Updated News From Kaup
ಕಟಪಾಡಿ : ಏಣಗುಡ್ಡೆ ಗರಡಿಯಲ್ಲಿ ಸೋಣ ಸಂಕ್ರಮಣ ಪೂಜೆ

Posted On: 17-08-2022 10:56PM
ಕಟಪಾಡಿ : ತುಳುನಾಡಿನ ಅತ್ಯಂತ ಕಾರಣಿಕದ ಗರಡಿಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಹೆಸರಾಂತ ಬ್ರಹ್ಮ ಬೈದೇರುಗಳ ಗರಡಿಯಾದ ಏಣಗುಡ್ಡೆ ಗರಡಿಯಲ್ಲಿ ಇಂದು ಸೋಣ ಸಂಕ್ರಮಣ ಪೂಜೆಯು ಬಹಳ ವಿಜೃಂಭಣೆಯಿಂದ ನಡೆಯಿತು.

ಗರಡಿಯ ಪೂ ಪೂಜಾರಿಯಾದ ಇಂಪು ಪೂಜಾರಿ ಯವರ ನೇತೃತ್ವ ದಲ್ಲಿ ನಡೆದ ಪೂಜೆಯು ಊರಿನ ಗ್ರಾಮಸ್ಥರ ಉಪಸ್ಥಿತಿಯಲ್ಲಿ ನಡೆಯಿತು.
ಸೋಣ ಸಂಕ್ರಮಣದ ಪ್ರಯುಕ್ತ ಗರಡಿ ಜವನೇರ್ ಸದಸ್ಯರ ವತಿಯಿಂದ ಬಂದಂತಹ ಭಕ್ತಾಭಿಮಾನಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಗರಡಿಮನೆ ಅಶೋಕ್. ಎನ್. ಪೂಜಾರಿ, ಗರಡಿ ಜವನೇರ್ ತಂಡದ ಪ್ರಮುಖರಾದ ಸುಧೀರ್ ಪೂಜಾರಿ, ಆರು ಮಾಗಣೆಯ ಗುರಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೃಷ್ಣಾವತಾರ : ಧರ್ಮಾವತಾರ

Posted On: 17-08-2022 10:45PM
"ಧರ್ಮವೇ ಭಗವಂತ - ಭಗವಂತನೇ ಧರ್ಮ - ಧರ್ಮವು ಭಗವಂತನಾಗುವುದು - ಧರ್ಮದಲ್ಲಿ ಭಗವಂತ ಸಂಭವಿಸುವುದು - ಭಗವಂತನಲ್ಲಿ ಅಂತರ್ಗತವಾಗಿ ಧರ್ಮ ಇದೆ - ಅದೇ ಪ್ರಕಟಗೊಳ್ಳಯವುದು - ದರ್ಶನ ಸಾಧ್ಯವಾಗುವುದು".ಈ ನಿರೂಪಣೆಯಲ್ಲಿ ಮೂಡಿಬರುತ್ತದೆ ಒಂದು 'ಬೆರಗು', ತೆರೆದು ಕೊಳ್ಳುತ್ತದೆ ಒಂದು ದೃಶ್ಯಕಾವ್ಯ ,ಅದೇ "ಕೃಷ್ಣ". ಧರ್ಮ - ಭಗವಂತ ಎರಡೂ ಒಂದೇ. ಕೃಷ್ಣಾವತಾರವು ಭಗವಂತನ ಪರಿಪೂರ್ಣ ಅವತಾರ,ಅದೇ "ಧರ್ಮಾವತಾರ". ಲಾಲಿತ್ಯ ಲಾವಣ್ಯಗಳ ಆಕರ್ಷಕ ರೂಪದಿಂದ ಜಗತ್ತಿನ ಗಮನಸೆಳೆದವನಾಗಿ,ಮನುಕುಲದ ಪ್ರಿಯ ಬಂಧುವಾಗಿ ,ಚಾಣಾಕ್ಷ ಸೂತ್ರಧಾರನಾಗಿ , ಮಲ್ಲಯುದ್ಧ ಪ್ರವೀಣನಾಗಿ ರಾಜಕೀಯ ಮುತ್ಸದ್ಧಿಯಾಗಿ ,ಗೀತಾಚಾರ್ಯನಾಗಿ, ಭಾರತೀಯರ ಆರಾಧ್ಯ ಕೃಷ್ಣನ ಜನನ ಭೀತಿಯ ಪರಿಸರದಲ್ಲಿ,ಕಾಲದ ಅಗತ್ಯವಾಗಿ,ಸಜ್ಜನರ ನಿರೀಕ್ಷೆಯಾಗಿ ಸಂಭವಿಸಿತು. ಋಷಿಮುನಿಗಳ ಶುಭಪ್ರತೀಕ್ಷೆ ಹುಸಿಯಾಗದೆ,ಭಗವಂತನು ತಾನೇ ಸ್ವತಃ "ಧರ್ಮ"ವಾಗಿ ಆವಿರ್ಭವಿಸುತ್ತಾನೆ,ಆದರೆ ಸೆರೆಮನೆಯ ಕತ್ತಲಲ್ಲಿ.ಅಂದರೆ ಆ ಕಾಲ - ಸಂದರ್ಭದಲ್ಲಿ ಧರ್ಮವೇ ಬಂಧನದಲ್ಲಿತ್ತು. ಧರ್ಮದ ನೈಜಕಾಂತಿ ಕಳಾಹೀನವಾಗಿತ್ತು ಎಂದೇ ತಾತ್ಪರ್ಯ.ಅಪೇಕ್ಷೆಯ ಅಜೇಯ ವಿಶ್ವಾಸದೊಂದಿಗೆ ಜನಿಸಿದ ಈ ಕೃಷ್ಣ ಹೆತ್ತತಾಯಿ ದೇವಕಿಗೆ ಶಿಶುವಿರಹದ ವೇದನೆಯನ್ನು ಕರುಣಿಸುತ್ತಾನೆ.ಆದರೆ ಯಶೋದೆಯ ಮನಸ್ಸು ನಳನಳಿಸುವಂತೆ ಮಾಡುತ್ತಾನೆ.
"ಧರ್ಮ" ನಡುರಾತ್ರಿ ನದಿಯನ್ನು ಉತ್ತರಿಸಿ ಮಧುರೆಯಿಂದ ನಂದಗೋಕುಲಕ್ಕೆ ಸ್ಥಳಾಂತರಗೊಳ್ಳುತ್ತದೆ.ಅದು ಧರ್ಮವೇ ಆಗಿದ್ದರೂ ಗುಟ್ಟಿನಲ್ಲೇ ಸ್ಥಳಾಂತರದ ಕ್ರಿಯೆ ನೆರವೇರುತ್ತದೆ. ಸಜ್ಜನರಿಗೆ,ಮಹರ್ಷಿಗಳಿಗೆ ಈ ಧರ್ಮರೂಪಿ ಶಿಶುವನ್ನು ಸಲಹುವ ಜವಾಬ್ದಾರಿ ಇತ್ತು. ಆದರೆ 'ಧರ್ಮ' ಅಂಬೆಗಾಲಿಡುತ್ತಾ ತುಂಟತನದ ಪರಮೋಚ್ಛ ಸ್ಥಿತಿಯಲ್ಲಿ ಹಟಮಾರಿಯಾಗಿ ಬೆಳೆಯಿತು. . ಶ್ರೀ ರಾಮನ ಬಾಲ್ಯ ಬಾಲಕಾಂಡದಲ್ಲಿ ಮುಗಿದು ಹೋಗುತ್ತದೆ.ಬುದ್ಧ ಮುಂತಾದ ಮಹನೀಯರ ಬಾಲ್ಯ ಪ್ರೌಢತ್ವದಿಂದ ಗಮನಕ್ಕೆ ಬರುವುದೇ ಇಲ್ಲ.ಆದರೆ ಈ ತುಂಟನ ಬಾಲ್ಯ ಪ್ರತಿಮನೆಯಲ್ಲೂ ಇಂದಿಗೂ ಆಟವಾಡುತ್ತಿದೆ.ಇದು ಕೃಷ್ಣನ ಬಾಲ್ಯ. ಪ್ರತಿ ತಾಯಂದಿರ ಅನುಭವದಲ್ಲಿ ಸ್ಥಿರವಾಗಿ ನಿಂತ ಮುಗ್ಧ ಪ್ರೀತಿಯ ಭಾವ.ಅದು ಅವರ್ಣನೀಯ. "ಚಿಣ್ಣರು ಅಂದರೆ ಕೃಷ್ಣ ಅಲ್ಲವೇ". ಚಿಕ್ಕ ಮಕ್ಕಳಿರುವ - ತುಂಬಿದ ಮನೆ,'ತುರುಹಟ್ಟಿ' ಎಂಬುದು 'ನಂದಗೋಕುಲ' ಶಬ್ದಕ್ಕಿರುವ ಅರ್ಥ.ಅಂತೆಯೇ ತುಂಟ ಮಕ್ಕಳು,ವಿಫುಲವಾದ ಗೋಸಂಪತ್ತು ,ಮುಗ್ಧ ಗೋಪಾಲರಿರುವ ನಂದಗೋಪನ ರಾಜ್ಯ ನಂದಗೋಕುಲಕ್ಕೆ 'ಕೃಷ್ಣ' ಎಂಬ 'ಧರ್ಮ' ಆಗಮಿಸುತ್ತದೆ.ಸೆಗಣಿ - ಗಂಜಳಗಳ ಗಂಧ. ಹಾಲು ಮೊಸರು ತುಪ್ಪದ ಪರಿಮಳ ಹೀಗೆ ಗವ್ಯಗಳ ಮಧುರ ಕಂಪಿನಲ್ಲಿ "ಧರ್ಮ - ಕೃಷ್ಣ"ನ ಬಾಲ್ಯ ಪಲ್ಲವಿಸುತ್ತದೆ. ಗೋಕುಲ ಒಂದು ಪರಿಶುದ್ಧ - ಮುಗ್ಧ ಮನಸ್ಸಿನ ಜನಪದರ ಸಂದಣಿಯಂತೆ ಭಾಸವಾಗುವುದಿಲ್ಲವೇ ? ಹಾಗಾಗಿಯೇ ಸಹಜವಾಗಿ ಕೃಷ್ಣನ ಮನಸ್ಸು ಜನಪದರಿಂದ ಪ್ರೇರೇಪಿಸಲ್ಪಟ್ಟಿತು.ಬಾಲ್ಯದ ಬದುಕೇ ಪೂರ್ಣ ಜಾನಪದವಾಯಿತು.ಮುಂದೆ ಈ ಮನಃಸ್ಥಿತಿಯೇ ಜಗನ್ನಾಥನಾಗಲು ಮಾನಸಿಕ ಸಿದ್ಧತೆಯಾಯಿತು.ಗೋವುಗಳು,ಗೋಪಾಲರು, ಗೋಪಿಯರ ಒಡನಾಟದಲ್ಲಿಸರಳ ,ಮುಗ್ಧ, ವಿಮರ್ಶೆಗಳಿಲ್ಲದ ಕೃಷ್ಣನ ಬಾಲ್ಯ ಬಲುಮೆಯಿಂದ ಬಲಿಯಿತು. ಕೃಷ್ಣನ ಬಾಲ್ಯ ಆಕರ್ಷಣೀಯವಾಗಿತ್ತು. ಅವನ ರೂಪ,ತುಂಟಾಟ,ಚುರುಕುಗಳೆಲ್ಲ ಗೋಕುಲದಲ್ಲಿ ಹೊಸ ಉತ್ಸಾಹ ಮೂಡಿಸಿತು.ಎಲ್ಲರ ಮನೆಯ ಮಗುವಾಗಿ ಬೆಳೆದ ಕೃಷ್ಣ ಒಬ್ಬ ದನಗಾಹಿ ಬಾಲಕನೇ ಆದ.ದನಗಳನ್ನು ಮೇಯಿಸುವ ಸಂದರ್ಭದಲ್ಲಿ ದನಗಳ ಗಮನಸೆಳೆಯಲು ಮತ್ತು ಸಮಯ ಕಳೆಯಲು ಮರವೇರಿ ಕುಳಿತು ಬಿದಿರ ಓಟೆಯಲ್ಲಿ ಸುಶ್ರಾವ್ಯ ನಾದವನ್ನು ಹೊಮ್ಮಿಸಿದ. ಗೋವುಗಳು,ಗೋಪರು,ಗೋಪಿಯರು ಮಾತ್ರವಲ್ಲ ಇಡೀ ಗೋಕುಲವೇ ಈ ನಿನಾದಕ್ಕೆ ಕಿವಿಯಾಯಿತು.ಈಗ ಕೃಷ್ಣ ಎಂದರೆ ಏನೋ ಸೆಳೆತ ,ಸಂಭ್ರಮ,ಗದ್ದಲ,ಸಂತೋಷ, ಆತ್ಮೀಯತೆ,ಪ್ರೀತಿಯಾಗಿ ಗೋಕುಲವನ್ನು ಆವರಿಸಿತು.ಸುಸ್ವರ ಹೊರಹೊಮ್ಮಿದ "ಬಿದಿರ ಓಟೆ" 'ಮುರಲಿ'ಯಾಯಿತು.ಮುರಲಿ ನುಡಿಸಿ ಮುರಲೀಧರನಾದ ಕೃಷ್ಣ. ಆಟ ಪಾಠ ವಿನೋದಗಳು ಮಕ್ಕಳಿರುವಲ್ಲಿ ಸಹಜ. ಅದಕ್ಕೆ ಗೋಕುಲವೂ ಹೊರತಾಗಿರಲಿಲ್ಲ.ಆದರೆ ಕೃಷ್ಣನ ಬಾಲ್ಯವು ಒಡಗೂಡಿದಾಗ ಕಳ್ಳತನವೂ ಆಟವೇ ಆಯಿತು.ಇದು ಹಾಲು ಬೆಣ್ಣೆ ಮೊಸರು ತುಪ್ಪಗಳ ಕಳವು ಹೊರತು ಇತರ ಯಾವುದೇ ವಸ್ತುಗಳ ಕಳವು ಅಲ್ಲ.ಕಳವಿನೊಂದಿಗೆ ಒಂದಷ್ಟು ಹಾಳುಮಾಡುವ ತುಂಟಾಟವೂ ಜೊತೆಯಾಗಿತ್ತು. ಆದರೆ ಯಾವ ಮನೆಯ ಗೋಪಿಯೂ ಈ ತುಂಟಾಟದಿಂದ ಕೋಪಗೊಳ್ಳಲೇ ಇಲ್ಲ,ಬದಲಿಗೆ ಸಂತೋಷಪಡುತ್ತಿದ್ದಳು.ಕಾರಣ ಈ ಚೇಷ್ಟೆಗಳ ನಾಯಕ ಕೃಷ್ಣ ಎಂದು ಗೊತ್ತಿತ್ತು.ಆದರೆ ತೋರ್ಪಡಿಕೆಯ ಕೋಪ ಪ್ರದರ್ಶಿಸುತ್ತಿದ್ದರು, ಯಶೋದೆಯಲ್ಲಿ ದೂರು ಕೊಡುತ್ತಿದ್ದರು.ಕೃಷ್ಣನ ತುಂಟ ಬಾಲಕರ ಸೈನ್ಯಕ್ಕೆ ಹಿಡಿಶಾಪ ಹಾಕುತ್ತಿದ್ದರು. ಎಲ್ಲಾ ಮನೆಗಳ ಗೋಪಿಯರು ತಮ್ಮ ಮನೆಯಲ್ಲಿ ಇವತ್ತು ಕೃಷ್ಣ ಬೆಣ್ಣೆ - ಮೊಸರು ಕದಿಯಲು ಬರಬೇಕು,ಹೊಂಚುಹಾಕಿ ಅವನನ್ನು ಹಿಡಿಯಬೇಕು ,ಅಪ್ಪಿ ಮುದ್ದಾಡಬೇಕು ಎಂದೇ ಬಯಸುತ್ತಿದ್ದರು.ಮನೆಯಲ್ಲಿ ಗವ್ಯಗಳ ಕಳವು ಆಗುತ್ತಿದೆ ಎಂಬ ದೂರು ಯಾವ ಮನೆಯ ಯಜಮಾನ ಗೋಪನಲ್ಲಿಯವರೆಗೆ ಹೋಗಲೇ ಇಲ್ಲ.ಇದು ಕೃಷ್ಣನ ಆಕರ್ಷಣೆ.ಅವನ ಮುರಲಿಯ ನಿನಾದದಲ್ಲಿದ್ದ ಹರೆಯದ ಉದ್ದೀಪನ ಶಕ್ತಿ. ಈ ರೀತಿಯಲ್ಲಿ 'ಕೃಷ್ಣ ಎಂಬ ಧರ್ಮ: ಬೆಳೆಯಿತು,ಭರತವರ್ಷದಾದ್ಯಂತ ವ್ಯಾಪಿಸಿತು. ಧರ್ಮ ಸಂಸ್ಥಾಪನೆಯೇ ಪರಮ ಲಕ್ಷ್ಯವಾಯಿತು. ಕೊನೆಗೆ ಯುಗಾಂತದ ಯುಗಪ್ರವರ್ತಕನಾಗಿ ವಿಜೃಂಭಿಸಿತು.ಗೀತಾಚಾರ್ಯನಾಗಿ ಧರ್ಮವನ್ನು ಬೋಧಿಸುವ ಮೂಲಕ ರಾರಾಜಿಸಿತು. ರಾಜತ್ವವಿಲ್ಲದ ಯಾದವರಿಗೆ ದ್ವಾರಾವತಿ ನಿರ್ಮಾಣವು ಯದುವಂಶದ ಕೊರತೆಯನ್ನು ನಿವಾರಿಸಿತು.ಗೋವಳ ಕೃಷ್ಣನು ಹಸ್ತಿನಾವತಿಯಲ್ಲಿ ಚಕ್ರವರ್ತಿ ಪೀಠಕ್ಕೆ ಸಂಬಂಧಿಸಿದ ದಾಯಾದ್ಯ ಕಲಹದ ನಿರ್ಣಾಯಕ ಸಂದರ್ಭದಲ್ಲಿ ಸಂಧಿಗಾಗಿ ಮಹಾಸಂಗ್ರಾಮವನ್ನು ತಪ್ಪಿಸುವ ಯತ್ನವನ್ನೂ ಮಾಡುವ ಮೂಲಕ ಶ್ರೇಷ್ಠ ರಾಜಕೀಯ ಮುತ್ಸದ್ಧಿಯಾಗುತ್ತಾನೆ.ಜಗದಗಲದಲ್ಲಿ ಸಾಕ್ಷಾತ್ ಭಗವಂತನೇ ಆಗುತ್ತಾನೆ.ವಸುದೈವ ಕುಟುಂಬಕನಾಗಿಯೂ ವಾಸುದೇವನಾಗುತ್ತಾನೆ. ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನ ಬಾಲ್ಯದ ಚಿಂತನೆಯಷ್ಟೇ ಮಾಡುತ್ತಾ ಅಷ್ಟಮಿ ,ವಿಟ್ಲಪಿಂಡಿ ಆಚರಿಸೋಣ.
ಅಟ್ಟೆಮಿ - ಪೇರರ್ಘ್ಯೆ : ಅಷ್ಟಮಿ ಪರ್ವದಿನದಂದು ಹಗಲು ಉಪವಾಸವಿದ್ದು ರಾತ್ರಿ 'ತಿಂಗೊಲು ಮೂಡ್ನಗ' ( ಚಂದ್ರೋದಯವಾಗುವ ವೇಳೆ) ಸ್ನಾನಮಾಡಿ ಮನೆಯ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಬಿಲ್ವಪತ್ರೆ ಅರ್ಪಿಸಿ ಹಾಲು ಎರೆಯುವ ( ಪೇರರ್ಘ್ಯೆ ಬುಡ್ಪುನಿ ) ಸರಳ - ಮುಗ್ಧ ಆಚರಣೆ ನಮ್ಮಲ್ಲಿ ಇದೆ . ಚಂದ್ರೋದಯದ ವರೆಗೆ ಸಮಯ ಕಳೆಯಲು " ಎಕ್ಕಡಿ " ಆಡುವುದು ವಾಡಿಕೆಯಾಗಿತ್ತು . ಪೇರರ್ಘ್ಯೆಗೆ " ಅಡಿಗೆ ಬುಡ್ಪುನಿ " ಎಂದೂ ಹೇಳುವುದಿದೆ . 'ಅಷ್ಟಮಿ ಉಡಾರಿಗೆ' ಎಂಬುದು ವಿಶೇಷ ತಿಂಡಿ . ಇದನ್ನು ಅಷ್ಟಮಿ ಸಂದರ್ಭದಲ್ಲಿ ಮಾಡುವುದು . ಅಕ್ಕಿಯ ಹಿಟ್ಟನ್ನು ಬುಟ್ಟಿಯಲ್ಲಿ ಸುರಿದು ಪಾತ್ರೆಯಲ್ಲಿರಿಸಿ (ತೊಂದುರು) ಬೇಯಿಸುವುದು . ಇದು 'ಉಡಾರಿಗೆ' ಅರ್ಘ್ಯ ಪ್ರದಾನ : ಶ್ರೀ ಕೃಷ್ಣ ಜನ್ಮಾಷ್ಟಮಿ / ಶ್ರೀ ಕೃಷ್ಣ ಜಯಂತಿಯಂದು ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯದ ವೇಳೆ ವಿವಿಧ ಭಕ್ಷ್ಯ , ಉಂಡೆ - ಚಕ್ಕುಲಿಗಳನ್ನು ಸಮರ್ಪಿಸಿ ಕೃಷ್ಣನಿಗೆ ಪೂಜೆ ಸಲ್ಲಿಸುವುದು ವಾಡಿಕೆ .ಇದರೊಂದಿಗೆ ' ಅರ್ಘ್ಯ ಪ್ರದಾನ ' ಅಷ್ಟಮಿ ಪರ್ವದ ವಿಶೇಷ . ಮನೆ ದೇವರ ಮುಂಭಾಗದಲ್ಲಿ ಭಕ್ಷ್ಯಗಳನ್ನಿಟ್ಟು ಸಮರ್ಪಣೆ ಮಾಡಿ ಆರತಿ ಎತ್ತುವುದು . ಬಳಿಕ ದೇವರ ಸಂಪುಷ್ಟವನ್ನಿರಿಸಿ ಕೃಷ್ಣ , ಬಲರಾಮ , ವಸುದೇವ , ದೇವಕಿ , ನಂದಗೋಪ , ಯಶೋದಾ , ಸುಭದ್ರೆಯರನ್ನು ಸ್ಮರಿಸಿಕೊಂಡು ಬಿಲ್ವಪತ್ರೆಯನ್ನು ಅರ್ಪಿಸಿ ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡುವುದು . ಪುನಃ ತುಳಸಿಕಟ್ಟೆಯ ಮುಂಭಾಗದಲ್ಲಿ ಪೂಜೆಮಾಡಿ ಒಡೆದ ತೆಂಗಿನಕಾಯಿಯನ್ನು ಇರಿಸಿ ( ತೆಂಗಿನಕಾಯಿ ಒಡೆದಾಗ ಕಣ್ಣುಳ್ಳ ಭಾಗವನ್ನು 'ಹೆಣ್ಣು' ಎಂದು , ಉಳಿದ ಭಾಗವನ್ನು 'ಗಂಡು' ಎಂದು ಗುರುತಿಸುವುದು ವಾಡಿಕೆ . ಇದರಲ್ಲಿ ಗಂಡು ಭಾಗವನ್ನು ಮಾತ್ರ ಅರ್ಘ್ಯ ಪ್ರದಾನಕ್ಕೆ ಬಳಸುವ ಸಂಪ್ರದಾಯವೂ ಇದೆ . ಕೃಷ್ಣ ಗಂಡು ಮಗುವಲ್ಲವೆ , ಸಾಂಕೇತಿಕವಾಗಿ ಗಂಡು ಭಾಗವನ್ನು ಅರ್ಘ್ಯ ಪ್ರದಾನಕ್ಕೆ ಉಪಯೋಗಿಸಿಕೊಳ್ಳುವುದು .) ಬಿಲ್ವಪತ್ರೆಯನ್ನು ಅರ್ಪಿಸಿ , ಶಂಖದಲ್ಲಿ ಹಾಲು ತುಂಬಿ ಮಂತ್ರಹೇಳುತ್ತಾ ಚಂದ್ರನಿಗೆ ಅರ್ಘ್ಯ ಅರ್ಪಿಸುವುದು ವೈದಿಕ ಕ್ರಮ . ಕೆಲವೆಡೆ ನೀರಿನಲ್ಲೆ ಅರ್ಘ್ಯ ಪ್ರದಾನ ಮಾಡುವ ಸಂಪ್ರದಾಯವಿದೆ .
ವಿಟ್ಲಪಿಂಡಿ : ವಿಠಲನ ಪಿಂಡಿ "ವಿಟ್ಲಪಿಂಡಿ" . ಪಿಂಡಿ ಎಂದರೆ ಗಂಟು . ವಿಠಲನಲ್ಲಿ ಇದ್ದದ್ದು ,ವಿಠಲನಲ್ಲಿಗೆ ತಂದದ್ದು ಉಂಡೆ - ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು.ಈ ಗಂಟನ್ನು ಇಟ್ಟು ಕೊಂಡು ,ಅದನ್ನು ಪಡೆಯಲು ಬೇಕಾಗಿ ಆಡಿದ್ದ ಆಟವೇ ಪಿಂಡಿಯೇ ಮುಖ್ಯವಾದ ಆಟವಾಯಿತು,ಅದು 'ವಿಟ್ಲ ಪಿಂಡಿ'ಯಾಯಿತು. ವಿಠಲನಾದ ಕೃಷ್ಣನು ಗೋಪಾಲರೊಂದಿಗೆ - ಗೋಪಿಯರೊಂದಿಗೆ ಆಡಿದ ಆಟಗಳೇ ಕೃಷ್ಷ ಲೀಲೆ . ಇದನ್ನು ಉತ್ಸವ ಎಂಬ ನೆನಪಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ . ಗೋಪಿಯರ ಕಣ್ಣು ತಪ್ಪಿಸಿ ಗೋಪರ ಮನೆಗೆ ಹೊಕ್ಕು ಹಾಲು ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಬಿದ್ದ ಮಡಕೆಗಳು ಪುಡಿಯಾದಾಗ "ಮೊಸರು ಕುಡಿಕೆ" ಯಾಗುತ್ತದೆ . ಎತ್ತರದಲ್ಲಿ ತೂಗಿಸಿಡುವ ಹಾಲು - ಮೊಸರು ತುಂಬಿದ ಮಡಕೆ - ಕುಡಿಕೆಗಳಿಗೆ ಕಲ್ಲು ಎಸೆದು ಅಥವಾ ಕೋಲಿನಿಂದ ರಂಧ್ರಮಾಡಿ ಕೆಳಗೆ ನಿಂತು ಹಾಲಿನ ಧಾರೆಗೆ ಬಾಯಿಕೊಟ್ಟು ಕುಡಿಯುವ ಚೇಷ್ಠೆ ಕೃಷ್ಣನಾಡಿದ "ಮೊಸರು ಕುಡಿಕೆ"ಯ ಅಣಕನ್ನು ಅಥವಾ ಪ್ರತಿಕೃತಿಯನ್ನು ನಾವಿಂದು ಕಾಣುತ್ತೇವೆ. ಬರಹ : ಕೆ . ಎಲ್ . ಕುಂಡಂತಾಯ
ಆಗಸ್ಟ್ 19 : ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾ ಮಟ್ಟದ ಶ್ರೀಕೃಷ್ಣ ಜಯಂತಿ ಆಚರಣೆ

Posted On: 17-08-2022 10:29PM
ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಶ್ರೀಕೃಷ್ಣ ಜಯಂತಿ ಆಚರಣೆಯು ಆಗಸ್ಟ್ 19 ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದು, ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಸಂಸದ ಬಿ.ವೈ.ರಾಘವೇಂದ್ರ, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ.ಆರ್.ಮೆಂಡನ್, ಬಿ.ಎಂ.ಸುಕುಮಾರ ಶೆಟ್ಟಿ, ವಿಧಾನಪರಿಷತ್ ಶಾಸಕರುಗಳಾದ ಆಯನೂರು ಮಂಜುನಾಥ, ಎಸ್.ಎಲ್.ಭೋಜೆಗೌಡ, ಡಾ||ತೇಜಸ್ವಿನಿ ಗೌಡ, ಮಂಜುನಾಥ ಭಂಡಾರಿ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್, ಜಿಲ್ಲಾ ಯಾದವ ಗೊಲ್ಲ ಸಮಾಜ ಸಂಘದ ಅಧ್ಯಕ್ಷ ದಯಾನಂದ ಬಿ.ಆರ್ ಭಾಗವಹಿಸಲಿದ್ದು, ನಿಟ್ಟೆ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಕ್ಷಯಾ ಗೋಖಲೆ ಉಪನ್ಯಾಸ ನೀಡಲಿದ್ದಾರೆ.
ಆಗಸ್ಟ್ 18 : ಕಡಲ ತೀರದ ಸ್ವಚ್ಛತೆ ಹಾಗೂ ಸಮುದ್ರ ಮಾಲಿನ್ಯ ಕುರಿತು ಅರಿವು ಕಾರ್ಯಕ್ರಮ

Posted On: 17-08-2022 08:55PM
ಉಡುಪಿ : ಕೇಂದ್ರ ಸರ್ಕಾರದ ಭೂವಿಜ್ಞಾನ ಸಚಿವಾಲಯ, ಸಮುದ್ರ ಜೀವ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರ ಹಾಗೂ ಎ.ಟಿ.ಎ.ಎಲ್ ಭವನ್ ಕೊಚ್ಚಿ ಇವರ ಸಹಯೋಗದಲ್ಲಿ ಸ್ವಚ್ಛ್ ಸಾಗರ್ ಸುರಕ್ಷಿತ್ ಸಾಗರ್ ಕಾರ್ಯಕ್ರಮದಡಿ ಸಮುದ್ರ ಮಾಲಿನ್ಯ ಮತ್ತು ಕಡಲ ತೀರದ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವು ಆಗಸ್ಟ್ 18 ರಂದು ಬೆಳಗ್ಗೆ 9 ಗಂಟೆಗೆ ಉಡುಪಿಯ ಮಲ್ಪೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಉದ್ಘಾಟಿಸಲಿದ್ದು, ನಗರಸಭೆಯ ಪೌರಾಯುಕ್ತ ಡಾ. ಉದಯ್ ಕುಮಾರ್ ಶೆಟ್ಟಿ, ಉಡುಪಿ ಎಂ.ಜಿ.ಎಮ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.
ಕಳತ್ತೂರು : ಕುಶಲ ಶೇಖರ ಶೆಟ್ಟಿ ಆಡಿಟೋರಿಯಂ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Posted On: 17-08-2022 08:16PM
ಕಾಪು : ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೋರಿಯಂ ಕಳತ್ತೂರು ಇದರ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಹಿರಿಯರಾದ ವಾಸು ಶೆಟ್ಟಿ ನೆರವೇರಿಸಿದರು.
ಆಡಿಟೋರಿಯಂನ ಮಾಲಕರಾದ ಶೇಖರ ಬಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಈ ಸಲ 75ನೇ ವರ್ಷದ ಸವಿನೆನಪಿಗಾಗಿ ದ್ವಜಾರೋಹಣವನ್ನು ವಿಶೇಷವಾಗಿ ಆಚರಿಸಿದ್ದು, ಗ್ರಾಮಸ್ಥರಿಗೆ ಸತ್ಕಾರಕೂಟ ಏರ್ಪಡಿಸಲಾಗಿದೆ ಎಂದರು.
ಕುಶಲ ಶೇಖರ ಶೆಟ್ಟಿ ಆಡಿಟೋರಿಯಂ ನಿರ್ದೇಶಕಿ ಕುಶಲ ಶೇಖರ ಶೆಟ್ಟಿ, ಆನಂದಿ ಶೆಟ್ಟಿ, ದಿವಾಕರ ಬಿ ಶೆಟ್ಟಿ, ದಿನೇಶ ಶೆಟ್ಟಿ ಕೊತ್ವಲಂಗಡಿ ಮತ್ತು ಶ್ರೀ ರಾಮ ಹಿರಿಯ ಪಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರಂದಾಡಿ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ದೇವರಾಜ ಅರಸು ಜಯಂತಿ ಅರ್ಥಪೂರ್ಣವಾಗಿ ಆಚರಣೆ : ಕೋಟ ಶ್ರೀನಿವಾಸ ಪೂಜಾರಿ

Posted On: 17-08-2022 04:58PM
ಉಡುಪಿ : ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107 ನ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಗಸ್ಟ್ 20 ರಿಂದ 22 ರ ವರೆಗೆ 3 ದಿನಗಳ ಕಾಲ ಅಜ್ಜರಕಾಡಿನ ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಡಿ.ದೇವರಾಜ ಅರಸು ಜಯಂತಿ ಆಚರಣೆ ಕುರಿತ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದುಳಿದ ವರ್ಗದವರ ಕಲ್ಯಾಣಾಭಿವೃದ್ಧಿಗೆ ದೇವರಾಜ ಅರಸು ಅವರ ಕೊಡುಗೆ ಅಪಾರವಾದುದು, ಅವರು ಅನುಷ್ಠಾನಗೊಳಿಸಿದ ಯೋಜನೆಗಳಿಂದ ಆ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ ಅವರ ಸ್ಮರಣೆ ಶಾಶ್ವತವಾದುದು ಎಂದರು.
ಆಗಸ್ಟ್ 20 ರಂದು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಅವರು ಮಧ್ಯಾಹ್ನ 3.30 ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ , ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ದೇವರಾಜ ಅರಸು ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ಸಹ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಹಿಂದುಳಿದ ವರ್ಗಗಳ ಸಮುದಾಯಗಳ ಕಸಬುಗಾರಿಕೆಯ ಕರ ಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಉದ್ಘಾಟನೆ ನಡೆಯಲಿದೆ.
ಆಗಸ್ಟ್ 21 ರಂದು ಬೆಳಗ್ಗೆ 10 ಗಂಟೆಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 22 ರಂದು ಬೆಳಗ್ಗೆ 10 ಗಂಟೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಂದ ಕರಾಟೆ ಹಾಗೂ ಯೋಗ ಪ್ರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಕತ್ವದಲ್ಲಿ ಜಿಲ್ಲೆಯ ಸುಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಯಕ್ಷ ಕೂಟ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ಡಿ. ದೇವರಾಜ ಅರಸು ಜನ್ಮ ದಿನಾಚರಣೆಯ ಸಮಾರೋಪ ಸಮಾರಂಭ ನಡೆಯಲಿದೆ. ಜನ್ಮ ದಿನಾಚರಣೆಯ ಅಂಗವಾಗಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದ ಅವರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿಇಓ ಪ್ರಸನ್ನ ಹೆಚ್, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಸಚಿನ್ ಕುಮಾರ್, ವಾರ್ತಾಧಿಕಾರಿ ಬಿ.ಮಂಜುನಾಥ್, ಹಾಗೂ ವಿವಿಧ ಹಿಂದುಳಿದ ವರ್ಗಗಳ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಾಹನ ರ್ಯಾಲಿ
.jpg)
Posted On: 17-08-2022 04:39PM
ಉದ್ಯಾವರ : ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ವಾಹನ ರ್ಯಾಲಿ ನಡೆಸಿ ಸಂಭ್ರಮಿಸಲಾಯಿತು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಕೆಥೋಲಿಕ್ ಸಭಾ, ಸ್ತ್ರೀ ಸಂಘಟನೆ, ಐಸಿವೈಎಂ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ವಾಹನ ರ್ಯಾಲಿಯನ್ನು ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿಸೋಜ ಮತ್ತು ಉದ್ಯಮಿ, ಆಕರ್ಷಣ್ ಫೂಟ್ ವೇರ್ ಮಾಲಕ ಸಾದಿಕ್ ಅಹ್ಮದ್ ಸಂಘಟನೆಗಳ ಅಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು.
.jpg)
ಬಳಿಕ ಮಾತನಾಡಿದ ಮೇರಿ ಡಿಸೋಜ, ವೀರ ಯೋಧರ ಮತ್ತು ರಾಷ್ಟ್ರ ನಾಯಕರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ದೇಶದಲ್ಲಿ ಇರುವಂಥ ನಿರುದ್ಯೋಗ ಮತ್ತು ಬಡತನದಿಂದ ನಾವು ಇನ್ನೂ ಮುಕ್ತಿ ಕಂಡಿಲ್ಲ. ಇಂತಹ ರ್ಯಾಲಿಗಳ ಮೂಲಕವಾಗಿ ಸಮಾಜದಲ್ಲಿ ಮತ್ತು ದೇಶದಲ್ಲಿ ಸೌಹಾರ್ದತೆ ಮೂಡಲಿದೆ ಎಂದರು. ಈ ಸಂದರ್ಭದಲ್ಲಿ ಲಯನ್ಸ್ ವಲಯಾಧ್ಯಕ್ಷ ಲ. ಜೋನ್ ಫೆರ್ನಾಂಡಿಸ್, ಕೆಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಐಸಿವೈಎಂ ಅಧ್ಯಕ್ಷ, ಪ್ರಿತೇಶ್ ಪಿಂಟೊ, ಸ್ತ್ರೀ ಸಂಘಟನೆ ಅಧ್ಯಕ್ಷೆ ಐರಿನ್ ಪಿರೇರಾ, ಪ್ರಮುಖರಾದ ಜೆರಾಲ್ಡ್ ಪಿರೇರಾ, ಲೋರೆನ್ಸ್ ಡೇಸಾ, ಟೆರೆನ್ಸ್ ಪಿರೇರಾ, ಜೋನ್ ಗೋಮ್ಸ್, ರೋಯ್ಸ್ ಫೆರ್ನಾಂಡಿಸ್, ವಿಲ್ಫ್ರೆಡ್ ಡಿಸೋಜಾ, ರೊನಾಲ್ಡ್ ಡಿಸೋಜ, ಪ್ರೇಮ್ ಮಿನೇಜಸ್, ಜೂಲಿಯ ಡಿಸೋಜ, ಪ್ರಕಾಶ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.
.jpg)
ಕೋಶಾಧಿಕಾರಿ ಲ. ರೋಶನ್ ಕ್ರಾಸ್ತಾ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಲ. ಮೈಕಲ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಲ. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು. ವಾಹನ ರ್ಯಾಲಿಯು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಿಂದ ಆರಂಭಗೊಂಡು ಗುಡ್ಡೆಯಂಗಡಿ, ಪಿತ್ರೋಡಿ ಉದ್ಯಾವರ ಮೇಲ್ಪೇಟೆ ಮೂಲಕ ಸಾಗಿತು. ರ್ಯಾಲಿಗೆ ಮುಂಚಿತವಾಗಿ ಸ್ಥಳೀಯ ಸಂತ ಪಲೋಟ್ಟಿ ಕಾನ್ವೆಂಟ್ ನಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಸಿ ರಾಷ್ಟ್ರಕ್ಕೆ ಗೌರವ ಸಲ್ಲಿಸಲಾಯಿತು.
ಪಡುಬಿದ್ರಿ : ವ್ಯಕ್ತಿ ಆತ್ಮಹತ್ಯೆ

Posted On: 17-08-2022 12:05PM
ಪಡುಬಿದ್ರಿ : ಆರ್ಥಿಕ ಮುಗ್ಗಟ್ಟಿನಿಂದ ನೊಂದಿದ್ದ ಪೇಂಟರ್ ವೃತ್ತಿಮಾಡಿಕೊಂಡಿದ್ದ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಪಡುಬಿದ್ರಿ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ನಡೆದಿದೆ.
ಮೃತ ವ್ಯಕ್ತಿ ಸೋನಿತ್ ಪೂಜಾರಿ(30) ಅಣ್ಣ ಹಾಗೂ ಅತ್ತಿಗೆಯ ಜೊತೆ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈತನ ಅಣ್ಣ ಹಾಗೂ ಅತ್ತಿಗೆ ಕೆಲಸಕ್ಕೆ ಹೋದ ವೇಳೆ ಈತ ಸಾವನ್ನಪ್ಪಿದ್ದಾನೆ.
ಮಂಗಳವಾರ ಸಂಜೆ ಐದು ಗಂಟೆಯವರೆಗೆ ಪೇಟೆಯಲ್ಲಿ ತಿರುಗುತ್ತಿದ್ದ ಸಂಜೆ ಹೊತ್ತಿಗೆ ಅತ್ತಿಗೆ ಮನೆಗೆ ಬಂದಾಗ ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದು, ಕಿಟಕಿಯಿಂದ ಇಣುಕಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕಿ ಸುಷ್ಮಿತಾ ಗಿರಿರಾಜ್ ಕೈಚಳಕದಿ ನೇಜಿಯಲ್ಲಿ ಮೂಡಿದ ಭಾರತದ ಭೂಪಟ
.jpg)
Posted On: 16-08-2022 11:48PM
ಉದ್ಯಾವರ : ಇಲ್ಲಿನ ಸ್ಮಾರ್ಟ್ ಇಂಡಿಯನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ ಶಿಕ್ಷಕಿ, ಕಲಾವಿದೆ ಸುಷ್ಮಿತಾ ಗಿರಿರಾಜ್ ಅವರು ಭಾರತದ ಭೂಪಟವನ್ನು ಭತ್ತದ ಸಸಿ(ನೇಜಿ)ಯಲ್ಲಿ ಬೆಳೆಸಿ ಗಮನ ಸೆಳೆದಿದ್ದಾರೆ.
ಕೃಷಿಯ ಬಗೆಗೆ ಆಸಕ್ತಿ ಕುಂಠಿತವಾಗುತ್ತಿರುವ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿ ಪ್ರೇಮವನ್ನು ಸೆಳೆಯುವ ನಿಟ್ಟಿನಲ್ಲಿ ತಿರಂಗ ಸಹಿತ ಭಾರತವನ್ನು ರಚಿಸಿ ಸ್ವಾತಂತ್ರ್ಯ 75ರ ಅಮೃತ ಮಹೋತ್ಸವವನ್ನು ಸಂಭ್ರಮಿಸಲಾಗಿದೆ.
ಸದಿಯ ಸಾಹುಕಾರ್ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಮಹೇಶ್ ಉದ್ಯಾವರ, ಮುಖ್ಯ ಶಿಕ್ಷಕಿ ಅರ್ಚನಾ, ಆಡಳಿತಾಧಿಕಾರಿಗಳಾದ ಪ್ರತಿಭಾ ಕೋಟ್ಯಾನ್, ಅಪ್ಸರೀ ರಫಿಕ್ ಖಾನ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರಿಂದ ಮೆಚ್ಚುಗೆ ಪಾತ್ರವಾಗಿದೆ.
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಿಂದ ಜಾಥಾ
.jpg)
Posted On: 16-08-2022 11:11PM
ಪಡುಬಿದ್ರಿ : 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಪ್ರಧಾನ ಕಚೇರಿ ಸಹಕಾರ ಸಂಗಮದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
 (1).jpg)
ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವೃಂದ, ದೈನಿಕ ಠೇವಣಿ ಸಂಗ್ರಹಗಾರರು, ಸರಾಫರು ಹಾಗೂ ಭದ್ರತಾ ಸಿಬ್ಬಂದಿಗಳು ಗಾಂಧಿ ಟೋಪಿ ಧರಿಸಿ ಹಾಗೂ ತ್ರಿವರ್ಣ ಧ್ವಜದೊಂದಿಗೆ ಸೊಸೈಟಿಯ ಪ್ರಧಾನ ಕಚೇರಿಯಿಂದ ಪಡುಬಿದ್ರಿ ನಾರಾಯಣ ಗುರು ಸಂಘದವರೆಗೆ ಜಾಥಾವನ್ನು ನಡೆಸಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ ದಿನಾಚರಣೆಯ ಅಮೃತಮಹೋತ್ಸವವನ್ನು ಆಚರಿಸಿದರು.