Updated News From Kaup
ಪಕ್ಷದ ಕಾರ್ಯಕರ್ತರಿಗೆ ರಕ್ಷಣೆಕೊಡದ ಬಿಜೆಪಿ ಯಾವ ಪುರುಷಾರ್ಥಕ್ಕೆ ಜನೋತ್ಸವ ಮಾಡುತ್ತೆ ? - ಕೃಷ್ಣಮೂರ್ತಿ ಆಚಾರ್ಯ

Posted On: 28-07-2022 05:18PM
ಉಡುಪಿ: ಬೆಳ್ಳಾರೆಯ ಪ್ರವೀಣ್ ನೆಟ್ಟಾರೆ ಹತ್ಯೆ ಪ್ರಕರಣ ಖಂಡನೀಯ. ಕರ್ನಾಟಕದ ಜನತೆಗೆ ಹಾಗೂ ಸ್ವತಃ ತಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆನೇ ರಕ್ಷಣೆ ಕೊಡುವ ಸಾಮರ್ಥ್ಯ ಇಲ್ಲದ ಬಿಜೆಪಿ ಸರ್ಕಾರ ಯಾವ ಮುಖ ಇಟ್ಕೊಂಡು ಜನೋತ್ಸವ ಮಾಡುತ್ತೆ..? ಈ ಬಿಜೆಪಿ ಸರ್ಕಾರ ಬಂದ ನಂತರ ದಿನದಿಂದ ದಿನ ಹಿಂದೂ ಮುಸ್ಲಿಂ ಸಹೋದರರುಗಳ ಹತ್ಯೆ ಮತ್ತಷ್ಟು ನಿರಂತರವಾಗಿ ಜಾಸ್ತಿ ಆಗ್ತಾನೆ ಇದೆ. ಹತ್ಯೆಯಾದ ಕುಟುಂಬಗಳಿಗೆ ಇನ್ನೂ ಸರಿಯಾಗಿ ನ್ಯಾಯ ಸಿಕ್ಕಿಲ್ಲ ಹೀಗಿರುವಾಗ ಬಿಜೆಪಿ ಯಾವ ಮುಖದಲ್ಲಿ ಜನೋತ್ಸವ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿಯ ಆಚಾರ್ಯ ಪ್ರಶ್ನಿಸಿದ್ದಾರೆ. ಒಂದು ಕಡೆ ಬಿಜೆಪಿ ಸರ್ಕಾರ ಕಾಂಟ್ರ್ಯಾಕ್ಟರುಗಳಿಂದ 40% ಕಮಿಷನ್ ಭ್ರಷ್ಟಾಚಾರ ಮಾಡುತ್ತಿದೆ. ಮತ್ತೊಂದು ಕಡೆ ಜನರಿಗೆ ನಿರಂತರವಾಗಿ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಇಷ್ಟೆಲ್ಲ ಜನರಿಗೆ ತೊಂದರೆ ಕೊಟ್ಟು ಯಾವ ಮುಖ ಇಟ್ಟುಕೊಂಡು ಜನೋತ್ಸವ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಬಿಜೆಪಿ ಸರಕಾರ ವಿಫಲವಾಗಿದೆ, ಸರ್ಕಾರ ಬರಿ ಕಠಿಣ ಕ್ರಮ ಕಠಿಣ ಕ್ರಮ ಎನ್ನುತ್ತಾ ಬರಿ ಮಾತಿಗೆ ಮಾತ್ರ ಸೀಮಿತವಾಗಿದೆ ಹೊರತು ದುಷ್ಕರ್ಮಿಗಳ ದಾಳಿ ಮಾತ್ರ ಕಡಿಮೆ ಆಗಿಲ್ಲ. ಮುಂದುವರಿತಾನೆ ಇದೆ ಅಮಾಯಕರು ಮತ್ತಷ್ಟು ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಯಾವ ಮುಖ ಇಟ್ಕೊಂಡು ಜನೋತ್ಸವ ಮಾಡಲು ಹೊರಟಿದೆ. ಮೊದಲು ಅಮಾಯಕರ ಜನರ ರಕ್ಷಣೆಗೆ ಮುಂದಾಗಲಿ ದಿನಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆ ಕಡಿಮೆ ಮಾಡಲಿ ಜಿ ಎಸ್ ಟಿ ತೆರಿಗೆ ತಕ್ಷಣ ನಿಲ್ಲಿಸಿ.
ಅದೇ ರೀತಿ ಪ್ರವೀಣ್ ನೆಟ್ಟಾರೆ ಕೊಲೆ ಖಂಡನೀಯ ಪ್ರಕರಣದ ಆರೋಪಿಗಳನ್ನು ಯಾವುದೇ ಜಾತಿ ಧರ್ಮ ಲೆಕ್ಕಿಸದೆ ತಕ್ಷಣ ಬಂಧಿಸಿ,ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕಾಗಿದೆ ಅದೇ ರೀತಿ ಇತ್ತೀಚೆಗೆ ಬೆಳ್ಳಾರೆ ಪರಿಸರದಲ್ಲಿ ಮಸೂದ್ ಕೊಲೆ ಸಂಭವಿಸಿದೆ ಇದು ಅತ್ಯಂತ ಖಂಡನೀಯ. ಚುನಾವಣೆ ಸಂದರ್ಭ ಹಿಂದು ಮುಸ್ಲಿಮರ ಹತ್ಯೆಯನ್ನು ಮುಂದೆ ಇಟ್ಟು ಕೊಂಡು ರಾಜಕೀಯ ಬೇಳೆ ಬೇಯಿಸುವುದು ಬಿಜೆಪಿಗೆ ಚಾಲಿಯಾಗಿ ಹೋಗಿದೆ. ಪ್ರಕರಣದ ಆರೋಪಿಗಳು ಯಾರೇ ಆದರೂ ಪಕ್ಷಾತೀತವಾಗಿ ಯಾವುದೇ ಜಾತಿ ಧರ್ಮ ನೋಡದೆ ಸೂಕ್ತ ತನಿಖೆ ನಡೆಸಿ ಅವರಿಗೆ ಶಿಕ್ಷೆ ಆಗಬೇಕು ಇಂತಹ ಘಟನೆಗಳು ಪದೇ ಪದೇ ಮುಂದೆ ಯಾವತ್ತೂ ಆಗದಂತೆ ಕ್ರಮ ವಹಿಸಬೇಕೆಂದು ಮಾಧ್ಯಮದ ಮೂಲಕ ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಉಡುಪಿ ವಿಧಾನ ಸಭಾ ಕ್ಷೇತ್ರ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.
ಪ್ರವೀಣ್ ಪೂಜಾರಿ ನೆಟ್ಟಾರು ಹತ್ಯೆ: ಯುವವಾಹಿನಿ ಕೇಂದ್ರ ಸಮಿತಿ ಖಂಡನೆ

Posted On: 27-07-2022 11:03PM
ಮಂಗಳೂರು : ಯುವವಾಹಿನಿಯ ಸದಸ್ಯರಾಗಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜದ ಅಭ್ಯುದಯಕ್ಕೆ ದುಡಿಯುತ್ತಿದ್ದ ಪ್ರವೀಣ್ ಪೂಜಾರಿ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ವಿಷಾದನಿಯ ವಿಷಯ.
ಯುವವಾಹಿನಿಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಸಮಾಜಕ್ಕಾಗಿ ಚಿಂತಿಸುತ್ತಿದ್ದ ಒಬ್ಬ ಪ್ರಾಮಾಣಿಕ ಸದಸ್ಯನನ್ನು ನಾವು ಕಳೆದು ಕೊಂಡಿದ್ದೇವೆ. ಪೊಲೀಸ್ ಇಲಾಖೆ ಹಂತಕರನ್ನು ಕೂಡಲೇ ಬಂಧಿಸಿ ಕಾನೂನುಕ್ರಮ ಜರಗಿಸುವಂತೆ ಸಂಘಟನೆಯು ಪೊಲೀಸ್ ಇಲಾಖೆಯನ್ನು ಈ ಹೇಳಿಕೆಯ ಮೂಲಕ ಆಗ್ರಹಿಸುತ್ತದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಪು : ನಾಲ್ಕು ತಿಂಗಳ ಗ್ರಾ.ಪಂ. ಭತ್ಯೆಯನ್ನು ಸಂಕಷ್ಟದಲ್ಲಿರುವ ಗ್ರಾಮಸ್ಥನಿಗೆ ನೀಡಿ ಮಾನವೀಯತೆ ಮೆರೆದ ಫಹಿಮ್
.jpg)
Posted On: 27-07-2022 10:56PM
ಬೆಳಪು : ಇಲ್ಲಿನ ನಿವಾಸಿಯಾದ ಗುರುರಾಜ್ ಆಚಾರ್ಯ ಹಲವಾರು ವರ್ಷಗಳಿಂದ ಇಲ್ಲಿನ ಜನತಾ ಕಾಲೋನಿ ಬಳಿಯ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದು ತನ್ನ ದಿನನಿತ್ಯ ಜೀವನ ನಡೆಸಲು ದನವನ್ನು ಸಾಕಿ ಹಾಲು ಮಾರಾಟ ಮಾಡಿ ಅದರಿಂದ ಬರುವ ಆದಾಯದಿಂದ ಕುಟುಂಬ ನಿರ್ವಹಿಸುತ್ತಿದ್ದಾರೆ.
ಸುಮಾರು 65 ವಯಸ್ಸಿನ ಗುರುರಾಜ್ ಆಚಾರ್ಯರಿಗೆ ಸಹಾಯಕ್ಕಾಗಿ ಮಕ್ಕಳಿಲ್ಲ. ತನ್ನ ಆದಾಯದ ಮೂಲ ದನಗಳ ಗೊಬ್ಬರ ಹಾಕುವ ಗುಂಡಿ ಸರಿ ಇಲ್ಲದ ಕಾರಣ ಪಂಚಾಯತಿಗೆ ಮನವಿ ಮಾಡಲಾಗಿತ್ತಾದರೂ ಸರಿಯಾದ ಮನೆಯ ದಾಖಲೆಗಳು ಇರದ ಕಾರಣ ನಿರಾಕರಿಸಲಾಗಿತ್ತು. ಇವರ ಬಡತನದ ಜೀವನದ ಸ್ಥಿತಿಯನ್ನು ಅರಿತ ಎಸ್ಡಿಪಿಐ ಬೆಂಬಲಿತ ಬೆಳಪು ಗ್ರಾ.ಪಂ ಸದಸ್ಯ ಸಮಾಜ ಸೇವಕ ಫಹಿಮ್ ಬೆಳಪು ಪಂಚಾಯಿತಿಯಿಂದ ಬರುವ ತನ್ನ ನಾಲ್ಕು ತಿಂಗಳ ಭತ್ಯೆಯನ್ನು ತನ್ನ ವಾರ್ಡಿನ ನಿವಾಸಿ ಗುರುರಾಜ್ ಆಚಾರ್ಯ ಅವರಿಗೆ ಗೊಬ್ಬರ ಗುಂಡಿ ದುರಸ್ತಿ ಮಾಡಲು ನೀಡಿದರು. ಇದೇ ಸಂದರ್ಭದಲ್ಲಿ ಎಸ್ಡಿಪಿಐ ಬೆಳಪು ಗ್ರಾಮ ಸಮಿತಿ ವತಿಯಿಂದ, ದಾನಿಗಳ ನೆರವಿನಿಂದ ಗೊಬ್ಬರ ಗುಂಡಿ ದುರಸ್ತಿ ಮಾಡಲು ಅಗತ್ಯ ಕಾಮಗಾರಿಯ ವಸ್ತುಗಳನ್ನು ನೀಡಲು ತೀರ್ಮಾನಿಸಲಾಯಿತು.
ಜನಸೇವಕ ಫಹಿಮ್ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶವನ್ನು ಮಾದರಿಯಾಗಿರಿಸಿಕೊಂಡ ಫಹಿಮ್ ಬೆಳಪು ಇತ್ತೀಚಿಗೆ ಬೆಂಕಿ ಅನಾಹುತದಲ್ಲಿ ತಾನೇ ರಕ್ಷಣಾ ಕಾರ್ಯಾಚರಣೆಗೆ ತೆರಳಿ ಅಲ್ಲಿ ನಡೆದ ಒಂದು ಅನಾಹುತದಲ್ಲಿ ತನ್ನ ಒಂದು ಕಣ್ಣನ್ನು ಕಳೆದುಕೊಂಡು, ಇನ್ನು ಸರಿಯಾಗಿ ಚೇತರಿಸಿಕೊಳ್ಳದೆ ಇರುವ ಈ ಸಂದರ್ಭದಲ್ಲಿ ತನ್ನ ವಾರ್ಡಿನ ಜನರ ಕಷ್ಟಕ್ಕೆ ನೆರವಾಗುವ ಅವರ ಗುಣಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷರಾದ ಮೊಯಿನುದ್ದೀನ್ ಬೆಳಪು, ಗ್ರಾಮ ಸಮಿತಿ ಸದಸ್ಯರಾದ ಸಿದ್ದಿಕ್ ಬೆಳಪು , ಜಮೀರ್ ಬೆಳಪು , ಸಲೀಂ ಅಶ್ಪಾಕ್ ಉಪಸ್ಥಿತರಿದ್ದರು.
ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಹೋಬಳಿ ಮಟ್ಟದ ಖೋಖೋ ಪಂದ್ಯಾಟ

Posted On: 27-07-2022 05:23PM
ಉಚ್ಚಿಲ : ಇಲ್ಲಿನ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಹೋಬಳಿ ಮಟ್ಟದ ಖೋಖೋ ಪಂದ್ಯಾಟ ನಡೆಯಿತು.
ಹೋಬಳಿ ಮಟ್ಟದ ನಾಲ್ಕು ಶಾಲೆಗಳ ಎಂಟು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿತು. ಪಂದ್ಯಾಟವನ್ನು ಉಡುಪಿ ಟೌನ್ ಬ್ಯಾಂಕ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಖೋಖೋ ಪಂದ್ಯಾಟವು ಗ್ರಾಮೀಣ ಕ್ರೀಡೆಯಾಗಿದ್ದು, ವಿದ್ಯಾರ್ಥಿಗಳಿಂದ ಇಂತಹ ಹೆಚ್ಚಿನ ಕ್ರೀಡೆಗಳನ್ನು ಆಡಿಸುವ ಮೂಲಕ ನಮ್ಮ ನಾಡಿನ ಆಟಗಳನ್ನು ಉಳಿಸಬಹುದು ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರೌಢಶಾಲಾ ಸಂಚಾಲಕ ಗಂಗಾಧರ ಸುವರ್ಣ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಗೆಲ್ಲುವ ಪ್ರಯತ್ನ ಮಾಡಿ ಎಂದರು.
ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಸಂಚಾಲಕ ಮೋಹನ್‌ದಾಸ್ ಶೆಟ್ಟಿ, ಬಡಾ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ, ಗ್ರಾಮ ಪಂಚಾಯತ್ ಸದಸ್ಯೆ ಕಲಾವತಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಬಿಎಸ್ ಆಚಾರ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸುರೇಶ್ ಕುಲಾಲ್ ನಿರೂಪಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.
ಅದಮಾರು : ಕಾರ್ಗಿಲ್ ವಿಜಯ ದಿವಸ ಆಚರಣೆ ಮತ್ತು ಯೋಧ ನಮನ ಕಾರ್ಯಕ್ರಮ

Posted On: 27-07-2022 05:10PM
ಅದಮಾರು : ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಅದಮಾರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅದಮಾರಿನ ವೀರಯೋಧ ಬಾಲಕೃಷ್ಣ ಟಿ. ಭಂಡಾರಿ ಮಾತನಾಡಿ ಕಾರ್ಗಿಲ್ ಯುದ್ಧವು ದೇಶದ ವೀರತ್ವದ ಸಂಕೇತ. ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ವೈರಿ ಪಡೆಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಪ್ರದೇಶವನ್ನು ಮರಳಿ ಪಡೆಯುವಲ್ಲಿ ಭಾರತ ಯಶಸ್ವಿಯಾಗಿತ್ತು. ಇಂದಿನ ಯುವಜನರಲ್ಲೂ ಸೈನ್ಯಕ್ಕೆ ಸೇರುವ ತುಡಿತ ಜಾಗೃತಗೊಳ್ಳಬೇಕಾಗಿದೆ. ಇದೊಂದು ದೇಶ ಸೇವೆಗೆ ಇರುವಂತಹ ಅವಕಾಶ. ಯುವಶಕ್ತಿ ಅಗ್ನಿಪಥ ದ ಮೂಲಕ ಅಗ್ನಿವೀರಾಗಬೇಕೆಂದು ಆಶಿಸಿದರು.
ಯೋಧ ನಮನ ಮತ್ತು ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಎಂ. ರಾಮಕೃಷ್ಣ ಪೈ ಮಾತನಾಡಿ ಹಿಂದೆ ತಾವು NCC ಆಫೀಸರ್ ಆಗಿದ್ದಾಗ ಮಿಲಿಟರಿ ಶಿಸ್ತಿನ ಬಗ್ಗೆ ನೆನಪಿಸಿಕೊಂಡರು. ಸೈನ್ಯದಲ್ಲಿರುವ ಶಿಸ್ತು ಜೊತೆಗೆ ಅದರಲ್ಲಿರುವ ಅವಕಾಶಗಳನ್ನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ನಿವೃತ್ತ ಹಿಂದಿ ಉಪನ್ಯಾಸಕರಾದ ಏಕನಾಥ ಡೊಂಗ್ರೆ , ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಡಾ| ಜಯಶಂಕರ್ ಕಂಗಣ್ಣಾರು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕೀರ್ತಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ದೇವಿ ಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಆದಿತ್ಯ ವಂದಿಸಿದರು.
ಆಟಿ ಅಮಾವಾಸ್ಯೆ : ಆಟಿದ ಮರ್ದ್

Posted On: 27-07-2022 03:00PM
ಆಟಿ ತಿಂಗಳ(ಕರ್ಕಾಟಕ ಮಾಸ) ಅಮಾವಾಸ್ಯೆಯಂದು "ಆಟಿದ ಮರ್ದ್' (ಹಾಳೆ ಮರದ ಕೆತ್ತೆಯಿಂದ ತಯಾರಿಸಿದ ಕಷಾಯ ಕುಡಿಯುವ - ಮೆತ್ತೆ ಗಂಜಿ ಊಟಮಾಡುವ) ಕುಡಿಯುವ ಸಂಪ್ರದಾಯ ಇವತ್ತಿಗೂ ಚಾಲ್ತಿಯಲ್ಲಿದೆ. ಆದರೆ ಇತ್ತೀಚೆಗೆ ಉತ್ಸಾಹಿ ಸಂಘಟನೆಗಳು , ಆಚರಣೆ - ಸಂಸ್ಕೃತಿ ಪ್ರೀತಿಯ ಮಂದಿ 'ಕಷಾಯ' ತಯಾರಿಸಿ ಮನೆ,ಮನೆಗಳಿಗೆ ಹಂಚುವ , ಆಮೂಲಕ 'ಆಟಿಯ ಮದ್ದು' ಕುಡಿಯುವ ಸಂಪ್ರದಾಯವೊಂದನ್ನು ನೆನಪಿಸುತ್ತಾ , ಆಚರಿಸುವಂತೆ ಪ್ರೇರೇಪಿಸುವ ಕೆಲಸ ನಡೆಯುತ್ತಿದೆ ,ಇದು ಸಂತೋಷದ ಸಂಗತಿ. ಯಾವ ಮರದ ಕೆತ್ತೆ , ಯಾವ ಕ್ರಮದಲ್ಲಿ ಯಾವ ವೇಳೆಯಲ್ಲಿ ತೆಗೆಯಬೇಕು ಮತ್ತು ಕಷಾಯ ತಯಾರಿಯ ಕ್ರಮ ,ಕಷಾಯ ಕುಡಿಯುವವರಿಗೆ ತಿಳಿದರೆ ಈ ಸಂಪ್ರದಾಯ ಉಳಿಯಬಹುದು . ಮುಂದೊಂದು ದಿನ ಮೆಡಿಕಲ್ ಶಾಪ್ ಗಳಲ್ಲಿ' ಸಿದ್ಧ ಕಷಾಯ' ದೊರೆಯುವ ದಿನವೂ ಬಂದೀತು. ಆಗ ಮಾತ್ರ ಈ ಸಂದರ್ಭದ ಆಚರಣೆಯಲ್ಲಿ ಪಾವಿತ್ರ್ಯ ಇಲ್ಲವಾಗಬಹುದು ಅಲ್ಲವೇ ?ಗದ್ದೆಗಳಲ್ಲಿ ಬೆಳೆಯುತ್ತಿರುವ ಬೆಳೆಯರಕ್ಷಣೆಗೆ ಕಾಸರ್ಕದ ಮರದ ಗೆಲ್ಲುಗಳನ್ನು ಕಡಿದು ಹಾಕುವ ಕ್ರಮವೂ ಇತ್ತು ಎಂಬುದು ಮರೆಯಾಗುತ್ತಿರುವ ವಿಷಯ.ಬೇಸಾಯ ಜೀವನಾಧಾರವಾಗಿದ್ದರೆ ಮಾತ್ರ ನಮ್ಮ ಆರೋಗ್ಯದೊಂದಿಗೆ ನಮ್ಮ ಬೆಳೆಯ ರಕ್ಷಣೆಯ ಕಾಳಜಿತಾನೇ ?
ಬಲಿಯೇಂದ್ರೆ ಸಂದಿ : "ಆಟಿದ ಅಮಾಸೆಗ್ ಆಳ್ ಕಡಪುಡುದು ಪಿನ್ಲ . ಸೋಣ ಸಂಕ್ರಾಂದಿಗ್ ಅಪ್ಪೆನ್ ಕಡಪುಡ್ದು ಕೊರ್ಲ . ಬೊಂತೆಲ್ದ ಅಮಾಸೆಗ್ ಆಜಿ ದಿನತ ಬಲಿ , ಮೂಜಿ ದಿನತ ಪೊಲಿ , ದೀಪೊಲಿದ ಪರ್ಬೊಗು ಈ ಬತ್ತ್ ದ್ ನಿನ್ನ ರಾಜ್ಯ ಬುಲೆ ಸಲೆ , ಬದ್ ಕ್ ಬಾಗ್ಯೊಲೆನ್ ತೂದು ಪೋಲಂದೆರ್ ಗೆ ನಾಲ್ ಕಯಿತ ನಾರಾಯಿಣ ದೇವೆರ್ ಗೆ." ಇದು ಪೊಳಲಿ ಶೀನಪ್ಪ ಹೆಗ್ಗಡೆ ಅವರು ಸಂಪಾದಿಸಿರುವ ' ತುಳುವಾಲ ಬಲಿಯೇಂದ್ರೆ' ಸಂಧಿಯ ಒಂದು ಒಂದು ಸನ್ನಿವೇಶ. 'ಬಲಿಯೇಂದ್ರೆ' ದೀಪಾವಳಿ (ಪರ್ಬ , ಕೊಡಿ ಪರ್ಬ , ತುಡರ ಪರ್ಬ) ಯ ಸಂದರ್ಭಕ್ಕೆ ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ, ಒಂದುಕಾಲದ ಪ್ರಜಾವತ್ಸಲನಾದ ಜನಪ್ರಿಯ ಅರಸ . ಪ್ರತಿವರ್ಷ ಆಗಮಿಸಿ ತನ್ನ ರಾಜ್ಯದ " ಬುಲೆ ಸಲೆ ಬದ್ಕ್ ಬಾಗ್ಯೊಲೆನ್ " (ಬೆಳೆಯ ಸಮೃದ್ದಿ , ಬದುಕು - ಭಾಗ್ಯ) ನೋಡಿ ಹೋಗುವ ಅವಕಾಶವನ್ನು ನಾಲ್ಕು ಕೈಯ ನಾರಾಯಣ ದೇವರಿಂದ ವರವಾಗಿ ಪಡೆದಿರುತ್ತಾನೆ. ಸಂದಿ ಹೇಳುವಂತೆ ಬಲಿಯೇಂದ್ರೆ ನೇರವಾಗಿ 'ಬೊಂತೆಲ್'(ತುಲಾ ಮಾಸ) ತಿಂಗಳ ಅಮಾವಾಸ್ಯೆಯಂದು ಬರುವುದಲ್ಲ , ಬದಲಿಗೆ ಆಟಿ (ಕರ್ಕಾಟಕ ಮಾಸ) ಅಮಾವಾಸ್ಯೆಯಂದು ತನ್ನ ಆಳುಗಳನ್ನು ಕಳುಹಿಸಿ ತನ್ನ ರಾಜ್ಯದಲ್ಲಿ ಕೃಷಿ ಚಟುವಟಿಕೆ ಹೇಗೆ ಆರಂಭವಾಗಿದೆ ಎಂದು ತಿಳಿದುಕೊಳ್ಳುತ್ತಾನೆ (ಪಿನ್ಲ - ಪಿನ್ನೊನ್ಲ). ಆಟಿ ತಿಂಗಳ ಈ ಅಮಾವಾಸ್ಯೆಯಂದು ನಾವು 'ಆಟಿ ಮದ್ದು' ಕುಡಿಯುತ್ತೇವೆ , ಬೆಳೆ ರಕ್ಷಣೆಗೂ ಕ್ರಮಕೈಗೊಳ್ಳುತ್ತೇವೆ.
"ಆಟಿ ಆಡೊಂದು ಪೋಪುಂಡು ಸೋಣ ಸೋಡೋಣ್ತ್ ಪೋಪುಂಡು" : ಇದೊಂದು ಜನಪದರಲ್ಲಿರುವ ಗಾದೆ. ಈ ತಿಳಿವಳಿಕೆ ಸಹಜವಾಗಿತ್ತು , ಆದರೆ ಈಗ ಮರೆತು ಹೋಗಿದೆ. ಕಾಲ ಬದಲಾಗಿದೆ . ಪ್ರಕೃತಿಯೊಂದಿಗಿನ ಸಹಬಾಳ್ವೆ ಅರ್ಥ ಕಳಕೊಂಡಿದೆ. ಮಳೆ ಆಧರಿಸಿ ಸಿದ್ದಗೊಂಡು ಲಾಗಾಯ್ತಿನಿಂದ ರೂಢಿಯಲ್ಲಿದ್ದ "ಕೃಷಿ ಸಂವಿಧಾನ"ಮರೆತು ಹೋಗಿದೆ , ಈ ಸಂಬಂಧದ ಸಾಂಸ್ಕೃತಿಕ ಆವರಣವೊಂದು ಕಳಚಿ ಕೊಂಡಿದೆ . ಕೃಷಿ ಅವಲಂಬಿತ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಕೃಷಿ - ಬೇಸಾಯದ ಅವಗಣನೆ , ಕೃಷಿ ಭೂಮಿಯ ಪರಿವರ್ತನೆ , ಕೃಷಿ ಲಾಭದಾಯಕವಾಗದೆ ಇರುವುದು , ಕೃಷಿ - ಬೇಸಾಯದಿಂದಲೇ ಸರ್ವ ಸಮೃದ್ದಿ ಎಂಬ ಚೆಂತನೆ - ಸ್ವೀಕಾರದ ನಂಬಿಕೆ ಹುಸಿಯಾಯಿತು . ಕೃಷಿ - ಬೇಸಾಯ ಅಪ್ರಸ್ತುತವಾಗುತ್ತಾ ಕೃಷಿ ಪ್ರಧಾನವಾಗಿ ರೂಪುಗೊಂಡ ಸಾಂಸ್ಕೃತಿಕ ಜೀವನಶೈಲಿ ಬದಲಾಯಿತು , ನಮ್ಮದ್ದಲ್ಲದ ಎಷ್ಟೋ ಆಚಾರ - ವಿಚಾರಗಳನ್ನು ಒಪ್ಪುವಂತಾಗುತ್ತದೆ.ಈ ಕಾರಣಗಳಿಂದ ಕೃಷಿ ಸಂಸ್ಕೃತಿಯಿಂದ ಪಡಿಮೂಡಿದ್ದ ಆಚರಣೆಗಳು ಅವಗಣಿಸಲ್ಪಟ್ಟುವು , ಒಂದು ಹಂತಕ್ಕೆ ಮರೆತೇ ಹೋಯಿತು . ಇಂತಹ ಸಾಂಸ್ಕೃತಿಕ ಮರೆವುಗೆ ಆಟಿ (ಕರ್ಕಾಟಕ ಮಾಸ), ಸೋಣ (ಸಿಂಹಮಾಸ) ತಿಂಗಳುಗಳ ಆಚರಣೆಗಳೂ ಸೇರಿಹೋದುವು. ಜಾಣ ಮರೆವು ? ಬರಹ : ಕೆ.ಎಲ್.ಕುಂಡಂತಾಯ
ಬಂಟಕಲ್ಲು: ಶ್ರೀ ವಿಶ್ವಕರ್ಮ ಸಂಘ ಇದರ ಗಾಯತ್ರಿ ವೃಂದದ ಸದಸ್ಯರಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Posted On: 26-07-2022 11:20PM
ಬಂಟಕಲ್ಲು : ಇಲ್ಲಿನ ಶ್ರೀ ವಿಶ್ವಕರ್ಮ ಸಂಘ ಇದರ ಗಾಯತ್ರಿ ವೃಂದದ ಸದಸ್ಯರಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಕಲಾವಿದೆ 12ನೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಿಂದ ಕರ್ನಾಟಕ ಯುವರತ್ನ ಪ್ರಶಸ್ತಿ ಹಾಗೂ ಕಲಾರತ್ನ ಪ್ರಶಸ್ತಿ ಪಡೆದ ಪಡುಬಿದ್ರೆ ರೂಪ ವಸುಂಧರಾ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪ್ರತಿಭೆ ಎಲ್ಲರಲ್ಲೂ ಇದೆ ಅದಕ್ಕೆ ಪ್ರೋತ್ಸಾಹ ಸಿಕ್ಕಿದರೆ ಅದು ಇನ್ನಷ್ಟು ಬೆಳಕಿಗೆ ಬರುತ್ತದೆ. ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವುದರೊಂದಿಗೆ ನಮ್ಮತನವನ್ನು ನಾವು ಉಳಿಸಿ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ 7 ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಗಾಯತ್ರಿ ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ ಆಟಿಯ ತಿಂಡಿ ತಿನಸುಗಳು ಯುವ ಪೀಳಿಗೆಗೆ ಅಗತ್ಯವಾಗಿ ಬೇಕಾಗಿದೆ ಅದನ್ನು ಉಳಿಸಿ ಪರಿಚಯಿಸಬೇಕಾದೆ ಎಂದು ತಿಳಿಸಿದರು. ವಿಶ್ವಕರ್ಮ ಸಂಘದ ಅಧ್ಯಕ್ಷ ಮುರಳೀಧರ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗಣಪತಿ ಆಚಾರ್ಯ ಬಿಳಿಯಾರು, ಯುವಕ ಸೇವಾದಳದ ಅಧ್ಯಕ್ಷ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು 41ಬಗೆಯ ತಿಂಡಿ ತಿನಸುಗಳನ್ನು ಉಣಬಡಿಸಲಾಯಿತು. ಗಾಯತ್ರಿ ವೃಂದದ ಸದಸ್ಯರು ಪ್ರಾರ್ಥಿಸಿದರು. ವಿದ್ಯಾ ಹರೀಶ್ ಆಚಾರ್ಯ ಮತ್ತು ವಸಂತಿ ಅಶೋಕ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಅದಮಾರಿನ ಆದರ್ಶ ಯುವಕ ಸಂಘದ ಗೌರವ ಸ್ವೀಕಾರಕ್ಕಾಗಿ ಯೋಧ ಬಾಲಕೃಷ್ಣ ಟಿ. ಭಂಡಾರಿಗೆ ಆಮಂತ್ರಣ

Posted On: 26-07-2022 10:24PM
ಅದಮಾರು : ದೇಶದ ಗಡಿ ಪ್ರದೇಶವಾದ ಕಾರ್ಗಿಲ್ ನಲ್ಲಿ ಭೂಸೇನೆಯಲ್ಲಿ ಸೇವೆಗೈದ ಕಾಪು ತಾಲೂಕಿನ ಅದಮಾರಿನ ಹೆಮ್ಮೆಯ ಯೋಧ ಬಾಲಕೃಷ್ಣ ಟಿ.ಭಂಡಾರಿ ಅವರಿಗೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯ ಸಂದರ್ಭದಲ್ಲಿ ಶುಭಹಾರೈಸಿ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಗೌರವಿಸಲು ಅದಮಾರಿನ ಆದರ್ಶ ಯುವಕ ಸಂಘದ ವತಿಯಿಂದ ಜುಲೈ 26ರಂದು ಆಮಂತ್ರಿಸಲಾಯಿತು.
ಕಟಪಾಡಿ : ಕಸದ ರಾಶಿ - ಸಾರ್ವಜನಿಕರಿಗೆ ತೊಂದರೆ ; ಸಮಸ್ಯೆ ಬಗೆಹರಿಸಲು ಸ್ಥಳೀಯ ನಿವಾಸಿಗಳ ಆಗ್ರಹ
.jpg)
Posted On: 26-07-2022 05:12PM
ಕಟಪಾಡಿ : ಇಲ್ಲಿನ ಏಣಗುಡ್ಡೆ ಪಂಚಾಯತ್ ವ್ಯಾಪ್ತಿಯ ಹಳೆ ರಸ್ತೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ನಾಗಬನ ಸಮೀಪ ಇರುವ ಸ್ಥಳದಲ್ಲಿ ಪ್ಲಾಸ್ಟಿಕ್, ಮಧ್ಯದ ಬಾಟಲು,ಮಲ ಮೂತ್ರದ ಪ್ಯಾಡ್,ಮಾಂಸದ ಮೂಳೆ ಮುಂತಾದವುಗಳಿಂದ ಕಸದ ರಾಶಿ ಆಗಿ ಮಾರ್ಪಾಡು ಆಗಿದೆ.
 (1).jpg)
ಈಗಾಗಲೇ ಪಂಚಾಯತ್ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಪ್ರಯೋಜನವಿಲ್ಲ. ಇಲ್ಲಿನ ಕಸ ವಿಲೇವಾರಿ ಮಾಡಬೇಕಾಗಿದೆ. ಹತ್ತಿರದ ಫ್ಲಾಟ್, ಮನೆಯಲ್ಲಿಯ ಒಟ್ಟಾದ ಕಸ, ಪ್ಲಾಸ್ಟಿಕ್ ಹಾಗೆ ಮಲ ಮೂತ್ರದ ಪ್ಯಾಡ್ಗಳನ್ನು ಬಿಸಾಡುವುದು ಗಮನಕ್ಕೆ ಬಂದಿದೆ. ನಾಯಿಗಳು ಒಟ್ಟಾಗಿ ಎಲ್ಲವನ್ನು ರಸ್ತೆಯಲ್ಲಿ ಹರಡಿ ಹಾಕುತ್ತಿದ್ದು ಸ್ಥಳೀಯ ಮನೆಯವರಿಗೂ, ದಾರಿ ಹೋಕರಿಗೂ ನಡೆದಾಡಲು ಅಸಹ್ಯ ಉಂಟಾಗಿದೆ.
ಅಲ್ಲದೆ ಆರೋಗ್ಯ ಸಮಸ್ಯೆಯಾಗಿದೆ. ದಯವಿಟ್ಟು ಈ ಕೂಡಲೇ ಕಸವನ್ನು ವಿಲೇವಾರಿ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮರವನ್ನು ಇಟ್ಟು ಯಾರು ಕಸ ಹಾಕುತ್ತಾರೋ ಅವರ ಮನೆ ಅಥವಾ ಫ್ಲಾಟ್ ಗೆ ಅಲ್ಲಿ ಒಟ್ಟಾದ ಎಲ್ಲ ಕಸಗಳನ್ನು ತಂದು ವಾಪಸ್ ಹಾಕಲಾಗುವುದು. ಇಲ್ಲದಿದ್ದಲ್ಲಿ ಅವರಿಂದಲೇ ದಂಡ ಸಮೇತ ಕಸ ವಿಲೇವಾರಿ ಮಾಡಿಸಲಾಗುವುದು ಎಂದು ನೊಂದ ಕಟಪಾಡಿ ಹಳೆ ರಸ್ತೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ : ಒಂದು ಜಿಜ್ಞಾಸೆ

Posted On: 26-07-2022 04:45PM
ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಈ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವರಾದ ಶ್ರೀಯುತ ನಾಗೇಶ್ ಬಿ ಸಿ ರವರು ಮತ್ತು ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಡಾ. ಅಶ್ವಥ್ ನಾರಾಯಣ್ ಎಂಬ ಇಬ್ಬರು ಶಿಕ್ಷಣ ಸಚಿವರನ್ನು ಎಲ್ಲಿಂದ ಕರೆದುಕೊಂಡು ಬಂದರು ಎಂಬುದು ಕರ್ನಾಟಕದ ಜನತೆಗೆ ತಲೆನೋವಿನ ವಿಷಯವಾಗಿದೆ. ಈ ಇಬ್ಬರು ಶಿಕ್ಷಣ ಸಚಿವರು ಕೈಗೊಂಡಂತಹ ನಿರ್ಧಾರಗಳಿಂದಾಗಿ ಇಂದು ಕರ್ನಾಟಕ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಒಂದು ರೀತಿಯ ಅಶಾಂತಿಯ ವಾತವರಣವೇ ನಿರ್ಮಾಣವಾಗಿದೆ. ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ಶ್ರೀಯುತ ಸುರೇಶ್ ಕುಮಾರ್‌ರವರು ತಮ್ಮದೇ ಬಿಜೆಪಿ ಪಕ್ಷದ ಐಟಿ ಸೆಲ್‌ನ ಸದಸ್ಯರು ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದ ಶ್ರೀಯುತ ರೋಹಿತ್ ಚಕ್ರತೀರ್ಥ ಅವರನ್ನು ಪ್ರಾಥಮಿಕ ಹಾಗು ಪ್ರೌಢ ಶಾಲಾ ಶಿಕ್ಷಣದ ಪಠ್ಯಪುಸ್ತಕಗಳಲ್ಲಿದ್ದ ಸರಿ ತಪ್ಪುಗಳ ವಿಶ್ಲೇಷಣೆಗಾಗಿ ಅವರೇ ಹೇಳಿದಂತೆ ಮೌಖಿಕವಾಗಿ ಸೂಚಿಸಿದ್ದರಂತೆ. ಈ ಕಾರ್ಯದಲ್ಲಿ ಮಗ್ನರಾದ ಶ್ರೀಯುತ ರೋಹಿತ್ ಚಕ್ರತೀರ್ಥರವರು ಪಠ್ಯಪುಸ್ತಕಗಳಲ್ಲಿದ್ದ ಸರಿ ತಪ್ಪುಗಳ ವಿಶ್ಲೇಷಣೆಯ ಸಂಪೂರ್ಣ ಮಾಹಿತಿಯನ್ನು ಶಿಕ್ಷಣ ಸಚಿವರಿಗೆ ತಿಳಿಸಬೇಕಾದ ಸಮಯಕ್ಕೆ ಸರಿಯಾಗಿ ಸರ್ಕಾರದ ಆಡಳಿತ ಚಕ್ರದಲ್ಲಿ ಉಂಟಾದ ಏರುಪೇರುಗಳ ಹಠಾತ್ ಬದಲಾವಣೆಯಿಂದಾಗಿ ಹಾಗು ಸರ್ಕಾರದ ಅನಿಶ್ಚಿತತೆಯಿಂದಾಗಿ ಶ್ರೀಯುತ ನಾಗೇಶ್ ಬಿ ಸಿ ಯವರು ಶಿಕ್ಷಣ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡರು. ಈ ಶ್ರೀಯುತ ನಾಗೇಶ್ ಬಿ ಸಿ ಯವರು ಶಿಕ್ಷಣ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರವೇ ಈ ಪಠ್ಯಪುಸ್ತಕಗಳು ಪರಿಶೀಲನೆಗೆ ರೆಕ್ಕೆ ಪುಕ್ಕ ಬಂದಿತ್ತೆನ್ನಬಹುದು. ಈ ಶಿಕ್ಷಣ ಸಚಿವರಾದ ಶ್ರೀಯುತ ನಾಗೇಶ್ ಬಿ ಸಿ ಯವರು, ಮಾಜಿ ಶಿಕ್ಷಣ ಸಚಿವರಾದ ಶ್ರೀಯುತ ಸುರೇಶ್ ಕುಮಾರ್‌ರವರು ನೇಮಿಸಿದ್ದ ಈ ಶ್ರೀಯುತ ರೋಹಿತ್ ಚಕ್ರತೀರ್ಥ ಅವರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚಿಸಿ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲು ಅವಕಾಶವನ್ನು ನೀಡಿದರು, ಜೊತೆಗೆ ಶಿಕ್ಷಣ ಸಚಿವರು ಹಾಗು ಈ ಪಠ್ಯಪುಸ್ತಕಗಳ ಪರಿಷ್ಕರಣೆಯ ಅಧ್ಯಕ್ಷರು ಮತ್ತು ಬಹುಪಾಲು ಸದಸ್ಯರಾಗಿ ನೇಮಕಗೊಂಡ ವ್ಯಕ್ತಿಗಳು ಒಂದೇ ರಾಜಕೀಯ ಪಡಶಾಲೆಯಿಂದ ಬಂದವರಾದರಿಂದ ಈ ಪಠ್ಯಪುಸ್ತಕಗಳ ಪರಿಷ್ಕರಣೆ ಕಾರ್ಯವು ಎಗ್ಗಿಲ್ಲದೆ ಅವ್ಯಾಹತವಾಗಿ ತಮ್ಮಿಷ್ಟಕ್ಕೆ ಬಂದಂತೆ ತಮ್ಮ ಪಕ್ಷದ ಹಾಗು ತಮ್ಮ ವೈಯಕ್ತಿಕ ನಿಲುವು, ಮೌಲ್ಯ ಮತ್ತು ಸಿದ್ಢಾಂತಗಳನ್ನು ಪ್ರತಿಪಾದಿಸುವಂತಹ ಅಂಶಗಳನ್ನು ಸೇರಿಸುವುದರೊಂದಿಗೆ ಸಂಪೂರ್ಣ ಪಠ್ಯಪುಸ್ತಕಗಳ ರೂಪವನ್ನೇ ಬದಲಾಯಿಸಿದರು.
ಈ ರೋಹಿತ್ ಚಕ್ರತೀರ್ಥರವರು ಹಲವಾರು ಸಾರ್ವಜನಿಕ ವೇಧಿಕೆಗಳು, ಚರ್ಚಾ ಗೋಷ್ಟಿಗಳು ಸಭೆ ಸಮಾರಂಭಗಳು ಸಮೂಹ ಮಾಧ್ಯಮಗಳು ಹಾಗು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ತಮ್ಮದೇಯಾದ ವಾದ ನಿಲುವು ಸಿದ್ದಾಂತಗಳನ್ನು ಪ್ರತಿಪಾದಿಸುತ್ತಾ ಈ ಹಿಂದೆ ಪಠ್ಯಪುಸ್ತಕಗಳಲ್ಲಿದ್ದ ವಸ್ತು ವಿಷಯಗಳನ್ನು ತಮ್ಮದೇಯಾದ ರೀತಿಯಲ್ಲಿ ಸಾರ್ವಜನಿಕವಾಗಿಯೇ ವಿರೋಧವನ್ನು ವ್ಯಕ್ತಪಡಿಸಿದರು. ಇದು ಸಾರ್ವಜನಿಕ ವಲಯದಲ್ಲಿ ಹಲವಾರು ಪರ ವಿರೋಧಗಳ ನಿಲುವನ್ನು ಅನೇಕ ಬುದ್ದಿಜೀವಿಗಳು, ಶೈಕ್ಷಣಿಕ ತಜ್ಞರು ಹಾಗು ಸಾಮಾಜಿಕ ಕಾರ್ಯಕರ್ತರು ವಾದ ವಿವಾದವನ್ನು ಮಂಡಿಸಲು ಕಾರಣವಾಯಿತು. ಇದರಿಂದಾಗಿ ಭುಗಿಲೆದ್ದ ಪಠ್ಯಪುಸ್ತಕಗಳ ಪರಿಷ್ಕರಣೆಯೂ ಪಠ್ಯಪುಸ್ತಕಗಳಲ್ಲಿದ್ದ ಈ ಹಿಂದೆ ಇದ್ದ ಪಾಠಗಳು ಮತ್ತು ಪದ್ಯಗಳನ್ನು ತೆಗೆದು ಹಾಕಿ ತಮ್ಮ ನಿಲುವು ಮೌಲ್ಯ ಸಿದ್ಧಾಂತಗಳನ್ನು ಪ್ರತಿಪಾಧಿಸುವಂತಹ ಅಂಶಗಳನ್ನೇ ಸೇರಿಸಿ ಪಠ್ಯಪುಸ್ತಕಗಳನ್ನು ರಚಿಸಲಾಯಿತು. ಇದರೊಂದಿಗೆ ಈ ಪಠ್ಯಪುಸ್ತಕಗಳ ಪಾಠಗಳಲ್ಲಿದ್ದ ಅದ್ವಾನಗಳು ಆ ರೋಹಿತ್ ಚಕ್ರತೀರ್ಥ ಪ್ರತಿಪಾಧಿಸುವ ವೇದ ಮಂತ್ರಗಳಿಗೂ ಸನಾತನ ಧರ್ಮ ಎಂಬ ಹುಚ್ಚಿನ ಅಮಲಿನಲ್ಲಿ ಅವರು ಪೂಜಿಸುವ ದೇವರುಗಳಿಗೂ, ಅವರ ಅಭಿಮಾನಿಗಳಿಗೆ ಬೆಂಬಲಿಗರಿಗೆ ಜೊತೆಗೆ ಸರ್ಕಾರಕ್ಕೂ ಇರಿಸು ಮುರಿಸನ್ನು ತಂದವು. ಇವರು ರೂಪಿಸಿದ ಪಠ್ಯಕ್ರಮಗಳಲ್ಲಿ ನಾಡಿನ ಮಹನೀಯರ ಬಗ್ಗೆ ಅತ್ಯಂತ ವಿವಾದಾಸ್ಪಾದವಾದ ರೀತಿಯಲ್ಲಿ ಅವರನ್ನು ಚಿತ್ರಿಸಿ ತೇಜೋವಧೆಗೊಳಿಸಲಾಗಿತ್ತು. ಅದರ ಮಟ್ಟ ಎಷ್ಟಿತ್ತೆಂದರೆ ಈ ನೂತನ ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಿರುವ ಹೇಳಿಕೆಗಳು ಒಂದು ವಿಷಜಗತ್ತನ್ನೇ ಪರಿಚಯಿಸಲು ಸಿದ್ಧವಾಗಿ ನಿಂತಿದ್ದವು. ಇಂತಹ ಸಂಧರ್ಭದಲ್ಲಿ ರೋಹಿತ್ ಚಕ್ರತೀರ್ಥರವರ ಶಿಕ್ಷಣ ಮತ್ತು ಅರ್ಹತೆಗೆ ಸಂಬಂಧಿಸಿದಂತೆ ಉಂಟಾದ ವಿವಾದವನ್ನು ಬಗೆಹರಿಸಲು ಸ್ವತಃ ಶಿಕ್ಷಣ ಸಚಿವರೇ ಮುಂದಾಗಿ ಅವರು ದೇಶದ ಒಂದು ಪ್ರತಿಷ್ಠಿತ ಐ ಐ ಟಿ ಯಲ್ಲಿ ಪ್ರಾಧ್ಯಾಪಕರು ಎಂಬ ಹಸಿ ಸುಳ್ಳನ್ನು ಪತ್ರಿಕಾ ಗೋಷ್ಠಿಯಲ್ಲಿಯೇ ಸಾರ್ವಜನಿಕವಾಗಿ ಘೋಷಿಸಿದಾಗ, ಇದರಿಂದ ಉಂಟಾದ ವಿವಾದವನ್ನು ಬಗೆಹರಿಸಲು ಸ್ವತಃ ರೋಹಿತ್ ಚಕ್ರತೀರ್ಥರವರೇ ಬಂದು ತಮ್ಮ ವಿದ್ಯಾರ್ಹತೆಯೆ ಬಗ್ಗೆ ಸ್ವಷ್ಟನೆ ನೀಡಬೇಕಾಯಿತು. ಈ ವೇಳೆಗಾಗಲೇ ಅದು ಎಷ್ಟು ವಾದ ವಿವಾದವಾಯಿತು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇದರಿಂದಾಗಿ ಕರ್ನಾಟಕದ ರಾಜ್ಯದಾದ್ಯಂತ ಭುಗಿಲೆದ್ದ ಹೋರಾಟಗಳು ಹಾಗು ಚಳುವಳಿಗಳ ಆರ್ಭಟಕ್ಕೆ ಮಣಿದ ಸರ್ಕಾರ ಹಾಗು ಮಾನ್ಯ ಸಚಿವರು ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಾದ ಬದಲಾವಣೆಗಳ ಬಗ್ಗೆ ಹಲವು ರೀತಿಯ ವಿವರಣೆಗಳನ್ನೂ ನೀಡಿದರೂ ಸಹ ಅವರ ದ್ವಂದ್ವ ನೀತಿಯಿಂದಾಗಿ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಸಹ ಸಿಗದೆ ಮತ್ತೇ ಹೋರಾಟಗಳು ಮುಂದುವರೆದವು. ಆದರೂ ಶೈಕ್ಷಣಿಕ ತಜ್ಞರ, ಬುದ್ದಿಜೀವಿಗಳ ಹಾಗು ಹೋರಾಟಗಾರರ ಮಾತನ್ನು ಸಹ ತಿರಸ್ಕರಿಸಿ, ಸರ್ಕಾರವು ಹಠಕ್ಕೆ ಬಿದ್ದು ಅವರದೇ ಸರ್ಕಾರದ ಮೌಲ್ಯಗಳೆಂದು ಬಿಂಬಿಸುವ ಅಂಶಗಳನ್ನೇ ಹೆಚ್ಚಾಗಿ ಪ್ರತಿಪಾದಿಸುವಂತಹ ಉದ್ದೇಶದಿಂದ ರಚಿತವಾದ ಪಠ್ಯಪುಸ್ತಕಗಳನ್ನೇ ಶಾಲೆಗ ತಲುಪಿಸಿ, ಹೋರಾಟಗಾರರ ಮೂಗಿಗೆ ತುಪ್ಪವನ್ನು ಸವರಿದಂತೆ ಅಲ್ಲಲ್ಲಿ ತಪ್ಪಾಗಿರುವಂತಹ ಅಂಶಗಳನ್ನು ಸರಿಪಡಿಸುವುದಾಗಿ ಒಪ್ಪಿಕೊಂಡಿದ್ದರಿಂದಾಗಿ ಸ್ವಲ್ಪವೇ ಸ್ವಲ್ಪ ಪರಿಹಾರ ದೊರೆತಂತಾಯಿತು ಅಷ್ಟೇ. ಆದರೂ ಕೂಡ ಈ ಪಠ್ಯಪುಸ್ತಕಗಳ ಪರಿಷ್ಕರಣೆಯು ಬಗ್ಗೆ ಎದ್ದಿರುವ ವಿವಾದವು ಅಲ್ಪ ಸ್ವಲ್ಪ ತಾತ್ಕಾಲಿಕ ಪರಿಹಾರವಾಗಿದ್ದರೂ ಶಾಶ್ವತ ಪರಿಹಾರಕ್ಕಾಗಿ ಹೋರಾಟಗಳು ಹಾಗು ಚಳುವಳಿಗಳ ಅಲ್ಲಲ್ಲಿ ಹೊಗೆಯಾಡುತ್ತಿರುವುದು ಕಂಡುಬರುತ್ತಿದೆ. ಇದರ ಜೊತೆಗೆ ಈ ಪಠ್ಯಪುಸ್ತಕಗಳ ಪರಿಷ್ಕರಣೆಯ ಸದಸ್ಯರುಗಳಲ್ಲಿಯೇ ಅವರವರ ಬೆನ್ನ ಹಿಂದೆಯೇ ಕೆಸರೆರಚಾಟ ನಡೆಯುತ್ತಿರುವುದರಿಂದ ಸರ್ಕಾರದ ನಡೆಯ ಬಗ್ಗೆ ಇಂದಿಗೂ ಆಕ್ರೋಶಗಳು ಹೊರಬೀಳುತ್ತಿವೆ. ಈ ಪಠ್ಯಪುಸ್ತಕಗಳ ಪರಿಷ್ಕರಣೆಯಿಂದಾಗಿ ಶಿಕ್ಷಣದ ಮಹತ್ವವನ್ನು ಮಾನವನ್ನು ಬೀದಿಗೆ ತಂದು ಹರಾಜು ಹಾಕಿಸಿಕೊಂಡರು. ಜೊತೆಗೆ ವಿವಿಧ ಮಠಾಧೀಶರು ಹಾಗು ಸಾಮಾಜಿಕ ಹೋರಾಟಗಾರರು ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಧಿಸಿದಂತೆ ಸರ್ಕಾರದ ಮೇಲೆ ವಿವಿಧ ರೀತಿಯಲ್ಲಿ ಒತ್ತಡವನ್ನು ತಂದುದ್ದರ ಪರಿಣಾಮವಾಗಿ ಆ ಒತ್ತಡವನ್ನು ನಿಯಂತ್ರಿಸಲು ವಿಫಲವಾದ ಸರ್ಕಾರವು ಪಠ್ಯಪುಸ್ತಕಗಳ ಪರಿಷ್ಕರಣೆಯ ಸಮಿತಿಯನ್ನೇ ವಿಸರ್ಜನೆ ಮಾಡಿದರು. ಆದರೆ ಈ ಪಠ್ಯಪುಸ್ತಕಗಳ ಪರಿಷ್ಕರಣೆಯಿಂದಾಗಿ ಇಂದು ಇವರು ಸಿದ್ಧಪಡಿಸಿದ ವಿಷವುಗುಳುವ ಪಠ್ಯಕ್ರಮವನ್ನೇ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ. ಅದರ ಫಲವನ್ನೂ ಇನ್ನೂ ಕೆಲವೇ ವರ್ಷಗಳಲ್ಲಿ ಕಾಣಬಹುದಾಗಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಮತ್ತೇ ಎರಡು ನೂತನ ಅಂಶಗಳು ಹೆಚ್ಚಿನ ಗಮನ ಸೆಳೆಯುತ್ತಿವೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಮಾನ್ಯ ಶಿಕ್ಷಣ ಸಚಿವರಾದ ನಾಗೇಶ್ ಬಿ ಸಿ ಯವರು ಅಂಗನವಾಡಿಗಳನ್ನು ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲಾ ಸಾಂಸ್ಥಿಕ ರೂಪ ನೀಡಲು ನಿರ್ಧರಿಸಿ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಿ ಅವರನ್ನು ಶಾಲಾ ಹಂತಕ್ಕೆ ತರುವುದಾಗಿದೆ. ಇದರಿಂದಾಗಿ ಇವರ ಪ್ರಕಾರ ಅಂಗನಾವಾಡಿ ಕಾರ್ಯಕರ್ತೆಯರನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಶಿಕ್ಷಕರೆಂದು ಪರಿಗಣಿಸಿ ಅವರು ಪಡೆಯುತ್ತಿರುವ ಹತ್ತು ಸಾವಿರ ಗೌರವ ಧನವು ವೇತನ ಎಂದು ಬದಲಾಗುತ್ತದೆ ಹಾಗೂ ಅವರಿಗೆ ಸೇವಾ ಭದ್ರತೆಯು ದೊರಕುತ್ತದೆ ಎನ್ನುತ್ತಿದ್ದಾರೆ. ಇಂತಹ ನಿರ್ಧಾರ ಒಳ್ಳೆಯದೆ ಆದರೆ ಇದರಿಂದ ಉದ್ಬವವಾಗುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆ ಇದೆ. ಈ ಅಂಗನವಾಡಿ ಕಾರ್ಯಕರ್ತೆಯರು ಕರ್ನಾಟಕ ರಾಜ್ಯದಾದ್ಯಂತ ಕೆಲವೇ ತಿಂಗಳುಗಳ ಹಿಂದೆ ತಮ್ಮ ಬೇಡಿಕೆಗಳು ಹಾಗು ಗೌರವಧನದ ಹೆಚ್ಚಳಕ್ಕಾಗಿ ಸರ್ಕಾರದ ಗಮನವನ್ನು ಸೆಳೆಯಲು ಹಲವು ರೀತಿಯ ಪ್ರತಿಭಟನೆ, ಹೋರಾಟಗಳನ್ನು, ಹಾಗು ಮುಷ್ಕರಗಳನ್ನು ಮಾಡಿದ್ದರು. ಈ ಅಂಗನವಾಡಿ ಕಾರ್ಯಕರ್ತೆಯರ ನಿರಂತರ ಹೋರಾಟದ ಮುಷ್ಕರದ ಪರಿಣಾಮದ ಬಿಸಿಗೆ ಮಣಿದು ಅವರ ಮನವಿಗೆ ಸ್ಪಂದಿಸಿದ ಸರ್ಕಾರವು ಕೆಲವು ದಿನಗಳ ನಂತರ ಕನಿಷ್ಠ ಮಟ್ಟದ ಗೌರವ ಧನವನ್ನು ಹೆಚ್ಚಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಬಹುಪಾಲು ಅಂಗನವಾಡಿ ಕೇಂದ್ರಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಬಹುಷಃ ಅದೇ ಗ್ರಾಮದ ಅಥವಾ ಪಕ್ಕದ ಊರಿನ ಮಹಿಳೆಯರೇ ಆಗಿರುತ್ತಾರೆ. ಈ ನೇಮಕಾತಿ ಹೇಗೆ ನಡೆಯುತ್ತದೆ ಎಂದು ಜಗಜ್ಜಾಹೀರವಾಗಿದೆ. ಏಕೆಂದರೆ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅದೇ ಗ್ರಾಮದ ಸ್ಥಳೀಯ ನಾಯಕರ, ಪಟ್ಟಭದ್ರ ಹಿತಾಶಕ್ತಿಗಳ ಅಥವಾ ರಾಜಕೀಯ ಪುಡಾರಿಗಳ ಕೈವಾಡದಿಂದಾಗಿ ರಾಜಕೀಯದ ನೆರಳು ಸುಳಿಯದೇ ಇರಲಾರದು. ಅಂದರೆ ಇಂತಹ ಪಟ್ಟಭದ್ರ ಹಿತಾಶಕ್ತಿಗಳ, ಪ್ರಬಲ ವ್ಯಕ್ತಿಗಳ ಪಕ್ಷಪಾತಕ್ಕೆ ಒಳಗಾಗಿ ಪ್ರಭಾವಿಗಳ ಕಡೆಯವರೇ ಆಯ್ಕೆಯಾಗುವ ಸಂಧರ್ಭಗಳು ಹೆಚ್ಚಿವೆ. ಈ ಅಂಗನವಾಡಿ ಕಾರ್ಯಕರ್ತೆಯರು ಸಾಮಾನ್ಯವಾಗಿ ಆ ಗ್ರಾಮದ ಪ್ರಬಲ ಜಾತಿಯಿಂದ ಬಂದಂತಹ ಮಹಿಳೆಯರೇ ಆಗಿರುತ್ತಾರೆ. ಕೆಲವೇ ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ದಲಿತ, ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರಾಗಿರುತ್ತಾರೆ. ಜೊತೆಗೆ ದಲಿತ, ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರು ಅಂಗನವಾಡಿ ಕಾರ್ಯಕರ್ತೆಯರಾಗಿರುವ ಅಂಗನವಾಡಿ ಕೇಂದಗಳಲ್ಲಿ ಜಾತಿಪದ್ಡತಿಯ ವ್ಯವಸ್ಥೆಯಿಂದ ಯಾವ ಯಾವ ರೀತಿಯ ಶೋಷಣೆಗಳು ನಡೆದು ನೂರಾರು ಪ್ರಕರಣಗಳು ಪ್ರತಿದಿನವು ಬೆಳಕಿಗೆ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ಅಂಗನವಾಡಿ ಕಾರ್ಯಕರ್ತೆಯರನ್ನು ಪೂರ್ವ ಪ್ರಾಥಮಿಕ ಶಿಕ್ಷಣದ ಶಿಕ್ಷಕಿಯರಾಗಿ ನೇಮಿಸಿದರೆ ಇದೇ ಪ್ರಬಲ ವರ್ಗದ ಮಹಿಳೆಯರೇ ಹೆಚ್ಚಾಗಿ ಶಿಕ್ಷಕಿಯರಾಗಿ ಪದನ್ನೋತಿ ಹೊಂದುವ ಅವಕಾಶವನ್ನು ತಳ್ಳಿಹಾಕಲಾಗದು. ಅಂತಹ ಸಂಧರ್ಭದಲ್ಲಿ ಸರ್ವರಿಗೂ ಅವಕಾಶ ಸಿಗದೆ ಉಳ್ಳವರ ಪಾಲಾಗಿ ಸಾಮಾಜಿಕ ನ್ಯಾಯ ಹಾಗು ಸರ್ವರು ಪಾಲ್ಗೊಳ್ಳುವ ಅವಕಾಶವನ್ನು ತಪ್ಪಿಸಿದಂತಾಗುತ್ತದೆ. ಇದರಿಂದ ಸಾಮಾಜಿಕ ನ್ಯಾಯದ ಕೊಲೆಯಾಗುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ಈ ಪೂರ್ವ ಹಾಗು ಕಿರಿಯ ಪ್ರಾಥಮಿಕ ಶಿಕ್ಷಣದ ಶಾಲೆಗಳಿಗೆ ಶಿಕ್ಷಕರಾಗಲು ಪಿಯುಸಿ ಅಥವಾ ಪದವಿ ವಿದ್ಯಾರ್ಹತೆಯ ಜೊತೆಗೆ ಡಿ ಎಡ್ / ಬಿ ಎಡ್ ಪದವಿ ಗಳಿಸಿರಬೇಕು. ನಂತರ ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಾವಿರಾರು ಆಕಾಂಕ್ಷಿಗಳು ಎದುರಿಸಿ ಅದರಲ್ಲಿ ಉತ್ತಮ ಸಾಧನೆಯನ್ನು ಮೆರೆದವರು ಮಾತ್ರ ಶಿಕ್ಷಕರಾಗಿ ನೇಮಕವಾಗಬೇಕಾಗುತ್ತದೆ. ಅದೇ ರೀತಿಯಲ್ಲಿ ಪೂರ್ವ ಹಾಗು ಕಿರಿಯ ಪ್ರಾಥಮಿಕ ಶಿಕ್ಷಣದ ಶಿಕ್ಷಕ - ಶಿಕ್ಷಕಿಯರಾಗಲೂ ಎಷ್ಟೋ ಶಿಕ್ಷಣಾಕಾಂಕ್ಷಿಗಳು ಶಿಕ್ಷಣವನ್ನು ಪಡೆಯುತ್ತಿದ್ದರೆ, ಈಗಾಗಲೇ ಶಿಕ್ಷಣವನ್ನು ಮುಗಿಸಿರುವಂತಹ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿರುವ ಅಂಗನವಾಡಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗು ಪ್ರಾಥಮಿಕ ಶಾಲೆಗಳ ಸಂಖ್ಯೆಯನ್ನು ಗಮನಿಸಬೇಕಾದ ಅವಶ್ಯಕತೆ ಇದೆ. ಕರ್ನಾಟಕ ಆರ್ಥಿಕ ಸಮೀಕ್ಷೆ 2020- 21 ರ ಪ್ರಕಾರ ಕರ್ನಾಟಕದಾದ್ಯಂತ 62,580 ಅಂಗನವಾಡಿ ಕೇಂದ್ರಗಳು ಹಾಗು 3,331 ಮಿನಿ ಅಂಗನವಾಡಿ ಕೇಂದ್ರಗಳು ಹಾಗು ರಾಜ್ಯ ಸರ್ಕಾರದ ವತಿಯಿಂದ 450 ಹೊಸ ಅಂಗನವಾಡಿ ಕೇಂದ್ರಗಳನ್ನು ನಗರ ಮತ್ತು ಕೊಳಗೇರಿ ಪ್ರದೇಶಗಳಲ್ಲಿ ತೆರೆಯಲಾಗಿದ್ದು, ಇವುಗಳಲ್ಲಿ ಒಟ್ಟು 64,816 ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆಯೇ ಕರ್ನಾಟಕದ ಒಟ್ಟು 62,431 ಶಾಲೆಗಳಲ್ಲಿ 24,391 ಕಿರಿಯ ಪ್ರಾಥಮಿಕ ಶಾಲೆಗಳು, 38,040 ಹಿರಿಯ ಪ್ರಾಥಮಿಕ ಶಾಲೆಗಳಾಗಿದ್ದು ಹಾಗು ಈ ಪ್ರಾಥಮಿಕ ಶಾಲೆಗಳ ಜೊತೆಗೆ 16,850 ಪ್ರೌಢಶಾಲೆಗಳಿವೆ. ಪ್ರಸ್ತುತ ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾಗಿರುವ 3,15,557 ಶಿಕ್ಷಕರಲ್ಲಿ 3,04,097 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು 11,460 ಶಿಕ್ಷಕರ ಹುದ್ದೆಗಳು ಮಾತ್ರ ಭರ್ತಿಯಾಗಿದೆ ಖಾಲಿ ಉಳಿದಿವೆ. ಈಗ ಉಳಿದಿರುವ 11,460 ಶಿಕ್ಷಕರ ಹುದ್ದೆಗಳಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ 64,816 ಅಂಗನವಾಡಿ ಕಾರ್ಯಕರ್ತೆಯರನ್ನು ಪದನ್ನೋತಿ ಅಥವಾ ಶಿಕ್ಷಕರಾಗಿ ನೇಮಿಸಿದರೆ ಪ್ರಾಥಮಿಕ ಶಿಕ್ಷಣದ ಶಿಕ್ಷಕ ಹಾಗು ಶಿಕ್ಷಕಿಯಾಗಬೇಕೆಂಬ ಉದ್ದೇಶದಿಂದಲೇ ಡಿ ಎಡ್ ಅಥವಾ ಬಿ ಎಡ್ ಶಿಕ್ಷಕ ತರಬೇತಿಯನ್ನು ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಅವರೆಲ್ಲರೂ ಅತಂತ್ರರಾಗಿ ಮುಂದಿನ ದಿನಗಳಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಹಾಗು ಸಮರ್ಥ ನೈಜ ಪದವಿಯನ್ನು ಗಳಿಸಿದವರಿಗೆ ನೀವು ಯಾವ ರೀತಿಯ ನ್ಯಾಯವನ್ನು ನೀಡಿದಂತಾಗುತ್ತದೆ. ಕರ್ನಾಟಕದ ಸರ್ಕಾರಿ ಶಾಲೆಗಳ ಮೂಲ ಸೌಲಭ್ಯಗಳನ್ನು ಆಧರಿಸಿ ಅವುಗಳು ಯಾವ ಶಾಲೆಗಳು ಮೂಲ ಸೌಲಭ್ಯಗಳನ್ನು ಹೊಂದಿಲ್ಲವೋ ಅವುಗಳನ್ನು ಮೂಲ ಸೌಲಭ್ಯಗಳನ್ನು ಹೊಂದಿರುವ ಶಾಲೆಗಳೊಂದಿಗೆ ಶಾಲೆಗಳ ವಿಲೀನ ಪ್ರಕ್ರಿಯೆಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಶಾಲೆಗಳ ಮೂಲ ಸೌಲಭ್ಯಗಳನ್ನು ಆಧರಿಸಿ ಅವುಗಳನ್ನು ವಿಲೀನೀಕರಣ ಮಾಡಲು ಮುಂದಾಗುವುದಕ್ಕಿಂತ ಅಂತಹ ಶಾಲೆಗಳನ್ನು ಗುರುತಿಸಿ ಅವುಗಳ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕಾದುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕೆ ವಿನಃ ಯಾವುದೋ ಒಂದು ನೆಪ ಹೇಳಿ ಅವುಗಳ ವಿಲೀನಕರಣಕ್ಕೆ ಮುಂದಾಗುವುದು ಅಥವಾ ಅವುಗಳನ್ನು ಮುಚ್ಚುವುದು, ಒಂದು ಸರ್ಕಾರದ ಬೇಜವಾಬ್ದಾರಿತನವನ್ನು ಅಸಮರ್ಥತೆಯನ್ನು, ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕಿರುವ ಅಸಡ್ಡೆಯನ್ನು ಸೂಚಿಸುತ್ತದೆಯೇ ವಿನಃ ಅದರ ಸಮರ್ಥತೆಯನ್ನಲ್ಲ.
ಹೀಗೆ ಶಾಲೆಗಳ ವಿಲೀನ ಪ್ರಕ್ರಿಯೆಯ ಯೋಜನೆಯನ್ನು ಜಾರಿಗೆ ತಂದು ಗ್ರಾಮೀಣ ಪ್ರದೇಶದಲ್ಲಿರುವ ಚಿಕ್ಕ ಚಿಕ್ಕ ಕಿರಿಯ ಹಾಗು ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಶಾಲಗೆಳ ವಿಲೀನೀಕರಣದ ಹೆಸರಿನಲ್ಲಿ ಸಂಪೂರ್ಣವಾಗಿ ಮುಚ್ಚುವುದರಿಂದ ಮುಂದಿನ ದಿನಗಳಲ್ಲಿ ಶಾಲೆಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಜೊತೆಗೆ ಕಡಿಮೆ ಜನಸಂಖ್ಯೆಯನ್ನು ಹೊಂದಿದ ಚಿಕ್ಕದಾದ ಗ್ರಾಮೀಣ ಪ್ರದೇಶವನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಎಳೆಯ ಹಾಗು ಪುಟ್ಟ ಮಕ್ಕಳು ದೂರದ ಊರುಗಳಿಗೆ ಸರ್ಕಾರಿ ಶಾಲೆಗೆ ಹೋಗಲು ಸಾಧ್ಯವಾಗದೇ ಅಥವಾ ಬಡ, ಮದ್ಯಮ ವರ್ಗದ ಕುಟುಂಬಗಳ ಪೋಷಕರು ಅವರ ಮಕ್ಕಳ ಖಾಸಗಿ ಶಾಲೆಗಳ ಶಿಕ್ಷಣದ ಶುಲ್ಕವನ್ನು ಭರಿಸಲಾಗದೇ ಶಿಕ್ಷಣದಿಂದ ವಂಚಿತರಾಗುತ್ತಾರೆ. ಈ ಪ್ರಕರಣಕ್ಕೆ ನನ್ನ ಸ್ವಂತ ಹಳ್ಳಿಯನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ನಾವು ವಿದ್ಯಾಭ್ಯಾಸ ಮಾಡುವಾಗ ನನ್ನ ಹಳ್ಳಿಯಲ್ಲೇ ಇದ್ದ ಕಿರಿಯ ಪ್ರಾಥಮಿಕ ಶಾಲೆ, ಈ ಪ್ರಸ್ತುತ ವರ್ಷದಿಂದ ಬೇರೊಂದು ಊರಿಗೆ ಸ್ಥಳಾಂತರಗೊಂಡಿದೆ. ಇದರಿಂದಾಗಿ ನಮ್ಮ ಹಳ್ಳಿಯ ಮಕ್ಕಳು ಇಂದು ಖಾಸಗಿ ಶಾಲೆಗಳಿಗೆ ಮೊರೆಹೋಗುತ್ತಿದ್ದಾರೆ. ಈ ಖಾಸಗಿ ಶಾಲೆಗಳು ಮಕ್ಕಳನ್ನು ತಮ್ಮ ಶಾಲೆಗೆ ಸೆಳೆಯುವ ಉದ್ದೇಶದಿಂದ ಪ್ರತಿಯೊಂದು ಚಿಕ್ಕ ಪುಟ್ಟ ಹಳ್ಳಿಗಳಿಗೂ ವಾಹನದ ವ್ಯವಸ್ಥೆಯನ್ನು ಮಾಡುವುದರಿಂದ ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಕೆಲಸವನ್ನು ಬಿಟ್ಟು ತಮ್ಮ ಮಕ್ಕಳನ್ನು ತಾವೇ ದೂರದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಪ್ರತಿದಿನವೂ ಕರೆದುಕೊಂಡು ಹೋಗಿ ಬರಲು ಸಾಧ್ಯವಾಗದ ಕಾರಣದಿಂದಾಗಿ ಸಾಮಾನ್ಯವಾಗಿ ಖಾಸಗಿ ಶಾಲೆಗಳತ್ತ ಆಕರ್ಷಿತಗೊಳ್ಳುತ್ತಾರೆ. ಹೀಗೆ ಶಾಲೆಗಳ ಸ್ಥಳಾಂತರ ಅಥವಾ ಶಾಲೆಗಳ ವಿಲೀನದ ಪ್ರಕ್ರಿಯೆಯಿಂದಾಗಿ ಖಾಸಗಿ ಶಾಲೆಗಳಿಗೆ ಹೆಚ್ಚಿನ ಅವಕಾಶವನ್ನು ಕೊಟ್ಟಂತೆ ಆಗುತ್ತದೆಯೇ ವಿನಃ ಸರ್ಕಾರಿ ಶಾಲೆಗಳಿಗೆ ಪೂರಕವಾದ ಯೋಜನೆಯಾಗಿರುವುದಿಲ್ಲ. ಹೀಗೆ ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆಯಿಂದಾಗಿ ಶಾಲೆಗಳು ಮುಚ್ಚುತಾ ಹೋದಂತೆ ಶಿಕ್ಷಕರ ಹುದ್ದೆಗಳು ಸಹ ಕಡಿಮೆಯಾಗುತ್ತಾ ಹೋಗುತ್ತದೆ. ಈ ಕಾರಣದಿಂದಾಗಿ ಸರ್ಕಾರವು ಶಾಲೆಗಳ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗುವುದಿಲ್ಲ. ಅಂತಹ ಸಂಧರ್ಭದಲ್ಲಿ ಶಿಕ್ಷಕರ ಹುದ್ದೆಗಳಿಗಾಗಿಯೇ ಶಿಕ್ಷಣ ಪಡೆದ ಯುವಜನಾಂಗ ಉದ್ಯೋಗವಿಲ್ಲದೆ ನಿರೋದ್ಯೋಗಕ್ಕೆ ಒಳಗಾಗುವ ಸನ್ನಿವೇಶ ಉಂಟಾಗುತ್ತದೆ. ಈ ಶಾಲೆಗಳ ವಿಲೀನದ ಜೊತಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವಂತೆ ಪದವಿ ಹಂತದ ಶಿಕ್ಷಣವನ್ನು ಮೂರು ವರ್ಷದಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಿದ್ದು ಜೊತೆಗೆ ಈ ಪದವಿಯ ಹಂತದಲ್ಲೇ ಶಿಕ್ಷಕರ ತರಬೇತಿಯನ್ನು ಸಹ ಸೇರಿಸಲಾಗಿದೆ. ಇದರಿಂದಾಗಿ ಈ ನಾಲ್ಕು ವರ್ಷಗಳಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದುಕೊಂಡರೆ ಅವರು ಶಿಕ್ಷಕ ಹುದ್ದೆಗಳಿಗೆ ಬೇಕಾದ ಅರ್ಹತೆಯನ್ನು ಗಳಿಸಿಕೊಳ್ಳುತ್ತಾರೆ. ಇತ್ತೀಚಿನ ವರಧಿಯಂತೆ ಈ ಡಿ ಎಡ್ / ಬಿ ಎಡ್ ಪದವಿಯನ್ನು ಈ ಹಿಂದೆ ಇದ್ದಂತೆ ಎರಡು ವರ್ಷಗಳಲ್ಲೇ ಮುಂದುವರೆಸುವುದು ಜೊತೆಯಲ್ಲಿಯೇ ಈ ನಾಲ್ಕು ವರ್ಷಗಳ ಪದವಿ ಹಂತದ ಶಿಕ್ಷಣವನ್ನು ಸಹ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮುಂದವರೆಸುವುದು ಹಾಗು ಸಂಪೂರ್ಣವಾಗಿ 2032 ರವರಗೆ ಕರ್ನಾಟಕದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಿಲ್ಲ ಎಂದು ಕರ್ನಾಟಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡ ಪ್ರತಿಯಲ್ಲಿರುವಂತೆ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಯುವಜನತೆ ತಮ್ಮ ಪದವಿ ಹಂತದ ನಂತರದ ಶಿಕ್ಷಣದಲ್ಲಿ ಗೊಂದಲ ಉಂಟಾದರೂ ಸಹ ಎಲ್ಲರೂ ಗರಿಷ್ಠ ಸಂಖ್ಯೆಯಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದುಕೊಂಡು ಅವರು ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳಾದರೆ ಶಿಕ್ಷಕರ ಹುದ್ದೆಗಳು ಕಡಿಮೆಯಿರುವುದರಿಂದ ಅವರು ಸರ್ಕಾರಿ ಶಾಲೆ ಶಿಕ್ಷಕರಾಗಲು ಸಾದ್ಯವಿಲ್ಲದಂತಾಗುತ್ತದೆ. ಇದರ ಜೊತೆಗ ಸಾಮಾನ್ಯವಾಗಿ ಈ ಪದವಿ ಹಂತದ ನಂತರ ಶಿಕ್ಷಕರ ತರಬೇತಿಯ ಶಿಕ್ಷಣವನ್ನು ಪಡೆಯುವಲ್ಲಿ ಗ್ರಾಮೀಣ ಯುವಜನತೆಯೇ ಹೆಚ್ಚಿನ ಪಾಲನ್ನು ಹೊಂದಿರುತ್ತಾರೆ. ಈ ಗ್ರಾಮೀಣ ಯುವಜನತೆಗೆ ಬೇರೆ ಶಿಕ್ಷಣದ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯಬೇಕಾದರೆ ಅವರಿಗೆ ಮೂಲ ಸೌಲಭ್ಯಗಳು ಹಾಗು ಹಣಕಾಸಿನ ಕೊರೆತೆಯಿಂದಾಗಿ ತಮಗೆ ಕೈಗೆಟುಕುವ ಶಿಕ್ಷಣ ಪದವಿಯನ್ನು ಅವರು ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಮುಗಿಸಿ ಉದ್ಯೋಗಾವಕಾಶಗಳಿಗಾಗಿ ಸರ್ಕಾರವನ್ನೇ ಅವಲಂಬಿಸಿದಾಗ ಅವರಿಗೆ ಉದ್ಯೋಗಾವಕಾಶಗಳ ಕೊರತೆಯುಂಟಾಗುತ್ತದೆ. ಈ ಮೇಲಿನ ಎಲ್ಲಾ ಕಾರಣಗಳನ್ನು ಪರಿಶೀಲಿಸಿದರೆ ನೀವು ಈಗ ಅಂಗನವಾಡಿ ಕಾರ್ಯಕರ್ತೆಯರು ಹಾಗು ಶಾಲೆಗಳ ವಿಲೀನ ಪ್ರಕ್ರಿಯೆಯಿಂದಾಗಿ ಶೈಕ್ಷಣಿಕ ವಲಯದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರಿಂದ ನೀವು ಈಗ ತೆಗೆದುಕೊಂಡಿರುವ ನಿರ್ಧಾರವು ಅಷ್ಟು ಸಮಂಜಸವಾಗಿಲ್ಲದ ಕಾರಣದಿಂದ ಈ ಪ್ರಕ್ರಿಯೆಯನ್ನು ಕೈ ಬಿಟ್ಟು ಬೇರೆ ರೀತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿಯೇ ಬೇರೆ ಯೋಜನೆಗಳನ್ನು ಜಾರಿಗೆ ತಂದರೆ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತದೆ. ಇಲ್ಲದಿದ್ದರೆ ಈ ನೀತಿಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಅಡ್ಡ ಕತ್ತರಿಯಲ್ಲಿ ಸಿಕ್ಕಿ ಬೀಳುವ ಸಂಭವ ಎದುರಾಗುತ್ತದೆ. ಅಂದರೆ ಕೆಲವೇ ಕೆಲವು ಶಿಕ್ಷಕ ಹುದ್ದೆಗಳು ಖಾಲಿಯಿರುವುದರಿಂದ ಸಂಪೂರ್ಣವಾಗಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರನ್ನೂ ಶಿಕ್ಷಕರಾಗಿ ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಕೆಲವು ಅಂಗನವಾಡಿಗಳ ಕಾರ್ಯಕರ್ತೆಯರು ಅದೇ ಉದ್ಯೋಗದಲ್ಲಿ ನಿರತರಾದರೇ ಕೆಲವರು ಮಾತ್ರವೇ ಶಿಕ್ಷಕರರಾಗಲೂ ಸಾಧ್ಯವಾಗುತ್ತದೆ. ಇದು ಅಂಗನಾಡಿ ಕಾರ್ಯಕರ್ತೆಯರ ಭಿನ್ನ ವಿಭಿನ್ನವಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶಿಕ್ಷಕರಾಗಿ ಪದನ್ನೋತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಯರಿಗೂ ಸಿಗುವ ಸೌಲಭ್ಯಗಳ ನಡುವಿನ ವೇತನ ಹಾಗು ಇನ್ನೀತರ ಅಂಶಗಳಲ್ಲಿ ವಿಭಿನ್ನತೆಯು ಕಂಡುಬರುತ್ತದೆ. ಇದರಿಂದಾಗಿ ಅಂಗನವಾಡಿಗಳು ಸಮಸ್ಯೆಯ ಆಗರವಾಗಿ ಪರಿಣಮಿಸುತ್ತದೆ. ಈ ರೀತಿಯಲ್ಲಿ ನೀವು ಕೈಗೊಂಡ ನಿರ್ಧಾರಗಳ ಹಿಂದಿನ ಎಲ್ಲಾ ಘಟನೆಗಳನ್ನು ಮೆಲುಕು ಹಾಕಿ ನೋಡಿದರೆ ನೀವು ತರುವಂತಹ ಯಾವುದೇ ಯೋಜನೆಯು ಸಾಮಾನ್ಯ ಜನವರ್ಗಕ್ಕೆ ಅನುಕೂಲವಾಗುವುದಿಲ್ಲ ಇದಕ್ಕೆ ಉದಾಹರಣೆ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನೀವು ತಂದ ಬದಲಾವಣೆಗಳನ್ನು ಎಲ್ಲರೂ ಗಮನಿಸಿದ್ದಾರೆ. ಇದರಿಂದಾಗಿ ಎಷ್ಟೋ ಅತಿಥಿ ಉಪನ್ಯಾಸಕರು ತಮ್ಮ ಕೆಲಸವನ್ನು ಕಳೆದುಕೊಂಡು ಈಗ ಅವರೆಲ್ಲ ನಿರುದ್ಯೋಗಿಗಳಾಗಿದ್ದಾರೆ. ಯಾವುದೇ ಒಂದು ರಾಷ್ಟ್ರದ ಹಾಗು ರಾಜ್ಯದ ಸರ್ಕಾರದ ಉದ್ದೇಶ ಗುರಿ ಮತ್ತು ನೀತಿಗಳು ಯಾವಾಗಲೂ ಜನಪರವಾಗಿದ್ದು ಸಮಾಜ ಮತ್ತು ಆರ್ಥಿಕತೆಯಲ್ಲಿ ಉದ್ಯೋಗಾವಕಾಶಗಳನ್ನು ಸೃಜನೆ ಮಾಡುವಂತಹ ಮನೋಸ್ಥಿತಿಯನ್ನು ಹೊಂದಿರಬೇಕೆ ವಿನಃ ಇರುವಂತಹ ಉದ್ಯೋಗಾವಕಾಶಗಳನ್ನು ಕಿತ್ತು ಕೊಳ್ಳುವಂತಹ, ವಿಲೀನ ಮಾಡುವಂತಹ ಯೋಜನೆಗಳಿಗೆ ಮುಂದಾಗಬಾರದು. ಇದರಿಂದಾಗಿ ಯುವ ಜನತೆ ಶಿಕ್ಷಣದತ್ತ ನಕರಾತ್ಮಕವಾದ ಮನೋಭಾವವನ್ನು ಬೆಳೆಸಿಕೊಳ್ಳುವಂತಹ ಅನಿವಾರ್ಯ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ. ಇದು ಒಂದು ರಾಜ್ಯಕ್ಕೆ ಮಾರಕವೇ ವಿನಃ ಪೂರಕವಲ್ಲ ಈ ಮೇಲಿನ ಉದ್ದೇಶದಂತೆಯೆ ಘನತವೆತ್ತ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ ಎನ್ ಅಶ್ವಥ್ ನಾರಾಯಣ್‍ರವರು ರಾಜ್ಯದ ಪ್ರಥಮ ದರ್ಜೆ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರಿಗೆ ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರತಿ ಕಾಲೇಜಿನಲ್ಲೂ 1500 ರಿಂದ 2000 ವಿದ್ಯಾರ್ಥಿಗಳು ಇರುವಂತೆ ನೋಡಿಕೊಳ್ಳುವುದು ಪ್ರಾಂಶುಪಾಲರ ಹೊಣೆ ಎಂದು ಹೇಳುತ್ತಾ ಒಂದು ವರಧಿಯಂತೆ 84 ಸರ್ಕಾರಿ ಕಾಲೇಜುಗಳಲ್ಲಿ ಶೇಕಡ ನೂರರಷ್ಟು, 115 ಕಾಲೇಜುಗಳಲ್ಲಿ ಶೇಕಡ ನಲವತ್ತರಷ್ಟು ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ 2022-2021 ರ ವರದಿಯ ಪ್ರಕಾರ 134 ಸರ್ಕಾರಿ ಹಾಗು 407 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆಯನ್ನು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಹೋಲಿಕೆ ಮಾಡಿ ನೋಡಿದರೆ ಶೇಕಡ 300 ರಷ್ಟು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿ ಹೆಚ್ಚಾಗಿರುವುದು ಕಂಡುಬರುತ್ತದೆ. ಒಂದು ಇಂಜಿನಿಯರಿಂಗ್ ಕಾಲೇಜಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ದನದ ತೊಟ್ಟಿಯಂತೆ ನಿರ್ವಹಣೆ ಮಾಡುವುದರ ಜೊತಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಿಗೆ ಸೇರುವಂತೆ ಮಾಡುವ ಮೂರ್ಖರು ಯಾರು? ನಿಮ್ಮದೇ ಸರ್ಕಾರವಲ್ಲವೇ. ನಾಯಿಕೊಡೆಯಂತೆ ರಾಜ್ಯದಾದ್ಯಂತ ಹಬ್ಬಿಕೊಂಡಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮೇಲೆ ನಿಯಂತ್ರಣ ಹೇರದೆ ಸರ್ಕಾರಿ ಕಾಲೇಜುಗಳ ಮೇಲೆ ಹಿಡಿತ ಸಾಧಿಸಲು ನಿಮಗೆ ಯಾವ ನೈತಿಕತೆ ಇದೆ. ಪ್ರತಿಯೊಂದು ಜಿಲ್ಲಾ ಹಾಗು ತಾಲೂಕು ಮಟ್ದದಲ್ಲಿ ಅಲ್ಲಿನ ರಾಜಕಾರಣಿಗಳದ್ದೇ ಒಂದು ಎರಡು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿಕೊಂಡು ಅದರಿಂದ ಬಡವರ ರಕ್ತ ಹೀರುತ್ತಿರುವ ನೀವು ಸರ್ಕಾರಿ ಕಾಲೇಜುಗಳ ಮೇಲೆ ಹಿಡಿತ ಸಾಧಿಸುತ್ತೀರಿ. ಅದೇ ಖಾಸಗಿ ಕಾಲೇಜುಗಳಿಗೆ ಎಷ್ಟು ಬೇಕಾದರೂ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅನುಮತಿ ನೀಡುತ್ತೀರಿ ಅದರ ಬದಲು ಖಾಸಗಿ ಕಾಲೇಜುಗಳ ಮೇಲೆ ವಿದ್ಯಾರ್ಥಿಗಳ ಪ್ರವೇಶಕ್ಕೆ ನಿಯಂತ್ರಣ ಹೇರಿದ್ದರೆ ಆಗ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ಸೇರುತ್ತಿದ್ದರು ಇಂತಹ ದ್ವಂದ್ವ ನೀತಿಯಿಂದಾಗಿ ಇಂದು ಕೇವಲ ಇಂಜಿನಿಯರಿಂಗ್ ಕಾಲೇಜುಗಳಲ್ಲದೆ ಎಲ್ಲಾ ರೀತಿಯ ಶೈಕ್ಷಣಿಕ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮೊದಲು ಸರ್ಕಾರಿ ಕಾಲೇಜುಗಳಿಗೆ ಬೇಕಾದ ಮೂಲಭೂತ ಅವಶ್ಯಕತೆ ಗಳನ್ನು ದೊರಕಿಸಿಕೊಡಿ ನಂತರ ವಿದ್ಯಾರ್ಥಿಗಳನ್ನು ಸರ್ಕಾರಿ ಕಾಲೇಜುಗಳಿಗೆ ಸೇರುವಂತೆ ಮನವೊಲಿಸುವ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ದೊರೆಯುವ ಉತ್ತಮ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ ಈ ರೀತಿಯ ಮಾರ್ಪಾಟು ಮಾಡದೆ ಕೇವಲ ಬೋಧಕರ ಮೇಲೆ ಒತ್ತಡ ಏರುವುದು ಒಬ್ಬ ಶಿಕ್ಷಣ ಸಚಿವರ ಅಸಮರ್ಥತೆಯನ್ನು ಬಿಂಬಿಸುತ್ತದೆ ವಿನಹ ಸಮರ್ಥತೆಯನ್ನು ಪ್ರತಿನಿಧಿಸುವುದಿಲ್ಲ. ಈಗಾಗಿ ಪ್ರಸ್ತುತ ಕರ್ನಾಟಕದ ಶೈಕ್ಷಣಿಕ ವಲಯವು ಅಡ್ಡಕತ್ತರಿಯಲ್ಕಿ ಸಿಕ್ಕಿಕೊಂಡಿದ್ದು ತನ್ನ ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಪ್ರಜ್ಞಾವಂತ ಶೈಕ್ಷಣಿಕ ತಜ್ಞರು, ಬುದ್ದಿಜೀವಿಗಳು ಇಂದಿನ ಸರ್ಕಾರಕ್ಕೆ ಹಾಗು ಶಿಕ್ಷಣ ಸಚಿವರಿಗೆ ಕಿವಿ ಹಿಂಡಬೇಕಾದ ಕೆಲಸವನ್ನು ಅತ್ಯಂತ ಜರೂರಾಗಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಈಗಾಗಲೇ ಕೊರೋನಾ ಹಾವಳಿಯಿಂದ ಹಲವು ವಿದ್ಯಾವಂತ ವರ್ಗ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದೆ. ಇಂತಹ ಸಂಧರ್ಭದಲ್ಲಿ ರಾಜಕೀಯ ಹಾಗು ಸ್ವಜನ ಪಕ್ಷಪಾತವನ್ನು ಮರೆತು ಎಲ್ಲರೂ ಒಕ್ಕೊರಲನಿಂದ ಸರ್ಕಾರಕ್ಕೆ ತಿಳಿ ಹೇಳಬೇಕಾದ ಪರಿಸ್ಥಿತಿಯಿದ್ದು ಈಗ ಏನಾದರೂ ಅಸಡ್ಡೆ ತೋರಿದರೆ ಇನ್ನೂ ಮುಂದಿನ ದಿನಗಳಲ್ಲಿ ಸಮಸ್ಯೆಯು ಹೆಚ್ಚಿನ ಗಂಬೀರ ಪರಿಣಾಮವನ್ನು ರಾಜ್ಯವು ಎದುರಿಸಬೇಕಾದ ಪರಿಸ್ಥಿತಿಗೆ ಬರಬಲ್ಲದು ಎಂಬುದರಲ್ಲಿ ಸಂಶಯವಿಲ್ಲ. ಲೇಖನ : ದಿವಾಕರ್. ಡಿ ಮಂಡ್ಯ Email: dvkrd1212@gmail.com