Updated News From Kaup
ಅಕ್ರಮ ಕಸಾಯಿಖಾನೆ - ಶಿರ್ವ ಪೋಲಿಸರ ದಾಳಿ
Posted On: 10 Oct 2022, 01:14 PM
ಕಾಪು : ತಾಲೂಕಿನ ಬೆಳಪು ಗ್ರಾಮದ ಹಾಜಿಗೇಟ್ ಬಳಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಯ ಮಾಹಿತಿಯ ಮೇರೆಗೆ ಶಿರ್ವ ಪೋಲಿಸರು ಮಿಂಚಿನ ದಾಳಿ ನಡೆಸಿ ಗೋಮಾಂಸ ಮತ್ತು ಕರುಗಳನ್ನು ವಶಪಡಿಸಿಕೊಂಡು ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಗೋಮಾಂಸ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳು, ಗೋಮಾಂಸ ವಶ ಪಡಿಸಿಕೊಂಡಿರುವ ಪೋಲಿಸರು ಒಂದು ಕರುವನ್ನು ರಕ್ಷಿಸಲಾಗಿದ್ದು 3 ದ್ವಿಚಕ್ರ ವಾಹನಗಳನ್ನು ವಶ ಪಡೆದುಕೊಂಡಿದ್ದಾರೆ. ಆರೋಪಿಗಳು ದನದ ಮಾಂಸ ಮಾರಿ ಬಂದ ಹಣವನ್ನು ಹಬ್ಬಕ್ಕಾಗಿ ಖರ್ಚು ಮಾಡಿದ್ದೇವೆ ಎಂದು ಪೋಲಿಸರಿಗೆ ತಿಳಿಸಿದ್ದು, ಕದ್ದು ತಂದ ಸ್ಥಳದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ ತಂಡ ಭೇಟಿ
Posted On: 10 Oct 2022, 12:42 PM
ಪಡುಬಿದ್ರಿ : ಇಲ್ಲಿನ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.)ಗೆ ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ (ನಿ.) ಅಧ್ಯಕ್ಷರಾದ ಶಿವಾನಂದ ರಾಮಗೇರಿ ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಒಳಗೊಂಡ ಅಧ್ಯಯನ ತಂಡವು ಅಕ್ಟೋಬರ್ 7ರಂದು ಭೇಟಿ ನೀಡಿತು. ಈ ಸಂದರ್ಭ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ ಹಾಗೂ ನಿರ್ದೇಶಕರಾದ ರಸೂಲ್ ವೈ.ಜಿ. ಸೊಸೈಟಿಯ ಕಾರ್ಯವೈಖರಿ ಬಗ್ಗೆ ಅಧ್ಯನ ತಂಡಕ್ಕೆ ಮಾಹಿತಿ ನೀಡಿದರು. ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶಿವಾನಂದ ರಾಮಗೇರಿ ಯವರು ಸೊಸೈಟಿಯ ಅಭಿವೃದ್ಧಿ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ನಿರ್ದೇಶಕರಾದ ರಸೂಲ್ ವೈ.ಜಿ., ಗಿರೀಶ್ ಪಲಿಮಾರ್, ರಾಜಾರಾಮ್ ರಾವ್, ಯಶವಂತ್ ಪಿ.ಬಿ., ಮಾಧವ ಆಚಾರ್ಯ, ಸ್ಟೇನ್ನಿ ಕ್ವಾಡ್ರಸ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಿಶ್ಮಿತಾ ಪಿ.ಎಚ್ ಹಾಗೂ ಸಿಬಂದಿ ವೃಂದ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ (ಪ್ರಭಾರ) ಹರೀಶ್ ಬಿ., ಸಿಬಂದಿ ವಿಶ್ವನಾಥ್ ಉಪಸ್ಥಿತರಿದ್ದರು.
ಮೂಳೂರು : ಎಸ್ಡಿಪಿಐಯಿಂದ ಆಂಬುಲೆನ್ಸ್ ಲೋಕಾರ್ಪಣೆ ; ಪಕ್ಷ ಸೇರ್ಪಡೆ ಕಾರ್ಯಕ್ರಮ
Posted On: 10 Oct 2022, 12:14 PM
ಮೂಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಮೂಳೂರು ವಲಯ ಇದರ ವತಿಯಿಂದ ಅಂಬುಲೆನ್ಸ್ ಹಸ್ತಾಂತರ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ಅಕ್ಟೋಬರ್ 9 ರಂದು ಕಾಪು ತಾಲೂಕಿನ ಮೂಳೂರಿನಲ್ಲಿ ಜರಗಿತು. ಪಕ್ಷದ ಸಮಾಜಸೇವೆಯನ್ನು ಗುರುತಿಸಿಕೊಂಡು ದಾನಿಗಳು ಜಾತಿ-ಮತ ಭೇದವಿಲ್ಲದೆ ಸಾರ್ವಜನಿಕರ ಸೇವೆಗಾಗಿ ಆಂಬುಲೆನ್ಸ್ ನ್ನು ಎಸ್ಡಿಪಿಐ ಮೂಳೂರು ವಲಯಕ್ಕೆ ಹಸ್ತಾಂತರಿಸಲಾಯಿತು. ಸಾರ್ವಜನಿಕ ಸೇವೆಗಾಗಿ ನೀಡಿದ ಆಂಬುಲೆನ್ಸ್ ಉದ್ಘಾಟನೆಯನ್ನು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರು ಹಾಗೂ ಎಸ್ಡಿಪಿಐ ಉಡುಪಿ ಜಿಲ್ಲಾ ಉಸ್ತುವಾರಿಯಾದ ಅಥಾವುಲ್ಲಾ ಜೋಕಟ್ಟೆ ನೆರವೇರಿಸಿದರು. ತದನಂತರ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡ 30 ಕ್ಕೂ ಅಧಿಕ ಜನರನ್ನು ಪಕ್ಷಕ್ಕೆ ಸೇರ್ಪಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫ್ ಹಸನಬ್ಬ ವಹಿಸಿದ್ದರು .ಮುಖ್ಯ ಅತಿಥಿಯಾಗಿ ಎಸ್ಡಿಪಿಐ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶಾಹಿದ್ ಆಲಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಶ್ರಫ್ ಬಾವ, ಪಕ್ಷದ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ಶಿರ್ವ: ಪಿಕಪ್ ವಾಹನ ಡಿಕ್ಕಿ- ಪಾದಾಚಾರಿ ಮೃತ್ಯು
Posted On: 10 Oct 2022, 11:48 AM
ಶಿರ್ವ : ಪಿಕಪ್ ವಾಹನ ಡಿಕ್ಕಿ ಹೊಡೆದು ಪಾದಾಚಾರಿಯೊಬ್ಬರು ಮೃತಪಟ್ಟ ಘಟನೆ ಶಿರ್ವದ ಮುಖ್ಯ ರಸ್ತೆಯ ನ್ಯಾರ್ಮ ಸೇತುವೆ ಬಳಿ ರವಿವಾರ ರಾತ್ರಿ ನಡೆದಿದೆ. ಮೃತ ಪಾದಚಾರಿಯನ್ನು ಎವುಜಿನ್ ಬ್ರಿಟ್ಟೊ(50) ಎಂದು ಗುರುತಿಸಲಾಗಿದೆ. ಎವುಜಿನ್ ಬ್ರಿಟ್ಟೊ ಅವರು ಶಿರ್ವ ಪೇಟೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಟಪಾಡಿ ಕಡೆಯಿಂದ ಬಂದ ಪಿಕಪ್ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ.ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಅವರನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಮಟ್ಟಾರುವಿನಲ್ಲಿ ಭಾರತ್ ಮಾತಾ ಪೂಜನಾ, ಸಾಮೂಹಿಕ ದೀಪ ಪ್ರಜ್ವಲನೆ
Posted On: 09 Oct 2022, 10:21 PM
ಉಡುಪಿ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ವತಿಯಿಂದ ದಶಮಾನೋತ್ಸವದ ಪ್ರಯುಕ್ತ ಭಾರತ್ ಮಾತಾ ಪೂಜನಾ,ಸಾಮೂಹಿಕ ದೀಪ ಪ್ರಜ್ವಲನೆ ಕಾರ್ಯಕ್ರಮ ಜರಗಿತು. ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಜನತಾದಳ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸುಧಾಕರ ಶೆಟ್ಟಿ ಹೆಜಮಾಡಿ ನೇಮಕ
Posted On: 09 Oct 2022, 09:53 PM
ಉಡುಪಿ : ಜನತಾದಳ (ಜಾತ್ಯತೀತ) ಪಕ್ಷದ ಸುಧಾಕರ ಶೆಟ್ಟಿ ಹೆಜಮಾಡಿ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಜನತಾದಳ( ಜಾತ್ಯತೀತ) ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ ರವರು ಸುಧಾಕರ ಶೆಟ್ಟಿ ಹೆಜಮಾಡಿಯವರನ್ನು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ತಾಲೂಕು ಘಟಕದ ಅಧ್ಯಕ್ಷರಾಗಿ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಆಯ್ಕೆ
Posted On: 09 Oct 2022, 06:20 PM
ಕಾಪು : ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಇದರ ಕಾಪು ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಎರ್ಮಾಳು ಪೂಂದಾಡು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಸಾಸ್ ನ ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಧಾಕೃಷ್ಣ ಮೆಂಡನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಾಲಿಗೆ ನೂತನ ಅಧ್ಯಕ್ಷರಾಗಿ ರಘುರಾಮ ಶೆಟ್ಟಿ ಕೊಪ್ಪಲಂಗಡಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಗೌರವ ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಗುರ್ಮೆ, ಮೋಹನ್ ಬಂಗೇರ ಕಾಪು, ಲೀಲಾಧರ ಶೆಟ್ಟಿ ಕರಂದಾಡಿ, ಗೌರವ ಸಲಹೆಗಾರರಾಗಿ ವಿನಯ ಕುಮಾರ ಶೆಟ್ಟಿ ಎಲ್ಲದಡಿ ಎರ್ಮಾಳು, ನಾರಾಯಣ ಗುರುಸ್ವಾಮಿ ಕಾಪು ಪ್ರಧಾನ ಕಾರ್ಯದರ್ಶಿಯಾಗಿ ದಿವಾಕರ್ ಶೆಟ್ಟಿ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಧರ್ ಶೆಟ್ಟಿಗಾರ್ ಕರಂದಾಡಿ ಕೋಶಾಧಿಕಾರಿಯಾಗಿ ಜಿತೇಶ್ ಶೆಟ್ಟಿ ಮಜೂರು, ಉಪಾಧ್ಯಕ್ಷರಾಗಿ ಜಯ ಎರ್ಮಾಳು, ಶಂಕರ ಗಿರಿನಗರ ಕಾರ್ಯದರ್ಶಿಯಾಗಿ ಧನಂಜಯ ಮಲ್ಲಾರು, ನಾಗೇಶ್ ಮಲ್ಲಾರು ಭಜನಾ ಸಹ ಸಂಚಾಲಕರಾಗಿ ಸುರೇಶ್ ಅದಮಾರು ಆಯ್ಕೆಯಾದರು. ಸಾಸ್ ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಧಾಕೃಷ್ಣ ಮೆಂಡನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಸುಂದರ ಗುರುಸ್ವಾಮಿ ನಿಟ್ಟೂರು, ವಿನಯಕುಮಾರ್ ಶೆಟ್ಟಿ ಎಲ್ಲದಡಿ ಎರ್ಮಾಳು, ಮೋಹನ ಬಂಗೇರ ಕಾಪು ಮತ್ತಿತರರು ಉಪಸ್ಥಿತರಿದ್ದರು ದಿವಾಕರ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ರಂಜಿತ್ ಶೆಟ್ಟಿ ವಂದಿಸಿದರು.
ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಹಿತಸಾಧನ ವೇದಿಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Posted On: 09 Oct 2022, 04:57 PM
ಉಚ್ಚಿಲ : ಮಹಾಲಕ್ಷ್ಮಿ ವಿದ್ಯಾಸಂಸ್ಥೆ ಸಭಾಭವನದಲ್ಲಿ ನಡೆದ ದಕ್ಷಿಣ ಕನ್ನಡ ಮೊಗವೀರ ಹಿತಸಾಧನ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ಜರಗಿತು. ಈ ಸಂದರ್ಭ ಶಾಸಕರಾದ ಲಾಲಾಜಿ ಆರ್ ಮೆಂಡನ್ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ದ. ಕ ಮೊಗವೀರ ಹಿತಸಾಧನ ವೇದಿಕೆ ಅಧ್ಯಕ್ಷ ಸರ್ವೋತ್ತಮ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಮೋಹನ್ ಬೆಂಗ್ರೆ, ವಿನೀತ್ ಅಮೀನ್, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಪೀಟರ್ ಜೋಸೆಫ್, ವಿಶ್ವನಾಥ್ ಕುರಾಡಿ, ಸುಧಾಕರ್ ಕರ್ಕೇರ, ಸತೀಶ್ ಆರ್ ಸಾಲ್ಯಾನ್, ರವಿ ಕುಂದರ್, ವೇದವ್ಯಾಸ ಬಂಗೇರ ಹಾಗೂ ಮೊಗವೀರ ಹಿತಸಾಧನ ವೇದಿಕೆ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಗಂಗಾಧರ ಕರ್ಕೇರ ಸ್ವಾಗತಿಸಿದರು. ಪುಷ್ಪರಾಜ್ ಕೋಟ್ಯಾನ್ ವಂದಿಸಿದರು. ಲಕ್ಷ್ಮಣ್ ಮೈಂದನ್ ಕಾರ್ಯಕ್ರಮ ನಿರೂಪಿಸಿದರು.
ಉಚ್ಚಿಲ : ಬಾವಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಗೃಹಿಣಿ ಶವ ಪತ್ತೆ ; ದೂರು ದಾಖಲು
Posted On: 09 Oct 2022, 04:40 PM
ಉಚ್ಚಿಲ : ಇಲ್ಲಿನ ಸಮೀಪದ ಎಲ್ಲೂರು ಗ್ರಾಮದ ಹಾಡಿಯಲ್ಲಿರುವ ಪಾಳುಬಿದ್ದ ಬಾವಿಯಲ್ಲಿ ವಿವಾಹಿತ ಗೃಹಿಣಿಯ ಮೃತದೇಹ ರವಿವಾರ ಪತ್ತೆಯಾಗಿದ್ದು ಕೊಲೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎಲ್ಲೂರು ಗ್ರಾಮದ ರಕ್ಷಿತಾ(24) ಮೃತಪಟ್ಟ ಮಹಿಳೆ. ಉಡುಪಿಯ ಫ್ಯಾನ್ಸಿಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತಾ ಅವರು ತಮ್ಮ ಸಹೋದ್ಯೋಗಿ ಸಂಜಯ ಆಚಾರಿ ಎಂಬಾತನೊಂದಿಗೆ 2 ವರ್ಷದ ಹಿಂದೆ ಮದುವೆ ಆಗಿದ್ದರು. ನಂತರ ರಕ್ಷಿತಾಳ ತಾಯಿಗೆ ಹುಷಾರಿಲ್ಲದ ಕಾರಣ ಕಾಪುವಿನ ಎಲ್ಲೂರು ಕಂಚುಗಾರ ಕೇರಿ ಎಂಬಲ್ಲಿರುವ ತಾಯಿ ಮನೆಗೆ ಬಂದು ಗಂಡ ಹಾಗೂ ತಂದೆ ತಾಯಿಯೊಂದಿಗೆ ವಾಸವಾಗಿದ್ದರು. ಈ ನಡುವೆ ರಕ್ಷಿತಾಳ ಗಂಡ ಸಂಜಯ್ ಹಾಗೂ ಅವರ ಜೊತೆ ಕೆಲಸ ಮಾಡುವ 3 ಜನ ಹುಡುಗಿಯರೊಂದಿಗೆ ರಕ್ಷಿತಾ ಅವರ ದೊಡ್ಡಮ್ಮನ ಮಗಳು ಶಕುಂತಳ ಎಂಬವರವರ ಮನೆಗೆ ಬಂದು ರಕ್ಷಿತಾಳ ನಡತೆ ಸರಿ ಇಲ್ಲ ಎಂಬುದಾಗಿ ತಿಳಿಸಿ, ರಕ್ಷಿತಾ ಅವರನ್ನು ಅಲ್ಲಿಯೇ ಬಿಟ್ಟು ನಂತರ ಅದೇ ದಿನ ಸಂಜೆ ಬಂದು ಕರೆದುಕೊಂಡು ಹೋಗಿದ್ದ. ಆ ನಂತರ ರಕ್ಷಿತಾ ಅವರ ಆರೋಗ್ಯ ವಿಚಾರಿಸಲು ಶಕುಂತಳ ಅವರು ಸಂಜಯ್ ಗೆ ಕರೆ ಮಾಡಿದಾಗ ಸರಿಯಾಗಿ ಸ್ಪಂದಿಸದೇ ಪತ್ನಿ ಯಾರೊಂದಿಗೋ ಹೋಗಿರಬೇಕು ಎಂದು ಉತ್ತರಿಸಿದ್ದಾನೆ. ಅಲ್ಲದೆ ಈ ವೇಳೆ ರಕ್ಷಿತಾ ಅವರನ್ನು ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ಆದರೆ ಅ.8 ರ ಸಂಜೆ ವೇಳೆ ಎಲ್ಲೂರು ಗ್ರಾಮದ ದಿ. ಪೊಲ್ಲಶೆಟ್ಟಿ ಎಂಬುವರ ಹಾಡಿಯಲ್ಲಿರುವ ಪಾಳುಬಿದ್ದ ಕೆಸರು ನೀರು ತುಂಬಿರುವ ದೊಡ್ಡ ಬಾವಿಯಲ್ಲಿ ರಕ್ಷಿತಾ ಅವರ ಮೃತದೇಹ ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಂತೆ ರಕ್ಷಿತಾ ಅವರು ಪಾಳು ಬಾವಿಗೆ ಬಿದ್ದಿರುವ ಅಥವಾ ಅವರನ್ನು ಇನ್ಯಾರೋ ದೂಡಿಹಾಕಿರುವ ಕಾರಣದಿಂದ ಆಕೆಯು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದ್ದು, ರಕ್ಷಿತಾರ ಮರಣದ ಬಗ್ಗೆ ಅವಳ ಗಂಡ ಸಂಜಯ ಆಚಾರಿಯ ಮೇಲೆ ಸಂಶಯವಿರುವುದಾಗಿ ಶಕುಂತಳಾ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾದ ಟಿಪ್ಪರ್
Posted On: 09 Oct 2022, 02:34 PM
ಪಡುಬಿದ್ರಿ : ಇಲ್ಲಿನ ಬೀಡಿನ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಮುದ್ರ ತಡೆಗೋಡೆ ಗೆ ಬಳಸುವ ಕಲ್ಲುಗಳನ್ನು ಹೇರಿಕೊಂಡು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ. ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳು ಚಲಿಸದೆ ಇದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಅವಘಡ ಸಂಭವಿಸುವುದು ತಪ್ಪಿದೆ. ಅವಘಡದಲ್ಲಿ ಟಿಪ್ಪರ್ ಚಾಲಕ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾನೆ. ಸ್ಥಳೀಯರು ಚಾಲಕನನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
