Updated News From Kaup
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು : ಶಾಸಕ ಕೆ. ರಘುಪತಿ ಭಟ್

Posted On: 18-06-2022 11:06PM
ಉಡುಪಿ : ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ತಂಡದ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಸಾರ್ವಜನಿಕರ ಎಲ್ಲಾ ಸಮಸ್ಯೆಗಳಿಗೆ ಶೀಘ್ರದಲ್ಲಿ ನ್ಯಾಯಯುತ ಪರಿಹಾರ ಒದಗಿಸಲು ಸಾಧ್ಯವಾಗಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು. ಅವರು ಇಂದು ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮ ವ್ಯಾಪ್ತಿಯ ಪೇತ್ರಿ ಯುವಕ ಮಂಡಲ ವಠಾರದಲ್ಲಿ, ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ತಮ್ಮ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಳಿ ಬರುತ್ತಾರೆ. ಈ ಸಮಸ್ಯೆಗಳ ಪರಿಹಾರದ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ತಂಡದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಸಾರ್ವಜನಿಕರಿಗೆ ಸೂಕ್ತ ಸೇವೆ ಒದಗಿಸಲು ಸಾಧ್ಯವಿದೆ. ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ದೊರೆತರೆ ಮಾತ್ರ ಸರಕಾರ ಮತ್ತು ಆಡಳಿತ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು ಎಂದರು. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಸರ್ಕಾರವು ದೂರದ ಗ್ರಾಮೀಣ ಪ್ರದೇಶದ ಜನರ ಬಳಿ ತೆರಳಿ ಅವರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸುವುದರಿಂದ ಜನರಿಗೆ ತುಂಬಾ ಉಪಯುಕ್ತವಾಗಿದೆ. ಜಿಲ್ಲಾಧಿಕಾರಿಗಳು ನೇರವಾಗಿ ಜನರನ್ನು ಭೇಟಿ ಮಾಡುವುದರಿಂದ ಅವರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ, ಉಪಯುಕ್ತ ಮಾಹಿತಿ ನೀಡುವುದರಿಂದ ಜನರ ಸಮಸ್ಯೆಗಳನ್ನು ಬೇಗನೇ ಸರಿಪಡಿಸಬಹುದು ಎಂದರು. ಪರಿಶಿಷ್ಟ ವರ್ಗದ ಜನರು ಅಧಿಕವಾಗಿರುವ ಚೇರ್ಕಾಡಿ ಗ್ರಾಮದಲ್ಲಿ, ಗ್ರಾಮಸ್ಥರಿಗೆ ಅಗತ್ಯ ದಾಖಲೆ ಪತ್ರಗಳನ್ನು ಪಡೆಯಲು ತೊಂದರೆಗಳಿದ್ದು, ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು. ರಸ್ತೆ ಕಾಮಗಾರಿಗೆ ಸಂಬಂಧಿಸಿದ ಇರುವ ಗಡಿರೇಖೆಯ ನಿಯಮಗಳು ಅವೈಜ್ಞಾನಿಕವಾಗಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಈ ಬಗ್ಗೆ ಇರುವ ನಿಯಮಗಳ ಕುರಿತು ಅಧಿಕಾರಿಗಳು ಸಂಬAಧಪಟ್ಟ ಹಿರಿಯ ಅಧಿಕಾರಿಗಳ ಮೂಲಕ ನಿರ್ದೇಶನಗಳನ್ನು ಪಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನುಷ್ಠಾನಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸದರೆ ಸಾರ್ವಜನಿಕರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಹಾಗೂ ಒಳ್ಳೆಯ ಭಾವನೆ ಮೂಡಲಿದೆ. ಜನತೆಗೆ ಉತ್ತಮ ಸೇವೆ ಒದಗಿಸುವ ಬಗ್ಗೆ ಅಧಿಕಾರಿಗಳು ಸಂಕಲ್ಪ ಮಾಡಬೇಕು. ಚೇರ್ಕಾಡಿ ಭಾಗದಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ಹಕ್ಕುಪತ್ರಗಳಲ್ಲಿನ ಬದಲಾವಣೆ, 11ಇ ನಕ್ಷೆ ತಿದ್ದುಪಡಿ ಹಾಗೂ ಪೌತಿ ಖಾತೆಗಳನ್ನು ಸರಿಪಡಿಸಲು, ಜನನ ಮರಣ ಪ್ರಮಾಣ ಪತ್ರ ವಿತರಿಸಲು ವಿಶೇಷ ಅಭಿಯಾನ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವಂತೆ ಇಂದಿನ ಕಾರ್ಯಕ್ರಮದಲ್ಲಿಯೇ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು. ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದ ಗ್ರಾ,ಪಂ.ಸದಸ್ಯ ಹರೀಶ್ ಶೆಟ್ಟಿ, ರಸ್ತೆ ನಿರ್ಮಾಣದ ನಿಯಮಗಳ ಸರಳೀರಣದ ಅಗತ್ಯತೆ ಬಗ್ಗೆ ಹೇಳಿದರು. ಗ್ರಾ,.ಪಂ.ಸದಸ್ಯ ಕಮಲಾಕ್ಷ ಹೆಬ್ಬಾರ್ ಮಾತನಾಡಿ, ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ, ಅವರಿಗೆ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದರೂ ಹೆಚ್ಚಿನ ಗುರಿ ದೊರೆಯುತ್ತಿಲ್ಲ. ಇದರಿಂದ ಹಲವು ಮಂದಿ ಮನೆಯಿಲ್ಲದೆ ವಂಚಿತರಾಗಿದ್ದಾರೆ. ಗ್ರಾಮದಲ್ಲಿ 600 ಕ್ಕೂ ಹೆಚ್ಚು ಹೈನುಗಾರರಿದ್ದು, ಇಲ್ಲಿನ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಪೂರ್ಣಕಾಲಿಕ ಪಶು ವೈದ್ಯರನ್ನು ನೇಮಿಸಬೇಕು ಮತ್ತು ಕಂದಾಯ ಸೇವೆಗಳನ್ನು ಸಮರ್ಪಕವಾಗಿ ನೀಡಲು ಪೂರ್ಣಕಾಲಿಕ ಗ್ರಾಮ ಲೆಕ್ಕಿಗರನ್ನು ನೇಮಿಸಬೇಕು ಎಂದರು.
ಈ ಬಗ್ಗೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಜಿಲ್ಲೆಯ ಇತರೆ ಪಂಚಾಯತ್ನಲ್ಲಿರುವ ಹೆಚ್ಚುವರಿ ಮನೆ ನಿರ್ಮಾಣದ ಗುರಿಯನ್ನು ಒಂದು ವಾರದ ಒಳಗೆ ಈ ಪಂಚಾಯತ್ಗೆ ವರ್ಗಾಯಿಸುವ ಕುರಿತು ಆದೇಶ ಮಾಡಿ, ಮನೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎನ್ನುವ ಮೂಲಕ ಹಲವು ವರ್ಷಗಳ ಪರಿಶಿಷ್ಟ ವರ್ಗದ ಜನರ ವಸತಿ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು. ಹಾಲು ಕರೆಯುವ ಯಂತ್ರ, ಹಸು ಘಟಕ ನಿರ್ಮಾಣಕ್ಕೆ ಸಹಾಯಧನ, 26 ಮಂದಿಗೆ ಸಂಧ್ಯಾ ಸುರಕ್ಷಾ, 9 ಮಂದಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ಪಡಿತರ ಚೀಟಿ, ಮನೆ ಮಂಜೂರಾತಿ ಸೌಲಭ್ಯಗಳನ್ನು ಒದಗಿಸಲಾಯಿತು. ಕಂದಾಯ ಇಲಾಖೆಗೆ ಸಂಬಂಧಿಸಿದ 27, ಪಂಚಾಯತ್ ಗಳಿಗೆ ಸಂಬಂಧಿಸಿದ 15 ಅರ್ಜಿಗಳು ಸೇರಿದಂತೆ 55 ಕ್ಕೂ ಅಧಿಕ ಅರ್ಜಿಗಳ ವಿಚಾರಣೆ/ ವಿಲೇವಾರಿ ನಡೆಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದ ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನಡೆಸಿದ ಮಾಹಿತಿ ಶಿಕ್ಷಣ ಸಂವಹನ ಸ್ಪರ್ಧೆಯ ಲಕ್ಕಿ ಡ್ರಾ ವಿಜೇತ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು ಹಾಗೂ ಡೆಂಗ್ಯೂ, ಮಲೇರಿಯಾ ಕೋವಿಡ್ ಬಗ್ಗೆ ಅರಿವು ಮೂಡಿಸಲಾಯಿತು. ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರ ಮೂರ್ತಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಭಟ್, ಗ್ರಾಮ ಉಪಾಧ್ಯಕ್ಷ ಕಿಟ್ಟಪ್ಪ ಅಮೀನ್, ಕುಂದಾಪುರ ಡಿ.ಎಫ್.ಓ ಆಶೀಶ್ ರೆಡ್ಡಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕ ರವೀಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗೋವಿಂದ ಮಡಿವಾಳ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಶಂಕರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹೆಚ್.ಇಬ್ರಾಹಿಂ ಪೂರ್, ಆಹಾರ ಇಲಾಖೆ ಉಪನಿರ್ದೇಶಕ ಮೊಹಮದ್ ಇಸಾಕ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹೆಜಮಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು : ಶಾಸಕ ಲಾಲಾಜಿ ಆರ್ ಮೆಂಡನ್

Posted On: 18-06-2022 06:14PM
ಹೆಜಮಾಡಿ : ಇಲ್ಲಿನ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಈಗಾಗಲೇ 12 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಅನುದಾನವನ್ನು ನೀಡಲಾಗಿದೆ ಹೆಜಮಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಮುಖ್ಯ ರಸ್ತೆಗಳನ್ನು ಮೀನುಗಾರಿಕಾ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಹೇಳಿದರು. ಅವರು ಹೆಜಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿದ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಜಮಾಡಿ ಗ್ರಾಮ ಪಂಚಾಯತ್ಗೆ ಜೈ ಹಿಂದ್ ಪ್ರೈವೇಟ್ ಲಿ. ಕಂಪೆನಿಯು ತನ್ನ ಸಿಎಸ್ ಆರ್ ನಿಧಿಯಿಂದ ಕೊಡಮಾಡಲ್ಪಟ್ಟ ಘನ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲನೆಯನ್ನು ನೀಡಿದರು.
ಇತ್ತೀಚೆಗೆ ಮೀನುಗಾರಿಕೆಯ ಸಂದರ್ಭ ಮೃತಪಟ್ಟ ಸಂತೋಷ್ ಕುಟುಂಬಸ್ಥರಿಗೆ ಮೀನುಗಾರಿಕಾ ಇಲಾಖೆಯ ಸಂಕಷ್ಟ ಪರಿಹಾರ ನಿಧಿಯಿಂದ 6 ಲಕ್ಷ ರೂ.ಗಳ ಪರಿಹಾರ ಧನದ ಚೆಕ್, ಪಂಚಾಯತ್ ವ್ಯಾಪ್ತಿಯ 94ಸಿ ಹಕ್ಕುಪತ್ರ, ಬಸವ ವಸತಿ ಹಾಗೂ ಅಂಬೇಡ್ಕರ್ ನಿಗಮದ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ಮಂಜೂರಾತಿ ಪತ್ರವನ್ನು, ಪ್ರಾಕೃತಿಕ ವಿಕೋಪ ನಿಧಿ ಚೆಕ್, ವೃದ್ಧಾಪ್ಯ ವೇತನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕಾಪು ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ ಗಿರೀಶ್, ಪಡುಬಿದ್ರಿ ಪೊಲೀಸ್ ಉಪನಿರೀಕ್ಷಕ ಪುರುಷೋತ್ತಮ, ಜಲ ಜೀವನ್ ಮಿಷನ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಿರೀಶ್ ಶೇಟ್, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ್ ಖಾರ್ವಿ, ಜಿಲ್ಲಾಪಂಚಾಯತ್ ಸಹಾಯಕ ಇಂಜಿನಿಯರ್ ಸುನಿಲ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮತಿ, ತೋಟಗಾರಿಕೆ ಇಲಾಖೆ ಅಧಿಕಾರಿ ಅಮಿತ್ ಸಿಂಪಿ, ಕೃಷಿ ಇಲಾಖೆ ಅಧಿಕಾರಿ ಶೇಖರ್, ಪಡುಬಿದ್ರಿ ಎಸ್ ಸಿ ಝಡ್ ಜನರಲ್ ಮೆನೇಜರ್ ಅಶೋಕ್ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಯಿಯ ತೀವ್ರ ಅನಾರೋಗ್ಯದ ನಡುವೆಯೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಕಾರ್ತಿಕ್

Posted On: 18-06-2022 05:16PM
ಉಡುಪಿ : ಇಲ್ಲಿನ ಎಂಜಿಎಂ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ಶೆಣೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 584 (97.33)ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾನೆ.

ಕಾರ್ತಿಕ್ ಅವರ ತಾಯಿ ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ. ಕ್ಯಾನ್ಸರ್ ಪೀಡಿತ ತಾಯಿಯ ನೋವು ಒಂದೆಡೆಯಾದರೆ, ಹಣಕಾಸಿನ ತೀವ್ರ ತೊಂದರೆಯ ನಡುವೆಯೂ ಶ್ರೇಷ್ಠ ಸಾಧನೆ ಮಾಡಿರುವುದು ಗಮನಾರ್ಹ.
ಉಡುಪಿ : ಹಲಸು ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳ

Posted On: 18-06-2022 05:10PM
ಉಡುಪಿ : ಹಲಸು ಬೆಳೆಗಾರರು ಗ್ರಾಹಕರಿಗೆ ನೇರವಾಗಿ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಪಡೆಯಲು ಹಲಸು ಮೇಳ ಕಾರ್ಯಕ್ರಮವು ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರ ಎಸ್. ನಾಯಕ್ ಹೇಳಿದರು ಅವರು ಇಂದು ದೊಡ್ಡಣ ಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದದಲ್ಲಿ ನಡೆದ ಹಲಸು ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

ರೈತರು ತಾವು ಬೆಳೆದಂತಹ ಹಲಸನ್ನು ಸಗಟು ಮಾರಾಟಗಾರರಿಗೆ ಅಲ್ಪ ಮೊತ್ತಕ್ಕೆ ಮಾರಾಟ ಮಾಡಿ ಆರ್ಥಿಕ ನಷ್ಟವನ್ನು ಹೊಂದುತ್ತಿದ್ದರು. ಇವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಲಸು, ಮಾವು ಸೇರಿದಂತೆ ಮತ್ತಿತರ ಉತ್ಪನ್ನಗಳ ಮೆಳಗಳನ್ನು ನಡೆಸುತ್ತಿದೆ. ರೈತ ಭಾಂಧವರು ಇಂತಹ ಮೇಳಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಮೇಳದಲ್ಲಿ ತೂಬುಗೆರೆಯ ಹಲಸು , ಚೇಳೂರು ಭಾಗದ ಚಂದ್ರ ಹಲಸು ಸೇರಿದಂತೆ ಕೆಂಪು ರುದ್ರಾಕ್ಷಿ ಹಲಸು, ಹಳದಿ ಹಲಸು, ಏಕಾದಶಿ ಹಲಸು, ಶಿವರಾತ್ರಿ ಹಲಸು ಜೊತೆಗೆ ಹಲಸಿನ ಹಣ್ಣಿನ ಪದಾರ್ಥಗಳಾದ ಹಪ್ಪಳ, ಹೋಳಿಗೆ, ಹಲಸಿನ ಕಡಬು, ಹಲಸಿನ ಕಾಯಿ ಕಬಾಬ್, ಹಲಸಿನ ಬೀಜದ ಬಿಸ್ಕೆಟ್ ಮುಂತಾದವುಗಳ ಮಾರಾಟವಿತ್ತು. ಕಲ್ಪರಸ ಹಾಗೂ ಅದರ ಉತ್ಪನ್ನಗಳು, ಜಿಲ್ಲೆಯ ಅಪರೂಪದ ಬೆಳೆಗಳಲ್ಲೊಂದದ ರಂಬೂಟಾನ್ ಹಣ್ಣು, ಜೊತೆಗೆ ಶುದ್ಧ ಜೇನುತುಪ್ಪವು ಲಭ್ಯವಿತ್ತು.
ಕಾರ್ಯಕ್ರಮದಲ್ಲಿ ಸಿಇಓ ಪ್ರಸನ್ನ ಎಚ್. ಮಾತನಾಡಿ, ಸರ್ಕಾರ ಹಲಸು ಬೆಳೆಗೆ ಪ್ರೋತ್ಸಾಹ ನೀಡಲು ಅನೇಕ ಯೋಜನೆಗಳನ್ನು ರೂಪಿಸಲು ಚಿಂತಿಸಿದೆ ಅದರ ಭಾಗವಾಗಿ ಹಲಸು ಮೇಳವು ಒಂದಾಗಿದೆ. ಸಾರ್ವಜನಿಕರು ತಮಗೆ ಇಷ್ಟವಾದ ನಮೂನೆಯ ಹಲಸನ್ನು ಮೇಳಗಳಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಈ ಮೇಳವು 2 ದಿನಗಳವರೆಗೆ ನಡೆಯಲಿದ್ದು, ರೈತರು ತಾವು ಬೆಳೆದ ಹಲಸನ್ನು ನೇರವಾಗಿ ಮಾರಾಟ ಮಾಡಲಿದ್ದಾರೆ ಎಂದರು . ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಮತ್ತಿರರರು ಉಪಸ್ಥಿತರಿದ್ದರು.
ಕುತ್ಯಾರು : ಅಸೆಟ್ ಗೆ ನೂತನ ಅಧ್ಯಕ್ಷರಾಗಿ ಮೋಹನ್ ಕುಮಾರ್ ಬೆಳ್ಳೂರು

Posted On: 18-06-2022 04:54PM
ಕಾಪು : ಪಡುಕುತ್ಯಾರುವಿನ ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಮೋಹನ್ ಕುಮಾರ್ ಬೆಳ್ಳೂರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಅಸೆಟ್ ನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾಯಾಧ್ಯಕ್ಷರಾಗಿ ಪೃಥ್ವೀರಾಜ್ ಆಚಾರ್ಯ ಕಿನ್ನಿಗೋಳಿ, ಪ್ರಧಾನ ಕಾಯದರ್ಶಿಯಾಗಿ ಕೆ.ಜೆ. ಗುರುರಾಜ್ ಆಚಾರ್ಯ ಮಂಗಳೂರು, ಕೋಶಾಧಿಕಾರಿಯಾಗಿ ಬಿ. ಸೂರ್ಯ ಕುಮಾರ್ ಹಳೆಯಂಗಡಿ, ಉಪಾಧ್ಯಕ್ಷರಾಗಿ ವಿವೇಕ್ ಆಚಾರ್ಯ ಮಂಚಕಲ್, ಎನ್. ಹರಿಶ್ಚಂದ್ರ ಆಚಾರ್ಯ ಬೆಂಗಳೂರು, ಕಾರ್ಯದರ್ಶಿಗಳಾಗಿ ಬೆಳುವಾಯಿ ಸೀತಾರಾಮ ಆಚಾರ್ಯ, ಕೆ.ರಾಘವೇಂದ್ರ ಆಚಾರ್ಯ ಉಡುಪಿ ಆಯ್ಕೆಯಾದರು.
ವಿಶ್ವಸ್ಥ ಮಂಡಳಿಯ ವಿಶ್ವಸ್ಥರಾಗಿ ತ್ರಾಸಿ ಸುಧಾಕರ ಆಚಾರ್ಯ, ನಾಗರಾಜ ಆಚಾರ್ಯ ಕಾಡಬೆಟ್ಟು, ಜಿ.ಟಿ ಆಚಾರ್ಯ ಮುಂಬಯಿ, ರಾಜಗೋಪಾಲ ಆಚಾರ್ಯ ಮಂಗಳೂರು, ಆನಂದ ಆಚಾರ್ಯ ಮದ್ಯ, ಶ್ರೀಧರ ಆಚಾರ್ಯ ಕಟಪಾಡಿ, ಜಯಪ್ರಕಾಶ ಆಚಾರ್ಯ ಕುಡ್ಚಿಲ, ಉಮೇಶ ಆಚಾರ್ಯ ಕಡೇಶ್ವಾಲ್ಯ, ವಿಶ್ವನಾಥ ಆಚಾರ್ಯ ಉಚ್ಚಿಲ, ಹರೀಶ್ ಆಚಾರ್ಯ ಕಾರ್ಕಳ ಆಯ್ಕೆಗೊಂಡರು. ಖಾಯಂ ಆಹ್ವಾನಿತರನ್ನು, ಸಲಹಾ ಮಂಡಳಿಯ ಸದಸ್ಯರನ್ನೂ ಇದೇ ವೇಳೆ ಆಯ್ಕೆ ಮಾಡಲಾಯಿತು. ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು.
ಸಭೆಯಲ್ಲಿ ವೆಂಕಟರಮಣ ಆಚಾರ್ಯ, ಬಿ.ಜಿ.ರಮೇಶ್ ಆಚಾರ್ಯ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಅವರು ನೂತನ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ, ಬೆಳುವಾಯಿ, ಸುಂದರ ಆಚಾರ್ಯ ಬೆಳುವಾಯಿ, ಜಯಕರ ಆಚಾರ್ಯ ಕರಂಬಳ್ಳಿ ಮುಂತಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿ, ಅಸೆಟ್ ಪ್ರಧಾನ ಕಾರ್ಯದರ್ಶಿ ಕೆ.ಜೆ.ಗುರುರಾಜ ಆಚಾರ್ಯ ಮಂಗಳೂರು ವಂದಿಸಿದರು.
ಕಾಪು : ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಗುಡಿಗಳ ದೇವಿ ದ್ವಾರ ಸ್ಥಾಪನಾ ಧಾರ್ಮಿಕ ಕಾರ್ಯಕ್ರಮ ಸಂಪನ್ನ

Posted On: 18-06-2022 04:40PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮಾರಿಯಮ್ಮ ಗುಡಿ ಮತ್ತು ಉಚ್ಚಂಗಿ ದೇವಿಯ ಗುಡಿಗಳ ದೇವಿ ದ್ವಾರ ಸ್ಥಾಪನಾ ಧಾರ್ಮಿಕ ಕಾರ್ಯಕ್ರಮಗಳು ಜೂನ್ 17ರಂದು ಸಂಪನ್ನಗೊಂಡಿತು.
ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ದೇವಿ ದ್ವಾರ ಸ್ಥಾಪನಾ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೊರಂಗ್ರಪಾಡಿ ದೊಡ್ಡಮನೆ ವಾಸುದೇವ ಶೆಟ್ಟಿ ಕಾಪು , ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ರಾಜಶೇಖರ ಕೋಟ್ಯಾನ್, ಅನಿಲ್ ಬಲ್ಲಾಳ್ ಬೀಡು, ಮುಂಬಯಿ ಸಮಿತಿ ಅಧ್ಯಕ್ಷ ಸುಧಾಕರ ಹೆಗ್ಡೆ ತುಂಗಾ, ಮುಂಬೈ ಸಮಿತಿಯ ಉಪಾಧ್ಯಕ್ಷ ಉದ್ಯಮಿ ಕೃಷ್ಣ ವೈ. ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ , ಮಾರಿಯಮ್ಮ ದರ್ಶನ ಪಾತ್ರಿ ಗುರುಮೂರ್ತಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಮಾಧವ ಆರ್. ಪಾಲನ್, ಮನೋಹರ್ ಎಸ್. ಶೆಟ್ಟಿ , ಗಂಗಾಧರ ಸುವರ್ಣ, ಕಟ್ಟಡ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಪುರಸಭಾ ವಾರ್ಡ್ಸಂ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಲೀಲಾಧರ ಶೆಟ್ಟಿ, ಶಿಸ್ತು ಪಾಲನ ಸಮಿತಿಯ ಪ್ರಧಾನ ಸಂಚಾಲಕ ಡಾ. ಪ್ರಶಾಂತ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮತ್ತು ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಮೂವತ್ತನೇ ಮನೆ ಹಸ್ತಾಂತರ

Posted On: 17-06-2022 08:08PM
ಉಡುಪಿ : ಸಂಸ್ಥೆಯ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯಾದ ಪಾದೂರಿನ ಮಲ್ಲಿಕಾ ಶೆಟ್ಟಿ (ದ್ವಿತೀಯ ಪಿ.ಯು.ಸಿ) ಹಾಗೂ ನರ್ಸಿಂಗ್ ವಿದ್ಯಾರ್ಥಿನಿ ರಕ್ಷಿತಾ ಶೆಟ್ಟಿ ಇವರಿಗೆ ಮಂಗಳೂರಿನ ಉದ್ಯಮಿ ಪಿ. ಗೋಕುಲನಾಥ ಪ್ರಭುರವರು ತಮ್ಮ ಮಾತೃಶ್ರೀ ಪದ್ಮಾವತಿ ವೆಂಕಟ್ರಾಯ ಪ್ರಭು ಅವರ ಜನ್ಮಶತಾಬ್ದದ ಶುಭಾವಸರದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಪದ್ಮಾವತಿ’ಯನ್ನು ನಿವೇದಿತಾ ಜಿ. ಪ್ರಭು ಮತ್ತು ಪಿ. ಗೋಕುಲನಾಥ ಪ್ರಭು ಅವರು ಜೂನ್ 16 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಯಕ್ಷಗಾನ ಕಲಾರಂಗದಂತಹ ಸಂಸ್ಥೆಯೊಂದಿಗೆ ನಿಕಟ ಬಾಂಧವ್ಯ ನನಗೆ ತುಂಬಾ ಸಂತೋಷ ನೀಡಿದೆ. ಈ ಮನೆಯಲ್ಲಿ ಎಲ್ಲರೂ ಸುಖ ಸಂತೋಷದಿಂದ ಬಾಳುವಂತಾಗಲಿ ಎಂದು ಶುಭಕೋರಿದರು. ಡಾ. ಜೆ.ಎನ್. ಭಟ್ ಮತ್ತು ಶಾಂತಿ ಎನ್. ಭಟ್ ಶುಭಹಾರೈಸಿದರು. ಮನೆ ನಿರ್ಮಿಸಿದ ಇಂಜಿನಿಯರ್ ಕಾಪು ಲಕ್ಷ್ಮೀಶ ತಂತ್ರಿಯವರನ್ನು ಗೌರವಿಸಲಾಯಿತು.

ಗೋಕುಲನಾಥ್ ಪ್ರಭು ಅವರ ಪುತ್ರ ಅವಿನಾಶ್ ಪ್ರಭು, ಯು. ವಿಶ್ವನಾಥ ಶೆಣೈ, ವಿನಾಯಕ್ ಬಾಳಿಗಾ, ಲೀಲಾಧರ ಶೆಟ್ಟಿ ಕಾಪು, ಅನಂತ ಮೂಡಿತ್ತಾಯ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಮನೋಹರ ಕೆ., ಪ್ರೊ. ಕೆ. ಸದಾಶಿವ ರಾವ್, ಎಚ್. ಎನ್. ಶೃಂಗೇಶ್ವರ, ಭುವನಪ್ರಸಾದ್ ಹೆಗ್ಡೆ, ಎ. ನಟರಾಜ ಉಪಾಧ್ಯ, ವಿಜಯ್ ಕುಮಾರ್ ಮುದ್ರಾಡಿ, ಕೆ. ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ಅಶೋಕ್ ಎಂ., ಆನಂದ ಶೆಟ್ಟಿ, ಮಂಜುನಾಥ, ನಾಗರಾಜ ಹೆಗಡೆ ಹಾಗೂ ಇನ್ನಂಜೆ ಪ್ರೌಢಶಾಲೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟ 30ನೇ ಮನೆಯಾಗಿದ್ದು, ಈ ತಿಂಗಳಿನಲ್ಲಿ ಇನ್ನೂ 5 ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸುತ್ತಾ ನುಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದೊಗೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.
ಜೂನ್ 20 : ಆನೆಗುಂದಿ ಶ್ರೀ ಸರಸ್ವತೀ ಪೀಠ ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ನಲ್ಲಿ ವಿವಿಧ ವಿದ್ಯಾರ್ಥಿ ಕ್ಲಬ್ ಗಳ ಉದ್ಘಾಟನೆ

Posted On: 17-06-2022 07:56PM
ಕಾಪು : ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯು ಅತ್ಯಂತ ಮಹತ್ವದ್ದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಉದ್ದೇಶ . ಈ ನಿಟ್ಟಿನಲ್ಲಿ ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನಲ್ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಕುತ್ಯಾರುವಿನಲ್ಲಿ ವಿವಿಧ ವಿದ್ಯಾರ್ಥಿ ಕ್ಲಬ್ ಗಳನ್ನು ರಚಿಸಿದ್ದು ಈ ಕ್ಲಬ್ ಗಳ ಉದ್ಘಾಟನಾ ಸಮಾರಂಭವು ದಿನಾಂಕ ಜೂನ್ 20 ಸೋಮವಾರದಂದು ಮಧ್ಯಾಹ್ನ 2-30 ಕ್ಕೆ ಶಾಲಾ ಸಭಾಭವನದಲ್ಲಿ ನಡೆಯಲಿದೆ.
ಕಾಪು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು, ನಿವೃತ್ತ ಶಿಕ್ಷಕರು, ಪತ್ರಕರ್ತರು ಹಾಗೂ ಖ್ಯಾತ ರೊಟೇರಿಯನ್ ಆದ ಪುಂಡಲೀಕ ಮರಾಠೆ ಇವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನಲ್ ಟ್ರಸ್ಟ್ (ರಿ.) ನ ಅಧ್ಯಕ್ಷರಾದ ಮೋಹನ್ ಕುಮಾರ್ ಬೆಳ್ಳೂರು, ಕಾರ್ಯಾಧ್ಯಕ್ಷರಾದ ಪ್ರಥ್ವಿರಾಜ್ ಆಚಾರ್ಯ ಕಿನ್ನಿಗೋಳಿ, ಪ್ರಧಾನ ಕಾರ್ಯದರ್ಶಿ ಗುರುರಾಜ ಆಚಾರ್ಯ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಮಟ್ಕಾ ಜುಗಾರಿ ಚೀಟಿ ಬರೆಯುತ್ತಿದ್ದ ವ್ಯಕ್ತಿ ಬಂಧನ

Posted On: 16-06-2022 10:52PM
ಪಡುಬಿದ್ರಿ : ಇಲ್ಲಿನ ಅಪೋಲೋ ಮೆಡಿಕಲ್ನ ಹಿಂಭಾಗದ ಓಣಿಯಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ ವ್ಯಕ್ತಿಯೋರ್ವನನ್ನು ಜೂ.15 ರಂದು ಬಂಧಿಸಲಾಗಿದೆ.
ಬಂಧಿತನ ಕಟಪಾಡಿ ಪಳ್ಳಿಗುಡ್ಡೆ, ಕೋಟೆ ಗ್ರಾಮದ ಅಬ್ದುಲ್ ರಜಾಕ್ (37)ನನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಿಸಿದಾಗ ಕಿರಣ್ ಕಟಪಾಡಿ ಎಂಬಾತನ ಸೂಚನೆಯಂತೆ ಜನರನ್ನು ಸೇರಿಸಿ ಚೀಟಿ ಬರೆದು ಕೊಡುತ್ತಿದ್ದು, ಸಂಗ್ರಹಿಸಿದ ಹಣವನ್ನು ಕಿರಣ್ ಗೆ ನೀಡುತ್ತಿದ್ದು ಬಹುಮಾನ ವಿಜೇತರಿಗೆ ಅಬ್ದುಲ್ ರಜಾಕ್ ಮುಖಾಂತರ ಹಣವನ್ನು ನೀಡುತ್ತಿದ್ದ ಎನ್ನಲಾಗಿದೆ.
ಅಬ್ದುಲ್ ರಜಾಕ್ನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,830/- ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲಾ ಕಚೇರಿಗಳಲ್ಲಿ ಪ್ರತಿಶತಃ ನೂರರಷ್ಟು ಕನ್ನಡ ಅನುಷ್ಠಾನ ಆಗಬೇಕು : ಡಾ.ಟಿ.ಎಸ್.ನಾಗಾಭರಣ

Posted On: 16-06-2022 06:02PM
ಉಡುಪಿ : ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಪ್ರತಿಶತಃ ನೂರರಷ್ಟು ಕನ್ನಡದ ಬಳಕೆ ಆಗುವ ಕುರಿತಂತೆ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಸರ್ಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವುವಾಗ ಇಲಾಖೆಗಳ ಮಧ್ಯೆ ಆಗುವ ಪ್ರತಿಯೊಂದು ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ಒಂದೊಮ್ಮೆ ಅಂಗ್ಲಭಾಷೆಯಲ್ಲಿ ಇದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ಎಚ್ಚರಿಸುವ ಕೆಲಸವನ್ನು ಮಗದೊಂದು ಇಲಾಖೆ ಮಾಡುವುದರೊಂದಿಗೆ ಸಮನ್ವಯ ಸಾಧಿಸಬೇಕು ಎಂದರು. ಸಾರ್ವಜನಿಕರು ತಮ್ಮ ದೈನಂದಿನ ಆರ್ಥಿಕ ಚಟುವಟಿಕೆಗಳನ್ನು ನಡೆಸಿ, ಅಗತ್ಯ ಸೇವೆಗಳನ್ನು ಪಡೆಯಲು ಬ್ಯಾಂಕ್ಗಳಿಗೆ ಭೇಟಿ ನೀಡಿದಾಗ, ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ಒಂದೊಮ್ಮೆ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಕನ್ನಡದ ಭಾಷಾ ಸಮಸ್ಯೆ ಇದ್ದಲ್ಲಿ ಅವರಿಗೆ ಆಗಿಂದಾಗ್ಗೆ ಕನ್ನಡ ಕಲಿಕೆ ತರಬೇತಿಯನ್ನು ಕೊಡುವ ಕಾರ್ಯ ಅಗ್ರಗಣ್ಯ ಬ್ಯಾಂಕ್ಗಳಿಂದ ಆಗಬೇಕು ಎಂದು ಸೂಚನೆ ನೀಡಿದರು. ಪ್ರಸ್ತುತ ಜಿಲ್ಲೆಯ ಬ್ಯಾಂಕ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಹಾಗೂ ಕನ್ನಡೇತರ ಸಿಬ್ಬಂದಿಗಳ ಬಗ್ಗೆ ಹಾಗೂ ಅವರುಗಳಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡುವ ಬಗ್ಗೆ ವಿವರಗಳನ್ನು ಪ್ರಾಧಿಕಾರಕ್ಕೆ ನೀಡಬೇಕು ಎಂದ ಅವರು, ನೇಮಕಾತಿ ಸಂದರ್ಭದಲ್ಲಿ ಹೆಚ್ಚಿನ ಕನ್ನಡಿಗರೇ ಬ್ಯಾಂಕ್ ಉದ್ಯೋಗದಲ್ಲಿ ಸೇರುವಂತೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಎಟಿಎಂ ಯಂತ್ರದ ಡಿಸ್ ಪ್ಲೇ ಗಳಲ್ಲಿ ಕನ್ನಡದ ಬಳಕೆ ಕಡ್ಡಾಯವಾಗಿ ಇರುವಂತೆ ಎಚ್ಚರವಹಿಸಬೇಕು ಎಂದರು. ಜಿಲ್ಲೆಯ ಎಲ್ಲಾ ಕೈಗಾರಿಕೆಗಳಲ್ಲಿ ಅಪಾಯದ ಎಚ್ಚರಿಕ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಿದ್ದಲ್ಲಿ ಸ್ಥಳಿಯ ಜನರಿಗೆ ಅದರ ಎಚ್ಚರಿಕೆ ಗೊತ್ತಾಗಿ ಅಪಘಾತ ಸಂಭವಿಸುವುದು ತಪ್ಪುತ್ತದೆ. ಕೈಗಾರಿಕೆಗಳಲ್ಲಿ ಕೌಶಲ್ಯ ಹಾಗೂ ಅಕೌಶಲ್ಯ ಕೆಲಸಗಳಿಗೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದ ಅವರು ಪ್ರತಿಯೊಂದು ಉದ್ಯೋಗ ಘಟಕಗಳಲ್ಲಿ ಕನ್ನಡ ಸೆಲ್ಗಳನ್ನು ತೆರೆಯಬೇಕು ಅದರಲ್ಲಿ ಸಿಬ್ಬಂದಿ ವರ್ಗದವರು ಹೆಚ್ಚು ಇರುವುದು ಅಗತ್ಯ ಎಂದರು.
ಗೊಬ್ಬರ, ಕೀಟನಾಶಕ ಮತ್ತು ಔಷಧಿಗಳ ಮೇಲೆ ಅವುಗಳ ಬಳಕೆ ಹಾಗೂ ಅದರಲ್ಲಿನ ಅಂಶಗಳ ಕುರಿತು ಕನ್ನಡದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಒಂದೊಮ್ಮೆ ನಮೂದಿಸದೇ ಇರುವುದು ಕಂಡು ಬಂದಲ್ಲಿ ಅಂತಹ ಕಂಪೆನಿಗಳಿಗೆ ಪತ್ರ ಬರೆದು ನಮೂದಿಸುವಂತೆ ಎಚ್ಚರಿಸಬೇಕು. ವೈದ್ಯರುಗಳು ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪರೀಕ್ಷಾ ವರದಿ ಅಥವಾ ರೋಗದ ಬಗ್ಗೆ ರೋಗಿಗಳಿಗೆ ಅಥವಾ ಅವರ ಸಂಬಂಧಿಕರಿಗೆ ಕನ್ನಡದಲ್ಲಿಯೇ ಸ್ಪಷ್ಟವಾಗಿ ಅರ್ಥವಾಗುವಂತೆ ತಿಳಿಸಬೇಕು. ಆರೋಗ್ಯ ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ವರದಿಗಳನ್ನು ಕಳುಹಿಸುವಾಗ ಅವು ಕನ್ನಡದಲ್ಲಿಯೇ ಇರಬೇಕು ಎಂದರು. ಸಾಮಾನ್ಯವಾಗಿ ಎಲ್ಲಾ ಆಂಗ್ಲಪದಗಳಿಗೆ ಪರ್ಯಾಯವಾಗಿ ಕನ್ನಡ ಬಳಕೆಗೆ ಅನುಕೂಲವಾಗುವಂತೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ 86 ವಿವಿಧ ಶಬ್ಧಕೋಶಗಳು ಲಭ್ಯವಿದ್ದು, ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು ಎಂದ ಅವರು, ಆಡಳಿತದಲ್ಲಿ ಮಿಂಚಂಚೆಗಳನ್ನು ಕಳುಹಿಸುವಾಗ ವಿಳಾಸಗಳನ್ನು ಕನ್ನಡದ ಪದ ಬಳಕೆ ಪ್ರಾರಂಭವಾಗಿದ್ದು, ಇದರ ಬಳಕೆಯಾಗಬೇಕು ಎಂದರು. ಕನ್ನಡ ಕಲಿಕಾ ಅಧಿನಿಯಮ 2017 ರ ಅನ್ವಯ ಎಲ್ಲಾ ಶಾಲೆಗಳು, ಮದರಸಗಳೂ ಸೇರಿದಂತೆ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಇರಬೇಕು. ಸಿ.ಬಿ.ಎಸ್.ಸಿ. ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ 1 ರಿಂದ 9 ರ ವರೆಗೆ ಸ್ಥಳೀಯ ಭಾಷೆಯನ್ನು ಒಂದು ವಿಷಯವಾಗಿ ಕಲಿಸಿದರೂ 10 ನೇ ತರಗತಿಯಲ್ಲಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಅಂಕಗಳನ್ನು ಗಣನೆಗೆ ತೆಗದುಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು. ಜಾಹೀರಾತು ಫಲಕಗಳಲ್ಲಿ ಕನ್ನಡದ ಬಳಕೆ ಅಲ್ಪ ಪ್ರಮಾಣದಲ್ಲಿ ಇರುವಂತಹ ಪ್ರಕಟಣೆಗಳಿಗೆ ಕಡಿವಾಣ ಹಾಕಬೇಕು. ಅಂಗಡಿ ನಾಮಫಲಕಗಳು ಕನ್ನಡದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದರು. ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಮತ್ತಿತರ ಟೆಂಡರ್ ಕರೆಯುವಾಗ ಅರ್ಜಿ ನಮೂನೆಗಳು ಪ್ರತಿಯೊಂದು ಕನ್ನಡದಲ್ಲಿಯೇ ಇರಬೇಕು. ಉದ್ಯಾನವನಗಳು, ಸರಕಾರಿ ಕಟ್ಟಡಗಳಲ್ಲಿ ಕನ್ನಡದ ಕವಿಗಳು ಸಮಾಜಕ್ಕೆ ನೀಡಿರುವ ಹಿತ ಸಂದೇಶಗಳನ್ನು ಪ್ರಚಾರಪಡಿಸಬೇಕು. ಕನ್ನಡ ಎಲ್ಲೆಡೆ ಕಾಣಬೇಕು, ಕನ್ನಡ ಎಲ್ಲೆಡೆ ಕೇಳಬೇಕು ಎಂದ ಅವರು ಉಡುಪಿ ಜಿಲ್ಲೆಯು ಕನ್ನಡ ಅನುಷ್ಠಾನಗೊಳಿಸುವಲ್ಲಿ ಮಾದರಿ ಜಿಲ್ಲೆಯಾಗಬೇಕು ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯನ್ನು ಎಲ್ಲರ ಸಹಭಾಗಿತ್ವದೊಂದಿಗೆ ಕನ್ನಡಮಯವಾಗಿಸಬಹುದಾಗಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದ ಅವರು ಇಂದಿನ ಸಭೆಯಲ್ಲಿ ನೀಡಿರುವ ಸಲಹೆ ಹಾಗೂ ಮಾರ್ಗದರ್ಶನಗಳು ಕನ್ನಡ ಅನುಷ್ಠಾನಕ್ಕೆ ಹೆಚ್ಚಿನ ಸಹಕಾರಿಯಾಗಲಿವೆ ಎಂದರು.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರಮೇಶ್ ಗುಬ್ಬಿಗೂಡು, ಕಾರ್ಯದರ್ಶಿಗಳಾದ ಡಾ.ಸಂತೋಷ್ ಹಾನಗಲ್, ಮಹೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಅಪರ ಜಿಲ್ಲಾಧಿಕಾರಿ ವೀಣಾ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ವಿವಿಧ ಸಾಹಿತಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.