Updated News From Kaup
ಕಡೆಕಾರು : ಉಚಿತ ಆರೋಗ್ಯ ತಪಾಸಣಾ ಶಿಬಿರ

Posted On: 20-07-2022 04:36PM
ಉಡುಪಿ: ಕಡೆಕಾರು ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಡೆಕಾರು, ಕುತ್ಪಾಡಿ ಇವರ ಸಹಯೋಗದೊಂದಿಗೆ ಜುಲೈ 20ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವು ಕಡೆಕಾರು- ಕುತ್ಪಾಡಿ ಅಂಗನವಾಡಿ ಪಡುಕೆರೆಯಲ್ಲಿ ಜರಗಿತು.
ಈ ಸಂದರ್ಭ ಮಧುಮೇಹ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ನುರಿತ ವೈದ್ಯರಿಂದ ಸಲಹೆ, ಕೋವಿಡ್ ಲಸಿಕಾ ವಿತರಣಾ ಕಾರ್ಯಕ್ರಮ, ಆಯುಷ್ಮಾನ್ ಕಾರ್ಡ್, ಸೀನಿಯರ್ ಸಿಟಿಜನ್ ಕಾರ್ಡ್ ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಉದ್ಯಾವರ : ಗುಂಡಿ ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಕಂಟೈನರ್

Posted On: 20-07-2022 01:39PM
ಉದ್ಯಾವರ : ರಾಷ್ಟ್ರೀಯ ಹೆದ್ದಾರಿ 66 ಹಾಲಿಮಾ ಸಾಬ್ಜು ಸಭಾಂಗಣದ ಮುಂಭಾಗದಲ್ಲಿ ಹೆದ್ದಾರಿಯ ಗುಂಡಿ ತಪ್ಪಿಸಲು ಹೋಗಿ ಕಂಟೈನರ್ ಕಾರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆ.
.jpg)
ರಾಷ್ಟ್ರೀಯ ಹೆದ್ದಾರಿ 66ರಲ್ಲಿರು ಗುಂಡಿಯಿಂದ ಅದನ್ನು ತಪ್ಪಿಸಲು ಹೋಗಿ ಕಂಟೈನರ್ ನ ನಿಯಂತ್ರಣ ತಪ್ಪಿ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ ಹಾಗೂ ಕಂಟೈನರ್ ರಾಷ್ಟ್ರೀಯ ಹೆದ್ದಾರಿಯ ಡೈವರ್ಷನ್ ಏರಿ ನಿಂತಿದೆ.
ತುಳುವಿನ ಮಾನ್ಯತೆಗೆ ರಾಜ್ಯಸಭೆಯಲ್ಲಿ ಪ್ರಯತ್ನ - ಡಾ. ಹೆಗ್ಗಡೆ ಭರವಸೆ

Posted On: 20-07-2022 12:05AM
ಮಂಗಳೂರು : ತುಳು ಭಾಷೆಯನ್ನು ಸಂವಿಧಾನದ ಕಲಂ 347ರ ಪ್ರಕಾರ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾನ್ಯ ಮಾಡಲು, ಜನಪ್ರತಿನಿಧಿಗಳು ಹೇಳುತ್ತಿರುವ ತಾಂಂತ್ರಿಕ ಕಾರಣವನ್ನು ನಿವಾರಿಸುವಂತೆ ಜೈ ತುಳುನಾಡ್ ಸಂಘಟನೆಗಳು ಕಾರ್ಯಕರ್ತರು ಮಂಗಳವಾರ ಶ್ರೀಕ್ಷೇತ್ರದ ಧರ್ಮಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಂತರ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಡಾ: ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಿ, ತುಳುಮಾತೆಯ ಛಾಯಾಚಿತ್ರವನ್ನು ನೀಡಿ ಗೌರವಿಸಲಾಯಿತು.
ಹೆಗ್ಗಡೆ ಅವರು ತುಳುವನ್ನು ಅಧಿಕೃತ ಭಾಷೆಯನ್ನಾಗಿಸಲು ಖಂಡಿತ ಪ್ರಯತ್ನ ಪಡುವುದಾಗಿ ತಿಳಿಸಿದರು. ರಾಜ್ಯಸಭಾ ಸದಸ್ಯನಾಗಿ ನನಗೆ ತುಳು ಭಾಷೆಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಒಂದು ಒಳ್ಳೆಯ ಅವಕಾಶವನ್ನು ಒದಗಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಆಕಾಶ್ ರಾಜ್ ಜೈನ್, ಜೈ ತುಳುನಾಡ್ ಸಂಘಟನೆ ಅಧ್ಯಕ್ಷ ಅಶ್ವಥ್ ತುಳುವೆ, ಸ್ಥಾಪಕ ಸದಸ್ಯ ಕಿರಣ್ ತುಳುವೆ, ತುಲು ಸಾಹಿತ್ಯ - ಸಂಸ್ಕೃತಿ ಸಮಿತಿಯ ಕುಶಾಲಾಕ್ಷೀ ವಿ.ಕಣ್ವತೀರ್ಥ, ಉಪಸಂಘಟನಾ ಕಾರ್ಯದರ್ಶಿ ಪೃಥ್ವಿ ತುಳುವೆ, ಪ್ರಚಾರ ಸಮಿತಿಯ ವಿನಯ್ ರೈ ಕುಡ್ಲ, ತುಳುನಾಡು ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ., ಚಾವಡಿ ಕೂಟದ ಅಧ್ಯಕ್ಷ ಶೇಖರ್ ಗೌಡತ್ತಿಗೆ, ಬೊಲ್ತೇರ್ ತಾಲೂಕು ಕೂಟದ ಅಧ್ಯಕ್ಷ ರಾಜೇಶ್ ಕುಲಾಲ್, ತುಳುವೆರೆ ಪಕ್ಷ ಚಾವಡಿ ಕೂಟದ ಉಪಾಧ್ಯಕ್ಷ ನವೀನ್ ಪೂಜಾರಿ ಅಡ್ಕದಬೈಲು, ತುಳುವರೆ ಪಕ್ಷ ಕರಂಬಾರ್ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಕುಲಾಲ್, ಮುಗಿದು ಗ್ರಾಮ ಸಮಿತಿದ ಅಧ್ಯಕ್ಷ ಉಮೇಶ್ ಕುಲಾಲ್, ಮುಗೇರ್ ಗ್ರಾಮ ಸಮಿತಿದ ಅಧ್ಯಕ್ಷ ಅಶ್ವಥ್ ಕುಲಾಲ್, ಬೊಲ್ತೇರ್ ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ರಮೇಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.
ಜುಲೈ 24 : ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ
 (1) (1).jpg)
Posted On: 19-07-2022 11:29PM
ಕಾಪು : ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆ(ರಿ.), ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.) ಮುದರಂಗಡಿ ಇದರ ಸಹಭಾಗಿತ್ವದಲ್ಲಿ ಜುಲೈ 24ರಂದು ವಿದ್ಯಾ ಪೋಷಕ ನಿಧಿ (2022-23)ವಿದ್ಯಾರ್ಥಿ ವೇತನವನ್ನು ಸುಮಾರು 500ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಸುಮಾರು 70 ಲಕ್ಷ ಮೌಲ್ಯದ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಗಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಂಕೀರ್ಣದ ಮಾಧವ ಮಂಗಲ ಸಭಾಭವನದಲ್ಲಿ ಆಯೋಜಿಸಲಾಗಿದೆ. ಎಂದು ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾಪು ವೆಂಕಟರಮಣ ದೇವಳದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುಂಬಯಿಯ ಖ್ಯಾತ ಸುಪ್ರೀಂ ಕೋರ್ಟ್ ವಕೀಲರಾದ ರವಿಚಂದ್ರ ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈವೆಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಪಿ ರವೀಂದ್ರ ದಯಾನಂದ ಪೈಯವರು ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆ ಉಡುಪಿಯ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಪ್ರೈವೆಟ್ ಲಿಮಿಟೆಡ್ ಮೈಸೂರು ಇದರ ಪಾಲುದಾರರಾದ ಗೋವಿಂದ ಜಗನ್ನಾಥ ಶೆಣೈ, ಅಮೇರಿಕದ ವಾಷಿಂಗ್‌ಟನ್ ಡಿಸಿಯ ಇಂಡಿಯನ್ ಸಿಎ ಎಸೋಸಿಯೇಷನ್ ನ ಸ್ಥಾಪಕಾಧ್ಯಕ್ಷರು, ಹಾಗೂ ವಿಶ್ವ ಬ್ಯಾಂಕ್ ನ ಕಾರ್ಯನಿರ್ವಾಹಕರಾಗಿರುವ ಸಿಎ ಗೋಕುಲ್‌ದಾಸ್ ಪೈ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.)ಮುದರಂಗಡಿ ಇದರ ವಿಶ್ವಸ್ಥರಾದ ರತ್ನಾಕರ ಕಾಮತ್, ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಪಿ ರಾಮಚಂದ್ರ ಶೆಣೈರವರು ಭಾಗವಹಿಸಲಿದ್ದಾರೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಂಬಯಿಯ ಎಮ್.ವಿ. ಕಿಣಿ ಲಾ-ಫರ್ಮ್ ನ ಸಂಸ್ಥಾಪಕರಾದ ಖ್ಯಾತ ಸುಪ್ರೀಂ ಕೋರ್ಟ್ ನ ವಕೀಲರಾದ ಮಣಿಪುರ ವಸಂತ ಕಿಣಿ, ಭಾರತ ಸರಕಾರದ ನ್ಯಾಶನಲ್ ಬ್ಯಾಂಕ್ ಆಫ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ನ ಅಧ್ಯಕ್ಷರಾದ ಪದ್ಮಭೂಷಣ ಕೆ.ವಿ ಕಾಮತ್ ರವರ ದಿಕ್ಸೂಚಿ ಭಾಷಣ, ಮುಖ್ಯ ಅತಿಥಿಗಳಾಗಿ ಮುಂಬಯಿ ನ್ಯಾಚುರಲ್ ಐಸ್ ಕ್ರೀಂನ ಆಡಳಿತ ನಿರ್ದೇಶಕರಾದ ರಘುನಂದನ್ ಎಸ್. ಕಾಮತ್, ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹಳೆ ಮಾರಿಗುಡಿಯ ಆಡಳಿತ ಮೊಕ್ತೇಸರರಾದ ಶ್ರೀ ಪ್ರಸಾದ ಶೆಣೈ, ರಾಯಚೂರಿನ ಹೆಸರಾಂತ ಲೆಕ್ಕ ಪರಿಶೋಧಕರಾದ ಉಪ್ಪುಂದ ರಾಮಚಂದ್ರ ಪ್ರಭು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿಯ ತ್ರಷಾ ವಿದ್ಯಾಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ರವರಿಂದ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ ಹಾಗೂ ಭಾರತೀಯ ಸೇನೆಯಲ್ಲಿ ಯುವ ಜನರಿಗೆ ಲಭ್ಯವಿರುವ ಅವಕಾಶಗಳು, ಸವಾಲುಗಳು ಮತ್ತು ಕಾರ್ಗಿಲ್ ಹುತಾತ್ಮ ಮರಣೋತ್ತರ ಶೌರ್ಯಚಕ್ರ ಪುರಸ್ಕೃತ ಲೆ|ಕ| ಅಜಿತ್ ವಿ ಭಂಡಾರ್ಕಾರ್ ರವರ ಜೀವನ ಸಾಧನೆಯ ವಿಶೇಷ ಸಾಕ್ಷ್ಯಚಿತ್ರ ಮತ್ತು ವಿಶೇಷ ಉಪನ್ಯಾಸವನ್ನು ಬೆಂಗಳೂರಿನ ಶಕುಂತಲಾ ಭಂಡಾಕಾರ್ ರವರು ನಿರ್ವಹಿಸಲಿದ್ದಾರೆ. ಕಾರ್ಗಿಲ್ ಹುತಾತ್ಮ ಲೆ|ಕ|ಶೌರ್ಯಚಕ್ರ ಪುರಸ್ಕೃತ ಅಜಿತ್ ವಿ ಭಂಡಾರ್ಕಾರ್ ರವರ ಧರ್ಮಪತ್ನಿ ಶಕುಂತಲಾ ಎ. ಭಂಡಾರ್ಕಾರ್ ರವರಿಗೆ ವಿಶೇಷ ಸನ್ಮಾನ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿ, ನೀಟ್ ಮಾಡಲಾದ ಉನ್ನತ ವ್ಯಾಸಂಗದ ಪ್ರವೇಶ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಗೈದ ಜಿ.ಎಸ್.ಬಿ. ಸಮಾಜದ ವಿದ್ಯಾರ್ಥಿಗಳಿಗೆ ವಿಶೇಷ ಅಭಿನಂದನೆ ನಡೆಯಲಿದೆ ಎಂದರು.
ಈ ಸಂದರ್ಭ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷರಾದ ಜಿ. ಸತೀಶ್ ಹೆಗ್ಡೆ ಕೊಟ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಸಿಎ ಎಸ್ ಎಸ್ ನಾಯಕ್, ವಿಜಯಕುಮಾರ್ ಶೆಣೈ, ಸಿಎ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಶಿರ್ವ ವಿಶ್ವಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗದ ವತಿಯಿಂದ ಆಷಾಢ ಸಂಭ್ರಮ
.jpg)
Posted On: 19-07-2022 02:01PM
ಶಿರ್ವ : ಇಲ್ಲಿನ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗದ ವತಿಯಿಂದ ಶಿರ್ವದ ಹೋಟೆಲ್ ಮಂದಾರದ ಸಭಾಂಗಣದಲ್ಲಿ ನಡೆದ ಆಷಾಢ ಸಂಭ್ರಮ ಕಾರ್ಯಕ್ರಮವು ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮುದರಂಗಡಿ ನಿಶಾ ಕೊ. ಸೋ. ಲಿ. ಇದರ ಆಡಳಿತ ನಿರ್ದೇಶಕಿ ನಿಶಾ ಆಚಾರ್ಯ ಹಿಂದಿನ ಕಾಲದಲ್ಲಿ ಆಟಿ ತಿಂಗಳು ಹೇಗಿತ್ತು. ಈಗ ಹೇಗಿದೆ. ಅಂದಿನ ಬಡತನದ ಬದುಕೇ ಆಟಿಡೊಂಜಿ ದಿನ ಅಭಿಪ್ರಾಯಪಟ್ಟರು.
ಆಟಿ ತಿಂಗಳು ಮತ್ತು ಶ್ರಾವಣ ಮಾಸದ ಧಾರ್ಮಿಕ ಆಚರಣೆ ಬಗ್ಗೆ ಸಾಂತೂರು ವಿಶ್ವಕಲಾ ಮಹಿಳಾ ಮಂಡಲದ ಅಧ್ಯಕ್ಷೆ ವಸಂತಿ ಮೋಹನ ಆಚಾರ್ಯ ಮಾಹಿತಿ ನೀಡಿದರು. ಅಧ್ಯಕ್ಷರಾದ ಉಮೇಶ್ ಆಚಾರ್ಯರು ನಮ್ಮ ಹಿರಿಯರು ಯಾವ ರೀತಿಯಿಂದ ನಮ್ಮನ್ನು ಸಾಕಿ ಬೆಳೆಸಿದ್ದಾರೆ ಅದನ್ನು ನೆನಪಿಟ್ಟು ನಾವು ಬದುಕಬೇಕು ಎಂದು ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ತಿಳಿಸಿದರು.
ಗೌರವಾಧ್ಯಕ್ಷ ಸುರೇಶ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ, ಕಾರ್ಯದರ್ಶಿ ಪ್ರೀತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿದರು. ಕಾರ್ಯದರ್ಶಿ ಮಾಧವ ಆಚಾರ್ಯ ಸ್ವಾಗತಿಸಿದರು. ಶರ್ಮಿಳಾ ಆಚಾರ್ಯ ಪರಿಚಿಸಿದರು. ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ ವಂದಿಸಿದರು. ಪ್ರೀತಮ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಆಟಿಯ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಹಿಳಾ ಬಳಗದ ಸದಸ್ಯರು ಉಣ ಬಡಿಸಿದರು.
ಜಿಲ್ಲೆಯಲ್ಲಿ 8 ಲಕ್ಷ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ನೀಡಿಕೆ ಗುರಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 18-07-2022 07:42PM
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸಂಭಾವ್ಯ ನಾಲ್ಕನೇ ಅಲೆಯಿಂದ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 18 ರಿಂದ 59 ವರ್ಷದೊಳಗಿನ ಸಾರ್ವಜನಿಕರಿಗೆ ಸೆಪ್ಟಂಬರ್ 30 ರ ಒಳಗೆ 8 ಲಕ್ಷ ಕೋವಿಡ್-19 ಮುಂಜಾಗ್ರತಾ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ನಡೆದ, 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಉಚಿತ ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಮತ್ತು 2 ನೇ ಡೋಸ್ ಲಸಿಕೆ ನೀಡುವಲ್ಲಿ ಶೇಕಡಾ 100% ಸಾಧನೆ ಆಗಿದ್ದು, ಪ್ರಸ್ತುತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ನೀಡಲಾಗುತ್ತಿದ್ದು, ಎರಡನೇ ಡೋಸ್ ಪಡೆದು 6 ತಿಂಗಳು ದಾಟಿದ ಸಾರ್ವಜನಿಕರು ಜಿಲ್ಲೆಯಾದ್ಯಂತ ತಮ್ಮ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಬಹುದಾಗಿದೆ ಎಂದರು. ಜಿಲ್ಲೆಯ ಸಾರ್ವಜನಿಕರು ಕೋವಿಡ್-19 ಪ್ರಥಮ ಮತ್ತು 2 ನೇ ಡೋಸ್ನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿದ್ದ ಕಾರಣ ಕೋವಿಡ್ 3 ನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಕರಣಗಳು ಕಂಡುಬರಲಿಲ್ಲ. ಆದ್ದರಿಂದ ಸಂಭಾವ್ಯ ನಾಲ್ಕನೇ ಅಲೆಯಿಂದ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಪ್ಪದೇ ಮುನ್ನೆಚ್ಚರಿಕಾ ಡೋಸ್ ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ವಿವಿಧ ಸಂಘ ಸಂಸ್ಥೆಗಳು ಹಾಗೂ ನಾಗರೀಕರು ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡಿದ್ದು, ಮುನ್ನೆಚ್ಚರಿಕಾ ಡೋಸ್ ನೀಡಿಕೆಯಲ್ಲಿ 100% ಪ್ರಗತಿ ಸಾಧಿಸುವಲ್ಲಿ ಕೂಡಾ ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಾಧ್ಯಮ ಪ್ರತಿನಿಧಿಗಳು ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಲಸಿಕೆ ಪಡೆದರು. ಜಿಲ್ಲಾ ಕೋವಿಡ್ ಲಸಿಕಾ ಉಸ್ತುವಾರಿ ಡಾ.ಎಂ.ಜಿ.ರಾಮ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ. ಕೀರ್ತಿನಾಥ ಬಲ್ಲಾಳ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್ ವಂದಿಸಿದರು.
ಕಾಪು : ಬಿಜೆಪಿಯಿಂದ ರೈತ ಕಲ್ಯಾಣ ಯೋಜನೆಗಳ ಕರಪತ್ರ ಬಿಡುಗಡೆ ; ವಿದ್ಯಾರ್ಥಿಗಳಿಗೆ ಕೃಷಿ ಪ್ರಾತ್ಯಕ್ಷಿಕೆ

Posted On: 18-07-2022 06:20PM
ಕಾಪು : ಬಿಜೆಪಿಯ ಕಾಪು ಮಂಡಲ ರೈತ ಮೋರ್ಚಾ ಮತ್ತು ಗ್ರಾಮ ವಿಕಾಸ ಸಮಿತಿ ಪಟ್ಲ ಇವುಗಳ ಜಂಟಿ ಸಹಯೋಗದಲ್ಲಿ ಜುಲೈ 18ರಂದು ಪಟ್ಲದಲ್ಲಿ ಕೇಂದ್ರ ಸರ್ಕಾರದ ರೈತ ಕಲ್ಯಾಣ ಯೋಜನೆಗಳ ಕರಪತ್ರ ಬಿಡುಗಡೆ ಹಾಗೂ ನೇಜಿ ನಾಟಿಯ ಪ್ರಾತ್ಯಕ್ಷಿಕೆ ಕಾರ್ಯ ಜರಗಿತು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಯು.ಎಸ್.ನಾಯಕ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಗದ್ದೆಯಲ್ಲಿ ನೇಜಿ ನೆಟ್ಟು ಕೃಷಿಯ ಪ್ರತ್ಯಕ್ಷ ಅನುಭವ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕಾಪು ಮಂಡಲದ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮಂಡಲದ ರೈತ ಮೋರ್ಚಾ ಅಧ್ಯಕ್ಷ ಗುರುನಂದ ನಾಯಕ್, ರಾಜ್ಯ ಸಾವಯವ ಕೃಷಿ ನಿಗಮದ ನಿರ್ದೇಶಕ ರಾಘವೇಂದ್ರ ಉಪ್ಪೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧೀರಜ್ ಕೆ., ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಉಪಾಧ್ಯಕ್ಷರಾದ ಶೈಲೇಶ್ ಶೆಟ್ಟಿ ಮತ್ತು ಸುಬ್ರಮಣ್ಯ ಕರ್ಕೇರ, ಜಿಲ್ಲಾ ಉಸ್ತುವಾರಿಗಳಾದ ಪದ್ಮನಾಭ ಹೆಗಡೆ, ಯು.ಎಸ್.ನಾಯಕ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.
ಪಡುಬಿದ್ರಿ : ಆಟಿದ ಲೇಸ್ ಕಾರ್ಯಕ್ರಮ

Posted On: 18-07-2022 05:58PM
ಪಡುಬಿದ್ರಿ : ಇಲ್ಲಿನ ಬಿಲ್ಲವ ಸಮಾಜ ಸೇವಾಸಂಘದ ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಮಹಿಳಾ ಸ್ವಸಹಾಯ ಗುಂಪು ಇವರ ಆಶ್ರಯದಲ್ಲಿ ಜುಲೈ 17ರಂದು ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಆಟಿದ ಲೇಸ್ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮವನ್ನು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮತ್ತು ಕೋಶಾಧಿಕಾರಿ ಅಶೋಕ್ ಪೂಜಾರಿ ಪಾದೆಬೆಟ್ಟು ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಆಟಿಯ ತಿನಿಸುಗಳು ಮತ್ತು ಆಟಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆಯಿದೆ. ಆ ಮೂಲಕ ಆಟಿಯ ಆಚರಣೆಯು ಸಾರ್ಥಕತೆ ಪಡೆಯಲು ಸಾಧ್ಯ ಎಂದರು. ಮಹಿಳೆಯರಿಗೆ ಆಷಾಢ ಮಾಸದ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಈ ಸಂದರ್ಭ ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಇದರ ಅಧ್ಯಕ್ಷೆ ಸುಚರಿತ ಎಲ್ ಅಮೀನ್, ನಿಕಟಪೂರ್ವ ಅಧ್ಯಕ್ಷೆ ಚಿತ್ರಾಕ್ಷಿ ಕೆ ಕೋಟ್ಯಾನ್, ಶ್ರೀ ನಾರಾಯಣಗುರು ಸೇವಾದಳದ ದಳಪತಿ ಯೋಗೀಶ್ ಪೂಜಾರಿ ಮಾದುಮನೆ, ನಳಿನಿ ಜಯರಾಮ್, ಸರೋಜಿನಿ ಸಿ ಅಂಚನ್, ಜಯಂತಿ ಜಿ ಸುವರ್ಣ, ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಯುವವಾಹಿನಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಆಟಿ ತಿಂಗಳ ವಿಶೇಷ ಆಹಾರಗಳನ್ನು ಉಣ ಬಡಿಸಲಾಯಿತು.
ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಅಧ್ಯಕ್ಷೆ ಸುಚರಿತ ಎಲ್ ಅಮೀನ್ ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರೋಹಿಣಿ ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ.ವಿರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸಿದ ಗಣ್ಯರು

Posted On: 18-07-2022 05:45PM
ಕಾಪು : ರಾಜ್ಯಸಭೆಯ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ, ಪದ್ಮವಿಭೂಷಣ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಗುರ್ಮೆ ಫೌಂಡೇಶನ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಮ್.ಆರ್.ಜಿ ಗ್ರೂಪಿನ ಸ್ಥಾಪಕ ಅಧ್ಯಕ್ಷರಾದ ಕೆ.ಪ್ರಕಾಶ್ ಶೆಟ್ಟಿ, ಸಂತೋಷ್ ಶೆಟ್ಟಿ ಪೂನಾ, ಸುಧೀರ್ ಹೆಗ್ಡೆ ಬೈಲೂರು, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಸತೀಶ್ ಪೂಜಾರಿ ಉದ್ಯಾವರ ಉಪಸ್ಥಿತರಿದ್ದರು.
ಮಜೂರು : ರೈನ್ ಬೊ ಸೆಕ್ಟರ್ ಸಂಗಮ

Posted On: 18-07-2022 03:31PM
ಕಾಪು : ತಾಲೂಕಿನ ಮಜೂರು ಇಲ್ಲಿ ರೈನ್ ಬೊ ಸೆಕ್ಟರ್ ಸಂಗಮ ಜರಗಿತು. ಈ ಕಾರ್ಯಕ್ರಮವನ್ನು ಬಶೀರ್ ಉಸ್ತಾದ್ ರವರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಶಾಹುಲ್ ಹಮೀದ್ ನಈಮಿ ಉಸ್ತಾದ್ ರವರ ಮನಮೋಹಕ ಶೈಲಿಯ ದೀನಿತರಗತಿ,ಪುಟ್ಟಮಕ್ಕಳ ಮನಸ್ಸಿಗೆ ನಾಟುವಂತಿತ್ತು ಎಂದರು.
ಬಳಿಕ ನಡೆದ ಆಟೋಟಸ್ಪರ್ಧೆಯಲ್ಲಿ, ಪುಟಾಣಿ ಮಕ್ಕಳು ಅತ್ಯುತ್ಸಾಹದಲ್ಲಿ ಪಾಲ್ಗೊಂಡರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಟದ ಸ್ಪರ್ಧೆಯಲ್ಲಿ ಮಜೂರು ಶಾಖೆಯ ರೈನ್ ಬೊ ಮಕ್ಕಳು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ವಿನಯನಗರ ಶಾಖೆಯ ರೈನ್ ಬೊ ಮಕ್ಕಳು ರನ್ನರ್ ಅಪ್ ಆದರು. ಈ ಸಂದರ್ಭ ಪ್ರಮುಖರು ಉಪಸ್ಥಿತರಿದ್ದರು.