Updated News From Kaup
ಮದುವೆ ಮಂಟಪದಿಂದ ಸಿನೆಮಾ ಮಂದಿರ - ಮದುವೆ ಪೋಷಾಕಿನಲ್ಲಿ ತುಳು ಸಿನಿಮಾ ವೀಕ್ಷಿಸಿದ ನೂತನ ವಧುವರರು

Posted On: 28-05-2022 07:23PM
ಉಡುಪಿ : ಮದುವೆ ಶಾಸ್ತ್ರ ಮುಗಿದ ಬಳಿಕ ಸಭಾಂಗಣದಿಂದ ಪೇಟ, ಬಾಸಿಂಗ, ಹಾರ ಸಹಿತ ಕೈ ಕೈ ಹಿಡಿದು ನೂತನ ವಧುವರ ಮತ್ತು ಅವರ ಗೆಳೆಯರು ಮಣಿಪಾಲದಲ್ಲಿ ಸಿನಿಮಾ ಮಂದಿರಕ್ಕೆ ತೆರಳಿ ತುಳು ಚಿತ್ರ ನೋಡಿ ಸಿನಿಮಾದ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದರು.
ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಮತ್ತು ತುಳು ಸಿನಿಮಾ ರಂಗದ ಯುವ ಸಿನಿಮಾಟೋಗ್ರಾಫರ್ ಭುವನೇಶ್ ಪ್ರಭು ಮಂಟಪದಿಂದ ನೇರವಾಗಿ ಮಣಿಪಾಲದ ಸಿನಿಮಾ ಮಂದಿರಕ್ಕೆ ತೆರಳಿ ರಾಜ್ ಸೌಂಡ್ ಆ್ಯಂಡ್ ಲೈಟ್ಸ್ ಸಿನಿಮಾ ವೀಕ್ಷಿಸಿದರು.
ಚಿತ್ರತಂಡದಿಂದ ನೂತನ ವಧುವರು ಮತ್ತೊಮ್ಮೆ ಹಾರ ಬದಲಾಯಿಸಿ, ಕೇಕ್ ಕತ್ತರಿಸಿ, ಶುಭ ಹಾರೈಸಿದರು.
ಈ ಸಂದರ್ಭ ವಧು ವರರ ಸಂಬಂಧಿಕರು, ಗೆಳೆಯರು ಜೊತೆಯಲ್ಲಿದ್ದರು.
ದೈವ ಕಾರ್ಣಿಕ ; ಮದುವೆ ಮನೆಯಲ್ಲಿ ಕಳೆದುಕೊಂಡ ಸರ ದೈವಸ್ಥಾನದೆದುರು ಪತ್ತೆ

Posted On: 28-05-2022 04:31PM
ಕಾಪು : ಕಳೆದುಕೊಂಡ ಚಿನ್ನದ ಸರ ದೈವ ಪ್ರಾರ್ಥನೆಯ ಬಳಿಕ ಮರಳಿ ಸಿಗುವ ಮೂಲಕ ತುಳುನಾಡಿನ ದೈವ ಶಕ್ತಿಯ ಮಹಿಮೆಗೆ ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯನ ಸಾನಿಧ್ಯ ಸಾಕ್ಷಿಯಾಗಿದೆ.
ಆರು ವರ್ಷಗಳ ಹಿಂದೆ ಸಮಗ್ರ ಜೀರ್ಣೋದ್ದಾರಗೊಂಡು ಹಲವಾರು ಪವಾಡಗಳಿಗೆ ಸಾಕ್ಷಿಯಾಗಿರುವ ಬೆಳಪು ಗ್ರಾಮದ ಪಣಿಯೂರು ರೈಲ್ವೈ ನಿಲ್ದಾಣದ ಬಳಿ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನವಿದೆ. ಮೇ 18ರಂದು ಪಡುಬಿದ್ರಿಯ ಮದುವೆ ಸಭಾಂಗಣದಲ್ಲಿ ಕಾಣೆಯಾಗಿದ್ದ ನಾಂಜಾರು ಸಾನದ ಮನೆಯ ಮಗುವೊಂದರ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಮೇ 27ರಂದು ಬೆಳಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗದಲ್ಲಿ ಉರಿಯುತ್ತಿರುವ ಸಾಣಾದಿಗೆಗೆ ಸುತ್ತಿಕೊಂಡಂತೆ ಪತ್ತೆಯಾಗಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ.
ಮೇ23ರಂದು ಕ್ಷೇತ್ರದಲ್ಲಿ ನಡೆದ ಹೋಮ ಪಂಚಕಜ್ಜಾಯ ಸೇವೆಯ ದಿವಸ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡಲಾಗಿತ್ತು. ಚಿನ್ನದ ಸರವು ಸಿಕ್ಕಿದರೆ ಧರ್ಮ ಜಾರಂದಾಯ ಬಂಟ ಪರಿವಾರ ಶಕ್ತಿಗಳಿಗೆ ಹೋಮ ಪಂಚಕಜ್ಜಾಯ ಸೇವೆ ನೀಡುವುದೆಂದು ತೀರ್ಮಾನಿಸಲಾಗಿತ್ತು.
ಇದರಿಂದ ಕುಟುಂಬ ವರ್ಗ ಮತ್ತು ದೈವಸ್ಥಾನದ ಭಕ್ತ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಯುವನಾಯಕ ಫಾರೂಕ್ ಚಂದ್ರನಗರ ಮನೆಗೆ ಶಾಸಕ ಯು.ಟಿ ಖಾದರ್ ಭೇಟಿ

Posted On: 26-05-2022 10:42PM
ಕಾಪು : ಕರ್ನಾಟಕ ಸರಕಾರದ ವಿರೋದ ಪಕ್ಷದ ಉಪ ನಾಯಕ ಯು.ಟಿ ಖಾದರ್ ಕಾಂಗ್ರೆಸ್ ಯುವನಾಯಕ, ಕೆ.ಪಿ.ಸಿ.ಸಿ ಅಲ್ಪ ಸಂಖ್ಯಾತ ರಾಜ್ಯ ಸಂಯೋಜಕರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಮನೆಗೆ ಭೇಟಿ ನೀಡಿ ಪ್ರಸ್ತುತ ರಾಜಕೀಯ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಹಿನ್ ಎಜುಕೇಷನ್ ಟ್ರಸ್ಟ್ ಬೀದರ್ ಡಾ ಅಬ್ದುಲ್ ಖಾದಿರ್, ಬಿ.ಎ ಮೊಹಮ್ಮದ್ ಆಲಿ ಕಮ್ಮರಡಿ, ಉಮ್ಮರ್ ಯು.ಎಚ್, ಬಿ. ಎ ಫಕ್ರುದ್ದಿನ್ ಆಲಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ಪ್ರಶಸ್ತಿ, ಡಾಕ್ಟರೇಟ್ ಪಡೆದ ಪತ್ರಕರ್ತರಿಗೆ ಅಭಿನಂದನೆ, ವರ್ಗಾವಣೆಗೊಂಡ, ನಿವೃತ್ತಿ ಹೊಂದಿದ ಪತ್ರಕರ್ತರಿಗೆ ಸನ್ಮಾನ, ಬೀಳ್ಕೊಡುಗೆ

Posted On: 26-05-2022 10:34PM
ಮಂಗಳೂರು : ಪತ್ರಿಕಾರಂಗವು ಸಾಮಾಜಿಕ ಪರಿವರ್ತನೆಯ ಅಸ್ತ್ರವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಮಹತ್ತರವಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಪ್ರಶಸ್ತಿ ಪಡೆದ, ಡಾಕ್ಟರೇಟ್ ಪದವಿ ಗಳಿಸಿದ, ವರ್ಗಾವಣೆಗೊಂಡ, ನಿವೃತ್ತಿ ಹೊಂದಿದ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳ ಬಗ್ಗೆ ನನಗೆ ಪ್ರೀತಿ, ಗೌರವ ಇದೆ. ಏಕೆಂದರೆ, ಪತ್ರಿಕಾ ಪ್ರತಿನಿಧಿಗಳು ಸಾಮಾಜಿಕ ಕಳಕಳಿಯಿಂದ ಪ್ರತಿ ಬಾರಿ ನಮ್ಮಿಂದ ಮಾಹಿತಿ ಪಡೆದು ಸುದ್ದಿ ಪ್ರಕಟಿಸುತ್ತಾರೆ. ವಿಚಾರ ಮಂಥನ, ಕಾರ್ಯಾಂಗ ಸರಿದಾರಿಯಲ್ಲಿ ನಡೆಯಲು ಮಾಧ್ಯಮ ರಂಗ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಮೌಲ್ಯ ಇರುವ ಪತ್ರಕರ್ತರಿದ್ದಾರೆ. ಪತ್ರಕರ್ತರ ಸಂಘದಿಂದ ಸಾಧಕ ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದರು. ರಾಜ್ಯ ಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ, ಕಾಸರಗೋಡು ಪತ್ರಕರ್ತರ ಸಂಘದಿಂದ ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ದತ್ತಿಪ್ರಶಸ್ತಿ ಪಡೆದ ಮುಹಮ್ಮದ್ ಆರೀಫ್ ಪಡುಬಿದ್ರಿ, ಡಾಕ್ಟರೇಟ್ ಪದವಿ ಗಳಿಸಿದ ಸತೀಶ್ ಕೊಣಾಜೆ, ಚಂದ್ರಹಾಸ ಚಾರ್ಮಾಡಿ, ನಿವೃತ್ತಿ ಹೊಂದಿದ ಹಿಲರಿ ಕ್ರಾಸ್ತಾ, ಸ್ವಯಂ ನಿವೃತ್ತಿ ಪಡೆದ ಸುಭಾಶ್ ಸಿದ್ದಮೂಲೆ, ಸುಷ್ಮಿತಾ ಕೋಟ್ಯಾನ್, ವರ್ಗಾವಣೆಗೊಂಡ ಮಹೇಶ್ ಕನ್ನೇಶ್ವರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಅತಿಥಿಯಾಗಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಸನ್ಮಾನಿತರ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕರಂಬಳ್ಳಿ ಗೋಪಾಲ್ ಶೆಟ್ಟಿ ನಿಧನ

Posted On: 26-05-2022 10:24PM
ಉಡುಪಿ :ದೈವಾರಾಧನೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಕರಂಬಳ್ಳಿ ಗೋಪಾಲ್ ಶೆಟ್ಟಿ ಇಂದು ನಿಧನರಾಗಿದ್ದಾರೆ.
ಕರಂಬಳ್ಳಿ ಗೋಪಾಲ್ ಶೆಟ್ಟಿ ದೊಡ್ಡನಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಶೆಟ್ಟಿ ಬಾಲೆ ಹಾಗೂ ದೈವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ಸದಸ್ಯರು, ಕಾಂಗ್ರೆಸ್ ಮುಖಂಡರು, ಮಣಿಪಾಲ ಮಾಜಿ ಮಂಡಳ ಪಂಚಾಯತ್ ಸದಸ್ಯರು, ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ದೊಡ್ಡನಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಹಲವಾರು ಸಂಘ ಸಂಸ್ಥೆಯ ಸದಸ್ಯರು, ದೈವಾರಾಧನೆ ಕ್ಷೇತ್ರದಲ್ಲಿ ಮದಿಪು ಹೇಳುವ ಮೂಲಕ ದೈವ ಚಾಕ್ರಿ ಮಾಡಿದವರಾಗಿದ್ದಾರೆ.
ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಕಾಪು ದಿವಾಕರ ಶೆಟ್ಟಿ

Posted On: 24-05-2022 06:03PM
ಕಾಪು : 2020-22ನೇ ಸಾಲಿನಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದ ವಿವಿಧ ಸಹಕಾರ ಕ್ಷೇತ್ರಗಳಲ್ಲಿ ಸುದೀರ್ಘ ಅವಧಿಯಲ್ಲಿ ಕಾಪು ದಿವಾಕರ ಶೆಟ್ಟಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕಾಪು ದಿವಾಕರ ಶೆಟ್ಟಿಯವರು 1981ರಲ್ಲಿ ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, 1987ರಲ್ಲಿ ಕಾಪು ಮಂಡಲ ಪಂಚಾಯತ್ ಸದಸ್ಯರಾಗಿ, 1993 ರಿಂದ 2001 ರವರೆಗೆ ಉಳಿಯಾರಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, 1990ರಲ್ಲಿ ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯ ದಕ್ಷಿಣ ರೈಲ್ವೇ ಸಲಹಾ ಸಮಿತಿಯ ಸದಸ್ಯರಾಗಿ, 1998 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ, 2014ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1990ರಲ್ಲಿ ಉಳಿಯಾರಗೋಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಆರಂಭಿಸಿ ಪ್ರಸ್ತುತ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮಂಗಳೂರು, ಇಲ್ಲಿಗೆ ಅಂದಿನಿಂದಲೂ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ಮುಂದುವರೆದು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆಯನ್ನು ಮುಂದುವರಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು 2004ರಲ್ಲಿ "ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ "ಅತ್ಯುತ್ತಮ ಹೈನುಗಾರ ಪ್ರಶಸ್ತಿ-2009" ರಲ್ಲಿ ನೀಡಿ ಗೌರವಿಸಲಾಗಿದ್ದು, ಪ್ರಸ್ತುತ "ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರ ದಲ್ಲಿ ಮೇ 25ರಂದು ಸಂಜೆ 6.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸ್ಟ್ರಿಂಗ್ ಆರ್ಟ್ ನಲ್ಲಿ 2022ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿದ ಬಂಟಕಲ್ಲಿನ ಪ್ರಿಯಾಂಕಾ

Posted On: 24-05-2022 02:18PM
ಕಾಪು : ಬಂಟಕಲ್ಲು 92ನೇ ಹೇರೂರಿನ ಯುವ ಕಲಾವಿದೆ ಕುಮಾರಿ ಪ್ರಿಯಾಂಕಾ ಆಚಾರ್ಯ ಅವರು ಸ್ಟ್ರಿಂಗ್ ಆರ್ಟ್ ನಲ್ಲಿ 2022ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಸಾಧನೆ ಮಾಡಿದ್ದಾರೆ.

37.8 × 38 ಇಂಚಿನ ಬೋರ್ಡ್ನಲ್ಲಿ 20 ವಿವಿಧ ಬಣ್ಣದ ತಂತಿಗಳನ್ನು ಬಳಸಿ 3/4 ಮತ್ತು 1 ಇಂಚಿನ ಮೊಳೆಗಳನ್ನು ಬಳಸಿ ವಿರಾಟ್ ವಿಶ್ವಕರ್ಮರ ಅತಿದೊಡ್ಡ ಸ್ಟ್ರಿಂಗ್ ಆರ್ಟ್ ಭಾವಚಿತ್ರಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆಯನ್ನು ಮಾಡಿದ್ದಾರೆ.
ಇವರ ಸ್ಟ್ರಿಂಗ್ ಆರ್ಟ್ ನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಕೂಡ ಮೆಚ್ಚಿದ್ದಾರೆ. ಸ್ಟ್ರಿಂಗ್ ಆರ್ಟ್ ನಲ್ಲಿ ಸುಮಾರು 150 ಕಲಾಕೃತಿಗಳನ್ನು ಮಾಡಿರುತ್ತಾರೆ. ರಂಗೋಲಿ ಬಿಡಿಸುವುದು, ಚಿತ್ರ ಬಿಡಿಸುವುದು ಈಕೆಯ ಹವ್ಯಾಸಗಳು.
ಪ್ರಸ್ತುತ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಈಕೆ ಬಂಟಕಲ್ಲ್ ನ ಕೃಷ್ಣ ಆಚಾರ್ಯ ಮತ್ತು ಯಶೋದ ದಂಪತಿಗಳ ಪುತ್ರಿ.
ಹಿರಿಯರ ಸಾಧನೆಯನ್ನು ಗುರುತಿಸಿ ಗೌರವಿಸುವುದು ಗುರುಕಾಣಿಕೆ ನೀಡಿದಂತೆ : ಮಹೇಶ್ ಶೆಟ್ಟಿ

Posted On: 23-05-2022 11:34PM
ಬಂಟಕಲ್ಲು : ವಿವಿಧ ರಂಗದಲ್ಲಿ ಸಾಧನೆಯನ್ನು ಮಾಡಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ವ್ಯಕ್ತಿ ಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವುದು ಸಮಾಜ ಅವರಿಗೆ ಗುರುಕಾಣಿಕೆ ನೀಡಿದಂತೆ ಎಂದು 92ನೇ ಹೇರೂರು ವಿಕಾಸ ಸೇವಾ ಸಮಿತಿ ಮತ್ತು ಮಹಿಳಾ ಬಳಗದ 2ನೇ ವರ್ಷದ ಸಾರ್ವಜನಿಕ ಕ್ರಿಡೋಸವದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಭವಾನಿ ಫಾರ್ಮ್ನ ಮಾಲಕರಾದ ಶ್ರೀ ಮಹೇಶ್ ಶೆಟ್ಟಿ ಹಿರಿಯರಾದ ವಿಠ್ಠಲ್ ಶೆಟ್ಟಿ, ದೇವದಾಸ ಜೋಗಿ, ದೇವರಾಜ ಆಚಾರ್ಯ, ಕೂಸ ಎಸ್. ಪೂಜಾರಿ ಕಲ್ಲುಗುಡ್ಡೆ ಇವರನ್ನು ಸನ್ಮಾನಿಸಿ ಅಭಿಪ್ರಾಯ ಪಟ್ಟರು.
ಸ್ಥಳೀಯ ಪ್ರತಿಭೆ ಸ್ಟ್ರಿಂಗ್ ಆರ್ಟ್ಸ್ ಮೂಲಕ 37.5×38 ಇಂಚಿನ ವಿಶ್ವಕರ್ಮ ಕಲಾಕೃತಿಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಗೊಂಡ ಕುಮಾರಿ ಪ್ರಿಯಾಂಕಾ ಆಚಾರ್ಯ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎವಿಲಿನ್ ಲೋಬೊ ಬಹುಮಾನ ವಿತರಿಸಿದರು. ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಧೀರಜ್ ಮುಖ್ಯ ಅತಿಥಿಯಾಗಿ ಆಗಮಿಸಿ ಸಾರ್ವಜನಿಕ ರಂಗದಲ್ಲಿ ಸಂಸ್ಥೆಯ ಸೇವಾ ಚಟುವಟಿಕೆಯನ್ನು ಸ್ವಾಗತಿಸಿದರು. ಬೆಳಿಗ್ಗೆ ನಡೆದ ಅರೋಗ್ಯವಂತ ಶಿಶು ಕಾರ್ಯಕ್ರಮವನ್ನು ರವಿ ಪುರೋಹಿತ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಈ ಸಂದರ್ಭದಲ್ಲಿ SSLC ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿವೇತನ ನೀಡಲಾಯಿತು. ಸಮಿತಿಯ ಉಪಾಧ್ಯಕ್ಷ ಗಣಪತಿ ಬಿ. ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನೋದ ಜೆ. ಆಚಾರ್ಯ ಕ್ರೀಡಾಕೂಟ ನಡೆಸಿದರು. ವಿಶಾಲ ಜಿ. ಆಚಾರ್ಯ ಬಹುಮಾನಿತರ ಪಟ್ಟಿ ವಾಚಿಸಿದರು.
ಕುಮಾರಿ ತನುಷಾ ಪ್ರಾರ್ಥಿಸಿದರು. ಅಧ್ಯಕ್ಷ ಮಾಧವ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಬಳಗದ ಕಾರ್ಯದರ್ಶಿ ಮಂಜುಳಾ ಗಣೇಶ್ ವಂದಿಸಿದರು.
ಮೇ 24 : ಪತ್ತನಾಜೆ - ಆಟ, ಕೋಲ, ಬಲಿ, ಅಂಕ, ಆಯನಗಳಿಗೆ 'ವಿರಾಮ'

Posted On: 23-05-2022 08:46PM
'ಪತ್ತನಾಜೆ' ಎಂದರೆ ಆಟ. ಕೋಲ, ಬಲಿ, ಅಂಕ, ಆಯನಗಳಿಗೆ ಅಲ್ಪವಿರಾಮ ಎಂಬ ನಂಬಿಕೆ ಸರಿಯಾದುದೇ . ಆದರೆ ಸಾಕು ಸಂಭ್ರಮ - ಗೌಜಿ ಗದ್ದಲ , ಉತ್ಸವಗಳ ಗುಂಗಿನಿಂದ ಹೊರಗೆ ಬಾ.....ತೊಡಗು... ಕೃಷಿಗೆ ಎಂಬ ಎಚ್ಚರಿಕೆಯೂ 'ಪತ್ತನಾಜೆ'ಯ ನೆನಪಿನಲ್ಲಿದೆ . ಆಚರಣೆಗಳು ಇಲ್ಲದಿದ್ದರೂ ಜೀವನಾಧಾರವಾದ ಬೇಸಾಯಕ್ಕೆ ಪ್ರವೃತ್ತನಾಗು ಎಂಬ ನಿರ್ದೇಶನ ಪತ್ತನಾಜೆ ಒದಗಿ ಬರುವ ಸಂದರ್ಭದಲ್ಲಿ ನಿಚ್ಚಳ . ತುಳುವರ ಬೇಶ ತಿಂಗಳ ಹತ್ತನೇ ದಿನವೇ ಪತ್ತನಾಜೆ .ಸೌರ ಪದ್ಧತಿಯ ಎರಡನೇ ತಿಂಗಳು ವೃಷಭ .ವೃಷಭ ಎಂದರೆ ಬೇಶ .ಹತ್ತನೇ ದಿನವನ್ನು ತಿಂಗಳು ಸಾಗುವ ಹತ್ತನೇ ಹೆಜ್ಜೆ (ಅಜೆ)ಎಂದು ಗ್ರಹಿಸಿ 'ಪತ್ತನಾಜೆ"ಎಂದಿರ ಬಹುದು.
'ಬೇಶ' ತಿಂಗಳು ತನ್ನ ವಿಶೇಷಗಳಿಂದ , ಪುರಾತನ ಒಪ್ಪಿಗೆಗಳೊಂದಿಗೆ ಬಹಳ ಮುಖ್ಯ ತಿಂಗಳು . 'ಬೇಶದ ತನು - ಬೇಶದ ತಂಬಿಲ' ತುಳುವರಿಗೆ ಆಚರಣೆಗಳ ಪರ್ವಕಾಲ .'ಬೆನ್ನಿ' ಅಥವಾ 'ಬೇಸಾಯ'ಕ್ಕೆ ತೊಡಗುವ ಮುನ್ನ ತಮ್ಮ ಮೂಲಸ್ಥಾನಗಳಿಗೆ ಹೋಗಿ ಭೂಮಿ ಪುತ್ರನಾದ ಈ ನೆಲದ ಸರ್ವಾಧಿಕಾರಿ 'ನಾಗನಿಗೆ' ; "ತನು ಮಯಿಪಾದ್ ತಂಬಿಲಕಟ್ಟಾದ್" , ದೈವಗಳಿಗೆ ಭೋಗ ಕೊಟ್ಟು ಬಂದು ಬೇಸಾಯಕ್ಕೆ ಆರಂಭಿಸುವ ಸಂಪ್ರದಾಯ ತುಳುವರದ್ದಾಗಿತ್ತು. ಈಗ ಕಾಲ ಬದಲಾಗಿದೆ , ಮನಸ್ಸು ಬಂದಾಗ 'ಮೂಲತಾನ'ಗಳಿಗೆ ಹೋಗಿ 'ನಾಗ - ದೈವ'ಗಳಿಗೆ ಸೇವೆ ಸಲ್ಲಿಸುವ ಆರ್ಥಿಕ ಸಬಲತೆ ಇದೆ - ಸ್ವಂತ ವಾಹನ ಸೌಲಭ್ಯಗಳಿವೆ . ಬದಲಾಗುತ್ತಿರುವ ಕಾಲ - ಸಂದರ್ಭ - ಮನೋಧರ್ಮಗಳಿಂದಾಗಿ ತಮ್ಮ ಮೂಲಸ್ಥಾನ ತೊರೆದು ಬದುಕುಕಟ್ಟುವ ಉದ್ದೇಶದಿಂದ ಬೇಸಾಯದ ಅವಕಾಶ ಬಯಸಿ ದೂರದ ಪ್ರದೇಶಗಳಿಗೆ ಹೋಗಿ ಬೇಸಾಯದ ಜೀವನ ಆರಂಭಿಸಿದ್ದ ಮಾನವನ ಚರ್ಯೆಗೆ ಅಥವಾ ಮನೋಧರ್ಮಕ್ಕೆ ಶತಮಾನಗಳೇ ಸಂದು ಹೋದುವು. ಈ ಪರಿಸ್ಥಿತಿಯಲ್ಲೂ ಬೇಸಾಯಕ್ಕೆ ಆರಂಭಿಸುವ ಮುನ್ನ ಮೂಲಕ್ಕೆ ಹೋಗುವುದು ಶಿಷ್ಟಾಚಾರವಾಯಿತು . ವರ್ಷಕ್ಕೆ ಒಂದೆರಡು ಬಾರಿಯಾದರೂ ಮೂಲಕ್ಕೆ ಸಂದರ್ಶನ ನೀಡುವ ಆಸ್ತಿಕರು ಬೇಶದಲ್ಲಿ ಖಂಡಿತ ಹೋಗುತ್ತಾರೆ . ಆ ದಿನ ಪತ್ತನಾಜೆಯ ಆಸುಪಾಸಿನಲ್ಲಿರುತ್ತದೆ . ಮಕರ - ಪುಯಿಂತೆಲ್ ತಿಂಗಳ ಕೊನೆಯ ಮೂರು ದಿನಗಳ "ಕೆಡ್ಡಸ" ಆಚರಣೆಯಲ್ಲಿ ಭೂಮಿದೇವಿ ಪುಷ್ಪವತಿಯಾದಳು ಎಂಬ ನಂಬಿಕೆ ನಮ್ಮದು .ಅಂದರೆ ನಿಸರ್ಗದಲ್ಲಿ ಅದ್ಭುತ ಬದಲಾವಣೆಯಾಗುವ ಕಾಲವದು .ಹೆಣ್ಣು ಮಗಳು 'ಪುಷ್ಪವತಿ' ಯಾದಳೆಂದರೆ 'ಫಲವತಿ'ಯಾಗಲು ಸಿದ್ಧಳಾದಳು ಎಂದಲ್ಲವೇ ಅರ್ಥ . ಪುಯಿಂತೆಲ್ - ಮಕರ ತಿಂಗಳಲ್ಲೆ ಪ್ರಕೃತಿ ಬದಲಾಗಲು ತೊಡಗುತ್ತದೆ , ಕೃಷಿಯ ಸಣ್ಣ ಪುಟ್ಟ ತಯಾರಿ ನಡೆಯಲಾರಂಭವಾಗುತ್ತದೆ.
'ಮಾಯಿ - ಕುಂಭ' ತಿಂಗಳು ಮುಗಿಯುತ್ತಿರುವಂತೆ 'ಸುಗ್ಗಿ - ಮೀನ' ತಿಂಗಳು . ಬೆಳೆದ ಗೆಣಸು ಮುಂತಾದುಗಳನ್ನು ಅಗೆದು ತೆಗೆಯದಿದ್ದರೆ ಅವು 'ಮಾಯಿ ತಿಂಗಳಲ್ಲಿ ಮಾಯವಾಗುತ್ತವಂತೆ" . ಹೀಗೊಂದು ಒಡಂಬಡಿಕೆ . ಮುಂದೆ ಹಂತಹಂತವಾಗಿ ಬೇಸಾಯಕ್ಕೆ ಅಣಿಯಾಗುವ ರೈತ ಸುಗ್ಗಿ ತಿಂಗಳು ಮುಗಿದು ಪಗ್ಗು ತಿಂಗಳ 'ಮೊದಲ ದಿನ - ತಿಂಗೊಡೆ' ಮೊದಲ ಹಬ್ಬ ಯುಗಾದಿ ಅಥವಾ ಇಗಾದಿ - ವಿಷು ಆಚರಿಸುತ್ತಾನೆ .ಇಗಾದಿ ಆಚರಣೆ ಸರಳವಾದುದು ,ಚೌತಿ , ದೀಪಾವಳಿಗಳಂತೆ ಸಂಭ್ರಮಗಳಿಲ್ಲ .ಆದರೆ ಕೃಷಿಕನಿಗೆ "ಪುಂಡಿಬಿತ್ತ್ ಪಾಡುನು - ನಾಲೆರು ಮಾದಾವುನ" ಕೃಷಿ ಚಕ್ರವನ್ನು ಮತ್ತೆ ಆರಂಭಿಸುವ ಕ್ರಮವಿದೆ . ಮುಂದೆ 'ಪಗ್ಗು ತಿಂಗಳ ಹದಿನೆಂಟು ಹೋಗುವ ದಿನ' ತನ್ನ ಕೃಷಿ ಭೂಮಿಗೆ ಬೇಕಾಗುವಷ್ಟು 'ನೇಜಿ' ಹಾಕುವ ಸಾಂಪ್ರದಾಯಿಕ ಕ್ರಮ. ಈ ನಡುವೆ 'ಕಜೆಬಿದೆ ಆವ - ಮಡಿಬಿದೆ ಆವ' ಎಂಬ ನಿಷ್ಕರ್ಷೆಗೆ ಅನುಗುಣವಾಗಿ ನೇಜಿ ಹಾಕುವ ಪದ್ಧತಿಯೂ ಒಂದಿದೆ. ಕೃತ್ತಿಕಾ ಮಳೆಯ ಕಾಲ ಆರಂಭವಾಗುತ್ತದೆ. ಈ ಮಳೆ ಬರಬಾರದು "ಕಿರ್ತಿಕೆ ಕಾಯೊಡು"- ಕೃತ್ತಿಕೆಯ ಬಿಸಿಲಿಗೆ ಭೂಮಿ ಸುಡಬೇಕು - ಬಿಸಿಗೆ ಭೂಮಿ 'ಬಿರಿಯ' ಬೇಕು. ಭಾಗೀರಥೀ ಜನ್ಮದಿನ' ಒದಗಿಬರುತ್ತದೆ. ಮಳೆಬಂದಾಗ ಭೂಮಿ ತನ್ನೊಳಗೆ ಮಳೆ ನೀರು ಇಳಿಸಿಕೊಂಡು - ಹಾಕುವ ಗೊಬ್ಬರ ಮತ್ತು ಸಿದ್ಧಗೊಳಿಸಿದ ಸುಡುಮಣ್ಣುಗಳಿಂದಾಗಿ ( ತೂಟಾನ್ - ತೂಂಟಾನ್) ಫಲವತ್ತಾದ ಕ್ಷೇತ್ರವಾಗುತ್ತದೆ , ಮುಂದೆ ಬೀಜಾಂಕುರವಾದಾಗ ಭೂಮಿದೇವಿ ತನ್ನ ಫಲವಂತಿಕೆಯನ್ನು ವ್ಯಕ್ತಗೊಳಿಸುತ್ತಾಳೆ . ಬಿಸಿಲ ಬೇಗೆಗೆ ಸುಟ್ಟ ಗದ್ದೆಗೆ ಮೊದಲ ಮಳೆ ನೀರು ಬಿದ್ದಾಗ ಒಂದು ಅಪೂರ್ವ ಪರಿಮಳ ಭೂಗರ್ಭದಿಂದ ಹೊರಬರುತ್ತದೆ . ಅದಕ್ಕಲ್ಲವೇ "ಪೃಥ್ವೀ ಗಂಧವತೀ" ಎಂದರು ನಮ್ಮ ಪೂರ್ವಸೂರಿಗಳು .ಇದು ಮಣ್ಣಿನ ಪರಿಮಳ ,ಇದೇ ಕಾರಣವಾಗಿ ಬೆನ್ನಿ - ಬೇಸಾಯ ಸಮೃದ್ಧವಾಗಿತ್ತು ಒಂದು ಕಾಲದಲ್ಲಿ . ಈಗ ಮಣ್ಣಿಗೆ ಅಥವಾ ಪೃಥ್ವಿಗೆ ಗಂಧವಿದೆಯಾ ...ಅದು ಅಷ್ಟು ಸುವಾಸನೆಯುಳ್ಳದ್ದಾ ...ಎಂದು ಕೇಳುವವರಿದ್ದಾರೆ . ಆದರೆ ಬೇಸಾಯವೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಣ್ಣಿನ ಪರಿಮಳ ಗ್ರಹಿಸುತ್ತಿದ್ದ ಮಾನವ .ಆಗ ಅದೇ ಸುಗಂಧವಾಗಿತ್ತು , ಏಕೆಂದರೆ ಭೂಮಿ ತಾಯಿಯಾಗಿದ್ದಳು .ಜಡವಾದ ಭೂಮಿಯೊಂದಿಗೆ ಎಂತಹ ಭಾವನಾತ್ಮಕ ಸಂಬಂಧ. ಹಾಗೆ ಬಂದಿರಬೇಕು "ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊಂರ್ಬಿನಾಯೆ ಮಣ್ಣ್ ತಿನುವೆ" ಎಂಬ ಗಾದೆ.
ಪತ್ತನಾಜೆ ಮುಗಿಸಿ ಬೇಸಾಯಕ್ಕೆ ಹೊರಡುವ ಸಂದರ್ಭ ಭೂಮಿ ,ಬೇಸಾಯ , ನಮ್ಮ - ಮಣ್ಣಿನ ಸಂಬಂಧ ಮಣ್ಣಿನ ಸತ್ಯದ ದರ್ಶನವಾಗಲು ಅಥವಾ 'ಸತ್ಯ ನೆಗತ್ತ್ ದ್' ತೋಜೊಡ್ಡ ' ಪತ್ತನಾಜೆ ಪರ್ವಕಾಲ ,ಸುಸಂದರ್ಭ . ಇನ್ನು ನಮಗೆ "ಬೆನ್ನಿದ ಮಗೆ" - ಬೇಸಾಯಗಾರ ಸಿಗುವುದು ಆಟಿ ತಿಂಗಳಲ್ಲಿ . ಬಳಿಕ ಅಷ್ಟಮಿ ,ಚೌತಿ ಆಚರಣೆಗಳಲ್ಲಿ .ಅನಂತರ ತೆನೆಕಟ್ಟುವ ಸಂಭ್ರಮದಲ್ಲಿ , ನವರಾತ್ರಿಯ ವೇಳೆ .ಆದರೆ ನಗುಮೊಗದಿಂದ ಬೇಸಾಯಗಾರನ ಮುಖಾಮುಖಿಯಾಗುವುದು ದೀಪಾವಳಿಯ ಗೌಜಿ ಗದ್ದಲದಲ್ಲಿ ಬೆಳಗುವ ಸೊಡರಿನಲ್ಲಿ ,ಆಗ ಧಾನ್ಯಲಕ್ಷ್ಮೀ ಮನೆ ತುಂಬಿರುತ್ತಾಳೆ .ಆತ ಸಂತೃಪ್ತನಾಗಿರುತ್ತಾನೆ "ಕೃಷಿಯಿದ್ದಲ್ಲಿ ದುರ್ಭಿಕ್ಷೆ ಇಲ್ಲವಂತೆ" ಪತ್ತನಾಜೆ ಎಂದು ಆರಂಭಿಸಿ ದೀಪಾವಳಿ ವರಗೆ ಹೋಗ ಬೇಕಾಯಿತು . "ಭೂಮಿ -ಕೃಷಿ' ಈ ಸಂಬಂಧ ಮತ್ತೆ ಗಾಢವಾಗಬೇಕೆಂಬುದೇ ಆಶಯ .ಹಾಗೆ ಎಲ್ಲಿಂದಲೋ ಹೊರಟು ಬೇಸಾಯಗಾರನಲ್ಲಿ ಮಾತನಾಡಿ ,ನಿಸರ್ಗದ ವಿಸ್ಮಯಗಳನ್ನು ಅವಲೋಕಿಸುತ್ತಾ , ಮಳೆಯ ಅನಿವಾರ್ಯತೆಯನ್ನು ಹೇಳುತ್ತಾ 'ಕೃಷಿ ಸಂಸ್ಕೃತಿ"ಯನ್ನು ಪರಿಚಯಿಸುವ ಪ್ರಯತ್ನಮಾಡಿದೆ . ಲೇಖನ : ಕೆ.ಎಲ್ .ಕುಂಡಂತಾಯ.
ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವ ಎಸ್.ಅಂಗಾರ

Posted On: 23-05-2022 08:34PM
ಉಡುಪಿ : ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ರಸ್ತೆ, ಜಿಲ್ಲಾ ಪಂಚಾಯತ್ ರಸ್ತೆ, ಗ್ರಾಮೀಣ ರಸ್ತೆಗಳು ಸೇರಿದಂತೆ ಯಾವುದೇ ರಸ್ತೆಯಲ್ಲಿ ಮಳೆಯ ನೀರು ನಿಲ್ಲದೇ, ಸರಾಗವಾಗಿ ಹರಿದುಹೋಗುವ ಕುರಿತಂತೆ ರಸ್ತೆ ಪಕ್ಕದ ಚರಂಡಿಗಳನ್ನು ಸ್ವಚ್ಛಗೊಳಿಸಿ, ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಮಾನ್ಸೂನ್ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆ ಸಂದರ್ಭದಲ್ಲಿ ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಬರುತ್ತಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ರೂಪಿಸಿದ್ದ ಯೋಜನೆಯಂತೆ ಮಳೆ ನೀರು ಹರಿಯಲು ಅಗತ್ಯ ವ್ಯವಸ್ಥೆ ಮಾಡಬೇಕು. ಅವೈಜ್ಞಾನಿಕವಾಗಿ ಮಾಡಿರುವ ಕಾಮಗಾರಿಗಳನ್ನು ತೆರವುಗೊಳಿಸಬೇಕು. ಈ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್, ಪುರಸಭೆ ಅಧಿಕಾರಿಗಳು ಸ್ಥಳ ಭೇಟಿ ನೀಡಿ, ಪರಿಶೀಲಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಯಾವುದೇ ಭಾಗದಲ್ಲಿ ಮಳೆಯಿಂದ ಅವಘಡಗಳು ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, 2 ದಿನದಲ್ಲಿ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಉಡುಪಿ ನಗರಸಭೆ ಮತ್ತು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಖಾಸಗಿ ಜಾಗದಲ್ಲಿ ಮಳೆ ನೀರು ಹರಿಯುವ ಜಾಗದಲ್ಲಿ ತಡೆ ಹಾಕಿರುವ ಬಗ್ಗೆ ಕಂಡು ಬಂದಲ್ಲಿ ಅದನ್ನು ಯಾವುದೇ ಮುಲಾಜಿಲ್ಲದೇ ಅದನ್ನು ಒಡೆದು ಹಾಕಿ, ಖಾಸಗಿ ವ್ಯಕ್ತಿಗಳು ಈ ಕಾರ್ಯಕ್ಕೆ ಅಡಚಣೆ ಮಾಡಿದಲ್ಲಿ ಪ್ರಾಕೃತಿಕ ವಿಕೋಪ ಕಾಯ್ದೆಯಡಿ ನೀಡಿರುವ ಅಧಿಕಾರ ಚಲಾಯಿಸಿ, ಅಗತ್ಯ ಕ್ರಮ ಕೈಗೊಳ್ಳಿ ಎಂದರು.
ಜಿಲ್ಲೆಯಲ್ಲಿ ರಸ್ತೆ ಬದಿಗಳಲ್ಲಿ ಇರುವ ಅಪಾಯಕಾರಿ ಮರಗಳ ವಿವರಗಳನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಪಟ್ಟಿ ಮಾಡಿ, ಅರಣ್ಯ ಇಲಾಖೆಗೆ ಸಲ್ಲಿಸುವಂತೆ ತಿಳಿಸಿದ ಸಚಿವರು, ಅರಣ್ಯ ಇಲಾಖೆಯಿಂದ ಆದ್ಯತೆಯ ಮೇಲೆ ಅವುಗಳನ್ನು ತೆರವುಗೊಳಿಸಲು ಅನುಮತಿ ನೀಡಬೇಕು. ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ತಮ್ಮ ಕೆಳಹಂತದ ಸಿಬ್ಬಂದಿಗಳಿಗೂ ಅಗತ್ಯ ನಿರ್ದೇಶನಗಳನ್ನು ನೀಡಿ, ಮಳೆಯಿಂದ ಬಿದ್ದ ಮರಗಳನ್ನು ತಕ್ಷಣ ತೆರವುಗೊಳಿಸಲು ಮತ್ತು ಅಪಾಯಕಾರಿ ಮರಗಳ ತೆರವು ಕುರಿತು ಕೋರುವ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಸೂಚಿಸಿದರು. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಅಗತ್ಯವಿರುವ ಎಲ್ಲಾ ರಕ್ಷಣಾ ಪರಿಕರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಹಾಗೂ ಅಗತ್ಯವಿದ್ದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಬೋಟುಗಳನ್ನು ಪಡೆಯುವಂತೆ ಸೂಚಿಸಿದರು. ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಉಲ್ಬಣವಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆಗಳ ಸಮೀಪ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳ ಬೆಳವಣಿಗೆ ತಡೆಯುವ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ಮನೆ ಮನೆಗೆ ಸ್ವಚ್ಚತೆ ಕಾಪಾಡುವ ಕುರಿತಂತೆ ಸಂದೇಶ ರವಾನಿಸಲು ಕ್ರಮ ಕೈಗೊಳ್ಳಿ. ವಲಸೆ ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿ ನಿಗಾ ವಹಿಸಿ ಎಂದರು.
ಶಾಸಕ ರಘುಪತಿ ಭಟ್ ಮಾತನಾಡಿ, ಮಳೆಯಿಂದ ಮನೆಗಳಿಗೆ ಆಗುವ ಹಾನಿಗೆ ನೀಡುವ ಪರಿಹಾರ ಅತ್ಯಂತ ಕಡಿಮೆ ಇದೆ ಎಂದರು. ಈ ಕುರಿತಂತೆ ಮಳೆಯಿಂದ ಮನೆ ಮತ್ತು ಆಸ್ತಿ-ಪಾಸ್ತಿಗಳು ಹಾನಿಯಾದ ಸಂದರ್ಭದಲ್ಲಿ ನಷ್ಠದ ಅಂದಾಜು ಮಾಡುವಾಗ, ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಪ್ರಕರಣಗಳನ್ನು ಗಮನಿಸಿ, ಸಂತ್ರಸ್ಥರಿಗೆ ಗರಿಷ್ಠ ನೆರವು ಒದಗಿಸಬೇಕು ಎಂದು ಸಚಿವರು ಹೇಳಿದರು. ಜಿಲ್ಲೆಯಲ್ಲಿ ಮಾನ್ಸೂನ್ನಿಂದ ಆಗುವ ಹಾನಿಯನ್ನು ತಪ್ಪಿಸಲು ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಕ್ಲಿಷ್ಟಕರ ಸಮಸ್ಯೆಯಿದ್ದಲ್ಲಿ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಸರ್ಕಾರದಿಂದ ತಿಳಿಸಿದ ಸಚಿವರು, ತುರ್ತು ನೆರವಿನ ಅಗತ್ಯವಿದ್ದಲ್ಲಿ ಯಾವುದೇ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕರಾವಳಿ ಕಾವಲು ಪಡೆ ಎಸ್ಪಿ ಅಂಶುಕುಮಾರ್, ಅಪರ ಜಿಲ್ಲಾಧಿಕಾರಿ ವೀಣಾ, ಕುಂದಾಪುರ ಡಿಎಫ್ಓ ಆಶೀಶ್ ರೆಡ್ಡಿ, ಕಾರ್ಕಳ ಡಿಎಫ್ಓ ಗಣಪತಿ, ಎಎಸ್ಪಿ ಸಿದ್ಧಲಿಂಗಪ್ಪ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.