Updated News From Kaup

ಹೆಜಮಾಡಿ : ಗ್ಯಾಸ್ ಸಿಲಿಂಡರ್ಗಳಿದ್ದ ಲಾರಿಗೆ ಬೆಂಕಿ ; ತಪ್ಪಿದ ಭಾರಿ ಅನಾಹುತ

Posted On: 12-05-2022 10:30PM

ಹೆಜಮಾಡಿ : ಇಲ್ಲಿನ ಟೋಲ್ ಬಳಿ ನಿಲ್ಲಿಸಿದ್ದ ಗ್ಯಾಸ್ ಸಿಲಿಂಡರ್ ಇದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಇದನ್ನು ಕಂಡ ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಈ ಆಕಸ್ಮಿಕ ಬೆಂಕಿಗೆ ಕಾರಣ ಶಾಟ್೯ ಸಕ್ಯೂ೯ಟ್ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಪಡುಬಿದ್ರಿ ಪೋಲಿಸರು ಬಂದು ಪರಿಶೀಲಿಸಿದ್ದಾರೆ.

ವಿಶ್ವ ಭಾರತಿ ಕಾಪು ವತಿಯಿಂದ ಮೇ 14, 15 ಮತ್ತು 16ರಂದು ಕಾಪುವಿನಲ್ಲಿ ವಿಶ್ವಭಾರತಿ ಸ್ವದೇಶಿ ಮೇಳ

Posted On: 12-05-2022 07:46PM

ಕಾಪು : ವಿಶ್ವ ಭಾರತಿ ಕಾಪು ಅರ್ಪಿಸುವ ವಿಶ್ವಭಾರತಿ ಸ್ವದೇಶಿ ಮೇಳವು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ವಠಾರದಲ್ಲಿ ಮೇ 14, 15 ಮತ್ತು 16 ರಂದು ಜರಗಲಿದೆ. ಸಮಾರಂಭವನ್ನು ಪರಮಪೂಜ್ಯ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಪಡುಕುತ್ಯಾರು ಉದ್ಘಾಟಿಸಲಿದ್ದಾರೆ.

ಸ್ವದೇಶಿ ವಸ್ತುಗಳ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಕರಕುಶಲತೆಗಳನ್ನು ಒಳಗೊಂಡಂತೆ ಸುಮಾರು 80ರಷ್ಟು ಮಳಿಗೆಗಳು ಈ ವಿಶ್ವಭಾರತಿ ಸ್ವದೇಶಿ ಮೇಳದಲ್ಲಿ ಇರಲಿದೆ. ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಂದ ಹಿರಿಯರವರೆಗೆ ಸ್ಪರ್ಧಾ ಕಾರ್ಯಕ್ರಮ, ಚಿತ್ರೋತ್ಸವ, ಸ್ಥಳೀಯ ಪ್ರತಿಭೆಗಳಿಂದ ಕಾರ್ಯಕ್ರಮಗಳು ನಡೆಯಲಿದೆಯೆಂದು ವಿಶ್ವಭಾರತಿ ಇದರ ಪ್ರಮುಖರಾದ ರಂಗಕರ್ಮಿ ಬಾಸುಮ ಕೊಡಗು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೇ 14, ಶನಿವಾರ ಪೂರ್ವಾಹ್ನ 10ರಿಂದ ಉದ್ಘಾಟನಾ ಸಮಾರಂಭ ಮತ್ತು ಪುನೀತ ನಮನ ಕಾರ್ಯಕ್ರಮ, ಮೂರು ತಿಂಗಳಿಂದ ಎರಡು ವರ್ಷದ ಮಕ್ಕಳಿಗೆ ಆರೋಗ್ಯವಂತ ಶಿಶು ಸ್ಪರ್ಧೆ ಎಳೆಯರ ಅಂಗಳ, ಮಧ್ಯಾಹ್ನ 2ರಿಂದ 5ರವರೆಗೆ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ, ಜನಪದ/ದೇಶೀ ನೃತ್ಯ ಸ್ಪರ್ಧೆ, ಮೇ 15ರಂದು ಯುವಕ-ಯುವತಿಯರಿಗಾಗಿ ಪ್ರತ್ಯೇಕ ದೇಶೀ ನೃತ್ಯ ಸ್ಪರ್ಧೆ, ಮಧ್ಯಾಹ್ನ 2ರಿಂದ 5ರವರೆಗೆ ಆದರ್ಶ ದಂಪತಿ ಸ್ಪರ್ಧೆ, ರಾತ್ರಿ ಆದರ್ಶ ಕಲಾವಿದರು ಅಂಬಾಗಿಲು ಇವರಿಂದ ಕರ್ಣಾಂತರಂಗ, ಮೇ 16 ಸೋಮವಾರ ಬೆಳಿಗ್ಗೆ 10ರಿಂದ ತಾರೆಯರ ತೋಟದಲ್ಲಿ ಕನ್ನಡ ತುಳು ಚಿತ್ರರಂಗದ ತಾರೆಯರ ಸಂಗಮ ಮತ್ತು ಮುಖಾಮುಖಿ, ಮೇ 16 ಅಪರಾಹ್ನ 2ರಿಂದ ಮಹಿಳೆಯರಿಗಾಗಿ ಜನಪದ ಗೀತೆ ಸ್ಪರ್ಧೆ ನಾರೀ ಧ್ವನಿ, ರಾತ್ರಿ ಸ್ಥಳೀಯ ಕಲಾವಿದರಿಂದ ನೃತ್ಯ ವೈಭವ, ಪ್ರತಿದಿನ ಸಂಜೆ 6ಗಂಟೆಯಿಂದ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ, ಸಮಾರಂಭದಲ್ಲಿ ಭಾಗವಹಿಸಿದವರಿಗೆ ಅದೃಷ್ಟ ಬಹುಮಾನದ ಅವಕಾಶವಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಭಾರತಿ ಕಾಪು ಅಧ್ಯಕ್ಷರಾದ ಕಾಪು ಶ್ರೀಕಾಂತ್ ಬಿ. ಆಚಾರ್ಯ, ಸ್ವದೇಶಿ ಮೇಳದ ಸಂಚಾಲಕರಾದ ಎಲ್ಲೂರು ಆನಂದ ಕುಂದರ್ ಉಪಸ್ಥಿತರಿದ್ದರು.

ಉದ್ಯಾವರ : ಖಾಸಗಿ ಬಸ್ ಪಲ್ಟಿ

Posted On: 12-05-2022 05:14PM

ಉಡುಪಿ : ಖಾಸಗಿ ಎಕ್ಸ್ ಪ್ರೆಸ್ ಬಸೊಂದು ಉದ್ಯಾವರ ಬಲಾಯಿಪಾದೆ ಬಳಿ ಮಗುಚಿ ಬಿದ್ದ ಘಟನೆ ಇಂದು ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಇದಾಗಿದ್ದು, ಬಲಾಯಿಪಾದೆಯ ಬಳಿ ಬ್ಯಾರಿಕೇಡ್ ದಾಟುವಾಗ ಡಿವೈಡರ್ ಮೇಲೆ ಮಗುಚಿ ಬಿದ್ದಿದೆ.

20 ಮಂದಿ ಪ್ರಯಾಣಿಕರು ಗಾಯಗೊಂಡು ಉಡುಪಿ ಮತ್ತು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳಕ್ಕೆ ಉಡುಪಿ ಸಂಚಾರಿ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿ ರಜಾ ಮಜಾ -2022 ಬೇಸಿಗೆ ಶಿಬಿರ

Posted On: 11-05-2022 07:46PM

ಕಟಪಾಡಿ : ಇಲ್ಲಿನ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ರಜಾ ಮಜಾ ಮೇ 2ರಿಂದ ಮೇ 7ರವರೆಗೆ ಕಟಪಾಡಿಯ ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಎಸ್ ವಿ ಎಸ್ ವಿದ್ಯಾವರ್ಧಕ ಸಂಘ ಇದರ ಸಂಚಾಲಕರಾದ ಕೆ ಸತ್ಯೇಂದ್ರ ಪೈ.ಶಿಬಿರವನ್ನು ಮ್ಯಾಜಿಕ್ ಮೂಲಕ ಉದ್ಘಾಟಿಸಿ ಮಕ್ಕಳ ಪ್ರತಿಭೆ ಬೆಳಗಲು ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಪ್ರತೀ ತಿಂಗಳಿಗೊಮ್ಮೆ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಶಿಬಿರದಲ್ಲಿ ಚಿತ್ರಕಲೆ ಬಗ್ಗೆ ಪ್ರಸಾದ ರಾವ್ ಉಡುಪಿ, ಮುಖವಾಡ ತಯಾರಿ ಬಗ್ಗೆ ರಮೇಶ್ ಬಂಟಕಲ್, ಮ್ಯಾಜಿಕ್- ಪ್ರಥಮ್ ಕಾಮತ್ , ಅಭಿನಯ- ನಾಗೇಶ್ ಕಾಮತ್, ಕ್ಲೇಮಾಡ್ಲಿಂಗ್, ಕ್ರಾಫ್ಟ್, ಟ್ಯಾಟೂ ಬಗ್ಗೆ - ಮುಸ್ತಫಾ, ರಂಗೋಲಿ ಆರ್ಟ್ ಬಗ್ಗೆ ಸೂರ್ಯ ಪುರೋಹಿತ್ ಕಾರ್ಕಳ ಇವರು ತರಬೇತಿಯನ್ನು ನೀಡಿದರು.

ಸಮಾರೋಪ ಸಮಾರಂಭದಲ್ಲಿ. ಎಸ್ ವಿ ಎಸ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ದೇವೇಂದ್ರ ನಾಯಕ್ ಇವರು ಮಕ್ಕಳಿಗೆ ಶುಭಹಾರೈಸಿದರು. ಸುಮಾರು 22 ಮಂದಿ ಮಕ್ಕಳು ಭಾಗವಹಿಸಿದ ಶಿಬಿರವನ್ನು ಮ್ಯಾಜಿಕ್ ವರ್ಲ್ಡ್ ನ ಪ್ರಥಮ್ ಕಾಮತ್, ನಾಗೇಶ್ ಕಾಮತ್, ಸುಜಾತ ಕಾಮತ್ ಕಟಪಾಡಿ ಇವರು ಯಶಸ್ವಿಯಾಗಿ ಆಯೋಜಿಸಿದ್ದರು.

ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯರಿಗೆ ಸನ್ಮಾನ

Posted On: 09-05-2022 11:12PM

ಸುರತ್ಕಲ್ : ಉಭಯ ಜಿಲ್ಲೆಗಳ ಲ್ಲೆಗಳ ನೂರಕ್ಕೂ ಹೆಚ್ಚು ದೇವಾಲಯಗಳ ಕುರಿತು ಅಧ್ಯಯನ ನಡೆಸಿ ಸಂಶೋಧನಾತ್ಮಕ ಲೇಖನಗಳನ್ನು ಬರೆದ,ಜಾನಪದ ಸಂಶೋಧಕ, ನಾಗಾರಾಧನೆ, ಬೂತಾರಾಧನೆ ಸಹಿತ ಜನಪದರ ಆಚರಣೆಗಳ ಕುರಿತು ಬರೆದ ಕೆ.ಎಲ್.ಕುಂಡಂತಾಯ ಅವರನ್ನು ಸುರತ್ಕಲ್ ಶಾಸಕ ಡಾ.ವೈ ಭರತ ಶೆಟ್ಟಿ, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್, ದೇವಳದ ಆನುವಂಶಿಕ ಮೊಕ್ತಸರ ಡಾ. ಮಯ್ಯ ಮುಂತಾದವರ ಉಪಸ್ಥಿತಿಯಲ್ಲಿ ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.

ಗಾನ ವೈಭವ ; ಶ್ರೀನಿವಾಸ ಕಲ್ಯಾಣ ಕಿರು ಯಕ್ಷಗಾನ ಪ್ರದರ್ಶನ

Posted On: 09-05-2022 10:49PM

ನಂದಿಕೂರು : ಸುವರ್ಣ ಪ್ರತಿಷ್ಠಾನ ಕರ್ನಿರೆ ವತಿಯಿಂದ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ಅವರಿಂದ ಗಾನ ವೈಭವ ಹಾಗೂ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಂದಿಕೂರಿನ ಸುವರ್ಣ ಸದನ ನಿವಾಸದಲ್ಲಿ ಸೋಮವಾರ ನಡೆಯಿತು.

ಕಲಾವಿದರಾದ ವಸಂತ ಗೌಡ ಕಾಯರ್ತಡ್ಕ, ಸಂತೋಷ್ ಕುಮಾರ್ ಹಿರಿಯಾಣ, ಕಾವ್ಯಶ್ರೀ ಅಜೇರು ಅವರನ್ನು ಸನ್ಮಾನಿಸಲಾಯಿತು.

ಸುವರ್ಣ ಪ್ರತಿಷ್ಠಾನ ಅಧ್ಯಕ್ಷ ಪ್ರಭಾಕರ್ ಡಿ. ಸುವರ್ಣ, ಹಿರಿಯರಾದ ಭುಜಂಗ ಡಿ. ಸುವರ್ಣ, ಶಿವಾನಂದ ಸುವರ್ಣ ಮೊದಲಾದವರಿದ್ದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

ಔಷಧ ರಹಿತ ಕೆಚ್ಚಲು ಬಾವು ಗುಣಪಡಿಸುವಿಕೆ ಕುರಿತು ಮಾಹಿತಿ ಕಾರ್ಯಾಗಾರ

Posted On: 08-05-2022 05:46PM

ಕಾಪು : ಕರ್ನಾಟಕ ಹಾಲು ಮಹಾ ಮಂಡಲ ಬೆಂಗಳೂರು, ದ.ಕ. ಹಾಲು ಒಕ್ಕೂಟ ಮಂಗಳೂರು, ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಮಡುಂಬು ಶೇಖರ್ ಬಂಗೇರ ಅವರ ಮನೆ ವಠಾರದಲ್ಲಿ ಮೇ 4ರಂದು ಔಷಧ ರಹಿತ ಕೆಚ್ಚಲು ಬಾವು ಗುಣಪಡಿಸುವಿಕೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಕರ್ನಾಟಕ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಉದ್ಘಾಟಿಸಿದರು.

ಕೆಚ್ಚಲು ಬಾವು ರೋಗ ಕರಾವಳಿಯ ಹೈನುಗಾರಿಕೆಗೆ ಮಾರಕ ಪರಿಣಾಮ ಬೀರುತ್ತಿದೆ. ಈ ರೋಗಕ್ಕೆ ಗುರಿಯಾಗುವ ರಾಸುಗಳ ಹಾಲನ್ನು ಡೈರಿಗೆ ಪೂರೈಸಲು ಅವಕಾಶವಿಲ್ಲದೆ ಇದ್ದು, ಅದನ್ನು ನೀಡಿದರೆ ಕೆಎಂ ಪತ್ತೆ ಹಚ್ಚಿ ಡಿಪೋದ ಹಾಲನ್ನೇ ತಿರಸ್ಕರಿಸುವ ತಂತ್ರಜ್ಞಾನ ಕೆಎಂಎಫ್ ಡೈರಿಯಲ್ಲಿದೆ. ಹೈನುಗಾರರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಇಸ್ರೇಲ್ ಮಾದರಿಯಲ್ಲಿ ಚುಚ್ಚು ಮದ್ದು ಇಲ್ಲದೇ ಕೆಚ್ಚಲು ಬಾವು ರೋಗ ನಿಯಂತ್ರಿಸಲು ರೈತರಿಗೆ ಪ್ರಾಯೋಗಿಕ ನೆಲೆಯಲ್ಲಿ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಹಾಲು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಡಾ ರವಿರಾಜ ಹೆಗ್ಡೆ ಕೊಡವೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಔಷಧ ರಹಿತವಾಗಿ ಕೆಚ್ಚಲು ಬಾವು ರೋಗದ ಉಪಶಮನಕ್ಕೆ ಕೆಎಂಎಫ್ ಮುಂದಾಗಿದೆ. ಇದರಿಂದಾಗಿ ರಾಸುಗಳ ಆರೋಗ್ಯ ಕಾಪಾಡಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ತಾಂತ್ರಿಕ ಮಾರ್ಗದರ್ಶಕ ರಘೋತ್ತಮ್ ಅವರು ಔಷಧ ರಹಿತ ಕೆಚ್ಚಲು ಬಾವು ಗುಣಪಡಿಸುವಿಕೆಯ ಸಮಗ್ರ ಮಾಹಿತಿ ನೀಡಿದರು. ಶಾಂತಾರಾಮ ಶೆಟ್ಟಿ, ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ| ಅನಿಲ್‌ ಕುಮಾರ್‌ ಶೆಟ್ಟಿ, ಡಾ| ಟಿ. ವಿ. ಶ್ರೀನಿವಾಸ್, ಡಾ| ಮಹೇಶ್ವರಪ್ಪ, ವೈದ್ಯ ಡಾ| ಧನಂಜಯ್, ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಉಪಸ್ಥಿತರಿದ್ದರು.

ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ವಿಸ್ತರಣಾಧಿಕಾರಿ ಯಶವಂತ್ ನಿರೂಪಿಸಿದರು. ಸಂಘದ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ವಂದಿಸಿದರು.

ಕಾಂಗ್ರೆಸ್ಗೆ ಗುಡ್ ಬೈ ಹೇಳಿದ ಪ್ರಮೋದ್ ಮಧ್ವರಾಜ್

Posted On: 07-05-2022 04:38PM

ಉಡುಪಿ : ಕರಾವಳಿ ರಾಜಕೀಯದಲ್ಲಿ ಬಹಳ ದಿನಗಳಿಂದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಮಾತು ಇಂದು ಸತ್ಯವಾಗಿದೆ.

ಕಾಂಗ್ರೆಸ್ ಸರಕಾರದ ಸಂದರ್ಭ ಮೀನುಗಾರಿಕೆ, ಕ್ರೀಡಾ ಸಚಿವರಾಗಿ, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜನಪರ ಕಾರ್ಯ ಮಾಡಿದ್ದರು.

ಇದೀಗ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷರಿಗೆ ರವಾನಿಸಿದ್ದಾರೆ.

ಯಾವ ರಾಜಕೀಯ ಪಕ್ಷಕ್ಕೆ ಸೇರಲಿದ್ದಾರೆ? ಅಥವಾ ರಾಜಕೀಯದಿಂದ ದೂರವಿದ್ದು ಜನಪರ ಕಾರ್ಯದಲ್ಲಿ ತೊಡಗಲಿದ್ದಾರೆಯೇ ಎಂಬುದು ಸದ್ಯದ ಕುತೂಹಲವಾಗಿದೆ.

ಪಡುಬಿದ್ರಿ ಠಾಣೆ ಪಿಎಸ್ ಐ ಆಗಿ ಪುರುಷೋತ್ತಮ್ ನೇಮಕ

Posted On: 06-05-2022 07:21PM

ಪಡುಬಿದ್ರಿ: ಇಲ್ಲಿನ ಪೋಲಿಸ್ ಠಾಣೆಗೆ ನೂತನ ಪಿಎಸ್ ಐ ಆಗಿ ಪುರುಷೋತ್ತಮ್ ರವರು ನೇಮಕಗೊಂಡಿದ್ದಾರೆ.

ಪಡುಬಿದ್ರಿ ಠಾಣೆಯಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್ ಕುಮಾರ್ ಮಂಗಳೂರಿನ ಐಜಿ ಕಛೇರಿಗೆ ವರ್ಗಾವಣೆ ಆಗಿದ್ದಾರೆ. ನೂತನ ಪಿಎಸ್ ಐ ಪುರುಷೋತ್ತಮ್ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಎಬಿವಿಪಿ ಉಡುಪಿ : ಪಿಎಸ್ಐ,ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

Posted On: 04-05-2022 08:09PM

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಪಿಎಸ್ಐ ನೇಮಕಾತಿ ಮತ್ತು ಕರ್ನಾಟಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದ ಅಕ್ರಮವನ್ನು ಖಂಡಿಸಿ ಅಕ್ರಮ ಚಟುವಟಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಅತ್ಯಂತ ಕಠಿಣ ಕ್ರಮ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಯದ ವೀಣಾ ಬಿ.ಎನ್ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಆಶಿಶ್ ಶೆಟ್ಟಿ, ತಾಲೂಕು ಸಂಚಾಲಕ ಸುಮುಖ ಭಟ್, ನಗರ ಕಾರ್ಯದರ್ಶಿ ಆಕಾಶ್, ಸಹ ಕಾರ್ಯದರ್ಶಿಗಳಾದ ಹೃತಿಕ್, ಸಿಂಚನ, ಶ್ರೀಹರಿ, ಪ್ರಮುಖ ಕಾರ್ಯಕರ್ತರಾದ ಅಜಿತ್, ಶಾರ್ವರಿ, ದೀಪೇಶ್, ಶ್ರೀಕಂಠ, ದಿಶಾನ್, ಭೂಷಣ್, ಸಂಹಿತ್ ಮತ್ತಿತರರು ಉಪಸ್ಥಿತರಿದ್ದರು.