Updated News From Kaup

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಜಿಲ್ಲಾಡಳಿತದಿಂದ ಪ್ರಕಟನೆ

Posted On: 16-05-2022 10:19PM

ಉಡುಪಿ : ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಕರ್ನಾಟಕದ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರಿಯುವ ಸಾಧ್ಯತೆಯಿರುವ ಕಾರಣ ಮೇ 17 ಮತ್ತು 19ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮತ್ತು ದಿನಾಂಕ 16 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಪ್ರತಿದಿನ ತಲಾ 100ಮಿ.ಮಿ ರಿಂದ 150ಮಿ.ಮಿ ಮೇಲ್ಪಟ್ಟು ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ ಮೂರು ದಿನಗಳ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕಾಗಿದೆ ಅದರಂತೆ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ, ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸುವುದು. ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ, ಪ್ರವಾಸಿಗರು/ ಸಾರ್ವಜನಿಕರು ನದಿತೀರಕ್ಕೆ, ಸಮುದ್ರತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸುವುದು ಎಂದು ತಿಳಿಸಿದ್ದಾರೆ.

ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ದೂರವಾಣಿಗೆ ಸಂಪರ್ಕಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಸ್ಟರ್ ಪ್ರಥಮ್ ಕಾಮತ್ ಕಟಪಾಡಿ ಇವರಿಗೆ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ

Posted On: 16-05-2022 09:59PM

ಕಟಪಾಡಿ : ಡಾ| ಶಿವಕುಮಾರ ಸ್ವಾಮೀಜಿಯವರ ಜಯಂತಿ ಅಂಗವಾಗಿ ಸಂಗಮ ಸಮಾವೇಶ ಸಮಾರಂಭ ಮತ್ತು ಜನಸ್ಪಂದನ ಪತ್ರಿಕೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೀಡಲಿರುವ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿಗಾಗಿ ಬಹುಮುಖ ಪ್ರತಿಭೆ ಮಾ.ಪ್ರಥಮ್ ಕಾಮತ್ ಕಟಪಾಡಿ ಇವರು ಆಯ್ಕೆಯಾಗಿರುತ್ತಾರೆ.

ಮೇ 22 ರ ಬೆಂಗಳೂರಿನ ಜೆ. ಪಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಇದೇ ಸಂದರ್ಭದಲ್ಲಿ ಪ್ರಥಮ್ ಕಾಮತ್ ಕಟಪಾಡಿ ಇವರಿಂದ 75 ನೇ ಜಾದೂ ಪ್ರದರ್ಶನ ಕೂಡ ನಡೆಯಲಿದೆ.

ಉಡುಪಿ ಜಿಲ್ಲಾ ಕುಲಾಲ ಕುಂಬಾರ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿ : ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು

Posted On: 16-05-2022 08:44PM

ಉಡುಪಿ : ಜಿಲ್ಲಾ ಕುಲಾಲ ಕುಂಬಾರ ಸಂಘಟನೆಗಳ ಒಗ್ಗಟ್ಟು ಇಡೀ ರಾಜ್ಯಕ್ಕೆ ಮಾದರಿ, ಹಿರಿ ಕಿರಿಯ ನಾಯಕರುಗಳನ್ನ ಗಟ್ಟಿಯಾಗಿ ಬೆಸೆದು ಕ್ರೀಡಾ ಸಂಘಟನೆಯ ಮೂಲಕ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಮತ್ತೂ ರಾಜಕೀಯ ಹೋರಾಟಗಳ ಮೂಲಕ, ಇಡೀ ರಾಜ್ಯದ ಯುವ ಸಂಘಟನೆ ಗಳಿಗೆ ಪ್ರೇರಣೆ ಆಗುವಂತೆ ಬೆಳೆದು ನಿಂತ ಉಡುಪಿ ಜಿಲ್ಲಾ ಯುವ ವೇದಿಕೆ ಅದರ ಬೆಳವಣಿಗೆಗೆ ಕಾರಣರಾದ ಜಿಲ್ಲೆಯ ಎಲ್ಲಾ ಹಿರಿಯ ಯುವ ವೇಧಿಕೆಯ ನಾಯಕರುಗಳಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಎಂದು ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು. ಅವರು ಕಾರ್ಕಳದಲ್ಲಿ ಕುಲಾಲ ಟ್ರೋಫಿ ಉದ್ಘಾಟಿಸಿ ಮಾತನಾಡಿದರು.

ಇವತ್ತು ಸೇರಿದ ಇಡೀ ಜಿಲ್ಲೆಯ ಎಲ್ಲಾ ಸಂಘಟನೆ ಗಳ ಒಗ್ಗಟ್ಟು ಇದನ್ನ ಸೂಚಿಸುತ್ತೆ. ಇದೇ ರೀತಿಯಲ್ಲಿ ದುಡಿದ ಯುವ ವೇದಿಕೆಯ ಸೇವೆ ಸಂಘಟನೆ ಸರಕಾರದ ಗಮನ ಸೆಳೆದ ಬೆಳವಣಿಗೆ,ಅದರಲ್ಲೂ ಸರ್ವಜ್ಞ ವೃತ್ತವನ್ನ ನಿರ್ಮಿಸಿ ರಾಜ್ಯದಲ್ಲೇ ಸುದ್ದಿ ಆಗಿರುವ ಕಾರ್ಕಳ ಕುಲಾಲ ಯುವ ವೇದಿಕೆ ಮತ್ತು ಕಾರ್ಕಳ ಕುಲಾಲ ಸಂಘ ಇಡೀ ರಾಜ್ಯದ ಎಲ್ಲಾ ಸಂಘಟನೆ ಗಳಿಗೆ ಮಾದರಿ.

ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಸೇವೆಯನ್ನ ಪರಿಗಣಿಸಿ ಜಿಲ್ಲಾ ಹಾಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಹುಡುಕಿ ಕೊಂಡು ಬರುವ ದಿನಗಳು ದೂರ ಇಲ್ಲ ಎಂದರು.

ಈ ಸಂದರ್ಭ ಅತಿಥಿಗಳು, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವಭಾರತಿ ಕಾಪು ವತಿಯಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರ, ಸಾಯಿನಾಥ್ ಶೇಟ್ ಕುಂದಾಪುರ ಹಾಗೂ ಪ್ರಭಾಕರ ಆಚಾರ್ಯ ಮೂಡುಬೆಳ್ಳೆಗೆ ಸಮ್ಮಾನ

Posted On: 16-05-2022 05:58PM

ಕಾಪು : ವಿಶ್ವಭಾರತಿ ಕಾಪು ವತಿಯಿಂದ ಸ್ವದೇಶಿ ಮೇಳದ ಸಭಾಂಗಣ ವೇದಿಕೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಸಾಯಿನಾಥ್ ಶೇಟ್ ಕುಂದಾಪುರ ಹಾಗೂ ಕಲಾವಿದ ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ಇವರಿಗೆ ಸನ್ಮಾನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಶಾಸಕರು ಲಾಲಾಜಿ ಆರ್ ಮೆಂಡನ್ ಮಾತನಾಡಿ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸುವುದು ಅವರಿಗೆ ಇನ್ನಷ್ಟು ಸಮಾಜ ಮುಖಿ ಕೆಲಸ ಮಾಡಲು ಉತ್ತೇಜನ ನೀಡಿದಂತೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗುರ್ಮೆ ಸುರೇಶ್ ಶೆಟ್ಟಿ ಫಾರೂಕ್ ಚಂದ್ರನಗರ, ಸಾಯಿನಾಥ್ ಶೇಟ್ ಹಾಗೂ ಪ್ರಭಾಕರ ಆಚಾರ್ಯರ ಸಮಾಜ ಮುಖಿ ಕೆಲಸ ಎಲ್ಲರು ಮೆಚ್ಚುವಂತದ್ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಭಾ ಅಧ್ಯಕ್ಷತೆಯನ್ನು ವಿಶ್ವಭಾರತಿ ಅಧ್ಯಕ್ಷರಾದ ಕಾಪು ಶ್ರೀಕಾಂತ್ ಬಿ ಆಚಾರ್ಯ ವಹಿಸಿದ್ದರು. ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯರಾದ ರಮೇಶ್ ಬಾಬು ಶಿವಮೊಗ್ಗ, ಸಂತೋಷ್ ಬಡಿಗೇರ್, ಸುರೇಶ್ ಆಚಾರ್ಯ, ಮದು ಆಚಾರ್ಯ ಮೂಲ್ಕಿ, ಸುಮನಾ ಮಂಗಳೂರು, ಗಂಗಾಧರ ಆಚಾರ್ಯ,ರೋಷನ್ ಬೆಲ್ಮನ್, ಚಂದ್ರಶೇಖರ್ ಮಂಡೆಕೋಲು, ಪ್ರಬೋದ್ ಚಂದ್ರ,ಕಾಪು ಪುರಸಭೆ ಮಾಜಿ ಅಧ್ಯಕ್ಷರಾದ ಅನಿಲ್ ಕುಮಾರ್, ಕಿಶೋರ್ ಆಚಾರ್ಯ, ಸುಧಾಕರ್ ಆಚಾರ್ಯ ಬಿಳಿಯಾರು, ಸುನಿಲ್ ಶೇಟ್ ಕುಂದಾಪುರ, ದಾಮೋದರ ಶರ್ಮ, ಶಶಿಧರ ಪುರೋಹಿತ ಕಟಪಾಡಿ, ಸುಧಾಕರ ಸಾಲ್ಯಾನ್ ಕಾಪು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಶ್ರೀಕೃಷ್ಣ ದರ್ಶನ ಬಿಡುಗಡೆ

Posted On: 16-05-2022 04:56PM

ಮುಂಬಯಿ : ಇಲ್ಲಿಯ ಸಯಾನ್ ಗೋಕುಲದ ಗೋಪಾಲಕೃಷ್ಣ ದೇವರ ಪುನಃ ಪ್ರತಿಷ್ಠೆ - ಬ್ರಹ್ಮಕಲಶಾಭಿಷೇಕ ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಷಣ್ಮುಖಾನಂದ ಸಭಾಗೃಹದಲ್ಲಿ ನಡೆಯಿತು.

ಬೃಹನ್ಮುಂಬಯಿ ಗೋಕುಲ ಪುನರುತ್ಥಾನ ಸ್ಮರಣೆಯ ಸಂಪುಟ "ಶ್ರೀಕೃಷ್ಣ ದರ್ಶನ"ವನ್ನು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಅವರು 'ಶ್ರೀಕೃಷ್ಣ ದರ್ಶನ'ದ ಪ್ರಧಾನ ಸಂಪಾದಕರು.

ಕೇಂದ್ರ ವಿತ್ಥಖಾತೆ ರಾಜ್ಯ ಸಚಿವ ಭಾಗವತ್ ಕಿಶನ್ ರಾವ್ ಕರಾಡ್, ಲೋಕಸಭಾ ಸದಸ್ಯ ರಾಹುಲ್ ಆರ್.ಶಿವಾಲೆ, ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್, ಮಧುಸೂದನ ಅಗರ್ ವಾಲ್, ಐಕಳ ಹರೀಶ್ ಶೆಟ್ಟಿ, ಸುಧೀರ್ ಶೆಟ್ಟಿ, ಆನಂದ ಪೇಜಾವರ, ಬಿ ಎಸ್ ಕೆ.ಬಿ. (ಗೋಕುಲ) ಅಧ್ಯಕ್ಷ ಡಾ.ಸುರೇಶ ರಾವ್ ಮುಂತಾದವರು ಉಪಸ್ಥಿತರಿದ್ದರು.

ಶಿರ್ವ ಟು ಕಾಪು ; ಕಾಪು ಟು ಶಿರ್ವ - ಪಿಎಸ್ಐಗಳ ವರ್ಗಾವಣೆ

Posted On: 15-05-2022 04:26PM

ಕಾಪು : ಸರಕಾರದ ಆದೇಶದಂತೆ ಶಿರ್ವ ಠಾಣೆಯ ಪಿಎಸ್ಐ ಶ್ರೀಶೈಲ ಡಿ ಮುರಗೊಡ್ ಕಾಪು ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಕಾಪು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ರಾಘವೇಂದ್ರ ಸಿ ಶಿರ್ವ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಪಡುಬಿದ್ರಿ ಪಂಚಾಯತ್ಗೆ ಕಸ ಸಾಗಾಟ ವಾಹನ ಕೊಡುಗೆ

Posted On: 15-05-2022 10:35AM

ಪಡುಬಿದ್ರಿ : ಅದಾನಿ ಫೌಂಡೇಶನ್ ಹಾಗೂ ಉಡುಪಿ ಪವರ್ ಕಾರ್ಪೋರೇಷನ್ ಸಿಎಸ್‌ಆರ್ ನಿಧಿಯಿಂದ ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಸುಮಾರು 8.50 ಲಕ್ಷ ರೂ. ವೆಚ್ಚದ ಕಸ ಸಾಗಾಟ ವಾಹನವನ್ನು ಪಡುಬಿದ್ರಿ ಗ್ರಾಮ ಪಂಚಾಯತ್ ವಠಾರದಲ್ಲಿ ಮೇ 14 ರಂದು ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಕಿಶೋರ್ ಆಳ್ವ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ನಡೆಸುತ್ತಿರುವ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ನಿಧಿಯನ್ನು ಪರಿಸರದ ಗ್ರಾಮಗಳ ಅಭಿವೃದ್ಧಿಗೆ ಬಳಸುತ್ತಿದ್ದು, ಪಡುಬಿದ್ರಿ ಗ್ರಾಪಂಗೆ ಹಂತ ಹಂತವಾಗಿ 2.77 ಕೋಟಿ ರೂ. ನೀಡಲು ಬದ್ಧವಿದೆ ಎಂದರು.

ಈ ಸಂದರ್ಭ ಯುಪಿಸಿಎಲ್ ಉಪ ಮಹಾ ಪ್ರಬಂಧಕ ರವಿ ಜೇರೆ, ಪಡುಬಿದ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋದ, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಏಣಗುಡ್ಡೆ ಗರಡಿ ಕಟಪಾಡಿ : ಶ್ರದ್ಧಾಕೇಂದ್ರಗಳು ಭಕ್ತಿ ಮತ್ತು ಶಕ್ತಿಯ ಕೇಂದ್ರಗಳು - ವಿಖ್ಯಾತಾನಂದ ಸ್ವಾಮೀಜಿ

Posted On: 14-05-2022 12:13AM

ಕಟಪಾಡಿ : ಶೃದ್ಧೆ, ಶುಚಿತ್ವ ಕಾಪಾಡುವ ಮೂಲಕ ಕ್ಷೇತ್ರಗಳಲ್ಲಿ ಭಕ್ತಿ ಮೂಡಲು ಸಹಕಾರಿ. ತನ್ಮೂಲಕ ಕ್ಷೇತ್ರದ ವೃದ್ಧಿಯಾಗುತ್ತದೆ. ಶ್ರದ್ಧಾಕೇಂದ್ರಗಳು ಭಕ್ತಿ ಮತ್ತು ಶಕ್ತಿಯ ಕೇಂದ್ರಗಳು. ಏಣಗುಡ್ಡೆ ಗರಡಿಯು ಪವಿತ್ರ ದೇಗುಲವಾಗಿ ಶಕ್ತಿ ಕೇಂದ್ರವಾಗಲಿ ಎಂದು ಆರ್ಯಈಡಿಗ ಮಹಾ ಸಂಸ್ಥಾನ ಸೋಲೂರು, ಬೆಂಗಳೂರು ಇದರ ಪೀಠಾಧಿಪತಿ ಶ್ರೀಗಳಾದ ವಿಖ್ಯಾತಾನಂದ ಸ್ವಾಮೀಜಿ ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮಬೈದೇರುಗಳ ಗರಡಿಯ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಹಾಗೂ ಕಾಲಾವಧಿ ಜಾತ್ರಾ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜ್ಯೋತಿ ಪ್ರಜ್ವಲಿಸಿ ಆಶೀರ್ವಚನ ನೀಡಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಕೋಟಿಚೆನ್ನಯರು ಸ್ವಾಭಿಮಾನದ ಧೀಮಂತಿಕೆಯ ಪ್ರತಿಪಾದಕರು. ಗರಡಿಗಳು ಸ್ವಾಭಿಮಾನದ ಸಂಕೇತ. ಈಗಾಗಲೇ ಸರಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ವಸತಿ ಶಾಲೆಗೆ ಅನುಮೋದಿಸಿದೆ. ಕೋಟಿ ಚೆನ್ನಯರ ಹೆಸರಿನಲ್ಲಿ ಸೈನಿಕ ಶಾಲೆಯ ತೆರೆಯುವ ಅಗತ್ಯವಿದೆ. ಎಂದರು. ಗರಡಿಯಲ್ಲಿ ಸೇವೆಗೈದ ಪ್ರಮುಖರಿಗೆ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಿಲ್ಲಾ ಸಹಕಾರಿ ಮೀನುಗಾರರ ಮಾರಾಟ ಮಂಡಳಿ, ಉಡುಪಿ-ದ.ಕ ಅಧ್ಯಕ್ಷರಾದ ಯಶಪಾಲ್ ಸುವರ್ಣ, ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಿಶೋರ್ ಕುಮಾರ್ ಅಂಬಾಡಿ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಆಚಾರ್ಯ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ (ರಿ.) ಮುಲ್ಕಿ ಅಧ್ಯಕ್ಷರಾದ ಡಾ| ರಾಜಶೇಖರ್ ಕೋಟ್ಯಾನ್, ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಗುರ್ಮೆ, ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ, ಕಟಪಾಡಿ ಸಂಚಾಲಕರಾದ ಸತ್ಯೇಂದ್ರ ಪೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಚೋಕ್ಕಾಡಿ ಆಡಳಿತ ಮೊಕ್ತೇಸರರಾದ ವಿಜಯ ಕುಮಾರ್ ಶೆಟ್ಟಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಚ್ಚಿಲ ಆಡಳಿತ ಮೊಕ್ತೇಸರರಾದ ವಾಸುದೇವ ಸಾಲ್ಯಾನ್, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್, ದೇವಾಡಿಗರ ಸಂಘದ ಅಧ್ಯಕ್ಷರಾದ ಮನೋಹರ ದೇವಾಡಿಗ, ಮುಂಬಯಿ ಸಮಿತಿಯ ಕಾರ್ಯದರ್ಶಿ ಸತೀಶ್ ಅಮೀನ್, ಗರಡಿ ಪೂಜಾ ಪೂಜಾರಿ ಇಂಪು ಪೂಜಾರಿ, ಗರಡಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಗಂಗಾಧರ ಸುವರ್ಣ, ಧಾರ್ಮಿಕ ವಿಧಿ ವಿಧಾನದ ತಂತ್ರಿಗಳಾದ ವೇದ ಮೂರ್ತಿ ಮನೋಜ್ ತಂತ್ರಿ ಶಿವಗಿರಿ ಮತ್ತು ವೇದ ಮೂರ್ತಿ ಮಹೇಶ್ ಶಾಂತಿ ಹೆಜಮಾಡಿ, ಜ್ಯೋತಿಷ್ಯ ಪ್ರವೀಣ ಮೋಹನ್ ಮಾಯಿಪ್ಪಾಡಿ ಕೇರಳ, ಗರಡಿಯ ವಾಸ್ತು ಶಿಲ್ಪಿ ಪ್ರಮಲ್ ಕುಮಾರ್, ಕಾಷ್ಠ ಶಿಲ್ಪಿ ಜಯರಾಮ್ ಆಚಾರ್ಯ, ಶಿಲಾ ಶಿಲ್ಪಿ ಸುಧೀರ್ ಆಚಾರ್ಯ ಉಪಸ್ಥಿತರಿದ್ದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರಡಿ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಎನ್. ಪೂಜಾರಿ ವಹಿಸಿದ್ದರು. ಪಲ್ಲವಿ ಏಣಗುಡ್ಡೆ ಪ್ರಾರ್ಥಿಸಿ, ಗರಡಿ ಜೀಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ಸ್ವಾಗತಿಸಿದರು. ಕೇಂಜ ಗರಡಿಯ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್ ಪ್ರಸ್ತಾವಿಸಿದರು. ದಯಾನಂದ ಉಗ್ಗೆಲ್ ಬೆಟ್ಟು ನಿರೂಪಿಸಿ, ರಿತೇಶ್ ಕೋಟ್ಯಾನ್ ವಂದಿಸಿದರು.

ಉದ್ಯೋಗ ತರಬೇತಿ ಸಹಯೋಗದ ಪರಸ್ಪರ ಒಡಂಬಡಿಕೆ ಕಾರ್ಯಕ್ರಮ

Posted On: 13-05-2022 08:23PM

ಶಿರ್ವ : ಸಂತ ಮೇರಿಸ್ ಕಾಲೇಜು,ಶಿರ್ವ ಮತ್ತು ಉನ್ನತಿ ಕ್ಯಾರಿಯರ್ ಅಕಾಡೆಮಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉದ್ಯೋಗ ತರಬೇತಿ ಕಾರ್ಯಕ್ರಮಗಳ ಪರಸ್ಪರ ಒಡಂಬಡಿಕೆಯು ಎರಡು ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಡೆಯಿತು.

ನಮ್ಮ ದೇಶದಲ್ಲಿ ಶೇಕಡಾ ೫೦ರಷ್ಟು ಜನರು ೩೫ ವರ್ಷಕ್ಕಿಂತ ಸಣ್ಣವರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಲಭಿಸುವುದು ಕಷ್ಟಸಾಧ್ಯವಾಗಿದೆ. ಯುವಜನರ ಉದ್ಯೋಗದ ಸಾಮಾರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದರೆ ಅಯಾ ಉದ್ಯೋಗಗಳ ಹಿನ್ನಲೆಯಲ್ಲಿ ಸೂಕ್ತ ತರಬೇತಿಯು ಅತ್ಯಂತ ಅಗತ್ಯವಾಗಿದೆ. ತಾಂತ್ರಿಕತೆ ಇಂದು ಎಲ್ಲಾರಂಗಗಳಲ್ಲಿ ವ್ಯಾಪಕವಾಗಿರುವ ಕಾರಣ ಅದರ ಅಗತ್ಯವೂ ಇದೆ ಆದುದರಿಂದ ಈ ಎಲ್ಲಾ ವಿಷಯಗಳನ್ನು ಉನ್ನತಿ ಕ್ಯಾರಿಯರ್ ಅಕಾಡಮಿಯು ಒಬ್ಬ ಅಭ್ಯರ್ಥಿಗೆ ಒದಗಿಸುವಲ್ಲಿ ಉತ್ತಮ ರೀತಿಯ ಪ್ರಯತ್ನವನ್ನು ಮಾಡುತ್ತಾಬಂದಿದೆ ಇದರ ಸದುಪಯೋಗ ವಿದ್ಯಾರ್ಥಿಗಳಿಗೆ ಒದಗುವಂತಾಗಲಿ ಎಂದು ಅಕಾಡೆಮಿಯ ಸ್ಥಾಪಕರಾದ ಪ್ರೇಮ್ ಪ್ರಸಾದ್ ಶೆಟ್ಟಿ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೊಂದು ಚಾರಿತ್ರಿಕ ದಾಖಲೆ, ಮುಂದಿನ ದಿನಗಳಲ್ಲಿ ಪದವಿಯ ಜೊತೆಗೆ ವೃತ್ತಿಕೌಶಲ್ಯ ತರಬೇತಿಯೂ ದೇಶ-ವಿದೇಶಗಳಲ್ಲಿ ಅಗತ್ಯವಾಗಿದೆ. ಪ್ರಸ್ತುತ ಉದ್ಯೊಗ ಒಂದು ಪ್ರಾಥಮಿಕ ಅಗತ್ಯವಾಗಿದೆ. ಸಂತ ಮೇರಿ ಕಾಲೇಜಿನ ವಿದ್ಯಾರ್ಥಿಗಳು ಸಮಾಜದಲ್ಲಿ ಯಾವ ಕಾರಣಕ್ಕೆ ಉತ್ತಮರು ಎಂಬ ಪ್ರಶ್ನೆಗೆ ನಮ್ಮ ಕಾಲೇಜಿನಲ್ಲಿ ಸಂಘಟಿಸುವ ತರಬೇತಿ ಕಾರ್ಯಕ್ರಗಳು ಆಗಿವೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಪ್ರಶಂಸೆ ಮಾತುಗಳನ್ನು ಕಾಲೇಜಿನ ಪ್ರಾಶುಂಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ ರವರು ವ್ಯಕ್ತಪಡಿಸಿದರು.

ನವೀನ್ ನಾಯಕ್ ರವರು ಒಡಂಬಡಿಕೆಯ ಮುಖ್ಯಾಂಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು ಹಾಗೂ ಪರಿಪೂರ್ಣ ಮಾಹಿತಿಯನ್ನು ತರಬೇತಿಯ ರೂಪದಲ್ಲಿ ನೀಡಿದರು.ಪ್ರಿಯಾಂಕ ಪ್ರಾರ್ಥಿಸಿ, ಕಾಲೇಜಿನ ಉದ್ಯೋಗ ಮಾಹಿತಿ ಘಟಕದ ಸಂಯೋಜಕಿ ತನುಜಾ ಸುವರ್ಣ ಸ್ವಾಗತಿಸಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ.ಪ್ರವೀಣ್ ಕುಮಾರ್ ಪ್ರಸ್ತಾವನೆಗೈದರು. ಆಕಾಂಕ್ಷ ನಿರೂಪಿಸಿ, ರೊಯ್‌ಸ್ಟನ್ ವಂದಿಸಿದರು.

ಶಿರ್ವ: ಕ್ಯಾನ್ಸರ್ ಪೀಡಿತ ಒಬ್ಬಂಟಿ ವ್ಯಕ್ತಿಗೆ ಗ್ರಾ.ಪಂ ಅಧ್ಯಕ್ಷರ ವಾಟ್ಸಪ್ ಗ್ರೂಪ್ ನಿಂದ 1.58 ಲಕ್ಷ ರೂ ನೆರವು

Posted On: 13-05-2022 08:15PM

ಶಿರ್ವ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ಪೊದಮಾಲೆ ನಿವಾಸಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಹೆನ್ರಿ ಅರಾನ್ನಾರವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸುಮಾರು 1.50 ಲಕ್ಷ ರೂ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗಿತ್ತು. ಈ ವಿಚಾರವನ್ನು ತಿಳಿದ ಶಿರ್ವ ಗ್ರಾ.ಪಂ ಅಧ್ಯಕ್ಷ, ಬಂಟಕಲ್ಲು ವಾರ್ಡಿನ ಸದಸ್ಯ ಕೆ ಆರ್ ಪಾಟ್ಕರ್ ರವರು ತಮ್ಮ ವಾರ್ಡ್ ನ ಬಂಟಕಲ್ಲು ವಾರ್ಡ್ ವಾಟ್ಸಪ್ ಗ್ರೂಪ್ ಮೂಲಕ ಈ ಬಗ್ಗೆ ಒಂದು ಸಂದೇಶವನ್ನು ಹಾಕಿದ್ದರು. ಕೇವಲ ಅರ್ಧ ದಿನದ ಅವಧಿಯಲ್ಲಿ ರೂ 1.58 ಲಕ್ಷ ರೂ ಯನ್ನು ಆ ವಾರ್ಡಿನ ಸಹೃದಯಿ ಬಾಂಧವರಿಂದ ಸಂಗ್ರಹವಾಗಿತ್ತು.

ಈ ಸ್ಪಂದನೆಗೆ ಕೆ ಆರ್ ಪಾಟ್ಕರ್ ರವರು ವಾಟ್ಸಪ್ ಮೂಲಕವೇ ಕೃತಜ್ಞತೆ ಸಲ್ಲಿಸಿದ್ದರು. ಆಸ್ಪತ್ರೆಯ ವೆಚ್ಚ ಭರಿಸಲು ಹಣ ಸಂಗ್ರಹವಾಗುತ್ತಿದ್ದಂತೆ ಹೆನ್ರಿ ಅರಾನ್ನಾ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಸಂಗ್ರಹವಾದ ಹಣವನ್ನು ಆಸ್ಪತ್ರೆಗೆ ನೀಡಬೇಕಾಗಿದ್ದ ಬಾಕಿ ಮೊತ್ತವನ್ನು ಪಾವತಿಸಲು ಹಾಗೂ ಅವರ ಅಂತ್ಯಕ್ರಿಯೆಯ ವೆಚ್ಚಕ್ಕೆ ಉಪಯೋಗಿಸಲಾಯಿತು.