Updated News From Kaup

ಉಚ್ಚಿಲ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಡೆಗೋಡೆ ನಿರ್ಮಾಣಕ್ಕೆ ಧನಸಹಾಯ

Thumbnail
Posted On: 04 Sep 2022, 01:27 PM

ಉಚ್ಚಿಲ : ಕಾಪು ತಾಲೂಕಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಬಡಾ ಉಚ್ಚಿಲದ ತಡೆಗೋಡೆ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2,50,000 ರೂಪಾಯಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಯೋಜನಾಧಿಕಾರಿಯಾದ ಜಯಂತಿ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಎರ್ಮಾಳು, ತೆಂಕ : ಕಾಲಾವಧಿ ಹೂವಿನ ಪೂಜೆ

Thumbnail
Posted On: 04 Sep 2022, 12:58 PM

ಎರ್ಮಾಳು : ಶ್ರೀ ಬ್ರಹ್ಮಬೈದರ್ಕಳ ಗರೋಡಿ ಎರ್ಮಾಳು, ತೆಂಕ ಇಲ್ಲಿ ರವಿವಾರ ಕಾಲಾವಧಿ ಹೂವಿನ ಪೂಜೆಯು ವಿಜ್ರಂಭಣೆಯಿಂದ ಜರಗಿತು. ಈ ಸಂದರ್ಭ ಆಡಳಿತ ಮೊಕ್ತೇಸರರಾದ ವೈ ಜಯಕರ , ಸೇವಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಡುಬಿದ್ರಿ : ಮಾದಕ ವ್ಯಸನಿಗಳು ಪೊಲೀಸ್ ವಶಕ್ಕೆ

Thumbnail
Posted On: 03 Sep 2022, 10:09 PM

ಪಡುಬಿದ್ರಿ : ಕಾಪು ತಾಲೂಕಿನ ಬಡಾ ಗ್ರಾಮದ ಬಾಂಗ್ಲ ಎಂಬಲ್ಲಿ ಈರ್ವರನ್ನು ಮತ್ತು ನಡ್ಸಾಲು ಗ್ರಾಮದ ಕಂಚಿನಡ್ಕದಲ್ಲಿ ಒರ್ವನನ್ನು ಮಾದಕ ವಸ್ತು ಸೇವಿಸಿ ಅಮಲಿನಲ್ಲಿ ತೂರಾಡುತ್ತಿದ್ದ ಬಗ್ಗೆ ಅನುಮಾನಗೊಂಡು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗಸ್ಟ್ 30ರಂದು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪುರುಷೋತ್ತಮ ಎ ಕಾಪು ತಾಲೂಕು ಬಡಾ ಗ್ರಾಮದ ಬಾಂಗ್ಲ ಎಂಬಲ್ಲಿ ಮಹಮ್ಮದ್‌ ಫವಾಜ್‌ (18), ಮಹಮ್ಮದ್‌ ಅಫ್ಜಲ್‌(22) ಮತ್ತು ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಗುರುನಾಥ ಆರ್‌ (23) ಎಂಬುವವರ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದುಕೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು ಮೂವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ಸೆಪ್ಟೆಂಬರ್ 02 ರಂದು ವೈದ್ಯರು ದೃಢಪಡಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ : ಕ್ರಿಯೇಟಿವ್ ಪಿ ಯು ಕಾಲೇಜಿನ ಸುಜ್ಞಾನ್ ಎಂ ಆರ್ ಗೆ ಆರ್.ಐ.ಇ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ

Thumbnail
Posted On: 02 Sep 2022, 04:35 PM

ಕಾರ್ಕಳ : ಇಲ್ಲಿನ ಕ್ರಿಯೇಟಿವ್ ಪಿ ಯು ಕಾಲೇಜಿನ ಸುಜ್ಞಾನ್ ಎಂ ಆರ್ ಗೆ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಆರ್.ಐ.ಇ)ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಲಭಿಸಿದೆ. ಮೂಲವಿಜ್ಞಾನ ಶಿಕ್ಷಣಕ್ಕೆ ಸೇರಬಯಸುವವರಿಗಾಗಿ ನಡೆಸಲಾಗುವ ರಾಷ್ಟ್ರಮಟ್ಟದ ಪರೀಕ್ಷೆಯಾದ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಬಿ ಎಸ್ ಸಿ ಪದವಿ ವಿದ್ಯಾಭ್ಯಾಸಕ್ಕೆ ನಡೆಸಲಾಗುವ ಪರೀಕ್ಷೆಯಲ್ಲಿ ಸುಜ್ಞಾನ್ ಎಂ ಆರ್ ಈ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಪದವಿ ನಂತರ ಉಪನ್ಯಾಸಕರಾಗುವವರಿಗಾಗಿಯೇ ತರಬೇತಿ ನೀಡುವ ಸಂಸ್ಥೆಯಾಗಿರುವ ಆರ್ ಐ ಇ ನ ಅಡಿಯಲ್ಲಿ ಅತ್ಯುತ್ತಮ ತರಬೇತಿಯನ್ನು ನೀಡುವ ಸಂಸ್ಥೆಯಾಗಿದೆ. ಸುಜ್ಞಾನ್ ಎಂ.ಆರ್ ನ ಈ ಅಪೂರ್ವ ಸಾಧನೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು,ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ. ಸುಜ್ಞಾನ್ ತೀರ್ಥಹಳ್ಳಿಯ ರಾಜೇಂದ್ರ ಮತ್ತು ಸುಮಾ ದಂಪತಿಯ ಪುತ್ರ.

ಮಹಾರಾಷ್ಟ್ರ ಲೀಡರ್‌ಶಿಪ್ ಆವಾರ್ಡ್-2022 ಪುರಸ್ಕೃತರಾದ ತೋನ್ಸೆ ಆನಂದ್ ಎಂ.ಶೆಟ್ಟಿ

Thumbnail
Posted On: 02 Sep 2022, 03:59 PM

ಕಾಪು : ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷರು-ಆಡಳಿತ ನಿರ್ದೇಶಕರಾದ ತೋನ್ಸೆಯ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಫೆಡರೇಶನ್ ಆಫ್ ವರ್ಲ್ಡ್ ಬಂಟ್‌ಸ್‌ ಅಸೋಸಿಯೇಶನ್‌ಸ್‌ನ ಟ್ರಸ್ಟಿ ಆಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ತೋನ್ಸೆ ಆನಂದ್ ಎಂ.ಶೆಟ್ಟಿಯವರು ಪುಣೆ ಟೈಮ್ಸ್ ಮಿರರ್ ಪ್ರಾಯೋಜಿತ ಮಹಾರಾಷ್ಟ್ರ ಲೀಡರ್‌ಶಿಪ್ ಆವಾರ್ಡ್-2022 ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್‌ ಕೊಶ್ಯಾರಿ ಅವರು ತೋನ್ಸೆ ಆನಂದ್ ಎಂ.ಶೆಟ್ಟಿಯವರಿಗೆ ಮಹಾರಾಷ್ಟ್ರ ಲೀಡರ್‌ಶಿಪ್ ಆವಾರ್ಡ್-2022 ನೀಡಿ‌ ಪುರಸ್ಕರಿಸಿದರು‌.

ಉಡುಪಿಯಲ್ಲಿ ನಡೆಯಲಿರುವ ಬೃಹತ್ ದುರ್ಗಾ ದೌಡ್ ಕಾರ್ಯಕ್ರಮದ ಸ್ಟಿಕ್ಕರ್ ಬಿಡುಗಡೆ

Thumbnail
Posted On: 02 Sep 2022, 03:47 PM

ಕಾಪು : ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ಅಕ್ಟೋಬರ್ 2 ರಂದು ಉಡುಪಿಯಲ್ಲಿ ನಡೆಯಲಿರುವ ಬೃಹತ್ "ದುರ್ಗಾ ದೌಡ್" ಕಾರ್ಯಕ್ರಮದ ಸ್ಟಿಕ್ಕರ್ ಗಳನ್ನು ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಕಾಪು ಪೇಟೆಯಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ರಿಂದ ಹೈಮಾಸ್ಕ್ ದೀಪ ಉದ್ಘಾಟನೆ

Thumbnail
Posted On: 02 Sep 2022, 03:31 PM

ಕಾಪು : ಇಲ್ಲಿನ ಪುರಸಭಾ ವತಿಯಿಂದ ಮೂರು ಲಕ್ಷ ರೂ. ಅನುದಾನದಲ್ಲಿ ಕಾಪು ಪೇಟೆಯಲ್ಲಿ ನೂತನವಾಗಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಗುರುವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಾಪು ಪೇಟೆಯ ಮಾರುಕಟ್ಟೆಗೆ ಪ್ರವೇಶಿಸುವ ಪ್ರದೇಶವು ಸಂಪೂರ್ಣ ಕತ್ತಲಿನಲ್ಲಿದ್ದ ಈ ಬಗ್ಗೆ ಸ್ಥಳೀಯ ವ್ಯಾಪಾರಸ್ಥರು ಮತ್ತು ಪುರಸಭಾ ಸದಸ್ಯರ ಬೇಡಿಕೆಯಿತ್ತು. ಅದರಂತೆ ಪುರಸಭೆ ಅಧಿಕಾರಿಗಳು ಕೂಡಾ ಪ್ರಸ್ತಾವನೆ ಸಲ್ಲಿಸಿದ್ದು ಅದರಂತೆ ಹೈಮಾಸ್ಕ್ ದೀಪ ಅಳವಡಿಸಲಾಗಿದೆ. ಕಾಪು ಪುರಸಭೆ ವ್ಯಾಪ್ತಿಯ ಇನ್ನೂ ಎರಡು ಪ್ರದೇಶಗಳಲ್ಲಿ ಹೈಮಾಸ್ಕ್ ದೀಪ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಅರುಣ್ ಶೆಟ್ಟಿ ಪಾದೂರು, ಶೈಲೇಶ್ ಅಮೀನ್, ರತ್ನಾಕರ ಶೆಟ್ಟಿ, ನಾಗೇಶ್, ಫರ್ಜಾನ, ಶೋಭಾ ಬಂಗೇರ, ರಾಧಿಕಾ ಸುವರ್ಣ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷ ಯೋಗೀಶ್ ರೈ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಇಂಜಿನಿಯರ್ ನಯನ್ ತಾರಾ, ಕಾಪು ಪುರಸಭೆ ವ್ಯಾಪ್ತಿ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಸ್ಥಳೀಯರಾದ ಎಚ್. ಅಬ್ದುಲ್ಲಾ, ಅಬ್ದುಲ್ ನಜೀರ್, ಪಿ.ಕೆ. ಹೈದರ್ ಮಲ್ಲಾರು, ಜಗದೀಶ್ ಮೆಂಡನ್, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಮಂಗಳೂರು ಭೇಟಿ ; ಸಂಚಾರ ಬದಲಾವಣೆ ; ಸಾಲುಗಟ್ಟಿ ನಿಂತ ಘನ ವಾಹನಗಳು

Thumbnail
Posted On: 02 Sep 2022, 12:39 PM

ಪಡುಬಿದ್ರಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಮಂಗಳೂರಿಗೆ ಭೇಟಿ ಹಿನ್ನೆಲೆಯಲ್ಲಿ ಪಡುಬಿದ್ರಿ ಜಂಕ್ಷನ್ ಬಳಿ ಎಲ್ಲಾ ಸಾರ್ವಜನಿಕ ವಾಹನಗಳನ್ನು, ಘನ ವಾಹನಗಳನ್ನು ಕಾರ್ಕಳ ರಸ್ತೆಯ ಮೂಲಕ ಸಾಗಲು ತಿಳಿಸಲಾಗುತ್ತಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸರು ಸಾರ್ವಜನಿಕರಿಗೆ ತಿಳಿಯಲು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಡುಬಿದ್ರೆ ಜಂಕ್ಷನ್ ಮುಖಾಂತರ ಬೆಂಗಳೂರು ಮತ್ತು ಕೇರಳಕ್ಕೆ ಸಂಚರಿಸುವ ವಾಹನಗಳು ಬೆಳ್ಳಣ್ಣು - ಕಾರ್ಕಳ -ಬೆಳುವಾಯಿ- ಮೂಡಬಿದ್ರೆ– ಬಿ.ಸಿ.ರೋಡ್ ಮುಖೇನ ಸಂಚರಿಸಬೇಕೆಂದು ಪಡುಬಿದ್ರಿ ಜಂಕ್ಷನ್ ಬಳಿ ಬ್ಯಾನರ್ ಅಳವಡಿಸಿದ್ದಾರೆ. ಹಲವಾರು ಚಾಲಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುವುದು ಕಂಡು ಬಂದಿದೆ. ಕಾರ್ಕಳ ರಸ್ತೆಯ ಇಕ್ಕೆಲಗಳಲ್ಲಿ ಘನವಾಹನಗಳು ಜಾಮ್ ಆಗಿದ್ದು, ವಾಹನ ಚಾಲಕರು ಬದಲಿ ಮಾರ್ಗವಾಗಿ ಸಂಚರಿಸುವುದು ವಿಳಂಬವಾಗುವುದರಿಂದ ಸಂಜೆ 6 ಗಂಟೆಯವರೆಗೆ ಕಾದು ನಂತರ ಮುಂದುವರಿಯುವ ನಿರೀಕ್ಷೆಯಲ್ಲಿದ್ದಾರೆ. ಪಡುಬಿದ್ರಿ ಪಿಎಸ್ಐ ಪ್ರಕಾಶ್, ಸಾಲಿಯಾನ್ ದಿವಾಕರ್, ಹರೀಶ್, ರಾಜೇಶ್, ಹೈವೇ ಪಟ್ರೋಲ್ ಮತ್ತು ಗೃಹರಕ್ಷಕ ಸಿಬ್ಬಂದಿ ಹೆದ್ದಾರಿಯಲ್ಲಿ ಬಂದೋಬಸ್ತ್ ಮಾಡುತ್ತಿದ್ದಾರೆ.

ಕಾಪು : ಅನಾರೋಗ್ಯದಿಂದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಯುವಕರು

Thumbnail
Posted On: 02 Sep 2022, 09:32 AM

ಕಾಪು : ಇಲ್ಲಿನ ಮಲ್ಲಾರು ಕೊಂಬ ಗುಡ್ಡೆಯಲ್ಲಿ ವಾಸವಾಗಿದ್ದ ಅನಾರೋಗ್ಯದಿಂದ ಇದ್ದ ಒಂಟಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಕಾಪುವಿನ ಯುವಕರು ಮಾನವೀಯತೆ ಮೆರೆದಿದ್ದಾರೆ. ಆಶಾ ಕಾರ್ಯಕರ್ತೆ ಉಷಾ ಮಲ್ಲಾರು ಮಾಹಿತಿಯ ಮೇರೆಗೆ ಕಾಪುವಿನ ಮಲ್ಲಾರು ಕೊಂಬ ಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಲೀಲಾವತಿ ಪೂಜಾರಿಯವರನ್ನು ಸಮಾಜ ಸೇವಕರಾದ ಪ್ರಶಾಂತ್ ಪೂಜಾರಿ ಮತ್ತವರ ತಂಡ ಉಡುಪಿಯ ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳಿಲ್ಲದ ಲೀಲಾವತಿ ಪೂಜಾರಿಯವರ ಪತಿ ತೀರಿಕೊಂಡಿದ್ದು, ಕೊಂಬಗುಡ್ಡೆಯ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇದೀಗ ಅವರು ಅನಾರೋಗ್ಯಗೊಂಡಿದ್ದು, ವಾರೀಸುದಾರರಿಲ್ಲದ ಲೀಲಾವತಿಯವರನ್ನು ಪ್ರಶಾಂತ್ ಪೂಜಾರಿ ಮತ್ತು ಅವರ ಸಂಗಡಿಗರು ಉಡುಪಿಯ ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂದರ್ಭ ಪುರಸಭಾ ಸದಸ್ಯ ಉಮೇಶ್ ಪೂಜಾರಿ ಮಲ್ಲಾರು, ಸಚಿನ್ ಶೆಟ್ಟಿ, ಶಿವಾನಂದ ಪೂಜಾರಿ, ಶ್ಯಾರೊನ್ ನಿಶಿತ ಮಲ್ಲಾರು, ಆಶಾ ಕಾರ್ಯಕರ್ತೆ ಉಷಾ ಮಲ್ಲಾರು, ಉಮೇಶ್ ಕರ್ಕೇರ, ಮಲ್ಲಾರು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಸಹಕರಿಸಿದ್ದಾರೆ.

ಅದಮಾರು :ಶಾಲೆಗೆ ಸಿಡಿಲು ಬಡಿದು ಲಕ್ಷಾಂತರ ರೂ. ನಷ್ಟ

Thumbnail
Posted On: 01 Sep 2022, 05:16 PM

ಅದಮಾರು : ಇಲ್ಲಿನ ೯೮ ವರ್ಷ ಪೂರೈಸಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ರಾತ್ರಿ ಸಿಡಿಲು ಬಡಿದಿದ್ದು, ಬುಧವಾರ ಚೌತಿ ಪ್ರಯುಕ್ತ ರಜೆ ಇದ್ದ ಕಾರಣ ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಹಿಂಬದಿಯ ಗೋಡೆಗೆ ಸಿಡಿಲು ಬಡಿದಿದ್ದು, ಸಿಡಿಲಿನ ಆಘಾತಕ್ಕೆ ವಿದ್ಯುತ್ ವಯರಿಂಗ್, ಸಿ ಸಿ ಕ್ಯಾಮರಾ, ಇನ್‌ವರ್ಟರ್, ಅಕ್ವಾಗಾರ್ಡ್ ಸಹಿತ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ನೀರಿನ ನಳ್ಳಿಗೆ ಹಾನಿ ಉಂಟಾಗಿ ಶಾಲೆಯಲ್ಲಿ ನೀರಿಲ್ಲದ ಪರಿಸ್ಥಿತಿ ಉಂಟಾಗಿ ಮದ್ಯಾಹ್ನದ ಬಿಸಿಯೂಟ ಮಾಡುವಂತಿಲ್ಲ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿಯವರು ದೂರವಾಣಿಯ ಮೂಲಕ ವಿದ್ಯಾಂಗ ಇಲಾಖಾಧಿಕಾರಿ ಶಂಕರ ಸುವರ್ಣರವರನ್ನು ಸಂಪರ್ಕಿಸಿ, ಸಮಗ್ರ ಮಾಹಿತಿ ನೀಡಿದರು. ಅಧಿಕಾರಿಯವರು ಗುರುವಾರ ಶಾಲೆಗೆ ರಜೆ ಘೋಷಿಸಿದ್ದಾರೆ. ಸ್ಥಳೀಯರಾದ ಸದಾನಂದ ಆಚಾರ್ಯರವರು ಮಕ್ಕಳನ್ನು ಅವರವರ ಮನೆಗೆ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಎಲ್ಲೂರು ಗ್ರಾಮಕರಣಿಕ ಸುನಿಲ್ ಭೇಟಿ ನೀಡಿ ನಷ್ಟದ ಅಂದಾಜನ್ನು ಕಾಪು ತಹಶಿಲ್ದಾರ್ ಅವರಿಗೆ ಕಳುಹಿಸಿದ್ದಾರೆ. ಈ ಸಂದರ್ಭ ಮುಖ್ಯ ಶಿಕ್ಷಕಿ ದೇವಿಕಾ, ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ಕುಂಜೂರು, ಸ್ಥಳೀಯರಾದ ಸಂತೋಷ್ ಶೆಟ್ಟಿ ಬರ್ಪಾಣಿ, ಮತ್ತಿತರರು ಉಪಸ್ಥಿತರಿದ್ದರು.