Updated News From Kaup

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಶಿರ್ವ : ವಸತಿನಿಲಯ ಭೇಟಿ

Posted On: 15-08-2022 07:52PM

ಶಿರ್ವ : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಶಿರ್ವ ಆಕ್ಸಿಲಿಯಮ್ ವಸತಿ ನಿಲಯದ ಮಕ್ಕಳಿಗೆ ಸೋಲಾಪುರ ಚಾದರ್ ಮತ್ತು ಸಿಹಿತಿಂಡಿ ವಿತರಿಸಲಾಯಿತು.

ಈ ಸಂದರ್ಭ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ| ರೊಲ್ವಿನ್ ಅರನ್ನಾ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ಮತ್ತು ಸ್ಥಳೀಯ ಸಮಾಜದ ಮುಂದಾಳುಗಳಾದ ಜೆರಾಲ್ಡ್ ರೊಡ್ರಿಗಸ್, ಫ್ಲಾವಿಯ ಡಿಸೋಜ, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಕಳ : ಸ್ವದೇಶಿ ಭಾವ ಯುವ ಜನತೆಯಲ್ಲಿ ಜಾಗೃತಿಗೊಳ್ಳಲಿ - ನಿವೃತ್ತ ಏರ್ ವೈಸ್‌ ಮಾರ್ಷಲ್‌ ರಮೇಶ್‌ ಕಾರ್ಣಿಕ್‌

Posted On: 15-08-2022 06:50PM

ಕಾರ್ಕಳ : ದೇಶದ ಇತಿಹಾಸವನ್ನು ಅರಿಯದೇ ಇದ್ದಲ್ಲಿ ಇತಿಹಾಸವನ್ನು ಸೃಜಿಸಲು ಅಸಾಧ್ಯ. ಹಿಂದೆ ಆದ ಐತಿಹಾಸಿಕ ದುರ್ಘಟನೆಗಳಿಂದ ಪಾಠ ಕಲಿತು ಸಂಪೂರ್ಣ ಸ್ವದೇಶಿ ಭಾವ ಭಾರತದ ಯುವಕ-ಯುವತಿಯರಲ್ಲಿ ಜಾಗೃತಗೊಂಡು ದೇಶ ಸೇವೆಯೇ ಗುರಿಯಾಗಿರಲಿ ಎಂದು ನಿವೃತ್ತ ಏರ್ ವೈಸ್‌ ಮಾರ್ಷಲ್‌ ರಮೇಶ್‌ ಕಾರ್ಣಿಕ್‌ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ವಿಶ್ವದ ಬಲಾಢ್ಯ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಕಂಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರವು ಭೌಗೋಳಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತಿ ಪಡೆಯಲಿ ಅದಕ್ಕೆ ಇಂದಿನ ಯುವ ಸಮೂಹವೇ ಮುಂದಾಳತ್ವ ವಹಿಸಲಿ ಎಂದು ಹಾರೈಸಿದರು.

ಈ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವಿದ್ವಾನ್‌ ಗಣಪತಿ ಭಟ್‌, ಗಣನಾಥ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ ಕೆ, ಅಶ್ವಥ್‌ ಎಸ್‌ ಎಲ್‌, ವಿಮಲ್‌ ರಾಜ್‌, ಗಣಪತಿ ಭಟ್‌ ಕೆ ಎಸ್‌ ಹಾಗೂ ವಿದ್ಯಾಸಂಸ್ಥೆಯ ಉಪನ್ಯಾಸಕ ವೃಂದದವರು, ಉಪನ್ಯಾಸಕೇತರ ಬಳಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಂಗ್ಲಭಾಷಾ ಉಪನ್ಯಾಸಕರಾದ ರಾಜೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಹಿನ್ನಲೆ ಗಾಯಕಿ ನಿನಾದ ನಾಯಕ್‌ ಮತ್ತು ತಂಡದವರಿಂದ ದೇಶಭಕ್ತಿಯನ್ನು ಬಿಂಬಿಸುವ ಸದಭಿರುಚಿಯ “ಕ್ರಿಯೇಟಿವ್‌ ಸವಿಗಾನ” ಸಂಗೀತ ಕಾರ್ಯಕ್ರಮ ನೆರವೇರಿತು.

ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನೂತನ ಧ್ವಜಸ್ತಂಭ ಉದ್ಘಾಟನಾ ಕಾರ್ಯಕ್ರಮ ; ಧ್ವಜಾರೋಹಣ

Posted On: 15-08-2022 06:24PM

ಪಡುಬಿದ್ರಿ : ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ನಿಟ್ಟಿನಲ್ಲಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನೂತನವಾಗಿ ಪಡುಬಿದ್ರಿ ಹೃದಯಭಾಗದಲ್ಲಿ ಧ್ವಜಸ್ತಂಭ ಉದ್ಘಾಟನಾ ಕಾರ್ಯಕ್ರಮ ಹಾಗೂ 76ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಜರಗಿತು.

ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಅವರು ಧ್ವಜಸ್ತಂಭವನ್ನು ಉದ್ಘಾಟಿಸಿ ಹಾಗೂ ಧ್ವಜಾರೋಹಣವನ್ನು ನೆರವೇರಿಸಿ ನಾಡಿನ ಸಮಸ್ತ ಜನತೆಗೆ ಶುಭ ಹಾರೈಸಿದರು. ಶಾಂತಿ ಸಹಬಾಳ್ವೆ ಬದುಕಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಕಾಂಗ್ರೆಸ್ಸಿನ ಅಧ್ಯಕ್ಷರಾದ ಕರುಣಾಕರ್ ಎಂ ಪೂಜಾರಿ, ನವೀನ ಚಂದ್ರ ಜೆ ಶೆಟ್ಟಿ, ನವೀನ್ ಎನ್ ಶೆಟ್ಟಿ, ಹರೀಶ್ ಶೆಟ್ಟಿ ಪಾದೆಬೆಟ್ಟು, ಸಂತೋಷ್ ಶೆಟ್ಟಿ, ಎಂ ಎಸ್ ಶಾಫಿ, ಜ್ಯೋತಿ ಮೆನನ್, ಗಣೇಶ್ ಕೋಟ್ಯಾನ್, ಅಬ್ದುರ್ರಹ್ಮಾನ್ ಕಣ್ಣಂಗಾರ್, ರಮೀಝ್ ಹುಸೇನ್, ಹಸನ್ ಬಾವ, ಅಶೋಕ್ ಸಾಲಿಯಾನ್, ದಿನೇಶ್ ಪಲಿಮಾರ್, ದಿನೇಶ್ ಕಂಚಿನಡ್ಕ, ಬುಡನ್ ಸಾಹೇಬ್, ಎಂ.ಎಸ್ ನಿಜಾಮ್, ಕೀರ್ತಿ ಕುಮಾರ್, ಎಂ ಎಸ್ ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ತಾಲೂಕು ಪಂಚಾಯತ್ನಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ

Posted On: 15-08-2022 06:07PM

ಕಾಪು : ಇಲ್ಲಿನ ತಾಲೂಕು ಪಂಚಾಯತ್ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ 76ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಕಾಪು ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಶಿವ ಪ್ರಕಾಶ್ ಎಸ್ ನೆರವೇರಿಸಿದರು.

ಈ ಸಂದರ್ಭ ಅವರು ಎಲ್ಲರಿಗೂ ಶುಭಾಶಯಗಳನ್ನು ತಿಳಿಸುತ್ತಾ ಹಿರಿಯರ ಹಾಗೂ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಚಂದ್ರಕಲಾರವರು ಎಲ್ಲರನ್ನು ಸ್ವಾಗತಿಸಿದರು. ಈ‌ಸಂದರ್ಭದಲ್ಲಿ ಕಾಪು ತಾಲೂಕು ಪಂಚಾಯತ್ ನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾಪು ತಾಲೂಕು ಆಡಳಿತದಿಂದ ಕಾಪುವಿನಲ್ಲಿ 76ನೇ ಸ್ವಾತಂತ್ರೋತ್ಸವ ದಿನಾಚರಣೆ

Posted On: 15-08-2022 05:58PM

ಕಾಪು : ಇಲ್ಲಿನ ತಾಲೂಕು ಮಟ್ಟದ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವದ ಸ್ವಾತಂತ್ರೋತ್ಸವ ಸೋಮವಾರ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ನಡೆಯಿತು.

ಕಾಪು ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ‍್ಯೋತ್ಸವದ ಸಂದೇಶ ನೀಡಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಿ ಶುಭಾಶಂಸನೆಗೈದರು. ಸಾಧಕರಾದ ನಾಟಿ ವೈದ್ಯೆ ಶಾಲಿನಿ, ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ, ನಿವೃತ್ತ ಹಿರಿಯ ಸೈನಿಕ ಜೆರೋಮ್ ಕೊಮೋಡೋರ್ ಕೆಸ್ತಲಿನೋ ಮತ್ತು ಜಾನಪದ ಕಲಾವಿದ ಗುರುಚರಣ್ ಪೊಲಿಪು ಇವರರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರನ್ನು ಸನ್ಮಾನಿಸಲಾಯಿತು.

ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್, ಕಾಪು ಪುರಸಭಾಧಿಕಾರಿ ವೆಂಕಟೇಶ್ ನಾವಡ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಶಿಕ್ಷಣ ಇಲಾಖೆಯ ಶಂಕರ ಸುವರ್ಣ, ಕಾಪು ಪೋಲಿಸ್ ವೃತ್ತ ನಿರೀಕ್ಷಕ ಪೂವಯ್ಯ ಕೆಸಿ, ಶಿರ್ವ ಠಾಣಾಧಿಕಾರಿ ರಾಘವೇಂದ್ರ, ಕಾಪು ಠಾಣಾಧಿಕಾರಿ ಶ್ರೀ ಶೈಲ ಮುರುಗೊಡ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್, ಪುರಸಭಾ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

ಕಟಪಾಡಿ : ಚಿಣ್ಣರ ಬಾಲವನ ನವೀಕರಣದ ಉದ್ಘಾಟನೆ

Posted On: 15-08-2022 05:48PM

ಕಟಪಾಡಿ : 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಏಣಗುಡ್ಡೆ ಅಗ್ರಹಾರದ ಗ್ರಾಮದ ಮಕ್ಕಳಿಗೆ ಅನುಕೂಲವಾಗುವಂತೆ ಊರ ದಾನಿಗಳ ಸಹಾಯದಿಂದ ನಿರ್ಮಾಣಗೊಂಡಿದ್ದ ಮಕ್ಕಳ ಬಾಲವನದ ನವೀಕರಣದ ಉದ್ಘಾಟನೆಯು ಆಗಸ್ಟ್ 15 ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗ್ರಹಾರ ದ ಬಳಿಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಇದರ ಅಧ್ಯಕ್ಷರಾದ ದಿಲೀಪ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಕೋಶಾಧಿಕಾರಿ ಅರ್ಜುನ್, ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಹಾಗೂ ಕಾರ್ಯಕರ್ತರಾದ ದೀಪಕ್ ದುರ್ಗಾನಗರ, ಸಂತೋಷ್.ಎನ್.ಎಸ್, ಕಟಪಾಡಿ ಗಣೇಶ್ ಉಪಸ್ಥಿತರಿದ್ದರು.

ಸಚಿವ ಎಸ್ ಅಂಗಾರರಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ತೆಂಕದ ನೂತನ ಶಾಲಾ ಕೊಠಡಿ ಉದ್ಘಾಟನೆ

Posted On: 15-08-2022 05:31PM

ಪಡುಬಿದ್ರಿ : ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ತೆಂಕ ಇಲ್ಲಿನ ನೂತನ ಇಂಗ್ಲಿಷ್ ಭಾಷಾ ಕಲಿಕಾ ಕೊಠಡಿಯ ಉದ್ಘಾಟನೆಯನ್ನು ಬಂದರು ಮತ್ತು ಮೀನುಗಾರಿಕಾ ಸಚಿವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಊರಿನ ಶಾಲೆಯನ್ನು ಕಳೆದುಕೊಂಡಾಗ ಮತ್ತೆ ಪಡೆದುಕೊಳ್ಳುವುದು ಕಷ್ಟ. ಶಾಲೆಯನ್ನು ಉಳಿಸುವ ಪ್ರಯತ್ನ ಮಾಡಬೇಕು. ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾದರೆ ತರಗತಿವಾರು, ವಿಷಯವಾರು ಶಿಕ್ಷಕರು ಇರಬೇಕು. ಅದು ಆಗದಾಗ ಗುಣಮಟ್ಟದ ಶಿಕ್ಷಣ ಸಾಧ್ಯವಾಗದು. ಇಚ್ಛಾಶಕ್ತಿ, ನಮ್ಮ ಊರಿನ ಶಾಲೆಯೆಂಬ ಅಭಿಮಾನ ಇದ್ದರೆ ನಮ್ಮ ಶಾಲೆಗೆ ನಾವೇ ಸೌಲಭ್ಯಗಳನ್ನು ಹೊಂದಿಸಲು ಸಾಧ್ಯ. ಅಂದಿನ ಜನರ ಮನಸ್ಥಿತಿ ಸಮಾಜಕ್ಕಾಗಿ ನೀಡಬೇಕೆಂಬ ಭಾವನೆಯಿತ್ತು ಆದರೆ ಈಗ ಸರಕಾರ ನೀಡಬೇಕೆಂಬ ಭಾವನೆಯಿದೆ. ಸ್ವಾತಂತ್ರ್ಯ ಬಂದಾಗಿದೆ ಕೊಟ್ಟಂತಹ ಸ್ವಾತಂತ್ರ್ಯ ಉಳಿಸಬೇಕಾದರೆ ನಮ್ಮಲ್ಲಿ ದೇಶಭಕ್ತಿ ಇರಬೇಕು.ಟೀಕೆ ವಿರೋಧಗಳಿಂದ ನಾವು ಯಾವುದನ್ನು ಸಾಧಿಸಲಾಗದು. ಜನರಲ್ಲಿ ದೇಶಭಕ್ತಿಯ ಭಾವ ಉಂಟಾದಾಗ ದೇಶಕ್ಕಾಗಿ ಕೊಡಬೇಕೆನ್ನುವ ಮನಸ್ಥಿತಿ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ವಹಿಸಿದ್ದರು.

ಈ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶೀಲಾ ಕೆ ಶೆಟ್ಟಿ, ಎರ್ಮಾಳು ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಿ, ಉಪಾಧ್ಯಕ್ಷೆ ಜಯಶ್ರೀ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಉಮಾ, ಎಸ್ಡಿಎಂಸಿ ಅಧ್ಯಕ್ಷರಾದ ಸೋಮಯ್ಯ, ಶಾಲಾ ಮುಖ್ಯಶಿಕ್ಷಕಿ ವಿನೋದ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ : ಸ್ವಚ್ಛತಾ ಕಾರ್ಯಕ್ರಮ

Posted On: 15-08-2022 02:14PM

ಕಟಪಾಡಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಛ ಭಾರತ ಶ್ರೇಷ್ಠ ಭಾರತ ಎಂಬ ಪರಿಕಲ್ಪನೆಯೊಂದಿಗೆ ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇದರ ವತಿಯಿಂದ ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ಶಾಲಾ ವಠಾರದಲ್ಲಿ ಆಗಸ್ಟ್ 13ರಂದು ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾವ್ಯವನ್ನು ಅನುಭವಿಸಿ ಬರೆದರೆ ಉತ್ತಮ ಕವನ ಬರುತ್ತೆ – ರೇಮಂಡ್ ಡಿ.ಕುನ್ಹ ತಾಕೊಡೆ

Posted On: 15-08-2022 12:56PM

ಮಂಗಳೂರು : ಪ್ರೇರಣಾತ್ಮಕವಾಗಿ ಬರೆಯುವ ಸಾಹಿತಿಗಳು ನಡು ನಡುವೆ ವಿರಾಮ ತೆಗೆದು ಕೊಂಡು ಅಭ್ಯಸಿಸಿ ಬರೆಯುವ ಹವ್ಯಾಸ ಇಟ್ಟುಕೊಳ್ಳಬೇಕು. ಆ ಮೂಲಕ ಒಂದು ಸೃಜನಾತ್ಮಕ ಸಾಹಿತ್ಯ ರಚಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ರೇಮಂಡ್ ಡಿ.ಕುನ್ಹ ತಾಕೋಡೆ ಹೇಳಿದರು . ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಆಗಸ್ಟ್ 14ರಂದು ಮಂಗಳೂರಿನ ಕದ್ರಿ ಬಾಲಭವನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ ಭಾರತಾಂಬೆಗೆ ಕನ್ನಡದಾರತಿ ಮತ್ತು ಸಾಧಕರಿಗೆ ಸನ್ಮಾನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗ ಸಂಘಟಕರು ಸಂಶೋಧಕರು ಮತ್ತು ಸಾಹಿತಿಗಳು ಈ ಮೂರು ವರ್ಗದವರಿಂದ ಸಾಹಿತ್ಯ ಸೇವೆ ನಡೀತಿದೆ. ಇದರಲ್ಲಿ ಸಾಹಿತಿಗಳು ಸಂಶೋಧನೆ ಮತ್ತು ಸಂಘಟನೆ ಮಾಡಿದ್ರೆ ಉತ್ತಮ ಸಾಹಿತ್ಯ ಬರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಗಝಲ್ ಕವಿ ಹಾಗೂ ಮುಕ್ತಕ ಕವಿ ಎಂದೇ ಜನಪ್ರಿಯರಾದ ಡಾ. ಸುರೇಶ್ ನೆಗಳಗುಳಿ ಅವರನ್ನು ಸನ್ಮಾನಿಸಲಾಯಿತು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗುಣಾಜೆ ರಾಮಚಂದ್ರ ಭಟ್ ಮಾತನಾಡಿ ಕವಿತೆ ಕಟ್ಟುತ್ತಾ ಹೋದಂತೆ ಅದು ಹುಟ್ಟುವುದು, ಕವನವನ್ನು ಮೊದಲ ಬಾರಿಗೆ ಓದಿದಾಗ ಎಲ್ಲಾ ಅರ್ಥವಾಗದೆ ಮರಳಿ ಓದಿಸಬೇಕು. ಹಾಗೆಂದು ಕವನಗಳು ಅರ್ಥ ಮಾಡಲು ತುಂಬಾ ಕಷ್ಟವಾಗಿರಲೂಬಾರದು. ಕವಿಗಳು ನಿರಂತರ ಅಧ್ಯಯನ ಮಾಡುತ್ತಿರಬೇಕು , ಶಬ್ಧ ಸಂಪತ್ತನ್ನು ಗಳಿಸಿ ಜೀವನಾನುಭವ ಹೊಂದಿರಬೇಕೆಂದು ಹೇಳಿದರು.

ಕೆ ಎಸ್ ಎಸ್ ಎ ಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿ ಪ್ರಾಸ್ತಾವನೆಗೈದರು. ಎನ್ ಎಸ್ ಸಿ ಡಿ ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಹಾಗೂ ಕವಯತ್ರಿ ರೇಖಾ ಸುದೇಶ್ ರಾವ್ ಉಪಸ್ಥಿತರಿದ್ದರು. ರೇಶ್ಮಾ ಶೆಟ್ಟಿ ಗೋರೂರು ನಿರೂಪಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಯ ಸುಮಾರು 30 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗೀತ ಗಾಯನ ನಡೆಯಿತು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ : 75 ನೇ ಅಮೃತ ಮಹೋತ್ಸವದ ಸಂಭ್ರಮ

Posted On: 15-08-2022 12:45PM

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 2022ರ ಆಗಸ್ಟ್ 15 ರಂದು 76ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದ 75 ನೇ ಅಮೃತ ಮಹೋತ್ಸವ ಪ್ರಯುಕ್ತ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು ಧ್ವಜಾರೋಹಣವನ್ನು ನೆರವೇರಿಸಿ, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವೆಂದರೆ ಇದರ ಹಿಂದಿನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕೋಟ್ಯಾಂತರ ಭಾರತೀಯರ ತ್ಯಾಗ-ಬಲಿದಾನ- ಹೋರಾಟದ ಕಥೆ ಇದೆ. ನಮ್ಮ ಯೋಧರ ತ್ಯಾಗಗಳನ್ನು ಸ್ಮರಿಸೋಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ನೆನೆಯೋಣ. ನವಸಮಾಜ ನಿರ್ಮಾಣ ಜೊತೆಗೆ ದೇಶಾಭಿವೃದ್ಧಿಗಾಗಿ ಇಂದು ಯುವಕರು ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮ ನೀಡಿ ದೇಶ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಮತ್ತು ಪ್ರಾಮುಖ್ಯತೆಯನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ, ಕ್ವಾರ್ಟರ್ ಮಾಸ್ಟರ್ ಮೋಹಿತ್ ಎನ್ ಸಾಲಿಯಾನ್, ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್ ಪರೇಡ್ ನ ನೆರವೇರಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿನ ಅಧೀಕ್ಷಕ್ಕಿ ಡೋರಿನ್ ಡಿಸಿಲ್ವಾ, ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀರಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ ಲೀಡರ್ ಗಳಾದ ಪ್ರಕಾಶ್, ಸಂಗೀತ ಪೂಜಾರಿ, ಎನ್ ಎಸ್ ಎಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿ ಕಾಲೇಜಿನ ಎಲ್ಲಾ ಭೋಧಕ ಹಾಗು ಭೋಧಕೆತರ ವೃಂದದವರು ಉಪಸ್ಥಿತರಿದ್ದರು.

ಎನ್ಎಸ್ಎಸ್ ಯೋಜನಾಧಿಕಾರಿ ಪ್ರೇಮನಾಥ್ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದ ವಂದಿಸಿದರು. ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‌ಕುಮಾರ್‌ ರವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ-ಸಂಯೋಜಿಸಿದರು.