Updated News From Kaup

ಗ್ರಾಮ-1 : ತಿರಂಗ ಧ್ವಜ ವಿತರಣೆ

Posted On: 12-08-2022 11:20PM

ಉಡುಪಿ‌ :ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರಲು ಖಾಸಗಿ ಸಹಭಾಗಿತ್ವದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಅನುಷ್ಟಾನಗೊಳಿಸಲು ಗ್ರಾಮ-1 ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದ್ದು, ಉಡುಪಿ ಜಿಲ್ಲೆಯಲ್ಲೂ ಸಹ ಹಲವು ಗ್ರಾಮ-1 ಕೇಂದ್ರಗಳು ಪ್ರಾರಂಭಗೊಂಡು ಸಕ್ರಿಯವಾಗಿರುತ್ತದೆ.

75 ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ಅಂಗವಾಗಿ "ಹರ್‌ ಘರ್‌ ತಿರಂಗ್‌" ಯೋಜನೆಯನ್ನು ಭಾರತ ಸರ್ಕಾರವು ರೂಪಿಸಿದ್ದು, ಉಡುಪಿ ಜಿಲ್ಲೆ ಅಲೆವೂರು, ಶಿರ್ವ, ವಾರಂಬಳ್ಳಿ, ವರಂಗ, ಯೆಡ್ತಾಡಿ, 80- ಬಡಗಬೆಟ್ಟು, ಮುದ್ರಾಡಿ ಹಾಗೂ ಕೆಮ್ಮಣ್ಣು ಗ್ರಾಮ-1 ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತಿರಂಗ ಧ್ವಜವನ್ನು ವಿತರಣೆ ಮಾಡಲಾಯಿತು.

ಕಾಪು ಜಿ.ಎಸ್. ಬಿ ಸಮಾಜ ಬಾಂಧವರಿಂದ ಸಮುದ್ರ ಪೂಜೆ

Posted On: 12-08-2022 08:45PM

ಕಾಪು : ಅನಾದಿ ಕಾಲದಿಂದ ಹಿರಿಯರ ಮಾರ್ಗದರ್ಶನದಂತೆ ಕಾಪುವಿನ ಜಿ.ಎಸ್. ಬಿ ಸಮಾಜ ಬಾಂಧವರಿಂದ ನಡೆಯುತ್ತಿದ್ದ ಸಮುದ್ರ ಪೂಜೆ ಆಗಸ್ಟ್ 11ರಂದು ನೆರವೇರಿತು.

ಸಮುದ್ರ ಪೂಜೆಯು ಶ್ರಾವಣ ಪೂರ್ಣಿಮಾ ದಿನ ಹಯಗ್ರೀವ ಜಯಂತಿಯಂದು ನೆರವೇರಿಸುವುದು ವಾಡಿಕೆ. ಕಾಪು ವೆಂಕಟರಮಣ ದೇವಾಲಯದಿಂದ ಪೇಟೆಯವರೆಲ್ಲ ಸೇರಿಕೊಂಡು ಮೆರವಣಿಗೆಯಲ್ಲಿ ಹೋಗುವ ವಾಡಿಕೆ ಇದೆ.

ಕಟಪಾಡಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಎಸ್ ವಿ ಎಸ್ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ತ್ರಿವರ್ಣ ಧ್ವಜ ವಿತರಣೆ

Posted On: 12-08-2022 08:30PM

ಕಟಪಾಡಿ : ದೇಶವು ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಿದ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ "ಹರ್ ಘರ್ ತಿರಂಗಾ" (ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ) ಅಭಿಯಾನವು ಆಗಸ್ಟ್ 13ರಿಂದ ಆಗಸ್ಟ್ 15ರ ವರೆಗೆ ದೇಶಾದ್ಯಂತ ನಡೆಯಲಿದೆ. ಈ ಪ್ರಯುಕ್ತ ಕಟಪಾಡಿಯ ಎಸ್ ವಿ ಎಸ್ ಪ್ರೌಢಶಾಲಾ - ಕಾಲೇಜು ಹಳೆವಿದ್ಯಾರ್ಥಿಗಳ ವತಿಯಿಂದ ಎಸ್ ವಿ ಎಸ್ ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ತ್ರಿವರ್ಣ ಧ್ವಜವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ತಂತ್ರಿ, ಪ್ರಾಧ್ಯಾಪಕರಾದ ವಿಜಯ, ವಿವೇಕಾನಂದ ಹಾಗೂ 1997-2002ರ ವರ್ಷದ ಎಸ್ ವಿ ಎಸ್ ಪ್ರೌಢಶಾಲಾ - ಕಾಲೇಜು ಹಳೆವಿದ್ಯಾರ್ಥಿಗಳು, ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಘವೇಂದ್ರ ಯತಿ ಸಾರ್ವಭೌಮರು - "ಶುಭಯೋಗ ತರುವ ಯೋಗಿ"

Posted On: 12-08-2022 07:40PM

ಸತ್ಯ-ಧರ್ಮ ಮಗ್ನರಾಗಿ ಭಜಿಸಿದವರಿಗೆ ಕಲ್ಪವೃಕ್ಷವಾಗಿ ನಮಿಸಿದವರಿಗೆ ಕಾಮಧೇನುವಾಗಿ ಕೋಟ್ಯಂತರ ಭಕ್ತ-ಶಿಷ್ಯ ಸಂದೋಹವನ್ನು ಪೊರೆಯುತ್ತಾರೆ ಎಂಬ ವಿಶ್ವಾಸಕ್ಕೆ ಪಾತ್ರರಾದವರು ಶ್ರೀ ರಾಘವೇಂದ್ರ ಗುರು ಸಾರ್ವಭೌಮರು. ಗುರುರಾಯರೆಂದೊ, ರಾಯರೆಂದೊ ಕರೆಯಲ್ಪಡುವ ಈ ಮಹಾಗುರುವಿನ ಆರಾಧನಾ ಮಹೋತ್ಸವ ನಾಡಿನಾದ್ಯಂತ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲ್ಪಡುವುದು. ಈ ಪರ್ವ ದಿನಗಳ ಸಂಭ್ರಮ, ಮುಗ್ಧ ಭಕ್ತಿಯ ಹಿನ್ನೆಲೆಯಲ್ಲಿದೆ ಪವಿತ್ರವಾದ ಹಾಗೂ ಗುರುತರವಾದ ಗುರು-ಶಿಷ್ಯ ಅನುಬಂಧ, ಇದು ಅವರ್ಣನೀಯ ಸಂಬಂಧವೊಂದರ ವಿರಾಡ್ ದರ್ಶನ.

ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸ ಕೃಷ್ಣದೇವರಾಯನ ವೈಣಿಕ ವಿದ್ಯಾಗುರು ಕೃಷ್ಣಾಚಾರ್ಯರ ವಂಶಸ್ಥ ತಿಮ್ಮಣ್ಣಾಚಾರ್ಯ ಮತ್ತು ಗೋಪಿಕಾ ದಂಪತಿಗೆ ವೆಂಕಟೇಶ ಜ್ಯೇಷ್ಠ ಪುತ್ರ. ಹುಟ್ಟಿದ್ದು ಕಾವೇರಿ ನದಿಯ ದಡದ ಒಂದು ಗ್ರಾಮ.ಯತಿಯಾಗಿ ವಿಶ್ವಹಿತ ಬಯಸಿ ವಿಶ್ವಧರ್ಮದ ಉದ್ಧಾರಕನಾಗಿ ದುಡಿದು ,ಚಲನಶೀಲ ಬದುಕಿಗೆ ನಿಶ್ಚಿತ ಧ್ಯೇಯ ಧೋರಣೆಗಳು ಬೇಕು ಎಂಬ ಘೋಷ ಮೊಳಗಿಸುತ್ತಾ ವರ್ತಮಾನದ ಜೀವನ ಉನ್ನತ ಮೌಲ್ಯಗಳ ಅವಲಂಬಿತವಾಗಿರಬೇಕೆಂದು ಸಾರಿದರು.ಕೊನೆಗೊಮ್ಮೆ ಅಂದರೆ ಕಾಲ ಸನ್ನಿಹಿತವಾದಾಗ ತುಂಗೆಯ ದಡದಲ್ಲಿ ನೆಲೆಯನ್ನು ಕಂಡುಕೊಂಡರು ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರು. ಶ್ರೀಮೂಲ ರಾಮದೇವರು ಶ್ರೀ ರಾಘವೇಂದ್ರ ಯತಿ ಸಾರ್ವಭೌಮರ ಪರಂಪರೆಗೆ ಆರಾಧ್ಯ ದೇವರು.ಮರ್ಯಾದಾ ಪುರುಷೋತ್ತಮನಾಗಿ ಮನುಕುಲಕ್ಕೆ ಆದರ್ಶ ವ್ಯಕ್ತಿತ್ವವೊಂದನ್ನು ಪ್ರಕಟಿಸಿದ ಮಹಾನುಭಾವ ರಾಮ,ಶ್ರೀರಾಮನಾದ, ಭಗವಾನ್ ಶ್ರೀರಾಮಚಂದ್ರನೇ ಆದ.ಇಂತಹ ಅಪ್ರತಿಮ ಪ್ರತಿಮೆಯ ಆರಾಧಕರಾದ ರಾಯರು ಮನುಕುಲದ ಉತ್ಕ್ರಾಂತಿಯನ್ನು ಒಂದು ದಿವ್ಯ ಮನಃಸ್ಥಿತಿಯ ವ್ಯಾಖ್ಯಾನ ಮತ್ತು ಮಾನವ ಮನಸ್ಸುಗಳಲ್ಲಿ ಸ್ಥಾಪಿಸುವ ಕಾರ್ಯ ನಿರ್ವಹಿಸಿದರು.ಶ್ರೀ ರಾಮ ಒಂದು ಸಂದೇಶ, ರಾಯರು ಈ ಪ್ರಭೆಯ ಅಥವಾ ಮೌಲ್ಯದ ಪ್ರಚಾರಕ.ಈ ಕಲ್ಪನೆ ಮತ್ತು ಅನುಸಂಧಾನಗಳೇ ನಮ್ಮ ಸಂಸ್ಕೃತಿಯ ಹೆಚ್ಚುಗಾರಿಕೆ,ಗುರುವಿನಿಂದ ಭವರೋಗ ಕಳೆದುಕೊಳ್ಳುವುದು ಸಾಧುವಾದ ವಿಧಾನವೇ ಹೌದಲ್ಲ.

ನಾವು ಯಾವುದರ ಮುಂದೆ ಲಘುವಾಗುತ್ತೇವೆಯೋ ನಮ್ಮ ಮುಂದಿರುವುದು, ಅದು ‘ಗುರು’. ದೊಡ್ಡದು,ಆಶ್ರಯ ಸ್ಥಾನ, ಶಿಸ್ತಿನ ನೆಲೆ, ಜ್ಞಾನ ರಾಶಿ ಎಂಬಿತ್ಯಾದಿ ಅರ್ಥಾನುಸಂಧಾನಗಳಿಂದ ಗುರುವನ್ನು ಸ್ವೀಕರಿಸಿದರೆ ಅಥವಾ ಆವಾಹಿಸಿಕೊಂಡರೆ ಈ ಗುರುವಲ್ಲದೆ ಬೇರೆ ಯಾರು ನಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಬಲ್ಲರು? 'ಅನ್ಯಥಾ ಶರಣಂ ನಾಸ್ತಿ' ಎಂಬ ಭಾವದೊಂದಿಗೆ ಗುರುವಿಗೆ ಶರಣು. ಯೋಗಿಯಾದರೂ ಶುಭಯೋಗವನ್ನು ಅನುಗ್ರಹಿಸುವ ಶಿಷ್ಯ ವಾತ್ಸಲ್ಯವಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಗಳು ಭಕ್ತಜನ ಮಂದಾರ, ದೀನ ಜನ ದಯಾಸಾಗರ. ಸತ್ಯಜ್ಞಾನ - ಪರಮಾತ್ಮಾನುಭವ ಸಿದ್ಧಿಗೆ ಗುರುವೇ ಪರಮೋಚ್ಚ ಸಾಧನ. ಗುರುಕೃಪೆಯಿಂದ ಭವದಲ್ಲಿ ಬದುಕಿ ಭವಸಾಗರವನ್ನು ಉತ್ತರಿಸಬಹುದು. ಇದು ಭಾರತೀಯ ಚಿಂತನೆ. ಆದುದರಿಂದಲೇ ನಮ್ಮ ಸಂಸ್ಕೃತಿಯಲ್ಲಿ ‘ಗುರು’ ಸಾಕ್ಷಾತ್ ಪರಬ್ರಹ್ಮ. ತಂದೆ, ಅಮ್ಮ, ಬಂಧು, ಮಿತ್ರ, ನ್ಯಾಯ ನಿಷ್ಠುರನಾಗಿ ‘ವಿದ್ಯೆ’ ಎಂಬ ಅಮೇಯ ಸತ್ಯ ತಿಳಿವಳಿಕೆಯನ್ನು ಬೋಧಿಸುತ್ತಾ ಮಾನವ ಸ್ವರೂಪವನ್ನು ತಿದ್ದಿ ನಿಯಮಿತಗೊಳಿಸುವವ ಗುರು. ಹಾಗಾಗಿ ಆರಂಭವೇ ಶ್ರೀ ಗುರುಭ್ಯೋ ನಮಃ ಎಂದಲ್ಲವೇ ? ಒಡನಾಟ, ಅನುಸರಿಸುವಿಕೆಗಳು ಕಾರಣವಾಗಿ, ಪ್ರೀತಿ ವಿಶ್ವಾಸಗಳೇ ಪೂರಕವಾಗಿ ಗುರು ಪರಮ ಆಪ್ತನಾಗುತ್ತಾನೆ. ಆತ್ಮೀಯತೆ ಗುರುವಿನಿಂದ ಸನ್ಮಾರ್ಗ, ಕಷ್ಟಗಳಿಗೆ ಪರಿಹಾರ, ನಿರಾತಂಕ ಬದುಕಿಗೆ ಸತ್ಪಥ ಮುಂತಾದುವುಗಳನ್ನು ನಿರೀಕ್ಷಿಸುವಂತೆ ಪ್ರೇರೇಪಿಸುತ್ತದೆ. ಬಹುಶಃ ಇದೇ ಗುರು-ಶಿಷ್ಯ ಸಂಬಂಧದ ಅನನ್ಯತೆ. ನಿಷ್ಕಲ್ಮಶ ಭಕ್ತಿಗೆ ಒಲಿಯುವ ರಾಯರು ಮಂತ್ರಾಲಯದಲ್ಲಿ ವೃಂದಾವನಸ್ಥರಾಗಿಯೇ ಇದ್ದುಕೊಂಡು ಪವಾಡಗಳ ಮೂಲಕ, ಪ್ರತ್ಯಕ್ಷ ಪ್ರಮಾಣಗಳ ಹಾಗೂ ಅನುಭವ ರೂಪದಲ್ಲಿ ಭಕ್ತಕೋಟಿಯನ್ನು ಅನುಗ್ರಹಿಸುತ್ತಾರೆ ಎಂಬುದು ನಂಬಿಕೆ. ಈ ಪ್ರತೀತಿಯನ್ನು ಒಪ್ಪಿದವರು, ಅನುಗ್ರಹೀತರಾದವರ ಸಂಖ್ಯೆ ಅಪಾರ. ಅವರವರ ಭಾವಕ್ಕೆ, ಭಕ್ತಿಗೆ ತೆರನಾಗಿ ಭಗವಂತ. ಅಥವಾ ಭಗವಂತ ರೂಪಿ ಗುರು. ತತ್ತ್ವ ಜ್ಞಾನಿಯಾಗಿ ,ಅಪಾರ ವಾಙ್ಮಯ ನಿರ್ಮಾಪಕರಾಗಿ ,ಪವಾಡಗಳನ್ನು ಮೆರೆದು ಅವಧೂತರಾಗಿ ಲೋಕಕ್ಕೆ ಒಳಿತನ್ನು ಬಯಸಿದರು‌. ನಾಸ್ತಿಕ ಯುಗದಲ್ಲೂ ಆಸ್ತಿಕತೆಯನ್ನು ಪೋಷಿಸಿದರು.ವೈಜ್ಞಾನಿಕ ಪ್ರಗತಿಯಲ್ಲೂ ಆಧ್ಯಾತ್ಮಿಕ ಸಿದ್ಧಿಯ ಮಹತ್ವವನ್ನು ತಿಳಿಸಿದರು.ಭೌತಿಕ ಪ್ರಗತಿ ,ವೈಜ್ಞಾನಿಕ ಮುನ್ನೋಟದಲ್ಲಿ ಧರ್ಮದ ಆಸಕ್ತಿ ಕಡಿಮೆಯಾಗದಂತೆ ಬೋಧಿಸಿದರು.ಇವರ ಮಹಿಮೆಗೆ ಸಮಾಜ ಬೆರಗಾಯಿತು.ಅನುಗ್ರಹದಿಂದ ಪಾವನವಾಯಿತು ಎಂಬುದು ಪ್ರತೀತಿ. ಆಚಾರ್ಯ ಮಧ್ವರ ತಾತ್ವಿಕ ಸಿದ್ಧಾಂತವನ್ನು ರಾಯರು ಮತ್ತೊಮ್ಮೆ ಭಾರತೀಯರ ಮುಂದೆ ಅನಾವರಣಗೊಳಿಸಿದರು.ಐವತ್ತಕ್ಕೂ ಹೆಚ್ಚಿನ ಧಾರ್ಮಿಕ ಗ್ರಂಥಗಳನ್ನು ರಚಿಸಿದರು.ಭಗವದ್ಗೀತೆಯ ಕುರಿತು ಮೂರು,ಉಪನಿಷತ್ತುಗಳ ಬಗ್ಗೆ ಹತ್ತು,ಬ್ರಹ್ಮಸೂತ್ರಗಳ ಮೇಲೆ ಏಳು ,ವಿಜಯ ತೀರ್ಥರ ಹದಿನೇಳು ಕೃತಿಗಳಿಗೆ ಟಿಪ್ಪಣಿ ,ಋಗ್ವೇದಕ್ಕೆ ಮಂತ್ರಾರ್ಥ ಮಂಜರಿ ,ಇತಿಹಾಸಕ್ಕೆ ಸಂಬಂಧಿಸಿದ ಮೂರು ಗ್ರಂಥಗಳು ರಾಯರ ಕೃತಿಗಳು.ಪರಿಮಳ, ಭಾವದೀಪ,ತತ್ತ್ವ ಮಂಜರಿ ,ತಂತ್ರ ದೀಪಿಕೆಗಳು ಜನಜನಿತವಾದ ಗ್ರಂಥಗಳು.ತಿಳಿಯಾದ ಶೈಲಿ,ಸರಳ ನಿರೂಪಣೆಯಿಂದ ರಾಘವೇಂದ್ರರ ಕವಿತ್ವ ಲೋಕಮಾನ್ಯ.

ತಂಜಾವೂರಿನಲ್ಲೊಮ್ಮೆ ಬರಗಾಲ ಬಂದಾಗ ಅಲ್ಲಿಗೆ ಧಾವಿಸಿದ ರಾಯರು ಮೊಕ್ಕಾಂ ಹೂಡಿದರು.ಜಪಾನುಷ್ಠಾನ‌ ಪೂಜೆಗಳೊಂದಿಗೆ ನಿತ್ಯ ಸಾವಿರಾರು ಮಂದಿಗೆ ಅನ್ನದಾನ ಮಾಡಿದರು.ಭಗವಂತನನ್ನು ಭಕ್ತಿಯಿಂದಲೂ ಭಾವನಾತ್ಮಕವಾಗಿಯೂ ಸ್ವೀಕರಿಸಬೇಕು.,ಬೌದ್ಧಿಕ ಪರಿಪಕ್ವತೆ ಇರಲಿ ಎಂದು ಸಾರಿದರು.ವೈದಿಕ ವಿಚಾರ ಧಾರೆಯನ್ನು ವಿಶ್ವಧರ್ಮದ ವಿಚಾರಧಾರೆಯನ್ನು ವಿಶ್ವಧರ್ಮದ ವಿಶಾಲ ವೇದಿಕೆಯಲ್ಲಿ ನೆಲೆಗೊಳಿಸಿದರು.ಹರಿದಾಸರಿಗೆ ಮಾರ್ಗದರ್ಶಕ ಕೈದೀವಿಗೆಯಾದರು.ಮಂತ್ರಾಲಯದಲ್ಲಿ ಸಜೀವ ವೃಂದಾವನ ಪ್ರವೇಶ ಮಾಡಿದ ಶ್ರೀ ರಾಘವೇಂದ್ರರು ಶ್ರಾವಣ ಕೃಷ್ಣ ದ್ವಿತೀಯದಂದು ಶ್ರೀರಾಮನ ಪಾದಸೇರಿದರು. [ಆ.13,14,15 : ರಾಘವೇಂದ್ರ ಗುರುಸಾರ್ವಭೌಮರ ಆರಾಧನೋತ್ಸವ] ಬರಹ : ಕೆ.ಎಲ್.ಕುಂಡಂತಾಯ

ಉಡುಪಿ ಜಿಲ್ಲಾ ಜೆಡಿಎಸ್ ವಿಕಲಚೇತನ ಘಟಕದ ಅಧ್ಯಕ್ಷರಾದ ವಿಲ್ಫ್ರೆಡ್ ವಿ ಗೋಮ್ಸ್ ವಿಧಿವಶ

Posted On: 11-08-2022 02:10PM

ಕಾಪು : ಉಡುಪಿ ಜಿಲ್ಲಾ ಜೆಡಿಎಸ್ ವಿಕಲಚೇತನ ಘಟಕದ ಅಧ್ಯಕ್ಷರಾದ ವಿಲ್ಫ್ರೆಡ್ ವಿ ಗೋಮ್ಸ್ ವಿಧಿವಶರಾಗಿದ್ದಾರೆ.

ವಿಲ್ಫ್ರೆಡ್ ವಿ ಗೋಮ್ಸ್ ಶಿರ್ವ ನಿವಾಸಿಯಾಗಿದ್ದು ಉಡುಪಿ ಜಿಲ್ಲೆಯ ವಿಕಲಚೇತನ ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ವಿಕಲಚೇತನ ಒಕ್ಕೂಟದ ಸದಸ್ಯರಾಗಿ, ಸಮಾಜ ಸೇವೆಯನ್ನು ಸಲ್ಲಿಸುತ್ತಿದ್ದರು. ಪಕ್ಷದಲ್ಲಿ ಸಕ್ರಿಯರಾಗಿದ್ದು,1997ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗ್ಗಡೆ ಅವರಿಂದ ಸಮಾಜ ಸೇವೆಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

ವಿಲ್ಫ್ರೆಡ್ ವಿ ಗೋಮ್ಸ್ ರವರ ನಿಧನಕ್ಕೆ ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಉದ್ಯಾವರ : ವಾಹನವೊಂದು ಢಿಕ್ಕಿಯಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

Posted On: 10-08-2022 08:25PM

ಉದ್ಯಾವರ : ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಸೇತುವೆ ಬಳಿ ಸ್ಕೂಟಿಗೆ ವಾಹನವೊಂದು ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ಆಗಸ್ಟ್ 7 - 30 : ಉಡುಪಿಯ ಸಾಲಿಡಾರಿಟಿ ಯೂತ್‌ ಮೂಮೆಂಟ್, ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆ, ನಶೆ ಮುಕ್ತ ಅಭಿಯಾನ ಸಹಯೋಗದೊಂದಿಗೆ ಮಾದಕ ವಿರೋಧಿ ಅಭಿಯಾನ

Posted On: 10-08-2022 08:04PM

ಕಾಪು : ಇಂದಿನ ಯುವ ಪೀಳಿಗೆ ದಿನೇ ದಿನೇ ಮಾದಕ ದ್ರವ್ಯಗಳ ವ್ಯಸನಕ್ಕೀಡಾಗಿ ಅದರ ದಾಸರಾಗುತ್ತಾರೆ. ಮಾದಕ ದ್ರವ್ಯಗಳ ಕಳ್ಳ ಸಾಗಣಿಕೆದಾರರು ತಮ್ಮ ತಿಜೋರಿಯನ್ನು ತುಂಬಿಸಿಕೊಳ್ಳಲು ದೇಶದ ಯುವಶಕ್ತಿಯನ್ನು ನಶೆಯ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದು ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ ಭಂಡಾರಿ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಡಾ.ಏ.ವಿ.ಬಾಳಿಗ ಮೆಮೊರಿಯಲ್ ಆಸ್ಪತ್ರೆ ಮತ್ತು ನಶಾಮುಕ್ತ ಅಭಿಯಾನ,ಉಡುಪಿ ಜಿಲ್ಲೆ ಹಾಗೂ ಸಾಲಿಡಾರಿಟಿ ಯೂತ್‌ ಮೂವ್ಮೆಂಟ್ ಇವರು ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಮಾದಕದ್ರವ್ಯ ಬಳಕೆ ಹಾಗೂ ಕಳ್ಳಸಾಗಣೆ ಅಂತರಾಷ್ಟ್ರೀಯ ಸಮಸ್ಯೆ. ಇದರ ಮೂಲೋತ್ಪಾಟನೆಯಾಗಬೇಕು 2019ರ ಅಂಕಿಅಂಶಗಳ ಪ್ರಕಾರ ದೇಶದ ಲ್ಲಿ 2.21%( 2.26 ಕೋಟಿ)ಜನರು ಮಾದಕವಸ್ತುಗಳ ದಾಸರಾಗಿದ್ದಾರೆ. ಇದರಲ್ಲಿ 18 ಲಕ್ಷ ವಯಸ್ಕರು, 4.6ಲಕ್ಷ ಮಕ್ಕಳು ತೀವ್ರ ವ್ಯಸನಿಗಳಾಗಿದ್ದಾರೆ. ಮಾದಕವಸ್ತುಗಳ ಸೇವನೆ ಅಪಾಯಕಾರಿಯಾಗಿದ್ದು ಮನುಷ್ಯನನ್ನು ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗೆ ಈಡುಮಾಡಿ ಅವನ ಭವಿಷ್ಯ ವನ್ನು ಕಗ್ಗತ್ತಲೆಗೆ ದೂಡುತ್ತದೆ. ಪ್ರಜ್ನಾವಂತ ಯುವಕರು ಇದರ ವಿರುದ್ಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸಮರ ಸಾರಬೇಕು.

ಇಂತಹ ಪ್ರಕರಣಗಳು ಕೇವಲ ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾಗಿರದೆ ರಾಜ್ಯ,ದೇಶದೆಲ್ಲೆಡೆ ಹಬ್ಬಿದೆ ಎಂಬ ಕಟುವಾಸ್ತವ ಆತಂಕಕ್ಕೀಡುಮಾಡುತ್ತಿದೆ. ಯುವಕರು ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಸಾಲಿಡಾರಿಟಿ ಯೂತ್‌ ಮೂಮೆಂಟ್ ಉಡುಪಿ ಜಿಲ್ಲೆ, ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆ, ನಶೆ ಮುಕ್ತ ಅಭಿಯಾನ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಆಗಸ್ಟ್ 7 ರಿಂದ 30 ರ ತನಕ ಮಾದಕ ವಿರೋಧಿ ಅಭಿಯಾನವನ್ನು ಹಮ್ಮಿಕೊಂಡಿದೆ. ವಿಶೇಷ ಉಪನ್ಯಾಸ, ಸಾಮಾಜಿಕ ಜಾಲತಾಣ ಗಳಲ್ಲಿ ಜಾಗ್ರತಿ ಮೂಡಿಸುವ ವೀಡಿಯೋ ಪ್ರಸಾರ, ಕಿರುನಾಟಕ, ವಿದ್ಯಾರ್ಥಿಗಳಿಗೆ ಉಪನ್ಯಾಸ, ಭಿತ್ತಿ ಪತ್ರ ವಿತರಣೆ ಮುಂತಾದ ಹಲವಾರು ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಲಿಡಾರಿಟಿ ಅಧ್ಯಕ್ಷ ರಂಜಾನ್ ಕಾಪು, ಸಾಮಾಜಿಕ ಕಾರ್ಯಕರ್ತ ಅನ್ವರ್ ಆಲಿ ಕಾಪು.ಅಡ್ವೊಕೇಟ್ ಅಸದುಲ್ಲ ಕಟಪಾಡಿ, ಯಾಸೀನ್ ಕೋಡಿಬೇಂಗ್ರೆ,ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.

ಸಿ.ಎ ಫೌಂಡೇಶನ್‌ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ 3 ವಿದ್ಯಾರ್ಥಿಗಳು ತೇರ್ಗಡೆ

Posted On: 10-08-2022 07:51PM

ಕಾರ್ಕಳ : ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ನಡೆಸುವ ಸಿ.ಎ ಫೌಂಡೇಶನ್‌ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್‌ ಎ ಎಂ ಹಾಗೂ ಅಭಿಷೇಕ್‌ ಲಕ್ಷ್ಮಣ್‌ ನಾಯ್ಕ್‌ ಇವರು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಸಂಸ್ಥೆಯ ಪ್ರಥಮ ವರ್ಷದ ಸಿ. ಎ ಫೌಂಡೇಶನ್‌ ಫಲಿತಾಂಶದಲ್ಲಿಯೇ ಅರ್ಹತೆ ಪಡೆದಿರುವುದು ಪ್ರಶಂಸನೀಯ. ಮುಂದಿನ ಸಿ.ಎ ಮತ್ತು ಸಿ.ಎಸ್‌.ಇ.ಇ.ಟಿ ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್‌ ಎ ಎಂ ಹಾಗೂ ಅಭಿಷೇಕ್‌ ಲಕ್ಷ್ಮಣ್‌ ನಾಯ್ಕ್‌ ಇವರನ್ನು ಸಂಸ್ಥೆಯ ಪ್ರಾಂಶುಪಾಲರು, ಸಿ ಎ ಫೌಂಡೇಶನ್‌ ಸಂಯೋಜಕರಾದ ರಾಘವೇಂದ್ರ ಬಿ ರಾವ್‌, ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದಿಸಿದರು.

ಉಡುಪಿ : ಹರ್ ಗರ್ ತಿರಂಗ ಪ್ರಯುಕ್ತ ಮುನಿಯಲ್ ಕಾಲೇಜಿನಲ್ಲಿ ರಾಷ್ಟ್ರ ಧ್ವಜ ವಿತರಣೆ

Posted On: 10-08-2022 07:47PM

ಉಡುಪಿ : ಮುನಿಯಲ್ ಆಯುರ್ವೇದ ಮೆಡಿಕಲ್ ಸೈನ್ಸ್ ಮಣಿಪಾಲ ನ ಎನ್ ಎಸ್ ಎಸ್ ಯುನಿಟಿನಿಂದ ಇಂದು ಸರ್ಕಾರದ ಅಭಿಯಾನದ ಹರ್ ಗರ್ ತಿರಂಗ ಪ್ರಯುಕ್ತ ಮುನಿಯಲ್ ಕಾಲೇಜಿನಲ್ಲಿ ಸರ್ಕಾರದಿಂದ ಬಂದ ರಾಷ್ಟ್ರ ಧ್ವಜವನ್ನು ಎಲ್ಲರಿಗೂ ವಿತರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುನಿಯಲ್ ಕಾಲೇಜಿನ ಆಡಳಿತ ಅಧಿಕಾರಿಯಾದ ಯೋಗೀಶ್ ಶೆಟ್ಟಿ, ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಭಟ್, ಡಾ. ಸುದೀಪ್, ಡಾ. ರವಿಶಂಕರ ಶೇನೋಯ್, ಡಾ. ಗುರುರಾಜ್ ತಂತ್ರಿ ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿ ಪ್ರಮುಖರಾದ ಶಾರ್ವರಿ ಅಡಿಗ ಮತ್ತು ಹೃತಿಕ್ ಗೋಳಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜೆಡಿಎಸ್ ನ ಶಾಲಾ ಸಂಪರ್ಕ ಸೇತು ಯೋಜನೆಗೆ ತಿಲಾಂಜಲಿ ಇಟ್ಟ ಬಿಜೆಪಿ : ಯೋಗೀಶ್ ಶೆಟ್ಟಿ ಬಾಲಾಜಿ

Posted On: 10-08-2022 05:41PM

ಕಾಪು : ಇತ್ತೀಚೆಗಷ್ಟೇ ಬೈಂದೂರು ಕ್ಷೇತ್ರದ ಕಾಲ್ತೋಡು ಗ್ರಾಮದ ಬೊಳ್ಳಂಬಳ್ಳಿ ಮಕ್ಕಿಮನೆ ಪ್ರದೀಪ್ ಪೂಜಾರಿಯವರ 7 ವರ್ಷದ ಮಗಳು ಸನ್ನಿಧಿ ಕಾಲು ಸಂಕದಿಂದ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ನಿಜಕ್ಕೂ ಮನಕುಲಕುವಂತದ್ದು.

ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ತೆರಳಲು ಅನುಕೂಲವಾಗಲಿ ಎಂದು ಎಚ್.ಡಿ. ಕುಮಾರಸ್ವಾಮಿಯವರು ಜಾರಿಗೊಳಿಸಿದ ರಾಜ್ಯಾದ್ಯಂತ ಸೇತುವೆಗಳ ನಿರ್ಮಾಣ ಮಾಡುವ "ಶಾಲಾ ಸಂಪರ್ಕ ಸೇತು" ಯೋಜನೆಗೆ ಬಿಜೆಪಿ ಪಕ್ಷದ ಸರಕಾರ ತಿಲಾಂಜಲಿ ಇಟ್ಟದ್ದು ಇದಕ್ಕೆ ಕಾರಣ. ಇದರಿಂದ ಮಳೆಗಾಲದಲ್ಲಿ ಇಲ್ಲಿನ ಜನರು ಪರದಾಡುವಂತಾಗಿದೆ.

ಆಗಸ್ಟ್ 8, ಸೋಮವಾರ ಬೈಂದೂರು ಕ್ಷೇತ್ರದ ಕಾಲ್ತೋಡು ಗ್ರಾಮದಲ್ಲಿ ಸನ್ನಿಧಿ ಎಂಬ 7 ವರ್ಷದ ಪುಟ್ಟ ಬಾಲಕಿ ಸರಿಯಾದ ಸಮರ್ಪಕವಾದ ಸೇತುವೆಗಳಿಲ್ಲದೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಮೃತದೇಹವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ನಿಜವಾಗಿಯೂ ಮನಕಲಕುವಂತದ್ದು, ಒಂದು ವೇಳೆ ಎಚ್.ಡಿ. ಕುಮಾರಸ್ವಾಮಿಯವರ ಯೋಜನೆ ಪೂರ್ಣಗೊಂಡಿದ್ದರೆ ಈ ಘಟನೆ ಖಂಡಿತವಾಗಿಯೂ ನಡೆಯುತ್ತಿರಲಿಲ್ಲ. ಇಂತಹ ಘಟನೆಗಳಿಗೆ ಕಾರಣ ಏನೆಂದು ಜನರು ತಿಳಿದುಕೊಳ್ಳಬೇಕು, ಇನ್ನಾದರೂ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿಯವರು ವಿನಂತಿಸಿಕೊಂಡಿದ್ದಾರೆ.