Updated News From Kaup
ಆಕ್ಷೇಪಾರ್ಹ ಪೋಸ್ಟ್ : ಸಾಮಾಜಿಕ ಜಾಲತಾಣಗಳ ಬಗ್ಗೆ ನಿಗಾ ; ಐದು ಪ್ರಕರಣ ದಾಖಲು

Posted On: 31-07-2022 03:52PM
ಮಂಗಳೂರು : ಬೆಳ್ಳಾರೆಯ ಪ್ರವೀಣ್ ಮತ್ತು ಸುರತ್ಕಲ್ ಫಾಝಿಲ್ ಹತ್ಯೆಗೆ ಪ್ರತೀಕಾರವೆನಿಸುವ ಆಕ್ಷೇಪಾರ್ಹ ಪೋಸ್ಟ್ಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ್ದ ಬಗ್ಗೆ ಐದು ಪ್ರಕರಣ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್, ಇನ್ಟ್ಸಾ ಗ್ರಾಮ್, ಟೆಲಿಗ್ರಾಮ್, ಮೆಸೆಂಜರ್ ಇತ್ಯಾದಿಗಳ ಮೇಲೆ ನಿಗಾ ಇರಿಸಲಾಗಿದೆ.
ಇನ್ನು ಮಂಗಳೂರಿನಲ್ಲಿ ನಡೆದಿರುವ ಒಂದು ಕೊಲೆಗೆ ಪ್ರತಿಕಾರವಾಗಿ 10 ಕೊಲೆ, ಉಳಿದಂತೆ ನಿರ್ದಿಷ್ಟ ಜಾತಿ ಮತ್ತು ಸಮುದಾಯ ಗುರಿಯಾಗಿರಿಸಿಕೊಂಡು ಹತ್ಯೆಗೆ ಕರೆ, ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬುವುದಾಗಿ ರಾಜ್ಯ ಗುಪ್ತಚರ ದಳ ಮಾಹಿತಿ ಎಂಬುವುದಾಗಿ ಸುಳ್ಳು ಸಂದೇಶಗಳ ಬಗ್ಗೆ ದೂರು ದಾಖಲಾಗಿದೆ.
ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆ ; ಅಧ್ಯಕ್ಷರಾಗಿ ನಡಿಮನೆ ದೇವರಾಜ ರಾವ್ ಪುನರಾಯ್ಕೆ
 (1) (1).jpg)
Posted On: 31-07-2022 03:31PM
ಕಾಪು : ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ನಡಿಮನೆ ದೇವರಾಜ ರಾವ್ ಅವರು ಪುನರಾಯ್ಕೆಗೊಂಡಿದ್ದು ದೇಗುಲದ ಆಡಳಿತಾಧಿಕಾರಿ ಮಮತಾ ವೈ. ಶೆಟ್ಟಿ ಅವರು ಜುಲೈ 29 ರಂದು ಅಧಿಕಾರ ಹಸ್ತಾಂತರಿಸಿದರು.
ದೇಗುಲದ ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಮತ್ತು ಅರ್ಚಕ ವಿಶ್ವನಾಥ ಉಡುಪ ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿ, ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂಜೀವ ಶೆಟ್ಟಿ ಪಣಿಯೂರು, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಬಾಲಕೃಷ್ಣ ಪಣಿಯೂರು, ಗ್ರಾಮದ ಪ್ರಮುಖರಾದ ಸತೀಶ್ ಕುಂಡಂತಾಯ, ಪ್ರಕಾಶ್ ರಾವ್ ಪಠೇಲ್, ಶ್ರೀಧರ ಮಂಜಿತ್ತಾಯ, ಸುದರ್ಶನ್ ವೈ.ಎಸ್., ಮನೋಹರ್ ರಾವ್ ಪಣಿಯೂರು, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ದಿನೇಶ್ ಕುಂಜೂರು, ರಾಕೇಶ್ ಕುಂಜೂರು, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ದೇವಸ್ಥಾನದ ಪ್ರಬಂಧಕ ರಾಘವೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶಿರ್ವ : ಹಲವರ ತ್ಯಾಗ, ಬಲಿದಾನಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಮೂಲ್ಯ ಕೊಡುಗೆ - ಮುದ್ದು ಮೂಡುಬೆಳ್ಳೆ

Posted On: 31-07-2022 03:08PM
ಶಿರ್ವ: 11ನೇ ವಯಸ್ಸಿಗೆ ಮುಂಬಯಿಗೆ ತೆರಳಿ, ಆರ್ಥಿಕ ಸಂಕಷ್ಟಗಳನ್ನು ಎದುರಿಸಿ, ರಾತ್ರಿ ಶಾಲೆಯಲ್ಲಿ ಕಲಿತು, ಮುಂಬಯಿ ಶಿವಾಜಿ ಪಾರ್ಕಿನಲ್ಲಿ ಮಹಾತ್ಮಾ ಗಾಂಧೀಜಿಯವರ ಭಾಷಣವನ್ನು ಆಲಿಸಿ ಪ್ರಭಾವಿತಗೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರು, ಹಲವಾರು ಚಳುವಳಿಗಳಲ್ಲಿ ಪಾಲ್ಗೊಂಡವರು, ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಭೂಗತರಾಗಿ ಚಳವಳಿಗಳನ್ನು ಮುಂದುವರೆಸಿದವರು, ಕೃಷ್ಣಮೆನನ್ ರವರ ಆಪ್ತರಾಗಿ ಸಕ್ರಿಯರಾಗಿದ್ದವರು ಎಸ್ಕೆ. ಸುವರ್ಣರವರು. ಇಂಥ ಹಲವರ ತ್ಯಾಗ, ಬಲಿದಾನಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಮೂಲ್ಯ ಕೊಡುಗೆಗಳಾಗಿದ್ದು, ಶಾಶ್ವತ ಮೌಲ್ಯ ಹೊಂದಿರುವಂತದ್ದಾಗಿವೆ ಎಂದು ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿರಿಯ ಉದ್ಘೋಷಕರು, ಕನ್ನಡ, ತುಳು ಸಾಹಿತಿ ಆಗಿರುವ ಮುದ್ದು ಮೂಡುಬೆಳ್ಳೆ ನುಡಿದರು. ಅವರು ಪಡುಬೆಳ್ಳೆ ನಾರಾಯಣಗುರು ಪ್ರೌಢಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ವತಿಯಿಂದ ಜರಗಿದ ಸ್ವಾತಂತ್ರ್ಯ ಹೋರಾಟಗಾರ, ಪಾರಂಪರಿಕ ವೈದ್ಯ ಪಂಡಿತ್ ಎಸ್.ಕೆ. ಸುವರ್ಣ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತಾಂಜಲಿ ಸರಣಿಯ ಅಂಗವಾಗಿ ಜರಗಿದ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ವಹಿಸಿದ್ದರು.
ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ, ಪಂಡಿತ್ ಎಸ್.ಕೆ. ಸುವರ್ಣ ಅವರ ಪುತ್ರ ಬೆಳ್ಳೆ ಸಿಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ, ಡಾ. ಅಭಿನವ್ ಎಸ್. ಸುವರ್ಣ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜಿನರಾಜ್ ಸಾಲ್ಯಾನ್, ತಾಪಂ ಮಾಜಿ ಸದಸ್ಯೆ ಗೀತಾ ವಾಗ್ಳೆ, ಜಿಪಂ ಮಾಜಿ ಸದಸ್ಯೆ ಐಡಾ ಗಿಬ್ಬ ಡಿಸೋಜ, ಗ್ರಾಪಂ ಮಾಜಿ ಸದಸ್ಯ ಗಿಬ್ಬ ಡಿಸೋಜ, ಡಿಎಸ್ಎಸ್ ಹಿರಿಯ ಕಾರ್ಯಕರ್ತ ಎಂ. ರಮೇಶ್ ಬೆಳ್ಳೆ, ಲಿಯೋ ಅರಾಹ್ನಾ ಬೆಳ್ಳೆ ಉಪಸ್ಥಿತರಿದ್ದರು.
ಶ್ರೀ ನಾರಾಯಣ ಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಎಸ್. ಸ್ವಾಗತಿಸಿ, ಪ್ರಸ್ತಾವಿಸಿದರು. ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು.
ಕಾರ್ಕಳ : ಇನ್ನಾ ಬಳಿ ಸುರತ್ಕಲ್ ಫಾಜಿಲ್ ಕೊಲೆಗೆ ಬಳಸಿದ ಕಾರು ಪತ್ತೆ
.jpg)
Posted On: 31-07-2022 02:59PM
ಕಾರ್ಕಳ : ತಾಲೂಕಿನ ಇನ್ನಾ ಕಡಕುಂಜ ಹಾಡಿ ಬಳಿ ಸುರತ್ಕಲ್ ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕಾರು ಎನ್ನಲಾದ ಇಯೊನ್ ಕಾರು ಪತ್ತೆಯಾಗಿದೆ.
ಇದು ಪಡುಬಿದ್ರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸೈ ಪುರುಪೋತ್ತಮ ಪರಿಶೀಲನೆ ನಡೆಸಿದ್ದಾರೆ.
ಬೆರಳಚ್ಚು ತಜ್ಞರು ಆಗಮಿಸುವ ಹಿನ್ನಲೆಯಲ್ಲಿ ಕಾರನ್ನು ಯಾರೂ ಸ್ಪರ್ಶಿಸಬಾರದೆಂದು ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಸ್ಥಳೀಯರ ಪ್ರಕಾರ ನಾಲ್ಕು ದಿನಗಳಿಂದ ಈ ಕಾರು ಈ ಭಾಗದಲ್ಲಿ ಅನಾಥ ಸ್ಥಿತಿಯಲ್ಲಿದ್ದು, ಅಷ್ಟಾಗಿ ಗಮನಿಸಿರಲಿಲ್ಲ. ಇವತ್ತು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕಾಪು ಶಾಸಕರಿಂದ 2 ಲಕ್ಷದ ಪರಿಹಾರ ಚೆಕ್ ಹಸ್ತಾಂತರ

Posted On: 30-07-2022 08:10PM
ಕಾಪು : ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಉಳಿಯಾರಗೋಳಿ ರಘು ಪೂಜಾರಿ ಮನೆಗೆ ಭೇಟಿ ನೀಡಿ 2 ಲಕ್ಷ ಮೊತ್ತದ ಪರಿಹಾರ ಚೆಕ್ ಹಸ್ತಾಂತರಿಸಿದರು.
ಕಳೆದ ದೀಪಾವಳಿ ಸಂದರ್ಭದಲ್ಲಿ ಕಾಪು ತಾಲೂಕು ಉಳಿಯಾರಗೋಳಿ ಗ್ರಾಮದ ರೋಹಿತ್ ರವರು ಮನೆಯ ಅಂಗಳದಲ್ಲಿಯೇ ಹಾವು ಕಡಿತದಿಂದಾಗಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಮನೆಗೆ ತೆರಳಿ ಮಾನ್ಯ ಶಾಸಕರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು.
ಸರಕಾರದಿಂದ ಸುಮಾರು 2 ಲಕ್ಷ ರೂ.ಗಳನ್ನು ಮಂಜೂರಾತಿ ಮಾಡಿಸಿ ಇದರ ಮಂಜೂರಾತಿ ಪತ್ರವನ್ನು ಮೃತ ರೋಹಿತ್ ತಂದೆ ರಾಘು ಕೆ ಪೂಜಾರಿ ಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾಪು ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಕಂದಾಯ ನೀರಿಕ್ಷಕರು ಸುಧೀರ್ ಕುಮಾರ್ ಶೆಟ್ಟಿ, ಹೊಸಮಾರಿಗುಡಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ರಮೇಶ್ ಹೆಗ್ಡೆ, ಪುರಸಭೆ ಸದಸ್ಯರಾದ ಸುರೇಶ್ ದೇವಾಡಿಗ, ಲತಾ ದೇವಾಡಿಗ, ಪ್ರದೀಪ್ ಹಾಗೂ ಸ್ಥಳೀಯರಾದ ರಮೇಶ್ ಶೆಟ್ಟಿ, ಉಪಸ್ಥಿತರಿದ್ದರು.
ಕಾಮನ್ ವೆಲ್ತ್ ಕ್ರೀಡಾಕೂಟ : ಕಂಚಿನ ಪದಕ ಗೆದ್ದ ಗುರುರಾಜ ಪೂಜಾರಿ

Posted On: 30-07-2022 07:03PM
ಕುಂದಾಪುರ : ಇಲ್ಲಿನ ಗುರುರಾಜ ಪೂಜಾರಿ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ.
ಬರ್ಮಿಂಗ್ ಹ್ಯಾಂನಲ್ಲಿ ಶನಿವಾರ ನಡೆದ ಪುರುಷರ 61 ಕೆಜಿ ವಿಭಾಗದ ಫೈನಲ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಗುರುರಾಜ ಪೂಜಾರಿ ಒಟ್ಟಾರೆ 269 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗಳಿಸಿದರು.
ಕಾಪು : ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಕಾರ್ಯಗಾರ, ಇ ಶ್ರಮ ಕಾರ್ಡ್ ವಿತರಣೆ
.jpg)
Posted On: 30-07-2022 06:55PM
ಕಾಪು : ಇಲ್ಲಿನ ಪುರಸಭಾ ಮತ್ತು ಕಾರ್ಮಿಕ ಇಲಾಖೆಯಿಂದ ಕಾಪುನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಶಿಬಿರವು ಕಾಪು ಪುರಸಭೆ ಮತ್ತು ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಶನಿವಾರ ಕಾಪು ಜೆಸಿ ಭವನದಲ್ಲಿ ಜರಗಿತು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಇ ಶ್ರಮ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಪುರಸಭಾ ಅಧಿಕಾರಿ ವೆಂಕಟೇಶ ನಾವಡರವರು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಹಲವಾರು ಯೋಜನೆಗಳನ್ನು ಸರಕಾರ ತಂದಿದ್ದು, ಸಾರ್ವಜನಿಕರು ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು. ಇದೇ ವೇಳೆ ಕಾಪುವಿನ ರಿಕ್ಷಾ ಚಾಲಕರು, ಬೀದಿಬದಿ ವ್ಯಾಪಾರಸ್ಥರು, ಹಾಗೂ ವಲಸಿ ಕಾರ್ಮಿಕರಿಗೆ ಮಾಹಿತಿ ನೀಡಲಾಯಿತು.
ವೇದಿಕೆಯಲ್ಲಿ ಕಾಪು ನಗರ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಉದಯಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿ, ರಿಕ್ಷಾ ಚಾಲಕರು, ಬೀದಿಬದಿ ವ್ಯಾಪಾರಸ್ಥರು, ವಲಸೆ ಕಾರ್ಮಿಕರು ಮತ್ತು ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಬಲಾಯಿಪಾದೆ ಬಳಿ ಸ್ಕೂಟಿಗೆ ಲಾರಿ ಡಿಕ್ಕಿ ; ಯುವಕನಿಗೆ ಗಾಯ

Posted On: 30-07-2022 06:34PM
ಉದ್ಯಾವರ : ಕಾಪು ಠಾಣಾ ವ್ಯಾಪ್ತಿಯ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸ್ಕೂಟಿಗೆ ಲಾರಿ ಡಿಕ್ಕಿಯಾಗಿ ಯುವಕನೋರ್ವನಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ನಡೆದಿದೆ.
ಗಾಯಗೊಂಡ ಯುವಕನನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲಾಯಿಪಾದೆ ಜಂಕ್ಷನ್ ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ನಿರಂತರ ಅಪಘಾತ ಸಂಭವಿಸುತ್ತಿದ್ದು, ಆದಷ್ಟು ಶೀಘ್ರವಾಗಿ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ಉಡುಪಿಯಲ್ಲಿ ಪೋಲಿಸ್ ಬಂದೋಬಸ್ತ್ ; ವಾಹನಗಳ ತಪಾಸಣೆ

Posted On: 29-07-2022 10:42PM
ಕಾಪು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಮತ್ತು ಸುರತ್ಕಲ್ ಫಾಝಿಲ್ ಹತ್ಯೆಯ ಬಳಿಕ ಮುಂಜಾಗ್ರತಾ ಕ್ರಮವಾಗಿ ಅಹಿತಕರ ಘಟನೆ ನಡೆಯದಂತೆ ಉಡುಪಿಯಲ್ಲೂ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಉಡುಪಿಯ ರಾಷ್ಟ್ರೀಯ ಹೆದ್ದಾರಿ ೬೬ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು ೧೧ ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಮಾಡಿರುವ ಜಿಲ್ಲಾ ಪೋಲಿಸರು ಹೊರ ರಾಜ್ಯ, ಹೊರ ಜಿಲ್ಲೆಯ ನೋಂದಣಿ ಹೊಂದಿರುವ ಸಂಶಯಾಸ್ಪದ ವಾಹನಗಳನ್ನು ತಪಾಸಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಉದ್ಯಾವರದ ಬಲಾಯಿಪಾದೆ, ಅಂಬಾಗಿಲು, ನೇಜಾರು ಭಾಗಗಳಲ್ಲಿ ಪೋಲಿಸರಿಂದ ಬಿಗಿ ತಪಾಸಣೆ ಮಾಡಲಾಗಿದೆ.
ಕಾಪು : ಪತ್ರಿಕಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಪತ್ರಿಕಾ ಮಾಹಿತಿ ಕಾರ್ಯಾಗಾರ
 (1) (1).jpg)
Posted On: 29-07-2022 09:17PM
ಕಾಪು : ಪ್ರಸ್ತುತ ವಿದ್ಯಮಾನದಲ್ಲಿ ಪತ್ರಿಕೆಗಳ ಮಹತ್ವ ಯುವ ಸಮುದಾಯ ಅರಿಯಬೇಕಾಗಿದೆ. ಪತ್ರಿಕೆಗಳ ಮೂಲಕ ಒಂದಷ್ಟು ಜ್ಞಾನದ ಹೊನಲನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕಾಗಿದೆ. ಹಿಂದಿನ ಹಲವಾರು ಪತ್ರಿಕೆಗಳು ಪರಿಶ್ರಮದ ಮೂಲಕ ಜನರಿಗೆ ಸುದ್ದಿಯನ್ನು ನೀಡುತ್ತಿದ್ದವು. ಇಂದು ರಾಜಕೀಯ ಮೇಲಾಟದಲ್ಲಿ ಪತ್ರಿಕಾ ವ್ಯವಸ್ಥೆ ಕುಸಿಯುತ್ತಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇದರ ಪ್ರಾಂಶುಪಾಲರಾದ ಡಾ|ಅನಿಲ್ ಕುಮಾರ್ ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ನಡೆದ ಪತ್ರಿಕಾ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಎಂಜಿಎಂ ಕಾಲೇಜು ಉಡುಪಿ ಇದರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಮಂಜುನಾಥ್ ಕಾಮತ್ ಮಾತನಾಡಿ ಯುವ ಜನಾಂಗ ನಮ್ಮಲ್ಲಿರುವ ಅಂತರ್ಗತ ಶಕ್ತಿಯನ್ನು ಹೊರಗೆಳೆಯುವ ಪ್ರಯತ್ನ ಮಾಡಬೇಕಾಗಿದೆ. ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಇಂದು ವಿಪುಲ ಅವಕಾಶಗಳಿವೆ. ಸಾಮಾಜಿಕ ವ್ಯವಸ್ಥೆಗಳನ್ನು ಬದಲಾಯಿಸುವ ಶಕ್ತಿ ಸಮೂಹ ಮಾಧ್ಯಮಗಳಿಗಿವೆ. ಪತ್ರಿಕೋದ್ಯಮದ ಅಧ್ಯಯನ ಮಾಡಿದವರಿಗೆ ಬಹಳಷ್ಟು ಅವಕಾಶಗಳಿವೆ ಎಂದರು. ಈ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮಾತನಾಡಿ ಯುವಕರು ಸುಳ್ಳು ಸುದ್ದಿಗಳನ್ನು ನಂಬದೇ ತಮ್ಮ ಜೀವನವನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿ ದೆಸೆಯಲ್ಲಿ ತಮ್ಮ ಬದುಕನ್ನು ರೂಪಿಸುವ ಕಡೆಗೆ ಗಮನ ನೀಡುವ ಮೂಲಕ ಭವಿಷ್ಯದ ಯೋಚನೆ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳ್ ವಹಿಸಿದ್ದರು. ಕಾಪು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕೋಶಾಧಿಕಾರಿ ಅಬ್ದುಲ್ ಹಮೀದ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯರು ಉಪಸ್ಥಿತರಿದ್ದರು. ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪುಂಡಲೀಕ ಮರಾಠೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು. ಸಂತೋಷ್ ನಾಯಕ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಉಪನ್ಯಾಸಕಿ ಡಾ| ಸುಚಿತ್ರ ವಂದಿಸಿದರು.