Updated News From Kaup

ಉಚ್ಚಿಲ : ಬಾವಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಗೃಹಿಣಿ ಶವ ಪತ್ತೆ ; ದೂರು ದಾಖಲು

Thumbnail
Posted On: 09 Oct 2022, 04:40 PM

ಉಚ್ಚಿಲ : ಇಲ್ಲಿನ ಸಮೀಪದ ಎಲ್ಲೂರು ಗ್ರಾಮದ ಹಾಡಿಯಲ್ಲಿರುವ ಪಾಳುಬಿದ್ದ ಬಾವಿಯಲ್ಲಿ ವಿವಾಹಿತ ಗೃಹಿಣಿಯ ಮೃತದೇಹ ರವಿವಾರ ಪತ್ತೆಯಾಗಿದ್ದು ಕೊಲೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎಲ್ಲೂರು ಗ್ರಾಮದ ರಕ್ಷಿತಾ(24) ಮೃತಪಟ್ಟ ಮಹಿಳೆ. ಉಡುಪಿಯ ಫ್ಯಾನ್ಸಿಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತಾ ಅವರು ತಮ್ಮ ಸಹೋದ್ಯೋಗಿ ಸಂಜಯ ಆಚಾರಿ ಎಂಬಾತನೊಂದಿಗೆ 2 ವರ್ಷದ ಹಿಂದೆ ಮದುವೆ ಆಗಿದ್ದರು. ನಂತರ ರಕ್ಷಿತಾಳ ತಾಯಿಗೆ ಹುಷಾರಿಲ್ಲದ ಕಾರಣ ಕಾಪುವಿನ ಎಲ್ಲೂರು ಕಂಚುಗಾರ ಕೇರಿ ಎಂಬಲ್ಲಿರುವ ತಾಯಿ ಮನೆಗೆ ಬಂದು ಗಂಡ ಹಾಗೂ ತಂದೆ ತಾಯಿಯೊಂದಿಗೆ ವಾಸವಾಗಿದ್ದರು. ಈ ನಡುವೆ ರಕ್ಷಿತಾಳ ಗಂಡ ಸಂಜಯ್‌ ಹಾಗೂ ಅವರ ಜೊತೆ ಕೆಲಸ ಮಾಡುವ 3 ಜನ ಹುಡುಗಿಯರೊಂದಿಗೆ ರಕ್ಷಿತಾ ಅವರ ದೊಡ್ಡಮ್ಮನ ಮಗಳು ಶಕುಂತಳ ಎಂಬವರವರ ಮನೆಗೆ ಬಂದು ರಕ್ಷಿತಾಳ ನಡತೆ ಸರಿ ಇಲ್ಲ ಎಂಬುದಾಗಿ ತಿಳಿಸಿ, ರಕ್ಷಿತಾ ಅವರನ್ನು ಅಲ್ಲಿಯೇ ಬಿಟ್ಟು ನಂತರ ಅದೇ ದಿನ ಸಂಜೆ ಬಂದು ಕರೆದುಕೊಂಡು ಹೋಗಿದ್ದ. ಆ ನಂತರ ರಕ್ಷಿತಾ ಅವರ ಆರೋಗ್ಯ ವಿಚಾರಿಸಲು ಶಕುಂತಳ ಅವರು ಸಂಜಯ್ ಗೆ ಕರೆ ಮಾಡಿದಾಗ ಸರಿಯಾಗಿ ಸ್ಪಂದಿಸದೇ ಪತ್ನಿ ಯಾರೊಂದಿಗೋ ಹೋಗಿರಬೇಕು ಎಂದು ಉತ್ತರಿಸಿದ್ದಾನೆ. ಅಲ್ಲದೆ ಈ ವೇಳೆ ರಕ್ಷಿತಾ ಅವರನ್ನು ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ಆದರೆ ಅ.8 ರ ಸಂಜೆ ವೇಳೆ ಎಲ್ಲೂರು ಗ್ರಾಮದ ದಿ. ಪೊಲ್ಲಶೆಟ್ಟಿ ಎಂಬುವರ ಹಾಡಿಯಲ್ಲಿರುವ ಪಾಳುಬಿದ್ದ ಕೆಸರು ನೀರು ತುಂಬಿರುವ ದೊಡ್ಡ ಬಾವಿಯಲ್ಲಿ ರಕ್ಷಿತಾ ಅವರ ಮೃತದೇಹ ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಂತೆ ರಕ್ಷಿತಾ ಅವರು ಪಾಳು ಬಾವಿಗೆ ಬಿದ್ದಿರುವ ಅಥವಾ ಅವರನ್ನು ಇನ್ಯಾರೋ ದೂಡಿಹಾಕಿರುವ ಕಾರಣದಿಂದ ಆಕೆಯು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದ್ದು, ರಕ್ಷಿತಾರ ಮರಣದ ಬಗ್ಗೆ ಅವಳ ಗಂಡ ಸಂಜಯ ಆಚಾರಿಯ ಮೇಲೆ ಸಂಶಯವಿರುವುದಾಗಿ ಶಕುಂತಳಾ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ‌: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾದ ಟಿಪ್ಪರ್

Thumbnail
Posted On: 09 Oct 2022, 02:34 PM

ಪಡುಬಿದ್ರಿ : ಇಲ್ಲಿನ ಬೀಡಿನ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಮುದ್ರ ತಡೆಗೋಡೆ ಗೆ ಬಳಸುವ ಕಲ್ಲುಗಳನ್ನು ಹೇರಿಕೊಂಡು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ. ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳು ಚಲಿಸದೆ ಇದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಅವಘಡ ಸಂಭವಿಸುವುದು ತಪ್ಪಿದೆ. ಅವಘಡದಲ್ಲಿ ಟಿಪ್ಪರ್ ಚಾಲಕ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾನೆ. ಸ್ಥಳೀಯರು ಚಾಲಕನನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಸುರತ್ಕಲ್ : ತುಲು ದಿಬ್ಬನ ಕಾರ್ಯಕ್ರಮದ ಪೂರ್ವಭಾವಿ ಸಭೆ

Thumbnail
Posted On: 09 Oct 2022, 01:20 PM

ಸುರತ್ಕಲ್ : ಅಕ್ಟೋಬರ್ 16 ರಂದು ನಡೆಯುವ ತುಲು ದಿಬ್ಬನ ಕಾರ್ಯಕ್ರಮದ ಪೂರ್ವಭಾವಿ ಸಭೆ ಸುರತ್ಕಲ್ ಬಿಜೆಪಿ ಯುವ ಮೋರ್ಚಾ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ಮತ್ತು ಜೈ ತುಳುನಾಡ್ ಸಮಿತಿ ವತಿಯಿಂದ ತುಳುಲಿಪಿ ಶಂಶೋಧಕ ಡಾ .ಪುಂಡೂರು ವೆಂಕಟರಾಜ ಪುಣಿಂಚಿತ್ತಾಯವರ ಹುಟ್ಟಿದ ದಿನದ ನೆನಪಿಗಾಗಿ ಆಚರಿಸುವ ವಿಶ್ವ ತುಲು ಲಿಪಿ ದಿನದ ಅಂಗವಾಗಿ ಅಕ್ಟೋಬರ್ 16 ರಂದು ಬೆಳಿಗ್ಗೆ 9.30 ಗಂಟೆಗೆ ಸುರತ್ಕಲ್ ಗೋವಿಂದದಾಸ ಕಾಲೇಜಿನ ಎದುರು ಮೆರವಣಿಗೆಗೆ ಚಾಲನೆ ನೀಡಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಮೆರವಣಿಗೆ ಸಾಗಿ ಸುರತ್ಕಲ್ ಜಂಕ್ಷನ್ ನ ಕರ್ನಾಟಕ ಸೇವಾ ವೃಂದದಲ್ಲಿ ಸಮಾರೋಪಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ತುಲು ಲಿಪಿ ಅಕ್ಷರಗಳು, ತುಳು ಮಾತೆಯ ಭಾವಚಿತ್ರ, ತುಳು ಧ್ವಜದೊಂದಿಗೆ ಮೆರವಣಿಗೆ ಸಾಗಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂಧರ್ಭ ಜೈ ತುಳುನಾಡ್ ಸಮಿತಿಯ ಸದಸ್ಯ ಕಿರಣ್ ತುಳುವ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಮತ್ತು ತುಳು ಲಿಪಿಯ ಬಗ್ಗೆ ಮಾಹಿತಿ ನೀಡಿದರು. ಮ ನ ಪಾ ಸದಸ್ಯ ವರುಣ್ ಚೌಟ, ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಪುರ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂಧರ್ಭದಲ್ಲಿ ಮ ನ ಪಾ ಸದಸ್ಯ ಮನೋಜ್ ಕುಮಾರ್ ಕೋಡಿಕಲ್, ಮ ನ ಪಾ ಸದಸ್ಯೆ ಶ್ವೇತಾ ಪೂಜಾರಿ, ಬಿಜೆಪಿ ಪ್ರಮುಖ ಪುಷ್ಪರಾಜ್ ಮುಕ್ಕ, ಮಹಿಳಾ ಪ್ರಮುಖ್ ಪವಿತ್ರ ನಿರಂಜನ್, ಜೈ ತುಳುನಾಡ್ ಸಮಿತಿಯ ಸದಸ್ಯರು , ರಕ್ಷಿತ್ ಕೋಟ್ಯಾನ್,ವಿನಯ್ ರೈ, ದೀಕ್ಷಿತ ಮಧ್ಯ, ಶ್ವೇತ ಶೆಟ್ಟಿ, ದುರ್ಗಾಪ್ರಸಾದ್ ರೈ ಉಪಸ್ಥಿತರಿದ್ದರು.

ಪಡುಬಿದ್ರಿ : ಬೀಚ್ ಸೂಪರ್ ವೈಸರ್ ಮೇಲೆ ಹಲ್ಲೆ - ದೂರು ದಾಖಲು

Thumbnail
Posted On: 08 Oct 2022, 12:58 PM

ಪಡುಬಿದ್ರಿ : ಬೀಚ್ ಸೂಪರ್ ವೈಸರ್ ಆಗಿರುವ ವಿಜೇಶ್ ಆರ್. ಕೋಟ್ಯಾನ್ ಮೇಲೆ ಅವರ ಪರಿಚಯಸ್ಥರೇ ಆಗಿರುವ ಕಿರಣ್ ರಾಜ್, ಎರ್ಮಾಳಿನ ನಿತೇಶ್ ಮತ್ತು ಸುಮನ್ ಅವರು 2 ಸ್ಕೂಟಿಗಳಲ್ಲಿ ಬಂದು ಹಲ್ಲೆ ನಡೆಸಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕಿರಣ್ ರಾಜ್ ನು ವಿಜೇಶ್ ಬಳಿ ಬಂದು ಮುಖ್ಯ ಬೀಚ್ ನಿರ್ವಹಣೆ ಮಾಡುತ್ತಿರುವ ಸುಕೇಶನ ಜತೆ ಕೆಲಸ ಮಾಡುವ ಬಗ್ಗೆ ಆಕ್ಷೇಪಿಸಿದ್ದಾನೆ. ಬಳಿಕ ವಿಜೇಶ್ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಮಯ ಬೀಚ್ ಲೈಫ್ ಗಾರ್ಡ್ ಕೆಲಸ ಮಾಡಿಕೊಂಡಿರುವ ಅಕ್ಷಯ ಕೋಟ್ಯಾನ್ ಗಲಾಟೆ ಬಿಡಿಸಲು ಬಂದಾಗ 2 ಮತ್ತು 3 ನೇ ಆರೋಪಿಗಳು ಅಕ್ಷಯ್ ಕೋಟ್ಯಾನ್ ಗು ಬೈದಿದ್ದು, ಕಿರಣ್ ರಾಜನು ನಿಮ್ಮಿಬ್ಬರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಜೇಶ್ ಅವರು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.

ಮಂಗಳೂರು : ವೃಷ್ಟಿ ಚಲನಚಿತ್ರದ ಪೋಸ್ಟರ್ ಬಿಡುಗಡೆ

Thumbnail
Posted On: 07 Oct 2022, 07:24 PM

ಮಂಗಳೂರು : ವಾಗ್ಮಿ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಸಾಧನಾ ಜಗದೀಶ್ ಶೆಟ್ಟಿ ನಿರ್ಮಾಣದ ಹೊಸ ಕನ್ನಡ ಚಲನಚಿತ್ರ ವೃಷ್ಟಿ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಪ್ರಕಾಶ್ ನಾಥ ಮಂದಿರದಲ್ಲಿ ನಡೆಯಿತು. ಪ್ರಕಾಶ್ ನಾಥ ಮಂದಿರದ ಸುಮಂತ್ ರವರು ಪೋಸ್ಟರ್ ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಧಾರ್ಮಿಕ ಮುಖಂಡ ನಾಗರಾಜ್ ಆಚಾರ್ಯ ಉಪಸ್ಥಿತಿ ಇದ್ದರು. ಈ ಮೊದಲು ಕನಸು ಮಾರಾಟಕ್ಕಿದೆ ಚಲನಚಿತ್ರ ಹಾಗೂ ವನಜಾ ವೆಬ್ ಸೀರಿಸ್, ಮಾಡಿದ ತಂಡವೇ ಈ ವೃಷ್ಟಿ ಚಲನಚಿತ್ರವನ್ನು ಚಿತ್ರೀಕರಿಸಿದ್ದು ನಿಶಿತ್ ಶೆಟ್ಟಿಯವರು ನಿರ್ದೇಶನ ಮಾಡಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಕ್ಯಾಮರ ಕೈಚಳಕ ಈ ಚಿತ್ರದಲ್ಲಿದೆ. ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದು, ಸಂಗೀತ ನಿರ್ದೇಶನವನ್ನು ಮಾನಸ ಹೊಳ್ಳರವರು ನಿರ್ವಹಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಯಶವಂತ್ ಬೆಳ್ತಂಗಡಿ,ಸಿಂಚನಾ ಪಿ‌.ರಾವ್, ವಿನಿಶಾ, ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ಜೈನ್, ಯುವ ಶೆಟ್ಟಿ, ರಾಕೇಶ್ ಪೂಜಾರಿ, ಅನೀಶ್ ಪೂಜಾರಿ ಮುಂತಾದವರು ಅಭಿನಯಿಸಿದ್ದಾರೆ.

ಪಡುಬಿದ್ರಿ : ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆ ಅಕ್ರಮ - ಜಿಲ್ಲಾಧಿಕಾರಿಗೆ ದೂರು

Thumbnail
Posted On: 07 Oct 2022, 04:20 PM

ಪಡುಬಿದ್ರಿ : ಇಲ್ಲಿನ ಎಂಡ್ ಪಾಯಿಂಟ್‌ನಲ್ಲಿರುವ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂಫ್ಲ್ಯಾಗ್ ಬೀಚ್‌ನ ಬಹುತೇಕ ಉದ್ಯೋಗಿಗಳು ಗುರುವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಕಳೆದ 15 ತಿಂಗಳುಗಳಿಂದ ಕೆಲಸದ ವಾತಾವರಣ ಹದಗೆಟ್ಟಿದೆ. ಬೋಟಿಂಗ್‌ಗೆ ನಕಲಿ ರಶೀದಿಗಳನ್ನು ಮುದ್ರಿಸಿ ಹಣ ವಸೂಲು ಮಾಡಲಾಗುತ್ತಿದೆ. ವಸೂಲಾದ ಹಣವು ಪ್ರವಾಸೋದ್ಯಮ ಇಲಾಖೆಯ ಖಾತೆಗೆ ಜಮೆಯಾಗದೆ ಓರ್ವರ ಖಾಸಗಿ ಖಾತೆಗೆ ಜಮೆಯಾಗುತ್ತಿದೆ. ಈ ಕುರಿತು ಈ ಹಿಂದೆಯೂ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಿಗೂ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ ಎಂದು ಮನವಿಗೆ ಸಹಿ ಮಾಡಿರುವ ಅಲ್ಲಿನ 22 ಗುತ್ತಿಗೆ ಉದ್ಯೋಗಿಗಳು ದೂರಿದ್ದಾರೆ. ನಾವು 31 ಮಂದಿ ಉದ್ಯೋಗಿಗಳಿದ್ದು ಸೂಪರ್‌ವೈಸರ್‌ಗಳಿಬ್ಬರು ನಮಗೆ ಜೀವಭಯವನ್ನೂ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಅವರಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ, ಕಳೆದ ಮೂರು ತಿಂಗಳುಗಳಿಂದ ಬ್ಲೂ ಫ್ಲ್ಯಾಗ್ ಬೀಚ್‌ನ ಕೆಲಸಗಾರರ ನಡುವೆ ಆಂತರಿಕ ಭಿನ್ನಾಭಿಪ್ರಾಯವು ಕಾಣಸಿಕೊಂಡಿರುವ ಪರಿಣಾಮ ಇದು. ಸ್ಥಳೀಯರಿಗೇ ಉದ್ಯೋಗ ನೀಡಿದ್ದು, ಮಾಸಿಕ ವೇತನವನ್ನೂ ಸಕಾಲದಲ್ಲಿ ಪಾವತಿಸಲಾಗುತ್ತಿದೆ. ಬೋಟಿಂಗ್, ಪ್ರವೇಶಾತಿಗಳಿಂದ ಬರುವ ಆದಾಯಗಳಿಗೆ ಕ್ರಮವತ್ತಾದ ರಶೀದಿಯನ್ನು ನೀಡಲಾಗುತ್ತಿದೆ. ಆಯಾಯ ದಿನ ಸಂಜೆಯ ವೇಳೆಗೆ ಲೆಕ್ಕಾಚಾರವಾಗಿ ಮರುದಿನವೇ ಪ್ರವಾಸೋದ್ಯಮ ಇಲಾಖೆಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಅಪಸ್ವರವೆತ್ತಿರುವ ಉದ್ಯೋಗಿಗಳು ಸೂಕ್ತ ದಾಖಲೆಗಳನ್ನು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಬೋ ತಿಳಿಸಿದ್ದಾರೆ.

ಮೈಸೂರು ದಸರಾದಲ್ಲಿ ಪ್ರಮಖ ಆಕರ್ಷಣೆಯಾದ ತುಳುನಾಡ ಕಂಗಿಲು

Thumbnail
Posted On: 07 Oct 2022, 01:27 PM

ಕಾಪು : ವಿಶ್ವವಿಖ್ಯಾತ ಪಡೆದ ಮೈಸೂರು ದಸರಾದಲ್ಲಿ ತುಳುನಾಡ ಜಾನಪದ ಕಲೆಯಾದ ಕಂಗಿಲು ನೃತ್ಯ ಪ್ರಮುಖ ಆಕರ್ಷಣೆಯಾಗಿತ್ತು. ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಕಂಗಿಲು ನೃತ್ಯದ ನೇತೃತ್ವವನ್ನು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಚರಣ್ ಪೊಲಿಪು ವಹಿಸಿದ್ದರು. ಈ ತಂಡದಲ್ಲಿ ಕಾರ್ತಿಕ್ ಬಂಗೇರ ಪಡುಬಿದ್ರಿ, ವಿಖ್ಯಾತ್, ವರುಣ್. ಬಿ.ಕೋಟ್ಯಾನ್, ಕಿರಣ್ ಕಾಪು, ಅಂಕಿತ್ ನಾಯಕ್, ಸಂಧ್ಯ ನಾಯಕ್, ಪ್ರಥ್ವಿ ಹೆಗ್ಡೆ, ಅಂಬಿಕಾ ಸಾಗರ, ಆಕಾಶ್, ವಿನೋದ್, ಕಾರ್ತಿಕ್, ಪ್ರವೀಣ್, ದಿಲೀಪ್, ಅಶ್ವಥ್ ಕುಮಾರ್ (ಆಯುಷ್ ಗ್ರೂಪ್ ) ಭಾಗವಹಿಸಿದ್ದರು.

ಕಾಪು : ಶ್ರೀ ವೆಂಕಟರಮಣ ದೇವಳ - ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ಸಂಪನ್ನ

Thumbnail
Posted On: 06 Oct 2022, 11:24 AM

ಕಾಪು : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಒಂಬತ್ತು ದಿನ ನಿತ್ಯ ರಾತ್ರಿ ದುರ್ಗಾ ನಮಸ್ಕಾರ ಸೇವೆಯು ಜರಗಿ ವಿಜಯದಶಮಿ ದಿನದಂದು ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ವಿಜೃಂಭಣೆಯಿಂದ ಜರಗಿತು. ವೇದಮೂರ್ತಿ ಕಮಲಾಕ್ಷ ಭಟ್ ಮಾರ್ಗದರ್ಶನ ದಲ್ಲಿ ವೇದಮೂರ್ತಿ ಶ್ರೀನಿವಾಸ ಭಟ್ ರವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಆಡಳಿತ ಮಂಡಳಿಯ ಸರ್ವಸದಸ್ಯರು ಹಾಗೂ ಊರ ಪರವೂರ ನೂರಾರು ಭಜಕರು ಪಾಲ್ಗೊಂಡರು.

ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ ಮೂಡುಬೆಳ್ಳೆ : 15ನೇ ವರ್ಷದ ಸತ್ಯನಾರಾಯಣ ಪೂಜೆ, ಶಾರದಾ ಪೂಜೆ, ಚಂಡಿಕಾಯಾಗ

Thumbnail
Posted On: 06 Oct 2022, 11:18 AM

ಕಾಪು : ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಮೂಡುಬೆಳ್ಳೆ ಘಟಕದ ವತಿಯಿಂದ ಅಕ್ಟೋಬರ್ 04, ಮಂಗಳವಾರ ಬೆಳ್ಳೆ ಗೀತಾ ಮಂದಿರದಲ್ಲಿ ವೇದಮೂರ್ತಿ ವಿಖ್ಯಾತ ಭಟ್ ಇವರ ನೇತೃತ್ವದಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶಾರದಾ ಪೂಜೆ, ಮಹಾ ಚಂಡಿಕಾಯಾಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಮೂಡುಬೆಳ್ಳೆ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ಪೈ, ಕಾರ್ಯದರ್ಶಿಯಾದ ಅಭಿಷೇಕ್ ಆಚಾರ್ಯ, ಭಜರಂಗದಳ ಸಂಯೋಜಕ್ ಮಿಥುನ್ ಪೂಜಾರಿ, ವಾಣಿ ಆಚಾರ್ಯ ಮಾತೃಶಕ್ತಿ ಪ್ರಮುಖ್, ದೀಪಾ ಶೆಟ್ಟಿ ದುರ್ಗಾವಾಹಿನಿ ಪ್ರಮುಖ್, ದೀಪಕ್ ಮೂಡುಬೆಳ್ಳೆ ಜಿಲ್ಲಾ ಸೇವಾಪ್ರಮುಖ್, ಸಂತೋಷ್ ಕುಮಾರ್ ಮೂಡುಬೆಳ್ಳೆ, ಕೃಷ್ಣಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ಉಚ್ಚಿಲ ದಸರಾಗೆ ತೆರೆ ; ಹೆಲಿಕಾಪ್ಟರ್ ಪುಷ್ಪವೃಷ್ಟಿ ; ಗಂಗಾರತಿಯೊಂದಿಗೆ ನವದುರ್ಗೆಯರ ಜಲಸ್ಥಂಭನ

Thumbnail
Posted On: 06 Oct 2022, 11:10 AM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರಥಮ ಬಾರಿಗೆ ಜರಗಿದ ದಸರಾ - 2022 ಶೋಭಾಯಾತ್ರೆಯು ನವದುರ್ಗೆಯರ ಮೂರ್ತಿ ಸಹಿತ 75ಕ್ಕೂ ಮಿಕ್ಕಿ ಸ್ತಬ್ಧ ಚತ್ರಗಳ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸಾವಿರಾರು ಭಕ್ತರು ಈ ವೈಭವದ ಶೋಭಾಯಾತ್ರೆಗೆ ಸಾಕ್ಷಿಯಾದರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಮೂಲಕ ದೇವಾಲಯ, ನವದುರ್ಗೆಯರ ಸಹಿತ ಸ್ಥಬ್ದ ಚಿತ್ರಗಳಿಗೆ ಪುಷ್ಪವೃಷ್ಟಿಗೈಯಲಾಯಿತು. ಶೋಭಾಯಾತ್ರೆಯಲ್ಲಿ ಸ್ತಬ್ಧ ಚಿತ್ರಗಳು, ಹುಲಿವೇಷ ತಂಡಗಳು, ದ್ವಿಚಕ್ರ ವಾಹನದಲ್ಲಿ ಸಾಗಿದ ಯುವಕರು, ಯುವಕರ ನೃತ್ಯದ ಮೂಲಕ ಮೆರುಗು ನೀಡಿತು. ಕೆಲವು ಕಡೆಗಳಲ್ಲಿ ರಸಮಂಜರಿ ಕಾರ್ಯಕ್ರಮದ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಜನರು ಕಾದು ಕುಳಿತಿದ್ದರು. ಉಚ್ಚಿಲದಿಂದ ಪಡುಬಿದ್ರಿ ಮಾರ್ಗವಾಗಿ ಹೆಜಮಾಡಿ ಟೋಲ್ ಗೇಟಿಗೆ ತಲುಪಿ ಅಲ್ಲಿಂದ ನೇರವಾಗಿ ಕಾಪು ಲೈಟ್ ಹೌಸ್ ಸಮೀಪದ ಕಡಲಕಿನಾರೆಯಲ್ಲಿ ನವದುರ್ಗೆಯರಿಗೆ ಗಂಗಾರತಿ ಸಲ್ಲಿಸಿ ನವದುರ್ಗೆಯರ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು.