Updated News From Kaup
ಕೇಂಜ ಗರಡಿಯ ಅರ್ಚಕ ಸುರನಾಥ ಪೂಜಾರಿಯವರಿಗೆ ನುಡಿನಮನ

Posted On: 05-06-2022 10:54PM
ಕಾಪು : ಕೇಂಜ ಗರಡಿಯಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ಪೂ ಪೂಜನಾ ಕಾರ್ಯ ನೆರವೇರಿಸುತ್ತಿದ್ದ ಸುರನಾಥ ಪೂಜಾರಿ (ಬಾಬಣ್ಣ)ಯವರು ಮೇ 31ರಂದು ಅಸೌಖ್ಯದಿಂದ ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿಕೋರುವ ನಿಟ್ಟಿನಲ್ಲಿ ಜೂನ್ 5ರಂದು ಕೇಂಜ ಗರಡಿ ವಠಾರದಲ್ಲಿ ನುಡಿನಮನ ಕಾರ್ಯವು ಜರಗಿತು.

ಮುಲ್ಕಿ ತೋಕೂರು ತಪೋವನ ಎಂ.ಆರ್ ಪೂಂಜ ತಾಂತ್ರಿಕ ವಿದ್ಯಾಲಯ ಪ್ರಾಂಶುಪಾಲರಾದ ಹರಿ ಎಚ್ ಪಿಲಾರು, ಮುದರಂಗಡಿ ತಮ್ಮ ನುಡಿನಮನದಲ್ಲಿ ಕೇಂಜದ ಗ್ರಾಮವು ಹೂವಿನ ತೋಟದಂತೆ ಇಲ್ಲಿನ ಜನರು ಮೃದು ಸ್ವಭಾವದವರು. ಅದರಲ್ಲಿ ಓರ್ವರಾದ ಬಾಬಣ್ಣನವರನ್ನು ಹತ್ತಿರದಿಂದ ಬಲ್ಲವನಾಗಿದ್ದು ಎಲ್ಲರೊಂದಿಗೆ ಆತ್ಮೀಯನಾಗಿದ್ದು ಜಾತಿ ಮತ ಬೇಧವೆನ್ನದೆ ಸರಳ ಸಜ್ಜನಿಕೆಯಿಂದ ಉತ್ತಮ ಸಂಸ್ಕಾರಯುತ ಬಾಳನ್ನು ನಡೆಸಿ ಗೌರವದಿಂದಲೂ, ಪ್ರೀತಿ ವಾತ್ಸಲ್ಯದಿಂದಲೂ ಬೆರೆತು ನಿಷ್ಠೆಯಿಂದ ಬೈದೇರುಗಳ ಸೇವೆ ಸಲ್ಲಿಸುತ್ತಿದ್ದ ಇವರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದರು.
ಈ ಸಂದರ್ಭ ಇರಂದಾಡಿ ಅರಸರ ಮನೆಯ ಜಗದೀಶ್ ಅರಸ, ಅರುಣ್ ಕುಮಾರ್ ಶೆಟ್ಟಿ ಪಡು ಇರಂದಾಡಿ, ರಾಘು ಶೆಟ್ಟಿ ಪಣಿಯೂರು ಗುತ್ತು, ಶಂಕರ ಶೆಟ್ಟಿ ಬರ್ಪಾಣಿ, ಪವನ್ ಶೆಟ್ಟಿ ನಡುಗುತ್ತು, ಕುತ್ಯಾರು ನವೀನ್ ಶೆಟ್ಟಿ, ಕೃಷ್ಣ ಪೂಜಾರಿ ಕೇಂಜ, ಸುಧಾಕರ ಪೂಜಾರಿ, ಸಾಯಿನಾಥ್ ಶೆಟ್ಟಿ, ಸಂಪತ್ ಕುಮಾರ್, ದೇವರಾಜು ಬಿ ಶೆಟ್ಟಿ, ಪ್ರವೀಣ್ ಭಂಡಾರಿ, ರಾಜೇಶ್ ಶೆಟ್ಟಿ, ಸತೀಶ್ ಪಾತ್ರಿ, ಮೃತರ ಕುಟುಂಬಸ್ಥರು, ಮತ್ತಿತರರು ಉಪಸ್ಥಿತರಿದ್ದರು.
ಕೇಂಜ ಗರಡಿಯ ಭಂಡಾರದ ವತಿಯಿಂದ ಮೃತರ ಪುತ್ರಿಯ ಉನ್ನತ ವಿದ್ಯಾಭ್ಯಾಸದ ಖರ್ಚು ಭರಿಸುವ ಬಗ್ಗೆ ಹಾಗೂ ಕುಟುಂಬ ನಿರ್ವಹಣೆಗೆ ಹತ್ತು ಸಮಸ್ತರ ಕ್ರೋಢೀಕರಣದಿಂದ ಸಹಾಯ ನೀಡುವುದೆಂದು ನಿರ್ಣಯಿಸಲಾಯಿತು. ಕೇಂಜ ಬಗ್ಗ ತೋಟ ಬಗ್ಗ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುತ್ಯಾರು ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮಾಗಂದಡಿ ಕಿರಣ್ ಆಳ್ವ ವಂದಿಸಿದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ವಿಶ್ವ ಪರಿಸರ ದಿನ

Posted On: 05-06-2022 09:23PM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ವತಿಯಿಂದ ದಶಮಾನೋತ್ಸವದ ಪ್ರಯುಕ್ತ ವಿಶ್ವ ಪರಿಸರ ದಿನದ ಅಂಗವಾಗಿ ವನ ಮಹೋತ್ಸವ ಕಾರ್ಯಕ್ರಮ ಮಟ್ಟಾರ್ ನಲ್ಲಿ ನಡೆಯಿತು.

ಕರಾವಳಿ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ಶಿರ್ವ ಪೋಲೀಸ್ ಠಾಣೆಯ ಉಪ ನಿರೀಕ್ಷಕರಾದ ರಾಘವೇಂದ್ರ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ವ ಹಿಂದೂ ಪರಿಷದ್ ಮಟ್ಟಾರು ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಪ್ರಖಂಡ ಅಧ್ಯಕ್ಷರಾದ ಜಯಪ್ರಕಾಶ್ ಪ್ರಭು ಪ್ರಸ್ತಾವನೆಗೈದರು. ಬಜರಂಗದಳ ಕಾಪು ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ, ಮಟ್ಟಾರು ಘಟಕ ಬಜರಂಗದಳ ಸಂಚಾಲಕ ವಿಶ್ವನಾಥ ಆಚಾರ್ಯ, ದುರ್ಗಾವಾಹಿನಿ ಸಂಚಾಲಕಿ ದೀಕ್ಷಾ ಪ್ರಭು, ಸುರಕ್ಷಾ ಪ್ರಮುಖ್ ಅಭಿಜಿತ್ ಪೂಜಾರಿ, ಕೋಶಾಧಿಕಾರಿ ಅಜಿತ್ ಪೂಜಾರಿ, ಸೇವಾ ಪ್ರಮುಖ್ ಸತೀಶ್, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಟ್ಟಾರು ಇದರ ಕಾರ್ಯಕರ್ತರು, ಮತ್ತಿತರರು ಪಾಲ್ಗೊಂಡಿದ್ದರು.
ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಂಚಿನಡ್ಕ ಮಿಂಚಿನ ಬಾವಿ ಮೇಲ್ಛಾವಣಿ ವಿವಾದ : ಆಕ್ಷೇಪಣೆ ಹಿಂಪಡೆದ ಕುಟುಂಬ

Posted On: 04-06-2022 06:53PM
ಪಡುಬಿದ್ರಿ : ಕಂಚಿನಡ್ಕ ಮಿಂಚಿನ ಬಾವಿಯ ಶ್ರೀ ಕೋರ್ದಬ್ಬು ದೈವಸ್ಥಾನದ ಮೇಲ್ಛಾವಣಿ ಬಗ್ಗೆ ಸಾನಿಧ್ಯದ ಬಳಿಯ ಎರಡು ಮುಸ್ಲಿಂ ಕುಟುಂಬಗಳು ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಸಲ್ಲಿಸಿದ್ದ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆದಿದೆ. ಪಂಚಾಯತ್ ರಸ್ತೆಯಾದ್ದರಿಂದ ಗ್ರಾಮಪಂಚಾಯತ್ ಸರಿಯಾದ ನಿರ್ಧಾರ ಕೈಗೊಳ್ಳಬೇಕಿದೆ. ದೈವಸ್ಥಾನದ ಮುಂಭಾಗದ ಈ ರಸ್ತೆಯಲ್ಲಿ ಎಲ್ಲಾ ಸಮುದಾಯದ ಜನರು ಹೋಗುತ್ತಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಆಕ್ಷೇಪಣೆ ಹಿಂಪಡೆದ ಮಹಿಳೆಯೋರ್ವರು ಮಾತನಾಡಿ ದೈವಸ್ಥಾನಕ್ಕೆ ಮೇಲ್ಛಾವಣಿ ಹಾಕುವ ಬಗ್ಗೆ ಆಕ್ಷೇಪ ಮುಂಚಿನಿಂದಲೂ ಇರಲಿಲ್ಲ. ನಾವು ರಸ್ತೆಗೆ ಹಾಕಬೇಡಿ ಎಂದು ಹೇಳುವುದು. 2004 ರಿಂದಲೂ ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ನಾವು ತೊಂದರೆ ಮಾಡಿಲ್ಲ. ನಮ್ಮಿಂದಾಗಿ ಯಾವುದೇ ಗಲಾಟೆಯಾಗಬಾರದೆಂದು ನಾವು ಆಕ್ಷೇಪಣೆ ಹಿಂಪಡೆದಿದ್ದೇವೆ. ಯಾವುದೇ ರೀತಿಯ ಹೆದರಿಕೆಯ ವಾತಾವರಣ ಆಗಬಾರದು. ಕಾನೂನು ಎಲ್ಲರಿಗೂ ಒಂದೇ. ದಿನನಿತ್ಯ ಓಡಾಡುವ ರಸ್ತೆ ಇದಾಗಿದೆ. ಗಾಳಿಯ ರಭಸಕ್ಕೆ ಮೇಲ್ಛಾವಣಿಯ ತಗಡಿನಿಂದ ತೊಂದರೆಯಾಗಬಾರದು. ಪಡುಬಿದ್ರಿ ಠಾಣೆಯಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಯಾವುದೇ ಗೊಂದಲವಾಗಿಲ್ಲ. ಗೊಂದಲವಾಗಿದೆ ಎಂದು ಸೃಷ್ಟಿಸಲಾಗಿದೆ ಎಂದರು.
ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಮಾತನಾಡಿ ನಾವೆಲ್ಲರೂ ಸಹಬಾಳ್ವೆ, ಅನ್ಯೋನ್ಯತೆಯಿಂದ ಬಾಳಬೇಕಾಗಿದೆ. ಕಾನೂನಾತ್ಮಕವಾಗಿ ಪಂಚಾಯತ್ ಇದನ್ನು ಪರಿಶೀಲಿಸಲಿದೆ. ಡೋರ್ ನಂಬರ್ ಇಲ್ಲವಾದ್ದರಿಂದ ಪಂಚಾಯತ್ನಿಂದ ಯಾವುದೇ ಪರವಾನಗಿ ನೀಡಲಾಗದು. ಧಾರ್ಮಿಕ ಕೇಂದ್ರವಾದ್ದರಿಂದ ಪರಸ್ಪರ ಸಹಮತದಿಂದ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಆಕ್ಷೇಪಣೆ ಹಿಂಪಡೆದ ಕುಟುಂಬ ವರ್ಗ, ಸ್ಥಳೀಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.
ಸಂತ ಮೇರಿ ಮಹಾವಿದ್ಯಾಲಯ, ಶಿರ್ವದಲ್ಲಿ ‘ರಾಷ್ಟ್ರೀಯ ಭೂ-ಯುವಸೇನಾ' ಎನ್.ಸಿ.ಸಿ.ಯಿಂದ ವಿಶ್ವ ಪರಿಸರ ದಿನಾಚರಣೆ

Posted On: 04-06-2022 05:35PM
ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಪ್ರಕೃತಿಯ ರಕ್ಷಣೆ ಮತ್ತು ಪೋಷಣೆಯನ್ನು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬದಲಾವಣೆಗೊಂಡ ವಾತಾವರಣವನ್ನು ನಾವು ನೋಡುತ್ತಿದ್ದೇವೆ. ನಮ್ಮ ಪರಿಸರ ರಕ್ಷಣೆ ಮತ್ತು ಗಿಡಗಳ ಪೋಷಣೆಯನ್ನು ಮಾಡದಲ್ಲಿ ಮುಂದೆ ಮುಂದಿನ ಪೀಳಿಗೆಗಳಿಗೆ ಹಾಗೂ ಎಲ್ಲ ಜೀವರಾಶಿಗಳಿಗೆ, ಆಮ್ಲಜನಕ ಸೇರಿದಂತೆ ಅನೇಕ ಸವಾಲುಗಳು ಎದುರಿಸಬೇಕಾಗುತ್ತದೆ. ಎನ್ ಸಿಸಿ ಕೆಡೆಟ್ಗಳು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಿಸರ ಕಾಳಜಿ ಮಾಡುವ ಮೂಲಕ ಸಮಾಜದ ಒಳಿತಿಗಾಗಿ ಇತರರಿಗೆ ಮಾದರಿ ಮಾದರಿಯಾಗಬೇಕು ಎಂದು ಅವರ ಕಾರ್ಯವನ್ನು ಶ್ಲಾಘಿಸಿ ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದಂತಹ ಇಂಟರ್ ಗ್ರೂಪ್ ಶೂಟಿಂಗ್ ಕಾಂಪಿಟೇಶನ್ ತರಬೇತಿಯಲ್ಲಿ ಭಾಗವಹಿಸಿ ಕಾಲೇಜಿನ ಕೀತಿ೯ಯನ್ನು ಉಜ್ವಲಗೊಳಿಸಿದ ಕೆಡೆಟ್ ಆಶಿಶ್ ಪ್ರಸಾದ್ ನನ್ನು ಅಭಿನಂದಿಸಲಾಯಿತು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ವಿಶ್ವ ಪರಿಸರ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಮತ್ತು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಕ್ಯಾಡೆಟ್ ಸುಶ್ಮಿತಾ ಎಸ್ ಅಮೀನ್ ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯನ್ನು ಮತ್ತು ಉದ್ದೇಶವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉಪನ್ಯಾಸಕಿ ಯಶೋದ, ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತಾ, ಸುರಕ್ಷಾ ಉಪಸ್ಥಿತರಿದ್ದರು. ಕಂಪನಿ ಸರ್ಜೆಂಟ್ ಕ್ವಾರ್ಟರ್ ಮಾಸ್ಟರ್ ಮೋಹಿತ ಎನ್ ಸಾಲಿಯಾನ್, ಕಾರ್ಪೋರಲ್ ಧೀರಜ್, ಅನುಪ್ ನಾಯಕ ಮತ್ತಿತರರು ಸಹಕರಿಸಿದರು. ಕ್ಯಾಡೆಟ್ ವರ್ಷಿತ ಸರ್ವರನ್ನೂ ಸ್ವಾಗತಿಸಿ, ಕ್ಯಾಡೆಟ್ ಪೂಜಾ ವಂದಿಸಿದರು. ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಡಿಯಾಳಿ ಬ್ರಹ್ಮಕಲಶೋತ್ಸವ ಹೊರಕಾಣಿಕೆ ಸಮರ್ಪಣೆ : ಕೃಷ್ಣ ಮೂರ್ತಿ ಆಚಾರ್ಯ ಹಾಗೂ ಅಭಿಮಾನಿ ಬಳಗದಿಂದ ತಂಪು ಪಾನೀಯಗಳ ವಿತರಣೆ

Posted On: 02-06-2022 10:14PM
ಉಡುಪಿ : ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಹಸಿರು ಹೊರಕಾಣಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ತಂಪುಪಾನೀಯಗಳ ವಿತರಣೆಯನ್ನು ಸಮಾಜ ಸೇವಕರಾದ ಕೃಷ್ಣ ಮೂರ್ತಿ ಆಚಾರ್ಯ ಹಾಗೂ ಅವರ ಅಭಿಮಾನಿ ಬಳಗ ವತಿಯಿಂದ ಮಾಡಲಾಯಿತು.

ಈ ಸಂದರ್ಭ ಸಮಾಜ ಸೇವಕರಾದ ಕೆ ಕೃಷ್ಣ ಮೂರ್ತಿ ಆಚಾರ್ಯ, ಚರಣ್ ಬಂಗೇರ, ಪ್ರಭಾಕರ ಆಚಾರ್ಯ ಕಟಪಾಡಿ, ಯುವರಾಜ್, ಓಂಕರ್ , ಗುರು ಪ್ರಸಾದ್, ಕಾವನ್, ಸಿರಾಜ್ , ಪ್ರಣಮ್, ಕೃಷ್ಣ ಮೂರ್ತಿ ಆಚಾರ್ಯ ಅಭಿಮಾನಿ ಬಳಗದ ಸದಸ್ಯರುಗಳು ಉಪಸ್ಥಿತರಿದ್ದರು.
ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ವಿಶ್ವ ತಂಬಾಕು ರಹಿತ ದಿನದಂದು ತಂಬಾಕು ಸೇವನೆ ವಿರುದ್ಧ ಜಾಗೃತಿ

Posted On: 02-06-2022 10:00PM
ಕಾಪು : ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಶಿರ್ವ ಗ್ರಾಮ ಪಂಚಾಯತ್ ಮೇ 31ರಂದು ವಿಶಿಷ್ಟ ರೀತಿಯಲ್ಲಿ ತಂಬಾಕು ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ನಡೆಸಿತು.

ಬೆಳಗಿನ ಸಮಯದಲ್ಲಿ ಶಿರ್ವ ಪೇಟೆ ಪರಿಸರದಲ್ಲಿ ತಂಬಾಕು, ಗುಟ್ಕಾ ಇತ್ಯಾದಿಗಳನ್ನು ಸೇವಿಸುವವರಿಗೆ ಗುಲಾಬಿ ಹೂವನ್ನು ನೀಡಿ ತಂಬಾಕು ಪದಾರ್ಥಗಳನ್ನು ಸೇವಿಸದಂತೆ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. ತಂಬಾಕು ಸೇವನೆ ಪರಿಸರಕ್ಕೆ ಹಾನಿಕರ ಎಂಬ ಈ ವರ್ಷದ ಘೋಷವಾಕ್ಯದ ಹಿನ್ನಲೆಯಲ್ಲಿ ತಂಬಾಕು ಸೇವಿಸಿ ಉಗುಳಿ ಪರಿಸರವನ್ನು ಹಾಳು ಮಾಡದಂತೆ, ಸ್ವಚ್ಚತೆಯನ್ನು ಕಾಪಾಡುವಂತೆ ಜಾಗೃತಿ ಮೂಡಿಸಲಾಯಿತು.

ಸುಮಾರು 15 ದಿನಗಳಿಂದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರ ನೇತೃತ್ವದಲ್ಲಿ ಶಿರ್ವ ಬಸ್ಸು ನಿಲ್ದಾಣ, ಪಂಚಾಯತ್ ಪರಿಸರ , ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸಿ ಉಗುಳುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯಿದೆ ಪ್ರಕಾರ ದಂಡ ವಿಧಿಸುವ ಕಾರ್ಯಚರಣೆ ನಡೆಯುತ್ತಿತ್ತು. ಆದರೆ ಇಂದು ಯಾವುದೇ ದಂಡವಿಧಿಸದೆ ಗುಲಾಬಿ ಹೂವನ್ನು ನೀಡಿ ತಂಬಾಕು ಸೇವಿಸದಂತೆ ಜಾಗೃತಿ ಮೂಡಿಸಲಾಯಿತು. ತಂಬಾಕು ವ್ಯಸನಿಯೋರ್ವರಿಗೆ ಗುಲಾಬಿ ನೀಡಿ ಮಾಹಿತಿ ತಿಳಿಸಿದಾಗ ಅವರಲ್ಲಿದ್ದ ತಂಬಾಕು ಪದಾರ್ಥಗಳನ್ನು ಬಸ್ಸು ನಿಲ್ದಾಣದಲ್ಲಿರಿಸಿದ ಕಸದ ಡಬ್ಬಿಗೆ ಬಿಸಾಡಿ ಇನ್ನು ಮುಂದೆ ತಂಬಾಕು ಸೇವಿಸಲಾರೆ ಎಂದು ಹೇಳಿದ ಪ್ರಸಂಗವೂ ನಡೆಯಿತು.

ಈ ಜಾಗೃತಿ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರೊಂದಿಗೆ ಪಂಚಾಯತ್ ಸಿಬ್ಬಂದಿಗಳಾದ ಕಿಶೋರ್, ರಕ್ಷಿತ್, ಯೋಗಿಶ್, ಅಮೃತ, ಸುಮಭಾಮ, ಶ್ವೇತ ಭಾಗವಹಿಸಿದ್ದರು.
ಕೇಂಜ ಗರಡಿ ಬ್ರಹ್ಮ ಬೈದೇರುಗಳ ಪೂಜಾ ಪೂಜಾರ್ಮೆಯನ್ನು ನಿರ್ವಹಿಸುತ್ತಿದ್ದ ಸುರನಾಥ ಅಮೀನ್ ( ಬಾಬಣ್ಣ) ನಿಧನ

Posted On: 01-06-2022 08:24PM
ಕಾಪು : ಗರಡಿಗಳ ಸಾಲಿನಲ್ಲಿ ಕೆಮ್ಮಲೆಗೆ ಸರಿ ಸಮಾನವಾದ ಕೇಂಜ ಮಲೆಯಲ್ಲಿ ವಿರಾಜಮಾನರಾದ ಬ್ರಹ್ಮ ಬೈದೇರುಗಳ ಪೂಜಾ ಪೂಜಾರ್ಮೆಯನ್ನು ನಿರ್ವಹಿಸುತ್ತಿದ್ದ ಸುರನಾಥ ಅಮೀನರು ಮೇ31ರಂದು ಅಲ್ಪ ಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.
ಪ್ರೀತಿಯಿಂದ ಬಾಬಣ್ಣ ಎಂದು ಕರೆಯಲ್ಪಡುತ್ತಿದ್ದ ಅವರು ಮೂಲ ಸಂಪ್ರದಾಯಕ್ಕೆ ಧಕ್ಕೆ ಬರದ ರೀತಿ ಆರಾಧನಾ ಪ್ರಕ್ರಿಯೆಯನ್ನು ಸುಮಾರು 12 ವರ್ಷಗಳ ಕಾಲ ಶ್ರದ್ದೆಯಿಂದ, ಪ್ರಾಮಾಣಿಕವಾಗಿ ಆತ್ಮ ಸಮರ್ಪಣಾ ಮನೋಭಾವದಿಂದ ನಿರ್ವಹಿಸಿದ್ದರು.
ಮುದರಂಗಡಿ ಬಿಲ್ಲವ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಕಂಚಿನಡ್ಕ ಮಿಂಚಿನ ಬಾವಿ ಮೇಲ್ಛಾವಣಿ ವಿವಾದ : ಅವಶ್ಯಕತೆ ಬಿದ್ದರೆ ಕಂಚಿನಡ್ಕ ಚಲೋಗೆ ಸಿದ್ಧ ; ಮುಂದೆ ಇಲ್ಲಿಯ ಎರಡು ಶ್ರದ್ಧಾಕೇಂದ್ರಗಳ ಅಭಿವೃದ್ಧಿಗೆ ಸಿದ್ಧತೆ - ಯಶ್ಪಾಲ್ ಸುವರ್ಣ

Posted On: 01-06-2022 07:29AM
ಪಡುಬಿದ್ರಿ : ಕಾಪು ತಾಲೂಕಿನ ಪಡುಬಿದ್ರಿ ಬಳಿಯ ಕಂಚಿನಡ್ಕದಲ್ಲಿರುವ ಪ್ರಸಿದ್ಧ ಕಾರಣಿಕದ ಸ್ಥಳ ಬಬ್ಬುಸ್ವಾಮಿ ದೈವ ಮಾಯವಾದ ಮಿಂಚಿನ ಬಾವಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನಕ್ಕೆ ತಗಡಿನ ಮೇಲ್ಛಾವಣಿ ಹಾಕುವ ಬಗೆಗೆ ಎಸ್ಡಿಪಿಐ ಬೆಂಬಲಿತ ಸ್ಥಳೀಯ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಠಾಣೆಯಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಮತ್ತು ಆಕ್ಷೇಪವೆತ್ತಿದವರ ಜೊತೆಗಿನ ಸಭೆಯು ನಡೆದಿತ್ತು. ಆದರೆ ಇದು ಪ್ರಯೋಜನಕಾರಿಯಾಗಿರಲಿಲ್ಲ.
ಮೇ. 31 ರಂದು ಕ್ಷೇತ್ರಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಹಿಂ.ಮೋರ್ಚಾದ ಪ್ರ.ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಮಾತನಾಡಿ ಶ್ರದ್ಧಾ ಭಕ್ತಿಯ ತಾಣವಾದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ಶಕ್ತಿಗಳ ಈ ಕ್ಷೇತ್ರಕ್ಕೆ ಅಡ್ಡಿಪಡಿಸಲು ಯಾರಿಂದಲು ಸಾಧ್ಯವಿಲ್ಲ. ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಪಡಿಸಲು ಅವರು ಯಾರು ಎಂದು ಪ್ರಶ್ನಿಸಿದರು.
ಸರಕಾರಿ ಜಾಗದಲ್ಲಿ ಮೇಲ್ಛಾವಣಿ ಬರುತ್ತದೆ ಎಂದು ಅವರು ದೂರುತ್ತಿದ್ದಾರೆ, ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿಕೊಂಡು ಇರುವ ಇತರೆ ಕಟ್ಟಡಗಳ ಬಗ್ಗೆಯು ಶೀಘ್ರದಲ್ಲೇ ನಾವು ಕಾರ್ಯಪ್ರವೃತ್ತರಾಗಲಿದ್ದೇವೆ. ಸಮಸ್ತ ಹಿಂದೂ ಸಮಾಜ ದಲಿತ ಸಮುದಾಯದ ಬೆಂಬಕ್ಕೆ ನಿಲ್ಲುತ್ತದೆ, ಅವಶ್ಯಕತೆ ಬಿದ್ದರೆ ಕಂಚಿನಡ್ಕ ಚಲೋ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ಮುಂದೆ ಕಂಚಿನಡ್ಕದಲ್ಲಿ ಎರಡು ಪವಿತ್ರ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಅಭಿವೃದ್ಧಿಯೊಂದಿಗೆ ಸನಾತನ ಹಿಂದೂ ಧರ್ಮದ ಪುನರುತ್ಥಾನ ನಡೆದು ಕಂಚಿನಡ್ಕ ವಿಜೃಂಭಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖರಾದ ಲೋಕೇಶ್ ಕಂಚಿನಡ್ಕ, ದಿನೇಶ್ ಕೋಟ್ಯಾನ್, ಸದಾಶಿವ ಕೋಟ್ಯಾನ್, ವಸಂತ ಪಾದೆಬೆಟ್ಟು, ಸಂತೋಷ್ ನಂಬಿಯಾರ್, ಶಂಕರ್ ನಂಬಿಯಾರ್, ಸುಜಿತ್ ಕಂಚಿನಡ್ಕ, ಶಂಕರ ಪಾನರ, ಸುವಾಸ್ ಶೆಟ್ಟಿ, ಗೋವಿಂದ ಕಂಚಿನಡ್ಕ, ರಮೇಶ್ ಕಂಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಐತಿಹಾಸಿಕ ಮಹತ್ವದ ಕಾಪು ಮಲ್ಲಾರು ಕೋಟೆಯಲ್ಲಿದ್ದ ಮಾರಿಯಮ್ಮನ ಮೂಲನೆಲೆ ನಿನ್ನಿಕೆರೆ ರಕ್ಷಣೆಗೆ ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಆಗ್ರಹ

Posted On: 31-05-2022 02:20PM
ಕಾಪು : ಇತಿಹಾಸ ಪ್ರಜ್ಞೆಯ ಕೊರತೆಯ ಕಾರಣದಿಂದ, ಐತಿಹಾಸಿಕ ಮಹತ್ವದ ಸ್ಥಳಗಳನ್ನು ಉಳಿಸುವಲ್ಲಿ ಸರಕಾರ, ಪುರಾತತ್ವ ಇಲಾಖೆ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ನಿರಂತರವಾಗಿ ವಿಫಲವಾಗುತ್ತಾ ಬಂದಿವೆ. ಬುದ್ಧಿವಂತರ ಜಿಲ್ಲೆಗಳಾದ ಕರಾವಳಿ ಕರ್ನಾಟಕವೂ ಐತಿಹಾಸಿಕ ಮಹತ್ವದ ಸ್ಥಳಗಳನ್ನು, ಸ್ಮಾರಕಗಳನ್ನು ಉಳಿಸುವಲ್ಲಿ ಆಸಕ್ತಿ, ಕಾಳಜಿ, ಇಚ್ಛಾಶಕ್ತಿ ತೋರಿಸದಿರುವುದು ನಿಜಕ್ಕೂ ವಿಷಾದನೀಯ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಲ್ಲಾರು ಕೋಟೆ ಇದ್ದ ಸ್ಥಳದಲ್ಲಿ ಪ್ರಸ್ತುತ ಕೋಟೆ ನಾಶವಾಗಿ ಹೋಗಿದ್ದರೂ, ಕೋಟೆ ಇದ್ದ ಸ್ಥಳದಲ್ಲಿ ನಿನ್ನೆಯವರೆಗೂ ಇದ್ದ ಅಳಿದುಳಿದ ಅವಶೇಷಗಳಲ್ಲಿ ಒಂದಾದ ನಿನ್ನಿಕೆರೆ ಇಂದು ಇಲ್ಲವಾಗುತ್ತಿರುವುದು. ಅಂದರೆ, ನಿನ್ನಿಕೆರೆಯನ್ನು ಮುಚ್ಚಲಾಗುತ್ತಿದೆಯಲ್ಲ ಎಂದು ಬೇಸರವಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಹೇಳಿದರು.
ಕಾಪುವಿನ ಪ್ರಸಿದ್ಧ ಮಾರಿಯಮ್ಮ ದೇವಿಯ ಮೂಲ ನೆಲೆ ಇದೇ ನಿನ್ನಿಕೆರೆ. ಕಾಪು ಮಾರಿಯಮ್ಮ ಮೊತ್ತಮೊದಲು ತನ್ನ ಇರವನ್ನು ತೋರಿಸಿಕೊಟ್ಟಿದ್ದು ಇದೇ ನಿನ್ನಿಕೆರೆಯಿಂದ. ಇದು ಈಗಾಗಲೇ ದಾಖಲಾದ ವಿಷಯಗಳಲ್ಲಿ ಒಂದು. ಕಳೆದ ವರ್ಷ ಈ ಐತಿಹಾಸಿಕ ಮಹತ್ವದ ನಿನ್ನಿಕೆರೆ, ಗಿಡಗಂಟಿಗಳಿಂದ ಸುತ್ತುವರಿಯಲ್ಪಟ್ಟಿತ್ತು. ಆದರೆ, ನಿನ್ನಿಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾಪು ಗ್ರಾಮ ಪಂಚಾಯತ್ ಆಗಲಿ, ಇಲ್ಲಿನ ಜನಪ್ರತಿನಿಧಿಗಳಾಗಲೀ, ಸಂಘ ಸಂಸ್ಥೆಗಳಾಗಲೀ ಯಾವುದೇ ಒಂದು ಹೆಜ್ಜೆಯನ್ನು ಇರಿಸದೆ ನಿರ್ಲಕ್ಷಿಸಿದ್ದರು. ಈ ನಿರ್ಲಕ್ಷ್ಯದ ಕಾರಣ, ಇದೀಗ ನಿನ್ನಿಕೆರೆ ಮುಚ್ಚಿಹೋಗಿದೆ. ಅಂದರೆ, ಸ್ಥಳೀಯರು ಐತಿಹಾಸಿಕ ಮಹತ್ವದ ನಿನ್ನಿಕೆರೆಯನ್ನು ಮುಚ್ಚಿ ನಾಶಪಡಿಸಲಾಗುತ್ತಿದೆಯೇ ? ಮಲ್ಲಾರುವಿನಲ್ಲಿದ್ದುದು ಅಂತಿಂಥ ಕೋಟೆಯೇನೂ ಅಲ್ಲ. ಅತ್ಯಂತ ಮಹತ್ವದ ಐತಿಹಾಸಿಕ ಕೋಟೆಯಾಗಿತ್ತು ಮಲ್ಲಾರಿನ ಕೋಟೆ ಮತ್ತು ಕೆರೆ ಹಾಗೂ ಇಲ್ಲಿದ್ದ ಕೆಲವು ಐತಿಹಾಸಿಕ ವಸ್ತುಗಳು. ಇವುಗಳ ಪೈಕಿ ಕೆರೆಯೊಂದು ನಾಶದ ಅಂಚಿನಲ್ಲಿದ್ದರೆ, ಉಳಿದವುಗಳು ಈಗಾಗಲೇ ಸಂಪೂರ್ಣ ನಾಶವಾಗಿವೆ.
ಮಲ್ಲಾರುವಿನ ಕೋಟೆ ಬರೋಬ್ಬರಿ ಹದಿನಾರು ಎಕರೆಗೂ ಅಧಿಕ ಸ್ಥಳದಲ್ಲಿ ವ್ಯಾಪಿಸಿತ್ತು. ಆದರೆ, ಇಂದು ಈ ಕೋಟೆಗೆ ಸಂಬಂಧಿಸಿದ ಒಂದೇ ಒಂದು ಕಲ್ಲು ಸಹ ನಮಗೆ ನೋಡಲು ಸಿಗುವುದಿಲ್ಲ. ಕೊಟೆಯೊಳಗಡೆ ಇದ್ದ ದಿಬ್ಬಗಳನ್ನು ನೆಲಸಮಗೊಳಿಸಲಾಗಿದೆ. ಮಾತ್ರವಲ್ಲ, ಇಲ್ಲಿದ್ದ ಕೆಲವೊಂದು ಐತಿಹಾಸಿಕ ವಸ್ತುಗಳನ್ನು ಕೂಡಾ ನಾಶಗೊಳಿಸಲಾಗಿದೆ. ಮಲ್ಲಾರಿನ ಕೋಟೆ, ವಿಜಯನಗರ ರಾಜರ ಆಡಳಿತ ಕಾಲದ್ದು ಎನ್ನುವುದೇ ಸಾಕು, ಈ ಕೋಟೆಯ ಮಹತ್ವವನ್ನು ಸಾರಿ ಹೇಳಲು. ಶಾಲಿವಾಹನ ಶಕ 1665ನೇ ರುಧಿರೋದ್ಗಾರಿ ಸಂವತ್ಸರದಲ್ಲಿ ಕಾಪು ಮರ್ದ ಹೆಗ್ಗಡೆ ಮಲ್ಲಾರಿನ ಕೋಟೆಯನ್ನು ಪುನರ್ನಿರ್ಮಿಸಿದ ಬಗ್ಗೆ ಮತ್ತು ಕಾಪು ಕಡಲ ಕಿನಾರೆಯಲ್ಲಿರುವ ಬೃಹತ್ ಬಂಡೆಯ ಮೇಲೆ ಕೋಟೆ ಇನ್ನೊಂದು ಕೋಟೆ (ಮನೋಹರಗಡ) ಕಟ್ಟಿಸಿದ ಬಗ್ಗೆ ಖ್ಯಾತ ಇತಿಹಾಸಕಾರರಾದ ಎಂ. ಗಣಪತಿ ರಾವ್ ಐಗಳ್ ಅವರ "ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ" ಗ್ರಂಥದಲ್ಲಿ ಉಲ್ಲೇಖವಿದೆ. 1740ರ ದಶಕದ ಅವಧಿಯಲ್ಲಿ ಕೆಳದಿ ಸಂಸ್ಥಾನದ ಅಧೀನಕ್ಕೆ ಒಳಪಟ್ಟ ಬಳಿಕ, ಈ ಕೋಟೆ ಬಸಪ್ಪ ನಾಯಕನ ಆಡಳಿತದಲ್ಲಿದ್ದರೆ, ಆನಂತರ ಟಿಪ್ಪು ಸುಲ್ತಾನ್ ಕಾಲದಲ್ಲಿ ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟಿತ್ತು ಈ ಐತಿಹಾಸಿಕ ಮಲ್ಲಾರಿನ ಕೋಟೆ.
ನಾಲ್ಕೈದು ದಶಕದ ಹಿಂದಿನವರೆಗೂ ಕೆಲವು ಶಾಲೆಗಳ ಶಿಕ್ಷಕರು ಮಕ್ಕಳನ್ನು ಇಲ್ಕಿಗೆ ಕರೆದುಕೊಂಡು ಬಂದು ಈ ಕೋಟೆಯನ್ನು ತೋರಿಸುತ್ತಿದ್ದರು ಎಂಬ ವಿಷಯವನ್ನು ಗ್ರಾಮದ ಹಿರಿಯರು ನೆನಪುಮಾಡಿಕೊಳ್ಳುತ್ತಾರೆ. ಟಿಪ್ಪು ಮರಣಾನಂತರ ಸಹಜವಾಗಿಯೇ ಕೋಟೆ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತು. ಟಿಪ್ಪು ಆಡಳಿತ ಕಾಲದಲ್ಲಿ ಕೊಟೆಯಲ್ಲಿದ್ದ ಐತಿಹಾಸಿಕ ಮಹತ್ವದ ಖಡ್ಗವೊಂದು ಇಂದಿಗೂ ಉಳಿದಿದ್ದು, ಇದು, ಮಲ್ಲಾರು ಕೋಟೆ ಬಳಿಯ "ಕಾಪು ಶ್ರೀ ಮಾರಿಯಮ್ಮ ದೇವಿಯ (ಶ್ರೀ ತ್ರಿಶಕ್ತಿ ಸನ್ನಿಧಿ) ಆದಿಸ್ಥಳದ ಮನೆಯಲ್ಲಿ "ಕೋಟೆ ಮಾರಿ" ಯೊಂದಿಗೆ ಗುಡಿಯಲ್ಲಿದೆ. "ಕೋಟೆ ಮಾರಿ" ನೆಲೆಯಾಗಿರುವ ಮೂಲ ಮನೆಯ ಗುಡಿಯೊಳಗೆ ಖಡ್ಗವೂ ಇದ್ದು, ಇದಕ್ಕೆ ವಾರ್ಷಿಕ ಆಯುಧ ಪೂಜೆಯ ದಿನದಂದು ಪೂಜೆಯನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಕೋಟೆ ಮಾರಿ ಮತ್ತು ಟಿಪ್ಪು ಕಾಲದ ಖಡ್ಗ ಹೊರತುಪಡಿಸಿದರೆ ಉಳಿದಿರುವ ಇನ್ನೊಂದು ಐತಿಹಾಸಿಕ ಸ್ಮಾರಕವೆಂದರೆ, ಅದು ನಂದಿಕೆರೆ ಅಥವಾ ನಿನ್ನಿಕೆರೆ. ಈ ಕೆರೆಯನ್ನು ಪ್ರಸ್ತುತ ಪೂರ್ಣವಾಗಿ ಗಿಡಗಂಟಿ ಆವರಿಸಿರುವುದರಿಂದ, ಇಲ್ಲೊಂದು ಕೆರೆ ಇದೆ ಎನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲದಂತಾಗಿದೆ. ಕೆರೆಯನ್ನು ಈಗ ನೇರವಾಗಿ ನೋಡಲು ಸಾಧ್ಯವಿಲ್ಲವಾದರೂ ಕೆರೆ ಇದೆ, ಉಳಿದಿದೆ. ಮಲ್ಲಾರು ಕೋಟೆಯ ಅತ್ಯಂತ ಮಹತ್ವದ ಐತಿಹಾಸಿಕ ಸ್ಮಾರಕವಾದ ಕೆರೆ ಹೀಗೆ ಇಷ್ಟಾದರೂ ಉಳಿದಿರುವುದು ಒಂದಷ್ಟು ಸಮಾಧಾನಕರ ವಿಷಯವೇ ಆಗಿದೆ. ಕಾಪು ಪುರಸಭೆ, ಜಿಲ್ಲಾಡಳಿತ, ಪುರಾತತ್ವ ಇಲಾಖೆ ಇನ್ನಾದರೂ ಈ ನಂದಿಕೆರೆ (ನಿನ್ನಿಕೆರೆ) ಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಉದ್ಯೋಗ ಖಾತರಿ ಯೋಜನೆಯ ಮೂಲಕವೋ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕವೋ, ಏನಾದರೂ ಮಾಡಿ ಈ ಕೆರೆಯನ್ನು ಉಳಿಸುವ ಮಹತ್ಕಾರ್ಯವನ್ನು ಜನಪ್ರತಿನಿಧಿಗಳು ಮಾಡಲೇಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇಬೇಕಾಗಿದೆ ಎಂದರು.
ತಾಳಮದ್ದಳೆ ಸಪ್ತಾಹ : ಕೆ.ಎಲ್.ಕುಂಡಂತಾಯರಿಗೆ "ಪೆರ್ಲ ಕೃಷ್ಣ ಭಟ್ ಪ್ರಶಸ್ತಿ" ಪ್ರದಾನ

Posted On: 29-05-2022 08:22PM
ಉಡುಪಿ : ಇಲ್ಲಿಯ ಯಕ್ಷಗಾನ ಕಲಾಕೇಂದ್ರ (ರಿ) ಇವರು ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆಸಿದ ತಾಳಮದ್ದಳೆ ಸಪ್ತಾಹ - 2022 ರ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜಾನಪದ ವಿದ್ವಾಂಸ , ಯಕ್ಷಗಾನ ವೇಷಧಾರಿ - ಅರ್ಥಧಾರಿ ಕೆ.ಎಲ್.ಕುಂಡಂತಾಯರಿಗೆ ಪಂಡಿತ ಪರಂಪರೆಯ ವಿದ್ವಾಂಸ ಪೆರ್ಲ ಕೃಷ್ಣ ಭಟ್ ನೆನಪಿನ "ಪೆರ್ಲ ಕೃಷ್ಣ ಭಟ್ ಪ್ರಶಸ್ತಿ"ಯನ್ನು ಪ್ರದಾನಿಸಿದರು.
ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ರಾಜಕುಮಾರ್ ಪಿ.ಎಚ್., ಹೊನ್ನಾವರದ ಉದ್ಯಮಿ ಕೃಷ್ಣಮೂರ್ತಿ ಭಟ್ ಶಿವಾನಿ ಹಾಗೂ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಎಸ್.ವಿ.ಭಟ್ ಮತ್ತಿತರರು ಉಪಸ್ಥಿತರಿದ್ದರು.