Updated News From Kaup
ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

Posted On: 01-08-2022 10:53PM
ಶಿರ್ವ : ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರ್ಗಳನ್ನು ಬಳಸಲಾಗಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಹೊಂದುವುದು ಅವಶ್ಯಕ. ವಿದ್ಯಾರ್ಥಿಗಳು ಕಂಪ್ಯೂಟರ್‌ಗಳ ಸದುಪಯೋಗ ದಿಂದ ಉತ್ತಮ ಉಪಾದಿ ಹಾಗೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಇವತ್ತು ಕಂಪ್ಯೂಟರ್ ಒಂದು ಮೂಲಭೂತ ಅಗತ್ಯ ವಸ್ತುವಾಗಿದೆ. ಶಿಕ್ಷಣ ,ಆರೋಗ್ಯ ,ಪ್ರಾಕೃತಿಕ ಹಿನ್ನಲೆಯಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ಇಲ್ಲಿನ ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಲಾದ 5 ಕಂಪ್ಯೂಟರ್ ಗಳನ್ನು ಕರ್ಣಾಟಕ ಬ್ಯಾಂಕ್ ಉಡುಪಿ ರೀಜನಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಾಜ್ ಗೋಪಾಲ್ ಬಿ. ಅವರು ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಚಾರ್ಯ ಡಾ| ಹೆರಾಲ್ಡ್ ಐವನ್ ಮೋನಿಸ್ ಅವರು ಸಮಾಜ ಕಾಯ೯ ಕೆಲಸಗಳಲ್ಲಿ ಕರ್ಣಾಟಕ ಬ್ಯಾಂಕ್ ಸದಾ ಮುಂದು ಎಂದು ನಮ್ಮ ಕಾಲೇಜಿಗೆ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಮ್ಯಾನೇಜರ್ ಮತ್ತು ಅವರ ಸಿಬ್ಬಂದಿ ವಗ೯ದವರನ್ನು ಅಭಿನಂದಿಸಿದರು
ಸಂತಮೇರಿ ಮತ್ತು ಡಾನ್ ಬಾಸ್ಕೋ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಡಾ| ಲೆಸ್ಲಿ ಸಿ.ಡಿಸೋಜ ರವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ತಮಗೆ ಪ್ರತ್ಯೇಕ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಸಮಾಜದ ಋಣವನ್ನು ಸದಾ ತಮ್ಮ ಗಮನದಲ್ಲಿಟ್ಟುಕೊಂಡು ಮುಂದೆ ಸಮಾಜಕ್ಕೆ ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟನ್ನು ಸಮಾಜಕ್ಕೆ ಹಿಂತಿರುಗಿಸಬೇಕು ಹಾಗೂ ಸಮಾಜಮುಖಿ ಕೆಲಸದಲ್ಲಿ ಒಂದು ಹೆಜ್ಜೆ ಮುಂದಿರಬೇಕೆಂದೂ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕೆಂದು ತಮ್ಮ ಆಶಿವ೯ಚನದಲ್ಲಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಶಿರ್ವ ಬ್ರಾಂಚಿನ ಮ್ಯಾನೇಜರ್ ಜನಾರ್ಧನ್, ಕ್ಲೆರಿಕಲ್ ಸ್ಟಾಫ್ ಶ್ರೀನಿವಾಸ ಪೈ, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಧಾತ್ ಶೆಟ್ಟಿ, ಅಲಿಸ್ಟರ್ ಸುಜಾಯ್ ಡಿಸೋಜಾ ಮತ್ತು ಅರುಣ್ ಸಹಕರಿಸಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಪ್ರಕಾಶ್ ವಂದಿಸಿದರು. ಉಪನ್ಯಾಸಕಿ ದಿವ್ಯಶ್ರೀ ಬಿ ಕಾರ್ಯಕ್ರಮ ಸಂಯೋಜಿಸಿದರು.
ಉಡುಪಿಯ ಪ್ರಖ್ಯಾತ ವಕೀಲರಾದ ಸಂಕಪ್ಪ.ಎ ಜೆಡಿಎಸ್ ಸೇರ್ಪಡೆ

Posted On: 01-08-2022 09:30PM
ಉಡುಪಿ : ಇಲ್ಲಿಯ ಪ್ರಖ್ಯಾತ ವಕೀಲರು, ಬಿಲ್ಲವ ಮುಖಂಡರು, ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಅಧ್ಯಕ್ಷರು ಅದ ಸಂಕಪ್ಪ.ಎ ಅವರಿಗೆ ಆಗಸ್ಟ್ 1 ರಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಜಾತ್ಯತೀತ ಜನತಾದಳ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್. ಎಲ್. ಬೋಜೆ ಗೌಡ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ನಾಯಕರಾದ ವಸಂತ ಪೂಜಾರಿ ಮಂಗಳೂರು, ಇಕ್ಬಾಲ್ ಮಂಗಳೂರು, ಇಕ್ಬಾಲ್ ಅತ್ರಾಡಿ, ಭರತ್ ಶೆಟ್ಟಿ, ಸಂಜಯ್, ಚಂದ್ರಹಾಸ್ ಮತ್ತು ರಜಾಕ್ ಉಪಸ್ಥಿತರಿದ್ದರು.
ಚಿತ್ರ ಕಲಾವಿದ ರಮೇಶ್ ಬಂಟಕಲ್ ಗೆ ಸನ್ಮಾನ

Posted On: 01-08-2022 09:05PM
ಶಿರ್ವ : ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಪಡುಬೆಳ್ಳೆ ಇಲ್ಲಿ ಚಿತ್ರ ಕಲಾವಿದ ರಮೇಶ್ ಬಂಟಕಲ್ ಇವರ ದೈವಾರಾಧನೆ ಕಲಾಕೃತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡ ನಿಮಿತ್ತ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಜಿನರಾಜ ಸಾಲಿಯಾನ್, ಅತಿಥಿ ಗಣ್ಯರು ಉಪಸ್ಥಿತರಿದ್ದರು.
ನಾಗರಪಂಚಮಿ : ಕರೆನಾಡಿನಲ್ಲಿ ನಾಗ ಆರಾಧನಾ ಪರ್ವ ದಿನವೇ? ನಾಗಬನಗಳ ಪುನರ್ ರಚನೆ ಅನಿವಾರ್ಯ

Posted On: 01-08-2022 08:46PM
ನಾಗರಪಂಚಮಿ ತುಳವರ "ನಾಗ ಆರಾಧನಾ" ಪರ್ವ ದಿನವೇ ? ಏನು ಪ್ರಶ್ನೆ ; ಶತಮಾನಗಳಿಂದ , ತಲೆಮಾರುಗಳಿಂದ, ಲಾಗಾಯ್ತಿನಿಂದ ನಡೆದು ಬರುತ್ತಿರುವ ಒಂದು ಆರಾಧನಾ ದಿನದ ಬಗ್ಗೆ ಇಂತಹ ಸಂಶಯ ಏಕೆ ? ಹೌದು..... ಕರೆನಾಡಿನ ಉಭಯ ಜಿಲ್ಲೆಗಳಲ್ಲಿ ರೂಢಿಯಲ್ಲಿರುವ ವೈವಿಧ್ಯಮಯ ನಾಗ ಉಪಾಸನಾ ಕ್ರಮಗಳ ಮಾಹಿತಿ ಸಂಗ್ರಹಿಸಿ ಕ್ಷೇತ್ರಕಾರ್ಯದ ಮೂಲಕ ದಾಖಲಿಸಿಕೊಂಡಾಗ ಈ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಮೇಲ್ನೋಟಕ್ಕೆ ಈ ಆರಾಧನಾ ಪ್ರಕಾರಗಳು ನಮ್ಮ ನಡುವೆ ಇದೆಯಾದರೂ ನಾವು ಗಮನಿಸಿಲ್ಲ ಅಷ್ಟೆ. ಏಕೆಂದರೆ ನಮಗೆ ನಮ್ಮದೇ ಶ್ರೇಷ್ಠ .ಬೇರೆ ಏನಿದ್ದರೂ ಅದು ನಮ್ಮ ಕ್ರಮದಷ್ಟು ಶಾಸ್ತ್ರೀಯವಾಗಿರಲಾರದು ಎಂಬ ಅಹಂ. ವರ್ಷದ ಸಂಭ್ರಮಗಳೆಲ್ಲ ತೆರೆದುಕೊಳ್ಳುವ ಪ್ರಾರಂಭದ ಹಬ್ಬ ನಾಗರಪಂಚಮಿ. ಆದುದರಿಂದ ತುಳುನಾಡಿನಲ್ಲೂ ಆಚರಣೆ ಪ್ರಶಸ್ತವೇ. ಆಗಮಿಸಿದವುಗಳಲ್ಲಿ ಹಲವು ವಿಚಾರಧಾರೆಗಳು ಒಪ್ಪಿತವಾಗಿವೆ, ಕೆಲವು ತಿರಸ್ಕರಿಸಲ್ಪಟ್ಟಿವೆ. ಅದರಲ್ಲಿ ನಾಗರಪಂಚಮಿ ಒಪ್ಪಿತವಾದುದು.ಏಕೆಂದರೆ ನಾಗ ಲೋಕಪ್ರಿಯ, ಮಾನವನಿಂದ ಮೊತ್ತಮೊದಲು ದೈವತ್ವಕ್ಕೆ ಏರಿದವ. ತನು - ತಂಬಿಲದಂತಹ ಪುರಾತನ ಕ್ರಮವನ್ನು ನಾವು ಬಿಟ್ಟವರಲ್ಲ . ನಾಗರಪಂಚಮಿಗೂ ನಮ್ಮ ಆರಾಧನೆ ತನು - ತಂಬಿಲವೇ. ಇಷ್ಟಕ್ಕೆ ನಮ್ಮ ಶ್ರದ್ಧೆ. ನಮ್ಮ ಭರವಸೆ ಮತ್ತು ವಿಶ್ವಾಸಗಳ ಮೂರ್ತ ಸ್ವರೂಪವಾದ ನಂಬಿಕೆಯೇ ನಾಗ ಉಪಾಸನೆಯ ಮೂಲ.
ನಾಗ ಸಂತಾನ, ಸಂಪತ್ತು, ಕೃಷಿಸಮೃದ್ಧಿ ಅನುಗ್ರಹಿಸುವ ದೇದರು. ಹಾಗೆಯೇ ಚರ್ಮವ್ಯಾಧಿಗಳನ್ನು ನಿವಾರಿಸುವ ದೈವ. ಆದುದರಿಂದ ನಾಗ ನಂಬಿಕೆ ಗಾಢವಾಗಿದೆ. ಕರೆನಾಡಿನ ಮೂರು ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ವಿಫುಲವಾದ ಆಧಾರಗಳು, ನಾಗರ ಪಂಚಮಿ ಆಚರಿಸದ ಬನಗಳಿರುವುದು ಗಮನಕ್ಕೆ ಬಂದಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಕೆಲವೊಂದು ಬನಗಳು ಪೂರಕವಾಗಿ ಒದಗುತ್ತವೆ. ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೆರಡು ಬನಗಳಲ್ಲಿ ನಾಗರಪಂಚಮಿ ಆಚರಣೆ ಇರುವುದಿಲ್ಲ (ಲೇಖಕನಿಗೆ ದೊರೆತುದು ಎರಡು ಮಾತ್ರ, ತುಂಬಾ ಇವೆ ಎಂದು ಹೇಳಲಾಗುತ್ತದೆ). ಈ ಬನಗಳೆಲ್ಲ ಪರಿಶಿಷ್ಟ ವರ್ಗದವರಿಂದ ಆರಾಧನೆಗೊಳ್ಳುವ ಬನಗಳು.ಇಂತಹ ಬನಗಳಲ್ಲಿ ನಡೆಯುವ ಪೂಜೆಗಳೆಲ್ಲ ಸರಳ - ಮುಗ್ಧ - ವಿಮರ್ಶೆಗಳಿಲ್ಲದ ಜನಪದರ ಪರಿಕಲ್ಪನೆಯವುಗಳು. ಇವು ವಿಕಾಸದಲ್ಲಿ ಅಳಿದುಳಿದ ಆರಾಧನಾ ಕ್ರಮಗಳು. ಈ ಬನಗಳಲ್ಲಿ ಪೂಜಾಕ್ರಮವು ನಿರ್ದಿಷ್ಟ ಹಾಡಿನ ರೂಪದ ಪಠ್ಯವನ್ನು ಆಧರಿಸಿ ನೆರವೇರುತ್ತವೆ. ಅವುಗಳೆಲ್ಲ ಸಮೂಹ ಪೂಜಾಸ್ಥಾನಗಳು ಎಂಬುದು ಮಾತ್ರ ಗಮನಸೆಳೆಯುವ ಅಂಶ. ಈ ಸಂಗತಿಯು ಮಾನವ ತಾನು ಬಯಸಿದುದನ್ನೆಲ್ಲ ಒಂದೇ ವ್ಯವಸ್ಥೆಯ ಅಡಿಯಲ್ಲಿ ನೆಲೆಗೊಳಿಸಿ ನಿರಾಳವಾಗಿ ಬದುಕು ಕಟ್ಟಿದ ಕೃಷಿ ಸಂಸ್ಕೃತಿಯ ಆರಂಭದ ಕಾಲದವರೆಗೆ ಹಿಂದಕ್ಕೆ ಒಯ್ಯುತ್ತದೆ. ಇವು ಭಯದಿಂದ ಮತ್ತು ಉಪಕೃತನಾಗುವ ವೇಳೆ ಮಾನವನ ನಂಬಿಕೆಯಾಗಿ ಆರಂಭವಾದ ಆರಾಧನೆಗಳು.
ಮೇಷ ಸಂಕ್ರಮಣ : ಉಡುಪಿ ಜಿಲ್ಲೆಯಲ್ಲಿ ಈ ಲೇಖಕ ಗುರುತಿಸಿದ ಸುಮಾರು ಹತ್ತು ನಾಗಸ್ಥಾನಗಳಲ್ಲಿ ಯಾವುದೇ ನಿರ್ದಿಷ್ಟವಾದ ಪಠ್ಯಗಳಿಲ್ಲದೆ ನೆರವೇರುವ ನಾಗ ಪೂಜೆಗಳು ಮೇಲೆ ವಿವರಿಸಿದ ಪೂಜಾ ವಿಧಾನಗಳಿಂದಲೂ ಪ್ರಾಚೀನವೆನ್ನ ಬಹುದಾದುವುಗಳು .ಇವು ನಿಜವಾಗಿಯೂ ಮುಗ್ಧ ಆಚರಣೆಗಳೇ ಆಗಿವೆ. ಬನದಲ್ಲಿ ಅಥವಾ ಮೂಲಸ್ಥಾನಗಳಲ್ಲಿ ಸೇರುವ ಮಂದಿ ಒಂದೇ ಕುಟುಂಬದವರೆಂದು ವಿಶ್ವಾಸವಿರುತ್ತದೆ. ಈ ನಾಗಾರಾಧನೆ ನಡೆಯುವುದು ವರ್ಷಕ್ಕೆ ಒಂದು ದಿನ ಒಮ್ಮೆ ಮಾತ್ರ. ಆ ದಿನ ನಾಗರಪಂಚಮಿಯಲ್ಲ. ಮೇಷ ಸಂಕ್ರಮಣದ ದಿನ. ಅಂದರೆ ತುಳುನಾಡಿನ ಪಗ್ಗು ತಿಂಗಳು ಬರುವ ಸಂಕ್ರಮಣ. ಇವುಗಳಲ್ಲಿ ಒಂದು ಬನದಲ್ಲಿ ಮಾತ್ರ ಬೇಷ ತಿಂಗಳ ಮೊದಲ ಗುರುವಾರ ನೆರವೇರುತ್ತವೆ, ಆದರೆ ನಾಗರ ಪಂಚಮಿ ಆಚರಣೆ ಇಲ್ಲ. ಮೂಲವನ್ನು ಅಥವಾ ಪ್ರಾಚೀನತೆಯನ್ನು ಆಚರಣೆಗಳ ನಿರ್ವಹಣಾ ವಿಧಾನದಿಂದಲೂ ಗ್ತಹಿಸಬಹುದಾದರೆ ಇವು ಈ ವರೆಗೆ ನಡೆದ ಸಂಶೋಧನೆಗಳಲ್ಲಿ ಪುರಾತನ ಕ್ರಮದ ಆಚರಣೆಗಳೆಂದು ಪರಿಗ್ರಹಿಸಬಹುದಾಗಿವೆ. ಇನ್ನು ಮುಂದೆ ಸಂಶೋಧನೆಗಳಲ್ಲಿ ಇದಕ್ಕೂ ಪೂರ್ವದ ಆಚರಣಾ ಪದ್ಧತಿಗಳು ದೊರೆಯಬಹುದು. ಇದು ವಿವರಣೆಗೆ ಬೇಕಾಗಿ ಮಾತ್ರ ಮಾಡಿದ ವಿಂಗಡನೆ. ಕರೆನಾಡಿನ ಉಭಯ ಜಿಲ್ಲೆಗಳಲ್ಲಿ ನಾಗರಪಂಚಮಿ ವರ್ಷದ ಪ್ರಾರಂಭದ ಪರ್ವದಿನವಾಗಿರಲಾರದು, ಕೃಷಿ ಆಧರಿತ ಜೀವನ ಕ್ರಮವಾಗಿರುವುದರಿಂದ ಯುಗಾದಿ ಮೊದಲ ಹಬ್ಬವಾಗಿದ್ದಿರ ಬಹುದು. ಯುಗಾದಿಯ ಆಚರಣೆಯಲ್ಲಿ ಕೃಷಿ ಚಟುವಟಿಕೆಯ ಪ್ರಾರಂಭದ ವಿಧಿಗಳು ನೆರವೇರುತ್ತವೆ.
ವೈದಿಕ ಆಗಮನ : ವೈದಿಕದ ಆಗಮನದ ಬಳಿಕ ನಮ್ಮ ಸಮೂಹ ಪೂಜಾಸ್ಥಾನಗಳು ಅಥವಾ ಬ್ರಹ್ಮ ಪ್ರಧಾನವಾಗಿದ್ದ ಪೂಜಾಸ್ಥಾನಗಳಿಗೆ ವೈದಿಕರಿಗೆ ಪ್ರವೇಶ ಒದಗಿಸಲಾಯಿತು . ಈ ಪ್ರವೇಶಾವಕಾಶ ನಾವೇ ಕೊಟ್ಟಿದುದು ಹೊರತು ಅವರಾಗಿ ಪ್ರವೇಶಿಸಿದುದು ಅಲ್ಲ. ಕೃಷಿ ಪ್ರಧಾನವಾಗಿದ್ದ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಆಚರಣೆಗಳು ನೇರ್ಪುಗೊಂಡಿದ್ದು ಅದು ಮಳೆಗಾಲಕ್ಕೆ ಮೊದಲು, ಬೇಷತಿಂಗಳಲ್ಲಿ ಮೂಲಸ್ಥಾನಗಳಿಗೆ ಹೋಗಿ ನಾಗನಿಗೆ "ತನು ಹೊಯ್ಯಿಸಿ ತಂಬಿಲ ಕಟ್ಟಿಸಿ" ಬರುವ ಪದ್ದತಿಯೇ ಆಚರಣೆಯಾಗಿದ್ದಿರಬೇಕು ಎಂದು ಊಹಿಸಲಡ್ಡಿಯಿಲ್ಲ. ಕರೆನಾಡಿಗೆ ವಲಸೆ ಬಂದ ಮಂದಿಯಲ್ಲೂ ಪಂಚಮಿಯ ಗುರುತು ಇದ್ದು ನಮ್ಮ ನಾಗ ಪೂಜಾ ಉಪಕ್ರಮಕ್ಕೆ ನಾಗರಪಂಚಮಿ ಸೇರ್ಪಡೆಯಾಗಿರಬೇಕು . ಮಂಗಳೂರಿನಿಂದ ದಕ್ಷಿಣಕ್ಕೆ ತಲಪಾಡಿಯಿಂದ ಇಚ್ಲಾಡಿಯವರೆಗಿನ ಹದಿನೆಂಟು ಕೇಂದ್ರಗಳಲ್ಲಿ ಸರ್ಪಕೋಲ ನಡೆಯುತ್ತದೆ. ಈ ಯಾವ ಬನಗಳಲ್ಲೂ ನಾಗರಪಂಚಮಿ ಪ್ರಧಾನವಾದ ಆರಾಧನಾ ಪರ್ವದಿನವಾಗಿರಲಿಲ್ಲ. ಉಭಯ ಜಿಲ್ಲೆಗಳಲ್ಲಿ ಗುರುತಿಸಲಾದವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ಬೇರೆ ಬೇರೆ ಕಾರಣದಿಂದ ವೈದಿಕವನ್ನು ಆಮಂತ್ರಿಸಲಾಗುತ್ತಿದೆ. ವೈದಿಕೀಕರಣವಾಗುತ್ತಿವೆ. ಬನಗಳನ್ನು ಕಡಿದು ನಾಗ ಗುಡಿ, ನಾಗವೇದಿಕೆ, ನಾಗ ಮಂದಿರಗಳನ್ನು ಕಟ್ಟುತ್ತಿರುವ ಮೂಲಕ ಬನಗಳು ನಾಶವಾಗುತ್ತಿವೆ ಪುನರ್ ರಚನೆಯ ಅಗತ್ಯವಿದೆ. ಪುನರ್ ರಚನೆಗೆ ನಾಗರಪಂಚಮಿ ದಿನ ನಾಗಬನಕ್ಕೆ ಅಥವಾ ಮೂಲಕ್ಕೆ ಹೋಗುವಾಗ ಒಂದು ಗಿಡ ಕೊಂಡೊಯ್ಯಿರಿ ಬನದಲ್ಲಿ ನೆಟ್ಟು ಬನ ನಾಶವಾಗಿದ್ದರೆ ಪುನರ್ ರಚಿಸಿರಿ. ನಾಗ ಮತ್ತು ವೃಕ್ಷ ಅವಳಿ ಚೇತನಗಳು. ಇದೊಂದು ಪುರಾತನ ನಂಬಿಕೆ. ಅಂತರ್ಜಲ ವೃದ್ಧಿಗೆ, ಪರಿಶುದ್ಧ ಪರಿಸರಕ್ಕೆ ನಾಗಬನಗಳು ವನಗಳಾಗಿಯೇ ಉಳಿಯಬೇಕು. ಬರಹ : ಕೆ.ಎಲ್.ಕುಂಡಂತಾಯ
ಸಿ.ಇ.ಟಿ ಫಲಿತಾಂಶ : ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜು ಪ್ರಥಮ ವರ್ಷದಲ್ಲಿಯೇ ಅಮೋಘ ಸಾಧನೆ

Posted On: 01-08-2022 01:52PM
ಕಾರ್ಕಳ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ -2022 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆಗಳಿಸಿದ್ದಾರೆ. ರಾಜ್ಯದ ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪಾಸನ ಬಿ ಪಿ ರಾಜ್ಯಕ್ಕೆ 42 ನೇ ರ‍್ಯಾಂಕ್ ಹಾಗೂ ಪಶುವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಯಲ್ಲಿ 103 ನೇ ರ‍್ಯಾಂಕ್ ಗಳಿಸಿರುತ್ತಾರೆ ಮತ್ತು ಮಧುಶ್ರೀ ವಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 72 ನೇ ರ‍್ಯಾಂಕ್, ಪಶುವೃದ್ಯಕೀಯ ಪ್ರಾಯೋಗಿಕದಲ್ಲಿ 126 ನೇ ರ‍್ಯಾಂಕ್. ಕಾಲೇಜಿನ ರಾಘವೇಂದ್ರ ತಾಳಿಕೋಟಿ ಪಶುವೈದ್ಯಕೀಯದಲ್ಲಿ ರಾಜ್ಯಕ್ಕೆ 110 ನೇ ರ‍್ಯಾಂಕ್, ಬಿ-ಫಾರ್ಮಾ ದಲ್ಲಿ 150 ನೇ ರ‍್ಯಾಂಕ್ , ಬಿ.ಎನ್.ವೈ.ಎಸ್ ವಿಭಾಗದಲ್ಲಿ 165 ನೇ ರ‍್ಯಾಂಕ್, ಕೃಷಿ ವಿಜ್ಞಾನದಲ್ಲಿ 186 ನೇ ರ‍್ಯಾಂಕ್ ಹಾಗೂ ಇಂಜಿನಿಯರಿಂಗ್ ನಲ್ಲಿ 636 ನೇ ರ‍್ಯಾಂಕ್ ಪಡೆದಿರುತ್ತಾರೆ. ಸಾತ್ವಿಕ್ ಶ್ರೀಕಾಂತ ಹೆಗಡೆ ಬಿ.ಎನ್.ವೈ.ಎಸ್ ನಲ್ಲಿ 116 ರ‍್ಯಾಂಕ್, ಪಶುವೈದ್ಯಕೀಯದಲ್ಲಿ 222 ನೇ ರ‍್ಯಾಂಕ್, ಬಿ.ಫಾರ್ಮಾ ದಲ್ಲಿ 383 ನೇ ರ‍್ಯಾಂಕ್ ಪಡೆದಿರುತ್ತಾರೆ. ಕುಮಾರಿ ಸಿಂಚನ ಕೆ ಎಸ್, ಬಿ.ಎನ್.ವೈ.ಎಸ್ ವಿಭಾಗದಲ್ಲಿ 745 ನೇ ರ‍್ಯಾಂಕ್, ಕೃಷಿ ವಿಜ್ಞಾನದಲ್ಲಿ 835 ನೇ ರ‍್ಯಾಂಕ್, ಅಗಸ್ತ್ಯ ಸಮ್ಯಕ್ ಜ್ಞಾನ್ ಕೃಷಿ ವಿಜ್ಞಾನದಲ್ಲಿ 679 ನೇ ರ‍್ಯಾಂಕ್, ಬಿ.ಎನ್.ವೈ.ಎಸ್ ವಿಭಾಗದಲ್ಲಿ 924 ನೇ ರ‍್ಯಾಂಕ್ ಹಾಗೂ ಅನ್ವಿನ್ ಬಿ ಪಿ ಇಂಜಿನಿಯರಿಂಗ್ ವಿಭಾಗದಲ್ಲಿ 681 ನೇ ರ‍್ಯಾಂಕ್ ಪಡೆದಿರುತ್ತಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ರಾಜ್ಯ ಮಟ್ಟದ 1 ರಿಂದ 1000 ರ‍್ಯಾಂಕ್ ನ ಒಳಗೆ 31 ವಿದ್ಯಾರ್ಥಿಗಳು, 2000 ದ ಒಳಗೆ 66 ವಿದ್ಯಾರ್ಥಿಗಳು ರ‍್ಯಾಂಕ್ ನ್ನು ಗಳಿಸಿರುತ್ತಾರೆ. ತನ್ನ ಪ್ರಥಮ ವರ್ಷದ ಸಿ.ಇ.ಟಿ ಫಲಿತಾಂಶದಲ್ಲಿಯೇ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಈ ಅಮೋಘ ಸಾಧನೆ ದಾಖಲಿಸಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲೂ 100 ಶೇಕಡಾ ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಿ.ಇ.ಟಿ ಸಂಯೋಜಕರಾದ ಶ್ರೀ ಸುಜಯ್ ಬಿ ಟಿ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಎಎಪಿ ಪಕ್ಷದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಕಲಂಬಾಡಿ ಪದವು ಮಂಜುನಾಥ್ ಕುಲಾಲ್ ಆಯ್ಕೆ

Posted On: 31-07-2022 11:04PM
ಕಾರ್ಕಳ : ಭಾರತೀಯ ರಾಷ್ಟ್ರೀಯ ಪಕ್ಷ ಆಮ್ ಆದ್ಮಿ ಪಕ್ಷ ಇದರ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಕಲಂಬಾಡಿ ಪದವು ಇಲ್ಲಿಯ ಮಂಜುನಾಥ್ ಕುಲಾಲ್ ಇವರು ಆಯ್ಕೆಯಾಗಿರುತ್ತಾರೆ.
ಮಣಿಪಾಲದ ಟಿ ಮೋಹನ್ ದಾಸ್ ಎಂ ಪೈ ವಿಧಿವಶ

Posted On: 31-07-2022 10:22PM
ಮಣಿಪಾಲ : ಇಲ್ಲಿನ ಡಾ.ಟಿ ಎಂ ಎ ಪೈ ಅವರ ಹಿರಿಯ ಪುತ್ರ ಟಿ ಮೋಹನ್ ದಾಸ್ ಎಂ ಪೈ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. 1933 ರ ಜೂನ್ 20 ರಂದು ಜನಿಸಿದ್ದರು.
ಅವರು ಡಾ.ಟಿ ಎಂ ಎ ಪೈ ಫೌಂಡೇಶನ್ ಮಣಿಪಾಲ ಮತ್ತು ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಮಣಿಪಾಲದ ವಿವಿಧ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಪ್ರವೀಣ್ ನೆಟ್ಟಾರ್ ಮನೆಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಭೇಟಿ

Posted On: 31-07-2022 07:06PM
ಕಾಪು : ದುಷ್ಕರ್ಮಿಗಳಿಂದ ಹತ್ಯೆಯಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಅವರ ಮನೆಗೆ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಭೇಟಿ ನೀಡಿ ಅವರ ಪೋಷಕರು, ಪತ್ನಿ ಮತ್ತು ಇತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಬಜರಂಗದಳ ಸಂಚಾಲಕನ ಮನೆಗೆ ಬಂದ ಅಪರಿಚಿತ ಯುವಕರು ; ಠಾಣೆಯಲ್ಲಿ ದೂರು ದಾಖಲು

Posted On: 31-07-2022 06:27PM
ಕಾಪು : ಇಲ್ಲಿನ ಬಜರಂದದಳದ ಸಂಚಾಲಕರಾದ ಸುಧೀರ್ ಸೋನುರವರ ಮನೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ನಿಮ್ಮ ಬಳಿ ಮಾತನಾಡಲಿದೆ ನಿಮ್ಮನ್ನು ಆಶಿಫ್ ಎನ್ನುವವರು ಕಾರಿನಲ್ಲಿ ಕಾಯುತ್ತಿದ್ದಾರೆ ಎಂದು ಹೇಳುತ್ತಿದ್ದಂತೆ ಅನುಮಾನಗೊಂಡ ಸುಧೀರ್ ಸೋನುರವರು ಕೂಡಲೇ ಬರುವುದಿಲ್ಲ ಎಂದು ನಿರಾಕರಿಸಿದ ಘಟನೆ ಇಂದು ನಡೆದಿದೆ.
ಇಬ್ಬರು ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್ ಸೋನು ಮತ್ತು ಅವರ ಪತ್ನಿ ಬರುವುದಿಲ್ಲ ಎಂದು ಹೇಳಿ ಕಳುಹಿಸಿದರು. ಅಪರಿಚಿತರು ಹೋಗುವಾಗ ಅವರ ಬಳಿ ಇದ್ದ ಆಯುಧಗಳನ್ನು ಗಮನಿಸಿದ ಸುಧೀರ್ ಸೋನುರವರು ಕೂಡಲೇ ಕಾಪು ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೋಲಿಸರು ಕಾರ್ಯಪ್ರವತ್ತರಾಗಿ ಆಶೀಫ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆಗಸ್ಟ್ 31 : ಕಳತ್ತೂರು ಜ್ಯೋತಿನಗರ ಶ್ರೀ ಗಣೇಶೋತ್ಸವ ಸಮಿತಿಯ 32ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
.jpg)
Posted On: 31-07-2022 04:06PM
ಕಾಪು : ಕಳತ್ತೂರು ಶ್ರೀ ಗಣೇಶೋತ್ಸವ ಸಮಿತಿಯ 32ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಆಗಸ್ಟ್ 31, ಬುಧವಾರದಂದು ಶ್ರೀ ಶೈಲಾ ಮಂಟಪ ಜ್ಯೋತಿನಗರದಲ್ಲಿ ಕೇಶವ ತಂತ್ರಿಯವರ ನೇತೃತ್ವದಲ್ಲಿ ನೆರವೇರಲಿದೆ.
ಆಗಸ್ಟ್ 28ರ ಬೆಳಿಗ್ಗೆ 9 ರಿಂದ ಊರಿನವರಿಗೆ ಹಾಗೂ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ, ಆಗಸ್ಟ್ 31ರಂದು ಪೂಜಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ರಾತ್ರಿ ಮಂಗಲಮೂರ್ತಿಯ ಜಲದಿವಾಸ ನಡೆದು ಎಲ್ಲಾ ಕಾರ್ಯಕ್ರಮ ಅಂದು ಸಮಾಪ್ತಿಗೊಳ್ಳಲಿದೆ ಎಂದು ಸಮಿತಿಯ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.