಾಲೂಕಿನ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಮುದಾಯ ಭವನದಲ್ಲಿ ಆಗಸ್ಟ್ ತಿಂಗಳ 27 ರಂದು 15 ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ, ಕುಂಭ ಕಲಾ ಸಂಭ್ರಮ -2023 ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವರು.
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಪನ್ನ
Posted On: 25 Aug 2023, 04:36 PM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ದೇವಳದ ಸಭಾಭವನದಲ್ಲಿ ವರಮಹಾಲಕ್ಷ್ಮಿ ಪೂಜೆ ಶುಕ್ರವಾರ ಸಂಪನ್ನಗೊಂಡಿತು. ವೇದಮೂರ್ತಿ ಶ್ರೀ ಕೆ ವಿ ರಾಘವೇಂದ್ರ ಉಪಾಧ್ಯಾಯ, ಕೆ ವಿ ವಿಷ್ಣುಮೂರ್ತಿ ಉಪಾಧ್ಯಾಯರವರ ನೇತೃತ್ವದಲ್ಲಿ, ವೇದ ಮೂರ್ತಿ ಶ್ರೀಶ ಭಟ್‌ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಮೊಗವೀರ ಮುಂದಾಳು ಡಾ. ಜಿ ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಾಜನ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಉಷಾರಾಣಿ ಬೋಳೂರು, ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.
