Updated News From Kaup
ಜಿಲ್ಲೆಯ ಅಸಂಘಟಿತ ಕಾರ್ಮಿಕರನ್ನು ಪಿಂಚಣಿ ಯೋಜನೆಗೆ ಸೇರ್ಪಡೆ ಮಾಡಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 15-07-2022 08:40PM
ಉಡುಪಿ : ಜಿಲ್ಲೆಯಲ್ಲಿನ ಎಲ್ಲಾ ಅರ್ಹ ಅಸಂಘಟಿತ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಹಾಗೂ ಇ-ಶ್ರಮ್ ಯೋಜನೆಯಲ್ಲಿ ನೋಂದಣಿ ಮಾಡುವಂತೆ ಕಾರ್ಮಿಕ ಇಲಾಖೆ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ನಿರ್ದೇಶನ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ ಹಾಗೂ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಮ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 18-40 ವರ್ಷದೊಳಗಿನ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಮಾಡುವ ಕುರಿತಂತೆ ಅಸಂಘಟಿತ ಕಾರ್ಮಿಕರ ವೃತ್ತಿವಾರು ಸಂಘಗಳೊಂದಿಗೆ ಸಮಾಲೋಚನೆ ನಡೆಸಿ, ನಿಗಧಿತ ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸಿ, ಎಲ್ಲಾ ಕಾರ್ಮಿಕರಿಗೆ ಈ ಯೋಜನೆಯ ಪ್ರಯೋಜನಗಳ ಕುರಿತು ಅರಿವು ಮೂಡಿಸಿ, ಸ್ಥಳದಲ್ಲೇ ನೋಂದಣಿ ಕಾರ್ಯವನ್ನು ಮಾಡುವ ಮೂಲಕ ಪಿಂಚಣಿ ಸೌಲಭ್ಯ ಪಡೆಯಲು ಯೋಜನೆಗೆ ಸೇರ್ಪಡೆ ಮಾಡುವಂತೆ ಹೇಳಿದರು. ಕಾರ್ಮಿಕರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಕಾರ್ಯಕ್ರಮ ಆಯೋಜನೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ಗಳು ತಮ್ಮ ವ್ಯಾಪ್ತಿಯಲ್ಲಿ ನಿಗಧಿತ ಸ್ಥಳ ಗುರುತಿಸಿ ಎಲ್ಲಾ ಅಗತ್ಯ ಸಹಕಾರವನ್ನು ನೀಡಬೇಕು ಹಾಗೂ ಈ ಕಾರ್ಯಕ್ರಮಕ್ಕೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಸಹಕಾರ ಪಡೆಯುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಯೋಜನೆಯಲ್ಲಿ ನೊಂದಣಿ ಮಾಡುವ ಕುರಿತಂತೆ ಎಲ್ಲಾ ಇಲಾಖೆಗಳು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಮಾಹಿತಿ ನೀಡಬೇಕು. ಅಲ್ಲದೇ ನೋಂದಣಿ ಶಿಬಿರಗಳನ್ನು ಆಯೋಜಿಸಿ, ಇ-ಶ್ರಮ್ ನೋಂದಣಿಯ ಪ್ರಯೋಜನಗಳ ಬಗ್ಗೆ ಕಾರ್ಮಿಕ ಇಲಾಖೆ ಮತ್ತು ಅಸಂಘಟಿತ ಕಾರ್ಮಿಕ ವಲಯದ ವಿವಿಧ ವೃತ್ತಿಗಳ ನಾಮ ನಿರ್ದೇಶಿತ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಕಾರ್ಮಿಕರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದರು. ಜುಲೈ 25 ರ ನಂತರ ಜಿಲ್ಲೆಯಾದ್ಯಂತ ಕಾರ್ಮಿಕರ ಇ-ಶ್ರಮ್ ನೊಂದಣಿ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಗೆ ಸೇರ್ಪಡೆ ಮಾಡುವ ಕುರಿತಂತೆ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ, ಅರ್ಹ ಎಲ್ಲಾ ಕಾರ್ಮಿಕರನ್ನು ನೊಂದಣಿ ಮಾಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಕುರಿತೂ ಸಹ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು. ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಹಾಗೂ ಇ-ಶ್ರಮ್ನಲ್ಲಿ ನೋಂದಾಯಿಸಲು ಕಾರ್ಮಿಕರು ಶಿಬಿರಗಳಲ್ಲಿ ಮಾತ್ರವಲ್ಲದೇ ತಮ್ಮ ಸಮೀಪದ ಕಾಮನ್ ಸರ್ವೀಸ್ ಸೆಂಟರ್ಗಳಲ್ಲೂ ಸಹ ನೋಂದಾಯಿಸಬಹುದಾಗಿದೆ ಎಂದರು. ಅಸಂಘಟಿತ ಕಾರ್ಮಿಕ ವಲಯದಲ್ಲಿನ ಬೀದಿ ಬದಿ ವ್ಯಾಪಾರಿಗಳು, ಹಮಾಲಿಗಳು, ಮನೆ ಕೆಲಸ ಮಾಡುವವರು, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಗೃಹ ಆಧಾರಿತ ಕಾರ್ಮಿಕರು ಸೇರಿದಂತೆ ಇತರೆ ವಿವಿಧ ವೃತ್ತಿಯಲ್ಲಿರುವವರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಯೋಜನೆಯಲ್ಲಿ ಸೇರ್ಪಡೆಯಾಗುವ ಮೂಲಕ 60 ವರ್ಷದ ನಂತರ ಕನಿಷ್ಠ 3000 ರೂ. ಖಚಿತ ಮಾಸಿಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ವಿವಿಧ ಅನುಷ್ಠಾನಾಧಿಕಾರಿಗಳು ಹಾಗೂ ಅಸಂಘಟಿತ ಕಾರ್ಮಿಕ ವಲಯದ ವಿವಿಧ ವೃತ್ತಿಗಳ ನಾಮ ನಿರ್ದೇಶಿತ ಸದಸ್ಯರುಗಳು ಉಪಸ್ಥಿತರಿದ್ದರು
ಶಿರ್ವ : ಸ್ಪರ್ಧೆಗಳಿಂದ ಪ್ರತಿಭೆಗಳ ಅನಾವರಣ
.jpg)
Posted On: 13-07-2022 02:57PM
ಶಿರ್ವ: ಇಂದು ನಾವು ಸ್ಪರ್ಧಾತ್ಮಕ ಮತ್ತು ತಾಂತ್ರಿಕ ಯುಗದಲ್ಲಿ ಇದ್ದೇವೆ. ಪ್ರತಿಯೊಂದು ಉದ್ಯೋಗ ಕ್ಷೇತ್ರದಲ್ಲಿ ಅನೇಕ ಅವಕಾಶಗಳಿದ್ದು ಅದನ್ನು ಪಡೆಯುವುದರಲ್ಲಿ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಪಡೆದುಕೊಳ್ಳಲು ವಿವಿಧ ಸ್ಪರ್ಧೆಗಳ ಅವಶ್ಯಕತೆ ಇಂದು ಅನಿವಾರ್ಯವಾಗಿದೆ . ಪ್ರತಿಯೊಂದು ಸ್ಪರ್ಧೆಯು ಯುವ ಪೀಳಿಗೆಗಳಿಗೆ ಜೀವನದ ಕೌಶಲ್ಯ ಜೊತೆಗೆ ವ್ಯಕ್ತಿತ್ವ ವಿಕಸನವನ್ನು ರೂಪಿಸುವಲ್ಲಿ ಸಹಕಾರಿಯಾಗಲಿದೆ, ತನ್ಮೂಲಕ ಪ್ರತಿಭೆಗಳ ಅನಾವರಣ ಆಗಲಿದೆ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಬಿಸಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ ಟೆಕ್ ಮಂತನ 22 ಐಟಿ ಕಾಂಪಿಟೇಶನ್ಸ್ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ವಿಜೇತರಿಗೆ ಪ್ರಮಾಣ ಪತ್ರ ಜೊತೆಗೆ ಬಹುಮಾನಗಳನ್ನು ವಿತರಿಸಿದರು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಟೆಕ್ ಮಂತನ್ 22 ಐಟಿ ಕಾಂಪಿಟೇಶನ್ಸ್ ಬಗ್ಗೆ ಮಾರ್ಗದರ್ಶನ ನೀಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಕೌಶಲ್ಯಗಳನ್ನು ವೃದ್ಧಿಸುವ ರಸಪ್ರಶ್ನೆ,ಚರ್ಚೆ ಕೋಡಿಂಗ್, ಗೇಮಿಂಗ್,ರಂಗೋಲಿ,ಅಣುಕು ಸಂದರ್ಶನ, ಪೋಸ್ಟರ್ ತಯಾರಿಕೆ, ಪವರ್ಪಾಯಿಂಟ್ ಪ್ರಸ್ತುತಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಕೆಂಜಾರ್ನಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೇಮಿಂಗ್ ಕಾಂಪಿಟೇಶನ್ ನಲ್ಲಿ 1500 ನಗದು ಬಹುಮಾನ ಪಡೆದು ವಿಜೇತರಾದ ದೇವಿ ಪ್ರಸಾದ್ ಶೆಟ್ಟಿ, ಹಾರ್ದಿಕ್ ಸಾಲಿಯಾನ್, ವರ್ಷಿತ್ ಶೆಟ್ಟಿ ಹಾಗೂ ಡೆನ್ಸನ್ ಬ್ರೈನ್ ನಜರೆತ್ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಮಾನ್ವಿತ ಎಸ್ ಸುವರ್ಣ, ಪದ್ಮಶ್ರೀ ಭಟ್, ರಾಯ್ಸನ್ ಜೋಸೆಫ್ ಬರ್ಬೋಜಾ , ನಿವೇದಿತಾ ನಿಖಿಲ್ ಪೂಜಾರಿ, ಪ್ರತ್ವಿನ್ ಬಂಗೇರ ಈ ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
.jpg)
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಿವ್ಯಶ್ರೀ ಬಿ, ಪ್ರಕಾಶ್, ಪ್ರಣಿತ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
.jpg)
ಪ್ರೀತಿಕಾ ಬಹುಮಾನ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಾದ ಸನತ್ ಕುಮಾರ್ ಶೆಟ್ಟಿ, ರಕ್ಷಿತ್ ಪೂಜಾರಿ,ಅನುಪ್ ನಾಯಕ ಸಹಕರಿಸಿದರು. ಪ್ರಿಯಾಂಕ ಪ್ರಾರ್ಥಿಸಿದರು. ಸೃಷ್ಟಿ ಸ್ವಾಗತಿಸಿ, ವಿಧಾತ್ ಶೆಟ್ಟಿ ವಂದಿಸಿದರು. ಎಲ್ರುಶಾ ಮೆಲಿನಾ ಡಿಸಾ ಕಾರ್ಯಕ್ರಮ ಸಂಯೋಜಿಸಿದರು.
ಕಾಪು : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಹೃದಯಾಘಾತ

Posted On: 12-07-2022 11:14PM
ಕಾಪು : ಮಂಗಳೂರಿನಿಂದ ಗುಲ್ಬರ್ಗಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಪು ಸಮೀಪದ ಉದ್ಯಾವರದಲ್ಲಿ ಜುಲೈ 11 ರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯು ಕನಕಪ್ಪ ದಂಡಿನ (38) ತನ್ನ ಹೆಂಡತಿ ದುರ್ಗವ್ವಳೊಂದಿಗೆ ಕಳೆದ 2 ತಿಂಗಳಿನಿಂದ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ಬಂದು ಮಂಗಳೂರಿನ ಪಂಪ್ ವೆಲ್ ಬಳಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಮಳೆಯಾದ ಕಾರಣ ಸ್ವಂತ ಊರಿನಲ್ಲಿ ಕೃಷಿ ಕೆಲಸ ಆರಂಭವಾದ ಕಾರಣ ಮಂಗಳೂರಿನಿಂದ ಬಸ್ಸಿನಲ್ಲಿ ಊರಿಗೆ ಹೊರಟು ಕಾಪುವಿನ ಉದ್ಯಾವರ ಸಮೀಪ ರಾತ್ರಿ ಕನಕಪ್ಪ ದಂಡಿನಗೆ ಎದೆನೋವು ಕಾಣಿಸಿಕೊಂಡಿದ್ದು ದುರ್ಗವ್ವ ಬಸ್ಸಿನ ಕಂಡೆಕ್ಟರ್ ಗೆ ತಿಳಿಸಿ ಅವರು ಚಾಲಕರಿಗೆ ತಿಳಿಸಿ ನಂತರ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಉಡುಪಿಯ ವೈದ್ಯಾಧಿಕಾರಿಯವರಿಗೆ ತೋರಿಸಿ ಪರೀಕ್ಷಿಸಿದಾಗ ವೈದ್ಯರು ಕನಕಪ್ಪ ದಂಡಿನ ಎಂಬುವರು ಎದೆನೋವು ಕಾಣಿಸಿಕೊಂಡು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ಕುಲಾಲ ಸಮುದಾಯ ಭವನಕ್ಕೆ ನಿವೇಶನ ಒದಗಿಸಲು ಮುಖ್ಯಮಂತ್ರಿಗೆ ಮನವಿ

Posted On: 12-07-2022 09:23PM
ಕಾಪು : ಕುಲಾಲ ಸಮಾಜದ ಬಹು ದಿನದ ಕನಸು ಕಾಪು ಕುಲಾಲ ಸಮುದಾಯ ಭವನ. ಇದಕ್ಕಾಗಿ ನಿವೇಶನ ಒದಗಿಸುವಂತೆ ಇತ್ತೀಚಿಗೆ ಮುಖ್ಯಮಂತ್ರಿ ಉಡುಪಿ ಭೇಟಿ ಸಮಯ ಮನವಿ ನೀಡಲಾಯಿತು. ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ ಮನವಿ ಸಲ್ಲಿಸಿದರು.
ಕುಲಾಲ ಸಮಾಜದ ಬಂಧುಗಳು ಅಂದಿನ ಇಂದಿನವರೆಗೂ ಮಡಿಕೆ ತಯಾರಿ ವೃತ್ತಿಯನ್ನು ಮಾಡಿಕೊಂಡು ಅತೀ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಇತಿಹಾಸದ ಪುಟ ಬಿಚ್ಚಿದಾಗ ಕುಂಬಾರ ಸಮುದಾಯದವರು ನೂರಾರು ವರ್ಷಗಳ ಮುಂಚೆಯೇ ತಮ್ಮ ನೆಲೆಯನ್ನು ಹೊಂದಿರುವರು ಎಂದು ತಿಳಿದು ಬರುತ್ತದೆ. ತಮ್ಮ ಮೂಲ ವೃತ್ತಿ ಮಡಿಕೆ ಮಾಡಲು ಈಗಿನ ಆಧುನಿಕ ಯುಗದಲ್ಲಿ ಮಡಿಕೆಯ ಅವಶ್ಯಕತೆ ಇಲ್ಲದ ಕಾರಣ ಪರ್ಯಾಯ ಉದ್ಯೋಗ ಅರಸಿ ಹೋಗಿ ಜೀವನ ಸಾಗಿಸಲು ಚಿಂತಿತ ಮನೋಭಾವ ಹೊಂದಿರುದು ಕಟು ಸತ್ಯ.
ಈ ಬಾರಿಯಯಾದರು ಅತೀ ಬೇಗನೆ ಕಾಪು ಕುಲಾಲ ಸಮುದಾಯ ಭವನ ನಿರ್ಮಿಸಲು ನಿವೇಶನ ದೊರಕಲಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ✍ ಯು.ಕೆ
ಚಿತ್ರಕಲಾ ಶಿಕ್ಷಕ ರಮೇಶ್ ಆಚಾರ್ಯ ಬಂಟಕಲ್ಲು ರಚಿಸಿದ ತುಳುನಾಡಿನ ಭೂತಾರಾಧನೆ ಮುಖವಾಡ( ಮೊಗ) ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ
 (1).jpg)
Posted On: 12-07-2022 07:33PM
ಕಾಪು : ತಾಲೂಕಿನ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ವಾಸವಾಗಿರುವ ರಮೇಶ್ ಆಚಾರ್ಯ ಬಂಟಕಲ್ಲು ಇವರು ರಚಿಸಿದ 7ಪೀಟ್ ಉದ್ದ 5ಪೀಟ್ 11ಇಂಚು ಅಗಲದ ಸೆಣಬು ನಾರಿನ ಚೌಕಟ್ಟಿನೊಳಗೆ ಡ್ರಾಯಿಂಗ್ ಶೀಟ್ ಗಂ, ಸರಿಗೆ ಮತ್ತು ಬಣ್ಣಗಳನ್ನು ಉಪಯೋಗಿಸಿ ತುಳುನಾಡಿನ ಭೂತಾರಾಧನೆ ಮುಖವಾಡ(ಮೊಗ) ವನ್ನು ರಚಿಸಿದ್ದು ಜನಮನ ಗೆದ್ದು ,ಜೂನ್10, 2022ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿರುತ್ತದೆ
ಇವರು ರೋಟರಾಕ್ಟ್ ಕ್ಲಬ್ ಶಿರ್ವದಲ್ಲಿ ಸದಸ್ಯರಾಗಿ ಉಪಾಧ್ಯಾಕ್ಷರಾಗಿ, ರೋಟರಾಕ್ಟ್ ಕ್ಲಬ್ 92 ಹೇರೂರು, ಬಂಟಕಲ್ಲು ಇದರ ಸ್ಥಾಪಕ ಅಧ್ಯಕ್ಷನಾಗಿ ಶಿರ್ವ ಚೇಸಿಯ ಅಧ್ಯಕ್ಷನಾಗಿ ಬಡ ಕುಟುಂಬಕ್ಕೆ ಉಚಿತ ಮನೆ ನಿರ್ಮಿಸಿ ಕೊಟ್ಟು ಹಲವಾರು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ. 200ರಕ್ಕೂ ಮಿಕ್ಕಿ ಕಲಾಶಿಬಿರಗಳನ್ನು ಮಾಡಿ, ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿರುತ್ತಾರೆ. ತನ್ನ ಮಗನ ಉಪನಯನದ ಸಂದರ್ಭ ವಿಶ್ವಕರ್ಮ ಸಮಾಜದ 10 ಮಂದಿ ವಟುಗಳಿಗೆ ಉಚಿತ ಉಪನಯನ ಮಾಡಿರುತ್ತಾರೆ.
ಇವರ ಪ್ರತಿಭೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿರುತ್ತದೆ. ಬಸವ ರತ್ನ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಇವರಿಗೆ ಶಿಕ್ಷಣ ಇಲಾಖೆಯು ಸಾಧಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ.
ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು, ಬೆಳ್ಳಣ್ಣು ಇಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಇದ್ದು ಇತ್ತೀಚೆಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಚಿತ್ರಕಲಾ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳು ಶೇಕಡ 100 ಫಲಿತಾಂಶ ತಂದಿದ್ದು, 4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ.
ಯುವವಾಹಿನಿ ಕಾಪು ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ

Posted On: 12-07-2022 07:10PM
ಕಾಪು : ಪರಿಸರದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಯುವವಾಹಿನಿ ಕಾಪು ಘಟಕದ ವತಿಯಿಂದ ಕಾಪು ಬಿಲ್ಲವರ ಸಹಾಯಕ ಸಂಘದ ಸಭಾಭವನದಲ್ಲಿ ಸನ್ಮಾನಿಸಲಾಯಿತು. ಕಾಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡ 90% ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ.
ಕಾಪು ಯುವವಾಹಿನಿ ಘಟಕದ ಅಧ್ಯಕ್ಷ ಸಚಿನ್ ಉಚ್ಚಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಎರ್ಮಾಳು ಅಭಿನಂದನಾ ಭಾಷಣ ಮಾಡಿದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ನೇಹ ಜೆ. ಎರ್ಮಾಳ್, ಆಶಿಕಾ ಕಾಪು, ನಿಷ್ಮಾ ಆರ್. ಕಾಪು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಕ್ಷತಾ ಕಾಪು, ಅನುಷ್ಕಾ ಕಾಪು, ಚೇತನ್ ಕಾಪು, ಭಾವಿಕ್ ಕಾಪು, ಸಮೀಕ್ಷಾ ಎರ್ಮಾಳ್ ಅವರನ್ನು ಸಮ್ಮಾನಿಸಲಾಯಿತು.
ಕಾಪು ಬಿಲ್ಲವರ ಸಹಾಯಕ ಸಂಘದ ಉಪಾಧ್ಯಕ್ಷರುಗಳಾದ ಮಧು ಪಾಲನ್, ಸಕೇಂದ್ರ ಸುವರ್ಣ, ಐತಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಸಾಲಿಯಾನ್, ಯುವವಾಹಿನಿ ಕಾಪು ಘಟಕದ ಉಪಾಧ್ಯಕ್ಷರಾದ ಶಶಿಧರ್ ಸುವರ್ಣ, ಭವಾನಿ ಶೇಖರ್, ಕೋಶಾಧಿಕಾರಿ ಸೂರ್ಯ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.
ಯುವವಾಹಿನಿ ಕಾಪು ಘಟಕದ ನಿಕಟ ಪೂರ್ವ ಅಧ್ಯಕ್ಷೆ ಸೌಮ್ಯ ರಾಕೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬೋಳ : ದೇವಳದ ಮೂರ್ತಿ, ನಗದು ಕಳವು

Posted On: 11-07-2022 07:25PM
ಕಾರ್ಕಳ : ತಾಲೂಕು ಬೋಳ ಗ್ರಾಮದ ಬೋಳ ಕೋಡಿಯಲ್ಲಿರುವ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೂರ್ತಿ, ನಗದು, ಡಿವಿಆರ್ ನ್ನು ಕಳವುಗೈದ ಪ್ರಕರಣ ನಡೆದಿದೆ.
ಕಳ್ಳರು ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳ ಕೋಡಿಯಲ್ಲಿರುವ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಮರದ ಮತ್ತು ಕಬ್ಬಿಣದ ಬಾಗಿಲುಗಳಿಗೆ ಹಾಕಿದ ಬೀಗಗಳನ್ನು ಯಾವುದೋ ಸಲಕರಣೆಯಿಂದ ಮುರಿದು ಒಳ ಪ್ರವೇಶಿಸಿ, ದೇವಸ್ಥಾನದ ಗರ್ಭಗುಡಿಯ ಬಾಗಿಲಗೆ ಹಾಕಿದ ಬೀಗವನ್ನು ಯಾವುದೇ ಸಲಕರಣೆಯಿಂದ ಮುರಿದು ದೇವರ ಪೀಠದಲ್ಲಿ ಇರಿಸಿದ್ದ ಪುರಾತನ ಪಂಚಲೋಹದ ಬಲಿ ಮೂರ್ತಿ, ಗಣಪತಿ ಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಅದರೊಳಗೆ ಇರಿಸಿದ್ದ ಸುಮಾರು 5,000/- ರೂಪಾಯಿ ಮೌಲ್ಯದ ಗಣಪತಿಯ ಬೆಳ್ಳಿಯ ಮುಖವಾಡ, ತೀರ್ಥ ಮಂಟಪದ ಬಳಿ ಇರಿಸಿದ್ದ ಕಬ್ಬಿಣದ ಕಾಣಿಕೆ ಡಬ್ಬಿಯ ಬಾಗಿಲನ್ನು ಯಾವುದೋ ಸಲಕರಣೆಯಿಂದ ಮೀಟಿ ತೆರೆದು, ಅದರೊಳಗೆ ಇದ್ದ ನಗದು ಅಂದಾಜು 45,000-50,000 ರೂಪಾಯಿಗಳನ್ನು (ನೋಟುಗಳು ಮಾತ್ರ) ಹಾಗೂ ದೇವಸ್ಥಾನ ಕಛೇರಿಯ ಒಳಗೆ ಅಳವಡಿಸಿದ್ದ ಸುಮಾರು 9000/- ರೂಪಾಯಿ ಮೌಲ್ಯದ HIK VISION ಕಂಪೆನಿಯ DVR ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಈ ಬಗ್ಗೆ ಶ್ರೀನಿವಾಸ ಭಟ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆಯಿಂದ ಹಾನಿಗೊಳಗಾದ ಭತ್ತದ ಬೆಳೆಗೆ ಶೀಘ್ರ ಪರಿಹಾರ ಒದಗಿಸಿ : ಸಚಿವೆ ಶೋಭಾ ಕರಂದ್ಲಾಜೆ

Posted On: 11-07-2022 06:37PM
ಉಡುಪಿ : ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಭಿತ್ತನೆ ಮಾಡಿದ ಭತ್ತದ ಬೆಳೆಯು ಹಾನಿಯಾಗಿದ್ದು, ರೈತರಿಗೆ ಹಾನಿಯ ಮೊತ್ತವನ್ನು ಶೀಘ್ರದಲ್ಲಿಯೇ ಒದಗಿಸಬೇಕು. ಅವರು ಮತ್ತೊಮ್ಮೆ ಭಿತ್ತನೆ ಮಾಡಲು ಅಗತ್ಯಕ್ಕನುಗುಣವಾಗಿ ಭಿತ್ತನೆ ಬೀಜವನ್ನು ಸಮರ್ಪಕವಾಗಿ ವಿತರಣೆ ಮಾಡಲು ಮುಂದಾಗಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂಬಂಧಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಜೂನ್ ನಲ್ಲಿ ವಾಡಿಕೆ ಮಳೆಗಿಂತ ಶೇ.31 ರಷ್ಟು ಕಡಿಮೆ ಮಳೆಯಾಗಿ ಜುಲೈ 1 ರಿಂದ ಈವರೆಗೆ ವಾಡಿಕೆ ಮಳೆಗಿಂತ ಶೇ.136 ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಳೆದ ವರ್ಷದಲ್ಲಿ ಕುಂಠಿತ ಮಳೆಯಿಂದಾಗಿ ಭಿತ್ತನೆ ಕಾರ್ಯಗಳು ನಿಗದಿತ ಪ್ರಮಾಣದಲ್ಲಿ ಆಗದೇ ಜೂನ್ ಕೊನೆಯ ವಾರದಲ್ಲಿ ಹಾಗೂ ಜುಲೈ ಮೊದಲ ವಾರದಲ್ಲಿ ಭಿತ್ತನೆ ಕಾರ್ಯಗಳು ಚುರುಕುಗೊಂಡಿದ್ದು, ಇದುವರೆಗೆ 13526 ಹೆಕ್ಟೇರ್ ಭಿತ್ತನೆ ಆಗಿದ್ದು, ಕಳೆದ 4-5 ದಿನಗಳಿಂದ ಸುರಿದ ಹೆಚ್ಚಿನ ಮಳೆಯಿಂದಾಗಿ ಅಂದಾಜು 1300 ಹೆಕ್ಟೇರ್ಗೂ ಅಧಿಕ ಬೆಳೆಹಾನಿ ಉಂಟಾಗಿದೆ ಎಂದರು.
ಮಳೆಯ ಪ್ರಮಾಣ ತಗ್ಗಿದ ನಂತರ ಬೆಳೆಹಾನಿಯನ್ನು ನಿಖರವಾಗಿ ಗುರುತಿಸಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಒದಗಿಸುವುದರ ಜೊತೆಗೆ ಸ್ಥಳೀಯವಾಗಿ ಬೇಡಿಕೆಯಿರುವ ಎಂ.ಓ.4 ಭಿತ್ತನೆ ಬೀಜವನ್ನು ರೈತರಿಗೆ ಸಹಾಯಧನದ ಅಡಿಯಲ್ಲಿ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮಳೆಯಿಂದಾಗಿ ಕಡಲಕೊರೆತ ಉಂಟಾಗಿ ಸಮುದ್ರ ತೀರದಲ್ಲಿರುವ ಮೀನುಗಾರರಲ್ಲಿ ಆತಂಕ ಉಂಟಾಗಿದೆ. ಕಡಲ ಕೊರೆತ ಉಂಟಾಗದಂತೆ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಬೇಕು. ಪ್ರಸ್ತುತ ಎನ್.ಡಿ.ಆರ್.ಎಫ್ ನಿಯಮಾವಳಿಯಲ್ಲಿ ಕಡಲ ಕೊರೆತ ಕಾಮಗಾರಿಗಳಿಗೆ ಅವಕಾಶವಿರುವುದಿಲ್ಲ. ಇದನ್ನು ಈ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಮಾಹಿತಿ ನೀಡಿದಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಅತಿಯಾದ ಮಳೆಯಿಂದಾಗಿ ರಸ್ತೆಗಳು, ಶಾಲೆಗಳು, ಅಂಗನವಾಡಿ, ಸರ್ಕಾರಿ ಕಟ್ಟಡಗಳು, ಸೇತುವೆಗಳು ಸೇರಿದಂತೆ ಮತ್ತಿತರ ಶಾಶ್ವತ ಕಾಮಗಾರಿಗಳಿಗೆ ಹಾನಿ ಉಂಟಾಗಿದ್ದು, ಇದರ ಹಾನಿಯ ಮೊತ್ತವನ್ನು ನಿಖರವಾಗಿ ಗುರುತಿಸಿ ಸರ್ಕಾರಕ್ಕೆ ವರದಿ ನೀಡಬೇಕಂದು ಸೂಚನೆ ನೀಡಿದ ಅವರು, ಗ್ರಾಮೀಣ ಭಾಗದ ರಸ್ತೆಗಳನ್ನು ಜಿಲ್ಲಾ ಪಂಚಾಯತ್ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿದಲ್ಲಿ ಶೀಘ್ರದಲ್ಲಿ ದುರಸ್ತಿಗೆ ಅನುಕೂಲವಾಗಲಿದೆ ಎಂದರು. ಗ್ರಾಮೀಣ ಭಾಗದಲ್ಲಿ ಮೊಬೈಲ್ ಸಿಗ್ನಲ್ಗಳು ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಟವರ್ಗಳಿಗೆ ವಿದ್ಯುಚ್ಛಕ್ತಿ ಸರಬರಾಜಿನ ಕೊರತೆಯಿಂದಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯ ಬಾಕಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಜಿಲ್ಲಾಡಳಿತದಿಂದ ಗುರುತಿಸಲಾಗಿರುವ ಅಪಘಾತ ಸ್ಥಳಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಂಡು ವಾಹನಗಳು ಸುರಕ್ಷಿತವಾಗಿ ಚಾಲನೆ ಆಗುವಂತೆ ನೋಡಿಕೊಳ್ಳಬೇಕು. ಕಾಲ ಕಾಲಕ್ಕೆ ರಸ್ತೆ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯ ಸೇರ್ಪಡೆಗೆ ಶಿಕ್ಷಣ ಸಚಿವರಿಂದ ಅಧಿಕಾರಿಗಳಿಗೆ ಸೂಚನೆ

Posted On: 11-07-2022 06:15PM
ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಿದ್ದು ಅದರ ಬದಲು ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸುವಂತೆ ಹಲವು ಪ್ರತಿಭಟನೆಗಳು ನಡೆದಿತ್ತು. ಇಂದು ಸಚಿವರಾದ ವಿ ಸುನಿಲ್ ಕುಮಾರ್ ಮತ್ತು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದು ಅಧಿಕಾರಿಗಳಿಗೆ ಕನ್ನಡ ಭಾಷೆಯಲ್ಲಿ ಅಳವಡಿಸಿದ್ದನ್ನು ಕೈ ಬಿಟ್ಟು ತಕ್ಷಣ ಸಮಾಜ-ವಿಜ್ಞಾನ ವಿಷಯದ ಪಠ್ಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ವಿಷಯ ಅಳವಡಿಸುವಂತೆ ಸರ್ಕಾರಿ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮೂಳೂರು : ಕಡಲ್ಕೊರೆತ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ
.jpg)
Posted On: 11-07-2022 04:08PM
ಕಾಪು : ಇಲ್ಲಿನ ಮೂಳೂರು ಭಾಗದ ಕಡಲ್ಕೊರೆತ ಸ್ಥಳಕ್ಕೆ ಕೇಂದ್ರ ಸಚಿವೆ ಮತ್ತು ಉಡುಪಿ ಜಿಲ್ಲಾ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ , ಇಲಾಖಾ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.